Thursday 12 January 2017

ಕುಶಾಲನಗರಲಿ ನಡ್ದ ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೇಲಿ ಸಾಂಪ್ರದಾಯಿಕ ಉಡುಗೆಲಿ ಗೌಡುಗ...





Wednesday 28 December 2016

ಹುತ್ತರಿ ಸಂತೋಷ ಕೂಟನ ಚಿಕ್ಕತ್ತೂರು ಬಾಂಧವ್ಯ ಒಕ್ಕೂಟದವು ತುಂಬಾ ಗೌಜಿಲಿ ನಡೆಸಿದೊ.



Sunday 26 July 2015


Saturday 16 March 2013

'ಕುಟ್ಟಿಚಾತ' ಉತ್ಸವ

ಮರಗೋಡು ಹತ್ತಿರ ಹೊಸ್ಕೇರೀಲಿ ನಡ್ದ 'ಕುಟ್ಟಿಚಾತ' ಹಬ್ಬ

Thursday 14 March 2013

ಅಮ್ಮಾ...ನಿನ್ನಂಗೆ ನಾನೂ ಹೆಣ್ಣು !


ಅಮ್ಮಾ ನಾನಮ್ಮ ನಿನ್ನ ಕೂಸು....ಅಯ್ಯೋ ನೀನ್ ಹೇದ್ರ್ಬೇಡ... ಈ ಪಾಪು (ಪಾಪಿ ) ಮತ್ತೆ
ಹುಟ್ಟಿ ಬಾತ್  ತ...!!!!!!!!
ಇಲ್ಲೇ ಇಲ್ಲೇ ನಾನಿನ್ನೂ ಸ್ವರ್ಗಲೇ ...ಅಲ್ಲ ಅಲ್ಲ ನರಕಲಿ ಅಯ್ಯೋ ಎಂಥ ಇದ್
ಸ್ವರ್ಗನೋ ನರಕನೋ ನೊಂಗೊತ್ಲೆ     ಅಮ್ಮಾ.... ಅಂತೂ ಈ ಕ್ರೂರ ಸಮಾಜಕ್ಕಿಂತ ಸ್ವಲ್ಪ
ಒಳ್ಳೆ ಜಾಗಲಿ ನಾನ್ ಒಳೆ. !!!!!!!!!ಇಲ್ಲಿ ನನ್ನ ಮುದ್ದಾಡಿಕೆ  ಯಾರೂ
ಇಲ್ಲೇ.....ಪ್ರೀತಿಯಿಂದ ನನ್ನ ತಬ್ಬಿಕಣಿಕೆ ಯಾರೂ ಇಲ್ಲೆ...ಅಮ್ಮಾ...! ಆ ದೇವರು ಸ
ನನ್ನ ಒಟ್ಟಿಗೆ ಆಟ  ಆಡಿಕೆ ಬಾದುಲೆ.ಗೊತ್ತಾ??? ಯಾಕೆ ಅಮ್ಮಾ...???  ಗೊತ್ತಾತ್
ನಾನ್ ಒಂದ್ "ಹೆಣ್ಣು " ಕೂಸು ತ ಅಲಾ...!!!!!!!
ಅಮ್ಮ .... ನಂಗೆ ಇನ್ನೂ ಗ್ಯಾನ ಉಟ್ಟು. ಆ ದಿನ ನಾ ಈ ಪ್ರಪಂಚಕ್ಕೆ ಬರ್ತಾ ಒಳೆ
ತ  ನಿಂಗೆ ಗೊತ್ತಾಕನ ನೀನ್ ಪೊಪ್ಪ ಎಲ್ಲಾ ಎಷ್ಟು ಖುಷಿ  ಪಟ್ಟಿದರಿ ಅಲಾ.... ಅಯ್ಯೋ
ತಪ್ಪಾತ್ ನಿಮಿಗೆಲ್ಲ ಅದಕ್ಕಿಂತ ಹೆಚ್ಚು  ಖುಷಿಯಾದ್ ನಾನ್ ಈ ಸುಂದರ (???) ಪ್ರಪಂಚ
ನೋಡೋ ಮೊದಲೇ ಸತ್ತು ಬಿದ್ದಾಗ ಅಲಾ...ಅದೇ ಮರಳಿ ಗೂಡಿಗೆ ತ ಹೇಳುವೆ ಅಲಾ... ಹಂಗೆ.
ಅಮ್ಮಾ...ನಿಂಗೆ ಗೊತ್ತಾ ಅಮ್ಮ .. ನಂಗೆ ಎಷ್ಟ್ ಆಸೆ, ಕನಸ್ಗ ಇತ್ ತಾ...ನಾ ಗ್ಯಾನ
ಮಾಡಿದ್ದೆ... ನೀವೆಲ್ಲಾ ನನ್ನ ಅಪ್ಪಿ ಮುದ್ದಾಡಿ ಕೆ ಕಾಯ್ತಾ ಒಳರಿ ತಾ..ನನಗೊಂದು ಪುಟ್ಟ
ತೊಟ್ಟಿಲು ತಕಂಡ್ ಬಂದರೆ ತಾ...ಜೊತೆಗೆ ಬಣ್ಣ ಬಣ್ಣದ ಫ್ರಾಕ್ ...ಆಟ ಆಡಿಕೆ ಥರಥರ
ಗೊಂಬೆಗ...ಆದರೆ ಅದ್ದ್ ನನ್ನ ಕನಸ್ ತ ಗೊತ್ತಾದ್ ಆ ನನ್ನ ಜೀವ ತೆಗಿಯೋ ಮಾತ್ರೆ
ನುಂಗಿಕೆ ಶುರು ಮಾಡ್ದ ದಿನ. ಅಮ್ಮ...ನಿಂಗೆ ಗೊತ್ತಾ? ಆ ಮಾತ್ರೆಗ ನನ್ನ ಚುಚ್ಹಿ ಚುಚ್ಚಿ
ಸಾಯಿಸ್ತಾ ಇತ್...ನನ್ನ ಕೈ ಕಾಲ್ ಗ ಸ ಸರಿಯಾಗಿ ಬೆಳವಣಿಗೆ ಆಗಿ ಇತ್ಹ್ಲೆ!
ಅಮ್ಮಾ..ನಿಂಗೊತ್ತಾ ಯಾರೋ ನನ್ನ ಕುತ್ತಿಗೆ ಹಿಂಚಿ ಸಾಯಿಸಿದಂಗೆ ಅಗ್ತಾ ಇತ್...ಅಂತೂ
ಕೊನೆಗೆ ನನ್ನ ಉಸಿರೇ ನಿಂತ್ ಹೋತಲ್ಲಾ...!!!!!!!!! ಅಲ್ಲ ಅಮ್ಮ , ಎಲ್ಲವೂ ಸೇರಿ ನನ್ನ ನಿನ್ನ ಕರುಳ ಬಳ್ಳಿಂದ ಕತ್ತರಿಸಿ ತುಂಡು ತುಂಡು ಮಾಡಿ ಕಸದ ತೊಟ್ಟಿ ಗೆ
ಬಿಸಾಕಿದ್ದೋ  ಅಲಾ ಅಮ್ಮ...ನಾನ್ ಆಗ ನನ್ನ ಮೈ ತುಂಬಾ ರಕ್ತ ..ಇತ್ತ ನಾಯಿಗ, ಹದ್ದುಗ
ಕಚ್ಚಿ ಕಚ್ಚಿ ತಿಂತಾ ಇದ್ದೋ...!!!!!!!!ಆಗ ನಿಂಗೆ ಒಂದು ಚೂರೂ ಬೇಜಾರ್ ಆತ್ಹ್ಲೆ
ನ...????
ನಂಗೆ ನಾನು ಸತ್ತು ಹೋದಕ್ಕೆ ಬೇಜಾರ್ ಇಲ್ಲೇ...!ಆದರೆ ನಾನ್ ಹೆಣ್ಣಾಗಿ ಹುಟ್ಟಿದರೆ
ನಿಂಗೆ ಎಷ್ಟ್ ತೊಂದರೆ ಅಗ್ತಾ ಇತ್ ತ ನಂಗೆ ಗೊತ್ತು...
ನಂಗೆ ಓದಿಸಿಕೆ ಎಷ್ಟ್ ದುಡ್ಡು  ಅಗ್ತಾ ಇತ್ ಅಲ...??? ನಾನ್ ದೊಡ್ಡವಳಾದ ಮೇಲೆ
ಮದ್ವೆ ಮಾಡಿಸಿಕೆ ವರದಕ್ಷಿಣೆ ಕೊಡಿಕೆ ಎಲ್ಲ ಎಷ್ಟ್ ಕಷ್ಟ ಇತ್ ಅಲ..??.ಒಂದು ವೇಳೆ
ನಾನ್ ಕುರೂಪಿ ಆಗಿ ಹುಟ್ಟಿದರೆ ಹೈದಗಳೇ ಸಿಗ್ತಾ ಇತ್ಹ್ಲೆ ...ಮತ್ತೆ ಆ ನೆಂಟರ  ಅವರ
ಇವರ ಮಾತು ನೀನ್ ಕೆಳಕಾಗಿತ್...ಅಬ್ಬಾ ನಂಗೆ ಖುಷಿ ತ ಹೇಳ್ರೆ ನಿಂಗೆ ಈ ಯಾವ ಕಷ್ಟ ಈಗ
ಇಲ್ಲೇ ಅಲ..ಹ ಹ ಹ..ಆದರೆ ಮುಂದಿನ ಜನ್ಮ ಇದ್ದರೆ ನಿನ್ನ ಮಗಳಾಗಿನೇ ಹುಟ್ಟಿನೆ...ಆಗ
ಈ ಸಲದಂಗೆ ಹುಟ್ಟುವ ಮೊದಲೇ ಸಾಯಿಸ್ಬೇಡ...ಒಂದೇ ಒಂದು ಸಲ ನಿನ್ನ ಮಡಿಲಲ್ಲಿ ಮಲಗೊಕು
ತ ಆಸೆ ನಂಗೆ...ನಿನ್ನ ನೋಡ್ತಾ ನಾನ್ ಕಣ್ಣು ಮುಚ್ಹೊಕು ತ  ಆಸೆ...ಆದರೆ ಅಮ್ಮ
ಕೊನೆಯದಾಗಿ ನಾನ್ ಹಿಂಗೆ ಹೇಳ್ದೆ ತ ನೀನ್ ಬೇಜಾರ್ ಮಾಡ್ಬದ...ಹೆಣ್ಣಾಗಿ ಹುಟ್ಟಿ
ನಿಂಗೆ ಕಷ್ಟ ಕೊಡದೆ ...ಸತ್ತು ನನ್ನ ಪರಿವಾರಕ್ಕೆ ಖುಷಿ ಕೊಟ್ಹೊಳೆ ಅನ್ನೋ ತೃಪ್ತಿ
ನಂಗುಟ್ಟು...!!!!!

ನಿನಗಾಗಿ...

ಪವಿ ನೆರಿಯನ (ಭಾವನೆಗಳ ಪಲ್ಲವಿ)
ಇಲ್ಲಿ ನೀವೂ ಬರೆಯಕ್. ಬರ್ದದನ್ನ ನಮಿಗೆ ಮೇಲ್ ಮಾಡಿ...
arebhase@gmail.com

Thursday 7 March 2013

ಹಂಗೇ ಸುಮ್ಮನೆ.. ಇದ್ ನಿಮ್ಮ ಬಗ್ಗೆನೇ...!


ಬೆಳಿಗ್ಗೆ ಏಳಿಕೆ ಪುರ್ಸೊತ್ತ್ ಇಲ್ಲೆ. ಶುರು ಆದೆ ಮರ್ರೆ ಕಿರಿ ಕಿರಿ….. ಪೊಪ್ಪ ಸುಮ್ಮನಿದ್ದರೆ ಅಮ್ಮ ., ಅಮ್ಮ ಸುಮ್ಮನಿದ್ದರೆ ಪೊಪ್ಪ…. ಅಲ್ಲ ನಾವು ಪಿಯುಸಿ ಪಾಸ್ ಮಾಡಿ ದೊಡ್ಡವ್ ಆದೆ ದೊಡ್ಡ ತಪ್ಪುತಾ ಒಮ್ಮೊಮ್ಮೆ ಕಂಡದೆ.! ಇಂದ್ ಸ ಹಂಗೇ ಆತ್. ಬೆಳಗ್ಗೆ ಮಲ್ಕಂಡ್ ಒಳೆ, 6-6:30 ಆಗಿತ್ತ್, ಶುರು ಆತ್ ಪೊಪ್ಪಂದ್, "ಬೆಳಿಗ್ಗೆ ಬೇಗ ಏಳಿಕೆ ರೋಗ, ಎದ್ದ್ ಒಂದು ಕೆಲ್ಸ ಮಾಡಿಕೆ ರೋಗ, ಎಲ್ಲಾ ನಾವೇ ಸಾಯೋಕುತಾ.. ಆದರೆ ಮಗತಾ ಒಬ್ಬ ಇದ್ದ್ ಏನ್ ಪ್ರಯೋಜನ. ಬೇರೆಯವರ್ನ ನೋಡಿ ಆದರೂ ಕಲಿಯೊದು ಬೇಡ ನಾ..ಬ್ಲಾ..ಬ್ಲಾ..ಬ್ಲಾ..." ಕೇಳಿಕೆ ಆಗದೆ ಎದ್ದೆ ಮರ್ರೆ…. ಅಲ್ಲ, ರಾತ್ರೆ ಡೀನಾ ಬೇಜಾರ್ ಮಾಡಿಕಂಡಿತ್ತ್, ಅವಳ್ನ ಸಮಾಧಾನ ಮಾಡಿ ಫೋನ್ ಕಟ್ ಮಾಡ್ಕನ ಎಷ್ಟ್ ಹೊತ್ತ್ ಆಗುಟ್ಟು, ಎಷ್ಟ್ ಕರೆನ್ಸಿ ಖರ್ಚ್ ಆಗುಟ್ಟುತಾ… ಆ ಕಷ್ಟ ನಂಗೆ ಗೊತ್ತು. ಬೆಳಿಗ್ಗೆ ಎದ್ದ್ ಅಭ್ಯಾಸ ಬಲ, ಹಂಗೆ ಒನ್ಚೂರು inbox ನೋಡ್ತಾ ಇದ್ದೆ, ಆಚೆ ಕೋಣೇಲಿ ಪೊಪ್ಪನ ಸುಪ್ರಭಾತ ಮುಂದುವರ್ದೇ ಇತ್ತ್. ನಂಗೆ ಬೈಯಕ್ಕೆ ಅವರ ಸಣ್ಣದ್ರ ದಿನಗಳ್ನ ಮೆಲುಕು ಹಾಕುವ ಮಾಮೂಲಿ ಖಯಾಲಿ! same old story. ನಮ್ಮ ಹೈದ ಕುಡೆಕಲ್ ಭರತ ಮೆಸೇಜ್ ಮಾಡಿತ್ತ್, ನಮ್ಮ ಹೈದಗಳ ಮೆಸೇಜ್ ತಾ ಹೇಳ್ರೆ ನೆಗೆ ಬಾರದೆ ಇದ್ದದೆನಾ ಹೇಳಿ. ಫಳ್ ತ ನೆಗಾಡಿ ಬುಟ್ಟೆ.! ನೆಗಾಡ್ದರ್ನ ನಮ್ಮ ಪಿತಾಶ್ರೀ ನೋಡಿ ಬುಡೋಕಾ... ತಕ… ಶುರು ಆತ್… ಪುನಃ ! ಅಲ್ಲ ನಮ್ಮ ಮುಖಕ್ಕೆ ಏನ್ ಗೂಡೆಗ ಮೆಸೇಜ್ ಮಾಡುವೆನಾ ಹೇಳಿ… ಮಾಡ್ರೆ ನಮ್ಮ ಹುಡ್ಗರೇ ಮಾಡೊಕು. ಅದಿಕೆ ಈ ಬೈಗಳ ಯಾಕೆ?? ಅಲ್ಲ ನಮ್ಮ ಜನ ಯಾವಯಾವ್ದರ ಬಗ್ಗೆ ಎಲ್ಲಾ ಯೋಚನೆ ಮಾಡುವೆ, ದೇಶದ ಸಮಸ್ಯೆ, ಆ ಸಮಸ್ಯೆ, ಈ ಸಮಸ್ಯೆತಾ.. . ಆದರೆ ನಮ್ಮಂಥ ಹುಡ್ಗರ ಈ ನಿತ್ಯ ಸಮಸ್ಯೆನ ಬಗೆಹರ್ಸುವವು ಯಾರ್? ಯೋಚನೆ ಮಾಡವು ಯಾರ್?? ಎದ್ದ್ ಇನ್ನೆನ್ ಬಾತ್ ರೂಮ್ ಗೆ ಹೋಕು , ಅಮ್ಮಂದ್ ಶುರು ಆತ್ ಮರಾಯ…. "ಎದ್ದದೆ, ಬಾತ್ರೂಮ್ ಗೆ ಹೋದೆ, ಹೊರ್ಟದೆ, ಹೊರಗೆ ಸುತ್ತಿಕೆ ಹೋದೆ, ಎಂಥ ಹಿಂಗೆ ಆದರೆ ಕಥೆ ? ಪಿಯುಸಿ ಫೇಲ್ ಆಕನನೆ ಹೇಳ್ದೆ ಇವ್ಕೆ… ಬೇಡ ಇಂವ ಓದುದು, ಬೆಂಗ್ಳೂರ್ ಗೆ ಕೆಲ್ಸಕ್ಕೆ ಕಳ್ಸಿತಾ , ಕೇಳ್ತ್ಲೆ, ಈಗ ನೋಡಿ ..ಬ್ಲಾ..ಬ್ಲಾ..ಬ್ಲಾ..." ಅಲ್ಲ ಮರ್ರೆ, ಬೆಳಿಗ್ಗೆ ಎದ್ದ್ ಒಂದು ಟಾಯ್ಲೆಟ್ ಗೆಸಾ ನೆಮ್ಮದಿಲಿ ಹೋಕೆ ಹಕ್ಕಿಲ್ಲೆನಾ ನಮಿಗೆ? ಹಂಗೂ ಹಿಂಗೂ ಬಾತ್ ರೂಮ್ ಗೆ ಹೋದೆ, ಬಕೆಟ್ ಲಿ ಬಿಸಿ ನೀರ್ ಇತ್ತಪ್ಪ, ಹೆಂಗೋ ಬಂದೊಳೆ, ಇನ್ನು ಸ್ನಾನ ಮಾಡಿ ಪೋಯಿತಾ ಹೇಳಿ ಒಂದ್ ಚೊಂಬು ಹೊಯ್ಕಂಡೆ.ಅಷ್ಟೆ… ನೀರ್ ಇನ್ನು ನೆಲಕ್ಕೆ ಬೀತ್ಲೆ ಮರ್ರೆ, ತಂಗೆದ್ ಶುರು ಆತ್, " ಅಮ್ಮಾಆಆಆಆಅ..., ಅಣ್ಣ, ನಾನ್ ತೆಗ್ದ್ ಇಟ್ಟ ನೀರ್ ಲಿ ಸ್ನಾನ ಮಾಡ್ತ ಉಟ್ಟು, ನಂಗೆ ಬೇಗ ಬೇರೆ ಹೋಕು, ಎಂಥಮ್ಮ ಇದ್ ..ಬ್ಲಾ..ಬ್ಲಾ..ಬ್ಲಾ "ತಾ  ಮರ್ಡಿಕಂಡೇ ಹೇಳ್ತ್. ಮತ್ತೆ ಕೇಳೋಕಾ? ಆ ಕಡೆಂದ ಅಮ್ಮ ಬಾಯ್ ಬಡಿಯಕ್ಕೆ, ಪೊಪ್ಪ ಬಂದ್ ಬಾಗಿಲ್ ಬಡಿಯಕ್ಕೆ, ತಂಗೆ ಕೈಗೆ ಸಿಕ್ಕಿದರ್ನ ಬಿಸಾಡಿಕೆ...! ಬೇಡಪ್ಪಾ ಬೇಡ ನನ್ನ ಕಥೆ. ಹೊಯ್ಕಂಡ ನೀರ್ ನ ವರ್ಸಿಕಂಡ್, ಟವಲ್ ಸುತ್ತಿಕೊಂಡು ಹೊರಗೆ ಬಂದೆ ಮರ್ರೆ.. ಅಲ್ಲ, ತಂಗೆ ಕಾಲೇಜ್ ಗೆ ಬೇಗ ಹೋಗಿ ಏನ್ ಮಾಡ್ದೆತಾ ನಂಗೆ ಗೊತ್ತು. ಅವ್ಳು ಡ್ಯಾನ್ಸ್, ಪ್ಯಾಷನ್ ಷೋ, ಪ್ರಾಕ್ಟೀಸ್ ಮಾಡಿಕೆ, ನಾನ್ ಅರ್ಧ ಸ್ನಾನ ಮಾಡಿ ಬಾತ್ ರೂಮ್ ಬುಡೊಕು ! ಅದ್ ಸಾಲ್ದ್ ತ ಅವ್ಳ್ನ ಲವ್ ಮಾಡಿಕೆ, ಹಿಂದೆ ಸುತ್ತಿಕೆ ಒಬ್ಬ ದಂಡಪಿಂಡ ಬೇರೆ…. ಅವನ ಕಂಟ್ರೋಲ್ ಮಾಡುವ ಕಷ್ಟ ನಂಗೆ ಗೊತ್ತು. ನೆಮ್ಮದೀಲಿ ರೋಡ್ ಲಿ ನಡಿಯಕ್ಕೆ ಆಲೆ ಮರ್ರೆ.. ಅಲ್ಲ ಈ ಟೆನ್ಶನ್ ಎಲ್ಲಾ ಪೊಪ್ಪಂಗೆ ಗೊತ್ತಾ?? ಅಮ್ಮಂಗೆ ಗೊತ್ತಾ?? ಬೈದವೆ ಮತ್ತೆ ಸುಮ್ಮನಾರ್... ಅಲ್ಲ, ಬೆಳಿಗ್ಗೆ ಎದ್ದ್ ಒಮ್ಮೆ facebook ನೊಡ್ತ್ ಲೇತಾ ಹೇಳಿರೇ ಆದೆನಾ? ನೀವೆ ಹೇಳಿ…. ಅದಿಕ್ಕೊಂದು ಕಾಲ್ ಗಂಟೆ ಆದ್ರೂ ಬೇಡನಾ?. ಅಲ್ಲ ಆಚೆ ಮನೆಯವ ಇಡಿ ದಿನ ಕುದ್ದ್ಕಂಡ್ ಓದಿದೆ. ಹಂಗೆತಾ ಹೇಳಿ ನಾನು ಅವನು ಒಂದೆನಾ ಹೇಳಿ?, ಅವನ ಕೆಪಾಸಿಟಿ ಅವಂಗೆ, ನನ್ನ ಕೆಪಾಸಿಟಿ ನಂಗೆ…. ಅಲ್ಲ ಪ್ರಪಂಚಲಿ ಓದಿದವರಿಗಿಂತ ಓದದವೇ ಜಾಸ್ತಿ ಮುಂದೆ ಹೋಗಿರ್ದು. ಅದ್ ಯಾಕೆ ಈ ಅಮ್ಮಂಗೆ ಅರ್ಥ ಆದ್ಲೆ. 2 ವರ್ಷಂದ ಈಚೆಗೆ ನಾ ಬುಕ್ ಹಿಡ್ದದರ್ನ ನೋಡ್ತೆ ಇಲ್ಲೆ ಗಡ ! ನಿಜನೇ ಇರ್ದು…, ಇಲ್ಲೆತಾ ಹೇಳ್ದುಲೆ. ಆದ್ರೂ ಅದರ್ನ ಈ ಥರ ಅರ್ಧ ಸ್ನಾನ ಮಾಡಿ ಟವಲ್ ಸುತ್ತಿಕಂಡ್ ಬಾಕನ ಹೇಳೊ ಅಗತ್ಯ ಏನ್ ಉಟ್ಟು ಹೇಳಿ?? ಸಾಕಪ್ಪ ಸಾಕ್, ಒಮ್ಮೆ ಹೊರಗೆ ದಾಟಿಕಣ್ಣೋತಾ ಹೊರ್ಟೆ... ಅಲ್ಲ, ಸುಮ್ಮನಾರ್ ಹೊರಗೆ ಹೋಕೆ ಆದೆನಾ ಹೇಳಿ?, ಒಂದು 50 ರೂಪಾಯಿ ಆದ್ರೂ ಜೋಬ್ ಲಿ ಇರ್ದು ಬೇಡನಾ? ಇನ್ನು ಪೊಪ್ಪನ ಕೇಳನತಾ ಹೇಳ್ರೆ ಏನ್ ಆದೆ ತ ನಿಮ್ಗೆ ಗೊತ್ತು…. ಮೊನ್ನೆ ಡ್ರೈವಿಂಗ್ ಲೈಸೆನ್ಸ್ ಮಾಡಿಕೆ ಪೋಟೊ ತೆಗ್ಸಿಕೆತಾ  500ರೂಪಾಯಿ ಕೇಳ್ದೆ ಮರ್ರೆ, ಫೋಟೊ ತೆಗ್ಸಿ ಬಂದೆ, ಮಾರ್ನೆ ದಿನ ಬ್ರೋಕರ್ ಗೆ ಕೊಡಿಕೆ ತ ಪುನ 500 ಕೇಳ್ದೆ, ನೆನ್ನೆ ಕೊಟ್ಟ ೫೦0ರೂಪಾಯಿ ಏನಾತ್ ತ ಕೇಳ್ದೊ. ಅದ್ ಫೋಟೊ ಗಿಟೊ ಎಲ್ಲ ತೆಗ್ಸಿದೆ ತಾ ಹೇಳ್ದೆ, ಫೋಟೊ ಸರಿ, ಈ ಗಿಟೊ ಯಾವ್ದು ತ ಕೇಳುವೆ ಮರ್ರೆ!!! ಏನ್ ಮಾತಾಡ್ದು ಹೇಳಿ ಇಂತವ್ರೊಟ್ಟಿಗೆ.! ಅದಿಕೆ ಹೇಳದೆನೇ  ತಕಂಡ್ ಬುಡ್ನೋ ತ ಒಮ್ಮೆ ಪೊಪ್ಪನ ಪರ್ಸ್ ನೋಡ್ದೆ ಅಷ್ಟೆ… ಪ್ರಾಮಿಸ್ ಅಪ್ಪ, ನೊಡ್ದೆ ಅಷ್ಟೆ…, ಅದರ್ನ ತಂಗೆ ನೋಡಿಬುಡೋಕ!!! ಒಂದೇ ಉಸ್ರುಲಿ ಕಿರ್ಚಿತ್.. " ಪೊಪ್ಪ, ಅಣ್ಣ ನಿಮ್ಮ ಪರ್ಸ್ಂದ ದುಡ್ಡು ಕದಿತಾ ಉಟ್ಟುಊಊಊ......" ಅಲ್ಲ, ತೆಗಿಯಕ್ಕೆ ಮುಂಚೆ ಹಿಂಗೆ ಹೇಳ್ರೆ, ಇನ್ನು ತೆಗ್ದ ಮೇಲೆ ಕಥೆ ಎಂತ ಮರ್ರೆ?? ಹಂಗೂ ತಕಂಡೆ ಇರ್ಲಿ ತ. ಎಷ್ಟೇ ಆದ್ರೂ ನನ್ನ ಪೊಪ್ಪ ತಾನೇ. ನನ್ನ ತಂಗೆ ತಾನೇ.. ಹೆಂಗೋ ಪೊಪ್ಪ ಸ್ಪಾಟ್ ಗೆ ಬಾಕೆ ಮುಂದೆ ಹೊರಗೆ ರಟ್ಟಿದೆ,! ಹೊರಗೆ ಬಂದ್ ಬೈಕ್ ಸ್ಟಾರ್ಟ್ ಮಾಡ್ನೆತಾ ನೋಡ್ರೆ ಪೆಟ್ರೋಲ್ ಇಲ್ಲೆ ಮರ್ರೆ. ಇರುವ 50 ರೂಪಾಯಿಗೆ ಪೆಟ್ರೋಲ್ ಹಾಕ್ಸಿರೆ.. ಅಲ್ಲ,ಹಾಕುದ್ಲೆ…, ಹಂಗು ಹಾಕಿರೇ ಮತ್ತೆ ಒಂದು ಸಿಗರೇಟ್ಗೆ ಆದ್ರೂ ದುಡ್ಡು ಬೇಡನಾ? ಅದಿಕೆ ಪೊಪ್ಪನ ಬೈಕ್ ಲಿ ಏನಾರ್ ಪೆಟ್ರೋಲ್ ಇರ್ದಾತ ನೋಡ್ದೆ ಅಷ್ಟೇ,ಪ್ರಾಮಿಸ್ ಅಪ್ಪ…, ಜಸ್ಟ್ ನೋಡ್ದೆ ಅಷ್ಟೆ, ಫುಲ್ ಟ್ಯಾಂಕ್ ಇತ್ತ್. ಫುಲ್ ಟ್ಯಾಂಕ್ ನೋಡ್ದ ಮೇಲೆ ತೆಗಿಯದೆ ಇರಿಕೆ ಆದೆನಾ, ಒಂದ್ 200ml ಅಷ್ಟ್ ತೆಗ್ದೆ ಮರ್ರೆ. ಪ್ರಾಮಿಸ್, ಅಷ್ಟೇ ತೆಗ್ದದ್, ಪೈಪ್ಂದ ತೆಗ್ದ್ ಬಾಟ್ಲಿ ಕ್ಯಾಪ್ ಹಾಕಿ ತಲೆ ಮೇಲೆ ಎತ್ತಿನೆ.. ಪೊಪ್ಪ ನಿಂತೊಳೊ ಮರ್ರೆ! ಒಳ್ಳೆ zoomingಲಿ ಕಂಡಂಗೆ ಕಂಡೋ. ಹೆದ್ರಿ ಹೋದೆತಾ ಒಮ್ಮೆಲೇ. ಪುನಃ ಶುರು ಆತ್, " ಗೊತ್ತಿತ್ತ್ ಇದೇ ಕೆಲ್ಸ ಮಾಡಿಯತಾ , ಅಲ್ಲ ನಿನ್ನ ಕಥೆ ಎಂಥ? ದುಡ್ಡು ಕದ್ದಿಯಾ…, ಪೆಟ್ರೋಲ್ ಕದ್ದಿಯಾ... ಬ್ಲಾ..ಬ್ಲಾ..ಬ್ಲಾ.." , ಇನ್ ಎಂಥ ಮಾಡ್ದು, ತೆಗ್ದ ಪೆಟ್ರೋಲ್ ನ ವಾಪಸ್ ಹೊಯ್ಯೊದು ಒಳ್ಳೆದಲ್ಲತ ಹೇಳಿ ನನ್ನ ಬೈಕ್ ಗೆ ಹಾಕಂಡೆ. ಅಲ್ಲ 200ml ಪೆಟ್ರೋಲ್ ಗೋಸ್ಕರ ಸ್ವಂತ ಮಗಂಗೆ ಮಾನ ಮರ್ಯಾದಿ ಇಲ್ಲೆತಾ ಬೈದವೆ ಅಲ, ಆಚೆ ಮನೆ ಆಂಟಿ ನೋಡ್ತಾ ಒಳೊತಾದ್ರೂ ಪರಿಜ್ಞಾನ ಬೇಡನ ಪೊಪ್ಪಂಗೆ ? ಅಲ್ಲ ಪೊಪ್ಪ ಬೈಯ್ಯೊದು ಅವ್ಕೆ ಕೇಳಲಿತನೇತಾ ಹೇಳ್ದು ನಂಗೆ ಗೊತ್ತು, ಅದ್ ಬುಡಿ ಬೇರೆ ವಿಷ್ಯ…. ಇಷ್ಟೆಲ್ಲಾ ಆಗಿ ನಾವ್ ಹುಡ್ಗರ್ ಮನೇಂದ ಹೊರಗೆ ಬರೋಕುತಾ ಆದರೆ, ನಮ್ಮ ಕಷ್ಟ ನಮಿಗೆ ಗೊತ್ತು ಮರ್ರೆ. ಇನ್ನು ಕಾಲೇಜ್ ನ ಸಮಸ್ಯೆಗ…. ಹೊರಗಡೆ ಸಮಸ್ಯೆಗ… ನಮಿಗೇ ಗೊತ್ತು ಆ ಕಷ್ಟ.!ಇ ಷ್ಟೆಲ್ಲ ಜವಾಬ್ದಾರಿಗ ಇರ್ಕನ, ಸಂಜೆ ಲೇಟ್ ಆಗದೇ ಇದ್ದದೆನಾ? ಅದ್ ಬುಡಿ, ನಾಡ್ದ್ ನಾವ್ ಪ್ರೆಂಡ್ಸ್ ಎಲ್ಲಾ ಒಂದು ಟೂರ್ ಹೋಗನತಾ ಒಳೊ. ಅದಿಕೆ ಒಂದ್ 5000 ರೂಪಾಯಿ ಆದ್ರೂ ಬೇಕು. ಅದನ್ನ ಕೇಳಿಕೆ ಎಷ್ಟ್ ಕಷ್ಟ ಪಡೊಕೂತ ನಂಗೆ ಗೊತ್ತು, ಎಲ್ಲಾದ್ರೂ ಸಾಲ ಮಾಡನತಾ  ಹೇಳ್ರೆ ಕಳ್ದ ತಿಂಗ ಗೋವಾಗೆ ಟೂರ್ ಹೋಕನ ಮಾಡ್ದ ಸಾಲ 4000 ಹಂಗೇ ಉಟ್ಟು. ಅದನ ವಾಪಸ್ ಕೊಡದೆ ಪುನಃ ಸಾಲ ಕೊಟ್ಟವೆನಾ ಹೇಳಿ..?. ಅಲ್ಲ, ಹಾಕಿಕೆ ಒಂದು ಶೂಸ್ ಇಲ್ಲೆ ಮರ್ರೆ ನಂಗೆ, ಕಾಲೇಜ್ ಗೆ ತೆಗ್ದ ಶೂನೇ ಹಾಕ್ಕಂಡ್ ಓಡಾಡ್ತ ಒಳೆ…. ಅಲ್ಲ ಕಳ್ದ ತಿಂಗ ನನ್ನ ಬರ್ತ್ ಡೇ ಗೆ  ಒಂದ್ ಶೂ ತೆಗ್ದ್ ಕೊಟ್ಟಿದ್ದೊ, ಜಾಸ್ತಿ ಏನ್ ಅಲ್ಲ, ಒಂದ್ ೧೫೦೦ರೂಪಾಯಿದ್. ಅದ್ ಒಂದು ತಿಂಗಳಿಗೆ ಹರ್ದ್ ಹೋದರೆ ಅದ್ ನನ್ನ ತಪ್ಪಾ ಹೇಳಿ?? ಪೊಪ್ಪನ ಹತ್ರ ಹೊಸ ಶೂ ಬೇಕು ತ ಕೇಳ್ದೆ, "ಅದರ್ಲೆ ಹೊಡ್ದನೆ"ತಾ  ಹೇಳಿ ಬುಡೊಕಾ? ಒಂದೇ ಸಲ. ಯಪ್ಪಾ, ಸಾಕಪ್ಪ ಸಾಕ್ ಈ ಜೀವನ ತ ಅನ್ಸಿಬುಟ್ಟದೆ ಒಮ್ಮೊಮ್ಮೆ….. ಆದ್ರೆ ಅಂಥ ಟೈಮ್ ಲೆ ಖರ್ಚಿಗೆ ದುಡ್ಡು ಕೊಟ್ಟ್ ಬುಟ್ಟದೆ ಅಮ್ಮ, ಪ್ರೆಂಡ್ಸ್ ಪಾರ್ಟಿಗೆ ಕರ್ದುಬುಟ್ಟವೆ. ಪುನ ಈ ಜೀವನ ಇಷ್ಟೇ ಅಲ್ಲ, ಇನ್ನು ಉಟ್ಟು ತ ಆದೆ. ಅಲ್ಲ ನಮ್ಮ ಜನಗ ದೇಶದ ಎಲ್ಲಾ ಸಮಸ್ಯೆಗಳ ಬಗ್ಗೆ ತಲೆ ಕೆಡ್ಸಿಕಂಡವೆ…, ಮಾತಾಡುವೆ… ಆದ್ರೆ ನಮ್ಮಂತ ಹುಡ್ಗರ ಬಗ್ಗೆ ತಲೆ ಕೆಡ್ಸಿಕೊಂಡೊಳೊನಾ ಯಾಗಾರ್??, ಈ ಮೀಡಿಯಾದವು ಯಾರಾರ್ ನಮ್ಮ ಸಮಸ್ಯೆ ಏನ್ ತಾ ಕೇಳೊಳೊನಾ?? ಅಲ್ಲ ರಾಜಕೀಯದವ್ಕೆ ಆದ್ರೂ ಮುಂದಿನ ಮತದಾರರಾದ ನಾವು ಕಾಂಬಲೆನಾ ?? ಛೇ!!!, ನಾವೆಲ್ಲಾ ಫಾರೀನ್ ಲಿ ಹುಟ್ಟಕಾಗಿತ್ತ್,… ಇಂಡಿಯಾ ಲಿ ಹುಟ್ಟಿ ತಪ್ಪ್ ಮಾಡ್ಡೊ.. ಛೇ...ಛೇ.. ತಪ್ಪು ಕಲ್ಪನೆ ಅಂತ ಅನ್ಸಿದೆ, ಇಲ್ಲಿ ಹುಟ್ಟಿದಕ್ಕೆ ತಾನೇ, ಈ ಜೀವನ, ಈ ಜೀವನ ಪ್ರೀತಿ, ಈ ಜೀವನ ಶೈಲಿ ಎಲ್ಲಾ. ಈ ಬೈಸಿಕಂಬದು, ಫ಼್ರ್ಂಡ್ಸ್ ಗಳೊಟ್ಟಿಗೆ ಒತ್ಲಾ ಹೊಡಿಯೊದು, ಚಪ್ಪರ ಲಿ ಗೂಡೆಗಳ್ನ ನೋಡ್ದು, ಭಾವ…ಭಾವ ತ ಕರ್ಕಂಬೊದು,, ಇದರ ಸುಖ ಅವ್ಕೆ ಉಟ್ಟಾ?? ಬೈದರೂ ಪ್ರೀತಿ ತೋರ್ಸುವ ಅಮ್ಮ, ಹೊಡ್ದರು ಬೆನ್ನ್ ತಟ್ಟುವ ಅಪ್ಪ, ಜಗಳ ಆಡಿಕಂಡೇ ಇದ್ಡರೂ ಮದ್ವೆ ಆಗಿ ಹೋಕನ ತಬ್ಬಿ ಹಿಡ್ಕೊಂಡು ಮರ್ಡುವ ತಂಗೆ.. ಇದೆಲ್ಲಾ ಅವ್ಕೆ ಎಲ್ಲಿ ಸಿಕ್ಕಿದೆ ಹೇಳಿ... ಪಾಪ, unlucky people.... ಹಾ:! ಇಂದ್ ಬೆಳಿಗ್ಗೆ ಸ ಒಮ್ಮೆ ಹಂಗೆ ಅನ್ಸಿತ್ತ್, ಸಾಕಪ್ಪ ಜೀವನತಾ.... ಆದ್ರೆ ನಾಳೆ ಇಲ್ಲೆ ನಮ್ಮ ಮನೆ ಹತ್ರ ಕುದ್ಕುಳಿ ಮನೆ ಅವರ್ದ್ ಒಂದು ಚಪ್ಪರ ಉಟ್ಟು, ಒಳ್ಳೊಳ್ಳೇ ಗೂಡೆಗ ಬರುವೋ ತ ನಮ್ಮ ಭಾವ ಹೇಳ್ತಿತ್ತ್.. ಚಪ್ಪರ ಮುಗ್ಸಿ, ಮತ್ತೆ ಅದರ ಬಗ್ಗೆ ಯೋಚನೆ ಮಾಡ್ನೆ.....ಹ್ಹಿ..ಹ್ಹಿ..
-ಲತನ್ ಅಯ್ಯೇಟಿರ
 ---------------
ಇಲ್ಲಿ ನೀವೂ ಬರೆಯಕ್...ಬರ್ದದನ್ನ ನಮಿಗೆ ಮೇಲ್ ಮಾಡಿ...arebahse@gmail.com

Wednesday 6 March 2013

ಅವ್ವ ಮನೆ...


ಅಂದ್  ಶಾಂತಿಗೆ ರಜಾ ಇತ್..ಹೊರಗೆ ಮಳೆ ಬೇರೆ ಬರ್ತಾ ಇತ್ ...ಕಿಡ್ಕೆ ತೆಗ್ದ್
ನೋಡ್ರೆ ಅಲ್ಲಿ ಕಾಮಬದು ಬರಿ ಗಾಡಿಗ ..!!ಮಳೆಯ ಪರಿವೇ  ಇಲ್ಲದೆ ಅವು ರುಮ್ಮ ತಾ 
ಹೋಗ್ತಾ ಇದ್ದೋ...ಸ್ವಲ್ಪ ಹಿಂದಿನ ಮೆಟ್ಲ್ ಲಿ ಕೂರೋನೋ ತ ಹೇಳಿ ಶಾಂತಿ  ಹೊರಗೆ ಬಾತ್...ಬಂದ್
ಅಲ್ಲಿದ್ದ ಕಟ್ಟೇಲಿ  ಕುದ್ದತ್ ..ಮಳೆಗಾಲದ ರಜೆ ನ..ಆ ತಾತ ಮನೇಲಿ ಕಳ್ದ ದಿನನ
ಯೋಚಿಸಿಕಂಡ್ ಕುದ್ದತ್ ..ಹಿಂಗೆನೇ  ಮಳೆ ಬಾಕನ ಅಲ್ಲಿ ಬರೆ ಕೆಳಗೆ ಗದ್ದೆ ಓಣಿಲಿ
ನೀರ್ ನಿಂತಿರ್ತಿತ್...ಅದ್ರಲಿನೇ  ಆಟ ...ದೋಣಿ ಮಾಡ್ದು..  ಬಿಡ್ಡು  ಹಿಂಗೆ....ಆಗ ಮಳೆನ
ಪರಿವೇ ಇಲ್ಲೆ ನಮಿಗೆ. ಮನೇಲಿ ಅಡಿಗೆ ಮನೇಂ  ದನೇ  ಬೈತಿತ್ ಅವ್ವ..ಎಂಥ  
.ಮಾಡ್ರೆನೆ ಮಕ್ಕಳೇ... ನೀರ್ಲಿ ಆಟ, ಕೆಮ್ಮುಲು ಶೀತ ಬಂದದೆ..ಬನ್ನಿ ಬನ್ನಿ ಒಳಗೆತಾ  
ಕರೆಯುವ ಧ್ವ ನಿ......ಅತ್ತ ತಾತ ಮೆಲ್ಲೆ ಕೆಮ್ಮಿಕಂಡ್,  ಮಕ್ಕಳೇ..ಆಟ ಸಾಕ್ ಕಥೆ
ಹೇಳ್ನೆ ಕೇಳಿತೆಳೀ. ಕರಿತಾ ಇತ್...ಯಾಕೆ ಗೊತ್ತುಟ್ಟಾ ???? ಕಥೆ ಕೇಳಿಕಾದರೂ ಮಕ್ಕ ಒಳಗೆ ಬಂದವೆತಾ ... ಎಂತ ಹೇಳ್ರೂ  ನಾವು ಕೇಳ್ತಾ ಇತ್ಹ್ಲೆ... .ಇದರ ಗ್ಯಾನ ಮಾಡಿ
ಶಾಂತಿ ಗೆ ನಗೆ ಬಾತ್.. ಬರ್ರ್ ತಾ  ಗದ್ದೆಂದ ಹರ್ಕಂಡ್ ಹೋಗ್ತಿದ್ದ ಆ ಸಣ್ಣ ನೀರ್ನ
ತೋಡು..ಇವ್ಕೆ ಜಲಪಾತ..! ದೊಡ್ಡ ಜಲಪಾತ ಹತ್ರನೇ ಇದ್ದರೂ  ಅಲ್ಲಿಗೆ ಹೋಕೆ ಬಿಡ್ತಾ
ಇತ್ಹ್ಲೆ ತಾತ...ಅದ್ಕೆ ಅವ್ಕೆ ಅದೇ ಜೋಗ ಜಲಪಾತ..ಅತ್ತ ಗದ್ದೆ ಏರಿಲಿ ಕಾಫಿ ತೋಟ
ಲಿ..ನೆಂಟರುಗ ಯಾಗ ಬಂದವೆ ಯಾಗ ಬಂದವೆ ತೆಳೀ. ಕಾಯೋ ಉಮ್ಬುಳುಗ...ಇತ್ತ ಗದ್ದೆ ನೀರಲಿ
ಮೀನು ಎಸಂಡ್ ಹಿಡಿಯೋ ದರ್ಬಾರ್ ಮಕ್ಕಳಿಗೆ...! ಅಲ್ಲಿ ಮನೇಲಿ ಹಲಸಿನ ಬೀಜ ಸುಡೋ ಘಮ ಘಮ ! ಇದರೆಲ್ಲ ಗ್ಯಾನ ಮಾಡಿಕಂಡ್ ಶಾಂತಿ ಗೆ ನಾಳೆ ಪರೀಕ್ಷೆ ಉಟ್ಟು ತೇಳುದು ಮರ್ತೆ ಹೋಗಿತ್..! ಇನ್ನು ಯಾಗ ತಾತ ಮನೆ ಗೆ ಹೋದು ತ  ಗ್ಯಾನ ಮಾಡ್ತಾ ಇತ್...ಅಷ್ಟು ಹೊತ್ತಿಗೆ
  ಅಮ್ಮ ಒಳಗೆಂದ ಕರ್ದಂಗೆ ಆತ್....ಶಾಂತಿ ಹಂಗೆ ಒಳಗೆ ಹೋತ್ 

ಪವಿ ನೆರಿಯನ (ಭಾವನೆಗಳ ಪಲ್ಲವಿ)

(ಇಲ್ಲಿ ನೀವೂ ಬರೆಯಕ್... ಬರ್ದದನ್ನ ನಮಿಗೆ mail ಮಾಡಿ....   arebhase@gmail.com)

Sunday 3 March 2013

ಜೈ ಹಿಂದ್..ಭಾರತ್ ಬಂದ್!!!


 ಒಮ್ಮೆ ಪ್ರಸಿದ್ದ ಲೇಖಕರೊಬ್ಬ ಅರ್ಜೆಂಟ್ ಆಗಿ ಇನ್ನೊಂದು ಊರಿಗೆ ಹೋಕೆತಾ  ಹೇಳಿ ಏರ್ಪೊರ್ಟ್ ಗೆ ಬಂದವೆ. ಅಸ್ಟ್ರಲ್ಲಿ ಅವು ಪ್ರಯಾಣ ಮಾಡೊಕಾದ ವಿಮಾನ 3 ಗಂಟೆ ತಡ ಆದೆತಾ ಮೈಕ್ ಲಿ ಹೇಳುವೆ. ಆ ಲೇಖಕರಿಗೆ ಒಮ್ಮೆಲೇ ಇರ್ಸ್ ಮುರ್ಸ್ ಆದೆ. ಆದರೂ ಬೇರೆ ದಾರಿ ಇಲ್ಲೆ. ಕಾದೇ ಕಾಯೊಕು ತಾ ಹೇಳಿ ವೇಟಿಂಗ್ ರೂಮ್ ಗೆ ಹೋಗಿ ಕುದ್ದವೆ. ವಿಮಾನ ಯಾನ ಕಂಪನಿಯವು ರಿಫ್ರೆಶ್ ಮೆಂಟ್(compensation)ತಾ ಹೇಳಿ ಒಂದು ಸ್ಯಾಂಡ್ ವಿಚ್ ಕೊಟ್ಟವೆ. 3 ಗಂಟೆ ಕಳ್ದದೆ, ಅಷ್ಟ್ರಲ್ಲಿ ಮೈಕ್ ಲಿ ಇನ್ನೊಂದು announcement ಬಂದದೆ. "ಸಾರಿ, ದ ಫ್ಲೈಟ್ ಹಾಸ್ ಬೀನ್ ಕ್ಯಾನ್ಸಲ್ಡ್" ತ... ಆಗ ಆ ವಿಮಾನ ಯಾನ ಕಂಪನಿಯವು ಆ ಲೇಖಕರಿಗೆ ಎರಡ್ ಸ್ಯಾಂಡ್ ವಿಚ್ ಕೊಟ್ಟವೆ. ಲೇಖಕರ ಸಿಟ್ಟ್ ನೆತ್ತಿಗೆ ಯೇರ್ದೆ, ಅಲ್ಲಿನ ಸಿಬ್ಬಂದಿಗಳೊಟ್ಟಿಗೆ ಜಗಳ ಆಡ್ದೆ, ಬಿ.ಪಿ. ರೈಸ್ ಆಗಿ ಹಾರಾಡ್ದೆ. ಬೇರೆ ದಾರಿ ಕಾಣದೆ ಅಲ್ಲೇ ತಲೆ ಮೇಲೆ ಕೈ ಹೊತ್ತು ಕುದ್ದವೆ. ಆಗ ಅಲ್ಲಿನ ಸಿಬ್ಬಂದಿಗ ಅವರೊಟ್ಟಿಗೆ ತುಂಬಾ ಕ್ಷಮೆ ಕೇಳಿವೆ, ನಮ್ಮೊದು ಪ್ರಯಾಣಿಕರ ಬಗ್ಗೆ ತುಂಬ ಕಾಳಜಿ ಇರುವ ಸಂಸ್ಥೆ… ಇನ್ನೊಮ್ಮೆ ಹಿಂಗೆ ಆಲೆ ತಾ ಹೇಳುವೆ.. ಅಷ್ಟೇ ಅಲ್ಲ, ಈ ಸಲ ಅವ್ಕೆ ಮೂರು
ಸ್ಯಾಂಡ್ ವಿಚ್ ಕೊಟ್ಟವೆ. ಇಲ್ಲಿ ನಾವು ಗಮನಿಸೊಕಾದ ಅಂಶ ಎಂಥಾತ ಹೇಳ್ರೆ ಕಂಪನಿಯವು ಎಷ್ಟೇ ಸ್ಯಾಂಡ್ ವಿಚ್ ಕೊಟ್ರೂ ವಿಮಾನ ಹೊರ್ಡುದ್ಲೆ, ಆ ಲೇಖಕ ತಲ್ಪುವ ಜಾಗ ತಲ್ಪಿಕೆ ಆದ್ಲೆ.. ಇಂತ ಸಂಸ್ಥೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಎಂತ?? ನಿಜವಾಗಿಯೂ ಪ್ರಯಾಣಿಕರ ಬಗ್ಗೆ ಕಾಳಜಿ ಇರುವ ಸಂಸ್ಥೆಗಳಾ ಇವು?? ಇಲ್ಲೆ ತಾನೆ?? ಆದ್ರೆ ಇಲ್ಲಿ ನಾನ್ ಹೇಳಿಕೆ ಹೊರ್ಟಿರ್ದು ಯಾವ್ದೊ airline ಕಂಪನಿ ಬಗ್ಗೆ ಅಲ್ಲ. ಅಥವಾ ತೊಂದರೆಗೆ ಒಳಗಾದ ಆ ಲೇಖಕರ ಬಗ್ಗೆನೂ ಅಲ್ಲ.. ನಮ್ಮ ದೇಶದ ಬಗ್ಗೆ.. ನಮ್ಮ ರೈತರ ಬಗ್ಗೆ ನಮ್ಮ ಸರ್ಕಾರದ ದ್ವಂದ್ವ ನಿಲುವು ಗಳ ಬಗ್ಗೆ. ಇಲ್ಲಿ ಆ ಲೇಖಕ = ನಮ್ಮ ದೇಶದ ರೈತ. ವಿಮಾನಯಾನ ಕಂಪನಿ =ನಮ್ಮ ಭ್ರಷ್ಟ ಸರ್ಕಾರ, ಅರ್ಥಾತ್ ರಾಜಕೀಯ ವ್ಯವಸ್ಥೆ.
           ಸರ್ಕಾರ ನಮ್ಮ ರೈತರ ಬಗ್ಗೆ ತಕಣುವ ನಿಲುವುಗ ಎಷ್ಟ್ ಸಮಂಜಸ?? ಮೇಲ್ನೋಟಕ್ಕೆ ಸರ್ಕಾರ ನಮ್ಮ ರೈತರಿಗೆ ಸಬ್ಸಿಡಿ,ಸಾಲ, ಕಡಿಮೆ ದರಕ್ಕೆ ಅಕ್ಕಿ ಎಲ್ಲಾ ಕೊಟ್ಟದೆ.
ಆದರೆ ಭಾರತದ ಪ್ರಜೆಗಳಾಗಿ ಒಂದು ವಿಷ್ಯ ಯೋಚನೆ ಮಾಡೊಕು. ಇಂಥ ಕಣ್ಣೊರ್ಸೊ ಸೌಲಭ್ಯಗ, ಸೇವೆಗ ನಮ್ಮ ಭಾರತದ ಕ್ರಷಿಕನ ನಿಜವಾಗ್ಲೂ ಅಭಿವ್ರದ್ದಿ ಪಡ್ಸಿದೆನಾ?? ಹೌದು, ಭಾರತದ ಕ್ರಷಿ ಮಳೆ ಆಧಾರಿತ.. ಎಲ್ಲವ್ಕೂ ಗೊತ್ತು. ಹಂಗೆತ ಹೇಳಿ ಆಗುವ ಕಷ್ಟ ನಷ್ಟಗಳಿಗೆಲ್ಲಾ ಮಳೆರಾಯನ ಬೈಯ್ಯೋದು ಯಾವ ನ್ಯಾಯ?? ಭಾರತ ಕ್ರಷಿ ಆದಾರಿತ ದೇಶತಾ ಗೊತ್ತಿರುವ ನಾವು ಮಳೆ ಮೇಲೆ ಅವಲಂಬಿತರಾಗದೆ, ಬೇರೆ ನೀರ್ ನ ಮೂಲ, ಅದಿಕೆ ಬೇಕಾದ infrastuctureಗಳ್ನ ಅಭಿವೃದ್ಧಿ ಪಡ್ಸುವ ಕಡೆ ಗಮನ ಕೊಡ್ತಾ ಒಳೊನ?? ನಮ್ಮ ದೇಶದ ಒಟ್ಟು ಕೃಷಿ ಭೂಮಿಲಿ ಹೆಚ್ಚು ಕಡಿಮೆ 2/3 ಶೇಕಡ ಭೂಮಿ ಸ್ವಾತಂತ್ರ್ಯಾ ಸಿಕ್ಕಿ ೫೦ ವರ್ಷ ಕಳ್ದರೂ ಸಂಪೂರ್ಣ ಮಳೆ ಆಧಾರಿತ. ಆದರೆ ನೆನ್ಪಿರ್ಲಿ.. ನಮ್ಮ ನಂತರ  ಸ್ವಾತಂತ್ರ್ಯ ಸಿಕ್ಕಿದ ಚೀನಾದ ಒಟ್ಟು ಕೃಷಿ ಭೂಮಿಲಿ ೬ ಶೇಕಡ(6%) ಮಾತ್ರ ಮಳೆ ಆಧಾರಿತ. ಅಭಿವ್ರುದ್ದಿ ಹೊಂದಿದ ರಾಷ್ಟ್ರಗ ಮಳೆ ಮೇಲೆ ತುಂಬ ಕಡಿಮೆ ಅವಲಂಬಿತರಾದವೆ, ಈ ಅವಲಂಬನೆಯ ಸೂತ್ರ ಆ ದೇಶಗಳಿಗೆ ಉತ್ತಮ ಉತ್ಪಾದನೆ ಕೊಟ್ಟದೆ. ಅದ್ ವರ್ಷಂದ ವರ್ಷಕ್ಕೆ ಏರ್ತಾ ಇದ್ದದೆ. ಒಂದು ಎಕರೆನ ಪರಿಗಣನೆಗೆ ತಕಂಡ್ರೆ, ಚೀನಾ ನಮ್ಮ ದೇಶ ಉತ್ಪಾದನೆ ಮಾಡುವ ಭತ್ತದ ಮೂರರಷ್ಟ್ ಉತ್ಪಾದನೆ ಮಾಡ್ಡೆ. ಆಸ್ಟ್ರೇಲಿಯಾ ಐದು ಪಟ್ಟ್ ಉತ್ಪಾದನೆ ಮಾಡ್ಡೆ. ಅವ್ಕೆ ಹೋಲ್ಸಿರೆ ನಾವು ಹಿಂದೆ. ಆದರೆ ನಾವು ಇದನ್ನ ಮುಕ್ತ ಮನಸ್ಸಿನಿಂದ ಒಪ್ಪಿಕಂಡವೆ. ಯಾಕೆತಾ  ಹೇಳ್ರೆ ನಾವು ಭಾರತೀಯರು.. ನಮ್ಮ ಬುದ್ದಿನೇ ಅಷ್ಟ್ ತಾನೆ...!!! ನಮ್ಮ ಹತ್ರ ಯಾರಾರ್ ನಿಮ್ಮ ಸಮಸ್ಯೆಗಳಿಗೆ ಕಾರಣ ಎಂತಾತ ಕೇಳ್ರೆ ನಾವು ಮೊದ್ಲು ಬೆರ್ಳ್ ಮಾಡ್ಡು ಸರ್ಕಾರ ದ ಕಡೆಗೆ, ಎರಡನೆ ಬೆರ್ಳ್ ಮಾಡ್ಡು ರಾಜಕೀಯದ ಕಡೆಗೆ... ಇನ್ನು ನಮ್ಮ ರೈತನ ಬಗ್ಗೆ ಹೇಳೊಕು ತಾ ಹೇಳ್ರೆ ಅವ ಆಸ್ಪತ್ರೆಲಿ ಅಡ್ಮಿಟ್ ಆಗಿರುವ ರೋಗಿನಂಗೆ. ಸಬ್ಸಿಡಿ , ಸಾಲತಾ ಹೇಳುವ ಡ್ರಗ್ಸ್ ಮಾತ್ರ ಉಳ್ಸುದು ಅವನ. ಅವಂಗೆ ಡ್ರಗ್ಸ್ ಕೊಟ್ಟ್ ಜೀವಂತವಾಗಿ ಇಟ್ಟ್ಕೊಬೊಂದು ಅವ ಹಾಕುವ ವೋಟ್ ಗಾಗಿ ಮಾತ್ರ. ಸರ್ಕಾರ ಕೊಡುವ ಕಡಿಮೆ ಬೆಲೆಯ ಅಕ್ಕಿ ತಾತ್ಕಾಲಿಕವಾಗಿ ಹಸಿವು ನೀಗ್ಸುದು ಅಷ್ಟೇ. ಆದರೆ ಮಳೆ ಅವಲಂಬನೆ ತರದ ಗಂಭೀರ ಸಮಸ್ಯೆನ ಪರಿಹಾರ ಮಾಡ್ದೆನಾ???? ಇಂಥ ಸಮಸ್ಯೆಗ ಪರಿಹಾರ ಆತ್ಲೆತೇಳಿರೆ ಭಾರತದ ಅಭಿವ್ರುದ್ದಿ ನಿಜವಾಗ್ಲೂ ಸಾಧ್ಯನಾ?? ಇನ್ನು ಸರ್ಕಾರ ಕೊಡುವ ಸಬ್ಸಿಡಿ , ಸಾಲಗ ಇನ್ನಷ್ಟು ಕೆಳಗೆ ತಳ್ಳಿದೆ ನಮ್ಮನ. ಸರ್ಕಾರ ನಮಿಗೆ ಸಾಲ ಸೋಲ ಕೊಡಿಕೆ ಮತ್ತೆ ಬೇರೆ ದೇಶದ ಹತ್ರ ಸಾಲ ಮಾಡ್ಡೆ. ಬಸ್ ದರ ಹೆಚ್ಚಳ, ಹಾಲಿನ ದರ ಹೆಚ್ಚಳ, ಪೆಟ್ರೋಲ್ ದರ ಹೆಚ್ಚಳ, ತೆರಿಗೆ ಹೆಚ್ಚಳ, ಇನ್ನೂ ಅರ್ಥ ಆಗುವಂಗೆ ಹೇಳೊಕು ತಾ ಆದರೆ TRAI ಹೆಸ್ರ್ ಲಿ ಮೆಸೇಜ್ ಪ್ಯಾಕ್ ಕಟ್, ಕಾಲ್ ರೇಟ್ ಜಾಸ್ತಿ... ಹಿಂಗೆ ಮತ್ತೆ ನಮಿಗೆ ಕೊಟ್ಟ ಸಾಲನ ನಮ್ಮಿಂದಲೆ ವಸೂಲ್ ಮಾಡ್ದೆ. ಕೊನೆಗೆ  ದಂಡ ಕಟ್ಟುದು ನಾವುಗಳೇ
                          ನಾವು ನಮ್ಮ ಜೀವನ ಶೈಲಿನ ಹಿಂಗೆ ಮುಂದುವರ್ಸಕ್ ಬೇಕಾರೆ. ಆಗಾಗ ಏರುವ ಬೆಲೆಗೆ 2 ದಿನ ಕೂಗಾಡಿ ಮೂರನೆ ದಿನ ಸುಮ್ಮನೆ ಆಕೊಂಡು, 5,10,15,20,25  ವರ್ಷ  ತಕಣುವ ಅಭಿವ್ರುದ್ದಿ ಯೋಜನೆ ಗಳ್ನ (ಉದಾ: ಬೆಂಗಳೂರ್ ಮೆಟ್ರೊ, railway to coorg.) ನೋಡಿ ನೋಡದಂಗೆ ಇದ್ದ್ಕಂಡ್, ಬಡತನ, ಭ್ರಷ್ಟಾಚಾರಕ್ಕೆ ಕಣ್ಣ್ ಮುಚ್ಚಿಕಂಡ್...... ಇದ್ ಒಂದು ಆಯ್ಕೆ. ಆದರೆ ಇನ್ನೊಂದು ಆಯ್ಕೆಸಾ ಉಟ್ಟು. ಇಪ್ಪತ್ತ್  ವರ್ಷದ ಹಿಂದೆ ಏಷ್ಯಾದ ಹಲವು ರಾಷ್ಟ್ರಗ ನಮ್ಮ ಸ್ಥಿತಿಲೇ ಇದ್ದೊ.ಆದರೆ ಇಂದ್ ಅವು ಎಷ್ಟೋ ಮುಂದುವರ್ದೊಳೊ, ಯಾಕೆತ ಹೇಳ್ರೆ ಅವು ಅಂಥ ಆರ್ಥಿಕ ನೀತಿನ ಅಳವಡ್ಸಿಕಂಡೊಳೊ, ಭವಿಷ್ಯದ ಅಭಿವ್ರುದ್ದಿಗಳ ಬಗ್ಗೆ ಗಟ್ಟಿ ನಿಲುವ ಇರುವ ನೀತಿ ಅದ್. ನಮ್ಮ ದೇಶಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಡಿವ ಅಭಿವ್ರುದ್ದಿ ಕಾರ್ಯಗಳಂಗೆ ಅಲ್ಲ. ಇದೇ  ಆ ದೇಶಗಳ್ನ ೨೦ ವರ್ಷ ಮುಂದಕ್ಕೆ ತಳ್ಳಿತ್. ನಾವು  ೨೦ ವರ್ಷ ಹಿಂದೆನೇ ಒಳೊ. ರಾಜಕಾರಣಿಗಳ್ನ ದೂರಿಕೆ ನಮಿಗೆ ತುಂಬ ಸುಲಭ, ಆದರೆ ಅವರ್ನ ನಾಯಕರನ್ನಾಗಿ ಮಾಡ್ದು ನಾವೆ ತಾ ಹೆಳ್ದು ನಮಿಗೆ ನೆನ್ಪ್ ಇರೊಕು. ನಮ್ಮಲ್ಲಿ ಕೆಲವು ರಾಜಕಾರಣಿಗ ಒಂದು ಮಾತ್ ಹೇಳುವೆ, ಸ್ವತಃ ನಾನೇ ಕಿವಿಯಾರ ಕೇಳೊಳೆ, "ಅಧಿಕಾರ ಇರ್ಕಾಕನ ನೆ ನಮ್ಮ ಲೈಪ್ ಸೆಟ್ಲ್ ಮಾಡಿಕಣೊಕು. ಪ್ರಾಮಾಣಿಕತೆ ತೋರ್ಸಿಕೆ ಹೋದರೆ ನಮ್ಮ ದೇಶಲಿ ಏನ್ ಸ ಮಾಡಿಕೆ ಆಲೆ"ತ... ಈ ಮನೋಬಾವದ ರಾಜಕಾರಣಿಗ ನಮ್ಮ ದೇಶಕ್ಕೆ ಅದ್ ಯಾವ ರೀತಿಯ ಲಾಭ ಹೇಳಿ??  ಇಂತವ್ಕೆ ನಂದೊಂದು ಪ್ರಶ್ನೆ. ನೀವು ನಿಮ್ಮ ಮಕ್ಕಳಿಗೆ ನೀವು ನೋಡ್ದ ಈ ಕೆಟ್ಟ, ಭ್ರಷ್ಟ, ಕೊಳಕು ದೇಶನ ಬುಟ್ಟ್ ಹೋಕೆ ಇಷ್ಟ ಪಟ್ಟಿಯರ?? ಅಲ್ಲ ಒಂದು ಉತ್ತಮವಾದ, ಶ್ರೀಮಂತವಾದ, ಸ್ವಚ್ಚವಾದ ದೇಶನ ಬುಟ್ಟ್ ಹೋಕೆ  ಇಷ್ಟ ಪಟ್ಟಿಯರ??.
                                   ಕ್ರಷಿ ಕ್ಷೇತ್ರಲಿ ಅಭಿವ್ರುದ್ದಿ ತ ಹೇಳ್ರೆ ಬರೀ 10-12 ವರ್ಷ ತಕಣುವ ನೀರಾವರಿ ಯೋಜನೆಗಳ್ನ ಮಾಡಿಕಂಡ್ ಕೂರ್ದು, ಹೊಸ ಹೊಸ ತಳಿಗಳ್ನ ಸಂಶೋದನೆ ಮಾಡ್ಡು ಮಾತ್ರ ಅಲ್ಲ. ಹಾಂಗ್ ಕಾಂಗ್ ಮತ್ತೆ ಸಿಂಗಾಪುರ ಹಾಲು ಮತ್ತು ಹಾಲಿನ ಉತ್ಪನ್ನನ ಆಸ್ಟ್ರೇಲಿಯಾ ದೇಶಂದ ಆಮದು ಮಾಡಿಕಂಡದೆ. ಭಾರತದ ಸಾಫ್ಟ್ ವೇರ್ ಕಂಪೆನಿಗ  ಭಾರತದ ಹೊರಗೆಸ ವಿದೇಶಿ ಕಂಪೆನಿಗಳಿಗೆ ಸವಾಲೊಡ್ಡುವ ರೀತಿಲಿ ಸ್ಪರ್ಧೆ ಮಾಡ್ಕನ,  ನಮ್ಮ ರೈತ ಮಾತ್ರ ಯಾಕೆ ಇನ್ನು ಇ ಮಾರುಕಟ್ಟೆಲೆ ಉಟ್ಟು? ನಮ್ಮ  ಕ್ರಷಿ ಯಾಕೆ ದೇಶಿ ಮಾರುಕಟ್ಟೆ ಬುಟ್ಟ್ ಹೊರಗೆ ಹೋಗ್ತಾ ಇಲ್ಲೆ?? ಅಂತಾರಾಷ್ಟ್ರೀಯ ಮಟ್ಟಲಿ ಭಾರತಕ್ಕೆ ಸ್ಪರ್ಧಾತ್ಮಕ ಶಕ್ತಿ ಕೊಡಿಕೆ ಕ್ರಷಿ ಅಭಿವ್ರುದ್ದಿ ಇಂದ ಮಾತ್ರ ಸಾಧ್ಯ. ನಮ್ಮ ಅನ್ನದಾತ ಭಾರತೀಯ ರೈತ. ಆ ಅನ್ನದಾತನ ಉದ್ಧಾರವೆ ದೇಶದ ಉದ್ಧಾರತ ಮರೀಬೇಡಿ.
                   ಹಾಃ!! ಪಟ್ಟಣ ಪಂಚಾಯಿತಿ ಎಲೆಕ್ಸನ್ ಸದ್ಯಲೇ ಉಟ್ಟು.... 100-200 ರೂಪಾಯಿ ದುಡ್ಡಿಗೋಸ್ಕರ, ಬಿರಿಯಾನಿಗೋಸ್ಕರ, ಹೆಂಡಕೋಸ್ಕರ ಯಾರಿಗೋ ಓಟ್ ಹಾಕಿ ತ ಕ್ಯಾನ್ವಾಸ್ ಮಾಡಿಕೆ ಹೊರ್ಡಿಕೆ ಮುಂದೆ (ಸ್ಯಾಂಡ್ ವಿಚ್ ತಕಣುವ ಮುಂಚೆ..) ಇದರ ಬಗ್ಗೆ ಒಮ್ಮೆ ಯೋಚನೆ ಮಾಡಿ.... ಜೈ ಹಿಂದ್..ಭಾರತ್ ಬಂದ್..!!!!!!!!

                                                                                                                            - ಲತನ್ ಅಯ್ಯೇಟಿರ
ನೀವು ಕೂಡ ಅರೆಭಾಷೇಲಿ ಬರೆಯಕ್. ಬರ್ದದನ್ನ ನಮಿಗೆ ಮೇಲ್ ಮಾಡಿ..

Sunday 10 February 2013

ಸೋಂಪನ ರೇಡಿಯೋ


ಸೋಂಪ ಬೆಳಗ್ಗೆ ಐದುಮುಕ್ಕಾಲಕ್ಕೆ ಸರಿಯಾಗಿ ಎದ್ದುಬಿಟ್ಟದೆ. ಎದ್ದಂಗೆನೇ ದೇವ್ರಿಗೆ ಕೈಮುಗ್ದದೆನೋ ಬಿಟ್ಟದೆನೋ ಗೊತ್ಲೆ, ರೇಡಿಯೋ ಆನ್ ಮಾಡಿಕೆ ಮಾತ್ರ ಮರೆಯಲ್ಲೆ... `ಬೆಳಗ್ಗೆ ಬೆಳಗ್ಗೆ ಐದೂಮುಕ್ಕಾಲಕ್ಕೆ ರೇಡಿಯೋಲಿ ಎಂಥದ್ದ್ ಇದ್ದದೆ ಮಣ್ಣಾಂಗಟ್ಟಿ..'ತಾ ನೀವು ಕೇಳಿಯರಿತಾ ಗೊತ್ತು...ಆದ್ರೆ ಸೋಂಪಂಗೆ ರೇಡಿಯೋಲಿ ಇಂಥದ್ದೇ ಇರೋಕೂತೇನೂ ಇಲ್ಲೆ. ರೇಡಿಯೋ ಕಿವಿ ಹಿಂಡಿದ ಕೂಡ್ಲೇ ಪುಸ್ಸ್...ತಾ ಬಂದದೆಯಲ್ಲಾ ಶಬ್ದ, ಅದಿದ್ದರೆ ಸಾಕ್ ! ಐದು ಐವತ್ತೈದರ ವರೆಗೆ ಅದೇ ಶಬ್ದ ಸೋಂಪಂಗೆ  ಕರ್ಣಾನಂದ ! ಐದು ಐವತ್ತೈದ್ ಆದ್ಮೇಲೆ ಟೊಂಯ್...ತಾ ಒಂದು ಶಬ್ದ ಆದೆ....ಅದೋ ಕಿವಿಯೊಳಗೆಲ್ಲಾ ನುಗ್ಗಿ, ಮೆದುಳುನ ಎಲ್ಲಾ ನರಗಳಿಗೆ ತಾಂಗಿ, ಕಾಲ್ನ ಹೆಬ್ಬೆರಳ ತುದಿ ವರೆಗೆ ಬರೊಕು. ಆಗ್ಲೇ ಅವಂಗೆ ಸಮಾಧಾನ. ಸರಿ 6 ಗಂಟೆ ಆಕಾಕನ.. `ಇದು 103.1 ಮೆಗಾಹರ್ಟ್ಸ್, ಆಕಾಶವಾಣಿ ಮಡಿಕೇರಿ ಕೇಂದ್ರ....ಇವತ್ತು ಶಾಲಿವಾಹನ ಶಕೆ----ಅಂದ್ರೆ 2013ನೇ ಇಸವಿ---'ತೇಳುವ ತಿಥಿ ನಕ್ಷತ್ರ ಏಲ್ಲಾ ಕೇಳಿ, ಆರು ಐದಕ್ಕೆ `ಈಗ ಇಂಗ್ಲೀಷ್ನಲ್ಲಿ ವಾರ್ತೆಗಳು, ದೆಹಲಿ ಕೇಂದ್ರದಿಂದ' ತಾ ರೇಡಿಯೋದಿಂದ ಕೇಳಿದ ಮೇಲೆನೇ ಕಟ್ಲ್ಂದ ಸೋಂಪನೆಲಕ್ಕೆ ಕಾಲಿಡುದು....ಆದಿನ ಹೆಣ್ಣು ಧ್ವನಿ ಇದ್ದರೆ, ಸೋಂಪನ ಮೂಡ್ ಲಾಯ್ಕ ಇದ್ದದೆ. ಗಂಡು ಧ್ವನಿಯೇನಾದ್ರೂ ಕೇಳ್ತ್ತೇಳಿರೆ, ಮುಗ್ದೇ ಹೋತ್, ಅಂದ್ ಅವ್ನ ಹೆಣ್ಣ್ನ ಗ್ರಹಚಾರ ಕೆಟ್ಟುಟ್ಟುತಾನೇ ಲೆಕ್ಕ !
ಆದ್ರೆ ಇಂದ್ ಎಲ್ಲಾ ಉಲ್ಟಾ...! ಗುಳಿಗಂಗೆ ಬಿಟ್ಟ ಹುಂಜ ಕೂಗ್ತಿದ್ದಂಗೆ, ಸೋಂಪಂಗೆ ಪಟ್ಟತಾ ಎಚ್ಚರ ಆತ್...ಅಭ್ಯಾಸ ಬಲಲಿ ಬಲಗಡೆಗೆ ಕೈಹಾಕಿ ರೇಡಿಯೋ ತಕ್ಕಣ್ತ್. ರೇಡಿಯೋನ ಹೊಟ್ಟೆಮೇಲೆ ಇಟ್ಕಂಡ್, ಅದ್ರ ಕಿವಿ ತಿರುಗಿಸ್ತ್. ಎಂಥದ್ದೂ ಶಬ್ದ ಕೇಳ್ತಿಲ್ಲೆ...! ಇನ್ನೂ ಜೋರಾಗಿ ತಿರುಗಿಸ್ತ್... ಊಹುಂ....ಸತ್ತ ಹೆಣಕ್ಕೂ ಸೋಂಪನ ರೇಡಿಯೋಕ್ಕೂ ವ್ಯತ್ಯಾಸನೇ ಇಲ್ಲೆ ! ಎಲ್ಲಿತ್ತೋ ಸಿಟ್ಟು, ಎಲ್ಲಾ ಹೆಣ್ಣ್ನ ಮೇಲೆ ಕಾರಿಕೆ ಶುರುಮಾಡ್ತ್...`ಏಯ್...ಬಾನೆ ಇಲ್ಲಿ..' ಹಟ್ಟಿ ಬಾಚ್ತಿದ್ದ ಅವ್ಳಿಗೆ ಸೋಂಪ ಕರ್ದದ್ ಕೇಳಿತ್ಲೆ. ಮತ್ತೆ ಸೋಂಪ ಹಾಸಿಗೆಂದನೇ ಕಿರ್ಚಿತ್, `ರೇಡಿಯೋದಂಗೆ ನಿನ್ನ ಬಾಯಿಗೂ ಎಂಥಾಗುಟ್ಟು ರೋಗ? ಕರೆಯುದು ಕೇಳ್ದುಲ್ಲೆನೇ....?' ಹಟ್ಟಿ ಬಾಚುವ ಚರಪರ ಸದ್ದುಲಿ ಅವಳಿಗೆಲ್ಲಿ ಕೇಳ್ದೆ ಈ ಸೋಂಪನ ಸ್ವರ ? ರೇಡಿಯೋ ಕೈಕೊಟ್ಟ ಸಿಟ್ಟು, ಹೆಣ್ಣ್ ಪ್ರತಿಕ್ರಿಯೆ ಕೊಡದಿರ್ವ ಸಿಟ್ಟು ಎರಡೂ ಸೇರಿಕಂಡ್ ಸೋಂಪನ ಮೈಮೇಲೆ ದೇವ್ರು ಬಂದಂಗೆ ಆತ್. ಕಟ್ಲ್ಂದ ಜೋರಾಗಿ ಹಾರಿ, ಅಲ್ಲೇ ಇದ್ದ ನಾಯಿ ಓಡ್ಸುವ ದೊಣ್ಣೆ ಹಿಡ್ಕಂಡ್, ಅಡುಗೆ ಮನೆ ಕಡೆ ಓಡ್ತ್...ಹೆಣ್ಣ್ ಅಲ್ಲಿ ಇತ್ಲೆ. `ಎಲ್ಲಿ ಹಾಳಾಗಿ ಹೋಗ್ಯೊಳನೆ..'ತಾ ಬೈಯ್ಕಂಡ್ ಇನ್ನೇನ್ ಹೊರಗೆ ಹೋಕು, ಅಷ್ಟೊತ್ತಿಗೆ ಅಲ್ಲೇ ಇದ್ದ ಹುರ್ದಿಟ್ಟಿದ್ದ ಹಂದಿ ಸೆಳ್ಳಿ ಕಂಡತ್. ನಿನ್ನೆ ರಾತ್ರಿ ತಿಂದ್ ಉಳ್ದಿದ್ದ ಹಂದಿ ಸೆಳ್ಳಿ ಅದ್. ಅದ್ನ ನೋಡಿಯಾಕನ ಇನ್ನೂ ಮುಖ ತೊಳ್ತ್ಲೆತೇಳುದು ಮರ್ತು ಹೋತ್. ರೇಡಿಯೋ ಕೆಲ್ಸ ಮಾಡ್ತಿಲ್ಲೆತೇಳುವ ಸಿಟ್ಟೂ ಇಳ್ದ್ ಹೋತ್. ಕಣ್ಣು ಮುಂದೆ ಇದ್ದದ್ ಹಂದಿ ಸೆಳ್ಳಿ ಮಾತ್ರ !
ಪ್ಲೇಟ್ಲಿ ಹಂದಿ ಸೆಳ್ಳಿ ಖಾಲಿ ಆಕಾಕನ, ಸೋಂಪನ ಹೆಣ್ಣ್ ಅಲ್ಲಿಗೆ ಬಾತ್. ಅಷ್ಟು ಹೊತ್ತ್ ಇಲ್ಲದ ರೇಡಿಯೋ ಯೋಚನೆ ಆಗ ಬಾತ್...`ಯಾರ್ನೆ ಅದ್ ನನ್ನ ರೇಡಿಯೋ ಮುಟ್ಟಿದ್ ? ಹಾಡ್ತನೇ ಇಲ್ಲೆ...'ತಾ ಸೋಂಪ ಕೇಳಿರೆ, `ಅಮ್ಮಪ್ಪಾ....ನಂಗೊತ್ಲೆ'ತಾ ಹೆಣ್ಣ್ ಉತ್ತರ ಕೊಟ್ಟತ್. ಸೋಂಪಂಗೆ ಮತ್ತೆ ಸಿಟ್ಟ್ ಬಾತ್...
`ಗೊತ್ಲೆತಾ ಹೇಳಿರೆ ಹೆಂಗೆ? ನಿಂಗೆಷ್ಟು ಸಲ ಹೇಳ್ತ್ಲೆ ? ಮಕ್ಕಳಿಗೆ ರೇಡಿಯೋ ಮುಟ್ಟಿಕೆ ಬಿಡ್ಬ್ಯಾಡತಾ.. ಈಗ ನೋಡ್, ರೇಡಿಯೋ ಹಾಳಾಗುಟ್ಟು.'  
`ರೇಡಿಯೋ ಹಾಳಾತ್ಲೆ, ಒಂದೂ ಆತ್ಲೆ...ನಾನೇ ಅದ್ರ ಬ್ಯಾಟರಿ ತೆಗ್ದಿಟ್ಟೊಳೆ.'
`ಎಂಥಕ್ಕೆ...ಎಂಥಕ್ಕೆ ನೀ ಬ್ಯಾಟರಿ ತೆಗ್ದದ್...?'
`ಸೆಗಣಿ ಸಾರ್ಸಿಕೆ ಬ್ಯಾಟರಿ ಬೇಕಿತ್ತ್....ಈಗ ಎಂತಾಥ್? ಹೊಸ ಬ್ಯಾಟರಿ ಅಂಗಡಿಂದ ತಂದರೆ ಆತ್..'
ಹೆಣ್ಣ್ ಮಾತ್ ಕೇಳಿ ಸೋಂಪ ಸುಸ್ತು...!
 - `ಸುಮ'

ಅರೆಭಾಷೇಲಿ ನೀವೂ ಬರೆಯಕ್.. ಬರ್ದದನ್ನ ಈಮೇಲ್ ಮಾಡಿ..
arebhase@gmail.com

Monday 10 September 2012

ಗಿಣಿಯು ಪಂಜರದೊಳಗಿಲ್ಲ...


ಗಿಣಿ...ಅವ್ಳ ಹೆಸ್ರೇ ಹಂಗೆ. ಅಪ್ಪ, ಅಮ್ಮನ ಒಬ್ಳೇ ಮುದ್ದಿನ ಕೂಸು. ಗಿಣಿ ಥರನೇ ಸಾಕಿದ್ದೋ...ಥೇಟ್ ಪಂಜರದ ಗಿಣಿಯಂಗೆ ! ಅಂತಿಂಥ ಪಂಜರ ಅಲ್ಲ, ಚಿನ್ನದ ಪಂಜರ ! ಗಿಣಿಗೂ ಕನಸುಗಳಿದ್ದೋ...ಆದ್ರೆ ಆ ಕನಸುಗಳೆಲ್ಲಾ ಚಿನ್ನದ ಪಂಜರದೊಳಗೆ ಕರಗಿಹೋಗಿತ್ತ್. ಮನೆ ಬಿಟ್ಟು ಹೊರಗೆ ಹೋಗುವಂಗೆನೇ ಇಲ್ಲೆ....ಎಲ್ಲಾ ಕುದ್ದಲ್ಲಿಗೇ ಬರ್ತಿತ್ತ್. ಬೆಳಗ್ಗೆ 6 ಗಂಟೆಗೆ ಆಯಾ ಬಂದ್ ಎದ್ದೇಳಿಸಿ, ಬ್ರಷ್ ಮಾಡ್ಸಿ, ಹಾರ್ಲಿಕ್ಸ್ ಕುಡಿಸಿರೆ, 7 ಗಂಟೆಗೆ ಯೋಗ ಟೀಚರ್, 8 ಗಂಟೆಗೆ ಕರಾಟೆ ಮಾಸ್ಟರ್ ಬಂದ್ ಅವ್ಳಿಗೆ ಯೋಗ ಮತ್ತೆ ಕರಾಟೆ ಹೇಳಿಕೊಡ್ತಿದ್ದೊ. 10 ಗಂಟೆಂದ ಸಂಜೆ ನಾಲ್ಕು ಗಂಟೆ ವರೆಗೆ ಪಾಠ. ಅದಕ್ಕೂ ಟೀಚರ್ಗ ಮನೆಗೆ ಬರ್ತಿದ್ದೊ. ಎಲ್ಲಾ ಒಂಥರ ಮೆಕ್ಯಾನಿಕಲ್ ಆಗಿ ನಡೀತ್ತಿತ್ತ್. ಇಂಥ ಗಿಣಿ, ಎಸ್ಎಸ್ಎಲ್ಸಿ ಪರೀಕ್ಷೆ ಬರಿಯಕ್ಕೆ ಹೋಗಿತ್ತ್. ಅದೇ ಅವ್ಳು ಮೊದಲ ಸಲ ಮನೇಂದ ಹೊರಕ್ಕೆ ಹೋದ್...
ಎಸಿ ಕಾರ್. ಮುಂದೆ ಡ್ರೈವರ್ ಮತ್ತೆ ಟೀಚರ್. ಹಿಂದೆ ಸಿಟ್ಲಿ ಆಚೆ ಈಚೆ ಅಪ್ಪ-ಅಮ್ಮ. ಮಧ್ಯಲಿ ಗಿಣಿ. ಕಾರು ಮುಂದಕ್ಕೆ ಹೋಗ್ತಿದ್ದಂಗೆ ಹಿಂದಕ್ಕೆ ಓಡ್ತಿದ್ದ ಗಿಡ, ಮರಗಳ್ನ ಗಿಣಿ ತುಂಬಾ ಆಶ್ಚರ್ಯಂದ ನೋಡ್ತಿತ್ತ್. ಇವ್ಳು ಪರೀಕ್ಷೆ ಬರೆಯಕ್ಕಾಗಿದ್ದ ಶಾಲೆ ಹತ್ರ ಬಾತ್. ಗೇಟ್ ಹತ್ರ ಒಬ್ಬ ಸುರಸುಂದರಾಂಗ ಹೈದ..! ಫೋಟೋ ತೆಗ್ದ ಹಂಗೆ ಗಿಣಿ ಮನಸ್ಲಿ ಅವನ ಚಿತ್ರ ಸೇವ್ ಆಗಿಬಿಟ್ಟತ್...ಪರೀಕ್ಷೆ ಬರೆಯಕಾಕನ ಪಕ್ಕದ ಸಿಟ್ಲಿ ಕೂಡ ಅವ್ನೇ..! ಆ ಹೈದನ ಕಣ್ಣ್ಲಿ ಭವಿಷ್ಯದ ದಾರಿ ಸ್ಪಷ್ಟವಾಗಿ ಕಾಣ್ತಿತ್ತ್. ಓದಿದ್ದನ್ನೆಲ್ಲಾ ತುಂಬಾ ಲಾಯ್ಕಲಿ ಪೇಪರ್ ಮೇಲೆ ಭಟ್ಟಿ ಇಳಿಸ್ತಿತ್ತ್. ಆದ್ರೆ ಗಿಣಿಗೆ ಮಾತ್ರ ಎಂಥ ಬರೆಯೋಕುತನೇ ಗೊತ್ತಾತ್ಲೆ...ಆ ಸುರಸುಂದರಾಗನ ನೋಡಿಕಂಡೇ ಕಾಲ ಕಳ್ದ್ಬಿಟ್ಟತ್. ಆರು ಪರೀಕ್ಷೆಯ ಆರೂ ದಿನನೂ ಇದೇ ಕಥೆ....ಮನೆಗೆ ಬಂದರೂ ಯಾವುದಕ್ಕೂ ಮನಸ್ಸಿಲ್ಲೆ...ಕಣ್ಣುಬಿಟ್ಟರೆ, ಕಣ್ಣು ಮುಚ್ಚಿರೆ ಎಲ್ಲೆಲ್ಲೂ ಅದೇ ಹೈದನ ಚಿತ್ರ. ಗಿಣಿಗೆ ಜ್ವರ ಬಾತ್.
ದೊಡ್ಡ ದೊಡ್ಡ ಡಾಕ್ಟರ್ಗಳೆಲ್ಲಾ ಬಂದ್ ನೋಡ್ದೊ...ಗಿಣಿಗೆ ಬಂದ ಜ್ವರ ಯಾವುದುತಾ ಯಾರಿಗೂ ಗೊತ್ತಾತ್ಲೆ. ಅವ್ಳನ್ನ ಅಮೆರಿಕಾಕ್ಕೆ ಕರ್ಕಂಡ್ ಹೋಕೆ ಪ್ಲ್ಯಾನ್ ಮಾಡ್ದೊ. ಅಷ್ಟೊತ್ತಿಗೆ ಗಿಣಿಗೆ ಬಂದ ಜ್ವರದ ಹಿಂದಿನ ಕಾರಣ ಅವ್ಳ ಟೀಚರ್ಗೆ ಗೊತ್ತಾತ್. ಪರೀಕ್ಷೆ ದಿನ ಪಕ್ಕಲಿ ಕುದ್ದಿದ್ದ ಹೈದನ ಫೋಟೋನ ತಂದ್ ಗಿಣಿ ಮುಂದೆ ಹಿಡಿಯಕಾಕನ, ಅವ್ಳ ಕಣ್ಣ್ಲಿ ವಿಶೇಷ ಬೆಳಕು ! ಟೀಚರ್ ತಡ ಮಾಡ್ತ್ಲೆ...ಹೋಗಿ ಆ ಹೈದನ ಕರ್ಕಂಡ್ ಬಾತ್...ಅವ್ನನ್ನ ನೋಡ್ತಿದ್ದಂಗೆ ಗಿಣಿ ಹೊರಗೆ ಓಡಿ ಹೋತ್...ಅವನ ಕೈ ಹಿಡ್ಕಂಡ್ ಗೇಟ್ ದಾಟಿತ್....
- ಸುನಿಲ್ ಪೊನ್ನೇಟಿ

Friday 7 September 2012

ಉಂಗುರ ಪ್ರೇಮ...!



`ಜನ ಈಗ ನಮ್ಮ ಹೆಸರೇಳಿಕೂ ಹೆದರ್ತೊಳೊ...'

`ಅಲ್ಲಮತ್ತೆ...ಹಿಂಗೆ ರೇಟ್ ಆಕಾಶ ಕಡೆ ಓಡ್ತಿದ್ದರೆ ಇನ್ನೇನಾದೆ..'

`ಹೌದು....ಪ್ರೀತಿಲಿ `ಚಿನ್ನಾ' ತಾ ಕಿವಿಹತ್ರ ಬಂದ್ ಹೇಳಿಕಣಿಕೂ ಹಿಂದೆ ಮುಂದೆ ನೋಡಿವೆ'

`ಇನ್ನೆಂಥ...? 20 ವರ್ಷಗಳ ಹಿಂದೆ ಹಿಂಗೆ ಇತ್ತಾ?'

`ಎಲ್ಲಿತ್ತ್? ಪುತ್ತೂರಿಗೆ 10ಸಾವಿರ ರೂಪಾಯಿ ತಕ್ಕಂಡ್ ಹೋಗಿದ್ದರೆ, ಬಾಕಾಕನ ಒಳ್ಳೇ ಎರಡಳೆ ಚೈನ್ ತಕ್ಕಂಡ್ ಬರಕ್ಕಾಗಿತ್ತ್.'

`ಈಗ ಹೋದ ಹೋದಲ್ಲಿ ನಮ್ಮ ಅಂಗಡಿಗ... ಈ ಅಂಗಡಿಗ ಜಾಸ್ತಿ ಆದಷ್ಟೂ ನಮ್ಮ ರೇಟ್ ಜಾಸ್ತಿ ! ನಿನ್ನೆ 10 ಗ್ರಾಂಗೆ 32 ಸಾವಿರ ರೂಪಾಯಿ..!'

`ಹುಂ...ದೀಪಾವಳಿ ಬಾಕಾಕನ 50 ಸಾವಿರ ರೂಪಾಯಿ ಆದೆ ಗಡ..!'

`ಹಿಂಗಾದರೆ ದೇವರೇ ಗತಿ..! ನಿನ್ನ ಮುಖಲಿ ಕೂರಿಸಿಯೊಳಲಾ ಆ ನೀಲಿ ಕಲ್ಲು...ನಿಂಗೆ ತುಂಬಾ ಲಾಯ್ಕ ಕಂಡದೆ...ಸುರಸುಂದರಾಂಗ..!'

`ಸಾಕ್...ಸಾಕ್...ತುಂಬಾ ಹೊಗುಳುಬೇಡ. ನೀ ಏನು ಕಮ್ಮಿ ಪೊರ್ಲು ಒಳಾ...? ಆಕಾರ ಸಣ್ಣ ಆದ್ರೂ... ಬಂದವು ಒಂದ್ಸಲ ನಿನ್ನನ್ನ ಅವ್ರ ಬೆರಳಿಗೆ ಹಾಕ್ಕಂಡ್ ನೋಡಿವೆ...'

`ಹೌದೌದು....ನೀ ನಂಗೆ ಹಂಗೆ ಹೇಳಿರೆ ನಾಚಿಕೆ ಆದೆ...!'

`ಛಿ..ಕಳ್ಳಿ... ನೀ ನಾಚಿಕಂಡ್ರೂ ತುಂಬಾ ಲಾಯ್ಕ ಕಂಡಿಯಾ...ನಿನ್ನ ಮುಖಲಿರ್ವ ನೇರಳೆ ಹರಳಂತೂ ಸೂಪರ್...'

`ಇನ್ನೆಷ್ಟು ದಿನರಾ ಹಿಂಗೆ?'

`ಹೆಂಗೆ...?'

`ಅದೇ ಈಗ ಒಳಾ ಅಲಾ ಜೊತೆ ಜೊತೆಲೇ...ಹಂಗೆ...'

`ಶ್....ಶಬ್ದ ಮಾಡ್ಬೇಡಾ...ಅವ್ಳು ಬರ್ತುಟ್ಟು....'

`ಅವ್ಳು ಅಂದ್ರೆ.... ಯಾರ್ ?'

`ಅದೇ...ಅವ್ಳ ಬಾಯ್ಫ್ರಂಡ್ ಬೆರಳಿಗೆ ಹಾಕಿಕೇತಾ ಆರ್ಡರ್ ಕೊಟ್ಟು ನನ್ನ ರೆಡಿ ಮಾಡಿಸಿತ್ತಲ್ಲಾ, ಅವ್ಳು....'

`ಹಂಗಾರೆ ಈಗ ನೀ ನನ್ನ ಬುಟ್ಟು ಹೋದಿಯಾ ?'

`ಹುಂ....ಡೀಯರ್...ನಾ ಹೋಗದಿದ್ದರೆ, ಈ ಆಚಾರಿ ಬುಟ್ಟದೆನಾ? ಅವ್ಳ ಕೈಂದ 20 ಸಾವಿರ ರೂಪಾಯಿ ತಕ್ಕಂಡತ್ಲೆನಾ...? ಏಯ್....ಅಲ್ಲಿ ನೋಡ್...'

`ಎಂಥ...?'

`ಅದೇ, ಗರ್ಲ್  ಫ್ರಂಡ್ಗೆ ಕೊಡಿಕೆತಾ ಆರ್ಡರ್ ಕೊಟ್ಟು ನಿನ್ನ ರೆಡಿ ಮಾಡಿಸಿತ್ತಲ್ಲಾ...ಅಂವ ಬರ್ತುಟ್ಟು...' 

`ಅಯ್ಯೋ...ಇಷ್ಟು ಬೇಗ ನಾವು ದೂರ-ದೂರ ಆಗ್ತೊಳಲಾ...'

`ನಿರಾಸೆ ಬೇಡ ಡೀಯರ್...ಮತ್ತೆ ನಾವಿಬ್ಬರೂ ಒಟ್ಟು ಸೇರುನೋ...ಅವಿಬ್ಬರೂ ಕೈ ಕೈ ಹಿಡ್ಕಂಡಾಗ...!!' 


- ಸುನಿಲ್ ಪೊನ್ನೇಟಿ 
arebhase@gmail.com

Thursday 6 September 2012

ಧೋಬಿ ಘಾಟ್ !


ಮುಂಬೈ ಧೋಬಿಘಾಟ್ ಗೊತ್ತುಟ್ಟಲ್ಲಾ...? ತುಂಬಾ ಫಿಲಂಗ ಅಲ್ಲಿ ಶೂಟಿಂಗ್ ಆಗುಟ್ಟು. ಅಂಥ ಧೋಬಿ ಘಾಟ್ಗ ಎಲ್ಲಾ ಊರುಗಳಲ್ಲೂ ಇದ್ದದೆ. ಆದ್ರೆ ಅಷ್ಟು ದೊಡ್ಡದು ಇರುದುಲ್ಲೆ ಅಷ್ಟೇ...ನನ್ನ ಊರುಲಿ ಕೂಡ ಒಂದು ಧೋಬಿಘಾಟ್ ಉಟ್ಟು. ಭಕ್ತರ ಪಾಪಗಳ್ನ ತೊಳಿಯುವ ಕನ್ನಿಕಾ ಹೊಳೆ, ಸಂಗಮಕ್ಕೆ ಬರ್ವ ಮೊದ್ಲು ಈ ಧೋಬಿಘಾಟ್ಲಿ ಬಟ್ಟೆಗಳ ಕೊಳೆ ತೆಗ್ದು ಬಂದದೆ. ಆ ಊರಿನ ಪೋಲೀಸ್ ಇನ್ಸ್ಪೆಕ್ಟರ್ಂದ ಹಿಡ್ದ್, ಪಂಚಾಯಿತಿ ಕುಲುವಾಡಿ ವರೆಗಿನ  ಖಾಕಿ ಯೂನಿಫಾರಂ. ಅನಂತ ಭಟ್ಟರ್ಂದ ಹಿಡ್ದ್ ಗೌರ್ಮೆಂಟ್ ಆಸ್ಪತ್ರೆ ಡಾಕ್ಟರ್ ವರೆಗಿನ ಬಿಳಿ ಬಟ್ಟೆ ಕ್ಲೀನ್ ಆದು ಇಲ್ಲಿಯೇ... ಧೋಬಿ ಘಾಟ್ಗಿಂತ ಕೆಳಗೆ ಇರವ್ಕೆ ಇದ್ಯಾವುದೂ ಗೊತ್ತಾಲೆ. ಎಲ್ಲವೂ ಅದೇ ನೀರ್ನ ಕುಡ್ದವೆ. ಅದೇ ನೀರ್ಲಿ ಸ್ನಾನ ಮಾಡಿವೆ. ಅದೇ ನೀರ್ಲಿ ಈಜಾಡಿವೆ.
ಕನ್ನಿಕಾ ಹೊಳೆಯ ಆ ಕಲ್ಲುಗ ಬಟ್ಟೆ ಒಗೆಯುವವ್ಕಾಗಿ ಅಲ್ಲಿ ಹುಟ್ಟಿಕಣ್ತೋ, ಅಥ್ವಾ ಆ ಕಲ್ಲುಗಳ್ನ ನೋಡಿಕಂಡ್ ಬಟ್ಟೆ ಒಗೆಯುವವು ಅಲ್ಲಿ ಮನೆ ಕಟ್ಟಿಕೊಂಡೊಳನಾ ? ಗೊತ್ಲೆ. ಆ ಜಾಗನೂ ಅಷ್ಟೇ, ತುಂಬಾ ಲಾಯ್ಕ ಉಟ್ಟು. ಮೊಣಕಾಲು ವರೆಗೆನೇ ಹರಿಯುವ ಕನ್ನಿಕಾ ಹೊಳೆ...ಕುದ್ದ್ಕಂಡ್, ನಿಂತ್ಕಂಡ್, ಬೇಕಾರೆ ಮಲಗಿಕಂಡೂ ಒಗೆಯಕ್ಕೆ ಅನುಕೂಲ ಆಗುವ ದೊಡ್ಡ, ದೊಡ್ಡ ಕಲ್ಲುಗ. ಒಗ್ದ ಬಟ್ಟೆಗಳ್ನ ಒಣಗಿಕೆ ಹಾಕಿಕೆ ದೊಡ್ಡ ಬಾಣೆ... ಇನ್ನೆಂಥ ಬೇಕು ? ಬಟ್ಟೆ ಒಗ್ದು ಒಗ್ದು ಸುಸ್ತಾತಾ? ಅಲ್ಲೇ ಸ್ವಲ್ಪ ಮೇಲೆ ಒಂದು ಹೊಂಡ ಉಟ್ಟು. ಯಾವ ಸ್ವಿಮ್ಮಿಂಗ್ಪೂಲ್ಗೂ ಅದ್ ಕಡಿಮೆ ಇಲ್ಲೆ. ಜೀಪ್ಗಳ ಹಳೇ ಟ್ಯೂಬ್ನ ಸೊಂಟಕ್ಕೆ ಕಟ್ಟಿಕಂಡ್ ನೀರಿಗಿಳಿದ್ರೆ, ಸ್ವರ್ಗ ಸುಖ !
ಹೇಳಿಕೇಳಿ ನನ್ನೂರು ಮಳೆಯ ತವರೂರು ! ಒಂದು ವರ್ಷ ಹಂಗೆನೇ ಆತ್. ಜೋರು ಮಳೆ...ಒಂದು ವಾರ ಕಣ್ಣುಮುಚ್ಚಿಕಂಡ್ ಹೊಡ್ತ್. ಸಂಗಮದ ಹೊಳೆ ನೀರು ದೇವಸ್ಥಾನ ಮೆಟ್ಟಿಲು ದಾಟಿ, ಸಂತೋಷ್ ಹೊಟೇಲಿಗಾಗಿ, ಕಾವೇರಿ ದರ್ಶಿನಿಗೆ ನುಗ್ಗಿ, ವಿಜಯಲಕ್ಷ್ಮೀ ಷೆಡ್ ವರೆಗೆ ಬಂದ್ಬಿಡ್ತ್. ನಮ್ಮ ಧೋಬಿಘಾಟ್ ಪೂರ್ತಿ ಮುಳುಗಿ ಹೋಗಿ, ಬಟ್ಟೆ ಒಗೆಯುವವರ ಮನೆಯೊಳಗೆ ಮೊಣಕಾಲು ಗಂಟ ನೀರು ಬಂದಿತ್ತ್. ಮತ್ತೆ ಒಂದು ವಾರ ಇದೇ ಸ್ಥಿತಿ. ಇದಾದ್ಮೇಲೆ ಸ್ವಲ್ಪ ಸ್ವಲ್ಪನೇ ಮಳೆ ಕಡಿಮೆ ಆತ್. ಹೊಳೆ ನೀರೂ ಇಳ್ತ್. ಬಟ್ಟೆ ಒಗಿಯಕ್ಕೆ ಕನ್ನಿಕಾ ಹೊಳೆಗೆ ಹೋದ್ರೆ ಅಲ್ಲಿ ಎಂಥ ಉಟ್ಟು? ಮಣ್ಣು...ಹೌದು ಮಣ್ಣಲ್ಲ, ಬರೀ ಕೆಸ್ರು. ದೊಡ್ಡ ದೊಡ್ಡ ಕಲ್ಲುಗ ಕೆಸರೊಳಗೆ ಹೂತು ಹೋಗಿದ್ದೊ. ಬಟ್ಟೆ ಒಣಗಿಕೆ ಹಾಕುವ ಬಾಣೆ ತುಂಬಾ ನೀರು ನಿತ್ಕಂಡ್ ಕೆರೆ ಥರ ಆಗಿತ್ತ್. ಸ್ವಿಮ್ಮಿಂಗ್ಪೂಲ್ ಥರ ಇದ್ದ ಹೊಂಡಲಿ ಮರಳು ರಾಶಿ...ನಮ್ಮ ಜೀವನನೂ ಹಿಂಗೆ ತಾನೇ.... ಇಂದ್ ಇದ್ದಂಗೆ ನಾಳೆ ಇರ್ದುಲ್ಲೆ!!!

- ಸುನಿಲ್ ಪೊನ್ನೇಟಿ
arebahse@gmail.com

Wednesday 5 September 2012

ಲಿಲ್ಲಿ ತೋಟ


ಆಗಷ್ಟೇ ಮಳೆ ಬಂದ್ ನಿಂತಿತ್ತ್. ಮಣ್ಣೆಲ್ಲಾ ಹಸಿಹಸಿ... ಕಾಲಿಟ್ಟರೆ ಅಲ್ಲೇ ಹೆಜ್ಜೆ ಗುರುತು ಮೂಡುವಂಗೆ ಸ್ವಲ್ಪ ಕೆಸ್ರು. ಆ ಹೊತ್ತ್ಲಿ ಅದ್ಯಾಕೋ ಲಿಲ್ಲಿಗೆ ತೋಟಕ್ಕೆ ಹೋಗುವ ಮನಸ್ಸಾತ್. ಗದ್ದೆ ಹತ್ರ ಮನೆ. ಮನೇಂದ ತೋಟಕ್ಕೆ ಸುಮಾರ್ 2 ಕಿಲೋಮೀಟರ್ ದೂರ. ಮಳೆ ಬಂದ್ ತೋಟಲಿ ಕಾಫಿ ಕಾಯಿ ಉದುರಿಬಿಟ್ಟುಟ್ಟೋ ಏನೋತೇಳುವ ಹೆದರಿಕೆ, ಅವ್ಳನ್ನ ತೋಟದ ಕಡೆ ಹೋಗುವಂಗೆ ಮಾಡ್ತ್. ಇದ್ಕೆ ಕಾರಣನೂ ಉಟ್ಟು. ಅಲ್ಲಿ ಆ 2 ಎಕರೆ ತೋಟ ಸಿಕ್ಕಿಕಾದರೆ ಲಿಲ್ಲಿ ಮತ್ತೆ ಅವ್ಳ ಗಂಡಂಗೆ ಸಾಕಪ್ಪಾ ತೋಟದ ಸಹವಾಸತಾ ಹೇಳುವಂಗೆ ಆಗಿತ್ತ್. ತೋಟ ಸಿಕ್ಕಿ, ಅಲ್ಲಿ ಹೊಸ ಗಿಡ ಹಾಕಿ...ಈಗ ಮೊದ್ಲ ಫಸಲು....
ಲಿಲ್ಲಿ ಗಂಡ ಪಳಂಗ ಆರ್ಮಿಲಿ ಇತ್. ಲಿಲ್ಲಿ ಕೂಡ ಮದುವೆ ಆದ್ಮೇಲೆ ಅವನ ಜೊತೆನೇ ಹೋಗಿತ್ತ್. ಸಿಕಂದರಾಬಾದ್ಂದ ಹಿಡ್ದ್ ಕಾಶ್ಮೀರ ಮೂಲೆಯ ಲಡಾಕ್ ವರೆಗೆ ವರ್ಷಕ್ಕೆ ಒಂದು ಜಾಗಲಿ ಪಳಂಗ ಮತ್ತೆ ಲಿಲ್ಲಿ ಟ್ರಾನ್ಸ್ಫರ್ ಹೆಸ್ರಲ್ಲಿ ಸುತ್ತಾಡಿದ್ದೊ. ರಿಟೈರ್ಡ್ ಆಗಿ ಬಂದಮೇಲೆನೇ ಶುರುವಾದ್ ತಲೆನೋವು. ಪಳಂಗನ ಅಣ್ಣ `ನಾ ಏನೇ ಆದರೂ ಪಳಂಗಂಗೆ ಪಾಲು ಕೊಡ್ಲೆ'ತಾ ಹಠ ಹಿಡ್ದ್ ಕುದ್ದಿತ್ತ್. ಪಂಚಾಯ್ತಿ ಕರ್ದ ದಿನ ಜಗಳ ಆಡಿ, ಪಂಚಾಯ್ತಿಗೆ ಬಂದವ್ಕೆನೇ ಕೋವಿ ತೋರ್ಸಿ ಓಡಿಸಿತ್ತ್. ಕೊನೆಗೆ ಕೋರ್ಟ್ ಗೆ ಹೋಗಿ ಹತ್ತು ವರ್ಷ ಕೇಸ್ ನಡ್ದ ಮೇಲೆ 2 ಎಕರೆ ಜಾಗ ಪಳಂಗಪ್ಪನ ಪಾಲಿಗೆ ಸಿಕ್ಕಿತ್ತ್. ಹಂಗಾಗಿ ಗಂಡ, ಹೆಣ್ಣ್ ಇಬ್ಬರಿಗೂ ಆ ಜಾಗದ ಮೇಲೆ ತುಂಬಾ ಪ್ರೀತಿ. ಬೆವರಿನ ಜೊತೆ ರಕ್ತ ಸುರ್ಸಿ ಅಲ್ಲಿ ಕಾಫಿ ಗಿಡ ಬೆಳೆಸಿದ್ದೊ. ತೋಟ ತುಂಬಾ ಲಾಯ್ಕ ಬಂದಿತ್ತ್.
ಈ ವರ್ಷ ಮೊದಲ ಫಸಲು ಬಾತ್ತೇಳುವ ಖುಷಿ ಗಂಡ, ಹೆಣ್ಣ್ ಇಬ್ಬರಲ್ಲೂ ಇತ್ತ್. ಆದ್ರೆ ಟೈಂ ಅಲ್ಲದ ಟೈಂಲಿ ಬಂದ ಮಳೆ ಇವರ ತಲೆಕೆಡಿಸಿತ್. ಇಂದಂತೂ ಜೋರು ಮಳೆ. ಸಣ್ಣ ನಿದ್ದೆಮಾಡಿಬಿಟ್ಟನೆತಾ ಪಳಂಗ ಮಧ್ಯಾಹ್ನ ಊಟ ಮಾಡಿ ಹಾಸಿಗೆಲಿ ಬಿದ್ದ್ಕಂಡಿತ್ತ್. ಲಿಲ್ಲಿಗೆ ಮನಸ್ಸು ಕೇಳ್ತಿತ್ಲೆ. ಗಂಡನ ಎಚ್ಚರ ಮಾಡುದು ಬೇಡತಾ ಅವ್ಳೊಬ್ಳೇ ತೋಟದ ಕಡೆ ಹೆಜ್ಜೆ ಹಾಕಿತ್ತ್...ಮಳೆ ಬಂದ್ ನಿಂತಿದ್ದರಿಂದ ಮಳೆ ಹುಳ `ಕಿರ್ರೋಂ...ಕಿರ್ರೋಂ'ತಾ ಮರಡ್ತಿದ್ದೊ.
ಸಾಯಂಕಾಲ 5 ಗಂಟೆ ಆಗಿರೊಕೇನೋ...ಪಳಂಗಂಗೆ ಎಚ್ಚರ ಆತ್. `ಲಿಲ್ಲಿ...ಲಿಲ್ಲಿ'ತಾ ಎರಡು-ಮೂರು ಸಲ ಕರ್ತ್. ಉತ್ತರ ಬಾತ್ಲೆ... ಕಾಫಿ ಕಾಯಿಸ್ತಿರುದೇನೋತಾ ಅಡುಗೆ ಕೋಂಬರೆಗೆ ಹೋಗಿ ನೋಡಿರೆ, ಅಲ್ಲಿ ಇಲ್ಲೆ. ಗುಡ್ಡದ ಒಲೆ ಹತ್ರ ಹೋಗಿ ನೋಡ್ತ್..ಅಲ್ಲೂ ಕಾಂಬಲೆ. ಲಿಲ್ಲಿ ಎಲ್ಲಿ ಹೋಗಿರುದಪ್ಪತಾ ಪಳಂಗಂಗೆ ಹೆದ್ರಿಕೆ ಶುರುವಾತ್. ಮನೆ ಹೊರಗೆ ಬಂದ್, ಪುನಃ `ಲಿಲ್ಲಿ...ಲಿಲ್ಲಿ'ತಾ ಮೂರು-ನಾಲ್ಕು ಸಲ ಕರ್ತ್. ಅವಳ ಪತ್ತೆನೇ ಇಲ್ಲೆ. ಹಂಗೆ ಹೊರಗೆ ಬಂದ್ ನೋಡಿಕಾಕನ ತೋಟಕ್ಕೆ ಹೋಗುವ ದಾರೀಲಿ ಲಿಲ್ಲಿದ್ ಚಪ್ಪಲಿ ಗುರ್ತ್ ಕಾಣ್ತ್. `ಓ...ಲಿಲ್ಲಿ ತೋಟಕ್ಕೆ ಹೋಗಿರುದೇನೋ'ತಾ ಗ್ಯಾನ ಮಾಡ್ಕಂಡ್, ಪಳಂಗ ಕೂಡ ತೋಟದ ಕಡೆಗೆ ಹೊರ್ಟತ್. `ಇಷ್ಟು ಹೊತ್ತು ತೋಟಲಿ ಎಂಥ ಮಾಡಿದೆಯಪ್ಪಾ'ತಾ ಮನಸ್ಲಿ ಬಯ್ಕಂಡೇ ನಡ್ಕಂಡಿರ್ಕಾಕನ ದಾರೀಲಿ ಆನೆದ್ ಹೆಜ್ಜೆ ಕಂಡಂಗೆ ಆತ್...ಪಳಂಗ ಇನ್ನೂ ಸ್ವಲ್ಪ ಬಗ್ಗಿ ನೋಡ್ತ್...`ಡೌಟೇ ಬೇಡ...ಈ ದಾರೀಲಿ ಆನೆ ಹೋಗುಟ್ಟು...'ತಾ ಅವಂಗೆ ಗೊತ್ತಾತ್. ಲಿಲ್ಲಿದ್ ಚಪ್ಪಲಿ ಗುರುತು ಹಿಂದೆ, ಆನೆದ್ ಹೆಜ್ಜೆ ಗುರುತು ! ಆ ಹೆಜ್ಜೆ ಗುರುತು ಹಿಂದೆನೇ ಪಳಂಗ ಹೊರ್ಟತ್....
ತೋಟಕ್ಕೆ ಹೋಗಿ ನೋಡಿರೆ, ಪಳಂಗಂಗೆ ಎದೆ ಒಡ್ದು ಹೋದೋಂದೇ ಬಾಕಿ. ಕಾಫಿಗಿಡಗಳ್ನೆಲ್ಲಾ ಆನೆ ಹಾಳು ಮಾಡಿತ್ತ್. ಆದ್ರೆ ಅಲ್ಲಿ ಎಲ್ಲೂ ಲಿಲ್ಲಿ ಕಾಣ್ತ್ಲೆ. `ಲಿಲ್ಲಿ...ಲಿಲ್ಲಿ' ತಾ ಜೋರಾಗಿ ಕರ್ದತ್... ಹುಚ್ಚನಂಗೆ ಬೊಬ್ಬೆ ಹೊಡ್ಕಂಡ್ ತೋಟ ಪೂತರ್ಿ ಓಡಾಡ್ತ್....ಕೊನೆಗೆ ದೂರಲಿ ಬೆಟ್ಟ ಮೇಲೆಂದ ಇಳ್ಕಂಡ್ ಬರ್ವ ತೋಡು ಹತ್ರ ಲಿಲ್ಲಿದ್ ಸೀರೆ ಕಂಡಂಗಂಗೆ ಆತ್... ಹತ್ತಿರ ಹೋಗಿ ನೋಡಿರೆ....ಹೌದು, ಅಲ್ಲಿ ಲಿಲ್ಲಿ ಹೆಣ ! ಯಾವುದೋ ಹಳೇ ಸಿಟ್ಟು ಇದ್ದಂಗೆ ಆನೆ ಲಿಲ್ಲಿನ ಮೆಟ್ಟಿ ಮೆಟ್ಟಿ ಕೊಂದ್ಹಾಕಿತ್ತ್ !!

- ಸುನಿಲ್ ಪೊನ್ನೇಟಿ
arebhase@gmail.com

ದರುಶನ ಕೊಡು ಚಂದಮಾಮ


ಚಂದಮಾಮತಾ ಹೇಳಿರೆ ನಂಗೊಂಥರ ಖುಷಿ...ಅವನ ನೋಡ್ತಿದ್ದರೆ ಮನಸ್ನ ದುಃಖ ಎಲ್ಲಾ ಮಾಯ ಆಗ್ತಿತ್..ಆದ್ರೆ ಇಂದ್ಯಾಕೋ ಚಂದಮಾಮಂಗೂ ನನ್ನ ಬಗ್ಗೆ ಜಿಗುಪ್ಸೆ ಬಂದುಟ್ಟು ಕಂಡದೆ....ಅಂವ ನಂಗೆ ಮುಖನೇ ತೋರಿಸ್ತಿಲ್ಲೆ. ನಾ ಯಾರ ಹತ್ರ ನನ್ನ ನೋವು ಹೇಳಿಕಣಲಿ? ಈ ಮೊದ್ಲು ಯಾವತ್ತು ಕೂಡ ಹಿಂಗೆ ಆಗಿತ್ತ್ಲೆ...ಸಣ್ಣಂವ ಇರ್ಕಾಕನ ನಾ ಊಟನೇ ಸರಿಯಾಗಿ ಮಾಡ್ತಿತ್ಲೆ. ಆಗ ಅಮ್ಮ ಒಂದ್ ಕೈಲಿ ನನ್ನ ಎತ್ತಿಕಂಡ್, ಮತ್ತೊಂದು ಕೈಲಿ ಹಾಲು ಕಲಿಸಿದ ಅನ್ನ ಹಿಡ್ಕಂಡ್, ನಂಗೆ ಚಂದ್ರನ ತೋರಿಸ್ತಿತ್ತ್...ಅದ್ಯಾಕೋ ಗೊತ್ಲೆ, ಚಂದ್ರನ ನೋಡ್ತಿದ್ದಂಗೆ ತಟ್ಟೆಲಿದ್ದ ಅನ್ನ ಎಲ್ಲಾ ಖಾಲಿ ಆಗಿಬಿಡ್ತಿತ್ತ್. ಬಾಯಿಗೆ ತುತ್ತು ಕೊಟ್ಕಂಡೇ ಚಂದ್ರನ ಒಳ್ಳೊಳ್ಳೇ ಕಥೆಗಳ್ನ ಹೇಳ್ತಿದ್ದೊ ಅಮ್ಮ...ಹಿಂಗೆ ನಂಗೂ, ಚಂದಮಾಮಂಗೂ ಒಂಥರ ನೆಂಟಸ್ಥನ ಬೆಳ್ತ್. ಲೆಕ್ಕ ಇಲ್ಲದಷ್ಟು ಸಲ ನಂಗೆ ಬದುಕಿನ ಭರವಸೆ ಕೊಟ್ಟದ್ ಇದೇ ಚಂದಮಾಮ. ಮನಸ್ಸೊಳಗೆ ಎಂಥದ್ದೇ ನೋವು, ಸಂಕಟ, ದುಃಖ ಇರ್ಲಿ, ಒಂದರ್ಧ ಗಂಟೆ ಸುಮ್ಮನೆ ಚಂದ್ರ ನೋಡ್ತಿದ್ದರೆ ಸಾಕ್ ಎಲ್ಲಾ ಮಾಯ ಆಗಿ ನನ್ನಲ್ಲಿ ಹೊಸ ಮನುಷ್ಯ ಹುಟ್ಟಿಕಂಡ್ಬಿಡ್ತಿತ್ತ್...ಆದ್ರೆ ಈಗ ಎಲ್ಲಾ ಉಲ್ಟಾ...ಅದ್ಕೆ ಸರಿಯಾಗಿ ಕೆಟ್ಟ ಕನಸು ಬೇರೆ...
ನಾ ಒಂದು ಹಕ್ಕಿ. ಅದೇ ಚಂದ್ರ ಮೇಲೆ ಕುದ್ದ್ಕಂಡ್ ನನ್ನ ಕರೀತುಟ್ಟು. ಆ ತಂಪಾದ ಬೆಳಕು ನನ್ನಲ್ಲಿ ಎಂಥದ್ದೋ ಆಸೆ ಹುಟ್ಟಿಸ್ಯುಟ್ಟು. ನನ್ನ ರೆಕ್ಕೆಗಳಲ್ಲಿ ಶಕ್ತಿ ಇಲ್ಲೆ...ಆದ್ರೂ ಚಂದ್ರನ ಸೇರುವ ಆಸೆ. ಇದ್ದ ಬದ್ದ ಎಲ್ಲಾ ಬಲ ಸೇರಿಸಿ ಆಕಾಶ ಕಡೆ ಹಾರಿನೆ...ಹೂಂ, ಆಗ್ತಿಲ್ಲೆ...ರೆಕ್ಕೆಗಳಲ್ಲಿ ತುಂಬಾ ನೋವು. ಕಣ್ಣೆತ್ತಿ ಚಂದ್ರನ ನೋಡಿನೆ. ಅಂವ ಇನ್ನೂ ಅಲ್ಲಿ ನಗ್ತುಟ್ಟು. ಎರಡೂ ಕೈ ಬೀಸಿ ನನ್ನ ಕರೀತುಟ್ಟು...ಆ ನಗು ನಂಗೆ ಅಯಸ್ಕಾಂತ ! ತುಟಿಕಚ್ಚಿ ನೋವೆಲ್ಲಾ ಸಹಿಸಿಕಂಡ್ ಚಂದ್ರನ ಹತ್ತಿರ ಹೋಕಾಕನ ಅಂವ ಅಲ್ಲಿಂದ ನನ್ನ ಜೋರಾಗಿ ತಳ್ಳಿಬಿಟ್ಟದೆ...ಕಣ್ಣು ಬಿಟ್ಟು ನೋಡಿರೆ, ನಾ ರೆಕ್ಕೆ ಮುರ್ಕಂಡ್ ಬಿದ್ದಿದ್ದೆ... ನಿದ್ದೆಂದ ಎಚ್ಚರ ಆತ್....
ಮಧ್ಯರಾತ್ರಿ 1 ಗಂಟೆಗೆ ಮತ್ತೆ ಹೊರಗೆ ಬಂದೆ. ಈಗ್ಲಾದ್ರೂ ಚಂದ್ರ ಕಾಂಬದೇನೋತಾ ಆಸೆ. ಭಾಗಮಂಡಲಲಿ, ಕುಶಾಲನಗರಲಿ, ಮೈಸೂರ್ಲಿ, ಹೈದರಾಬಾದ್ಲಿ, ಡೆಲ್ಲಿಲಿ...ಹಿಂಗೆ ಎಲ್ಲಾ ಕಡೆ ನನ್ನ ಜೊತೆ ಬರ್ತಿದ್ದ ಚಂದ್ರ ಬೆಂಗಳೂರ್ಲಿ ಮಾತ್ರ ನನ್ನ ಅನಾಥ ಮಾಡಿಬಿಟ್ಟುಟ್ಟು...
`ಚಂದಮಾಮ, ನೀನೇ ಹಿಂಗೆ ಮಾಡಿರೆ ನನ್ನ ಮತ್ತೆ ಮನುಷ್ಯನಾಗಿ ಮಾಡುದು ಯಾರ್? ಮೋಡದ ಮರೇಂದ ಹೊರಗೆ ಬಾ...ಕಾದನೆ, ನಿಂಗಾಗಿ ಕಾದನೆ, ಗಂಟೆ....ದಿನ...ವಾರ...ತಿಂಗ...ಅಷ್ಟೇ... ಅದಕ್ಕಿಂತ ಜಾಸ್ತಿ ಆಲೆ...ನೀ ಬಾರದಿದ್ದರೆ ನಾ ಉಳಿಯಲ್ಲೆ...' 

- ಸುನಿಲ್ ಪೊನ್ನೇಟಿ
arebhase@gmail.com

Tuesday 4 September 2012

ಗಿಣಿ ರಾ(ನಾ)ಮ !!


                                                                        
ಪುಟ್ಟ ಅವನಿಷ್ಟಕ್ಕೆ ಅಂವ ನಡ್ಕಂಡ್ ಹೋಗ್ತಿತ್ತ್. ಅಷ್ಟೊತ್ತಿಗೆ ದೂರಲಿ ಒಂದು ಗಿಣಿ ಇವನನ್ನೇ ಕರ್ದಂಗೆ ಆತ್. ಒಮ್ಮೆ ತಿರುಗಿ ನೋಡ್ತ್. ತುಂಬಾ ಲಾಯ್ಕದ ಗಿಣಿ...ಆದ್ರೆ ಹಳೇದೆಲ್ಲಾ ಗ್ಯಾನ ಆಗಿ, ಈ ಗಿಣಿ ಸಹವಾಸನೇ ಬೇಡತಾ ಮುಂದಕ್ಕೆ ಹೋತ್. ಅಷ್ಟೊತ್ತಿಗೆ ಗಿಣಿ ಮತ್ತೊಂದ್ಸಲ ಪುಟ್ಟನ ಕರ್ದಂಗೆ ಕೇಳ್ತ್. ಯಾಕೋ ಇವನ ಮನಸ್ಸು ಸ್ವಲ್ಪ ಬದಲಾದಂಗೆ ಅನ್ನಿಸಿತ್... ಇನ್ನೇನ್ ಆ ಗಿಣಿನ ಹಿಡಿಯೊಕು, ಅಷ್ಟೊತ್ತಿಗೆ ಮತ್ತೆ ಹಳೇ ವಿಷಯ ಕಣ್ಮುಂದೆ ಬಾತ್.
ಏಳು ವರ್ಷದ ಹಿಂದೆ ಇರೋಕು ಕಂಡದೆ. ಅಂದು ಸನಾ ಪುಟ್ಟ ಇದೇ ದಾರೀಲಿ ಹೋಗ್ತಿತ್. ಆಗ ಪೊಂಗಾರೆ ಮರದ ಕೆಳಗೆ ಒಂದು ಗಿಣಿ ಕಾಲು ಮುರ್ಕಂಡ್ ಬಿದ್ದಿತ್ತ್. ಇಂವ ಅದ್ರ ಹತ್ರ ಹೋದಷ್ಟೂ, ಗಿಣಿ ಕುಂಟಿಕಂಡ್ ಕುಂಟಿಕಂಡ್  ದೂರ ದೂರ ಓಡ್ತಿತ್ತ್. ಸುಮಾರ್ ಹೊತ್ತು ಪೂಸಿ ಹೊಡ್ದ್ ಆದ್ಮೇಲೆ ಆ ಗಿಣಿಗೆ ಇವನ ಮೇಲೆ ನಂಬಿಕೆ ಬಾತ್. ಇಂವ ಕೈ ತೋರಿಸ್ತಿದ್ದಂತೆ, ಕೈ ಮೇಲೆ ಹತ್ತಿ ಕುದ್ದ್ಕಣ್ತ್. ಖುಷೀಲೇ ಗಿಣಿನ ಮನೆಗೆ ತಕ್ಕಂಡ್ ಹೋತ್. ಗೋಪಾಲ ಆಚಾರಿ ಹತ್ರ ಹೇಳಿ ಒಳ್ಳೆ ಪಂಜರ ಮಾಡಿಸಿಕಂಡತ್. ಆ ಪಂಜರನ ತನ್ನದೇ ಕೋಂಬರೇಲಿ ಇಟ್ಕಂಡತ್...ದಿನಾ ಹಾಲು, ಹಣ್ಣು ಕೊಟ್ಟ್, ಮುರ್ದ್ ಹೋಗಿದ್ದ ಕಾಲಿಗೆ ಮದ್ದ್ ಹಾಕಿ ಲಾಯ್ಕ ಸಾಂಕಿತ್. ಮೂರು ತಿಂಗಳಲ್ಲೇ ಗಿಣಿ ಹುಷಾರಾತ್. ಮೈ ಕೈ ತುಂಬಿಕಂಡ್ ನಾಲ್ಕ್ ಜನ ನೋಡುವಂಗೆ ಆತ್... ಪಂಜರದ ಬಾಗಿಲ್ನ ಪುಟ್ಟ ಯಾವತ್ತೂ ಮುಚ್ಚುತ್ತಿತ್ಲೆ....ಅಷ್ಟೊಂದು ನಂಬಿಕೆ ಅವನ ಗಿಣಿ ಮೇಲೆ...
ಅದೊಂದು ದಿನ ಹೊರಗೆಲ್ಲೋ ಹೋಗಿದ್ದ ಪುಟ್ಟ ಮನೆ ಸೇರಿಕಾಕನ ಕತ್ತಲೆ ಆಗಿತ್ತ್. ಇವನ ಕೋಂಬರೆಗೆ ಬಂದ್ ಪಂಜರ ನೋಡಿರೆ ಅಲ್ಲಿ ಗಿಣಿ ಇಲ್ಲೆ ! ಕಟ್ಲ್ ಕೆಳಗೆ, ಅಟ್ಟದ ಮೇಲೆ, ಏಲಕ್ಕಿ ಗೂಡ್...ಹಿಂಗೆ ಎಲ್ಲಾ ಕಡೆ ಹುಡುಕಿತ್...ಹೂಂ, ನಾಪತ್ತೆ. ತುಂಬಾ ಬೇಸರ ಆತ್. ರಾತ್ರಿ ಸರಿ ನಿದ್ದೆನೂ ಬಾತ್ಲೆ. ಬೆಳಿಗ್ಗೆ ಎದ್ದ್ ಕಿಡಿಕಿಲೆ ನೋಡಿರೆ, ಮಾವಿನ ಮರಲಿ ಕುದ್ದಿತ್ತ್ ಇವನ ಗಿಣಿ ! ಜೊತೇಲಿ ಮತ್ತೊಂದು ಗಿಣಿ...ಪುಟ್ಟ ಕರ್ದರೆ ಅಲಾ ಎಂಥ ಮಾಡಿರೂ ಅದ್ ಇವನ ಹತ್ರ ಬಾತ್ಲೆ...ಹತ್ರ ಹೋಕಾಕನ ಜೊತೇಲಿದ್ದ ಗಿಣಿ ಜೊತೆ ಹಾರಿ ಹೋತ್ ದೂರ...ತುಂಬಾ ದೂರ. ಮತ್ತೆ ಅದ್ ಇವನ ಕಣ್ಣಿಗೆ ಬಿದ್ದಿತ್ಲೆ. ಅಂದ್ಂದ ಇಂವಂಗೆ ಗಿಣಿಗತೇಳಿರೆ ಅಷ್ಟಕಷ್ಟೇ...
ಹಿಂಗೆ ಹಳೇದನ್ನೆಲ್ಲಾ ಯೋಚನೆ ಮಾಡಿಕಂಡ್ ಹೋಕಾಕನ ಈ ಹೊಸ ಗಿಣಿ ಪುಟ್ಟನ ಹಿಂದೆನೇ ಬಾತ್. `ನನ್ನನ್ನೊಮ್ಮೆ ನಿನ್ನ ಮನೆಗೆ ಕರ್ಕಂಡ್ ಹೋಗು ಮಾರಾಯ' ತಾ ಹೇಳುವಂಗೆ ಜೋರಾಗಿ ಮರ್ಡ್ ತಿತ್ತ್. ಯಾಕೋ ಗೊತ್ಲೆ ಹೊಸ ಗಿಣಿ ಮೇಲೆ ಪುಟ್ಟಂಗೆ ಆಸೆ ಹುಟ್ಟಿತ್. ಹಂಗೆತೇಳಿ ಮನೆಗೆ ತಕ್ಕಂಡ್ ಹೋಕೆ ಮನಸ್ಸು ಒಪ್ಪಿತ್ಲೆ. ಯಾಕೆತೇಳಿರೆ ಹಳೇ ಪಂಜರ ಉಪಯೋಗಿಸದೇ ಪೂರ್ತಿ ಹಾಳಾಗಿತ್ತ್. ಅದಕ್ಕಿಂತ ಹೆಚ್ಚುತೇಳಿರೆ ಮತ್ತೊಂದು ಗಿಣಿ ತಾಕೆ ಇವನ ಮನೇಲಿ ಒಪ್ತಿತ್ಲೆ...ಅವ್ರ ಮನಸ್ಲಿ ಹಳೇ ಗಿಣಿ ಮಾಡ್ದ ಗಾಯ ಹಂಗೆನೇ ಉಳ್ಕಂಡಿತ್ತ್. ಆದ್ರೆ ಹೊಸ ಗಿಣಿ ಪುಟ್ಟನ ಬಿಡುವಂಗೆ ಕಾಣ್ತ್ಲೇ...ಇಂವ ಹೋಗುವ ದಾರೀಲಿ ದಿನಾ ಪ್ರತ್ಯಕ್ಷ ಆಗಿ ಜೋರಾಗಿ ಮರ್ಡ್ತಿತ್ತ್. ಪುಟ್ಟಂಗೆ ಈ ಗಿಣಿ ಮೇಲೆ ಆಸೆ ಜಾಸ್ತಿ ಆತ್. ಮನೇಲಿರ್ವ ಹಳೇ ಪಂಜರನ ಮೊದ್ಲು ಸರಿಮಾಡ್ತ್. ಇದಾದ್ಮೇಲೆ ಮನೆಯವ್ರನ್ನ ಒಪ್ಪಿಸಿತ್. ಇನ್ನೇನ್ ಗಿಣಿನ ತರೋಕೂತ ಆ ಗಿಣಿ ದಿನಾ ಕುದ್ದಿರ್ತಿದ್ದಲ್ಲಿ ಹೋಗಿ ನೋಡಿರೆ, ಇವನ ಎದೆ ಒಡೆಯುದೊಂದೇ ಬಾಕಿ ! ಈ ಗಿಣಿನೂ ಮತ್ತೊಂದು ಹೊಸ ಗಿಣಿ ಜೊತೆ ಕುದ್ದ್ ನಗಾಡ್ತಿತ್ತ್ !!! ಛೇ...ನಂಬಿಕಾದ್ ಗಿಣಿಗಳ್ನ...

- ಸುನಿಲ್ ಪೊನ್ನೇಟಿ