Friday 30 March 2012

ನಾಚಿಕೆಯ ವರುಣ !


ಹೇ ತುಂಟಾ...
ಯಾರಿಗೂ ಗೊತ್ತಾಗದಂಗೆ 
ರಾತ್ರಿ ಬಂದು ಹೋಗಿಬಿಟ್ಟೊಳಾ !
ನಿನ್ನ ನೋಡಿ ಎಷ್ಟ್ ದಿನ ಆಗಿತ್ ?
ನಾವೆಲ್ಲಾ ಎಚ್ಚರ ಇರ್ಕಾಕನ
ಬಂದಿದ್ದರೆ ಏನಾಗ್ತಿತ್ ?
ನಿಂಗೆ ಅಷ್ಟೊಂದು ನಾಚಿಕೆನಾ ?
ಇಲ್ಲೆ....ನಂದೂ ತಪ್ಪುಟ್ಟು !
ನಂಗ್ಯಾಕೆ ಅಂಥ ನಿದ್ದೆ ?
ನೀ ಬಂದರೂ ಗೊತ್ತಾಗದಂತ ನಿದ್ದೆ !
ಅದ್ ಇದ್ದದ್ದೆ...
ತುಂಬಾ ಹೊತ್ತು ಇನಿಯನ ಜೊತೆ
ಮಾತಾಡಿರೆ ಇನ್ನೇನಾದೆ ?
ಏಯ್....
ಇನ್ನೊಂದ್ಸಲ ನಮ್ಗೆಲ್ಲಾ 
ಗೊತ್ತಾಗುವಂಗೆ ಬಾ.... 
ಕಿವಿ ತಮಟೆ ಒಡೆಯುವಂಗೆ
ಗುಡುಗಿನ ತಾಳ ಇರ್ಲಿ....
ಕಣ್ಣು ಮುಚ್ಚಿ ಹೋಗುವಂಗೆ
ಮಿಂಚಿನ ಹಾಡು ಇರ್ಲಿ...
ಮತ್ತೆ ಬಾ...ಇಂದೇ ಬಾ....
ಕಾದಿರ್ವ ಇಳೆನ ತಂಪು ಮಾಡು...
ನಿದ್ದೆಗೆಟ್ಟು ನಾ ಕಾದನೆ...
ಓ ಮಳೆರಾಯ...
ಬಂದಿಯಾ ತಾನೇ....?

- `ಸುಮಾ'
arebhase@gmail.com

Thursday 29 March 2012

`ಗೊಣ್ಣೆ ಸುರುಕನ ಬೇಟೆ ಪ್ರಸಂಗ'




`ಸರಿಯಾಗಿ ಚಡ್ಡಿ ಹಾಕ್ಕಂಬಕೆ ಬಾಲೆ, ಬೇಟೆಗೆ ಹೋದೆ ಗಡ ಬೇಟೆಗೆ...ಮನೇಂದ ಹೊರಗೆ ಕಾಲಿಟ್ಟರೆ ಕಾಲು ಮುರ್ದು ಕೈಗೆ ಕೊಟ್ಟನೆ...ಮುಚ್ಚ್ಕಂಡ್ ಮನೇಲಿ ಕುದ್ದುಕ...' ಸೊಂಟಂದ ಜಾರ್ತಿದ್ದ ಚೆಡ್ಡಿನ ಒಂದ್ ಕೈಲಿ ಹಿಡ್ಕಂಡ್, ಮೂಗುಂದ ಸುರೀತಿದ್ದ ಗೊಣ್ಣೆನ ಮತ್ತೊಂದು ಕೈಲಿ ಉಜ್ಜಿಕಂಡ್ ಅಪ್ಪನ ಹಿಂದೆ ಹೊರ್ಟಿದ್ದ ಗಣಿಗೆ ಅಮ್ಮ ಸಾಯಂಕಾಲ ಹೊತ್ತುಲಿ ಸಹಸ್ರನಾಮಾರ್ಚನೆ ಮಾಡ್ತಿತ್. ಗಣಿನ ಅಪ್ಪ ಪಳಂಗಂಗೆ ಬೇಟೆ ಹುಚ್ಚು. ವಾರಕ್ಕೆ ಒಂದು ಸಲ ಕೋವಿ ಹಿಡ್ಕಂಡ್ ಬಾಚಿಮಲೆ ಕಾಡಿಗೆ ಹೋತ್ಲೆತೇಳಿರೆ, ಅವಂಗೆ ಊಟ ಸೇರ್ದುಲ್ಲೆ. ಬೇಟೆಗೆ ಹೋದರೆ ಪಳಂಗ ಬರೀ ಕೈಲೇನೂ ವಾಪಸ್ ಬಾಲೆ. ಏನಿಲ್ಲೆತೇಳಿರೂ ಒಂದು ಮೊಲನಾದ್ರೂ ಹೊಡ್ಕಂಡ್ ಬರ್ತಿತ್. ಪಳಂಗನ ಹತ್ರ ಇರ್ದು ಹಳೇ ಕೋವಿ. ಅವ್ನ ತಾತ ಮಿಲಿಟರೀಂದ ರೀಟೈರ್ಡ್ ಆಕಾಕನ ತಕ್ಕಂಡದ್. ಪಾಲ್ ಆಕಾಕನ ಪಳಂಗನ ಅಪ್ಪಂಗೆ ಸಿಕ್ಕಿತ್. ಈಗ ಇವನ ಕೈಗೆ ಬಂದುಟ್ಟು. ಇಂವ ದುಡ್ಡು ಕೊಟ್ಟು ತೋಟ ತಕ್ಕಣ್ವ ಪಾರ್ಟಿ ಅಲ್ಲ. ಮನೇಲೇ ಮದ್ದು, ಕೇಪು ತುಂಬ್ಸಿ ತೋಟ ರೆಡಿ ಮಾಡ್ದೆ. ಒಮ್ಮೆ ಹಿಂಗೆ ಮಾಡಿಕಾಕನ ತೋಟ ಹೊಟ್ಟಿ ಇವನ ಕೈಗೆ ಗಾಯ ಆಗಿತ್ತ್. ಹಂಗಾಗಿ ಪ್ರತೀ ಸಲ ತೋಟ ತುಂಬಿಸ್ಕಾಕನ ತುಂಬಾ ಎಚ್ಚರಿಕೆ ತಕ್ಕಂಡದೆ. ಪಳಂಗನ ಹತ್ರ ಒಂದು ಕಂತ್ರಿ ನಾಯಿನೂ ಉಟ್ಟು. ಜಾಕಿ ತಾ ಅದ್ರ ಹೆಸ್ರು. ಜಾಕಿನ ನೋಡಿರೆ ಯಾರೂ ಇದ್ನ ಕಂತ್ರಿ ನಾಯಿತಾ ಹೇಳುಲೆ...ಏಕಂದ್ರೆ, ಈ ನಾಯಿನ ಪಳಂಗ ಅಷ್ಟು ಲಾಯ್ಕಲಿ ನೋಡ್ಕೊಂಡುಟ್ಟು. ಪಳಂಗ ಕೋವಿ ತಕ್ಕಂಡ್ ಬೇಟೆಗೆ ಹೊರಟರೆ, ಜಾಕಿ ಅವನ ಹಿಂದೆನೇ ಬಾಲ ಅಲ್ಲಾಡಿಸಿಕಂಡ್ ಹೊರಟುಬಿಡ್ತಿತ್. ಇಂತ ಪಳಂಗನ ಬೇಟೆ ಹುಚ್ಚು, ರಕ್ತಲಿ ಅವನ ಮಂಙ ಗಣಿಗೂ ಬಂದುಬಿಟ್ಟಿತ್ತ್ ! 
ಗಣಿ ಮನೇಂದ ಶಾಲೆಗೆ ಮೂರು ಕಿಲೋಮೀಟರ್ ದೂರ. ಸ್ವಲ್ಪ ದೂರ ಹೊಳೆ ಕರೇಲಿ ಗದ್ದೆ ಏರಿ ಮೇಲೆ ನಡ್ಕಂಡ್ ಹೋಕು. ಮತ್ತೆ ಸ್ವಲ್ಪ ದೂರ ಕಾಡು ದಾರಿ. ಅದಾದ್ಮೇಲೆ ತಲಕಾವೇರಿ ರಸ್ತೆ... ಈ ರಸ್ತೇಲಿ ಹೋದ್ರೆ ಶಾಲೆ ತಲುಪಕ್.  ಶಾಲೆಗೆ ಹೋಕಾಕನ ಗಣಿ ಎಲ್ಲಾ ಪುಸ್ತಕ ತಕ್ಕಂಡ್ ಹೋದೆನೋ ಬಿಟ್ಟದೆನೋ ಗೊತ್ಲೆ, ಆದ್ರೆ ಬ್ಯಾಗ್ಲಿ ಮಾತ್ರ ಒಂದು ಕ್ಯಾಟರ್ ಬಿಲ್, ಒಂದಿಷ್ಟು ಕಲ್ಲು ಅಂತೂ ಇದ್ದದೆ. ಹೊಳೇಲಿರ್ವ ಯಾವ ಗುಂಡಿಲಿ ಯಾವ ಮೀನುಗ ಎಷ್ಟು ಒಳೊ...ಈರಪ್ಪನ ತರಕಾರಿ ತೋಟಕ್ಕೆ ಹೊಸ ಪಕ್ಷಿ ಯಾವುದು ಬಂದುಟ್ಟು...ಬೀಳಿಕೆ ಆಗಿರ್ವ ಬೂರುಗ ಮರಲಿ ಎಷ್ಟು ಕುಂಡತಗ ಒಳೋ..ತಲಕಾವೇರಿ ರೋಡ್ಲಿ ಮೇಲೆ ತೊಟಂದ ಕೆಳಗೆ ತೋಟಕ್ಕೆ ಹೋಕೆ ಕಾಡು ಹಂದಿಗ ಎಲ್ಲೆಲ್ಲಿ ಕಂಡಿಗಳ್ನ ಮಾಡ್ಯೊಳೋ.. ಹಿಂಗೆ ಎಲ್ಲಾ ವಿಷಯಗಳ್ನ ತಿಳ್ಕಂಡ್ ಈ ಗಣಿ ದೊಡ್ಡ ಬೇಟೆಗಾರನಾಗುವ ಲಕ್ಷಣಗಳ್ನ ಚಿಕ್ಕದರಲ್ಲೇ ತೋರಿಸ್ತಿತ್. ಶಾಲೆಯ ಪುಸ್ತಕದಲ್ಲಿದ್ದ ಅಕ್ಷರಗ ಮಾತ್ರ ಸುಟ್ಟು ತಿಂಬಕ್ಕೆ ಬಾತಿತ್ಲೆ. ಆದ್ರೂ ಏಳನೇ ಕ್ಲಾಸ್ ಪಾಸಾಗಿ ಹೈಸ್ಕೂಲ್ ಮೆಟ್ಟಿಲು ಹತ್ತಿತ್.
ಗಣಿ ಎಲ್ಲಾ ಸಬ್ಜೆಕ್ಟ್ ಗಳಲ್ಲಿ ದಡ್ಡತಾ ಹೇಳಿಸಿಕಂಡ್ರೂ ಕನ್ನಡನ ಲಾಯ್ಕ ಕಲೀತಿತ್ತ್. ಅದ್ರಲ್ಲೂ ಪೂರ್ಣಚಂದ್ರ ತೇಜಸ್ವಿ ಕಥೆಗಳ್ನ ತುಂಬಾ ಲಾಯ್ಕ ಕೇಳ್ಸಿಕಣ್ತಿತ್. ಆ ಕಥೆಗಳಲ್ಲಿ ಬೇಟೆಯ ವಿಷ್ಯ ಬಂದ್ರಂತೂ ಮುಗ್ದೇ ಹೋತ್...ಮೈಯೆಲ್ಲಾ ಕಿವಿ ಮಾಡ್ಕಂಡ್ ಕೇಳ್ತಿತ್. ಇದ್ನ ಮೊದ್ಲು ಗಮನಿಸಿದವು, ಕನ್ನಡ ಪಾಠ ಮಾಡ್ವ ಜಾನಕಿ ಟೀಚರ್... ಅವು ಒಂದು ದಿನ ಗಣಿನ ಕೇಳ್ದೋ... `ಗಣಿ ನಿನಗೆ ತೇಜಸ್ವಿ ಕಥೆಗಳು ಅಂದ್ರೆ ಇಷ್ಟನಾ'. ಅದ್ಕೆ ಗಣಿ `ಹುಂ ಟೀಚರ್...ತುಂಬಾ ಇಷ್ಟ. ಅವ್ರು ಬೇಟೆ ಬಗ್ಗೆ ಬರ್ದಿದೆಲ್ಲಾ ನಂಗೆ ಗೊತ್ತು....'ತಾ ಉತ್ತರ ಕೊಟ್ಟತ್. `ಹಾಗಾದ್ರೆ ಅದೇ ಥರ ನಿಂಗೆ ಗೊತ್ತಿರೋದನ್ನ ಬರಿ ನೋಡೋಣ...' ಟೀಚರ್ ಹೇಳಿ ಮುಗಿಸುವ ಮೊದಲೇ ಗಣಿ ಪೆನ್ನು ಪುಸ್ತಕ ಹಿಡ್ಕಂಡ್ ಕುದ್ದುಬಿಟ್ಟತ್...10 ನಿಮಿಷಲಿ ಒಂದು ಕಥೆ ಕೂಡ ಬರ್ದ್ ಆತ್...ಅದ್ರ ಹೆಸ್ರು `ಗೊಣ್ಣೆ ಸುರುಕನ ಬೇಟೆ ಪ್ರಸಂಗ' ಜಾನಕಿ ಟೀಚರ್ಗೆ ಹೆಡ್ಡಿಂಗ್ ನೋಡಿ ನಗು ಬಾತ್. ಗಣಿ ಬರ್ದದನ್ನ ಪೂತರ್ಿ ಓದಿದೊ. ಪ್ರತೀ ವಾಕ್ಯಲೂ ತಪ್ಪು ತಪ್ಪು ಅಕ್ಷರಗ. ಆದ್ರೂ ಅಂವ ಬರ್ದ ಕಥೆ ಓದಿಸಿಕಂಡ್ ಹೋಗುವ ಹಂಗೆ ಇತ್. ತುಂಬಾ ತಮಾಷೆಯ ಬರವಣಿಗೆ ಶೈಲಿ ಗಣಿ ಹತ್ರ ಇರುದನ್ನ ಟೀಚರ್ ಗುರುತಿಸಿದೊ. ಅಲ್ಲಿಂದ ಗಣಿಯ ದೆಸೆನೇ ಬದ್ಲಾಗಿ ಹೋತ್....
ಅದ್ ಗಣಿ ಓದಿದ ಶಾಲೆ. ಅದಕ್ಕೆ 50 ವರ್ಷ ತುಂಬಿತ್ತ್. ಆ ಖುಷಿಗೊಂದು ಸಮಾರಂಭ. ಅಲ್ಲಿ ಗಣಿನೇ ಮುಖ್ಯ ಅತಿಥಿ. ಯಾಕಂದ್ರೆ ಅಂವ ಈಗ ಕನ್ನಡದ ದೊಡ್ಡ ಕಥೆಗಾರ... `ಕಥೆಗಾರ ಶ್ರೀಯುತ ಗಣೇಶ್ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ  ....' ಸ್ವಾಗತ ಭಾಷಣ ಮಾಡುವಂವ ಇನ್ನು ಏನೇನೋ ಹೇಳ್ತಿತ್.... ಮೂಗುನ ಗಣಿ ಈಗ ಬರೀ ಕೈಲಿ ಒರೆಸ್ತಿತ್ಲೆ... ಕೈಗೊಂದು ಬಿಳಿ ವಸ್ತ್ರ ಬಂದಿತ್... ಅಧ್ಯಕ್ಷರ ಕು ರ್ಚಿಲಿ  ಕುದ್ದಿದ್ದ ಜಾನಕಿ ಟೀಚರ್ಗೆ ಧನ್ಯತಾಭಾವ...ಕೋವಿ 
ಹಿಡಿಯಕ್ಕಾಗಿದ್ದ ಕೈಲಿ ಪೆನ್ನು ಹಿಡಿಸಿದ್ದ ಖುಷಿ ಅವ್ರಲ್ಲಿ ಕಾಣ್ತಿತ್.....
- `ಸುಮಾ'
arebhase@gmail.com

Wednesday 28 March 2012

ಕಣ್ಣೀರಲ್ಲಿ ಕರಗುತ್ತುಟ್ಟು ಸಿಹಿ ನೆನಪು !

 ಎಷ್ಟೊಂದು ಪ್ರೀತಿ !
ಜೀವನದುದ್ದಕ್ಕೂ ಹಿಂಗೆನೇ
ಇದ್ದರೆಷ್ಟು ಲಾಯ್ಕ....
ಆದ್ರೆ `ಗಣ' ಬೇರೆ ಬೇರೆ !
ಅದಕ್ಕೆ ಇರೋಕು..
ಸಣ್ಣ ಸಣ್ಣದ್ದಕ್ಕೂ ದಿನಾ ಜಗಳ
ಈಗಲೇ ಹಿಂಗೆ...
ಮುಂದೆ ಹೆಂಗೋ ?
ಜೀವನಲ್ಲಿ ಖುಷಿ ಇರೋಕು
ಎಲ್ಲಕ್ಕಿಂಥ ಮುಖ್ಯ...
ನಂಗೊಂದಿಷ್ಟು ದಿನ ನೆಮ್ಮದಿ ಕೊಟ್ಟ
ಅವ್ಳು ಸುಖವಾಗಿರೋಕು
ಅದಕ್ಕೊಂದು ಕಠಿಣ ನಿರ್ಧಾರ.. 
ಮೊಬೈಲ್, ಲ್ಯಾಪ್ಲಿದ್ದ ಫೋಟೋಗಳೇನೋ
ಡಿಲೀಟ್ ಆದೋ...
ಆದ್ರೆ ಎದೆಯಲ್ಲಿರ್ವ ಆ ನೆನಪು ?
ಅದು ತೆಗೆಯಕ್ಕೆ ಮಾತ್ರ ತುಂಬಾ ಕಷ್ಟ !
ಅಬ್ಬಾ ಅದೆಷ್ಟು ನೋವು ! 
ಹೃದಯನೇ ಕಿತ್ತು ಬಂದಂಗೆ...
ಅನಿವಾರ್ಯ....
ಮರೆಯೊಕು ಎಲ್ಲಾ ಮರೆಯೊಕು
ಆ ಸಿಹಿ ಕನಸು...
ಕಣ್ಣೀರಾಗಿ ಹೊರಬರ್ತುಟ್ಟು !

- `ಸುಮಾ'
arebhase@gmail.com

ಸೂರ್ಯ ಇಲ್ಲದಿದ್ದರೆ ನಂಗೇನು !?


ಮಲ್ಪೆ ಸಮುದ್ರ ತೀರ
ಅಲ್ಲೊಂದು ಪಾಳು ಕಟ್ಟಡ
ಕತ್ತಲೆಯ ಮರೆಯಲ್ಲೇ ಕುದ್ದು
ಸೂರ್ಯ ಮುಳುಗುದನ್ನೇ ನೋಡ್ತಿದ್ದೆ
ದೂರ ದಿಗಂತಲಿ ದೊಡ್ಡ ಕೆಂಪು ಚೆಂಡು !
ನೇಸರಂಗೆ ಅಂದಿನ ಗುಡ್ಬೈ ಹೇಳಿಕೆ
ಹಕ್ಕಿಗಳ ಪೈಪೋಟಿ...
ಹೊತ್ತು ಕಳ್ದಹಂಗೆ ಸಮುದ್ರದೊಳಗೆ
ಚೂರು ಚೂರೇ ಮರೆಯಾದೆ ರವಿ !
ಆಕಾಶ ತುಂಬಾ ಬಂಗಾರದ ಬಣ್ಣ
ಚೆಲ್ಲಿ ಕೊನೆಗೊಮ್ಮೆ ನಾಪತ್ತೆ !!!
ಆಶ್ಚರ್ಯ...
ಅಲ್ಲಿ ಇನ್ನೂ ಬೆಳಕಿತ್ತ್ !
ನನ್ನ ಗೂಡೆಯ ಮುಖ
ಹುಣ್ಣಿಮೆ ಚಂದ್ರನಂಗೆ ಫಳ ಫಳ
ಹೋಳೀತಿತ್ತ್ !!!

- `ಸುಮಾ'

Tuesday 27 March 2012

ಟೈಟಾನಿಕ್ ಬದುಕು !


ಕೊನೆಯೇ ಇಲ್ಲದ
ಸಮುದ್ರದಲ್ಲಿ ಪಯಣ... 
ಮೊದಲಿಗೆಲ್ಲಾ ಖುಷಿ ಖುಷಿ
ಆ ಅಲೆಗಳ ಆಟ...
ಸೊಯ್ಯಂತೇಳಿ ಹಾರುವ ಮೀನುಗ !
ಎದುರುಂದ ಬೀಸಿ ಬರ್ವ ತಂಗಾಳಿ
ಎಷ್ಟು ಲಾಯ್ಕ ಅಲಾ ?
ದೂರಲಿ ಕಾಣ್ವ ಚೂಪು ಗುಡ್ಡ
ಅದರತ್ತನೇ ಚಂಚಲ ಮನಸ್ಸಿನ
ನೋಟ ! 
ದೃಷ್ಟಿಯೆಲ್ಲಾ ಆದರ ಮೇಲೆನೇ...
ಕಾಲಬುಡದ ಸುಳಿಯೇ ಕಾಂಬಲೆ
ಚೂಪು ಗುಡ್ಡದ 
ಬುಡನೂ ದಪ್ಪತಾ ಗೊತ್ತಾಲೆ !
ಕೊನೆಗೆ ಬದುಕೇ `ಟೈಟಾನಿಕ್' !
ಮಾಯಾ ಬೆಟ್ಟಕ್ಕೆ ಡಿಕ್ಕಿ ಹೊಡ್ದು
ಎಲ್ಲಾ ಚೂರು ಚೂರು !!!

- `ಸುಮಾ'
arebhase@gmail.com

Sunday 25 March 2012

ಚಾಚಾ ನಗು !!!


ತುಟಿ ಮೇಲೆ ಮೊಲೆ ಹಾಲಿನ ಕರೆ 
ಇನ್ನೂ ಒಣಗಿತ್ತ್ಲೆ....
ಆಗ್ಲೇ ದೊಡ್ಡ ಜವಾಬ್ದಾರಿ !
ಮುಂದೆ ಇಬ್ಬರು ಅಕ್ಕಂದಿರು...
ನೆಲದ ಮೇಲೆ ಹರಿದಾಡ್ವ ತಮ್ಮ
ಬೆನ್ನ ಹಿಂದೆ !
ಕಾಯಿಲೆಯ ಗೂಡು
ಜನ್ಮ ಕೊಟ್ಟ ಅಮ್ಮ !
ಬೆಣ್ಣೆ ಮುಟ್ಟಿರೇ ಕರಗಿ
ಹೋಗುವಂಥ ಕೈ !
ಆಕಾಶದೆತ್ತರಕ್ಕೆ ಬೆಳ್ದು ನಿಂತ
ಕರಿಕಪ್ಪು ಗುಡ್ಡದ ಬುಡಲಿ
ಸಣ್ಣ ಚುಕ್ಕಿ ಕಲ್ಲು ಒಡೀತ್ತಿತ್ತ್ !
ಅಂದು ಮಕ್ಕಳ ದಿನ !
ಚಾಚಾ ನೆಹರೂ ಫೋಟೋದೊಳಗೇ
ಬಾಯಿಮುಚ್ಚಿಕಂಡ್ ನಗಾಡ್ತಿತ್ !!!!

- `ಸುಮಾ'
arebhase@gmail.com

Saturday 24 March 2012

ಮಂತ್ ಎಂಡ್ ಫಜೀತಿ


ಸಂಬಳಕ್ಕೆ ಕೆಲಸ ಮಾಡುವ ಎಲ್ಲರದ್ದೂ ಒಂದೇ ಗೊಣಗಾಟ... `ಈ ಮಂತ್ಎಂಡ್ ಯಾಕಾರೂ ಬಂದದೆನೋ....' ಅಂವ ಲಕ್ಷ ತಕಣ್ತಿರ್ಲಿ, ಸಾವಿರನೇ ತಕ್ಕಣ್ತಿರ್ಲಿ, ತಿಂಗಳ ಕೊನೆದಿನಗತೇಳಿರೆ ಒಂಥರ ಬರಗಾಲ ಇದ್ದಂಗೆನೇ... ಅದರಲ್ಲೂ ಸರಿಯಾದ ಪ್ಲ್ಯಾನ್ ಇಲ್ಲದ ಜೀವನ ಮಾಡ್ತಿದ್ದರೆ ಮುಗ್ದೇ ಹೋತು ಕಥೆ. ಗ್ರಹಚಾರ ಹೆಂಗಿದ್ದದೆ ನೋಡಿ, ಸರಿಯಾಗಿ 27ನೆ ತಾರೀಕಿಗೆನೇ ಟೂತ್ಪೇಸ್ಟ್ ಮುಗ್ದು ಹೋಗಿದ್ದದೆ. ಇಂದ್ ಬೆಳಗ್ಗೆ ಅದ್ನ ನಾವು ನೋಡಿದ್ದವೆ. ಆದ್ರೆ ರಾತ್ರಿ ಆಕಾಕನ ಮರ್ತುಹೋದೆ. ಪೇಸ್ಟ್ ಇಲ್ಲೆತಾ ಮತ್ತೆ ಗೊತ್ತಾದು, ನಾಳೆ ಬೆಳಗ್ಗೆ ಹಲ್ಲು ಉಜ್ಜಿಕಾಕನನೇ....ಪೇಸ್ಟ್ ಹಿಂಡಿ ಹಿಂಡಿ ಚಪ್ಪಟೆಯಾಗಿದ್ದ್ರೂ, ಅದ್ರೊಳಗೆ ಇನ್ನೂ ಸ್ವಲ್ಪ ಉಳ್ದಿರ್ದೇನೋತಾ ಆಶಾಭಾವನೆ ! ಸಂಬಳ ಆಗುವವ ವರೆಗೆ ಹಿಂಗೆನೇ.... ಇನ್ನು ಮೀಯೊನಾತೇಳಿರೆ ಶ್ಯಾಂಪು ಬಾಟಲಿಯೊಳಗಿಂದ ಶ್ಯಾಂಪು ಬಾದೇ ಇಲ್ಲೆ...! ಅದ್ರೊಳಗೆ ಇದ್ದರೆ ತಾನೇ ಬಾಕೆ. ಇನ್ನೇನು ಮಾಡ್ದು ? ಆ ಶ್ಯಾಂಪು ಬಾಟಲಿಯೊಳಕೆ ಸ್ವಲ್ಪ ನೀರು ಹಾಕಿ, ಜೋರಾಗಿ ಅಲ್ಲಾಡಿಸಿರೆ ಒಂದೆರಡು ದಿನ ಅಡ್ಜೆಸ್ಟ್ ಮಾಡಿಕೆ ಆಗುವಷ್ಟು ಶ್ಯಾಂಪು ಸಿಕ್ಕಿದೆ ! ಮಂತ್ ಎಂಡ್ಲಿ ಸಾಬೂನು ವಿಷಯಲೂ ಹಿಂಗೆನೇ ಆದೆ...
ಇದೆಲ್ಲಾ ಒಂದು ಕಡೆ ಆದ್ರೆ, ಈ ಕೇಬಲ್ನವ್ರದ್ ಮತ್ತೊಂದು ಕಿರಿಕಿರಿ...ತಿಂಗಪೂರ್ತಿ  ಬಿಲ್ ಮರ್ತು  ಕುದ್ದಿರ್ವ ಅವ್ಕೆ ಮಂತ್ಎಂಡ್ ಆಕಾಕನೇ ಬಿಲ್ ಕಲೆಕ್ಟ್ ಮಾಡೋಕುತೇಳ್ದು ಯೋಚನೆ ಆದು... ನಮ್ಮ ಪಾಡು ದೇವರಿಗೇ ಪ್ರೀತಿ ! ಹೆಂಗೆಲ್ಲಾ ಮಾಡಿ ಉಳ್ದದ್ದನ್ನೆಲ್ಲಾ ಪೂಜಿ ಅವಂಗೆ ಕೊಟ್ಟು ಆಕಾಕನ ಪೇಪರ್ನಂವ `ಸಾ....' ತಾ ಹಲ್ಲುಬಿಟ್ಟ್ಕಂಡ್ ಬಾಗಿಲು ಹತ್ರ ನಿಂತಿದ್ದದೆ. ಪೇಪರ್ನಂವ ಹೋಗ್ತಿದ್ದಂಗೆ, ಹಾಲು ಹಾಕುವಂವ....ಇವ್ಕೆ ಅಷ್ಟೂ ಗೊತ್ತಾಲೆನಾ ಇದ್ ಮಂತ್ ಎಂಡ್ತಾ? ಓ ದೇವರೇ... ಈ ಮಂತ್ಎಂಡ್ ಬಾದೇ ಬೇಡಪ್ಪಾ....!!!!
- `ಸುಮಾ'

Thursday 22 March 2012

ಭೀಮನ ಕಲ್ಲು...!


ನೀವು ಯಾವುದೇ ಊರಿಗೆ ಹೋಗಿ, ಅಲ್ಲಿ ನಿಮ್ಗೆ ರಾಮಾಯಣ ಅಥ್ವಾ ಮಹಾಭಾರತದ ಕಥೆ ಕಂಡದೆ. ಇಲ್ಲಿಗೆ ರಾಮ ಬಂದಿತ್ತ್ ಗಡ...ಸೀತೆನೂ ಇತ್ತು ಗಡ... ನಡ್ದು ನಡ್ದು ಸುಸ್ತಾಗಿ ಸೀತೆ ಇದೇ ಮರದ ಕೆಳಗೆ ಕುದ್ದಿತ್ ಗಡ... ಅಜರ್ುನನ ಬಾಣ ತಾಗಿ ಈ ಕಲ್ಲು ಪೀಸ್ ಪೀಸ್ ಆತ್ ಗಡ.. ಹಿಂಗೆ ತುಂಬಾ ಥರದ ಕಥೆಗಳ್ನ ಮನೇಲಿ ಇರ್ವ ದೊಡ್ಡವು ಹೇಳಿವೆ. ಇಂಥ ಒಂದು ಕಥೆ `ಭೀಮನ ಕಲ್ಲು'
ಭಾಗಮಂಡಲಂದ ತಲಾಕಾವೇರಿಗೆ ಒಂದು ಕಾಲುದಾರಿ ಕೂಡ ಉಟ್ಟು. ಭಾಗಮಂಡಲ ಸ್ಕೂಲ್ಗಾಗಿ ಈ ದಾರಿ ಇರ್ದು. ಈ ದಾರೀಲಿ ಹೋದ್ರೆ ತಲಕಾವೇರಿ ತುಂಬಾ ಹತ್ರ. ಬೇಸಿಗೆ ಟೈಂನಲ್ಲಂತೂ ಇಲ್ಲಿ ನಡ್ಕಂಡ್ ಹೋಕೆ ತುಂಬಾ ಲಾಯ್ಕ ಇದ್ದದೆ. ಕಾಡು ದಾರಿ...ತಂಪು ಹವೆ...ಜೊತೇಲಿ ಕಾಡುಹಣ್ಣುಗ...ಹಿಂಗೆ ನಡ್ಕಂಡ್ ಹೋಕಾಕನ ಇಲ್ಲೊಂದು ಏಲಕ್ಕಿ ತೋಟ ಸಿಕ್ಕಿದೆ. ಆ ತೋಟದೊಳಗೆ ಸ್ವಲ್ಪ ದೂರ ಹೋದ್ರೆ, ಅಲ್ಲೊಂದು ದೊಡ್ಡ ಕಪ್ಪು ಗೋಡೆ ಎದುರಿಗೆ ಅಡ್ಡ ಬಂದದೆ...ಕಣ್ಣೆತ್ತಿ ನೋಡಿರೆ, ಗೊತ್ತಾದೆ ಅದು ಗೋಡೆ ಅಲ್ಲ ದೊಡ್ಡ ಬಂಡೆತಾ. ಇದೇ `ಭೀಮನ ಕಲ್ಲು'
ಮಹಾಭಾರತ ಕಥೆ ನಡ್ದ ಟೈಂಲಿ ವನವಾಸ ಮಾಡಿಕಂಡ್ ಪಾಂಡವರು ಭಾಗಮಂಡಲ, ತಲಕಾವೇರಿಗೂ ಬಂದಿದ್ದೊ ಗಡ. ಆಗ ಈ ಬಂಡೆ ಇತ್ಲೆ. ಅದ್ರ ಎದುರಿಗೆ ಒಂದು ಮರ ಇತ್. ಆಮರದ ಕೆಳಗೆ ಕುದ್ದ್ಕಂಡ್ ಪಾಂಡವರು ಊಟ ಮಾಡ್ತಿದ್ದೊ. ಆಗ ಭೀಮಂಗೆ ಅನ್ನಲಿ ಒಂದ್ ಕಲ್ಲು ಸಿಕ್ಕಿತ್ಗಡ. ಅದ್ನ ಭೀಮ ಬೀಸಾಡಿದೆ. ಅದೇ ಕಲ್ಲು ಈಗ ಬೆಳ್ದ್ ಇಷ್ಟು ದೊಡ್ಡ ಕಲ್ಲಾಗಿ ನಿಂತುಟ್ಟು. ಈಗ್ಲೂ ಇದು ಬೆಳೀತ್ತುಟ್ಟುಗಡ !

- `ಸುಮಾ'
arebhase@gmail.com

Sunday 18 March 2012

"ಯಾರಿಗೆ ಹೇಳ್ದು ನಮ್ಮ ಪ್ರಾಬ್ಲಮ್ .. ನಮ್ಮ ನೋವಿಗೆ ಉಟ್ಟಾ ಮುಲಾಂ..."

"ರೀ ನಾ ಡ್ಯೂಟಿ ಗೆ ಹೋಗಿ ಬನ್ನೇ...ಇಂದ್ ಸ್ವಲ್ಪ ಬೇಗ ಬನ್ನೇ..."ತಾ  ಹೇಳಿ   ಹಾಡ್ ಹೇಳಿಕಂಡ್ ನನ್ನ ಹೆಣ್ಣ್  ಹಾರಿ ಹೋತ್..!!ಅವಳಿ ಗೆ ಮತ್ತೆಂತ ಕೆಲಸ,....ಬರಿ ನಾಯಿ, ನರಿ, ಮನುಷ್ಯ, ಕಪ್ಪೆ, ಕಾಗೆ ಇವ್ಗಳ ರಕ್ತ ಹೀರುದೇ  ಕೆಲಸ...ಛಿ.. ಛಿ..  ಅದ್ ಹೆಂಗೆ ರಕ್ತ ಹೀರುವೆ ....ನನಗಂತೂ ಗ್ಯಾನ ಮಾಡ್ರೆ ವಾಂತಿ ಬಂದದೆ...!!ಅದೇ ಈ ಚಿಕೂನ್ ಗುನ್ಯಾ, ಡೆಂಗ್ಯೂ  ಕಾಲರಾ , ಮಲೇರಿಯಾ ಇದಿಕೆಲ್ಲ ಕಾರಣ ಇವ್ಳು ಮತ್ತೆ ಇವಳ 
ಸಂಘದವು...!!ಪಾಪ ಹೊಟ್ಟೆ ಪಾಡ್ ..ಆದರೂ  ಎಂತಲಾ  ಹಂಗೆಲ್ಲಾ  ಮಾಡುದು...!!ಮತ್ತೆ ನಿಮಿಗೆ ಗೊತ್ತಾ.. ಇವರ ಮೂಲ ಈಜಿಪ್ಟ್ ಗಡ...
ಶ್ !! ಯಾರಿಗೂ ಹೇಳ್ಬಡಿ , ನನ್ನವಳು ಉಟ್ಟಲ  ಅವ್ಳುಸಾ    ಈಜಿಪ್ಟ್ ನವಳು..!! ನನ್ನ ಅಪ್ಪ ಅಮ್ಮ ಬೇಡ ಬೇಡ ತಾ  ಹೇಳ್ರೂ ನಾನ್ ಅವಳನ್ನೇ ಮದ್ವೆ ಆದೆ.. ನೋಡಿಕೆ  ಬಾರಿ ಪೊರ್ಲು ಇತ್ತ್...ಹಂಗೆ ಮನಸ್ ಮಾಡಿ ಮದ್ವೆ ಆಗಿ ಬಿಟ್ಟೆ...!!ಹೇಯ್ ಪಾಪ ಅವ್ಳು ಈಜಿಪ್ತ್ ಆದರೂ ಈ ಚಿಕೂನ್ ಗುನ್ಯಾ  ಹರ್ಡುದು ಅವಳಲ್ಲಪ್ಪಾ  ..ಅದೆಲ್ಲಾ  ಅವಳ ತವರು
ಮನೆವು..ಸೋದರ ಅತ್ತೆ ಗಡ..ಮೊನ್ನೆ ಹಿಂಗೆ ಹೇಳ್ತಾ ಇತ್ತ್...!!!
ಅಲ್ಲ ನಿಮೆಗೆಲ್ಲಾ  ಒಂದ್ ವಿಷಯ ಗೊತ್ತು
ಟ್ಟಾ  ??..ಅಂದ್ ಒಂದ್ ದಿನ ಇವ್ಳು ಯಾರೋ ಮನುಷ್ಯರ ಮೇಲೆ ಕುದ್ಕಂಡ್ ಸೂಜಿ ಚುಚ್ತಾ ಇತ್ತ್...ಅದೇ ರಕ್ತ ಹೀರಿಕೆ!! ..ನನಗೋ ಅವಳ ಹತ್ರ ಮಾತಾಡದೆ ತುಂಬಾ ದಿನ ಆಗಿತ್...ನಾನ್ ಸ ಹೋಗಿ ಮತಾಡಿಕೆತಾ  ಅವಳ ಹತ್ರ ಕುದ್ದೆ... ಪಾಪಿಗೆ ನನ್ನ ಮೇಲೆ ಗಂಡ ತೇಳುವ  ಕರುಣೆ ಸ ಇಲ್ಲೇ..ನಾನ್ ಸ್ವಲ್ಪ ಬಿಜಿ ಒಳೆತಾ  ಹೇಳಿ ಹಾರಿ ಹೋಗಿ ಬಿಟ್ಟಥ್!!...ನಾನ್ ಅವಳನ್ನ ನೋಡಿಯೇ ಬಾಕಿ..ಆ ಮನುಷ್ಯ  ನಾನೇ ಕಚ್ಹಿದ್
ತಾ ಗ್ಯಾನ ಮಾಡಿ ಟಪ್ ತಾ  ಹೇಳಿ ನಂಗೆ ಹೊಡಿಯಕೆ ಬಾತ್...ಅಯ್ಯೋ ರಾಮ ಕೂದಲೆಳೆಯ ಅಂತರಲಿ ತಪ್ಪಿಸಿಕಂಡ್ ಬಂದೆ..
ಇದೇ ವಿಷಯ ನಮ್ಮ ಸಂಘಲೂ  ಬಿಸಿ ಬಿಸಿ ಚರ್ಚೆಗೆ ಬಾತ್...ಸಂಘಲಿ ಎಲ್ಲಾ  ಗಂಡ ಸೊಳ್ಳೆಗಳದ್ ಇದೇ  ಕಥೆ...ಒಂಥ ರ ಸಂತ್ರಸ್ತರು ಇದ್ದಂಗೆ ನಾವು...!!ಹಂಗಾಗಿ ಎಲ್ಲವೂ ಸೇರಿ ಒಂದ್ ಪ್ರತಿಭಟನೆ  ಮಾಡುದೂತಾ  ಒಮ್ಮತಲಿ ನಿರ್ಧಾರ  ತಕೊಂಡಿದ್ದೋ...ನಮ್ಮ
ಹೆಣ್ಣ್ ಗ ಸ ನಮ್ಮಂಗೆ ಹೂ ನ  ಮಕರಂದ ಹೀರಿ ಅಹಿಂಸಾವಾದಿಗಳಾಗಿ ಬಾಳೋಕು ತಾ ನಮ್ಮ ಉದ್ದೇಶ...!!ಸರಿ ನಮ್ಮ ನಮ್ಮ ಹೋರಾಟ ಶುರು ಆತ್...ನೋಡ್ರೆ ಹೆಚ್ಹಿನ ಗಂಡ ಸೊಳ್ಳೆಗ
ಯಾರ್ ಇತ್ಹ್ಲೆ ..!!ಎಲ್ಲವೂ  ಅಮ್ಮಾವ್ರ ಗಂಡ ಸೊಳ್ಳೆಗಳೇ ಇದ್ದದ್..ಛೆ.. ಒಂದ್ ಸಣ್ಣ ಮಿಸ್ಟೇಕ್  ಆತ್...ನಾವು ಮಹಿಳಾ ಸಂಘದ ಮುಂದೆ  ಬೊಬ್ಬೆ ಹಾಕಿರೂ  ...ಏನು ಪ್ರಯೋಜನ ಆತ್ಹ್ಲೆ...!!ಹಿಂಗೆ ಮಾಡ್ತಾ ಇದ್ದರೆ ನಮ್ಮ ಹೆಣ್ಣ್  ಗ ನಮ್ಮನ ಮನೆಂದ ಹೊರಗೆ ಹಾಕುವ ಕಲ್ಪನೆ ಬಂದದೆ ತಡ ಎಲ್ಲವು ಅಲ್ಲಿಂದ ಕಾಲ್ಕಿತ್ತೋ..!!ಅಂತೂ ನಮ್ಮ ಪ್ರತಿಭಟನೆ ಕಥೆ ಅಲ್ಲೇ ಮುಗ್ತ್...ಈಗಲೂ  ಈ  ಹೆಣ್ಣ್ ಗ ಯಾರ ಹೆದರಿಕೆ ಇಲ್ಲದೆ ರಕ್ತ ಹೀರ್ತನೇ  ಒಳೋ...ನಮ್ಮಂಥ  ಅಮಾಯಕ ಗಂಡಸರ ಸಾವು ಸಂಭವಿಸ್ತಾ  ಉಟ್ಟು...ಮುಂದೊಂದು ದಿನ ಗಂಡ
ಸೊಳ್ಳೆಗಳ ಬರ ಬಂದರೆ ಇವ್ಕೆ  ಗೊತ್ತಾದೆ...!!! ಸರಿ ಮತ್ತೆ ನನ್ನ ಹೆಣ್ಣ್   ಬರೋ ಹೊತ್ತಾಥ್...ಅವ್ಳು ನಂಗೆ ಸಿಕ್ಕುದೇ ಅಪರೂಪ...ಹೆಚ್ಹಾಗಿ ಅವ್ಳು ರಾತ್ರಿ ಪಾಳಿ ನಾನ್ ಹಗಲು ಪಾಳಿ...ಇಂದ್ ಇಬ್ಬರೂ  ಸ್ವಲ್ಪ ಫ್ರೀ ಮಾಡಿಕಂಡ್ ಒಳೋ...ನೆನ್ನೆ ನಂಗೆ ಹೇಳಿ  ಹೋಗಿತ್.. ಇಂದ್ ಪಾರ್ಕ್ ಗೆ ಕರ್ಕೊಂಡು
ಹೋಕುತಾ ...ಯಾರ್ ಇಲ್ಲದ ಪಾರ್ಕಿಗೆ ಕರ್ಕಂಡ್ ಹೋನೆ.. ಛಿ ಛಿ...   ನೀವು ಎಂತೆಲ್ಲಾ  ಗ್ಯಾನ ಮಾಡ್ಬಡಿ.. ಯಾರಾರ್ ಪಾರ್ಕ್ ಲಿ ಇದ್ದರೆ ಅವ್ಳು ನನ್ನ ಬಿಟ್ ಹಾರಿ ಹೋದರೆ ಕಷ್ಟ ಹೊಟ್ಟೆ ಬಾಕಿ...ಹುಂ ಸರಿ ನಾನ್ ಇನ್ ಹೊರಟನೆ...ನನ್ನವಳು ಮತ್ತೆ ನಂಗೆ ಮನೆಂದ ಗೇಟ್
ಪಾಸ್ ಕೊಡದು... ಮತ್ತೆ..ಟಾ ಟಾ ....!!!ಮರ್ತಿದ್ದೆ ನಂಗೆ ಆಲ್ ದ ಬೆಸ್ಟ್
ಹೇಳಿ.....!!!
- ಪವಿ ನೆರಿಯನ
arebhase@gmail.com

Friday 16 March 2012

ನವೋಲ್ಲಾಸ...


ನೆತ್ತಿ ಚಿಪ್ಪು ಕರಗಿ ಹೋಗ್ವಂಗೆ
ತಲೆ ಮೇಲೆ ಬಿಸಿಲು...
ಕೆಂಡ ನುಂಗಿ ಬೀಸುವ ಬಿರುಗಾಳಿ
ಮಳೆ ದೂರದ ಮಾತು....
ಆಗಷ್ಟೇ ನೆಟ್ಟ ಗಿಡ
ಬಾಡಿ ಹೋಗ್ಯುಟ್ಟು...
ಹಣ್ಣು ಕನ್ನಡಿಯೊಳಗಿನ ಗಂಟು !
ನಿರಾಸೆ ಬೇಡ...
ಆಕಾಶ ತುಂಬಾ ಕಪ್ಪು ಮೋಡ
ಶುಭ ಸೂಚನೆಯ ಕೋಲ್ಮಿಂಚು
ಗುಡುಗಿನ ಮಂಗಳ ವಾದ್ಯ...
ಅನುಕಂಪದ ವರುಣ
ಇಳೆಯ ಮೇಲೆ ಹನಿಹನಿ ಸಿಂಚನ
ಬಾಡಿದ್ದ ಗಿಡಕ್ಕೆ ಜೀವ ಬಾತ್
ನಾಳೆ ಹೂವು ಅರಳಿದೆ...! 

- 'ಸುಮಾ' 
arebhase@gmail.com

Monday 12 March 2012

ಫ್ರೆಂಡ್ ಹೇಮಾ ಹೇಳ್ದ ಯಮುನಾ ನದಿ ಕಥೆ


ಯಮುನಾ ನದಿ ಹುಟ್ಟಿದ್ದು ಹೆಂಗೆ ಗೊತ್ತಾ? ನನ್ನ ಫ್ರೆಂಡ್ ಹೇಳ್ದ ಕಥೆ ಕೇಳಿ...ನಮಗೆಲ್ಲಾ ಬೆಳಕು ಕೊಟ್ಟದೆಯಲ್ಲಾ ಸೂರ್ಯ, ಅವಂಗೆ ಮದುವೆ ಆಗಿತ್ತ್. ಸಂಜ್ಞಾದೇವಿತಾ ಅವ್ಳ ಹೆಸ್ರು. ಆದ್ರೆ ಅವ್ಳಿಗೆ ಒಂದು ದಿನನೂ ಸೂರ್ಯನ ಜೊತೆ ಸಂಸಾರ ಮಾಡಿಕೆ ಆತ್ಲೆ. ಸೂರ್ಯತಾ ಹೇಳಿರೆ ಕೇಳೊಕಾ...ಸುಡು ಸುಡು ಬಿಸಿ...ಸುಕೋಮಲ ಸುಂದರಿ ಸಂಜ್ಞಾದೇವಿಗೆ ಸೂರ್ಯನ ಹತ್ತಿರಕ್ಕೆ ಕೂಡ ಹೋಕೆ ಆಗ್ತಿತ್ಲೆ... ಪಾಪ ಸೂರ್ಯ, ವಿರಹ ವೇದನೆಯಿಂದ ನರಳ್ತಿತ್. ಇದ್ನ ನೋಡಕ್ಕೆ ಆಗದ ಸಂಜ್ಞಾದೇವಿ, ಒಂದು ಉಪಾಯ ಮಾಡ್ತ್. ಅವ್ಳ ತಪೋಶಕ್ತಿಂದ ಅವ್ಳಂಗೇ ಕಾಣುವ ಮತ್ತೊಬ್ಬ ಗೂಡೆನ ಸೃಷ್ಟಿ ಮಾಡ್ತ್. ಆ ಗೂಡೆ ನೋಡಿಕೆ ತುಂಬಾ ಲಕ್ಷಣವಾಗಿ ಇತ್ತ್. ಆದ್ರೆ ಬಣ್ಣ ಮಾತ್ರ ಕಡುಕಪ್ಪು. ಸಂಜ್ಞಾದೇವಿ ಅವ್ಳಿಗೆ ಛಾಯಾತಾ ಹೆಸ್ರೂ ಇಟ್ಟತ್... ಸೂರ್ಯನ ಹತ್ರ ಆ ಛಾಯಾಳನ್ನ ಬಿಟ್ಟ ಸಂಜ್ಞಾದೇವಿ, ತಪ್ಪಸ್ಸು ಮಾಡಿಕೆ ಹಿಮಾಲಯ ಕಡೆ ಹೊರಟತ್...
    ಸಂಜ್ಞಾದೇವಿ ಆಕಡೆ ತಪಸ್ಸಿಗೆ ಹೋದ್ರೆ, ಇತ್ತ ಛಾಯಾ ಸೂರ್ಯನ ಜೊತೆ ಸಂಸಾರ ಶುರುಮಾಡ್ತ್....ಕಾಲ ಕಳ್ದಂಗೆ ಸೂರ್ಯ ಮತ್ತೆ ಛಾಯಾ ದಂಪತಿಗೆ ಅವಳಿ ಮಕ್ಕ ಹುಟ್ಟಿದೊ. ಒಂದು ಗಂಡು ಮತ್ತೊಂದು ಹೆಣ್ಣು ಕೂಸು. ಅಮ್ಮನಂಗೆ ಇಬ್ಬರು ಬೀಟಿ ಮರದಷ್ಟು ಕಪ್ಪು ಬಣ್ಣ. ಗಂಡುಕೂಸಿಗೆ ಯಮ ಮತ್ತೆ ಹಣ್ಣು ಕೂಸಿಗೆ ಯಮಿ ತಾ ಹೆಸರಿಟ್ಟೊ. ಯಮಿ ಕಪ್ಪಾದ್ರೂ ತುಂಬಾ ಲಕ್ಷಣವಾಗಿ ಲಾಯ್ಕ ಇತ್ತ್. ಯಮ ನ್ಯಾಯ, ಧರ್ಮತಾ ಬೆಳಿತಾ ಇತ್. ಇಬ್ಬರೂ ಮದುವೆ ವಯಸ್ಸಿಗೆ ಬಂದೋ... ಆದ್ರೆ ಇವ್ರ ಬಣ್ಣ ಕಪ್ಪು ಇದ್ದಿದ್ರಿಂದ ಯಾರೂ ಮದುವೆ ಆಕೆ ಮುಂದೆ ಬಾತ್ಲೆ. ಯಮನಿಗೆ ಹೆಣ್ ಸಿಕ್ಕಿತ್ಲೆ, ಯಮಿಗೆ ಗಂಡು ಸಿಕ್ಕಿತ್ಲೆ....
ಒಂದು ದಿನ ಯಮನ ಹತ್ರ ಬಂದ ಯಮಿ, ನಾವಿಬ್ರು ಮದುವೆ ಆಗನತಾ ಹೇಳ್ತ್. ಯಮಂಗೆ ಶಾಕ್...`ನಾವಿಬ್ರೂ ಅಣ್ಣ-ತಂಗಿ, ನಾವು ಮದುವೆ ಆದು ಧರ್ಮ ಅಲ್ಲ' ತಾ ಯಮ ತಂಗಿಗೆ ಬುದ್ಧಿ ಹೇಳ್ತ್. ಆದ್ರೆ ಬುದ್ಧಿವಾದ ಕೇಳುವ ಸ್ಥಿತೀಲಿ ಯಮಿ ಇತ್ಲೆ. ಮದುವೆ ಆಗುತಾ ಅಣ್ಣನ ಮುಂದೆ ಹಠ ಹಿಡ್ದ್ ಕುಳ್ತತ್. ಯಮಿನ ಈ ಹಿಂಸೆ ತಡೆಯಕ್ಕಾಗದೆ ಒಂದು ದಿನ ಯಮ ಭೂಮಿಗೆ ಇಳ್ದ್ ಬಂದ್ ಯಾವುದೋ ಕಾಡು ಮಧ್ಯೆ ತಪಸ್ಸಿಗೆ ಕುಳ್ತತ್. ಯಮಿಗೆ ಯಮನ ಹುಡುಕಿ ಹುಡುಕಿ ಸಾಕಾತ್. ಯಮ ಸಿಕ್ಕದಿರ್ಕಾಕನ ಯಮಿ ಮರಡಿಕೆ ಶುರುಮಾಡ್ತ್...ಕಣ್ಣ್ಂದ ಝುಳು ಝುಳುತಾ ನೀರು ಇಳಿಯಕ್ಕೆ ಶುರುವಾತ್... ಕೊನೆಗೆ ಅವಳೇ ನೀರಿನ ರೂಪಕ್ಕೆ ಬಂದುಬಿಡ್ತ್. ಹಿಂಗೆ ನೀರಾಗಿ ಹರಿದ ಯಮಿಯೇ ಯಮುನಾ ನದಿ !!!!


- `ಸುಮ'
arebhase@gmail.com

`ಕೈ ಕಟ್ ಬಾಯಿ ಮುಚ್...'






ಗಲಾಟೆ ಮಾಡ್ತಿದ್ದ ಚಂದು ಹೈದಂಗೆ ಕಾವ್ಯಾ ಟೀಚರ್ ಬೈದದ್ `ಕೈ ಕಟ್ ಬಾಯಿ ಮುಚ್...' ಪಾಪ ಚಂದು ಅಂದ್ಂದ ಹಂಗೆನೇ ಕುದ್ದುಟ್ಟು...

ಫೋಟೋ: ಗುಡ್ಡೆಮನೆ ಯೋಗಾನಂದ 
arebhase@gmail.com

Saturday 10 March 2012

ನನ್ನ ಕ್ರಿಕೆಟ್ ದೇವರ ಬಗೆ - ನನ್ನ ಮನದಾಳದ ಮಾತು ..


       ನನ್ನ ಕ್ರಿಕೆಟ್  ದೇವರು ಎಲ್ಲಿ ಕ್ರಿಕೆಟ್ ಗೆ   ವಿದಾಯ ಹೇಳಿಬಿಟ್ಟದೇ ತಾ  ತುಂಬಾ ಬೇಜಾರ್ಲಿ ಇದ್ದೆ ...ಹಂಗೆ ..ನಮ್ಮ ಭಾರತ ಟೀಂ ನವು ಆಸ್ಟ್ರೇಲಿಯಾಕ್ಕೆ CBS ಮ್ಯಾಚ್ ಅಡಿಕೆ ಹೋಗಿದ್ದೋ. ಅಲ್ಲಿ ಟೆಸ್ಟ್  ಮ್ಯಾಚ್ ಸೋತ್ಹೊದೋ . ಅ CB ಸರಣಿಲಿ ಲಾಸ್ಟ್ ಟೆಸ್ಟ್ ಮ್ಯಾಚ್ ಗೆ  ಸೆಹ್ವಾಗ್ ನಾಯಕ ಅಗಿತ್ . ಆ  ಮ್ಯಾಚ್ ಲಿ ಲಾಸ್ಟ್ಗೆ  ಸೋತ್ಹೊದೋ . ಮ್ಯಾಚ್ ಮುಗ್ದ ಮೇಲೆ presentation party ಲಿ ಸೆಹ್ವಾಗ್ ಹೇಳ್ತ್  ನಮ್ಮ  senior cricket player ಗ  ಯಾರು ಸದ್ಯಕೆ ನಿವೃತ್ತಿ ಹೊಂದುಲೇ ತಾ... ಆಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಆತ್  ..ಎಸ್ಟ್ ಅದ್ರೂ ನನ್ನ ಕ್ರಿಕೆಟ್ ದೇವ್ರು ಸ್ವಲ್ಪ ಟೈಮ್ ಟೆಸ್ಟ್ ಮ್ಯಾಚ್ ಆಡ್ದುದುತಾ  ತಿಳ್ಕಂಡ್ ಖುಸಿಲಿ ಇದ್ದೆ ... ಹಂಗೆ ಮುನ್ನೆ (09.03.2012) ಬೆಳಿಗೆ ಎದ್ದ್ ಟಿವಿ ಹಾಕಿದೇ ... ಒಂದು ದೊಡ್ಡ shocking ನ್ಯೂಸ್  ಟಿವಿಲಿ ಬರ್ತಿತ್ ....ಭಾರತದ ಗೋಡೆ ದ್ರಾವಿಡ್  ಕ್ರಿಕೆಟ್ ಗೆ  ವಿದಾಯ ಹೇಳ್ದೆ ತಾ  ಆ ನ್ಯೂಸ್. ನಾನ್ ಒಮ್ಮೆ  ಯೋಚನೆ ಮಾಡ್ದೆ ನಾನ್ ಎಲ್ಲಾದರೂ  ನಿದ್ದೆ ಭ್ರಮೆಲಿ ಇರುವೆ ಕಂಡದೆ ತಾ  ..  ನನ್ನ ಕಣ್ಣನಾ ಒಮ್ಮೆ  ಒರಿಸೆ ಮತೊಮ್ಮೆ ಟಿವಿ ನೋಡ್ದೆ ...ನೋಡಕನ ಹೌದು ದ್ರಾವಿಡ್  ನಾಳೆ 12 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂಲಿ  ಪ್ರೆಸ್ ಮೀಟ್  ಕರದೊಳೋ. ಅಲ್ಲಿ  ಅವು ಕ್ರಿಕೆಟ್ ಗೆ ವಿದಾಯ ಹೇಳುವೆತಾ ಗೊತ್ತಾತ್. ಅದನ  ಕೇಳಿ  ನನ್ನ ಹೃದಯ  ಒಮ್ಮೆ ನಿಂತ ಹಂಗೆ ಅತ್...ಅದ್ರೂ ನೋಡನ ನಾಳೆ ಪ್ರೆಸ್ ಮೀಟ್ ಏನ್ ಅದೇತಾ  ನಾನ್ ಹಂಗೆ ಇದ್ದೆ ..ಹಂಗೆ ಅಂದ್  ಮನಸಿಲ್ಲದ ಮನಸ್ಸಿಂದ ತುಂಬಾ  ಬೇಜಾರ್ಲಿ ಕೆಲಸಕ್ಕೆ ಬಂದೆ ..ಬಂದು online  ಓಪನ್ ಮಾಡಿಕಂಡ್  ಕೂತ್ಕಂಡೆ. ಏನ್ ... ಏನ್ ... ಆದೇತಾ  online ನೋಡ್ತಾ ಇದ್ದೆ .. ದ್ರಾವಿಡ್ ವಿದಾಯ ಹೇಳುದು...ಬೆಳ್ಲಿಗೆ 10:೦೦ ಕ್ಕೆ  confirm  ಆತ್.... 12 ಕ್ಕೆ  ಪ್ರೆಸ್ ಮೀಟ್ ಲಿ ಅವ್ಕೆ ಮನಸಲಿ ತುಂಬಾ ನೋವಿತ್. ಆದ್ರೂ  ನಗಾಡ್ಕಂಡ್  ಸವ್ಯಸಾಚಿ ದ್ರಾವಿಡ್ ಕ್ರಿಕೆಟ್ ಗೆ ವಿದಾಯ ಹೇಳಿಬಿಟ್ಟೋ.  ಭಾರತದ ಕ್ರಿಕೆಟ್ ಜೆರ್ಸಿಲಿ  ನನ್ನ ಕ್ರಿಕೆಟ್  ದೇವುರು  ಮುಂದೆ ನೋಡಿಕೆ ಸಿಕ್ಕುಲೇತಾ  ತುಂಬಾ ಬೇಜಾರ್ ಅತ್.  ಇಂಥ ಗೋಡೆನಾ ಪಡಿಯಕೆ ನಾವು ಪುಣ್ಯ  ಮಾಡಿ ಒಳೋ  ..ಆದರೆ ಈಗ ಆ ಗೋಡೆ ಜಾಗ ಖಾಲಿನೇ...ಯಾರು ಬಂದರೂ  ಅವರ ಜಾಗ ತುಂಬಿಕೆ ಆಲೆ .....ಎಲ್ಲರೂ ಸಚಿನ್ ನಾ ಪ್ರಪಂಚದ  ಕ್ರಿಕೆಟ್ ದೇವರು ತಾ  ಹೇಳುವೆ ..ಆದರೆ ನನ್ನ ಪ್ರಕಾರ  ಕ್ರಿಕೆಟ್ ದೇವರು ದ್ರಾವಿಡ್ ತಾ  ಹೇಳಿಕೆ ಇಷ್ಟಪಟ್ಟನೆ .....
ಅದ್ಕೆ ಹೇಳ್ದು ..***ಪ್ರಪಂಚಕ್ಕೆ ಸೂರ್ಯ ಒಬ್ಬನೇ ; ಹಂಗೆ ಕ್ರಿಕೆಟ್ ಗೆ ದ್ರಾವಿಡ್ 
ಬ್ಬನೇ .....!***  ಅವರ ಬಗ್ಗೆ  ಹೇಳ್ ದಷಟ್  ಸಾಲದ್ ...
We Will Miss U "Dravid "
    
- ಪ್ರವೀಣ್ ನಡುಮನೆ 


Friday 9 March 2012

ಹಾಗೆ ಸುಮ್ಮನೆ....


ಒಂದು ಸುಂದರ ಕನಸು...
ನಾ ಇಷ್ಟಪಟ್ಟದ್ದೆಲ್ಲಾ
ನನ್ನ ಕಾಲು ಬುಡಕ್ಕೆ ಬಂದಂಗೆ !
ನನ್ನ ಹಾಡಿಗೆ ಕೋಗಿಲೆ ಸೋತುಹೋದಂಗೆ
ನನ್ನ ಕುಣಿತಕ್ಕೆ ನವಿಲು ಸಾಥ್ ಕೊಟ್ಟಂಗೆ
ನನ್ನ ಹೆಜ್ಜೆಗೆ ಹಂಸ ಮರುಳಾದಂಗೆ
ಒಂದು ಸುಂದರ ಚಿತ್ರ...
ಹಿಮಾಲಯನೇ ನನ್ನ ಮುಂದೆ ಬಂದಂಗೆ !
ಕಾವೇರಿ ನನ್ನ ಕೋಂಬರೇಲಿ ಉಕ್ಕಿದಂಗೆ
ನನ್ನ ತಲೆ ಮೇಲೆನೇ ಕಾಮನಬಿಲ್ಲು ಬಿದ್ದಂಗೆ
ಜಡಿ ಮಳೇಲಿ ಬಿಸಿಲು ಬಂದಂಗೆ !
ಒಂದು ಸುಂದರ ನೆನಪು...
ಮರ್ಟಾಗ ಸಮಧಾನ ಮಾಡ್ದ ಅಮ್ಮ
ಕೇಳ್ದಾಗ ಗೊಂಬೆ ತಂದುಕೊಟ್ಟ ಅಪ್ಪ
ಬೀಳದಂಗೆ ಸೈಕಲ್ ಓಡಿಸಿಕೆ ಕಲ್ಸಿದ ಅಣ್ಣ
ಮರದಮರೇಲಿ ಐಲವ್ಯೂ ಹೇಳ್ದ ನನ್ನ ಹೈದ !
ಹೋ.... ಹಿಂಗೆ ಏನೇನೋ ಯೋಚನೆಗ...
ಗಾಳೀಲಿ ಅರಮನೆ ಕಟ್ಟುದು
ಎಷ್ಟು ಲಾಯ್ಕ ಅಲಾ...!!!

- `ಸುಮ'
arebhase@gmail.com

Wednesday 7 March 2012

ತಾಳಿ ಕಟ್ಟದೆ ಮದುವೆ !


ಮದುವೆಯಾತ್ಲೆ....
ಆದ್ರೂ ಅವ್ಳು ನನ್ನ ಹೆಣ್ಣ್ !
ಹೋದಲ್ಲಿಗಂಟ ಹೊಲಿಯನ ದೆವ್ವ
ಇವ್ಳೂ ಹಂಗೆ... ನನ್ನ ಬೆನ್ನ ಹಿಂದೆ !
ಮೂರು ಮಲ್ಲಿಗೆಯ ತೂಕದವ್ಳು
ಕೇಳಿದ್ದೆಲ್ಲಾ ಕೊಟ್ಟದೆ !
ಬಣ್ಣಬಣ್ಣದ ಲೋಕನೇ ತೆರೆದಿಟ್ಟದೆ !
ಎಂಥ ಉಟ್ಟು... ಎಂಥ ಇಲ್ಲೆ...
ತಿಂಗಳು ಮುಗಿಯಕ್ಕನ ಸ್ವಲ್ಪ ದುಬಾರಿ
ಕರೆಂಟ್ ಇಲ್ಲದಿದ್ದರೆ... ಒಳ್ಳೇ ನಿದ್ದೆ !
ಮತ್ಯಾಕೆ ನಂಗೆ ಮದುವೆ?
ಉಟ್ಟಲ್ಲಾ ಇವ್ಳು....
ಇಬ್ಬರ್ನ ಸಾಕುದು ಬಲು ಕಷ್ಟ!
ಓ ಹೆಸ್ರು ಹೇಳ್ತಲೇ....
ಲ್ಯಾಪಿ....ಲ್ಯಾಪ್ಟಾಪ್ !

- `ಸುಮ'
arebhase@gmail.com

Monday 5 March 2012

ಬಂಗಾರದ ಅಂಗಡಿಯ ಗೂಡೆ


ಎಲ್ಲೆಲ್ಲೂ ಫಳ ಫಳ ಹೊಳೆವ ಚಿನ್ನ. ನೋಡಿಕಷ್ಟೇ ಚೆನ್ನ ! ಪ್ರತಿಯೊಬ್ಬರ ಮೇಲೂ ಕಣ್ಣಿಟ್ಟಿರ್ವ ಸಿಸಿ ಕೆಮೆರಾ.. ಸಣ್ಣ ಡೌಟ್ ಬಂದರೂ ಅಲರ್ಟ್  ಆಗ್ವ ಸೆಕ್ಯೂರಿಟಿಯಂವ....ಆದ್ರೂ ಮನಸ್ಸಿನೊಳಗೊಂದು ಸಣ್ಣ ಆಸೆ...ಹೊಸದಾಗಿ ಬಂದಿರ್ವ ಆ ನೆಕ್ಲೆಸ್ ಹಾಕ್ಕಂಡ್ ಕನ್ನಡಿ ಮುಂದೆ ನಿಂತುಕಣೊಕು. ನಾ ಹೆಂಗೆ ಕಂಡನೆತಾ ನೋಡೊಕು..!
ಭಾರತಿ ಮನೇಲಿ ಗೋಡೆ ಗೋಡೆಗಳಲ್ಲಿ ಕಾಣ್ತಿದ್ದದ್ದ್ ಬಡತನ. ಕಷ್ಟಪಟ್ಟು ಪಿಯುಸಿವರೆಗೆ ಓದಿತ್ತ್. ಒಳ್ಳೆ ಮಾರ್ಕ್ಸ್  ಬಂದ್ರೂ, ಡಿಗ್ರಿ ಮಾಡುದು ಬರೀ ಕನಸಾಗಿತ್ತ್. ಇದ್ರ ಜೊತೆ ಬೆನ್ನ ಹಿಂದೆ ಇಬ್ಬರು ತಂಗೆಕ ಬೇರೆ....ಒಬ್ಳು ಎಸ್ಎಸ್ಎಲ್ಸಿ, ಮತ್ತೊಬ್ಳು ಏಳನೇ ಕ್ಲಾಸ್. ಹಂಗಾಗಿ ಭಾರತಿಗೆ ಓದು ಬಿಡುದು ಅನಿವಾರ್ಯ ಆತ್. ಕಾಲೇಜಿಗೆ ಹೋಗ್ವ ಆಸೆ ಇದ್ರೂ ಮನೆ ಸ್ಥಿತಿ ಯೋಚನೆ ಮಾಡಿ, ಸುಮ್ಮನೆ ಕುದ್ದುಕಣ್ತ್.
`ಹೊಸದಾಗಿ ಪ್ರಾರಂಭ ಆಗುತ್ತಿರುವ ಚಿನ್ನಾಭರಣ ಅಂಗಡಿಯೊಂದಕ್ಕೆ ಸೆಲ್ಸ್  ಗರ್ಲ್ಸ್  ಬೇಕಾಗಿದ್ದಾರೆ...' ತಾ ಪೇಪರ್ಲಿ ಒಂದು ಜಾಹೀರಾತ್ ಬಂದಿತ್. ಪೇಟೆ ಅಂಗಡೀಲಿ ಈ ಪೇಪರ್ನ ನೋಡ್ದ ಭಾರತಿ ಅಪ್ಪ, ಮಾರನೇ ದಿನನೇ ಅವ್ಳನ್ನ ಕರ್ಕಂಡ್ ಕುಶಾಲನಗರಕ್ಕೆ ಹೋತ್. ಆ ಹೊಸ ಚಿನ್ನದಂಗಡಿಯ ಕೆಲಸ ಭಾರೀ ಜೋರಾಗಿ ನಡೀತಿತ್ತ್. ಅಲ್ಲೊಬ್ಬ ಕೂಲಿಂಗ್ ಗ್ಲಾಸ್ ಹಾಕ್ಕಂಡ್ ನಿಂತಿದ್ದವನ ಹತ್ರ ಭಾರತಿ ಮತ್ತೆ ಅವಳಪ್ಪ ಹೋದೋ.. ಅಂವ ಇವರಿಬ್ಬರನ್ನ ಅವ್ನ ಛೇಂಬರ್ಗೆ ಕರ್ಕಂಡ್ ಹೋತ್. ಭಾರತಿ ಕೈಕಟ್ಟಿ ತಲೆತಗ್ಗಿಸಿ ನಿಂತ್ಕಂಡ್, ಆ ಅಂಗಡಿಯಂವ ಕೇಳ್ದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟತ್. ಅವಂಗೂ ಖುಷಿಯಾತ್. `ನಿಮ್ಮ ಮಗಳನ್ನ ಕೆಲಸಕ್ಕೆ ತಕ್ಕೊಳ್ತಿದ್ದೀನಿ..ಸಾವಿರದ ಐನೂರು ರೂಪಾಯಿ ಸಂಬಳ...ಆಮೇಲೆ ಜಾಸ್ತಿ ಆಗುತ್ತೆ. ಆದ್ರೆ ನೀವು 10 ಸಾವಿರ ರೂಪಾಯಿ ಡಿಪಾಸಿಟ್ ಇಡ್ಬೇಕು...ಇದು ಚಿನ್ನದ ಅಂಗಡಿ ನೋಡಿ...'ತಾ ಹೇಳ್ತ್. ಹತ್ತು ಸಾವಿರ ರೂಪಾಯಿ ಇದ್ದಿದ್ದರೆ ಇವ್ಳನ್ನ ಕಾಲೇಜಿಗೆ ಕಳಿಸ್ತಿತ್ಲೆನಾ...ಇದೆಲ್ಲಾ ಆಕಿರುವ ಕೆಲಸ ಅಲ್ಲತಾ ಭಾರತಿನ ಕರ್ಕಂಡ್ ಅವಳಪ್ಪ ಮನೆಗೆ ವಾಪಸ್ ಬಾತ್.
  ಭಾರತಿ ಅಮ್ಮಂಗೆ ಎಲ್ಲಾ ವಿಷಯನೂ ಹೇಳ್ತ್...ಸಾವಿರದೈನೂರು ರೂಪಾಯಿ ಸಿಕ್ಕಿರೆ ಮನೆ ಖರ್ಚ್ ಗೆ  ಹೆಂಗೂ ಆದೆ.. ಆದ್ರೆ 10 ಸಾವಿರ ರೂಪಾಯಿ ಎಲ್ಲಿಂದ ತಾದು? ಅಷ್ಟೊತ್ತಿಗೆ, ಭಾರತಿ ಅಮ್ಮಂಗೆ ಕುತ್ತಿಗೆಲೀದ್ದ ತಾಳಿ ಚೈನ್ ಮೇಲೆ ಕಣ್ಣ್ ಬಿತ್ತ್. ಹೌದು, ಇದನ್ನ ಅಡವು ಇಟ್ಟರೆ, 12 ಸಾವಿರ ರೂಪಾಯಿ ಸಿಕ್ಕಿದೆ. 10 ಸಾವಿರನ ಚಿನ್ನದಂಗಡೀಲಿ ಡಿಪಾಸಿಟ್ ಇಟ್, ಉಳ್ದ ದುಡ್ಡ್ನ ಉಳ್ದ ಇಬ್ಬರ ಫೀಸ್ ಕಟ್ಟಿಕೆ ಆದೆತಾ ಯೋಚನೆ ಮಾಡ್ಕಂಡ್ ಸೇಟು ಅಂಗಡಿ ಕಡೆ ನಡ್ತ್. ವಾಪಸ್ ಬಾಕಾಕನ ಕುತ್ತಿಗೇಲಿ ಅರಸಿಣ ದಾರ.
ಹಂಗೆ ಭಾರತಿ ಚಿನ್ನದಂಗಡಿ ಸೇರ್ಕಂಡಿತ್. ಒಂದು ವರ್ಷ ಕಳೆದ್ರೂ ಅವಳಮ್ಮಂಗೆ ತಾಳಿ ಚೈನ್ ಬಿಡಿಸಿಕಂಬಕೆ ಆಗಿತ್ಲೆ. ಇಂಥ ಭಾರತಿಗೆ ಇಂದ್ ಕೆಟ್ಟ ಆಸೆ ಕಾಣಿಸಿಕಂಡಿತ್ತ್. ಆಗಾಗ್ಗ ಆ ನೆಕ್ಲೆಸ್ ಹತ್ರ ಹೋಗಿ ಬಾದು ಮಾಡ್ತಿತ್. ಅಂಗಡೀಲಿ ತುಂಬಾ ಜನ ಇದ್ದಿದ್ದರಿಂದ, ಎಲ್ಲವೂ ಅವರದ್ದೇ ಲೋಕದಲ್ಲಿ ಇದ್ದೊ. ಟೈಂ ನೋಡಿ ಮೆಲ್ಲೆ ಆ ಹೊಳೆಯುವ ನೆಕ್ಲೆಸ್ ತಕ್ಕಣ್ತ್.. ರೆಸ್ಟ್ರೂಂಗೆ ಹೋಗಿ ಕನ್ನಡಿ ಮುಂದೆ ನಿಂತ್ ಕುತ್ತಿಗೆಗೆ ಒಮ್ಮೆ ಹಾಕಂಬದು ನಂತ್ರ ಅದ್ನ ತಂದು ಅಲ್ಲೇ ಇಟ್ಟುಬಿಡ್ದು ಅವ್ಳ ಉದ್ದೇಶ ಆಗಿತ್ತ್. ಆದ್ರೆ ಅಲ್ಲಿ ನಡೆದದ್ದೇ ಬೇರೆ.
ಸಿಸಿ ಕೆಮೆರಾಲಿ ನೋಡ್ತಿದ್ದ ಸೆಕ್ಯೂರಿಟಿಯಂವ, ಭಾರತಿ ನೆಕ್ಲೆಸ್ ತಕ್ಕಂಡ್ ರೂಮ್ ಒಳಗೆ ಹೋಗ್ತಿದ್ದಂಗೆ ಓಡಿ ಬಂದ್ ಅಂಗಡಿಯಂವಂಗೆ ಹೇಳ್ತ್. ಅವನೋ ಹಿಂದೆ ಮುಂದೆ ಯೋಚನೆ ಮಾಡದೆ ಭಾರತಿ ಕೆನ್ನೆಗೆ ಪಟಾಪಟಾತಾ ಹೊಡ್ತ್...ಅಂಗಡಿಲಿ ಇದ್ದ ಜನರ ಎದುರೇ ಎಳ್ದು ಹೊರಗೆ ಹಾಕ್ತ್. ಇಂಥ ವಿಷಯ ಹರಡುದು ತುಂಬಾ ಸ್ಪೀಡ್....ಭಾರತಿ ಅತ್ತ್ಕಂಡ್ ಮನೆ ತಲುಪಿಕೆ ಮೊದ್ಲೇ ಅವಳಪ್ಪನ ಕಿವಿಗೆ ಈ ಸುದ್ದಿ ಬಿದ್ದಿದ್ದ್. ಬಡವನಾದ್ರೂ ಅಂವ ಮರ್ಯಾದೆಗೆ   ಹೆದ್ರುವಂವ. ಮಗಳ ಬಗ್ಗೆ ನಂಬಿಕೆ ಇದ್ರೂ, ಜನರ ಮಾತಗಳ್ನ ಎದ್ರಿಸುವ ಧೈರ್ಯ ಇತ್ಲೆ...ದನ ಕಟ್ಟುವ ಹಗ್ಗ ತಕ್ಕಂಡ್ ಹೋಗಿ, ಗದ್ದೆ ಮಧ್ಯಲಿ ಇದ್ದ ಹುಣಸೇ ಮರಕ್ಕೆ ನೇಣು ಹಾಕ್ಕಣ್ತ್. ಭಾರತಿ ಅಮ್ಮನ ಕುತ್ತಿಗೆಲೀದ್ದ ಅರಸಿಣ ದಾರನೂ ಈಗ ಕಾಣ್ತಿಲ್ಲೆ.....
- `ಸುಮ'

Thursday 1 March 2012

ಕೊಳಕ ಚೋಮುಣಿ...


ಏನಾಶ್ಚರ್ಯ...! ರಾತ್ರಿ ಎದ್ದು ಬೆಳಗ್ಗೆ ಏಳಿಕಾಕನ ಚೋಮುಣಿ ಹೈದ ಬದಲಾಗಿಬಿಟ್ಟಿತ್ತ್ ! ಅವನ ಬಲಗೈ ತಾಗಿದ ವಸ್ತುಗಳೆಲ್ಲಾ ಮಾತಾಡ್ತಿದ್ದೋ... ಟೂತ್ ಬ್ರಸ್ ತಕ್ಕಂಡ್ರೆ, `ಏಯ್ ಕೊಳಕಾ, ನಿನ್ನ ಹಲ್ಲು ಕ್ಲೀನ್ ಮಾಡಿಕೆ ನಾ ಬೇಕು. ನನ್ನನ ಕ್ಲೀನ್ ಇಟ್ಕಣಿಕೆ ನಿಂಗೇನು ರೋಗ...?' ತಾ ಅವಾಜ್ ಹಾಕ್ತ್. ಬಾತ್ರೂಂ ಗೋಡೆ ಮುಟ್ಟಿಕಾಕನ ಅಲ್ಲೂ ಚೋಮುಣಿಗೆ ಬೈಯ್ಗುಳದ ಸುರಿಮಳೆ...`ಛಿ.. ನೀ ನನ್ನ ಹತ್ರ ಬರ್ಬೇಡ... ಅದೆಂಥ ವಾಸನೆ !'. ಸ್ನಾನ ಮಾಡಿಕೆ ಬಕೆಟ್ ಹತ್ರ ಹೋದ್ರೆ ಬಕೆಟ್ ಕೈಲೂ ಬೈಗುಳ. `ನಿನ್ನ ಕ್ಲೀನ್ ಮಾಡಿಕೆ ನನ್ನ ಕೈಲಿ ಆಲೆಯಪ್ಪಾ...' ತಾ ನೀರು ಕೂಡ ಚೋಮುಣಿ ಹೈದಂಗೆ ಬೈದುಬಿಟ್ಟತ್. ಚೋಮುಣಿಗೆ ತಲೆ ನೋವು ಶುರುವಾತ್. ಇದೇನಪ್ಪಾ ನಾನು ಮುಟ್ಟಿದ್ದೆಲ್ಲಾ ಹಿಂಗೆ ಮಾತಾಡಿವೆಯಲ್ಲಾ. ನಾನು ಅಷ್ಟು ಕೊಳುಕನಾ... ಯೋಚನೆ ಮಾಡಿಕಂಡ್ ಮತ್ತೆ ಹೋಗಿ ಹುಕ್ಕಿ ಮಲಗಿತ್...ಒಳ್ಳೇ ನಿದ್ದೆ. ಪುನ: ಎಚ್ಚರಿಕೆ ಆಕಾಕನ ಸೂರ್ಯ ನೆತ್ತಿಗೆ ಬಂದಿತ್ತ್.... ಹಳೆ ಶಕ್ತಿ ಉಟ್ಟಾ ಇಲ್ಲೆನತಾ ಚೋಮುಣಿಗೆ ಟೆಸ್ಟ್ ಮಾಡ್ವ ಆಸಕ್ತಿ ಕಾಣಿಸಿಕಂಡತ್. ಸರಿ ನೋಡಿ ಬಿಡ್ನೋತೇಳಿ ತಾತನ ದೊಣ್ಣೆ ಮೇಲೆ ಕೈ ಇಟ್ಟತ್. ಆಗ ಆ ದೊಣ್ಣೆ, ಮೈ ಮೇಲೆ ದೇವ್ರು ಬಂದಂಗೆ ಕುಣಿಯಕೆ ಶುರ ಮಾಡ್ತ್. ಚೋಮುಣಿ ಬೆನ್ನು ಮೇಲೂ ಕುಣ್ತ್. ನೋವು ತಡಿಯಕ್ಕಾಗದೆ ಇಂವ ಕಿರುಚುತ್ತಿದ್ದರೆ, ದೊಣ್ಣೆ ಮಾತಾಡ್ತಿತ್ತ್ `ಕೊಳಕ...ನೀ ನನ್ನ ಮುಟ್ಟಿಯಾ...ಮೂಳೆ ಮುರ್ದುಬಿಟ್ಟನೆ...' ಈಗ ಚೋಮುಣಿಗೆ ಮತ್ತೊಂದು ಶಕ್ತಿ ಬಂದುಬಿಟ್ಟಿತ್ ! ಅಂವ ಮುಟ್ಟಿದ ವಸ್ತುಗ ಮಾತಾಡುದರ ಜೊತೆ, ಇವನ ಮೇಲೆ ತಿರುಗಿ ಬೀಳ್ತಿದ್ದೊ.. ಯಾಕೋ ಇಂದ್ ಗ್ರಹಾಚಾರನೇ ಸರಿ ಇಲ್ಲೆತಾ ಚೋಮುಣಿ ಮತ್ತೆ ಹಾಸಿಗೆ ಕಡೆ ನಡ್ತ್.

- 'ಸುಮ'
arebhase@gmail.com