Wednesday, 8 August 2012

ಮದುವೆ ಮನೇಲಿ 'ಟ್ರ್ಯಾಜಿಡಿ'


       ಅಂದ್ ನನ್ನ ಅತ್ತೆ ಮಗ ಚೇತುದು ಮದ್ವೆ. ಎಲ್ಲವೂ ಅದ್ ಇದ್ ಕೆಲ್ಸತಾ, ಆಚೆ ಈಚೆ ಓಡಾಡಿಕಂಡ್ ಇದ್ದೊ.. ಆದರೆ ನಂಗೆ ಅದ್ಯಾವ್ದೂ ನಿಗ ಇತ್ಲ್ಲೆ... ನನ್ನ ಕಣ್ಣ್ ಬೇರೆ ಏನೋ ಹುಡುಕ್ತಾ ಇತ್ತ್.. ಕಣ್ಣ್ ಗೌಡ ಸಮಾಜದ ಗೇಟ್ ಕಡೆಗೆನೇ ಪುನಃ ಪುನಃ ಹೊಗ್ತಿತ್ತ್...ಛೇ!! ಇನ್ನೂ ಯಾಕೆ ಬಾತ್ಲೆ ಅವ್ಳು.. ಚಪ್ಪರಕ್ಕೆ ಬಂದವ್ಳು ಮದ್ವೆಗೆ ಬಾತ್ಲೆತೇಳಿರೆ.. ಅಯ್ಯೋ... ಕಣ್ಣ್, ನೋಟ, ನೆಗೆ.. ಮತ್ತೆ ನೋಡಿಕೆ ಸಿಕ್ಕಿರೆ.. ಛೇ... ನೆನ್ನೆನೇ  ಎಲ್ಲಾ ವಿಷ್ಯ ಹೇಳಿ ಬುಡೊಕ್ಕಾಗಿತ್... ಹೌದು.. ಹಿಂದಿನ ದಿನ ಚಪ್ಪರಲಿ ಅವ್ಳು ಯಾಕೆ ನನ್ನ ಕಣ್ಣಿಗೆ ಬೀತ್ತೋ.. ಕಣ್ ಮುಚ್ಚಿರೂ ಅವ್ಳೇ.. ಬುಟ್ರೂ ಅವ್ಳೇ.. ಒಂದೇ ಮಾತ್, ಒಂದೇ ನೋಟ..

             ಮನೆ ತುಂಬಾ ನೆಂಟ್ರ್ ಇದ್ದೊ.. ಬೆಳಿಗ್ಗೆ ಈರುಳ್ಳಿ ಕೊಯ್ಕಂಡ್ ಕುದ್ದಿದ್ದ ನನ್ನ ಮನ್ಸ್ 'ನೋಕಿಯಾ ಸಣ್ಣ ಪಿನ್ ಚಾರ್ಜರ್ ಉಟ್ಟಾ' ಒಂದೇ ಒಂದು ಮಾತ್ ಕೇಳಿ ನೂರು ಚೂರು ಮಾಡಿ ಹಾಕಿತ್ತ್ ಆ ಗೂಡೆ.. ಲವ್ ಅಟ್ ಫಸ್ಟ್ ಸೈಟ್ ತಾ.. ಹೇಳಿವೆಯಲ್ಲಾ ಹಂಗೆ. 'ಟೀವಿ ಮೇಲೆ ಉಟ್ಟು, ತಕಣಿತಾ ಹೇಳ್ದೆ.. "ಅಡುಗೆಗೆ ಈರುಳ್ಳಿ ಇಲ್ಲದಿದ್ರೂ ನಡ್ದದೆ, ಗೂಡೆನ ಮಿಸ್ ಮಾಡ್ಬೇಡ"ತಾ ಒಳಗೆಂದ ಮನ್ಸ್ ಮತ್ತೆ ಮತ್ತೆ ಹೇಳಿಕೆ ಶುರು ಮಾಡ್ತ್..!! ಈರುಳ್ಳಿನ ಅಲ್ಲೇ ಬುಟ್ಟ್ ಹಿಂದೆ ಹೋದೆ.. ಯಾರೀ ಗೂಡೆ.. ಇಷ್ಟ್ ಚಂದ ಉಟ್ಟಲಾ.. ನಮ್ಮ ನೆಂಟ್ರೇನಾ?.. ಅಲ್ಲ ಬೆಂಗಳೂರ್ ಸೆಟ್ಟಾ?.. ಮತ್ತೆ ಅರೆಭಾಷೆ ಲಾಯ್ಕ ಮಾತಾಡ್ದೆ?.. ಯಾರಪ್ಪ ಇವ್ಳು?.. ಹಿಂಗೆ ನೂರಾರು ಪ್ರಶ್ನೆಗ ತಲೆಲಿ ಬಂದ್ ಬಂದ್ ಹೋಗ್ತಿದ್ದೊ.. ಸೀದಾ ಮನೆ ಒಳಗೆ ಹೋದೆ, ಅವ್ಳ ಹಿಂದೆ.. ಕಣ್ಣ್ ಇಡಿ ರೂಮ್ ನ 3G ಸ್ಪೀಡ್ಲಿ ಸ್ಕ್ಯಾನ್  ಮಾಡ್ತಾ ಇತ್ತ್ , .. ಗೂಡೆ ಟೀವಿ ಹಿಂದೆ ಇದ್ದ ಪ್ಲಗ್ ಗೆ ಚಾರ್ಜರ್ ಹಾಕಿಕೆ ಪರ್ದಾಡ್ತ ಇತ್ತ್.. ಒಳ್ಳೇ ಛಾನ್ಸ್, ಹೆಲ್ಪ್ ಮಾಡನ ತಾ ಇನ್ನೇನ್ ಹೋಕು, ಅಷ್ಟ್ರಲ್ಲಿ ರಶ್ಮಿ ಆಂಟಿ ಪಟ್ ಎಂಟ್ರಿ ಕೊಟ್ಟೊ, "ವಿಕ್ಕಿ, ಇವನ ಒಮ್ಮೆ ಬಾತ್ ರೂಮ್ ಗೆ ಕರಕೊಂಡ್ ಹೋಗು, ಅರ್ಜೆಂಟ್ ಗಡ"ತಾ , ಅವರ ಮೂರು ವರ್ಷದ ಮಂಞ ಶೋಭಿತ್ ನನ್ನ ಕೈಗೆ ಕೊಟ್ಟೊ.. ಛೇ!!ತಾ ಮನ್ಸ್ ಲಿ ಬೈಕಂಡ್ ಅವನ ಕೈ ಹಿಡ್ಕಂಡ್(ಎಳ್ಕಂಡ್) ಹೋದೆ..
    ಬೇಗ ಬೇಗ ಕೆಲ್ಸ ಮುಗ್ಸಿ ಬಂದ್ ನೋಡ್ನೆ, ಗೂಡೆ ಕಾವ್ಯಕ್ಕನೊಟ್ಟಿಗೆ ಮಾತಾಡಿಕಂಡ್ ಉಟ್ಟು.. ಕಾವ್ಯ ನನ್ನ ದೊಡಮ್ಮನ ಮಗ್ಳು.. ಕಾವ್ಯಕ್ಕಂಗೆ ಆ  ಗೂಡೆನ ಗೊತ್ತಿರ್ದೇನೋ.. ಅವ್ಳ್ನ ಹತ್ರ ಗೂಡೆ ಬಗ್ಗೆ ಕೇಳ್ರೆ ಹೆಂಗೆ... ಬೇಡ..ಬೇಡ.. ಕಾವ್ಯಕ್ಕ ಎಂತಾರೂ ತಿಳ್ಕೊಂಬೊದು.. ಅವ್ಳ ಪ್ರಕಾರ ನಾನ್ ಡೀಸೆಂಟ್ ಹೈದ.. ಹಿಂದಿನ ದಿನ ಎಲ್ಲವೂ ಮಾತಾಡಿಕಂಡ್ ಕುದ್ದಿರ್ಕನ ಸಟ್೯ಫಿಕೇಟ್ ಕೊಟ್ಟುಟ್ಟು.. ಛೇ!! ಬೇಡ ಬೇಡ.. ಮನ್ಸ್ ಲಿ ಮತ್ತೆ ಪ್ರಶ್ನೆಗ.. ಅಷ್ಟ್ರಲಿ ಗೂಡೆ ಅಲ್ಲಿಂದ ಸ್ಟೇರ್ಕೇಸ್ ಮೆಟ್ಲ್ ಹತ್ತಿಕೊಂಡು ಮೇಲೆ ರೂಮಿಗೆ ಹೋಗ್ತಾ ಇತ್ . ಈಗಾರ್ ಮಾತಾಡ್ಸನ ತಾ ಹೇಳಿ ಅವಳ ಹಿಂದೆ ಹೋಕೆ ಹೆಜ್ಜೆ ಮುಂದೆ ಇಟ್ಟೆ ಅಷ್ಟೆ.. "ಮಿಂಚಾಗಿ ನೀನು ಬರಲು,ನಿಂತಲ್ಲಿಯೇ ಮಳೆಗಾಲ...." ನನ್ನ ಫೋನ್ ರಿಂಗ್ ಆತ್.. ಪವಿ ಅಣ್ಣ ಕಾಲ್.. ವಿಕ್ಕಿ, ಹಂದಿ ಮಾಂಸ ರೆಡಿ ಆಗುಟ್ಟು ಗಡ.. ಓಮ್ನಿ ತಕಂಡ್ ಹೋಗು, ಐದ್ ನಿಮ್ಸಲಿ ಬರೋಕು, ಅಡಿಗೆಯವು ಅರ್ಜೆಂಟ್ ಮಾಡ್ತ ಒಳೊ"..( ನಂಗೆ ಯಾಕಪ್ಪ ಫೋನ್ ರಿಸೀವ್ ಮಾಡ್ದೆತಾ  ಆತ್.) ಬೇರೆ ದಾರಿ ಇಲ್ಲೆ.. ಬಂದ್ ನೋಡಿಕಣನತಾ  ಬೇಗ ಹೋಗಿ ಬೇಗ ಬಂದೆ.. ಬಾಕನ ದಾರಿಲಿ ಸನಾ ಅವ್ಳ್ ದೆ ಯೋಚನೆ, ಹೋದ ತಕ್ಷಣ ಮಾತಾಡ್ಸಕು ತಾ ಪ್ಲಾನ್ ಮಾಡಿಕಂಡೇ ಬಂದ್ದಿದ್ದೆ.. ಬಂದ ತಕ್ಷಣ ಒಳಗೆ ಹೋಗಿ ಇನ್ನೊಮ್ಮೆ  ಸ್ಕ್ಯಾನ್ ಮಾಡ್ದೆ.. ಒಳಗೆ ಎಲ್ಲೂ ಕಂಡತ್ತ್ಲೆ.. ಸೀದಾ ಮನೆ ಹಿಂದೆ ಹೋದೆ.. ನೋಡ್ರೆ ಅವ್ಳು ಒಬ್ಳೆ ಬಟ್ಟೆ ಒಗಿವ ಕಲ್ ಹತ್ರ ದೀಪಗಳ್ನ ತೊಳ್ಕಂಡ್ ನಿತ್ತುಟ್ಟು.. ಛಾನ್ಸ್ ಬುಟ್ರೆ ಪುನಃ ಸಿಕ್ಕುದ್ಲೆ ತಾ ಸೀದಾ ಹೋದೆ ಕಲ್ ಹತ್ರ... ನಾನ್ ಹೋಗಿ ನಿಲ್ಲುದು, ಕಡೆಂದ ಬಕೆಟ್ ಲಿ ನೀರ್ ಹಿಡ್ಕಂಡ್ ಮೇಘ ಕಲ್ಲು ಹತ್ರ ಬಾದು ಸರಿ ಆತ್.. ಬಂದವ್ಳೆ "ಎಂಥ ವಿಕ್ಕಿ ಅಣ್ಣ"ತಾ ಕೇಳ್ತ್...ನಾನ್  "ನಿನ್ನ ಅಮ್ಮ ಕರಿತುಟ್ಟು, ಹೋಕಡ" ತಾ ಹೇಳ್ದೆ.. ಆಗ ಅವ್ಳು "ಹೌದಾ, ಆಗ ನೀನ್ ಅಕ್ಕಂಗೆ ಹೆಲ್ಪ್ ಮಾಡ್ ಸ್ವಲ್ಪ, ಈಗ ಬನ್ನೆ"ತಾ  ಹೇಳಿ ಓಡ್ತ್...
( ನಾ ಮನ್ಸ್ ಲೆ ಹೇಳಿಕಂಡೆ "ಅಕ್ಕ ಅಲ್ಲ ಮೇಘ, ಅತ್ತಿಗೆ")....
"ಹಾಯ್".. ನಾನ್ ಧೈರ್ಯ ಮಾಡಿ ಹೇಳ್ದೆ... ಅವ್ಳ ಕಡೆಂದ "ಹಾಯ್" ವಾಪಾಸ್ ಬಾತ್..
ನಾನ್:- ಚಾರ್ಜರ್ ಹೆಸ್ರ್ ಎಂತ,
ಅವ್ಳು:- ಎಂತ???!!
ನಾನ್:- ಆಆಆಆ.. ಸಾರಿ, ಸಾರಿ,.. ನಿನ್ನ ಹೆಸ್ರ್ ಎಂತ...
ಅವ್ಳು:- ಪ್ರಿಯಾ!! ನಿಂದ್ ??
(ಅವ್ಳು ದೀಪನ ಉಜ್ತಾ ಇತ್ತ್, ನಾ ನೀರ್ ಹಾಕ್ತಾ ಇದ್ದೆ..)
ನಾನ್:- ನನ್ನ ಹೆಸ್ರ್ ಲತನ್.. ಮನೆಲಿ ಕರಿಯೊದು ವಿಕ್ಕಿತಾ ... ನಿಮ್ಮ ಮನೆ ಎಲ್ಲಿ??
ಅವ್ಳು:- ಮೂರ್ನಾಡ್.. ನಿಮ್ಮದ್??
ನಾನ್:-ಸುಂಟಿಕೊಪ್ಪ..
(ಮೇಘ ವಾಪಸ್ ಬಾಕೆ ಮುಂದೆ ಹೇಳಿಕೆ ಇರುವ ವಿಷ್ಯನೆಲ್ಲ ಹೇಳೊಕು, ಅಟ್ಲಿಸ್ಟ್ ಫೋನ್ ನಂಬರ ಆದ್ರೂ ತಕಣೊಕುತಾ  ಮನ್ಸ್ ಲಿ ಲೆಕ್ಕಾಚಾರ ಹಾಕಿದೆ).. ,
ನಾನ್:- ನಾನ್ ನಿಂಗೆ ಎಂತೊ ಹೇಳೊಕು..
ಅವ್ಳು:-ಎಂತ?? ಹೇಳಿ!!
ನಾನ್:- ಎಂತ ಅಂದರೆ... ನಿನ್ನ ಫಸ್ಟ್ ಟೈಮ್ ನೋಡ್ಕನ ನೇ... ನಂಗೆ.. ಅದ್.... ಹಂಗೆ.. ನೊಕಿಯಾ. ಅಲ್ಲ.. ನೋಡಿ... ಅದ್...

(ಫಸ್ಟ್ ಟೈಮ್ ನನ್ನ ನಾಲಿಗೆ ಕಂಟ್ರೋಲ್ ತಪ್ಪಿದ್)

ಅವ್ಳು:- ( ಕಡೆ ತಿರ್ಗಿ ಒಮ್ಮೆ ನೆಗಾಡಿ) ಎಂತತಾ  ಹೇಳಿ...
ನಾನ್:- ನಾನ್ ನಿನ್ನ… ........ ನಿನ್ನ ಫೋನ್ ನಂಬರ್ ಕೊಡು!! (ನಾನ್ ಏನೋ ಅವಳ ಒಂದು ಕಿಡ್ನಿ ಕೇಳ್ದೆ ತಾ ಹೇಳುವಂಗೆ ನೋಡ್ತ್ ಒಮ್ಮೆ, ಅವ್ಳು ಇನ್ನೇನೋ ಮಾತಾಡೊಕು, ಅಷ್ಟರಲಿ ಮೇಘ ಬಾತ್)
ಮೇಘ:- ಅಣ್ಣಾ,.. ಅಂಕಲ್ ಕರಿತಾ ಒಳೊ.. ಕಾರು ಅಡ್ಡ ನಿಲ್ಸಿ ಬಂದೊಳನಾ.. ತೆಗಿಯೊಕು ಗಡ...
        ನಾನ್ ಸೀದ ಹೋದೆ.. ಮತ್ತೆ ಪುನಃ ಟೈಮೇ ಸಿಕ್ತ್ಲೆ.. ಅದ್ ಇದ್ ಕೆಲ್ಸ, ಓಡಾಟ.. ಅದೇ ಆತ್.. ಆದ್ರೆ  ಓಡಾಟಪರ್ದಾಟದ ಮಧ್ಯಲಿ ಸುಮಾರು 20-25 ಸಲ ಆದರೂ ಅವ್ಳು ನನ್ನ, ನಾನ್ ಅವ್ಳ್ನ ನೋಡ್ದು .. ಸ್ಮೈಲ್ ಕೊಡ್ದು.. ಕೈ ಸನ್ನೆ, ಕಣ್ ಸನ್ನೆ ಎಲ್ಲಾ ನಡ್ತ್... ಚಪ್ಪರ ಮುಗ್ದ್ ನೆಂಟ್ರೆಲ್ಲ ಕರಗಿದೊ.. ನಾನ್ ತುಂಬಾ ಸಲ ನಂಬರ್ ಕೇಳ್ದೆ.. ಆದರೆ ಹಂಗೆ ಹಿಂಗೆ ತಾ ಆಟ ಆಡ್ಸಿತ್.. ಕಡೆಗೆ ನಾಳೆ ಕೊಟ್ನೆತಾ  ಹೇಳ್ತ್.. ಸರಿ ತಾ ಹೇಳಿ ನಾನ್ ಸುಮ್ಮನೆ ಆದೆ.. ನಂಬರ್ ಕೊಡದೆ ಇರಿಕಿಲೆತಾ ನಂಬಿಕೆ ಅಂತೂ ಇತ್ತ್ ನಂಗೆ...
ಸಂಜೆ ಆತ್... ಅಷ್ಟೊತ್ತು ಕಣ್ಣಿಗೆ ಆಗಾಗ ಬೀಳ್ತ ಇದ್ದ 'ಪ್ರಿಯ', "ನನ್ನ ಪ್ರಿಯ" ಎಲ್ಲಿ ನೋಡ್ರೂ ಕಂಡತ್ಲೆ.. ಅಲ್ಲಿ ಇಲ್ಲಿ, ಒಳಗೆ ಹೊರಗೆ, ಹಿಂದೆ ಮುಂದೆ ಎಲ್ಲಾ ಕಡೆ ಸ್ಕ್ಯಾನ್ ಮಾಡ್ದೆ.. ಅದರೆ ಪ್ರಿಯಾ ಕಾಂಬಕ್ಕೆ ಸಿಕ್ಕಿತ್ಲೆ.. ಸ್ಲಲ್ಪ ಹೊತ್ತಾದ ಮೇಲೆ ಮೇಘಾ ಚಾರ್ಜರ್ ತಂದ್ ಕೊಟ್ಟತ್.. ' ಅಕ್ಕ ಎಲ್ಲಿ' ತಾ ಕೇಳ್ದೆ.. 'ಮನೆಗೆ ಹೋದೊ'ತಾ  ಹೇಳ್ತ್.. 'ನಾಳೆ ಬಂದವೆನಾ' ತಾ ಕೇಳ್ದೆ.. ಅಷ್ಟಕ್ಕೆ ಮೇಘಾ "ಯಾಕಪ್ಪ, ಏನ್ ಕಥೆ, ಹಾ?? ತಾ ಅನುಮಾನಲಿ ಕೇಳ್ತ್.. ಏನಿಲ್ಲೆ ತಾ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ದೆ..           ………………….
ಹಿಂದಿನ ದಿನದ ನೆನಪುಗ ಪಟ ಪಟನೆ ಬಂದು ಹೋತ್ ತಲೆಲಿ...ಟೈಮ್ 10:30 ಆತ್.. ಇನ್ನೂ ಯಾಕೆ ಬಾತ್ಲೆ ಗೂಡೆ..(ಕಣ್ಣ್ ಮತ್ತೆ ಮತ್ತೆ ಗೇಟ್ ಕಡೆಗೆನೇ ಹೋಗ್ತಿತ್).. ಅಷ್ಟರಲ್ಲಿ ಅಮ್ಮ ಬಂದ್ " ಮಾವ ಬಸ್ ಸ್ಟಾಂಡ್ಲಿ ಒಳೊ ಗಡ, ಒಮ್ಮೆ ಹೋಗಿ ಕರ್ಕಂಡ್ ಬಾ" ಹೇಳ್ದೊ.. ಬಂದವೆ ಬುಡಮ್ಮ, ಅದಿಕೆ ನಾನ್ ಬೇರೆ 'ಕೆಲ್ಸ' ಎಲ್ಲ ಬುಟ್ಟ್ ಹೋಕಾ? ಈಗ.. 'ಬ್ಯುಸಿ' ಇರ್ಕನ ನಿಂದ್ ಒಂದು ತಾ ಮುಖ ತಿರ್ಗಿಸಿದೆ.. ಅದಿಕೆ ಅಮ್ಮ "ಡೊಡ್ಡ ಬ್ಯಾಗ್ ಉಟ್ಟು ಗಡ, ಒಮ್ಮೆ ಹೋಗಿ ಬಾ, ಬೇಗ" ತಾ ಹೇಳ್ತ್.. ಪವಿ ಅಣ್ಣನ ಹತ್ರ ಜೀಪ್ ಕೀ ತಕ್ಕಂಡ್ (ಮಾವಂಗೆ ಮನ್ಸ್ ಲೇ ಬೈಕಂಡ್) ಬಸ್ ಸ್ಟಾಂಡ್ ಗೆ ಹೋದೆ.. ಮಾವ ಅರ್ಧ ಕೇಜಿ ಪ್ಲಾಸ್ಟಿಕ್ ಕವರ್ ಥ ಇದ್ದ  "ದೊಡ್ಡ"  ಬ್ಯಾಗ್ ಹಿಡ್ಕಂಡ್ ಡೈರಿ ಹತ್ರ ನಿಂತ್ತಿದ್ದೊ..ಹೋಗಿ ಜೀಪ್ ನಿಲ್ಸಿದಂಗೆ ಬಂದ್ ಹತ್ತಿದ್ದೊ.. "ಎಂಥರ, ದೊಡ್ಡ ಮನ್ಸ" ತಾ ಅವರ ಮಾಮುಲಿ ಗತ್ತ್ ಲಿ ಕೇಳ್ದೊ.. "ಹೇಳಿ ಮಾವ" ತಾ ಹೇಳಿ ಸುಮ್ಮನೆ ಆದೆ.. ಕಳ್ದ ವರ್ಷ ತಾತನ ತಿಥಿ ದಿನ ಯಾವ್ದೊ ಸಣ್ಣ ವಿಷ್ಯಕ್ಕೆ ನಂಗೂ ಮಾವಂಗೂ ಜೋರು ಜೋರು ಮಾತ್ ಆಗಿತ್ತ್.. ಅದರ ಮೇಲೆ ನಮ್ಮಿಬ್ಬರಿಗೆ ಅಷ್ಟಕ್ಕೆ ಅಷ್ಟೇ.. ಜೀಪ್ ಐಬಿ ರೋಡ್ಂದ ಟರ್ನ್ ಮಾಡಿ apmc ಹಾಲ್ ರೋಡ್ ಲಿ ತಕ್ಕಂಡ್  ಹೋಗ್ತಾ ಇದ್ದೆ.  ಮುಂದೆ ಓಂದಷ್ಟ್ ದೂರಲಿ ಪ್ರಿಯ ಅವ್ಳ ಅಮ್ಮನೊಟ್ಟಿಗೆ ನಡ್ಕಂಡ್ ಹೊಗ್ತಾ ಇತ್ತ್... ಅವರ ಹತ್ರನೇ ಹೋಗಿ ಬ್ರೇಕ್ ಹಾಕಿದೆ, " ಸಮಾಜಕ್ಕೆ ಅಲಾ ಆಂಟಿ, ಬನ್ನಿ" ತಾ ಹೇಳ್ದೆ.. ಹಿಂದೆ ಹತ್ತಿದೊ ಅಮ್ಮ ಮಗ್ಳು.. ಕನ್ನಡಿ ನೋಡ್ದೆ, ಪ್ರಿಯಾ ನಾ ನೋಡಿಕೆ ಮುಂದೆನೇ ಕನ್ನಡಿ ನೋಡ್ತಿತ್.. ಒಂದು ಸಣ್ಣ ನಗೆ ಅವಳ ಮುಖಲಿ, ನಾನೂ ನಗಾಡ್ದೆ..ನೀಲಿ ಸೀರೆಲಿ, ಕೂದ್ಲು ಹರ್ಡಿಕಂಡ್, ತುಂಬಾ ಲಾಯ್ಕ ಕಾಣ್ತಿತ್ ಅವ್ಳು.. ಸಮಾಜಲಿ ಎಲ್ಲರ್ನೂ ಇಳ್ಸಿದೆ, ಎಲ್ಲವೂ ಹಾಲ್ ಒಳಗೆ ಹೋದೊ.. ಟೈಮ್ 11 ಗಂಟೆ ಆಗಿತ್ತ್.. ಪುನಃ ನಂದು ಪ್ರಿಯಂದ್ ಶುರು ಆತ್,  ನಗೆ, ಕೈ ಭಾಷೆ, ಕಣ್ ಭಾಷೆ, ಇತ್ಯಾದಿ.. ಇತ್ಯಾದಿ.. ಸ್ವಲ್ಪ ಹೊತ್ತಾಕನ ಸ್ನ್ಯಾಕ್ಸ್ ಕೊಡಿಕೆ ಶುರು ಮಾಡ್ದೊ.. ಪ್ರಿಯಾ ಹೋಗಿ ಕಬಾಬ್ ಸರ್ವ್ ಮಾಡಿಕೆ ನಿಂತ್ಕಂಡತ್. ಅವ್ಳ ಪಕ್ಕಲೇ ಪೋರ್ಕ್ ಸರ್ವ್ ಮಾಡಿಕಂಡ್ ಒಬ್ಬ ಆಂಟಿ ನಿಂತ್ತಿದ್ದೊ, "ಕೊಡಿ ಆಂಟಿ, ನಾ ಸರ್ವ್ ಮಾಡ್ನೆ" ತಾ ಅವರ ಜಾಗಲಿ ನಾ ನಿತ್ಕಂಡೆ.. ಸರ್ವ್ ಮಾಡಿಕಂಡೇ ನಮ್ಮ ಮಾತ್ ಶುರು ಆತ್..
ನಾನ್:- ಏನ್ ಲೇಟ್?? 
ಅವ್ಳು:- ಮೂರ್ನಾಡ್ಂದ ಬಾದು ಬೇಡನಾ? ..
ನಾನ್:- ಹಹಾ.. ನಂಬರ್ ಕೊಟ್ನೆತಾ  ಹೇಳ್ದ ಅಲ ನೆನ್ನೆ.. ಕೊಡು ಈಗ..
ಅವ್ಳು:- ......! ಕೊಟ್ನೆ ಹೇಳ್ರೆ, ಕೊಟ್ಟೆ ಕೊಡೊಕಾ?
ನಾನ್:- ಮತ್ತೆ.. ನೆನ್ನೆಂದ ಎಷ್ಟ್ ಸಲ ನೆನ್ಸಿಕಂಡೆ ಗೊತ್ತಾ ನಿನ್ನ ?
ಅವ್ಳು:-  ಯಾಕೊ??
ನಾನ್:- "ಚಾರ್ಜರ್ ಬೇಕಿತ್ತ್".. ಅದಿಕೆ..
(ಪುನಃ ಅವ್ಳ ಒಂದು ಕಿಡ್ನಿ ಕೇಳ್ದೆ ತಾ ಹೇಳುವಂಗೆ ಒಮ್ಮೆ ನೋಡ್ತ್, ಅವು ನಿರೀಕ್ಷೆ ಮಾಡ್ದ ಉತ್ತರ ನಮ್ಮ ಕಡೆಂದ ಬಾತ್ಲೆ ತೇಳಿರೆ ಗೂಡೆಗಳಿಗೆ ಸಿಟ್ಟ್ ಬಾದು ಮಾಮುಲಿ ಅಲಾ)
 ಅವ್ಳು:- ಬರೀ ಅಷ್ಟಕ್ಕೆನಾ?
ನಾನ್:- ಅಲ್ಲ.. ನೀ ತಪ್ಪು ತಿಳ್ಕಂಬಲೆತಾ  ಆದರೆ ನಿಂಗೆ ಎಂತೊ ಹೇಳೊಕು!!
ಅವ್ಳು:- ಎಂಥ? ಹೇಳ್! ಹೊಸ ಚಾರ್ಜರ್ ಬೇಕ? (ಬಾಯಿಗೆ ಕೈ ಇಟ್ಕಂಡ್ ಪಿಸಿ ಪಿಸಿತಾ  ನಗಾಡ್ತ್, ಗೂಡೆಗಳ ಕೆಲವು ಜೋಕ್ ಗಳಿಗೆ ಅವೇ ನಗಾಡೊಕು, ನಮಿಗೆ ನಗೆ ಬಾಲೆ)
ನಾನ್:- ಅಲ್ಲ.. ಲವ್ ಯು!!!
ಅವ್ಳು:- ಹಾಂ...!! ...(ಪುನಃ ಒಂದು "ಕಿಡ್ನಿ" ನೋಟ..) ನನ್ನ ನಂಬರ್ ಒಂದು ಟಿಷ್ಯು ಪೇಪರ್ ಮೇಲೆ ಬರ್ದ್ ಅವ್ಳ ಕೈಗೆ ಕೊಟ್ಟ್ ಸೀದಾ ಬಂದೆ..

             ಛೇ!! ನಾ ತಪ್ಪ್ ಮಾಡ್ಡೆ ನಾ?? ಅವ್ಳ ಅಭಿಪ್ರಾಯ ಕೇಳದೆ ನಾ ಹಿಂಗೆ ಮಾಡ್ದ್ ಸರಿನಾ ? ಮತ್ತೇ ಮನ್ಸ್ ಲಿ ಪ್ರಶ್ನೆಗ... ಆದು ಆಗಲಿ, ಹೋಗೆ ಬುಟ್ನೆ ಅವ್ಳ ಮುಂದೆತಾ  ಹೇಳಿ ಪುನಃ ಲೇಡಿಸ್ ಕೌಂಟರ್ ಹತ್ರ ಹೋದೆ..ನೋಡ್ರೆ ಅಲ್ಲಿ ಪ್ರಿಯಾ ಇಲ್ಲೆಆಚೆ ಈಚೆ ಎಲ್ಲಾ ನೋಡ್ದೆ.. ಎಲ್ಲೂ ಇಲ್ಲೆ.. "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ...." ರಿಂಗ್ ಟೋನ್ ಚೇಂಜ್ ಮಾಡಿದ್ದೆ.. ಪೋನ್ ರಿಂಗ್ ಆತ್.. ಯಾವ್ದೋ ಹೊಸ ನಂಬರ್.. ರಿಸೀವ್ ಮಾಡಿ ಕಿವಿಗಿಟ್ಟೆ.. " ಕಡೆ ಒಳೆ ನೋಡು, ಹಿಂದೆ ತಿರ್ಗ್" ಕಡೆಂದ ಪ್ರಿಯನ ವಾಯ್ಸ್.. ಅಬ್ಬಾ!! ಆಗ ಆದ ಖುಷಿನ ಹೇಳಿಕೆ ಆಲೆ.. ಪಿಯುಸಿ ಎಂಟ್ನೆ ಅಟಂಪ್ಟ್ ಲಿ ಪಾಸ್ ಮಾಡಿರ್ಕನ ನಾ ಅಷ್ಟ್ ಖುಷಿ ಪಟ್ಟಿತ್ಲೆ... ಪ್ರಿಯಾ ಹತ್ರ ಹೋದೆ, ಅವ್ಳೊಟ್ಟಿಗೆ ಇನ್ನಿಬ್ಬರು ಗೂಡೆಗ ಇದ್ದೊ.. "ವಿಕ್ಕಿ, ಇವು ನನ್ನ ಕಸಿನ್ಸ್.. ಗಾನ ಮತ್ತೆ ಹರ್ಷಿತಾ"... ಇಬ್ಬರೂ ಕೈ ಕೊಟ್ಟೊ.. ನಾನೂ ಕೊಟ್ಟೆ.. "ಇವು ನನ್ನ ಹೊಸ ಫ್ರೆಂಡ್, ವಿಕ್ಕಿತಾ "... ನನ್ನ ಅವ್ಕೆ ಪರಿಚಯ ಮಾಡ್ಸಿತ್.. ಸ್ವಲ್ಪ ಹೊತ್ತು ಮಾತಾಡಿಕಂಡ್ ಅಲ್ಲೇ ಇದ್ದೊ.
( ಗಾನ ಮತ್ತೆ ಹರ್ಷಿತಾ ನೋಡಿಕೆ ಚಂದ ಇದ್ದೊ.. ಆದರೂ ನನ್ನ ಕಣ್ಣಿಗೆ ಅವು ಕರಡಿಗಳಂಗೆ ಕಾಣ್ತಿದ್ದೊ.. ಶಿವ ಪೂಜೆ ಮಧ್ಯ ಕರಡಿಗಳಂಗೆ...)
    ಮತ್ತೆ ನಾನ್ ಮಧ್ಯಾಹ್ನ ಊಟದ ಅರೆಂಜ್ಮೆಂಟ್, ಸರ್ವಿಂಗ್, ಅದ್ ಇದ್ ತಾ  ಬ್ಯುಸಿ ಆದೆ.. ಅದ್ರ ಮಧ್ಯೆ ಪ್ರಿಯಂದು ನಂದು ನೋಡ್ದು, ನೆಗಾಡ್ದು, ಮಿಸ್ ಕಾಲ್ ಕೊಡ್ದು ನಡ್ದೆ ಇತ್ತ್... ನೆಂಟ್ರೆಲ್ಲಾ ಊಟ ಮಾಡ್ತ ಇದ್ದೊ.. ಊಟ ಮುಗ್ಸಿದವೆಲ್ಲಾ ಮೆಲ್ಲೆ ಮೆಲ್ಲೆ ಹೊರಡ್ತಾ ಇದ್ದೊ.. ಮದ್ವೆ ಸಮಾರಂಭ ನಿಧಾನಕ್ಕೆ ಕರಗ್ತಾ ಇತ್ತ್... ಹತ್ರದ ನೆಂಟ್ರೆಲ್ಲಾ ಹೆಣ್ಣ್ ಇಳ್ಸುವ ಶಾಸ್ತ್ರಕ್ಕೆ ರೆಡಿ ಆಗ್ತಿದ್ದೊ.. ಮದ್ವೆ ಗೂಡೆ ಮರ್ಡಿಕೆ ರೆಡಿ ಆಗಿತ್ತ್ ( ಮನೆಯವು ಬೇಡತಾ ಹೇಳ್ರೂ ತಾವೇ ಇಷ್ಟಪಟ್ಟ್ ಲವ್ ಮ್ಯಾರೇಜ್ ಆಕಾಕನ ಗೂಡೆಗ ಮರ್ಡುದು ಎಂತಕೆತಾ  ಹೇಳುದೇ ನನ್ನ ಪ್ರಶ್ನೆ)
  ಪ್ರಿಯಾ ಮತ್ತೆ ಕಾಣೆ ಆಗಿತ್ತ್.. ಕಡೆ, ಕಡೆ, ಹಿಂದೆ ಮುಂದೆ ಎಲ್ಲಾ ನೊಡ್ದೆ.. ಎಲ್ಲೂ ಕಾಣ್ತಿಲ್ಲೆ ಅವ್ಳು... "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ" ಮತ್ತೆ ಫೋನ್ ರಿಂಗ್ ಆತ್.. ಅಮ್ಮ ಕಾಲಿಂಗ್. ರಿಸೀವ್ ಮಾಡ್ದೆ..
ಅಮ್ಮ:-"ಎಲ್ಲಿ ಒಳ, ಒಮ್ಮೆ ಹಾಲ್ ಒಳಗೆ ಬಾ"
ನಾನ್:- ಎಂತಮ್ಮ ನಿಂದ್ ಬ್ಯುಸಿ ಇರ್ಕನ..
ಅಮ್ಮ:- ಒಮ್ಮೆ ಬಾ ಮರಾಯ.. ಒಂದು ಆಂಟಿನ ಪರಿಚಯ ಮಾಡ್ಸಿನೆ, ಕೇಳ್ತಾ ಒಳೊ ನಿನ್ನ, ಬೇಗ ಬಾ..
ಅಮ್ಮಂದ್ ಒಳ್ಳೆ ಕಥೆ, ಇನ್ನು ಹೋತ್ಲೆತಾ ಹೇಳಿರೆ ಸರಿ ಆದ್ಲೆ ತಾ ಹೇಳಿ ಒಳಗೆ ಹೋದೆ.. ಸೀನ್ ನೋಡಿ ಶಾಕ್ ಆದೆ!!
ಅಮ್ಮ ಪರಿಚಯ ಮಾಡ್ಸೊಕುತಾ ಇದ್ದ ಆಂಟಿ ಬೇರೆ ಯಾರೂ ಅಲ್ಲ.. ಪ್ರಿಯಾನ ಅಮ್ಮ.. ದೂರಂದ ಸೀನ್ ನೋಡಿಕಂಡ್ ಒಳಗೊಳಗೆ ಖುಷಿ ಪಟ್ಟ್ ಕಂಡೇ  ಹೋದೆ.. ನನ್ನ ಅಮ್ಮ ಮತ್ತೆ ಅವ್ಳ ಅಮ್ಮ ಮಾತಾಡ್ತ ಇದ್ದೊ.. ಪಕ್ಕಲೇ ಪ್ರಿಯಾ ನಿಂತ್ಕಂಡ್ ಇತ್ತ್.. ನಾನ್ ಹತ್ರ ಹೋದೆ..

ಅಮ್ಮ:- ರಾಧಕ್ಕ.. ನನ್ನ ಮಗ.. ವಿಕ್ಕಿ..
 ನಾನ್:- ನಮಸ್ತೆ ಆಂಟಿ..
ಪ್ರಿಯನ ಅಮ್ಮ:- ಇವನೇ ನಮ್ಮನ ಕರ್ಕೊಂಡ್ ಬಂದದ್ ಹೇಮ.. ಗೊತ್ತೇ ಆತ್ಲೆ ನೋಡು, ಸಣ್ಣದರ್ಲಿ ನೋಡ್ದ್ ಅಲ..
ಅಮ್ಮ:- ಹಾ.. ಮಕ್ಕ ಬೆಳಿಯೊದೇ ಗೊತ್ತಾಲೆ..
ಪ್ರಿ.ಅಮ್ಮ:- ಹೌದೌದು.. ವಿಕ್ಕಿ ಎಂಥ ಮಾಡ್ತ ಒಳ ಈಗ??
ನಾನ್:- ('ಸದ್ಯಕ್ಕೆ ನಿಮ್ಮ ಮಗಳ್ನ ನೋಡ್ತಾ ಒಳೆತಾ ಮನ್ಸ್ ಲಿ ಹೇಳಿಕಂಡೆ) ಹಾ... ಡಿಪ್ಲೊಮೊ ಮುಗ್ಸಿ ಜಾಬ್ ಗೆ ಟ್ರೈ ಮಾಡ್ತ ಒಳೆ ಆಂಟಿ..
ಪ್ರಿ.ಅಮ್ಮ:- ಹೌದಾ.. ಸರಿ ಸರಿ.. ಒಳ್ಳೆದಾಗಲಿ.. (ಪ್ರಿ.ಅಮ್ಮ ಅರ್ಜೆಂಟ್ ಲಿ ಇದ್ದೊ ಕಂಡದೆ) ಸರಿ ಹೇಮ.. ನಾವು ಹೊರ್ಟವೆ ಆಗ..
ಅಮ್ಮ:- ಸರಿ, ಸರಿ..ಅಕ್ಕ.. ಲೇಟ್ ಆತ್ ಅಲಾ..
(ಪ್ರಿಯನ ಅಮ್ಮ ಅವರ ಬ್ಯಾಗ್ಂದ ಎಂತೊ ಹೊರಗೆ ತೆಗ್ದೊ.. ನಾನ್ ಎಂತಪ್ಪ ಅದ್ ನೋಡ್ದೆ..ಕವರೊಳಗೆ ಇತ್ತ್.. ನಂಗೆ ಗೊತ್ತಾತ್ಲೆ..)
ಪ್ರಿ. ಅಮ್ಮ:- ಹೇಮಾ, ಮದ್ವೆ... ಮನೆಯವೆಲ್ಲಾ ಬರೊಕು, ದಿನ ಮುಂಚಿತವಾಗಿ ಬರೊಕು.. ಆತಾ.. ಇನ್ನು ಸರಿ 15 ದಿನಕ್ಕೆ..
ನಾನ್:- ಯಾರ ಮದ್ವೆ ಆಂಟಿ..
ಪ್ರಿಯನ ಅಮ್ಮ:- ಇವ್ಳ್ದೆ.. ನನ್ನ ಮಗ್ಳು.. ಪ್ರಿಯಂದ್... (ಢಮಾರ್! ತಾ ಒಂದು ಶಬ್ದ ಬಾತ್.. ಎಲ್ಲರ ಪ್ರಕಾರ ಅದ್ ಅಡುಗೆ ಮನೇಲಿ ದೊಡ್ಡ ಪಾತ್ರೆ ಬಿದ್ದದ್.. ಆದ್ರೆ ನಂಗೆ ಅದ್ ನನ್ನ ಹ್ರದಯ ಬ್ಲಾಸ್ಟ್ ಆದ್..) ನನ್ನ ಅವಸ್ಥೆ ನೊಡ್ದ
ಪ್ರಿಯನ ಮುಖಲಿ ಅದೇನೊ ಸಾಧನೆ ಮಾಡ್ದಂಗೆ, ನನ್ನ ಗೇಲಿ ಮಾಡ್ದಂಗೆ ಒಂದು ನಗೆ... (ಗೂಡೆಗಳಿಗೆ ಆಟ ಆಡಿಕೆ ಮನೇಲಿ ಕೇಳಿದೆಲ್ಲಾ ತೆಗ್ದ್ ಕೊಟ್ಟವೆ.. ಆದರೂ ಯಾಕೆ ಹೈದಗಳ ಭಾವನೆಗಳೊಟ್ಟಿಗೆ ಆಟ ಆಡುವೆ??)..
                                                                                       -ಲತನ್ ಅಯ್ಯೇಟಿ 

Tuesday, 7 August 2012

ಮತ್ತೆ ಮುಂಗಾರು...!


ತನ್ನೊಡಲ ತಂಪಾಗಿಸಿಕೆ  ಕಾದುಟ್ಟು ಭೂದೇವಿ 
ನಿನ್ನ ಬರುವಿಕೆಯ ಕಾತರಿಸಿ ಅದೆಷ್ಟೋ ದಿನಗಳಿಂದ
ಬಿಸಿಲಿನ ಝಳಕ್ಕೆ ಸಿಕ್ಕಿ ವಾಯುದೇವನ
ಶಾಪಕ್ಕೆ ಗುರಿಯಾದಂಗೆ ಅಲ್ಲಾಡದೆ ನಿಂತೊಳೋ ಮರಗ

ಅದೆಲ್ಲಿ ಮೋಡಗಳ ಮರೆಯಲಿ ಕಣ್ಣಾಮುಚ್ಚಾಲೆ
ಆಡ್ತಿರುವೆನೋ ನಾ ಕಾಣೆ ಹೇ ವರುಣ
ಮತೊಮ್ಮೆ ಆಕಾಶ ಭೂಮಿ ಸಂಗಮವಾದೆತ
ಕಾಯ್ತೊಳೋ ಎಲ್ಲವೂ

ಅದೋ ಬಂದೇ ಬುಡ್ತಲ  ಎಲ್ಲಾ ಮೌನಗಳ ಸೀಳಿ
ರುದ್ರ ಬಿಸಿಲಿಗೂ ಸವಾಲೆಸೆದಂಗೆ
ಬೆರಗಾದೆ ನಾನ್ ನಿನ್ನ ರಮಣೀಯ ಭೋರ್ಗೆರತಕ್ಕೆ
ಮಿಂದೆ ನಾ ಹೊಸ ವರ್ಷದ ಮುಂಗರ್ಲಿ

ಮತ್ತೆ ಮತ್ತೆ ನೆನಸು ಬೆಂದ ಮನಗಳನ
ಹರಡಲಿ ಹಸಿರು ಕ್ರಾಂತಿ ನಿನ್ನೊಲುಮೆಯ ಸಿಂಚನಲಿ
ನಿನ್ನ ರೌದ್ರತೆಲಿ ಸಹ ಸುಖ ಇರೋಕು
ಚರಾಚರಗಳ ಮೇಲೆ ದಯೆ ಇರೋಕು

- ಸ್ಪಂದನ ಗೌರಿ

arebhase@gmail.com

Monday, 6 August 2012

ನಕ್ಷತ್ರದ ಗೂಡೆ !


ಕಣ್ಣು ಚುಚ್ಚುವಂಗೆ ಬೆಳಕು !
ಅವಳ ಮೂಗಿನ ಮೇಲೆ
ದೂರದ ನಕ್ಷತ್ರ ಬಂದು ಕುದ್ದಟ್ಟಾ ?
ಅದೆಂಥ ಪೈಪೋಟಿ !
ನಗಾಡಿರೆ ಕಾಣುವ ಸಾಲು 
ಹಲ್ಲುಗಳ ಫಳ ಫಳ ! 
ಒಂದಿಡೀ ಊರಿಗೆ ಬೆಳಕ್ ಕೊಡಕ್ !
ಕಣ್ಣು ಮುಚ್ಚಿದರೂ
ಹೊರಗೆ ಮಿಂಚು !
ಚಂದಿರನ ಮುಖದ ಗೂಡೆ
ಎಲ್ಲಿ ಒಳನೇ ?
ಅದ್ಯಾವ ಹೊತ್ತ್ಲಿ ಪ್ರತ್ಯಕ್ಷ ಆದೆ ನೀ...
ಅಂದ್ಂದ ನಿನ್ನದೇ ಗ್ಯಾನ !
ಅದೇ ಹೊಳೆವ ಮೂಗುಬೊಟ್ಟು..
ಅದೇ ದಾಳಿಂಬೆ ಹಲ್ಲು...
ನಿನ್ನ ನಾ ಗುರುತು ಹಿಡಿದನೇ !
ಎದುರಿಗೆ ಬಾ ಒಮ್ಮೆ  

- ಸುನಿಲ್ ಪೊನ್ನೇಟಿ
arebhase@gmail.com

Saturday, 4 August 2012

ಬುದ್ಧನ ನಗು !


ಆ ಬುದ್ಧನ ಮುಖದ ಮೇಲೆ ಕಂಡೂ ಕಾಣದಂಗೆ ಸಣ್ಣ ನಗು. ಇಂವ ಯಾಕೋ ನನ್ನನ್ನ ನೋಡಿಕಂಡೇ ಹಿಂಗೆ ನಗಾಡ್ತಿರೋಕೇನೋತಾ ನಂಗೆ ಅನ್ನಿಸಿಕೆ ಶುರುವಾತ್...ಆ ಹೈದರಾಬಾದ್ನ ಅರ್ಧ ಕೊಳಕು ನೀರೆಲ್ಲಾ ಬಂದು ಸೇರುದು, ಸಿಟಿ ಮಧ್ಯದ ಹುಸೇನ್ ಸಾಗರ್ತೇಳುವ ದೊಡ್ಡ ಕೆರೆಗೆ. ಆ ಕೆರೆ ಮಧ್ಯ ಭಾಗಲಿ ಒಂದಿಷ್ಟು ಜಾಗ. ಅಲ್ಲೊಂದು ಎತ್ತರದ ಬುದ್ಧನ ಕಲ್ಲಿನ ಪ್ರತಿಮೆ. ಕೆರೆ ಏರಿಂದ ಬುದ್ಧನ ಪ್ರತಿಮೆ ಇರ್ವ ಜಾಗಕ್ಕೆ  ಹೋಕೆ ಬೋಟ್ ವ್ಯವಸ್ಥೆ ಉಟ್ಟು. ಒಂದ್ಹತ್ತು ನಿಮಿಷದ ದಾರಿ...ಮೂಗು ಮುಚ್ಚಿಕಣದಿದ್ದರೆ, ಅಲ್ಲಿನ ವಾಸನೆಗೆ ಸೊಯತಪ್ಪುದು ಗ್ಯಾರಂಟಿ. ಅಂಥ ಕೆಟ್ಟ ವಾಸನೆ. ಆ ಕೊಳಕುನ ಸಹಿಸಿಕಂಡ್ ಬುದ್ಧನ ಮುಖಲಿ ಅದೆಂಗೆ ಅಂಥ ನಗು ಇದ್ದದೆಯೇನೋ ! ಸಾಯಂಕಾಲ ಹೊತ್ತು ಅಲ್ಲಿಗೆ ಹೋದ್ರಂತೂ ಸೊಳ್ಳೆಕಾಟ. ಗುಂಯ್..ಗುಂಯ್ ತೇಳಿಕಂಡ್ ಬಂದ್ ಕಚ್ಚಬಾರದ ಜಾಗಕ್ಕೆಲ್ಲಾ ಕಚ್ಚಿಬಿಟ್ಟವೆ. ಹಿಂಗಿದ್ದರೂ ಈ ಹುಸೇನ್ಸಾಗರ ಹೈದರಾಬಾದ್ನ ತುಂಬಾ ಪ್ರಸಿದ್ಧ ಟೂರಿಸ್ಟ್ ಸ್ಪಾಟ್. ಆ ಗಲೀಜು ನೀರ್ಲೇ ಸ್ಪೀಡ್ಬೋಟಿಂಗ್ ಮಾಡಕ್ ! ನಮ್ಮ ಹೇರೂರು ಹತ್ರ ಹಾರಂಗಿ ಬ್ಯಾಕ್ವಾಟರ್ಲಿ ಹಿಂಗೆನೇ ಸ್ಪೀಡ್ಬೋಟ್ಲಿ ಆಟ ಆಡಕ್. ಆ ನೀರು ಕೂಡ ಒಂಥರ ವಾಸನೆ ಬಂದದೆ. ಅದ್ ನಿಂತ ನೀರ್ನ ವಾಸನೆ. ಅಲ್ಲಿಯೇ ಸ್ಪೀಡ್ಬೋಟ್ಲಿ ಹೋಕೆ ಒಂಥರ ಆದೆ. ಇನ್ನ್ ಹುಸೇನ್ಸಾಗರ್ನ ಆ ಗಲೀಜು ನೀರ್ಲಿ...ಅಬ್ಬಾ ಅದೆಂಗೆ ಬೋಟಿಂಗ್ ಮಾಡುವೆಯಪ್ಪಾ..!
ಹುಸೇನ್ಸಾಗರ್ ಹೆಂಗನೇ ಇರ್ಲಿ. ಹೈದರಾಬಾದ್ನವ್ಕೆ ಆ ಕೆರೆ ಬಗ್ಗೆ ತುಂಬಾ ಹೆಮ್ಮೆ..! ನೀವೇನಾದ್ರೂ ಹೈದರಾಬಾದ್ನವ್ರ ಜೊತೆ ಹುಸೇನ್ಸಾಗರ್ ಕೆರೆ ಬಗ್ಗೆ ಕೆಟ್ಟದಾಗಿ ಮಾತಾಡಿರೆ ಜಗಳಕ್ಕೆನೇ ಬಂದುಬಿಟ್ಟವೆ. ಇದಕ್ಕೆ ಕಾರಣನೂ ಉಟ್ಟು. ಆ ಹುಸೇನ್ಸಾಗರ ಹತ್ರನೇ ಲುಂಬಿಣಿ ಪಾರ್ಕ್ ಇರ್ದು. ಇನ್ನು ಸ್ವಲ್ಪ ದೂರ ಹೋದ್ರೆ, ನಮ್ಮ ವಿಧಾನಸೌಧ ಥರದ ಆಂಧ್ರದ ಸೆಕ್ರೆಟರಿಯೇಟ್ ಕಂಡದೆ. ಜೊತೆಗೆ ಎನ್ಟಿಆರ್ ಸಮಾಧಿ ಮತ್ತೆ ಒಂದೊಳ್ಳೆ ಪೊರ್ಲುನ ಪಾರ್ಕ್ ಕೂಡ ಇಲ್ಲಿ ಉಟ್ಟು. ಈ ಪಾರ್ಕ್ ಹಿಂದೆನೇ ಪಿವಿಆರ್ ಸಿನಿಮಾಸ್ ಕೂಡ ಕಂಡದೆ. ಇನ್ನ್ ಐಸ್ ವರ್ಲಡ್, ಬಿರ್ಲಾ ಟೆಂಪಲ್ ಎಲ್ಲ ಇಲ್ಲೇ ಸುತ್ತಮುತ್ತ ಕಂಡುಬಂದದೆ. ಹಂಗಾಗಿ ಈ ಜಾಗ ಲವರ್ಸ್ಗಳಿಗೆ ಹೇಳಿ ಮಾಡಿಸಿದಂಗೆ ಉಟ್ಟು. ಹುಸೇನ್ಸಾಗರ್ ಸುತ್ತಮುತ್ತ ನೀವು ಎಲ್ಲಿ ನೋಡಿದ್ರೂ ನಿಮಗೆ ಇಂಥ ಜೋಡಿಗ ಕಾಂಬಕೆ ಸಿಕ್ಕಿದೆ. ಬುಹುಶಃ ಈ ಹುಸೇನ್ಸಾಗರ್ ಕೊಳಚೆ ಗುಂಡಿ ಆಗಿರದಿದ್ದರೆ ನಾ ಪ್ರತೀ ವಾರದ ರಜಾನ ಇಲ್ಲೇ ಕಳೀತ್ತಿದೆಯೇನೋ....!

- ಸುನಿಲ್ ಪೊನ್ನೇಟಿ

Thursday, 2 August 2012

ಬೊಡ್ಡ ಬದುಕಿತ್ಲೆ...


ಜೋರು ಮಳೆ.. ಹೊಳೆಕರೆ ಗದ್ದೆಗೆಲ್ಲಾ ಒಮ್ಮೆ ನೀರು ಹತ್ತಿ ಇಳ್ದುಟ್ಟು. ಇನ್ನೊಂದ್ಸಲ ನೀರು ಬಾಕೆ ಮೊದಲು ಆ ಗದ್ದೆಗಳಿಗೆಲ್ಲಾ ನಾಟಿ ಮಾಡಿ ಬಿಡೊಕು. ಅಗೆ ಸ್ವಲ್ಪ ಎತ್ತರ ಬಂದುಬಿಟ್ಟರೆ ಎಂಥ ಹೊಳೆ ಬಂದರೂ ಏನೂ ಆಲೆ. ಹಂಗಾಗಿ ನಮ್ಮ ಚೋಮುಣಿ ಬೊಳಿ ಬಿಡಿಕೆ ಮೊದ್ಲೇ ಗದ್ದೆಗೆ ಬಂದ್ ಎತ್ತುಗಳ್ನ ಕಟ್ಟಿಬಿಟ್ಟಿತ್ತ್. ಈ ವರ್ಷ ಹೋದ ವರ್ಷದಷ್ಟು ಲಾಯ್ಕ ಹೂಡಿಕೆ ಆಗ್ತಿಲ್ಲೆ. ಕರಿಯನ ಜೊತೆಗಾರ ಬಸವ ಬೆಟ್ಟಕೆ ಮೇಯಿಕೆ ಹೋಗಿರ್ಕಾಕನ ಹುಲಿ ಹಿಡ್ದ್ಬಿಟ್ಟಿತ್ತ್. ಹಂಗಾಗಿ ಈಸಲ ಕರಿಯಂಗೆ ಸರಿಯಾದ ಜೋಡಿ ಸಿಕ್ಕದೆ ಚೋಮುಣಿ ಪರದಾಡಿಬಿಟ್ಟಿತ್ತ್. ಕೊನೆಗೆ ಎಲ್ಲೂ ಎತ್ತು ಸಿಕ್ಕದೆ, ಅರಕಲಗೂಡು ಸಂತೆಗೆ ಹೋಗಿ ಒಂದು ಮೂಡ್ಸುಮೆ ಎತ್ತುನ ಹೊಡ್ಕಂಡ್ಬಂದಿತ್ತ್. ಆ ಎತ್ತೋ ಸಕ್ಕತ್ತ್ ಗಾಂಚಲಿ. ಚೋಮುಣಿ ಬಿಟ್ಟರೆ ಬೇರೆ ಯಾರ್ನ ಕೂಡ ಅದ್ ಹತ್ರ ಸೆರಿಸ್ತಿತ್ಲೆ. ಒಂದ್ಸಲ ಸಾಯಂಕಾಲ ಕೊಟ್ಟಿಗೆಗೆ ಹುಲ್ಲು ಹಾಕಿಕೆ ಹೋಗಿದ್ದ ಚೋಮುಣಿನ ಮಂಞನ ಆ ಮೂಡ್ಸುಮೆ ಎತ್ತ್ ಎತ್ತಿ ಬಿಸಾಕಿತ್ತ್. ಚೋಮುಣಿನ ಹೆಣ್ಣ್ಗಂತೂ ಒದ್ದ ರಭಸಕ್ಕೆ ಮುಂದಿನ ಎರಡು ಹಲ್ಲೇ ರಟ್ಟಿಹೋಗಿತ್ತ್. ಹಂಗಾಗಿ ಎಲ್ಲವೂ ಸೇರಿ ಈ ಎತ್ತ್ಗೆ ಬೊಡ್ಡ ತಾ ಹೆಸ್ರು ಇಟ್ಟಿದ್ದೊ. ಈ ಬೊಡ್ಡ ಸ್ವಲ್ಪ ಎತ್ತರ. ಕರಿಯ ನಾಡ್ ಎತ್ತ್ಗಳಂಗೆ ಕುಳ್ಳಜಾತಿ. ಹಂಗಾಗಿ ಹೂಡಿಕಾಕನ ಕರಿಯ ಏರಿ ಮೇಲೆ ಹತ್ತಿದರೆ, ಬೊಡ್ಡ ಕೆಸರ್ಲಿ ಫಳ ಫಳತಾ ಓಡಿಬಿಡ್ತಿತ್ತ್. ಈ ಎರಡು ಎತ್ತುಗಳ್ನ ಕಟ್ಟಿಕಂಡ್ ಒಂದು ಸಾಲು ಹೂಡಿಕಾಕನನೇ ಬೆಳಗ್ಗೆ ತಿಂದ್ ಬಂದಿದ್ದ ಮೂರು ಮೊಟ್ಟೆ ಕರಗಿ ಹೋಗಿರ್ತಿತ್ತ್. 8 ಗಂಟೆಗೆ ಹೆಣ್ಣ್ ಕಟ್ಟಿಕಂಡ್ ಬರ್ತಿದ್ದ ಹತ್ತು ರೊಟ್ಟಿ ಯಾವ ಮೂಲೆಗೂ ಸಾಕಾಗ್ತಿತ್ಲೆ.
ತಲೆ ಮೇಲೆ ಗೊರ್ಗ, ಎಡಕೈಲಿ ನೇಗಿಲು ಹಿಡಿ ಮತ್ತೆ ಹಗ್ಗ. ಬಲಕೈಲಿ ಕಾಫಿ ಗಿಡದ ಕೋಲು ಹಿಡ್ಕಂಡ್ ಚೋಮುಣಿ `ಹರ ಹರ ಹೀ...ಹೀ...' ತಾ ಹೇಳಿರೆ ಎಂಥ ಎತ್ತುಗಳೂ ಬಾಲನ ತೊಡೆಸೆರೆಗೆ ಹಾಕಿಕಂಡ್ ನೇಗಿಲು ಎಳೀತ್ತಿದ್ದೊ. ಆದ್ರೆ ಈ ಮೂಡ್ಸುಮೆ ಎತ್ತು ಬೊಡ್ಡ ಮಾತ್ರ ಚೋಮುಣಿ ಮಾತಿಗೆ ಬಗ್ಗುವಂಗೆ ಕಾಣ್ತಿತ್ಲೆ. ಸ್ವಲ್ಪ ಜೋರಾಗಿ ಹಗ್ಗ ಎಳ್ದರೆ ಹುಚ್ಚು ಕುದುರೆ ಓಡ್ದಂಗೆ ನೊಗಂದ ಜಾರಿಸಿಕಂಡ್ ಓಡ್ತಿತ್ತ್. ಕೆಸ್ರ್ಲಿ ಎದ್ದ್ ಬಿದ್ದ್ ಹೆಂಗೆಲ್ಲಾ ಕಷ್ಟಪಟ್ಟು ನೊಗಕ್ಕೆ ಕಟ್ಟಿರೆ ಒಂದೆರಡು ಹೆಜ್ಜೆ ನಡಿತಿತ್ತಷ್ಟೆ...ಮತ್ತೆ ಸುಮ್ಮನೆ ನಿಂತ್ಕಂಡ್ಬಿಡ್ತಿತ್ತ್. `ಹರ..ಹರ..' ತಾ ಹೇಳ್ಕಂಡ್ ಅದ್ರ ಬೆನ್ನು ಮೇಲೆ ಬಾರಿಸಿರೆ, ಗದ್ದೆ ಒಳೆಗೆನೇ ಕುದ್ದ್ಕಂಡ್ಬಿಡ್ತಿತ್ತ್. ಎಷ್ಟ್ ಹೊಡ್ದರೂ ಅಂದಾಡ್ತಿತ್ಲೆ. ಯಾಕಾದ್ರೂ ಈ ಎತ್ತ್ನ ತಕ್ಕಂಡ್ ಬಂದೆನೋತಾ ಚೋಮುಣಿಗೆ ಅನ್ನಿಸಿಕೆ ಶುರುವಾತ್. ಬೇರೆ ಯಾರಿಗಾರೂ ಮಾರಿಬಿಡ್ನೊತೇಳಿರೆ, ಇಂವಂಗೆ ಎತ್ತುಕೊಡ್ಸಿದ್ದ ಮಾಪ್ಳೆ ನಾಪತ್ತೆಯಾಗಿತ್ತ್.
ಆರಿದ್ರ ಮಳೆ ಹಿಡ್ಕಣ್ತ್. ಹಂಚು ಒಡ್ದು ಹೋಗುವಂಗೆ ದೊಡ್ಡ ದೊಡ್ಡ ಹನಿಗಳ ಮಳೆ. ಕೊಟ್ಟಿಗೆ ಮಾಡ್ಗೆ ದಪ್ಪಕ್ಕೆ ಹುಲ್ಲು ಹೋಸಿದ್ದರೂ ಸ್ವಲ್ಪ ಸ್ವಲ್ಪ ನೀರ್ ಸೋರಿ ಒಳಗೆ ಬರ್ತಿತ್ತ್. ನಾಡ್ ದನಗ ಇದ್ನೆಲ್ಲಾ ಹೆಂಗಾರೂ ಸಹಿಸಿಕಂಡವೆ. ಆದ್ರೆ ಮೂಡ್ಸುಮೆ ದನ ಬೊಡ್ಡಂಗೆ ಮಾತ್ರ ಆ ಮಳೆಗಾಲ ಸಹಿಸಿಕಣಿಕೆ ಆತ್ಲೆ. ಮೊದ್ಲ ದಿನ ಹುಲ್ಲು ತಿನ್ನದೆ ಸುಮ್ಮನೆ ನಿಂತ್ಕಂಡಿತ್ತ್. ಎರಡನೇ ದಿನ ಗಂಜಿ ಕೊಟ್ಟರೂ ಕುಡ್ತ್ಲೆ. ಮೂರನೇ ದಿನ ಕೋಟಕ್ಕೆ ಕೈಕಾಲೆಲ್ಲಾ ಉದ್ದುದ್ದಕ್ಕೆ ಮಾಡಿಕಂಡ್ ಬಿದ್ದ್ಕಂಡ್ ಬಿಡ್ತ್. ಚೋಮುಣಿನ ಹೆಣ್ಣ್ ಅವ್ಳಿಗೆ ಗೊತ್ತಿದ್ದ ಎಲ್ಲಾ ಥರದ ನಾಡ್ ಮದ್ದ್ ಕೊಟ್ಟ್ ನೋಡ್ತ್...ಹೂಂ, ಪ್ರಯೋಜನ ಆತ್ಲೆ. ಕೊನೆಗೆ ಬದುಕಿರೆ ಬದುಕಿಬಿಡ್ಲಿತೇಳಿ ಚೋಮುಣಿ ಕೋಳಿಕಾಡ್ಗೆ ಹೋಗಿ ಒಂದು ಬಾಟ್ಲ್ ಎನ್ಎಸ್ ತಂದ್ ಕುಡ್ಸಿತ್. ಆ ಬೊಡ್ಡ, ಒಂದು ಹನಿ ಬಿಡದೇ ಎಲ್ಲಾ ಕುಡ್ದು ಮುಗ್ಸಿತ್. ಇನ್ನು ಹುಷಾರಾದೆತಾ ತಿಳ್ಕಂಡ್ ಎಲ್ಲವು ಹೋಗಿ ಮಲಗಿದೊ... ಆದ್ರೆ ಬೆಳಿಗ್ಗೆ ಎದ್ದು ನೋಡಿಕಾಕನ ಕಥೆನೇ ಬೇರೆ ಆಗಿತ್ತ್....ಬೊಡ್ಡ ಬದುಕಿತ್ತ್ಲೆ...

- ಸುನಿಲ್ ಪೊನ್ನೇಟಿ...
arebhase@gmail.com

Wednesday, 1 August 2012

ಲಬ್ ಡಬ್...ನೋವಿನ ಮಿಡಿತ !


`ಐಲವ್ ಯೂ....' ಬೆಳಗ್ಗೆಂದನೇ ಏನೋ ಹೇಳೊಕೂತ ನಮೃತಾ ಪೇಚಾಡ್ತಿತ್ತ್ತಾ ನಂಗೊತ್ತಿತ್ತ್. ಆದ್ರೆ ಇದೇ ಮೂರು ಶಬ್ದ ಅವ್ಳ ಬಾಯಿಂದ ಬಂದದೆತಾ ಮಾತ್ರ ನಾ ಯೋಚನೆ ಮಾಡಿತ್ಲೆ. ಅವ್ಳು ಬುಕ್ ಮಾಡಿದ್ದ ಹೊಸ ಅಲ್ಟೋ ಕಾರ್ ಡೆಲಿವೆರಿ ಸಿಕ್ಕಿದ ಕೂಡ್ಲೇ ಮೊದ್ಲು ಬಂದದ್ದೇ ನನ್ನ ಮನೆಗೆ. ಜೊತೆಗೆ ಒಂದಿಷ್ಟ್ ಸ್ವೀಟ್ಸ್... ಆಗ ನಾ.. `ಮೂರು ಚಿಲ್ಲರೆ ಲಕ್ಷದ ಕಾರ್ ತಕ್ಕೊಂಡೊಳಾ... ಅರ್ಧ ಕೆಜಿ ಸ್ವೀಟ್ಸ್ ಕೊಟ್ಟ್ ಕೈ ತೊಳ್ಕಣುದು ಬೇಡ.' ತಾ ತಮಾಷೆ ಮಾಡಿದ್ದೆ. ಅದಕ್ಕವ್ಳು ನಗಾಡಿಕಂಡ್ ಸುಮ್ಮನೆ ಆಗಿತ್ತ್. ಆದ್ರೆ ರಾತ್ರಿ ಕಾಲ್  ಮಾಡಿ, `ನಾಳೆ ನೀ ರಜೆ ಮಾಡೊಕು. ನಾವಿಬ್ಬರೂ ಬನ್ನೇರುಘಟ್ಟಕ್ಕೆ ಪೋಯಿ. ವಾಪಸ್ ಬಾಕಾಕನ ಬರ್ಜರಿ ಟ್ರೀಟ್ ಕೊಟ್ಟನೆ' ತಾ ಹೇಳಿತ್ತ್. ನಾ ಒಪ್ಪದಿರ್ಕಾಕನ ಹಠ ಮಾಡಿ ಒಪ್ಪಿಸಿತ್ತ್.
ನಮೃತಾ ನಂಗೆ ತುಂಬಾ ಹಳೇ ಫ್ರೆಂಡ್. ಆಕರ್ುಟ್ ಕಾಲದ ಫ್ರೆಂಡ್...ಯಾರ್ ಮೊದ್ಲು ಫ್ರೆಂಡ್ ರಿಕ್ವೆಸ್ಟ್ ಕಳ್ಸಿದ್ದ್ತಾ ನಂಗೆ ಈಗ್ಲೂ ಗೊತ್ಲೆ. ಆದ್ರೆ ಚಾಟಿಂಗ್ ಮಾಡ್ತಾ, ಮಾಡ್ತಾ ತುಂಬಾ ಕ್ಲೋಸ್ ಫ್ರೆಂಡ್ ಆದೊ. ಕೊನೆಗೆ ಫೋನ್ ನಂಬರ್ ಕೂಡ ಎಕ್ಸ್ಚೇಂಜ್ ಆತ್. ಎಸ್ಎಮ್ಎಸ್ಂದ ಶುರುವಾದ ಹರಟೆ ಫೋನ್ ಕಾಲ್ ವರೆಗೆ ಬಾತ್. ಆದ್ರೆ ಒಂದು ದಿನನೂ ಮುಖತಃ ಭೇಟಿ ಆಗಿತ್ಲೆ. ಬಹುಶ: ನಾನ್ ಚೆನ್ನೈ ಮತ್ತೆ ಅವ್ಳು ಭಟ್ಕಳಲಿ ಇದ್ದದ್ ಕಾರಣ ಇರುದೇನೋ..
ಎರಡು ವರ್ಷದ ಹಿಂದೆ ನಂಗೆ ಬೆಂಗಳೂರ್ಗೆ ಟ್ರಾನ್ಸ್ಫರ್ ಆತ್. ನಾ ಆರ್ಕುಟ್ಂದ ಫೇಸ್ಬುಕ್ಗೆ ಬದಲಾಗಿದ್ದೆ. ಅಷ್ಟೊತ್ತಿಗೆ ನನ್ನ ಮೊಬೈಲ್ ಕಳ್ದೋತ್. ನಮೃತಾ ಜೊತೆಗಿದ್ದ ಕಾಂಟ್ಯಾಕ್ಟ್ ಕೂಡ ನಿಂತ್ಹೋತ್. ಫೇಸ್ಬುಕ್ಗೆ ಬಂದ ಮೇಲೆ ಆರ್ಕುಟ್ ಓಪನ್ ಮಾಡುದೇ ತುಂಬಾ ಬೇಸರ ಆಗ್ತಿತ್ತ್. ಹಂಗೆ ಕ್ರಮೇಣ ನಮೃತಾ ಕೂಡ ಮರ್ತೇ ಹೋಗಿಬಿಟ್ಟಿತ್ತ್. ಮೂರು ತಿಂಗಳ ಹಿಂದೆ ಇರೋಕು ಕಂಡದೆ. ನಾ ಜಿಮೇಲ್ ಚೆಕ್ ಮಾಡಿಕಂಡ್ ಇರ್ಕಾಕನ ಅಲ್ಲಿ ನಮ್ರತಾ ಆನ್ಲೈನ್ಲಿ ಇತ್ತ್....ಇನ್ನೇನ್ ನಾ ಅವ್ಳಿಗೊಂದು ಮೆಸೆಜ್ ಹಾಕೊಕು, ಅಷ್ಟೊತ್ತಿಗೆ ಆಕಡೆಂದ ಅವ್ಳೇ ಮೆಸೆಜ್ ಮಾಡ್ತ್ `ಏ..ಪುಣ್ಯಾತ್ಮ, ಎಲ್ಲಿ ಹೋಗಿದ್ದೆ ಇಷ್ಟ್ ದಿನ? ನನ್ನ ಮರ್ತೇ ಹೋಗಿಬಿಡ್ತಾ?'ತಾ ಕೇಳ್ತ್. ಅವ್ಳಿಗೆ ನಾ ಬೆಂಗಳೂರಿಗೆ ಬಂದದ್, ಮೊಬೈಲ್ ಕಳ್ಕಂಡದ್...ಹಿಂಗೆ ಎಲ್ಲಾ ವಿಷಯ ಹೇಳ್ದೆ. ಆಶ್ಚರ್ಯತೇಳಿರೆ, ಅವ್ಳಿಗೂ ಬೆಂಗ್ಳೂರ್ಲಿ ವಿಪ್ರೋಲಿ ಕೆಲ್ಸ ಆಗಿತ್ತ್. ಬಿಟಿಎಂ ಲೇ ಔಟ್ಲಿ ಅವ್ಳ ಮನೆ. 
ಹಂಗೆ ನಮ್ಮ ಕಾಂಟ್ಯಾಕ್ಟ್ ಮತ್ತೆ ಶುರುವಾತ್. ಒಂದು ದಿನ ಇಬ್ಬರೂ ಮೀಟ್ ಮಾಡೋಕೂತಾ ಡಿಸೈಡ್ ಮಾಡ್ದೊ. ಅದಕ್ಕೆತೇಳಿ ಒಂದು ಭಾನುವಾರಕ್ಕೆ ಡೇಟ್ ಫಿಕ್ಸ್ ಆತ್. ಅವ್ಳ ಮನೆಲೇ ಮೀಟ್ ಮಾಡ್ನೊತಾ ಮಾತಾಡಿಕೊಂಡೊ. ಆ ದಿನನೂ ಬಾತ್. ಬರೀ ಫೋಟೋಗಳ್ನ ನೋಡಿಕಂಡ್ ಹರಟೆ ಹೊಡೀತ್ತಿದ್ದ ನಾವು, ಆ ದಿನ ನಮೃತಾ ಮನೇಲಿ ಮೀಟ್ ಆದೋ. ಮಧ್ಯಾಹ್ನಕ್ಕೆ ಅವ್ಳ ಅಮ್ಮ 
ಒಳ್ಳೇ ಊಟ ಮಾಡಿ ಬಡಿಸಿದ್ದೊ. ಇದಾದ್ಮೇಲೆ ಪ್ರತೀ ಭಾನುವಾರ ನಾ ನಮೃತಾ ಮನೇಲಿ ಹಾಜರಾಗ್ತಿದ್ದೆ. ನಾ ಹೋತ್ಲೆತೇಳಿರೆ, ಅವ್ಳ ಅಮ್ಮನೇ ಫೋನ್ ಮಾಡಿ ಕರಿತಿದ್ದೊ. ಬೇರೆ ದಿನ ಸ್ಪೆಷಲ್ ಅಡುಗೆ ಮಾಡಿರೆ, ನಮೃತಾ ಕೈಲಿ ನಂಗೆ ಕೊಟ್ಟು ಕಳಿಸ್ತಿದ್ದೊ...
ಅಲ್ಟೋ, ನಮೃತಾಳ ಕನಸಿನ ಕಾರ್. ಅವ್ಳು ಮನಸ್ಸು ಮಾಡಿದ್ದರೆ ಅದಕ್ಕಿಂತ ಒಳ್ಳೇ ಕಾರ್ ತಕ್ಕಣಕ್ಕಾಗಿತ್ತ್. ಆದ್ರೆ, ಅದ್ಯಾಕೋನಮ್ರತಾ ಅಲ್ಟೋ ಕಾರೇ ತಕ್ಕಣೊಕುತಾ ಹಠ ಹಿಡ್ದಿತ್ತ್. ಕಾರ್ ಬುಕ್ ಮಾಡಿಕೆ ಅವ್ಳ ಜೊತೆ ನಾ ಕೂಡ ಹೋಗಿದ್ದೆ. ಷೋರೂಂನವು ಇವ್ಳಿಗೆ ಬೇರೆ ಹೊಸ ಮಾಡೆಲ್ನ ಕಾರುಗಳ್ನ ತೋರ್ಸಿದೋ. ತುಂಬಾ ತಲೆ ತಿಂದೋ... ಆದ್ರೆ ನಮೃತಾ ಮಾತ್ರ ಮನಸ್ಸು ಬದಲಾಯಿಸಿತ್ಲೆ. ಅಲ್ಟೋ ಕಾರ್ನೇ ಬುಕ್ ಮಾಡಿತ್ತ್. 
ನಮೃತಾ ಅಪ್ಪನ ಹತ್ರನೂ ಕಾರ್ ಇತ್ತ್. ಹಂಗಾಗಿ ಇವ್ಳು ತುಂಬಾ ಚಿಕ್ಕದರಲ್ಲೇ ಡ್ರೈವಿಂಗ್ ಕಲ್ತಿತ್ತ್. ಒಳ್ಳೇ ಡ್ರೈವರ್ ಕೂಡ ಹೌದು. ಬನ್ನೇರುಘಟ್ಟದ ಆ ರೋಡ್ಲಿ ಇದ್ ನಂಗೆ ಗೊತ್ತಾಗಿತ್ತ್. ನಾವು ಬನ್ನೇರುಘಟ್ಟಕ್ಕೆ ಬೆಳಗ್ಗೆ ಹೋದವು ಸಂಜೆ ತನಕ ಸುತ್ತಾಡಿದ್ದೊ. ಮಧ್ಯಾಹ್ನ ಊಟಕ್ಕೆ ಕೂಡ ಯೋಚನೆ ಆಗಿತ್ಲೆ. ಸಾಯಂಕಾಲ ಆಗ್ತಿದ್ದಂಗೆ ಅಲ್ಲಿಂದ ನಾವು ವಾಪಸ್ ಹೊರಟೊ. ಬಾಕಾಕನ ಹೈದರಾಬಾದ್ ಬಿರಿಯಾನಿ ಹೌಸ್ ಹತ್ರ ಕಾರ್ ನಿಲ್ಲಿಸಿತ್ತ್. ಅಷ್ಟೊತ್ತು ಇಲ್ಲದ ಹಸಿವು, ಆಗ ಶುರುವಾತ್ ನೋಡಿ...ಧಂ ಬಿರಿಯಾನಿ ಆರ್ಡರ್ ಮಾಡಿ, ಕೋಲ್ಡ್ ಕಾಫಿ ಕುಡಿತಾ ಕುದ್ದಿದ್ದಂಗೆ ನಮೃತಾ ಮತ್ತೆ ಮಾತು ಶುರು ಮಾಡ್ತ್..`ಆಕಾಶ್, ನಿಂಗೆ ನಾ ತುಂಬಾ ಮುಖ್ಯ ವಿಷಯ ಒಂದು ಹೇಳೊಕು...' ನಾ ಬಾಯಿಂದ ಸ್ಟ್ರಾ ತೆಗೆಯದೆ ಏನುತಾ ಕೇಳುವಂತೆ ಅವಳ ಮುಖ ನೋಡ್ದೆ...ಆಗ ಅವ್ಳು, ನನ್ನ ಮುಖ ಹತ್ರ ಬಂದ್ ನನ್ನ ಕಣ್ಣ್ಗಳ್ನ ನೋಡಿಕಂಡ್ `ಐ ಲವ್ ಯೂ....'ತಾ ಹೇಳ್ತ್. ಆ ಮಾತ್ ಕೇಳ್ತಿದ್ದಂಗೆ ನಂಗೆ ಸೆರೆ ಹತ್ತಿದಂಗೆ ಆತ್. ಅವಳೇ ನನ್ನ ತಲೆಗೆ ಸ್ವಲ್ಪ ನೀರ್ ಹಾಕಿ ತಟ್ಟಿತ್...ಕೆಮ್ಮು ನಿಂತ ಮೇಲೆ ನಾ ಹೇಳ್ದೆ...
`ನಮೃತಾ...ನಿನ್ನ ನಾ ಯಾವತ್ತು ಕೂಡ ಆ ಭಾವನೆಲಿ ನೋಡ್ತ್ಲೇ. ನೀ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ... ನನ್ನ ಹೃದಯನ ತುಂಬಾ ಹಿಂದೆನೇ ಬೇರೊಬ್ಬಳಿಗೆ ಕೊಟ್ಟು ಬಿಟ್ಟೊಳೆ... ಮತ್ತೆ ಅದ್ನ ಹಂಚಿಕಂಬಕೆ ಆಲೆ ಸ್ಸಾರಿ...'ತಾ ಹೇಳಿ ತಲೆ ಎತ್ತಿ ನೋಡಿರೆ, ಅಲ್ಲಿ ನಮೃತಾ ಇತ್ಲೆ... ಜೋರಾಗಿ ಶಬ್ದ ಮಾಡ್ಕಂಡ್ ಹೋದ ಕಾರ್ ಶಬ್ದ ಈಗ್ಲೂ ನನ್ನ ಕಿವಿಲಿ ಗುಂಯ್ತಾ ಹೇಳ್ತುಟ್ಟು... ಅದೇ ನಮೃತಾಂಗೆ ನಾಳೆ ಮದುವೆ ! ಹುಡುಗ ಅಮೆರಿಕಾಲಿ ಸಾಫ್ಟ್ವೇರ್ ಎಂಜಿನಿಯರ್. ಇನ್ನು 15 ದಿನಲಿ ಅವ್ಳೂ ಅಮೆರಿಕಕ್ಕೆ ಹೋಗ್ತುಟ್ಟು.... ನಾ ಮಾತ್ರ ನನ್ನ ಕಳ್ದು ಹೋದ ಹೃದಯನ ಹುಡುಕುತ್ತನೇ ಒಳೆ...

- ಸುನಿಲ್ ಪೊನ್ನೇಟಿ
arebhase@gmail.com