Sunday, 10 February 2013

ಸೋಂಪನ ರೇಡಿಯೋ


ಸೋಂಪ ಬೆಳಗ್ಗೆ ಐದುಮುಕ್ಕಾಲಕ್ಕೆ ಸರಿಯಾಗಿ ಎದ್ದುಬಿಟ್ಟದೆ. ಎದ್ದಂಗೆನೇ ದೇವ್ರಿಗೆ ಕೈಮುಗ್ದದೆನೋ ಬಿಟ್ಟದೆನೋ ಗೊತ್ಲೆ, ರೇಡಿಯೋ ಆನ್ ಮಾಡಿಕೆ ಮಾತ್ರ ಮರೆಯಲ್ಲೆ... `ಬೆಳಗ್ಗೆ ಬೆಳಗ್ಗೆ ಐದೂಮುಕ್ಕಾಲಕ್ಕೆ ರೇಡಿಯೋಲಿ ಎಂಥದ್ದ್ ಇದ್ದದೆ ಮಣ್ಣಾಂಗಟ್ಟಿ..'ತಾ ನೀವು ಕೇಳಿಯರಿತಾ ಗೊತ್ತು...ಆದ್ರೆ ಸೋಂಪಂಗೆ ರೇಡಿಯೋಲಿ ಇಂಥದ್ದೇ ಇರೋಕೂತೇನೂ ಇಲ್ಲೆ. ರೇಡಿಯೋ ಕಿವಿ ಹಿಂಡಿದ ಕೂಡ್ಲೇ ಪುಸ್ಸ್...ತಾ ಬಂದದೆಯಲ್ಲಾ ಶಬ್ದ, ಅದಿದ್ದರೆ ಸಾಕ್ ! ಐದು ಐವತ್ತೈದರ ವರೆಗೆ ಅದೇ ಶಬ್ದ ಸೋಂಪಂಗೆ  ಕರ್ಣಾನಂದ ! ಐದು ಐವತ್ತೈದ್ ಆದ್ಮೇಲೆ ಟೊಂಯ್...ತಾ ಒಂದು ಶಬ್ದ ಆದೆ....ಅದೋ ಕಿವಿಯೊಳಗೆಲ್ಲಾ ನುಗ್ಗಿ, ಮೆದುಳುನ ಎಲ್ಲಾ ನರಗಳಿಗೆ ತಾಂಗಿ, ಕಾಲ್ನ ಹೆಬ್ಬೆರಳ ತುದಿ ವರೆಗೆ ಬರೊಕು. ಆಗ್ಲೇ ಅವಂಗೆ ಸಮಾಧಾನ. ಸರಿ 6 ಗಂಟೆ ಆಕಾಕನ.. `ಇದು 103.1 ಮೆಗಾಹರ್ಟ್ಸ್, ಆಕಾಶವಾಣಿ ಮಡಿಕೇರಿ ಕೇಂದ್ರ....ಇವತ್ತು ಶಾಲಿವಾಹನ ಶಕೆ----ಅಂದ್ರೆ 2013ನೇ ಇಸವಿ---'ತೇಳುವ ತಿಥಿ ನಕ್ಷತ್ರ ಏಲ್ಲಾ ಕೇಳಿ, ಆರು ಐದಕ್ಕೆ `ಈಗ ಇಂಗ್ಲೀಷ್ನಲ್ಲಿ ವಾರ್ತೆಗಳು, ದೆಹಲಿ ಕೇಂದ್ರದಿಂದ' ತಾ ರೇಡಿಯೋದಿಂದ ಕೇಳಿದ ಮೇಲೆನೇ ಕಟ್ಲ್ಂದ ಸೋಂಪನೆಲಕ್ಕೆ ಕಾಲಿಡುದು....ಆದಿನ ಹೆಣ್ಣು ಧ್ವನಿ ಇದ್ದರೆ, ಸೋಂಪನ ಮೂಡ್ ಲಾಯ್ಕ ಇದ್ದದೆ. ಗಂಡು ಧ್ವನಿಯೇನಾದ್ರೂ ಕೇಳ್ತ್ತೇಳಿರೆ, ಮುಗ್ದೇ ಹೋತ್, ಅಂದ್ ಅವ್ನ ಹೆಣ್ಣ್ನ ಗ್ರಹಚಾರ ಕೆಟ್ಟುಟ್ಟುತಾನೇ ಲೆಕ್ಕ !
ಆದ್ರೆ ಇಂದ್ ಎಲ್ಲಾ ಉಲ್ಟಾ...! ಗುಳಿಗಂಗೆ ಬಿಟ್ಟ ಹುಂಜ ಕೂಗ್ತಿದ್ದಂಗೆ, ಸೋಂಪಂಗೆ ಪಟ್ಟತಾ ಎಚ್ಚರ ಆತ್...ಅಭ್ಯಾಸ ಬಲಲಿ ಬಲಗಡೆಗೆ ಕೈಹಾಕಿ ರೇಡಿಯೋ ತಕ್ಕಣ್ತ್. ರೇಡಿಯೋನ ಹೊಟ್ಟೆಮೇಲೆ ಇಟ್ಕಂಡ್, ಅದ್ರ ಕಿವಿ ತಿರುಗಿಸ್ತ್. ಎಂಥದ್ದೂ ಶಬ್ದ ಕೇಳ್ತಿಲ್ಲೆ...! ಇನ್ನೂ ಜೋರಾಗಿ ತಿರುಗಿಸ್ತ್... ಊಹುಂ....ಸತ್ತ ಹೆಣಕ್ಕೂ ಸೋಂಪನ ರೇಡಿಯೋಕ್ಕೂ ವ್ಯತ್ಯಾಸನೇ ಇಲ್ಲೆ ! ಎಲ್ಲಿತ್ತೋ ಸಿಟ್ಟು, ಎಲ್ಲಾ ಹೆಣ್ಣ್ನ ಮೇಲೆ ಕಾರಿಕೆ ಶುರುಮಾಡ್ತ್...`ಏಯ್...ಬಾನೆ ಇಲ್ಲಿ..' ಹಟ್ಟಿ ಬಾಚ್ತಿದ್ದ ಅವ್ಳಿಗೆ ಸೋಂಪ ಕರ್ದದ್ ಕೇಳಿತ್ಲೆ. ಮತ್ತೆ ಸೋಂಪ ಹಾಸಿಗೆಂದನೇ ಕಿರ್ಚಿತ್, `ರೇಡಿಯೋದಂಗೆ ನಿನ್ನ ಬಾಯಿಗೂ ಎಂಥಾಗುಟ್ಟು ರೋಗ? ಕರೆಯುದು ಕೇಳ್ದುಲ್ಲೆನೇ....?' ಹಟ್ಟಿ ಬಾಚುವ ಚರಪರ ಸದ್ದುಲಿ ಅವಳಿಗೆಲ್ಲಿ ಕೇಳ್ದೆ ಈ ಸೋಂಪನ ಸ್ವರ ? ರೇಡಿಯೋ ಕೈಕೊಟ್ಟ ಸಿಟ್ಟು, ಹೆಣ್ಣ್ ಪ್ರತಿಕ್ರಿಯೆ ಕೊಡದಿರ್ವ ಸಿಟ್ಟು ಎರಡೂ ಸೇರಿಕಂಡ್ ಸೋಂಪನ ಮೈಮೇಲೆ ದೇವ್ರು ಬಂದಂಗೆ ಆತ್. ಕಟ್ಲ್ಂದ ಜೋರಾಗಿ ಹಾರಿ, ಅಲ್ಲೇ ಇದ್ದ ನಾಯಿ ಓಡ್ಸುವ ದೊಣ್ಣೆ ಹಿಡ್ಕಂಡ್, ಅಡುಗೆ ಮನೆ ಕಡೆ ಓಡ್ತ್...ಹೆಣ್ಣ್ ಅಲ್ಲಿ ಇತ್ಲೆ. `ಎಲ್ಲಿ ಹಾಳಾಗಿ ಹೋಗ್ಯೊಳನೆ..'ತಾ ಬೈಯ್ಕಂಡ್ ಇನ್ನೇನ್ ಹೊರಗೆ ಹೋಕು, ಅಷ್ಟೊತ್ತಿಗೆ ಅಲ್ಲೇ ಇದ್ದ ಹುರ್ದಿಟ್ಟಿದ್ದ ಹಂದಿ ಸೆಳ್ಳಿ ಕಂಡತ್. ನಿನ್ನೆ ರಾತ್ರಿ ತಿಂದ್ ಉಳ್ದಿದ್ದ ಹಂದಿ ಸೆಳ್ಳಿ ಅದ್. ಅದ್ನ ನೋಡಿಯಾಕನ ಇನ್ನೂ ಮುಖ ತೊಳ್ತ್ಲೆತೇಳುದು ಮರ್ತು ಹೋತ್. ರೇಡಿಯೋ ಕೆಲ್ಸ ಮಾಡ್ತಿಲ್ಲೆತೇಳುವ ಸಿಟ್ಟೂ ಇಳ್ದ್ ಹೋತ್. ಕಣ್ಣು ಮುಂದೆ ಇದ್ದದ್ ಹಂದಿ ಸೆಳ್ಳಿ ಮಾತ್ರ !
ಪ್ಲೇಟ್ಲಿ ಹಂದಿ ಸೆಳ್ಳಿ ಖಾಲಿ ಆಕಾಕನ, ಸೋಂಪನ ಹೆಣ್ಣ್ ಅಲ್ಲಿಗೆ ಬಾತ್. ಅಷ್ಟು ಹೊತ್ತ್ ಇಲ್ಲದ ರೇಡಿಯೋ ಯೋಚನೆ ಆಗ ಬಾತ್...`ಯಾರ್ನೆ ಅದ್ ನನ್ನ ರೇಡಿಯೋ ಮುಟ್ಟಿದ್ ? ಹಾಡ್ತನೇ ಇಲ್ಲೆ...'ತಾ ಸೋಂಪ ಕೇಳಿರೆ, `ಅಮ್ಮಪ್ಪಾ....ನಂಗೊತ್ಲೆ'ತಾ ಹೆಣ್ಣ್ ಉತ್ತರ ಕೊಟ್ಟತ್. ಸೋಂಪಂಗೆ ಮತ್ತೆ ಸಿಟ್ಟ್ ಬಾತ್...
`ಗೊತ್ಲೆತಾ ಹೇಳಿರೆ ಹೆಂಗೆ? ನಿಂಗೆಷ್ಟು ಸಲ ಹೇಳ್ತ್ಲೆ ? ಮಕ್ಕಳಿಗೆ ರೇಡಿಯೋ ಮುಟ್ಟಿಕೆ ಬಿಡ್ಬ್ಯಾಡತಾ.. ಈಗ ನೋಡ್, ರೇಡಿಯೋ ಹಾಳಾಗುಟ್ಟು.'  
`ರೇಡಿಯೋ ಹಾಳಾತ್ಲೆ, ಒಂದೂ ಆತ್ಲೆ...ನಾನೇ ಅದ್ರ ಬ್ಯಾಟರಿ ತೆಗ್ದಿಟ್ಟೊಳೆ.'
`ಎಂಥಕ್ಕೆ...ಎಂಥಕ್ಕೆ ನೀ ಬ್ಯಾಟರಿ ತೆಗ್ದದ್...?'
`ಸೆಗಣಿ ಸಾರ್ಸಿಕೆ ಬ್ಯಾಟರಿ ಬೇಕಿತ್ತ್....ಈಗ ಎಂತಾಥ್? ಹೊಸ ಬ್ಯಾಟರಿ ಅಂಗಡಿಂದ ತಂದರೆ ಆತ್..'
ಹೆಣ್ಣ್ ಮಾತ್ ಕೇಳಿ ಸೋಂಪ ಸುಸ್ತು...!
 - `ಸುಮ'

ಅರೆಭಾಷೇಲಿ ನೀವೂ ಬರೆಯಕ್.. ಬರ್ದದನ್ನ ಈಮೇಲ್ ಮಾಡಿ..
arebhase@gmail.com

Monday, 10 September 2012

ಗಿಣಿಯು ಪಂಜರದೊಳಗಿಲ್ಲ...


ಗಿಣಿ...ಅವ್ಳ ಹೆಸ್ರೇ ಹಂಗೆ. ಅಪ್ಪ, ಅಮ್ಮನ ಒಬ್ಳೇ ಮುದ್ದಿನ ಕೂಸು. ಗಿಣಿ ಥರನೇ ಸಾಕಿದ್ದೋ...ಥೇಟ್ ಪಂಜರದ ಗಿಣಿಯಂಗೆ ! ಅಂತಿಂಥ ಪಂಜರ ಅಲ್ಲ, ಚಿನ್ನದ ಪಂಜರ ! ಗಿಣಿಗೂ ಕನಸುಗಳಿದ್ದೋ...ಆದ್ರೆ ಆ ಕನಸುಗಳೆಲ್ಲಾ ಚಿನ್ನದ ಪಂಜರದೊಳಗೆ ಕರಗಿಹೋಗಿತ್ತ್. ಮನೆ ಬಿಟ್ಟು ಹೊರಗೆ ಹೋಗುವಂಗೆನೇ ಇಲ್ಲೆ....ಎಲ್ಲಾ ಕುದ್ದಲ್ಲಿಗೇ ಬರ್ತಿತ್ತ್. ಬೆಳಗ್ಗೆ 6 ಗಂಟೆಗೆ ಆಯಾ ಬಂದ್ ಎದ್ದೇಳಿಸಿ, ಬ್ರಷ್ ಮಾಡ್ಸಿ, ಹಾರ್ಲಿಕ್ಸ್ ಕುಡಿಸಿರೆ, 7 ಗಂಟೆಗೆ ಯೋಗ ಟೀಚರ್, 8 ಗಂಟೆಗೆ ಕರಾಟೆ ಮಾಸ್ಟರ್ ಬಂದ್ ಅವ್ಳಿಗೆ ಯೋಗ ಮತ್ತೆ ಕರಾಟೆ ಹೇಳಿಕೊಡ್ತಿದ್ದೊ. 10 ಗಂಟೆಂದ ಸಂಜೆ ನಾಲ್ಕು ಗಂಟೆ ವರೆಗೆ ಪಾಠ. ಅದಕ್ಕೂ ಟೀಚರ್ಗ ಮನೆಗೆ ಬರ್ತಿದ್ದೊ. ಎಲ್ಲಾ ಒಂಥರ ಮೆಕ್ಯಾನಿಕಲ್ ಆಗಿ ನಡೀತ್ತಿತ್ತ್. ಇಂಥ ಗಿಣಿ, ಎಸ್ಎಸ್ಎಲ್ಸಿ ಪರೀಕ್ಷೆ ಬರಿಯಕ್ಕೆ ಹೋಗಿತ್ತ್. ಅದೇ ಅವ್ಳು ಮೊದಲ ಸಲ ಮನೇಂದ ಹೊರಕ್ಕೆ ಹೋದ್...
ಎಸಿ ಕಾರ್. ಮುಂದೆ ಡ್ರೈವರ್ ಮತ್ತೆ ಟೀಚರ್. ಹಿಂದೆ ಸಿಟ್ಲಿ ಆಚೆ ಈಚೆ ಅಪ್ಪ-ಅಮ್ಮ. ಮಧ್ಯಲಿ ಗಿಣಿ. ಕಾರು ಮುಂದಕ್ಕೆ ಹೋಗ್ತಿದ್ದಂಗೆ ಹಿಂದಕ್ಕೆ ಓಡ್ತಿದ್ದ ಗಿಡ, ಮರಗಳ್ನ ಗಿಣಿ ತುಂಬಾ ಆಶ್ಚರ್ಯಂದ ನೋಡ್ತಿತ್ತ್. ಇವ್ಳು ಪರೀಕ್ಷೆ ಬರೆಯಕ್ಕಾಗಿದ್ದ ಶಾಲೆ ಹತ್ರ ಬಾತ್. ಗೇಟ್ ಹತ್ರ ಒಬ್ಬ ಸುರಸುಂದರಾಂಗ ಹೈದ..! ಫೋಟೋ ತೆಗ್ದ ಹಂಗೆ ಗಿಣಿ ಮನಸ್ಲಿ ಅವನ ಚಿತ್ರ ಸೇವ್ ಆಗಿಬಿಟ್ಟತ್...ಪರೀಕ್ಷೆ ಬರೆಯಕಾಕನ ಪಕ್ಕದ ಸಿಟ್ಲಿ ಕೂಡ ಅವ್ನೇ..! ಆ ಹೈದನ ಕಣ್ಣ್ಲಿ ಭವಿಷ್ಯದ ದಾರಿ ಸ್ಪಷ್ಟವಾಗಿ ಕಾಣ್ತಿತ್ತ್. ಓದಿದ್ದನ್ನೆಲ್ಲಾ ತುಂಬಾ ಲಾಯ್ಕಲಿ ಪೇಪರ್ ಮೇಲೆ ಭಟ್ಟಿ ಇಳಿಸ್ತಿತ್ತ್. ಆದ್ರೆ ಗಿಣಿಗೆ ಮಾತ್ರ ಎಂಥ ಬರೆಯೋಕುತನೇ ಗೊತ್ತಾತ್ಲೆ...ಆ ಸುರಸುಂದರಾಗನ ನೋಡಿಕಂಡೇ ಕಾಲ ಕಳ್ದ್ಬಿಟ್ಟತ್. ಆರು ಪರೀಕ್ಷೆಯ ಆರೂ ದಿನನೂ ಇದೇ ಕಥೆ....ಮನೆಗೆ ಬಂದರೂ ಯಾವುದಕ್ಕೂ ಮನಸ್ಸಿಲ್ಲೆ...ಕಣ್ಣುಬಿಟ್ಟರೆ, ಕಣ್ಣು ಮುಚ್ಚಿರೆ ಎಲ್ಲೆಲ್ಲೂ ಅದೇ ಹೈದನ ಚಿತ್ರ. ಗಿಣಿಗೆ ಜ್ವರ ಬಾತ್.
ದೊಡ್ಡ ದೊಡ್ಡ ಡಾಕ್ಟರ್ಗಳೆಲ್ಲಾ ಬಂದ್ ನೋಡ್ದೊ...ಗಿಣಿಗೆ ಬಂದ ಜ್ವರ ಯಾವುದುತಾ ಯಾರಿಗೂ ಗೊತ್ತಾತ್ಲೆ. ಅವ್ಳನ್ನ ಅಮೆರಿಕಾಕ್ಕೆ ಕರ್ಕಂಡ್ ಹೋಕೆ ಪ್ಲ್ಯಾನ್ ಮಾಡ್ದೊ. ಅಷ್ಟೊತ್ತಿಗೆ ಗಿಣಿಗೆ ಬಂದ ಜ್ವರದ ಹಿಂದಿನ ಕಾರಣ ಅವ್ಳ ಟೀಚರ್ಗೆ ಗೊತ್ತಾತ್. ಪರೀಕ್ಷೆ ದಿನ ಪಕ್ಕಲಿ ಕುದ್ದಿದ್ದ ಹೈದನ ಫೋಟೋನ ತಂದ್ ಗಿಣಿ ಮುಂದೆ ಹಿಡಿಯಕಾಕನ, ಅವ್ಳ ಕಣ್ಣ್ಲಿ ವಿಶೇಷ ಬೆಳಕು ! ಟೀಚರ್ ತಡ ಮಾಡ್ತ್ಲೆ...ಹೋಗಿ ಆ ಹೈದನ ಕರ್ಕಂಡ್ ಬಾತ್...ಅವ್ನನ್ನ ನೋಡ್ತಿದ್ದಂಗೆ ಗಿಣಿ ಹೊರಗೆ ಓಡಿ ಹೋತ್...ಅವನ ಕೈ ಹಿಡ್ಕಂಡ್ ಗೇಟ್ ದಾಟಿತ್....
- ಸುನಿಲ್ ಪೊನ್ನೇಟಿ

Friday, 7 September 2012

ಉಂಗುರ ಪ್ರೇಮ...!



`ಜನ ಈಗ ನಮ್ಮ ಹೆಸರೇಳಿಕೂ ಹೆದರ್ತೊಳೊ...'

`ಅಲ್ಲಮತ್ತೆ...ಹಿಂಗೆ ರೇಟ್ ಆಕಾಶ ಕಡೆ ಓಡ್ತಿದ್ದರೆ ಇನ್ನೇನಾದೆ..'

`ಹೌದು....ಪ್ರೀತಿಲಿ `ಚಿನ್ನಾ' ತಾ ಕಿವಿಹತ್ರ ಬಂದ್ ಹೇಳಿಕಣಿಕೂ ಹಿಂದೆ ಮುಂದೆ ನೋಡಿವೆ'

`ಇನ್ನೆಂಥ...? 20 ವರ್ಷಗಳ ಹಿಂದೆ ಹಿಂಗೆ ಇತ್ತಾ?'

`ಎಲ್ಲಿತ್ತ್? ಪುತ್ತೂರಿಗೆ 10ಸಾವಿರ ರೂಪಾಯಿ ತಕ್ಕಂಡ್ ಹೋಗಿದ್ದರೆ, ಬಾಕಾಕನ ಒಳ್ಳೇ ಎರಡಳೆ ಚೈನ್ ತಕ್ಕಂಡ್ ಬರಕ್ಕಾಗಿತ್ತ್.'

`ಈಗ ಹೋದ ಹೋದಲ್ಲಿ ನಮ್ಮ ಅಂಗಡಿಗ... ಈ ಅಂಗಡಿಗ ಜಾಸ್ತಿ ಆದಷ್ಟೂ ನಮ್ಮ ರೇಟ್ ಜಾಸ್ತಿ ! ನಿನ್ನೆ 10 ಗ್ರಾಂಗೆ 32 ಸಾವಿರ ರೂಪಾಯಿ..!'

`ಹುಂ...ದೀಪಾವಳಿ ಬಾಕಾಕನ 50 ಸಾವಿರ ರೂಪಾಯಿ ಆದೆ ಗಡ..!'

`ಹಿಂಗಾದರೆ ದೇವರೇ ಗತಿ..! ನಿನ್ನ ಮುಖಲಿ ಕೂರಿಸಿಯೊಳಲಾ ಆ ನೀಲಿ ಕಲ್ಲು...ನಿಂಗೆ ತುಂಬಾ ಲಾಯ್ಕ ಕಂಡದೆ...ಸುರಸುಂದರಾಂಗ..!'

`ಸಾಕ್...ಸಾಕ್...ತುಂಬಾ ಹೊಗುಳುಬೇಡ. ನೀ ಏನು ಕಮ್ಮಿ ಪೊರ್ಲು ಒಳಾ...? ಆಕಾರ ಸಣ್ಣ ಆದ್ರೂ... ಬಂದವು ಒಂದ್ಸಲ ನಿನ್ನನ್ನ ಅವ್ರ ಬೆರಳಿಗೆ ಹಾಕ್ಕಂಡ್ ನೋಡಿವೆ...'

`ಹೌದೌದು....ನೀ ನಂಗೆ ಹಂಗೆ ಹೇಳಿರೆ ನಾಚಿಕೆ ಆದೆ...!'

`ಛಿ..ಕಳ್ಳಿ... ನೀ ನಾಚಿಕಂಡ್ರೂ ತುಂಬಾ ಲಾಯ್ಕ ಕಂಡಿಯಾ...ನಿನ್ನ ಮುಖಲಿರ್ವ ನೇರಳೆ ಹರಳಂತೂ ಸೂಪರ್...'

`ಇನ್ನೆಷ್ಟು ದಿನರಾ ಹಿಂಗೆ?'

`ಹೆಂಗೆ...?'

`ಅದೇ ಈಗ ಒಳಾ ಅಲಾ ಜೊತೆ ಜೊತೆಲೇ...ಹಂಗೆ...'

`ಶ್....ಶಬ್ದ ಮಾಡ್ಬೇಡಾ...ಅವ್ಳು ಬರ್ತುಟ್ಟು....'

`ಅವ್ಳು ಅಂದ್ರೆ.... ಯಾರ್ ?'

`ಅದೇ...ಅವ್ಳ ಬಾಯ್ಫ್ರಂಡ್ ಬೆರಳಿಗೆ ಹಾಕಿಕೇತಾ ಆರ್ಡರ್ ಕೊಟ್ಟು ನನ್ನ ರೆಡಿ ಮಾಡಿಸಿತ್ತಲ್ಲಾ, ಅವ್ಳು....'

`ಹಂಗಾರೆ ಈಗ ನೀ ನನ್ನ ಬುಟ್ಟು ಹೋದಿಯಾ ?'

`ಹುಂ....ಡೀಯರ್...ನಾ ಹೋಗದಿದ್ದರೆ, ಈ ಆಚಾರಿ ಬುಟ್ಟದೆನಾ? ಅವ್ಳ ಕೈಂದ 20 ಸಾವಿರ ರೂಪಾಯಿ ತಕ್ಕಂಡತ್ಲೆನಾ...? ಏಯ್....ಅಲ್ಲಿ ನೋಡ್...'

`ಎಂಥ...?'

`ಅದೇ, ಗರ್ಲ್  ಫ್ರಂಡ್ಗೆ ಕೊಡಿಕೆತಾ ಆರ್ಡರ್ ಕೊಟ್ಟು ನಿನ್ನ ರೆಡಿ ಮಾಡಿಸಿತ್ತಲ್ಲಾ...ಅಂವ ಬರ್ತುಟ್ಟು...' 

`ಅಯ್ಯೋ...ಇಷ್ಟು ಬೇಗ ನಾವು ದೂರ-ದೂರ ಆಗ್ತೊಳಲಾ...'

`ನಿರಾಸೆ ಬೇಡ ಡೀಯರ್...ಮತ್ತೆ ನಾವಿಬ್ಬರೂ ಒಟ್ಟು ಸೇರುನೋ...ಅವಿಬ್ಬರೂ ಕೈ ಕೈ ಹಿಡ್ಕಂಡಾಗ...!!' 


- ಸುನಿಲ್ ಪೊನ್ನೇಟಿ 
arebhase@gmail.com

Thursday, 6 September 2012

ಧೋಬಿ ಘಾಟ್ !


ಮುಂಬೈ ಧೋಬಿಘಾಟ್ ಗೊತ್ತುಟ್ಟಲ್ಲಾ...? ತುಂಬಾ ಫಿಲಂಗ ಅಲ್ಲಿ ಶೂಟಿಂಗ್ ಆಗುಟ್ಟು. ಅಂಥ ಧೋಬಿ ಘಾಟ್ಗ ಎಲ್ಲಾ ಊರುಗಳಲ್ಲೂ ಇದ್ದದೆ. ಆದ್ರೆ ಅಷ್ಟು ದೊಡ್ಡದು ಇರುದುಲ್ಲೆ ಅಷ್ಟೇ...ನನ್ನ ಊರುಲಿ ಕೂಡ ಒಂದು ಧೋಬಿಘಾಟ್ ಉಟ್ಟು. ಭಕ್ತರ ಪಾಪಗಳ್ನ ತೊಳಿಯುವ ಕನ್ನಿಕಾ ಹೊಳೆ, ಸಂಗಮಕ್ಕೆ ಬರ್ವ ಮೊದ್ಲು ಈ ಧೋಬಿಘಾಟ್ಲಿ ಬಟ್ಟೆಗಳ ಕೊಳೆ ತೆಗ್ದು ಬಂದದೆ. ಆ ಊರಿನ ಪೋಲೀಸ್ ಇನ್ಸ್ಪೆಕ್ಟರ್ಂದ ಹಿಡ್ದ್, ಪಂಚಾಯಿತಿ ಕುಲುವಾಡಿ ವರೆಗಿನ  ಖಾಕಿ ಯೂನಿಫಾರಂ. ಅನಂತ ಭಟ್ಟರ್ಂದ ಹಿಡ್ದ್ ಗೌರ್ಮೆಂಟ್ ಆಸ್ಪತ್ರೆ ಡಾಕ್ಟರ್ ವರೆಗಿನ ಬಿಳಿ ಬಟ್ಟೆ ಕ್ಲೀನ್ ಆದು ಇಲ್ಲಿಯೇ... ಧೋಬಿ ಘಾಟ್ಗಿಂತ ಕೆಳಗೆ ಇರವ್ಕೆ ಇದ್ಯಾವುದೂ ಗೊತ್ತಾಲೆ. ಎಲ್ಲವೂ ಅದೇ ನೀರ್ನ ಕುಡ್ದವೆ. ಅದೇ ನೀರ್ಲಿ ಸ್ನಾನ ಮಾಡಿವೆ. ಅದೇ ನೀರ್ಲಿ ಈಜಾಡಿವೆ.
ಕನ್ನಿಕಾ ಹೊಳೆಯ ಆ ಕಲ್ಲುಗ ಬಟ್ಟೆ ಒಗೆಯುವವ್ಕಾಗಿ ಅಲ್ಲಿ ಹುಟ್ಟಿಕಣ್ತೋ, ಅಥ್ವಾ ಆ ಕಲ್ಲುಗಳ್ನ ನೋಡಿಕಂಡ್ ಬಟ್ಟೆ ಒಗೆಯುವವು ಅಲ್ಲಿ ಮನೆ ಕಟ್ಟಿಕೊಂಡೊಳನಾ ? ಗೊತ್ಲೆ. ಆ ಜಾಗನೂ ಅಷ್ಟೇ, ತುಂಬಾ ಲಾಯ್ಕ ಉಟ್ಟು. ಮೊಣಕಾಲು ವರೆಗೆನೇ ಹರಿಯುವ ಕನ್ನಿಕಾ ಹೊಳೆ...ಕುದ್ದ್ಕಂಡ್, ನಿಂತ್ಕಂಡ್, ಬೇಕಾರೆ ಮಲಗಿಕಂಡೂ ಒಗೆಯಕ್ಕೆ ಅನುಕೂಲ ಆಗುವ ದೊಡ್ಡ, ದೊಡ್ಡ ಕಲ್ಲುಗ. ಒಗ್ದ ಬಟ್ಟೆಗಳ್ನ ಒಣಗಿಕೆ ಹಾಕಿಕೆ ದೊಡ್ಡ ಬಾಣೆ... ಇನ್ನೆಂಥ ಬೇಕು ? ಬಟ್ಟೆ ಒಗ್ದು ಒಗ್ದು ಸುಸ್ತಾತಾ? ಅಲ್ಲೇ ಸ್ವಲ್ಪ ಮೇಲೆ ಒಂದು ಹೊಂಡ ಉಟ್ಟು. ಯಾವ ಸ್ವಿಮ್ಮಿಂಗ್ಪೂಲ್ಗೂ ಅದ್ ಕಡಿಮೆ ಇಲ್ಲೆ. ಜೀಪ್ಗಳ ಹಳೇ ಟ್ಯೂಬ್ನ ಸೊಂಟಕ್ಕೆ ಕಟ್ಟಿಕಂಡ್ ನೀರಿಗಿಳಿದ್ರೆ, ಸ್ವರ್ಗ ಸುಖ !
ಹೇಳಿಕೇಳಿ ನನ್ನೂರು ಮಳೆಯ ತವರೂರು ! ಒಂದು ವರ್ಷ ಹಂಗೆನೇ ಆತ್. ಜೋರು ಮಳೆ...ಒಂದು ವಾರ ಕಣ್ಣುಮುಚ್ಚಿಕಂಡ್ ಹೊಡ್ತ್. ಸಂಗಮದ ಹೊಳೆ ನೀರು ದೇವಸ್ಥಾನ ಮೆಟ್ಟಿಲು ದಾಟಿ, ಸಂತೋಷ್ ಹೊಟೇಲಿಗಾಗಿ, ಕಾವೇರಿ ದರ್ಶಿನಿಗೆ ನುಗ್ಗಿ, ವಿಜಯಲಕ್ಷ್ಮೀ ಷೆಡ್ ವರೆಗೆ ಬಂದ್ಬಿಡ್ತ್. ನಮ್ಮ ಧೋಬಿಘಾಟ್ ಪೂರ್ತಿ ಮುಳುಗಿ ಹೋಗಿ, ಬಟ್ಟೆ ಒಗೆಯುವವರ ಮನೆಯೊಳಗೆ ಮೊಣಕಾಲು ಗಂಟ ನೀರು ಬಂದಿತ್ತ್. ಮತ್ತೆ ಒಂದು ವಾರ ಇದೇ ಸ್ಥಿತಿ. ಇದಾದ್ಮೇಲೆ ಸ್ವಲ್ಪ ಸ್ವಲ್ಪನೇ ಮಳೆ ಕಡಿಮೆ ಆತ್. ಹೊಳೆ ನೀರೂ ಇಳ್ತ್. ಬಟ್ಟೆ ಒಗಿಯಕ್ಕೆ ಕನ್ನಿಕಾ ಹೊಳೆಗೆ ಹೋದ್ರೆ ಅಲ್ಲಿ ಎಂಥ ಉಟ್ಟು? ಮಣ್ಣು...ಹೌದು ಮಣ್ಣಲ್ಲ, ಬರೀ ಕೆಸ್ರು. ದೊಡ್ಡ ದೊಡ್ಡ ಕಲ್ಲುಗ ಕೆಸರೊಳಗೆ ಹೂತು ಹೋಗಿದ್ದೊ. ಬಟ್ಟೆ ಒಣಗಿಕೆ ಹಾಕುವ ಬಾಣೆ ತುಂಬಾ ನೀರು ನಿತ್ಕಂಡ್ ಕೆರೆ ಥರ ಆಗಿತ್ತ್. ಸ್ವಿಮ್ಮಿಂಗ್ಪೂಲ್ ಥರ ಇದ್ದ ಹೊಂಡಲಿ ಮರಳು ರಾಶಿ...ನಮ್ಮ ಜೀವನನೂ ಹಿಂಗೆ ತಾನೇ.... ಇಂದ್ ಇದ್ದಂಗೆ ನಾಳೆ ಇರ್ದುಲ್ಲೆ!!!

- ಸುನಿಲ್ ಪೊನ್ನೇಟಿ
arebahse@gmail.com

Wednesday, 5 September 2012

ಲಿಲ್ಲಿ ತೋಟ


ಆಗಷ್ಟೇ ಮಳೆ ಬಂದ್ ನಿಂತಿತ್ತ್. ಮಣ್ಣೆಲ್ಲಾ ಹಸಿಹಸಿ... ಕಾಲಿಟ್ಟರೆ ಅಲ್ಲೇ ಹೆಜ್ಜೆ ಗುರುತು ಮೂಡುವಂಗೆ ಸ್ವಲ್ಪ ಕೆಸ್ರು. ಆ ಹೊತ್ತ್ಲಿ ಅದ್ಯಾಕೋ ಲಿಲ್ಲಿಗೆ ತೋಟಕ್ಕೆ ಹೋಗುವ ಮನಸ್ಸಾತ್. ಗದ್ದೆ ಹತ್ರ ಮನೆ. ಮನೇಂದ ತೋಟಕ್ಕೆ ಸುಮಾರ್ 2 ಕಿಲೋಮೀಟರ್ ದೂರ. ಮಳೆ ಬಂದ್ ತೋಟಲಿ ಕಾಫಿ ಕಾಯಿ ಉದುರಿಬಿಟ್ಟುಟ್ಟೋ ಏನೋತೇಳುವ ಹೆದರಿಕೆ, ಅವ್ಳನ್ನ ತೋಟದ ಕಡೆ ಹೋಗುವಂಗೆ ಮಾಡ್ತ್. ಇದ್ಕೆ ಕಾರಣನೂ ಉಟ್ಟು. ಅಲ್ಲಿ ಆ 2 ಎಕರೆ ತೋಟ ಸಿಕ್ಕಿಕಾದರೆ ಲಿಲ್ಲಿ ಮತ್ತೆ ಅವ್ಳ ಗಂಡಂಗೆ ಸಾಕಪ್ಪಾ ತೋಟದ ಸಹವಾಸತಾ ಹೇಳುವಂಗೆ ಆಗಿತ್ತ್. ತೋಟ ಸಿಕ್ಕಿ, ಅಲ್ಲಿ ಹೊಸ ಗಿಡ ಹಾಕಿ...ಈಗ ಮೊದ್ಲ ಫಸಲು....
ಲಿಲ್ಲಿ ಗಂಡ ಪಳಂಗ ಆರ್ಮಿಲಿ ಇತ್. ಲಿಲ್ಲಿ ಕೂಡ ಮದುವೆ ಆದ್ಮೇಲೆ ಅವನ ಜೊತೆನೇ ಹೋಗಿತ್ತ್. ಸಿಕಂದರಾಬಾದ್ಂದ ಹಿಡ್ದ್ ಕಾಶ್ಮೀರ ಮೂಲೆಯ ಲಡಾಕ್ ವರೆಗೆ ವರ್ಷಕ್ಕೆ ಒಂದು ಜಾಗಲಿ ಪಳಂಗ ಮತ್ತೆ ಲಿಲ್ಲಿ ಟ್ರಾನ್ಸ್ಫರ್ ಹೆಸ್ರಲ್ಲಿ ಸುತ್ತಾಡಿದ್ದೊ. ರಿಟೈರ್ಡ್ ಆಗಿ ಬಂದಮೇಲೆನೇ ಶುರುವಾದ್ ತಲೆನೋವು. ಪಳಂಗನ ಅಣ್ಣ `ನಾ ಏನೇ ಆದರೂ ಪಳಂಗಂಗೆ ಪಾಲು ಕೊಡ್ಲೆ'ತಾ ಹಠ ಹಿಡ್ದ್ ಕುದ್ದಿತ್ತ್. ಪಂಚಾಯ್ತಿ ಕರ್ದ ದಿನ ಜಗಳ ಆಡಿ, ಪಂಚಾಯ್ತಿಗೆ ಬಂದವ್ಕೆನೇ ಕೋವಿ ತೋರ್ಸಿ ಓಡಿಸಿತ್ತ್. ಕೊನೆಗೆ ಕೋರ್ಟ್ ಗೆ ಹೋಗಿ ಹತ್ತು ವರ್ಷ ಕೇಸ್ ನಡ್ದ ಮೇಲೆ 2 ಎಕರೆ ಜಾಗ ಪಳಂಗಪ್ಪನ ಪಾಲಿಗೆ ಸಿಕ್ಕಿತ್ತ್. ಹಂಗಾಗಿ ಗಂಡ, ಹೆಣ್ಣ್ ಇಬ್ಬರಿಗೂ ಆ ಜಾಗದ ಮೇಲೆ ತುಂಬಾ ಪ್ರೀತಿ. ಬೆವರಿನ ಜೊತೆ ರಕ್ತ ಸುರ್ಸಿ ಅಲ್ಲಿ ಕಾಫಿ ಗಿಡ ಬೆಳೆಸಿದ್ದೊ. ತೋಟ ತುಂಬಾ ಲಾಯ್ಕ ಬಂದಿತ್ತ್.
ಈ ವರ್ಷ ಮೊದಲ ಫಸಲು ಬಾತ್ತೇಳುವ ಖುಷಿ ಗಂಡ, ಹೆಣ್ಣ್ ಇಬ್ಬರಲ್ಲೂ ಇತ್ತ್. ಆದ್ರೆ ಟೈಂ ಅಲ್ಲದ ಟೈಂಲಿ ಬಂದ ಮಳೆ ಇವರ ತಲೆಕೆಡಿಸಿತ್. ಇಂದಂತೂ ಜೋರು ಮಳೆ. ಸಣ್ಣ ನಿದ್ದೆಮಾಡಿಬಿಟ್ಟನೆತಾ ಪಳಂಗ ಮಧ್ಯಾಹ್ನ ಊಟ ಮಾಡಿ ಹಾಸಿಗೆಲಿ ಬಿದ್ದ್ಕಂಡಿತ್ತ್. ಲಿಲ್ಲಿಗೆ ಮನಸ್ಸು ಕೇಳ್ತಿತ್ಲೆ. ಗಂಡನ ಎಚ್ಚರ ಮಾಡುದು ಬೇಡತಾ ಅವ್ಳೊಬ್ಳೇ ತೋಟದ ಕಡೆ ಹೆಜ್ಜೆ ಹಾಕಿತ್ತ್...ಮಳೆ ಬಂದ್ ನಿಂತಿದ್ದರಿಂದ ಮಳೆ ಹುಳ `ಕಿರ್ರೋಂ...ಕಿರ್ರೋಂ'ತಾ ಮರಡ್ತಿದ್ದೊ.
ಸಾಯಂಕಾಲ 5 ಗಂಟೆ ಆಗಿರೊಕೇನೋ...ಪಳಂಗಂಗೆ ಎಚ್ಚರ ಆತ್. `ಲಿಲ್ಲಿ...ಲಿಲ್ಲಿ'ತಾ ಎರಡು-ಮೂರು ಸಲ ಕರ್ತ್. ಉತ್ತರ ಬಾತ್ಲೆ... ಕಾಫಿ ಕಾಯಿಸ್ತಿರುದೇನೋತಾ ಅಡುಗೆ ಕೋಂಬರೆಗೆ ಹೋಗಿ ನೋಡಿರೆ, ಅಲ್ಲಿ ಇಲ್ಲೆ. ಗುಡ್ಡದ ಒಲೆ ಹತ್ರ ಹೋಗಿ ನೋಡ್ತ್..ಅಲ್ಲೂ ಕಾಂಬಲೆ. ಲಿಲ್ಲಿ ಎಲ್ಲಿ ಹೋಗಿರುದಪ್ಪತಾ ಪಳಂಗಂಗೆ ಹೆದ್ರಿಕೆ ಶುರುವಾತ್. ಮನೆ ಹೊರಗೆ ಬಂದ್, ಪುನಃ `ಲಿಲ್ಲಿ...ಲಿಲ್ಲಿ'ತಾ ಮೂರು-ನಾಲ್ಕು ಸಲ ಕರ್ತ್. ಅವಳ ಪತ್ತೆನೇ ಇಲ್ಲೆ. ಹಂಗೆ ಹೊರಗೆ ಬಂದ್ ನೋಡಿಕಾಕನ ತೋಟಕ್ಕೆ ಹೋಗುವ ದಾರೀಲಿ ಲಿಲ್ಲಿದ್ ಚಪ್ಪಲಿ ಗುರ್ತ್ ಕಾಣ್ತ್. `ಓ...ಲಿಲ್ಲಿ ತೋಟಕ್ಕೆ ಹೋಗಿರುದೇನೋ'ತಾ ಗ್ಯಾನ ಮಾಡ್ಕಂಡ್, ಪಳಂಗ ಕೂಡ ತೋಟದ ಕಡೆಗೆ ಹೊರ್ಟತ್. `ಇಷ್ಟು ಹೊತ್ತು ತೋಟಲಿ ಎಂಥ ಮಾಡಿದೆಯಪ್ಪಾ'ತಾ ಮನಸ್ಲಿ ಬಯ್ಕಂಡೇ ನಡ್ಕಂಡಿರ್ಕಾಕನ ದಾರೀಲಿ ಆನೆದ್ ಹೆಜ್ಜೆ ಕಂಡಂಗೆ ಆತ್...ಪಳಂಗ ಇನ್ನೂ ಸ್ವಲ್ಪ ಬಗ್ಗಿ ನೋಡ್ತ್...`ಡೌಟೇ ಬೇಡ...ಈ ದಾರೀಲಿ ಆನೆ ಹೋಗುಟ್ಟು...'ತಾ ಅವಂಗೆ ಗೊತ್ತಾತ್. ಲಿಲ್ಲಿದ್ ಚಪ್ಪಲಿ ಗುರುತು ಹಿಂದೆ, ಆನೆದ್ ಹೆಜ್ಜೆ ಗುರುತು ! ಆ ಹೆಜ್ಜೆ ಗುರುತು ಹಿಂದೆನೇ ಪಳಂಗ ಹೊರ್ಟತ್....
ತೋಟಕ್ಕೆ ಹೋಗಿ ನೋಡಿರೆ, ಪಳಂಗಂಗೆ ಎದೆ ಒಡ್ದು ಹೋದೋಂದೇ ಬಾಕಿ. ಕಾಫಿಗಿಡಗಳ್ನೆಲ್ಲಾ ಆನೆ ಹಾಳು ಮಾಡಿತ್ತ್. ಆದ್ರೆ ಅಲ್ಲಿ ಎಲ್ಲೂ ಲಿಲ್ಲಿ ಕಾಣ್ತ್ಲೆ. `ಲಿಲ್ಲಿ...ಲಿಲ್ಲಿ' ತಾ ಜೋರಾಗಿ ಕರ್ದತ್... ಹುಚ್ಚನಂಗೆ ಬೊಬ್ಬೆ ಹೊಡ್ಕಂಡ್ ತೋಟ ಪೂತರ್ಿ ಓಡಾಡ್ತ್....ಕೊನೆಗೆ ದೂರಲಿ ಬೆಟ್ಟ ಮೇಲೆಂದ ಇಳ್ಕಂಡ್ ಬರ್ವ ತೋಡು ಹತ್ರ ಲಿಲ್ಲಿದ್ ಸೀರೆ ಕಂಡಂಗಂಗೆ ಆತ್... ಹತ್ತಿರ ಹೋಗಿ ನೋಡಿರೆ....ಹೌದು, ಅಲ್ಲಿ ಲಿಲ್ಲಿ ಹೆಣ ! ಯಾವುದೋ ಹಳೇ ಸಿಟ್ಟು ಇದ್ದಂಗೆ ಆನೆ ಲಿಲ್ಲಿನ ಮೆಟ್ಟಿ ಮೆಟ್ಟಿ ಕೊಂದ್ಹಾಕಿತ್ತ್ !!

- ಸುನಿಲ್ ಪೊನ್ನೇಟಿ
arebhase@gmail.com

ದರುಶನ ಕೊಡು ಚಂದಮಾಮ


ಚಂದಮಾಮತಾ ಹೇಳಿರೆ ನಂಗೊಂಥರ ಖುಷಿ...ಅವನ ನೋಡ್ತಿದ್ದರೆ ಮನಸ್ನ ದುಃಖ ಎಲ್ಲಾ ಮಾಯ ಆಗ್ತಿತ್..ಆದ್ರೆ ಇಂದ್ಯಾಕೋ ಚಂದಮಾಮಂಗೂ ನನ್ನ ಬಗ್ಗೆ ಜಿಗುಪ್ಸೆ ಬಂದುಟ್ಟು ಕಂಡದೆ....ಅಂವ ನಂಗೆ ಮುಖನೇ ತೋರಿಸ್ತಿಲ್ಲೆ. ನಾ ಯಾರ ಹತ್ರ ನನ್ನ ನೋವು ಹೇಳಿಕಣಲಿ? ಈ ಮೊದ್ಲು ಯಾವತ್ತು ಕೂಡ ಹಿಂಗೆ ಆಗಿತ್ತ್ಲೆ...ಸಣ್ಣಂವ ಇರ್ಕಾಕನ ನಾ ಊಟನೇ ಸರಿಯಾಗಿ ಮಾಡ್ತಿತ್ಲೆ. ಆಗ ಅಮ್ಮ ಒಂದ್ ಕೈಲಿ ನನ್ನ ಎತ್ತಿಕಂಡ್, ಮತ್ತೊಂದು ಕೈಲಿ ಹಾಲು ಕಲಿಸಿದ ಅನ್ನ ಹಿಡ್ಕಂಡ್, ನಂಗೆ ಚಂದ್ರನ ತೋರಿಸ್ತಿತ್ತ್...ಅದ್ಯಾಕೋ ಗೊತ್ಲೆ, ಚಂದ್ರನ ನೋಡ್ತಿದ್ದಂಗೆ ತಟ್ಟೆಲಿದ್ದ ಅನ್ನ ಎಲ್ಲಾ ಖಾಲಿ ಆಗಿಬಿಡ್ತಿತ್ತ್. ಬಾಯಿಗೆ ತುತ್ತು ಕೊಟ್ಕಂಡೇ ಚಂದ್ರನ ಒಳ್ಳೊಳ್ಳೇ ಕಥೆಗಳ್ನ ಹೇಳ್ತಿದ್ದೊ ಅಮ್ಮ...ಹಿಂಗೆ ನಂಗೂ, ಚಂದಮಾಮಂಗೂ ಒಂಥರ ನೆಂಟಸ್ಥನ ಬೆಳ್ತ್. ಲೆಕ್ಕ ಇಲ್ಲದಷ್ಟು ಸಲ ನಂಗೆ ಬದುಕಿನ ಭರವಸೆ ಕೊಟ್ಟದ್ ಇದೇ ಚಂದಮಾಮ. ಮನಸ್ಸೊಳಗೆ ಎಂಥದ್ದೇ ನೋವು, ಸಂಕಟ, ದುಃಖ ಇರ್ಲಿ, ಒಂದರ್ಧ ಗಂಟೆ ಸುಮ್ಮನೆ ಚಂದ್ರ ನೋಡ್ತಿದ್ದರೆ ಸಾಕ್ ಎಲ್ಲಾ ಮಾಯ ಆಗಿ ನನ್ನಲ್ಲಿ ಹೊಸ ಮನುಷ್ಯ ಹುಟ್ಟಿಕಂಡ್ಬಿಡ್ತಿತ್ತ್...ಆದ್ರೆ ಈಗ ಎಲ್ಲಾ ಉಲ್ಟಾ...ಅದ್ಕೆ ಸರಿಯಾಗಿ ಕೆಟ್ಟ ಕನಸು ಬೇರೆ...
ನಾ ಒಂದು ಹಕ್ಕಿ. ಅದೇ ಚಂದ್ರ ಮೇಲೆ ಕುದ್ದ್ಕಂಡ್ ನನ್ನ ಕರೀತುಟ್ಟು. ಆ ತಂಪಾದ ಬೆಳಕು ನನ್ನಲ್ಲಿ ಎಂಥದ್ದೋ ಆಸೆ ಹುಟ್ಟಿಸ್ಯುಟ್ಟು. ನನ್ನ ರೆಕ್ಕೆಗಳಲ್ಲಿ ಶಕ್ತಿ ಇಲ್ಲೆ...ಆದ್ರೂ ಚಂದ್ರನ ಸೇರುವ ಆಸೆ. ಇದ್ದ ಬದ್ದ ಎಲ್ಲಾ ಬಲ ಸೇರಿಸಿ ಆಕಾಶ ಕಡೆ ಹಾರಿನೆ...ಹೂಂ, ಆಗ್ತಿಲ್ಲೆ...ರೆಕ್ಕೆಗಳಲ್ಲಿ ತುಂಬಾ ನೋವು. ಕಣ್ಣೆತ್ತಿ ಚಂದ್ರನ ನೋಡಿನೆ. ಅಂವ ಇನ್ನೂ ಅಲ್ಲಿ ನಗ್ತುಟ್ಟು. ಎರಡೂ ಕೈ ಬೀಸಿ ನನ್ನ ಕರೀತುಟ್ಟು...ಆ ನಗು ನಂಗೆ ಅಯಸ್ಕಾಂತ ! ತುಟಿಕಚ್ಚಿ ನೋವೆಲ್ಲಾ ಸಹಿಸಿಕಂಡ್ ಚಂದ್ರನ ಹತ್ತಿರ ಹೋಕಾಕನ ಅಂವ ಅಲ್ಲಿಂದ ನನ್ನ ಜೋರಾಗಿ ತಳ್ಳಿಬಿಟ್ಟದೆ...ಕಣ್ಣು ಬಿಟ್ಟು ನೋಡಿರೆ, ನಾ ರೆಕ್ಕೆ ಮುರ್ಕಂಡ್ ಬಿದ್ದಿದ್ದೆ... ನಿದ್ದೆಂದ ಎಚ್ಚರ ಆತ್....
ಮಧ್ಯರಾತ್ರಿ 1 ಗಂಟೆಗೆ ಮತ್ತೆ ಹೊರಗೆ ಬಂದೆ. ಈಗ್ಲಾದ್ರೂ ಚಂದ್ರ ಕಾಂಬದೇನೋತಾ ಆಸೆ. ಭಾಗಮಂಡಲಲಿ, ಕುಶಾಲನಗರಲಿ, ಮೈಸೂರ್ಲಿ, ಹೈದರಾಬಾದ್ಲಿ, ಡೆಲ್ಲಿಲಿ...ಹಿಂಗೆ ಎಲ್ಲಾ ಕಡೆ ನನ್ನ ಜೊತೆ ಬರ್ತಿದ್ದ ಚಂದ್ರ ಬೆಂಗಳೂರ್ಲಿ ಮಾತ್ರ ನನ್ನ ಅನಾಥ ಮಾಡಿಬಿಟ್ಟುಟ್ಟು...
`ಚಂದಮಾಮ, ನೀನೇ ಹಿಂಗೆ ಮಾಡಿರೆ ನನ್ನ ಮತ್ತೆ ಮನುಷ್ಯನಾಗಿ ಮಾಡುದು ಯಾರ್? ಮೋಡದ ಮರೇಂದ ಹೊರಗೆ ಬಾ...ಕಾದನೆ, ನಿಂಗಾಗಿ ಕಾದನೆ, ಗಂಟೆ....ದಿನ...ವಾರ...ತಿಂಗ...ಅಷ್ಟೇ... ಅದಕ್ಕಿಂತ ಜಾಸ್ತಿ ಆಲೆ...ನೀ ಬಾರದಿದ್ದರೆ ನಾ ಉಳಿಯಲ್ಲೆ...' 

- ಸುನಿಲ್ ಪೊನ್ನೇಟಿ
arebhase@gmail.com

Tuesday, 4 September 2012

ಗಿಣಿ ರಾ(ನಾ)ಮ !!


                                                                        
ಪುಟ್ಟ ಅವನಿಷ್ಟಕ್ಕೆ ಅಂವ ನಡ್ಕಂಡ್ ಹೋಗ್ತಿತ್ತ್. ಅಷ್ಟೊತ್ತಿಗೆ ದೂರಲಿ ಒಂದು ಗಿಣಿ ಇವನನ್ನೇ ಕರ್ದಂಗೆ ಆತ್. ಒಮ್ಮೆ ತಿರುಗಿ ನೋಡ್ತ್. ತುಂಬಾ ಲಾಯ್ಕದ ಗಿಣಿ...ಆದ್ರೆ ಹಳೇದೆಲ್ಲಾ ಗ್ಯಾನ ಆಗಿ, ಈ ಗಿಣಿ ಸಹವಾಸನೇ ಬೇಡತಾ ಮುಂದಕ್ಕೆ ಹೋತ್. ಅಷ್ಟೊತ್ತಿಗೆ ಗಿಣಿ ಮತ್ತೊಂದ್ಸಲ ಪುಟ್ಟನ ಕರ್ದಂಗೆ ಕೇಳ್ತ್. ಯಾಕೋ ಇವನ ಮನಸ್ಸು ಸ್ವಲ್ಪ ಬದಲಾದಂಗೆ ಅನ್ನಿಸಿತ್... ಇನ್ನೇನ್ ಆ ಗಿಣಿನ ಹಿಡಿಯೊಕು, ಅಷ್ಟೊತ್ತಿಗೆ ಮತ್ತೆ ಹಳೇ ವಿಷಯ ಕಣ್ಮುಂದೆ ಬಾತ್.
ಏಳು ವರ್ಷದ ಹಿಂದೆ ಇರೋಕು ಕಂಡದೆ. ಅಂದು ಸನಾ ಪುಟ್ಟ ಇದೇ ದಾರೀಲಿ ಹೋಗ್ತಿತ್. ಆಗ ಪೊಂಗಾರೆ ಮರದ ಕೆಳಗೆ ಒಂದು ಗಿಣಿ ಕಾಲು ಮುರ್ಕಂಡ್ ಬಿದ್ದಿತ್ತ್. ಇಂವ ಅದ್ರ ಹತ್ರ ಹೋದಷ್ಟೂ, ಗಿಣಿ ಕುಂಟಿಕಂಡ್ ಕುಂಟಿಕಂಡ್  ದೂರ ದೂರ ಓಡ್ತಿತ್ತ್. ಸುಮಾರ್ ಹೊತ್ತು ಪೂಸಿ ಹೊಡ್ದ್ ಆದ್ಮೇಲೆ ಆ ಗಿಣಿಗೆ ಇವನ ಮೇಲೆ ನಂಬಿಕೆ ಬಾತ್. ಇಂವ ಕೈ ತೋರಿಸ್ತಿದ್ದಂತೆ, ಕೈ ಮೇಲೆ ಹತ್ತಿ ಕುದ್ದ್ಕಣ್ತ್. ಖುಷೀಲೇ ಗಿಣಿನ ಮನೆಗೆ ತಕ್ಕಂಡ್ ಹೋತ್. ಗೋಪಾಲ ಆಚಾರಿ ಹತ್ರ ಹೇಳಿ ಒಳ್ಳೆ ಪಂಜರ ಮಾಡಿಸಿಕಂಡತ್. ಆ ಪಂಜರನ ತನ್ನದೇ ಕೋಂಬರೇಲಿ ಇಟ್ಕಂಡತ್...ದಿನಾ ಹಾಲು, ಹಣ್ಣು ಕೊಟ್ಟ್, ಮುರ್ದ್ ಹೋಗಿದ್ದ ಕಾಲಿಗೆ ಮದ್ದ್ ಹಾಕಿ ಲಾಯ್ಕ ಸಾಂಕಿತ್. ಮೂರು ತಿಂಗಳಲ್ಲೇ ಗಿಣಿ ಹುಷಾರಾತ್. ಮೈ ಕೈ ತುಂಬಿಕಂಡ್ ನಾಲ್ಕ್ ಜನ ನೋಡುವಂಗೆ ಆತ್... ಪಂಜರದ ಬಾಗಿಲ್ನ ಪುಟ್ಟ ಯಾವತ್ತೂ ಮುಚ್ಚುತ್ತಿತ್ಲೆ....ಅಷ್ಟೊಂದು ನಂಬಿಕೆ ಅವನ ಗಿಣಿ ಮೇಲೆ...
ಅದೊಂದು ದಿನ ಹೊರಗೆಲ್ಲೋ ಹೋಗಿದ್ದ ಪುಟ್ಟ ಮನೆ ಸೇರಿಕಾಕನ ಕತ್ತಲೆ ಆಗಿತ್ತ್. ಇವನ ಕೋಂಬರೆಗೆ ಬಂದ್ ಪಂಜರ ನೋಡಿರೆ ಅಲ್ಲಿ ಗಿಣಿ ಇಲ್ಲೆ ! ಕಟ್ಲ್ ಕೆಳಗೆ, ಅಟ್ಟದ ಮೇಲೆ, ಏಲಕ್ಕಿ ಗೂಡ್...ಹಿಂಗೆ ಎಲ್ಲಾ ಕಡೆ ಹುಡುಕಿತ್...ಹೂಂ, ನಾಪತ್ತೆ. ತುಂಬಾ ಬೇಸರ ಆತ್. ರಾತ್ರಿ ಸರಿ ನಿದ್ದೆನೂ ಬಾತ್ಲೆ. ಬೆಳಿಗ್ಗೆ ಎದ್ದ್ ಕಿಡಿಕಿಲೆ ನೋಡಿರೆ, ಮಾವಿನ ಮರಲಿ ಕುದ್ದಿತ್ತ್ ಇವನ ಗಿಣಿ ! ಜೊತೇಲಿ ಮತ್ತೊಂದು ಗಿಣಿ...ಪುಟ್ಟ ಕರ್ದರೆ ಅಲಾ ಎಂಥ ಮಾಡಿರೂ ಅದ್ ಇವನ ಹತ್ರ ಬಾತ್ಲೆ...ಹತ್ರ ಹೋಕಾಕನ ಜೊತೇಲಿದ್ದ ಗಿಣಿ ಜೊತೆ ಹಾರಿ ಹೋತ್ ದೂರ...ತುಂಬಾ ದೂರ. ಮತ್ತೆ ಅದ್ ಇವನ ಕಣ್ಣಿಗೆ ಬಿದ್ದಿತ್ಲೆ. ಅಂದ್ಂದ ಇಂವಂಗೆ ಗಿಣಿಗತೇಳಿರೆ ಅಷ್ಟಕಷ್ಟೇ...
ಹಿಂಗೆ ಹಳೇದನ್ನೆಲ್ಲಾ ಯೋಚನೆ ಮಾಡಿಕಂಡ್ ಹೋಕಾಕನ ಈ ಹೊಸ ಗಿಣಿ ಪುಟ್ಟನ ಹಿಂದೆನೇ ಬಾತ್. `ನನ್ನನ್ನೊಮ್ಮೆ ನಿನ್ನ ಮನೆಗೆ ಕರ್ಕಂಡ್ ಹೋಗು ಮಾರಾಯ' ತಾ ಹೇಳುವಂಗೆ ಜೋರಾಗಿ ಮರ್ಡ್ ತಿತ್ತ್. ಯಾಕೋ ಗೊತ್ಲೆ ಹೊಸ ಗಿಣಿ ಮೇಲೆ ಪುಟ್ಟಂಗೆ ಆಸೆ ಹುಟ್ಟಿತ್. ಹಂಗೆತೇಳಿ ಮನೆಗೆ ತಕ್ಕಂಡ್ ಹೋಕೆ ಮನಸ್ಸು ಒಪ್ಪಿತ್ಲೆ. ಯಾಕೆತೇಳಿರೆ ಹಳೇ ಪಂಜರ ಉಪಯೋಗಿಸದೇ ಪೂರ್ತಿ ಹಾಳಾಗಿತ್ತ್. ಅದಕ್ಕಿಂತ ಹೆಚ್ಚುತೇಳಿರೆ ಮತ್ತೊಂದು ಗಿಣಿ ತಾಕೆ ಇವನ ಮನೇಲಿ ಒಪ್ತಿತ್ಲೆ...ಅವ್ರ ಮನಸ್ಲಿ ಹಳೇ ಗಿಣಿ ಮಾಡ್ದ ಗಾಯ ಹಂಗೆನೇ ಉಳ್ಕಂಡಿತ್ತ್. ಆದ್ರೆ ಹೊಸ ಗಿಣಿ ಪುಟ್ಟನ ಬಿಡುವಂಗೆ ಕಾಣ್ತ್ಲೇ...ಇಂವ ಹೋಗುವ ದಾರೀಲಿ ದಿನಾ ಪ್ರತ್ಯಕ್ಷ ಆಗಿ ಜೋರಾಗಿ ಮರ್ಡ್ತಿತ್ತ್. ಪುಟ್ಟಂಗೆ ಈ ಗಿಣಿ ಮೇಲೆ ಆಸೆ ಜಾಸ್ತಿ ಆತ್. ಮನೇಲಿರ್ವ ಹಳೇ ಪಂಜರನ ಮೊದ್ಲು ಸರಿಮಾಡ್ತ್. ಇದಾದ್ಮೇಲೆ ಮನೆಯವ್ರನ್ನ ಒಪ್ಪಿಸಿತ್. ಇನ್ನೇನ್ ಗಿಣಿನ ತರೋಕೂತ ಆ ಗಿಣಿ ದಿನಾ ಕುದ್ದಿರ್ತಿದ್ದಲ್ಲಿ ಹೋಗಿ ನೋಡಿರೆ, ಇವನ ಎದೆ ಒಡೆಯುದೊಂದೇ ಬಾಕಿ ! ಈ ಗಿಣಿನೂ ಮತ್ತೊಂದು ಹೊಸ ಗಿಣಿ ಜೊತೆ ಕುದ್ದ್ ನಗಾಡ್ತಿತ್ತ್ !!! ಛೇ...ನಂಬಿಕಾದ್ ಗಿಣಿಗಳ್ನ...

- ಸುನಿಲ್ ಪೊನ್ನೇಟಿ

Friday, 31 August 2012

ಬಾಪರೆಮೊಟ್ಟೆ ಸಾಹಸ


ಆಗಷ್ಟೇ ಪರೀಕ್ಷೆ ಮುಗ್ದಿತ್ತ್. ಸದ್ಯ ಓದುವ ತಾಪತ್ರಯ ತಪ್ಪಿತ್ತಲ್ಲತಾ ನಮಿಗೆಲ್ಲಾ ಖುಷಿಯೋ ಖುಷಿ. ತಾವೂರು ಬೆಟ್ಟನ ಒಂದ್ಸಲ ಹತ್ತಿ ಇಳ್ದಾಗಿತ್ತ್. ಬಾಪರೆಮೊಟ್ಟೆಗೆ ಹೋಗುವ ಪ್ಲ್ಯಾನ್ ಹಾಕ್ಕೊಂಡಿದ್ದೊ. ಆದ್ರೆ ಅಲ್ಲಿಗೆ ಹೋಕೆ ಮನೇಲಿ ಒಪ್ತಿತ್ಲೆ. ಬಾಪರೆಮೊಟ್ಟೆ ಬಗ್ಗೆ ಇರ್ವ ಕಥೆಗಳೇ ನಮ್ಮ ಅಪ್ಪ, ಅಮ್ಮನ ಹೆದರಿಕೆಗೆ ಕಾರಣ ಆಗಿತ್ತ್. ಆದ್ರೂ ಹೆಂಗಾರ್ ಮಾಡಿ ಅಲ್ಲಿಗೆ ಹೋಕೂತಾ ನಾವೆಲ್ಲಾ ಡಿಸೈಡ್ ಮಾಡಿದ್ದೊ. ಒಂದು ದಿನ, ಗುರುನ ಮನೆ ಹತ್ರ ಕನ್ನಿಕೆ ಹೊಳೇಲಿ ಸ್ನಾನ ಮಾಡಿ ಆದ್ಮೇಲೆ ನಾವು ಮೀಟಿಂಗ್ ಸೇರ್ದೋ...ಸ್ನಾನ ಮಾಡಿಕಾಕನ ಹಾಕ್ಕಂಡಿದ್ದ ಚೆಡ್ಡಿ ಒಣಗೋಕಲಾ... ಇಲ್ಲದಿದ್ದರೆ, ಹೊಳೇಲಿ ಸ್ನಾನ ಮಾಡ್ದ್ ಮನೇಲಿ ಗೊತ್ತಾದೆ. ಹಂಗಾಗಿ ಚೆಡ್ಡಿ ಒಣಗುವವರೆಗೆ ನಾವು ಹೊಳೆಕರೇಲೇ ಬಿಸಿಲು ಕಾಸಿಕಂಡ್ ಕುದ್ದಿರ್ತಿದ್ದೊ. `ಹುಡುಗರು' ಫಿಲಂಲಿ ಲೂಸ್ ಮಾದ ಯೋಗೀಶ್ ತಲೆ ಮೇಲೆ ಹಾಕ್ಕಂಡಿದ್ದದ್ದೆಯಲ್ಲಾ, ಹಂಗೆನೇ ನಾವು ಕೂಡ ತಲೆ ಮೆಲೆ ಚೆಡ್ಡಿ ಹಾಕ್ಕಂಡ್ ಸಾಲಾಗಿ ಕುದ್ದ್ಕಂಡ್ ಮೀಟಿಂಗ್ ಮಾಡ್ತಿದ್ದೊ. ಕೊನೆಗೇ ಬಾಪರೆಮೊಟ್ಟೆನ ಒಮ್ಮೆ ನೋಡಿಯೇ ಬಿಡೋಕೂತ ನಿರ್ಧಾರ ಆತ್. `ತಲಕಾವೇರಿಗೆ ಹೋಗ್ತೊಳೊತಾ' ನಾವೆಲ್ಲಾ ಮನೇಲಿ ಸುಳ್ಳು ಹೇಳಿ ಮಾರನೇ ದಿನನೇ ಹೊರಟುಬಿಟ್ಟೊ.
ಬ್ರಹ್ಮಗಿರಿ ಬೆಟ್ಟ ಹತ್ತಿರೆ ದೂರಲಿ ಫ್ಯಾನ್ಗಳಂಗೆ ವಿಂಡ್ಮಿಲ್ಗ ಕಂಡದೆಯಲ್ಲಾ...ಅದ್ರ ಹಿಂದೆನೇ ಈ ಬಾಪರೆ ಮೊಟ್ಟೆ ಇರ್ದು. ಬಾಪರೆಮೊಟ್ಟೆತೇಳಿರೆ ಬೆಟ್ಟದ ಬುಡಲಿ ಇರ್ವ ದೊಡ್ಡ ಗುಹೆ. ಒಳಗೆ ಪೂರ್ತಿ ಕತ್ತಲು. ಈ ಗುಹೆ ಒಳಗೆ ಒಂದು ದಾರಿ ಉಟ್ಟು. ಈ ದಾರಿ ಕೇರಳದ ಯಾವುದೋ ಒಂದು ಊರುಲಿ ಅರಬ್ಬೀಸಮುದ್ರಕ್ಕೆ ಸೇರಿದೆತಾ ಹೇಳುವೆ. ಆದ್ರೆ ನೋಡ್ದವು ಯಾರೂ ಇಲ್ಲೆ. ಯಾಕಂದ್ರೆ ಈ ಗುಹೆ ಒಳಗೆ 10 ಹೆಜ್ಜೆ ಕೂಡ ಮುಂದಕ್ಕೆ ಹೋಕೆ ಆಲೆ. ಅಷ್ಟು ಕರಿಕತ್ತಲು. ಜೊತೆಗೆ ಒಳಗೆ ಬಾವಲಿಗಳ ಹಾವಳಿ. ಗುಹೆ ಒಳಗೆ ಕಾಲಿಡ್ತಿದ್ದಂಗೆ, ಬಾವಲಿಗ ತಲೆಮೇಲೆನೇ ಪುರ್ರ್ ಪುರ್ರ್..ತಾ ಹಾರಿಕಂಡ್ ಹೋದವೆ. ಇನ್ನೂ ಒಳಗೆ ಹೋದ್ರೆ ಹುಲಿಗ ಕೂಡ ಇದ್ದವೆಗಡ. ಬಾಪರೆಮೊಟ್ಟೆ ಹೊರಗಡೆ ಬಿದ್ದಿರ್ವ ದನದ ಮೂಳೆಗಳೇ ಇದಕ್ಕೆ ಸಾಕ್ಷಿ ! ಮೊದ್ಲೆಲ್ಲಾ ಇಲ್ಲಿ ಚೇರಂಗಾಲ ಮತ್ತೆ ತಣ್ಣಿಮಾನಿಯವು ಬಂದ್ ಬಾವಲಿಗಳ ಹಿಕ್ಕೆ ತಕ್ಕಂಡ್ ಹೋಗ್ತಿದ್ದೊ ಗಡ. ಈ ಹಿಕ್ಕೆ ಮೆಣಸಿಗೆ ಒಳ್ಳೇ ಗೊಬ್ಬರ. ಆದ್ರೆ ಈಗ ಯಾರೂ ಅಂಥ ಸಾಹಸಕ್ಕೆ ಇಳಿಯಲ್ಲೆ.
ಇಂಥ ಬಾಪರೆಮೊಟ್ಟೆ ಗುಹೆ ಒಳಗೆ ಹೋಕೂತಾ ನಾವೆಲ್ಲಾ ರೆಡಿಯಾಗಿ ಬಂದೊ. ಹೆಡ್ಲೈಟ್, ದೊಂದಿ, ಕತ್ತಿ, ದೊಣ್ಣೆ ಎಲ್ಲಾ ನಮ್ಮ ಹತ್ರ ಇತ್ತ್. ತಿಂಬಕೆ ಚಿಪ್ಸ್, ಕುಡಿಯಕ್ಕೆ ಜ್ಯೂಸ್ ಸನಾ ತಂದಿದ್ದೊ....ತಲಕಾವೇರಿವರೆಗೆ ಬಸ್ಲಿ ಹೋಗಿ, ಅಲ್ಲಿಂದ ಬಾಪರೆಮೊಟ್ಟೆಗೆ ನಡ್ಕಂಡೇ ಹೊರಟೊ. ವಿಂಡ್ಮಿಲ್ ಹತ್ರ ತಲುಪಿಕಾಕನ ಸುಸ್ತಾಗಿಬಿಟ್ಟಿತ್ತ್. ಇನ್ನ್ ಗುಹೆನೋಡಿಕಾಕನ ಅಂತೂ ಎಲ್ಲರ ಎದೆಯೊಳಗೆ ಅವಲಕ್ಕಿ ಕುಟ್ಟಿಕೆ ಶುರುವಾತ್...ಹೊಳೆಕರೆಲಿ ಕುದ್ದಕಂಡ್ ತಲೆ ಮೇಲೆ ಚೆಡ್ಡಿ ಹಾಕ್ಕಂಡ್ ತೋರಿಸಿದ ಪೌರುಷ ಈಗ ಯಾರೊಬ್ಬರ ಹತ್ತಿರನೂ ಇತ್ಲೆ. ಅಲ್ಲೆ ಚಕ್ಕಳಮಕ್ಕಳ ಹಾಕ್ಕಂಡ್ ಕುದ್, ತಂದ ಚಿಪ್ಸ್ ತಂದ್ ವಾಪಸ್ ಮನೆ ಕಡೆ ಹೊರಟೊ....ನಮ್ಮ `ಬಾಪರೆಮೊಟ್ಟೆ ಸಾಹಸ' ಹಿಂಗೆ ಮುಗ್ದೋಗಿತ್ತ್...
- ಸುನಿಲ್ ಪೊನ್ನೇಟಿ
arebhase@gmail.com

Tuesday, 28 August 2012

ಎಂಥಾ ಗುರಿ !


`ಢಮಾರ್...' `ಢಮಾರ್...' ಜೋಡು ಗುಂಡು ಹೊಡ್ದ ಸದ್ದು. ಇದೆಂತ ಆತಪ್ಪಾ...ನಾಳೆ ಕೈಲ್ಪೊದು ಇರ್ಕಾಕನ ಯಾರಾರು ಟಿಕೆಟ್ ತಕ್ಕಂಡನೋ..ಹೆಂಗೆತಾ, ಊರ್ಲಿರ್ವ ವಯಸ್ಸಾದವೆಲ್ಲಾ ಗ್ಯಾನ ಆದೋ. ಅಷ್ಟೊತ್ತಿಗೆ `ಕಿರೀಯೋಂ...ಕಿರೀಯೋಂ...'ತಾ ಹಂದಿ ಮರ್ಡಾಟ ! ಜೊತೆಗೆ `ಹಿಡಿರಾ..ಹೊಡಿರಾ..ಬಡಿರಾ'ತಾ ಜನಗಳ ಬೊಬ್ಬೆ. ಹೋ..ಇದ್ ಹಂದಿಗೆ ಹೊಡ್ದಿರ್ವ ಗುಂಡು. ಸದ್ಯ, ಯಾರೂ ತೀರಿಕಣ್ತ್ಲೆತಾ ಮನಸ್ಲೇ ಹೇಳಿಕಂಡ್, ಗುಂಡ್ನ ಶಬ್ದ ಕೇಳ್ದ ಕಡೆ ನಡ್ದೆ.
ಜಪ್ಪು ಒಂದ್ ನಾಡ್ಹಂದಿ ಸಾಂಕಿತ್ತ್. ಎರಡು ವರ್ಷ ಸಾಂಕಿದ್ದರೂ ಆ ಹಂದಿ 65 ಕೆಜಿ ದಾಟುವಂಗೆ ಕಾಣ್ತಿತ್ಲೆ. ಆದ್ರೆ ಲಾಯ್ಕ ಬೆಳ್ದಿತ್. ಕೋರೆಹಲ್ಲುಗ ದವಡೆನ ಸೀಳಿ ಮುಂದೆ ಬಂದಿದ್ದೊ. ನೊಡಿಕೆ ಒಂಥರ ಕಾಡು ಹಂದಿನಂಗೆನೇ ಕಾಣ್ತಿತ್ತ್. ಹೋದ ವರ್ಷ ಕೈಲ್ಪೊದ್ಗೆನೇ ಈ ಹಂದಿನ ಹೊಡೆಯುಕೂತ ಜಪ್ಪು ಗ್ಯಾನ ಮಾಡಿಕಂಡಿತ್ತ್. ಆದ್ರೆ ಆಗ ಇದ್ 40 ಕೆಜಿ ಕೂಡ ಆಕಿಲ್ಲೆತಾ ನೋಡ್ದವೆಲ್ಲಾ ಹೇಳಿದ್ದೊ. ಈ ಹಂದಿ ಬರ್ಕತ್ತೇ ಆಲೆತಾ ಗಂಜಿ ಕೊಡುವ ಮರಿಗೆನ ಚೇಂಜ್ ಮಾಡ್ತ್, ಹಂದಿಗೂಡ್ನ ಬಾಗ್ಲ್ ತೆಗ್ದ್ ಬೇರೆ ಕಡೆ ಫಿಟ್ ಮಾಡ್ತ್. ಊಹುಂ... ಹಂದಿ ಮಾತ್ರ ಸೊಕ್ಕುವಂಗೆನೇ  ಕಂಡತ್ಲೆ. ಕೊನೆಗೆ ಮಾವಿನ ಮರ ಬುಡಲಿ ಕಟ್ಟಿ ಹಾಕಿಕೆ ಶುರು ಮಾಡ್ತ್.  `ಮಾಂಸಕ್ಕೆ ಮಾಂಸ ಕೊಟ್ಟವೆ..ಹಂದಿ ಕೊಟ್ಟಿಯ'ತಾ ಡಿಸೆಂಬರ್ಲಿ ಮೇಲೆಮನೆ ಸುಬ್ರಾಯನ ಮಂಞನ ಮದುವೆಗೆ ಈ ಹಂದಿನ ಕೇಳಿದ್ದೊ. `ದುಡ್ಡಿಗಾದರೆ ಕೊಟ್ಟನೆ...ಮಾಂಸಕ್ಕೆ ಕೊಡುಲ್ಲೆ...ಬೇಡ ಬುಡಿ, ನಾ ಕೈಲ್ಪೊದ್ಗೆ ಹೊಡ್ದನೆ..'ತಾ ಅಂದ್ ಜಪ್ಪು ಹೇಳಿತ್ತ್. ಕೈಲ್ಪೊದ್ಗೆ ಆಕಾಕನ ಇನ್ನೊಂದು 10ಕೆಜಿ ತೂಕ ಜಾಸ್ತಿ ಆದುತಾ ಇವನ ಆಸೆ.
ನಾ ಜಪ್ಪುನ ಮನೆ ಹತ್ರ ಹೋಕಾಕನ ಗಣಿ, ಸುರಿ, ಚಾಮಿ, ಗಪ್ಪು..ಹಿಂಗೆ ನಾಲ್ಕೈದು ಜನ ಬಡಿಗೆಗಳ್ನ ಹಿಡ್ಕಂಡ್ ಕಾಡೊಳಗೆ ಓಡ್ತಿದ್ದೊ. ಚೋಮುಣಿ ಡಬಲ್ಬ್ಯಾರಲ್ ಕೋವಿನ ಹಿಡ್ಕಂಡ್ ತಲೆಕೆಳಗೆ ಹಾಕ್ಕಂಡ್ ನಿಂತ್ಕಂಡಿತ್ತ್. ಜಪ್ಪು ಚೋಮುಣಿಗೆ ಬಾಯಿಗೆ ಬಂದಂಗೆ ಬಯ್ತಿತ್ತ್. ನಂಗೆ ತಲೆ-ಬುಡ ಅರ್ಥ ಆತ್ಲೆ... ನಾ `ಎಂಥ ಆತ್ರಾ ಜಪ್ಪು'ತಾ ಕೇಳ್ದೆ. ಹೊಟ್ಟೆ ಒಳಗೆ ಕುದೀತ್ತಿದ್ದ ಸಿಟ್ಟ್ನ ಹೇಳಿಕಂಬಕೆ ಯಾರಾರ್ ಸಿಕ್ಕಲಿತಾ ಕಾದ್ಕಂಡ್ ಕುದ್ದಿದ್ದಂಗೆ, ಜಪ್ಪು ಎಲ್ಲಾ ಹೇಳಿಕೆ ಶುರುಮಾಡ್ತ್...`ಎಂಥ ಮಾಡ್ದುರಾ ಭಾವ.. ಈ ಚೋಮುಣಿ ಎರಡು ತೋಟನ ಸುಮ್ಮನೇ ವೇಸ್ಟ್ ಮಾಡ್ತ್..ಇನ್ನೊಂದು ತೋಟ ಇದ್ದಿದ್ದರೆ, ಇವಂಗೇ ಗುಂಡು ಹೊಡ್ದುಬಿಡ್ತಿದ್ದೆ...ದೊಡ್ಡ ಜನರಂಗೆ ಹಂದಿಗೆ ನಾನೇ ಗುಂಡು ಹೊಡ್ದನೆತಾ ಕೋವಿ ತಕ್ಕಂಡತ್...ಈ ಬೂಸುಡಿಗೆ ಕಟ್ಟಿ ಹಾಕಿದ್ದ ಹಂದಿಗೆ ಗುಂಡು ಹೊಡಿಯಕ್ಕೆ ಆತ್ಲೆ ಭಾವ...ಏನೋ ಭಾರೀ ಬೇಟೆಗಾರತಾ ಇವನ ಕೈಗೆ ಕೋವಿ ಕೊಟ್ರೆ, ಇಂವ ಮೊದ್ಲ ಗುಂಡ್ ಹಣೆಗೆತಾ ಗುರಿಯಿಟ್ಟ್ ಹೊಡ್ದದ್ ಹೊಟ್ಟೆಗೆ...ಚಿಲ್ಲುಗ ಎಲ್ಲೆಲ್ಲೋ ಚಲ್ಲಾಡಿಬಿಟ್ಟೊ...ಹಂದಿ ಹೊಟ್ಟೆಗೆ ಸಣ್ಣ ಗಾಯ ಆತಷ್ಟೆ. ಪುನಃ ಈ ಬಡ್ಡಿಮಂಞ ಹಂದಿದ್ ಪಕ್ಕೆ ಹತ್ರ ಗುರಿಯಿಟ್ಟ್ ಹೊಡ್ತ್...ಅದ್ ಹೋಗಿ ತಾಗಿರೆ ಹಂದಿ ಕಟ್ಟಿ ಹಾಕಿದ್ದ ಬಳ್ಳಿಗೆ....ಬಳ್ಳಿ ತುಂಡಾಕ್ತಿದ್ದಂಗೆ ಹಂದಿ ಮರ್ಡಿಕಂಡ್ ಕಾಡ್ ಹತ್ತಿಬಿಡ್ತ್ರಾ ಭಾವ....70 ಕೆಜಿ ಹಂದಿ...ಅದ್ ಸಿಗದಿರ್ಲಿ, ಸೊಸೈಟಿಂದ ಸಾಲ ತಂದಾದ್ರೂ ಈ ಚೋಮುಣಿ ಎದೆಗೆ ನಾ ಗುಂಡ್ ಹೊಡ್ದನೆ....' ಜಪ್ಪು ಒಂದೇ ಉಸಿರಿಗೆ ಹೇಳಿ, ತಲೆ ಮೇಲೆ ಕೈ ಹೊತ್ತ್ಕಂಡ್, ಹಂದಿ ಸುಡಿಕೆ ತಂದಿದ್ದ ಹುಲ್ಲುಕಂತೆ ಮೇಲೆ ಕುದ್ದ್ಕಣ್ತ್.
ನಾ ಚೋಮುಣಿ ಕಡೆ ನೋಡ್ದೆ...ಅಂವ ಅಡಿಗೆ ಹಾಕಿದ್ದ ತಲೆನ ಇನ್ನೂ ಮೇಲೆ ಎತ್ತಿತ್ಲೆ. ಅವನ ಕೇಳ್ದೆ, `ನಿಂಗೆ ಯಾಕೆ ಬೇಕಿತ್ತ್ರಾ ಚೋಮುಣಿ ? ಯಾರಾರ್ ಒಳ್ಳೇ ಅಭ್ಯಾಸ ಇರವ್ರ ಕೈಗೆ ಕೋವಿ ಕೊಡೀಕೆ ಆಗಿತ್ಲೆನಾ...? ಈಗ ನೋಡ್ ಹಂದಿ ಕಾಡ್ ಸೇರಿಬಿಟ್ಟುಟ್ಟು....' ಅದ್ಕೆ ಅಂವ, `ನಾ ಎಂಥ ಮಾಡ್ದುರಾ...ನಾ ಬೇಡ ಬೇಡತಾ ಹೇಳ್ದಂಗೆ ಈ ಜಪ್ಪು ಬೆಳಿಗ್ಗೆನೇ ಒಂದ್ ಪೆಗ್ಗ್ ಕೊಟ್ಟುಬಿಟ್ಟಿತ್ತ್...ಸರಿಯಾಗೇ ಗುರಿಇಟ್ಟಿದೆ, ಪೆಗ್ ಪ್ರಭಾವ ನೋಡ್, ಕೈ ಹಂಙ ಅಲ್ಲಾಡಿ ಬಿಡ್ತ್....ಗುರಿ ತಪ್ಪಿ ಹೋತ್..' ಈ ಮಾತ್ ಕೇಳಿ ಜಪ್ಪುಗೆ ಸಿಟ್ಟ್ ಬಾತ್. ಕುದ್ದಲ್ಲಿಂದ ಎದ್ದವ್ನೇ...`ಕೋವಿ ಹಿಡಿಯಕ್ಕೆ ತಾಕತ್ತ್ ಇಲ್ಲದ ಮೇಲೆ ನಿಂಗೆ ಯಾಕೆ ಬೇಕಿತ್ತ್ ಗುಂಡು ಹೊಡಿವ ಕೆಲ್ಸ...ನೋಡ್ ಈಗ ಹಂದಿ ಸಿಕ್ಕದಿರ್ಲಿ, ನಿನ್ನ ಬೊಜ್ಜನ ನಾನೇ ಮಾಡ್ನೇ'ತಾ ಕಿರಿಚಿಕಂಡತ್....
ಹಿಂಗೆ ಇಲ್ಲಿ ಜಪ್ಪುನ ಮನೆ ಹತ್ರ ಜಗಳ ಜೋರಾಗುವ ಎಲ್ಲಾ ಲಕ್ಷಣಗ ಕಾಣ್ತಿದ್ದಂಗೆ,  ಕಾಡೊಳಗೆ ಹೋಗಿದ್ದವು
ಸತ್ತ ಹಂದಿನ ಬಡಿಗೇಲಿ ಕಟ್ಟಿಕಂಡ್ ಹೊತ್ತ್ಕಂಡ್ ಬಂದೊ...ಜಪ್ಪುಗೆ ಆಗ ಮೀಸೆ ಕೆಳಗೆ ಸಣ್ಣ ನಗು ಕಾಣಿಸಿಕಂಡತ್. ಚೋಮುಣಿನೂ ಮೆಲ್ಲೆ ತಲೆ ಎತ್ತಿ ಓರೆಕಣ್ಣ್ಲಿ ನೋಡಿ, ಮಾಂಸ ಮಾಡಿಕೆ ಬಾಳೆಎಲೆ ಕೊಯಿಕೆತಾ ಜಾಗ ಖಾಲಿ ಮಾಡ್ತ್. ನಾ ಹುಲ್ಲುಕಂತೆನ ಹರಡಿಕೆ ಶುರುಮಾಡ್ದೆ...ಹಂದಿನ ಸುಡೋಕಲ್ಲಾ...

- ಸುನಿಲ್ ಪೊನ್ನೇಟಿ
arebahse@gmail.com

Monday, 27 August 2012

ಛೇ...ಎಂಥ ಕೆಲ್ಸ ಆಗಿಬಿಡ್ತ್ !!!


ಚಾಮಿ ಮೈಸೂರ್ಲಿ ಎಂಜಿನಿಯರಿಂಗ್ ಮಾಡ್ತುಟ್ಟು. ಮನೆ ಕಾರ್ಗುಂದಲಿ ಆದ್ದರಿಂದ ಮೈಸೂರ್ಲಿ ಸೆಟ್ಲ್ ಆಗಿರ್ವ ಅತ್ತೆ ಮನೆಂದ ಕಾಲೇಜಿಗೆ ಹೋದೆ. ಸೆಮಿಸ್ಟರ್ ಪರೀಕ್ಷೆಗತೇಳ್ರೆ ಎಲ್ಲಿಲ್ಲದ ಹೆದ್ರಿಕೆ. ಈಸಲ ಪರೀಕ್ಷೆ ಎರ್ಡ್ ಗಂಟೆಂದ ಐದು ಗಂಟೆವರೆಗೆ ಇತ್ತ್. ನಮ್ಮ ಚಾಮಿ ಹಗಲ್ ರಾತ್ರಿತೇಳದೆ ಓದಿಕಂಡೆ ಇರ್ತಿತ್ತ್ 
  
    ಪರೀಕ್ಷೆ ಹಿಂದಿನ ದಿನ ರಾತ್ರಿಪೂರ ನಿದ್ದೆಗೆಟ್ಟ್ ಓದಿತ್ತ್. ಬೆಳಗ್ಗೆ ಆಕಾಕನ ಚಾಮಿಗೆ ನಿದ್ರೆ ತೂಗ್ತಿತ್ತ್. ಎಷ್ಟು ಕಂಟ್ರೋಲ್ ಮಾಡಿಕೆ ಟ್ರೈ ಮಾಡ್ರೂ ತಡ್ಕಂಬಕೆ ಆಗ್ತಿತ್ಲೆ. ಕಷ್ಟಪಟ್ಟು ಬೆಳಗ್ಗೆ  ಹತ್ತರ ವರೆಗೆ ಓದಿಕಂಡಿತ್ತ್. ಆಮೇಲೆ ತೂಗಿ ತೂಗಿ ಬೀಳಿಕೆ ಶುರು ಮಾಡ್ತ್. ಅದ್ನ ನೋಡ್ದ ಅವನ ಅತ್ತೆ "ಎಂಥ ಚಾಮಿ ಹಿಂಗೆ ನಿದ್ರೆ  ತೂಗುದ್, ಹಿಂಗೆ ಆದರೆ ಪರೀಕ್ಷೆ ಬರಿಯುದ್ ಕಷ್ಟ ಉಟ್ಟು. ಒಂದ್ ಕೆಲ್ಸ ಮಾಡ್, ನೀನ್ ಅರ್ಧ ಗಂಟೆ ಮಲ್ಕ. ನಾನ್ ನಿನ್ನ ಏಳ್ಸಿನೆ"ತಾ ಹೇಳ್ದೊ. ಚಾಮಿಗೆ ಸಹ ಅವನ ಅತ್ತೆ ಹೇಳ್ದ್ ಸರಿತಾ ಅನ್ಸಿತ್ತ್. ಹಂಗೆ ಹಾಸಿಗೆ ಮೇಲೆ ಬಿದ್ದ್ಕಣ್ತ್.

    ಚಾಮಿಗೆ ಸ್ವಲ್ಪ ಹೊತ್ತ್ ಬುಟ್ಟ್ ಎಚ್ಚರ ಆತ್. ಟೈಮ್ ನೋಡ್ರೆ ಗಂಟೆ ನಾಕೂವರೆ ಆವುಟು. ಪರೀಕ್ಷೆ ಇದ್ದದ್ ಎರ್ಡ್ ಗಂಟೆಗೆ. ಒಮ್ಮೆಲೇ ಜೀವ ಬಾಯಿಗೆ ಬಂದ ಹಂಗೆ ಅನ್ಸಿತ್ತ್. ಪರೀಕ್ಷೆ ಮುಗಿಯಕೆ ಬರಿ ಅರ್ಧ ಗಂಟೆ ಮಾತ್ರ ಉಳ್ದಿತ್ತ್. ಇನ್ನು ಹೋಗಿ ಸಹ ಪ್ರಯೋಜನ  ಇಲ್ಲೆ. ಎಲ್ಲಾ ಗ್ಯಾನ ಮಾಡ್ಕಾಕನ ದೇವರೇ ಒಮ್ಮೆ ಭೂಮಿ ಬಾಯಿ ಬುಟ್ಟಿದ್ದರೆ ಎಷ್ಟ್ ಲಾಯ್ಕ ಇತ್ತ್ತಾ ಅನ್ಸಿಕೆ ಶುರು ಆಗಿ ಮರ್ಡುವಂಗೆ ಆತ್. ಚಾಮಿನ ಅಸಹಾಯಕತೆ ಸಿಟ್ಟ್ನ ರೂಪ ಪಡ್ಕಣಿಕೆ ತುಂಬಾ ಹೊತ್ತು ಬೇಕಾತ್ಲೆ. ಒಂದೇ ಉಸ್ರ್ಲಿ ಅವನ ಅತ್ತೆಗೆ ಬೈಗುಳದ ಮಳೆ ಸುರ್ಸಿತ್ತ್. ಅಡಿಗೆ ಮನೆಲಿದ್ದ ಸಾಮಾನೆಲ್ಲಾ ಚೆಲ್ಲಾಡಿ ರಂಪ ರಾಮಾಯಣ ಮಾಡಿಕೆ ಶುರು ಮಾಡ್ತ್. 
   
   ಚಾಮಿನ ಬೊಬ್ಬೆ ತಡ್ಕಣಿಕಾಗದೆ ಅವನ ಅತ್ತೆ ಚೊಂಬುಲಿದ್ದ ನೀರ್ನ ಚಾಮಿನ ತಲೆ ಮೇಲೆ ಸುರ್ತ್. ಕಣ್ಣು ಬುಟ್ಟು ನೋಡ್ರೆ ಹಾಸಿಗೆ ಪೂರ ಚಂಡಿ...!!  ಅತ್ತೆ ಮತ್ತೆ ಮಾವ ಜೋರಾಗಿ ನಗಾಡ್ತಿದ್ದೋ...!!! ಪರೀಕ್ಷೆ ಮುಗ್ದ್ ಎರಡು ದಿನ ಆದ್ರೂ ಚಾಮಿಗೆ ಪರೀಕ್ಷೆಯ ಜ್ವರ ಬಿಟ್ಟಿತ್ಲೆ !!! ಅವಂಗೆ ಕನ್ಸ್ ಬಿದ್ದಿತ್ತ್ !!!

- ಸ್ಪಂದನ ಗೌರಿ
arebhase@gmail.com

Saturday, 25 August 2012

ಗಪ್ಪು ಮತ್ತೆ ಫ್ರೆಂಡ್ಸ್


ಗಪ್ಪು ಹೈದ ಮೈಸೂರ್ಲಿ ಎಂಜಿನಿಯರಿಂಗ್ ಮಾಡ್ತಿತ್ತ್. ಮನೆ ಕಾರುಗುಂದಲಿ ಆದ್ದರಿಂದ, ಕಾಲೇಜ್ ಹತ್ರನೇ ಮೂರ್ ಜನ ಹೈದಗಳ ಜೊತೆ ರೂಮ್ ಮಾಡಿಕಂಡ್ ಇತ್ತ್. ಪಾಠಲಿ ಹುಷಾರಿದ್ದ ಗಪ್ಪು ಮತ್ತೆ ಅವನ ಫ್ರೆಂಡ್ಸ್ ಪರೀಕ್ಷೆ ಹತ್ರ ಆಗೋವರೆಗೂ ಆಟಡಿಕಂಡೇ ಇರ್ತಿದ್ದೊ. ಮೈಸೂರ್ಲಿ ಬೀಟ್ ಹಾಕುದಲ್ಲದೆ ಕಾಲೇಜ್ ಹತ್ರ ಇದ್ದ ಥಿಯೇಟರ್ಲಿ ಯಾವ ಪಿಕ್ಚರ್ ಬಂದರೂ ಫಸ್ಟ್ ಶೋನೇ ನೋಡಿಕಂಡ್ ಬರ್ತಿದ್ದೊ. ಹಿಂಗೆ ಒಬ್ಬರ್ನ ಬುಟ್ಟ್ ಇನ್ನೊಬ್ಬ ಇರ್ತಿತ್ಲೆ. ಓದುಕಾಕನೂ ನಾಳೆಂದ ಶುರು ಮಾಡ್ನೊರಾ.. ನಾಳೆ ಗ್ಯಾರೆಂಟಿ ನೈಟ್ ಫುಲ್ ಓದೊಕುತಾ ಪ್ಲಾನ್ ಮಾಡಿಕಂಡೇ ದಿನ ತಳ್ಳಿ, ಕೊನೆಗೆ ಅವು ಓದಿಕೆ ಶುರು ಮಾಡ್ತಿದ್ದದ್ ಪರೀಕ್ಷೆಗೆ ಒಂದಿನ ಹಿಂದೆನೇ.

    ಡಿಸೆಂಬರ್ ತಿಂಗಂಳ್ದ ಎಂಜಿನಿಯರಿಂಗ್ನವ್ಕೆ ಸೆಮಿಸ್ಟರ್ ಪರೀಕ್ಷೆ ಶುರು ಆದೆ. ಎಂಥ ಮಾಡ್ದು, ಪರೀಕ್ಷೆಗೆ ಮೂರು ದಿನ ಇರ್ಕಾಕನನೇ ಹುತ್ತರಿ ಸಹ ಬಂದ್ಬುಟ್ಟಿತ್ತ್. ಗಪ್ಪುಗೆ ಮನೆಂದ ಬಾ ಬಾತಾ ಒಂದೇ ಸಮನೇ ಫೋನ್ ಮೇಲೆ ಫೋನ್ ಬಾಕೆ ಶುರು ಆತ್.  ಸರಿ ಹೆಂಗಿದ್ದರೂ ಲಾಸ್ಟ ದಿನ ತಾನೆ ಓದುದುತಾ ಹೇಳಿ ಮನೆಗೆ ಹೊರ್ಟತ್. ಮನೆಲಿ ಲಾಯ್ಕ್ತ ಹುತ್ತರಿ ಕಳ್ತ್. ಸರಿ, ಮನೆಂದ ಬಾಕಾಕನ ಅಪ್ಪನ ಒಂದ್ ಬಾಟಲ್ನ ಯಾರಿಗೂ ಗೊತ್ತಿಲ್ಲದೆ ಬ್ಯಾಗಿಗೆ ಇಳ್ಸಿಕಣ್ತ್. ಹಂಗೆ ಅಮ್ಮನ ಹತ್ರ ಹೇಳಿ ಹುತ್ತರಿ ಮಾರ್ನೆ ದಿನ ಹೊಡ್ದ  ಹಂದಿ ಮಾಂಸ ಗೈಪುನ ಫ್ರೆಂಡ್ಸ್ಗೆತ ಕಟ್ಟಿಕಣ್ತ್ ಪರೀಕ್ಷೆಗೆ ಒಂದೇ ದಿನ ಉಳ್ದರಂದ, ಹೊರ್ಡ್ಕಾಕನೇ ಫ್ರೆಂಡ್ಸ್ಗೆ ಕಾಲ್ ಮಾಡಿ ನಾನ್ ಹೊರ್ಟೊಳೆ... ಬಂದ ತಕ್ಷಣ ಓದುನೋತಾ ಸಹ ಹೇಳ್ತ್.

    ಹಂಗೆ ಮೈಸೂರ್ ತಲ್ಪುಕಾಕನ ರಾತ್ರಿ ಏಳ್ ಗಂಟೆ ಆಗಿತ್ತ್. ಸ್ವಲ್ಪ ರೆಸ್ಟ್ಗೆತಾ ಹೇಳಿ ಎರ್ಡ್ ಗಂಟೆ ಮಲ್ಗಿ ಎದ್ದತ್ತ್. ಅಷ್ಟು ಹೊತ್ತಿಗೆ ಹೊರಗೆ ಹೋಗಿದ್ದ ಗಪ್ಪುನ ಫ್ರೆಂಡ್ಸ್ ವಾಪಸ್ ಬಂದೊ. ಗಪ್ಪು ಹೇಳ್ತ್, ಈಗಲೇ ತುಂಬಾ ಲೇಟ್ ಆವುಟು. ಓದಿಕೆ ಶುರು ಮಾಡ್ನೊತಾ. ಅವನ ಫ್ರೆಂಡ್ಸ್ ಮೆಲ್ಲನೆ ಹೇಳ್ದೊ, `ಸಾರಿರ ಗಪ್ಪು, ನಾವೆಲ್ಲಾ ನಿನ್ನೆನೆ ಓದಿದೊ. ನಾವು ಮಲ್ಗುವೆ ನೀನ್ ಓದಿ ಮಲ್ಕರಾ'ತಾ ಹೇಳ್ದೊ.

   ಗಪ್ಪುಗೆ ಎಲ್ಲಿತ್ತೋ ಸಿಟ್ಟ್ ಅಲ್ಲೆ ಇದ್ದ ಟೇಬಲ್ಗೆ ಸರಿಯಾಗಿ ಗುದ್ದಿತ್ತ್. ಅವನ ಫ್ರೆಂಡ್ಸ್ ಅಂವ ತಂದ ಮಾಂಸ ಕಳ್ ಎಲ್ಲಾ ಖಾಲಿ ಮಾಡಿ ಲಾಯ್ಕಲಿ ಹೊದ್ದ್ ಮಲ್ಗಿದೊ. ಗಪ್ಪು ಮಾತ್ರ ಬೇರೆ ದಾರಿ ಇಲ್ಲದೆ ರಾತ್ರಿ ಹನ್ನೊಂದು ಗಂಟೆಗೆ ಓದಿಕೆ ಕುದ್ದ್ಕಣ್ತ್. ಬೆಳಿಗ್ಗೆ ಆರ್ ಗಂಟೆವರಗೆ ಓದಿಕಂಡೇ ಇತ್ತ್. ಫ್ರೆಂಡ್ಸ್ನ ಏಳ್ಸೊನೋತಾ ಗಪ್ಪು ಗ್ಯಾನ ಮಾಡ್ತ್. ತಕ್ಷಣ ಅಂವಂಗೆ ನಿನ್ನೆ ರಾತ್ರಿ ಅವು
ಕೈ ಕೊಟ್ಟದ್ ಗ್ಯಾನ ಆಗಿ, ಇವ್ಕೆ ಸರಿಯಾಗಿ ಬುದ್ಧಿ ಕಲ್ಸಿನೆತಾ ಹೇಳಿ, ರೂಮ್ಲಿ ಇದ್ದ ಎಲ್ಲಾ ವಾಚ್ ಮತ್ತೆ ಮೊಬೈಲ್ಗಳ ಟೈಮ್ನ ಒಂದು ಗಂಟೆ ಹಿಂದಕ್ಕೆ ಇಟ್ಟತ್ತ್. ಗಪ್ಪು ಮಾತ್ರ ಎಂಟ್ಗಂಟೆಗೆಲ್ಲಾ ರೆಡಿಯಾಗಿ, `ಎಲ್ಲವೂ ಬೇಗ ಬೇಗ ಏಳಿನೆ.. ಗಂಟೆ ಎಂಟಾವುಟು. ಯಾರೂ ಪರೀಕ್ಷೆ ಬರಿಯಲೆನಾ'ತಾ ಕೇಳಿಕೆ ಶುರು ಮಾಡ್ತ್. ಅಂವನ ಫ್ರೆಂಡ್ಸ್ಲಿ ಒಬ್ಬ ಹೇಳ್ತ್, `ಎಂಥರ ಗಪ್ಪು ನಿನ್ನೆ ಕುಡ್ದದ್ ಇನ್ನು ಬುಟ್ಟತ್ಲೆನಾ? ಟೈಮ್ನೋಡ್... ಸರಿಯಾಗಿ ಇನ್ನು ಗಂಟೆ ಏಳ್ ಮಾರಾಯ. ಬೆಳಿಗ್ಗೆ ಬೆಳಿಗ್ಗೆನೇ ನಿಂದೊಂದು ರಾಮಾಯಣ'ತಾ ಹೇಳ್ತ್. ಗಪ್ಪು ಹೆಂಗೆ ಹೇಳ್ರೂ ಅಂವನ ಫ್ರೆಂಡ್ಸ್ ನಂಬಿಕೆ ರೆಡಿ ಇಲ್ಲೆ. ಸರಿ ಲಾಸ್ಟ್ಗೆ ನ್ಯೂಸ್ ಚಾನಲ್ ಹಾಕಿ ನೊಡ್ಕಾಕನ ನಿಜ ಗಂಟೆ ಎಂಟ್ ಇಪ್ಪತೈದ್ ಆಗಿತ್ತ್. ಗಪ್ಪು ಮಾತ್ರ ನಗಾಡಿಕಂಡ್ ನಡ್ದ ವಿಷ್ಯನ ಹೇಳ್ತ್. 
 ಎಲ್ಲವೂ ಸೇರಿ ಗಪ್ಪುಗೆ ನಾಕ್ ಬಡ್ದೊ. ಅಂದರೂ ಗಪ್ಪು ನಗಾಡಿಕಂಡೇ ಇತ್ತ್. ಒಬ್ಬೊಬ್ಬ ಒಂದೊಂದ್ ಥರ ಬಯ್ಕಂಡ್ ರಾಮಾಯಣ ಮುಗಿಯಕಾಕನ ಪರೀಕ್ಷೆಗೆ ಬರೀ ಇಪ್ಪತ್ತು ನಿಮಿಷ ಇತ್ತ್. ಸರಿ ಗಪ್ಪುನ ಬುಟ್ಟು ಯಾರ್ ಸಹ ಮುಖ ತೊಳಿಯದೆ ಹೋಗಿ ಪರೀಕ್ಷೆ ಬರ್ದ್ ಬಂದೊ. ರಿಸಲ್ಟ್...? ನೀವೇ ಯೋಚನೆ ಮಾಡಿಕಣಿ...!!!

- ಸ್ಪಂದನ ಗೌರಿ
arebhase@gmail.com

Thursday, 23 August 2012

ಶ್ರಾವಣಿ


ಶ್ರಾವಣಿ ಓದಕ್ಕಾಗಿದ್ದ ಅದೇ ತೆಲುಗು ನ್ಯೂಸ್ ನೋಡ್ತಿದ್ದೆ. ಆದ್ರೆ ಅಲ್ಲಿ ಅವಳ ಬದ್ಲು ಬೇರೆ ಯಾರೋ ನ್ಯೂಸ್ ಓದ್ತಿದ್ದೊ. ವಿಶಾಖಪಟ್ಟಣಕ್ಕೆ ಹೋಗ್ತಿದ್ದ ರೈಲಿಗೆ ಬೆಂಕಿಹತ್ತಿಕಂಡಿದ್ದ ಸುದ್ದಿ ಬ್ರೇಕಿಂಗ್ಲಿ ಬರ್ತಿತ್ತ್. ಸತ್ತವ್ರ ಲಿಸ್ಟ್ಲಿ ಶ್ರಾವಣಿ ಹೆಸ್ರು, ಫೋಟೋ...!! ಊರಿಗೆ ಹೊರಟಿದ್ದ ಅವ್ಳು ರೈಲೊಳಗೇ ಬೆಂದು ಹೋಗಿತ್ತ್...ನ್ಯೂಸ್ ನೋಡ್ತಿದ್ದಂಗೆ ನಂಗೆ ಅಳು ತಡ್ಕಂಬಕೆ ಆತ್ಲೆ....ಅವ್ಳು ನನ್ನ ಕೈಗೆ ಕಟ್ಟಿದ್ದ ವಾಚ್ `ಟಿಕ್ ಟಿಕ್ ಟಿಕ್..' ಶಬ್ದ ಮಾಡ್ತಿತ್ತ್...ವಾಚ್ ಕಡೆ ನೋಡ್ದೆ, ಮುಳ್ಳುಗ ಹಿಂದಕ್ಕೆ ಓಡಿದಂಗೆ ಅನ್ನಿಸಿಕೆ ಶುರುವಾತ್. ಮುಂದೆ ಎಲ್ಲಾ ಹಳೇ ನೆನಪುಗಳದ್ದೇ ಮೆರವಣಿಗೆ... 
ನಾ ಗೋಲ್ಕೊಂಡ ಕೋಟೆಯ ತುತ್ತ ತುದಿ ಹತ್ತಿ ನಿಂತಿದ್ದೆ. ಒಂದ್ಸಲ ಉಸಿರು ಬಿಟ್ಟು, ಮತ್ತೆ ಜೋರಾಗಿ ಎಳ್ಕಂಡೆ. ಹೈದರಾಬಾದ್ನ ಆ ಕೊಳಕು ವಾಸನೆಂದ ಮುಕ್ತಿ ಸಿಕ್ಕಿ, ಶುದ್ಧ ಗಾಳಿ ಎದೆಯೊಳಗೆಲ್ಲಾ ತುಂಬಿ ಒಂಥರ ಖುಷಿ ಆತ್. ದೂರಲಿ ಹುಸೇನ್ ಸಾಗರ್ ಸಣ್ಣ ಕೆರೆ ಥರ ಕಾಣ್ತಿತ್. ಅದ್ರೊಳಗೆ ಓಡಾಡ್ತಿದ್ದ ದೊಡ್ಡ ದೊಡ್ಡ ಬೋಟ್ಗ, ಮಕ್ಕ ಆಟ ಆಡಿಕೆ ಮಾಡ್ದ ಪೇಪರ್ ದೋಣಿಗಳಂಗೆ ಇದ್ದೊ. ನನ್ನ ಆಫೀಸ್ ಇರ್ವ ರಾಮೋಜಿ ಫಿಲಂಸಿಟಿ ಎಲ್ಲಾರೂ ಕಂಡದೆಯೇನೋತಾ ದೂರ...ದೂರಕ್ಕೆ ದೃಷ್ಟಿ ಹಾಯಿಸಿದೆ...ಊಹುಂ, ಕಣ್ಣು ನೋವಾದ್ ಬಿಟ್ಟರೆ ಎಂಥದ್ದೂ ಪ್ರಯೋಜನ ಆತ್ಲೆ. ಹಂಗೆ ಆ ಅರಮನೆಯ ನಾಲ್ಕೂ ದಿಕ್ಕುಗಳಿಗೆ ಓಡಾಡಿ ಯಾವ ಜಾಗಲಿ ಏನೆಲ್ಲಾ ಕಂಡದೆತಾ ನಾ ಸರ್ವೆ ಮಾಡ್ತಿದ್ದರೆ, ನನ್ ಜೊತೆ ಬಂದಿದ್ದ ಶ್ರಾವಣಿ ಸುಸ್ತಾಗಿ ಕುದ್ದ್ಕಂಡ್ಬಿಟ್ಟಿತ್ತ್. ಭಾಗಮಂಡಲದಂಥ ಬೆಟ್ಟ-ಗುಡ್ಡ ಇರ್ವ ಜಾಗಲಿ ಓಡಾಡಿದ್ದ ನಂಗೆ, ಈ ಗೋಲ್ಕೊಂಡ ಕೋಟೆ ಇರ್ವ ಬೆಟ್ಟ ಹತ್ತುದು ಕಷ್ಟ ಏನೂ ಆತ್ಲೆ. ಆದ್ರೆ, ಶ್ರಾವಣಿ ವಿಶಾಖಪಟ್ಟಣ ಹತ್ರ ಸಮುದ್ರ ಬದಿ ಇರ್ವ ಯಾವುದೋ ಹಳ್ಳಿಯ ಗೂಡೆ. ಬೆಟ್ಟತೇಳಿ ಹತ್ತುದು ಇದೇ ಮೊದ್ಲು. ಸುಮಾರು ಐನೂರು ಅಡಿ ಹತ್ತಿಕೆ 50 ಸಲ ಮಧ್ಯ ಮಧ್ಯ ಕುದ್ದಿತ್. 2 ಲೀಟರ್ ನೀರು ಖರ್ಚು ಮಾಡಿತ್ತ್. 
ನಾ ಕನ್ನಡ ಚಾನೆಲ್ಲಿ ಕೆಲ್ಸ ಮಾಡ್ದು. ಶ್ರಾವಣಿ ತೆಲುಗು ಚಾನೆಲ್ಲಿ ಆ್ಯಂಕರ್. ನಂಗೆ ಸರಿಯಾಗಿ ತೆಲುಗು ಬಾದುಲೆ. ಅವಳಿಗೆ ಸರಿಯಾಗಿ ಕನ್ನಡ ಬಾದುಲೆ. ಆದ್ರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ! ಹೈದರಾಬಾದ್ಗೆ ಹೋದ ಮೇಲೆನೆ ನಂಗೆ ತೆಲುಗುತೇಳುವ ಭಾಷೆಯ ಪರಿಚಯ ಆದ್. ತೆಲುಗು ಲಿಪಿ ಹೆಚ್ಚು-ಕಡಿಮೆ ನಮ್ಮ ಕನ್ನಡಭಾಷೆಯಂಗೆನೇ ಇರ್ದು. ಶಬ್ದಗಳೂ ಅಷ್ಟೆ, ಅರ್ಥ ಆಗುವಂಗೆ ಇದ್ದದೆ. ಇನ್ನು ಶ್ರಾವಣಿ 2 ವರ್ಷ ಬೆಂಗಳೂರ್ಲಿ ಯಾವುದೋ ಕಂಪೆನಿಲಿ ಹೆಚ್ ಆರ್ ಆಗಿ ಕೆಲ್ಸ ಮಾಡಿತ್ತ್. ಹಂಗಾಗಿ ಅವ್ಳು ಹೇಳುಕತಾ ಇದ್ದದ್ದನ್ನ ನಂಗೆ ಅರ್ಥ ಮಾಡಿಸುವಷ್ಟರ ಮಟ್ಟಿಗೆ ಕನ್ನಡ ಮಾತಾಡ್ತಿತ್ತ್. ನಂಗೂ ಅವ್ಳಿಗೂ ಫ್ರೆಂಡ್ಶಿಪ್ ಶುರುವಾದು ಕೂಡ ಒಂದು ವಿಚಿತ್ರ ಸನ್ನಿವೇಶಲಿ.
ರಾಮೋಜಿ ಫಿಲಂಸಿಟೀಲಿ ಒಟ್ಟು 12 ಚಾನೆಲ್ಗಳ ಆಫೀಸ್ ಉಟ್ಟು. ಎಲ್ಲಾ ಇರ್ದು, ಒಂದೇ ಕಟ್ಟಡದೊಳಗೆ. ನಮ್ಮ ಕನ್ನಡ ಚಾನೆಲ್ ಆಪೀಸ್ನ ಒಂದು ಬದಿಗೆ ಬಂಗಾಳಿ ಚಾನೆಲ್ ಆಫೀಸ್, ಮತ್ತೊಂದು ಬದಿ ತೆಲುಗು ಚಾನೆಲ್ ಆಫೀಸ್ ಇತ್ತ್. ಕನರ್ಾಟಕಲಿ ಎಲೆಕ್ಸನ್ ಆಕಾಕನ ಎಲೆಕ್ಸೆನ್ಗೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳ್ನ ನಾ ನೋಡಿಕಣ್ತಿದ್ದೆ. ನಂ ರಾಜ್ಯದ ಎಲೆಕ್ಸನ್ ಬಗ್ಗೆ ತೆಲುಗು ಚಾನೆಲ್ನವು ಕೂಡ ದಿನಕ್ಕೆ ಅರ್ಧ ಗಂಟೆಯ ಒಂದು ಪ್ರೋಗ್ರಾಂ ಮಾಡ್ತಿದ್ದೊ. ಅದಕ್ಕೆ ಆ್ಯಂಕರ್ ಆಗಿದ್ದದ್ ಇದೇ ಶ್ರಾವಣಿ. ಅವ್ಳಿಗೆ ಎಂಥದೇ ಡೌಟ್ ಬಂದ್ರೂ, ನನ್ನನ್ನೇ ಬಂದ್ ಕೇಳ್ತಿತ್ತ್. ಎಷ್ಟೊತ್ತಿಗಾದ್ರೂ ಸರಿ ಫೋನ್ ಮಾಡಿ ಅವಳ ಸಂಶಯನ ಪರಿಹಾರ ಮಾಡಿಕಣ್ತಿತ್ತ್. ಕರ್ನಾಟಕಲಿರ್ವ ವಿಧಾನಸಭಾ ಕೇತ್ರಗಳಿಂದ ಹಿಡ್ದ್, ಕೆ ಜಿ ಬೋಪಯ್ಯ ಮಡಿಕೇರಿಲಿ ಎಷ್ಟು ಸಲ ಗೆದ್ದೊಳೊತೇಳುವವರೆಗೆ ಅವಳಿಗೆ ನಾ ಇನ್ಫರ್ಮೇಶನ್ ಕೊಡ್ತಿದ್ದೆ. ಈ ಸಲುಗೆ ಫ್ರೆಂಡ್ಶಿಪ್ ವರೆಗೆ ಹೋತ್. ಕ್ಯಾಂಟೀನ್ಗೆ ಒಟ್ಟಿಗೆ ಹೋಕೆ ಶುರುಮಾಡಿದ್ದ ನಾವು, ಎಲೆಕ್ಷನ್ ಮುಗ್ದ್ ಯಡಿಯೂರಪ್ಪ ಮುಖ್ಯಮಂತ್ರಿ ಆಕಾಕನ ಹೈದರಾಬಾದ್ ಸುತ್ತಿಕೆ ಶುರುಮಾಡಿದ್ದೊ.
ಕರಾವಳಿ ಪ್ರದೇಶಂದ ಬಂದದಕ್ಕೋ ಏನೋ, ಶ್ರಾವಣಿ ತುಂಬಾ ಲಾಯ್ಕ ಮೀನುಗೈಪು ಮಾಡ್ತಿತ್. ಆಗೆಲ್ಲಾ ನನ್ನ ಮರೆಯದೇ ಕರೀತಿತ್ತ್. ನಂದು ಮತ್ತೆ ಅವಳ್ದು ಒಂದೇ ದಿನ ವೀಕ್ಲಿಆಫ್ ಇದ್ದದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನ ಊಟ ಒಟ್ಟಿಗೆ ಮಾಡ್ತಿದ್ದೊ. ನಾ ಕ್ಯಾರೆಟ್ ಹಲ್ವ ತುಂಬಾ ಟೇಸ್ಟಿಯಾಗಿ ಮಾಡ್ತಿದ್ದೆ. ಅದ್ರಲ್ಲೂ ಶ್ರಾವಣಿಗೆ ನಾ ಮಾಡ್ದ ಕ್ಯಾರೆಟ್ ಹಲ್ವತೇಳಿರೆ ತುಂಬಾ ಇಷ್ಟ. ಇಂಥ ಸಣ್ಣ, ಸಣ್ಣ ವಿಷಯಗಳೇ ನಮ್ಮನ್ನ ತುಂಬಾ ಹತ್ತಿರಕ್ಕೆ ತಂದಿತ್ತ್. ನಮ್ಮ ಕೊಡಗು, ಇಲ್ಲಿನ ಕಾಡು, ಜಲಪಾತ, ಪ್ರಾಣಿಗಳ ಬಗ್ಗೆ ನಾ ಹೇಳ್ದುನ ಕೇಳಿ ಕೇಳಿ ಅವ್ಳಿಗೂ ನಮ್ಮೂರಿನ ಬಗ್ಗೆ ಆಸಕ್ತಿ ಹುಟ್ಟಿಕಂಡಿತ್ತ್. ಅದ್ರಲ್ಲೂ ಗಾಳಿಪಟ ಪಿಚ್ಚರ್ ನೋಡ್ದಮೇಲಂತೂ `ನನ್ನನ್ನ ಒಂದ್ಸಲ ಮಡಿಕೇರಿಗೆ ಕರ್ಕೊಂಡು ಹೋಗು'ತಾ ತುಂಬಾ ಸಲ ಹೇಳಿತ್ತ್. ಅಷ್ಟೊತ್ತಿಗೆ ನಂಗೆ ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿಬಿಡ್ತ್...ಹೈದರಾಬಾದ್ಂದ ನಾ ಬಾಕಾಕನ ನನ್ನ ಕಳಿಸಿ ಕೊಡಿಕೆ ಅವ್ಳು ಬಸ್ಸ್ಟ್ಯಾಂಡ್ವರೆಗೆ ಬಂದಿತ್ತ್. ಯಾವತ್ತೂ ವಾಚ್ ಕಟ್ಟದಿದ್ದ ನನ್ನ ಕೈಗೆ ಫಾಸ್ಟ್ಟ್ರ್ಯಾಕ್ ವಾಚ್ ಕಟ್ಟಿ `ಇದು ನನ್ನ ನೆನಪಿಗೆ...'ತಾ ಕಣ್ಣಲ್ಲಿ ನೀರ್ ತಂದ್ಕಂಡಿತ್ತ್. ನಂಗೂ ಯಾಕೋ ಎದೆಯೆಲ್ಲಾ ಭಾರ ಭಾರ ಅನ್ನಿಸಿದಂಗೆ ಆತ್. ನಂಗೆ ಗೊತ್ತಿಲ್ಲದಂಗೆ ನನ್ನ ಕಣ್ಣಲ್ಲಿ ನೀರ್ ಬಾತ್...ಟಾಟಾ ಮಾಡಿಕಂಡೇ ಬಸ್ ಹತ್ತಿದ್ದೆ....ಈಗ ನೋಡಿರೆ, ಶ್ರಾವಣಿ ತುಂಬಾ ದೂರ ಹೋಗಿಬಿಟ್ಟುಟ್ಟು....ಆದ್ರೆ ಅವಳು ಕೊಟ್ಟ ವಾಚ್ ಈಗ್ಲೂ ನನ್ನ ಕೈಲಿ `ಟಿಕ್ ಟಿಕ್ ಟಿಕ್'ತಾ ಹೇಳ್ತುಟ್ಟು.

- ಸುನಿಲ್ ಪೊನ್ನೇಟಿ
arebhase@gmail.com

Wednesday, 22 August 2012

ದೂರ ತೀರದ ನೋಟ..



ಇನ್ನು ಮೂರು ದಿನಕ್ಕೆ ನನ್ನ ಮದುವೆ. ಮನೆಯವೆಲ್ಲವೂ ಸಂಭ್ರಮ ಸಡಗರಲಿ ಓಡಾಡ್ತ ಒಳೊ. ಊರವು ಚಪ್ಪರ ಹಾಕಿಕೆ ಪ್ಲ್ಯಾನ್ ಮಾಡ್ತ ಒಳೊ. ಮನೆಗೆ ಬಂದಿರುವ ನೆಂಟ್ರೆಲ್ಲಾ ನಂಗೆ ತಮಾಷೆ ಮಾಡಿಕಂಡ್ ಖುಷಿ ಪಡ್ತೊಳೊ. ಅಮ್ಮ ಮತ್ತೆ ಅತ್ತಿಗೆ ಮಾತ್ರ ಕೆಲಸಗಳ ಒತ್ತಡಗಳ ನಡುವೆಯೂ ನನ್ನ ಕಳ್ಸೊಕಲತಾ ದುಃಖಲಿದ್ದೊ. ಪೊಪ್ಪ ಮತ್ತೆ ಅಣ್ಣ ಕೈಗೆ ಸಿಗ್ತ ಇಲ್ಲೆ.
  ಈ ಎಲ್ಲಾ ಸಂಭ್ರಮ ಸಡಗರಗಳ ಮಧ್ಯೆನೂ ಅಂವ ನಂಗೆ ಪದೆ ಪದೆ ಗ್ಯಾನ ಆಗ್ತ ಇತ್. ಮರೆಯಕೂತ ಪ್ರಯತ್ನಪಟ್ಟರೂ ಅವನ ನೆನಪು ಬೆನ್ನು ಬಿಡದಂಗೆ ಕಾಡ್ತಾ ಇತ್. ಮನ್ಸ್ ಐದು ವರ್ಷಗಳ ಹಿಂದೆ ಓಡ್ತಿತ್ತ್.
ಆಗ ನಾನಿನ್ನು ಪಿಯುಸಿ ಮುಗ್ಸಿ ಬಿಕಾಂ ಸೇರಿದ್ದೆ. ಮೈಸೂರ್ಲಿ ಕಾಲೇಜಿಗೆ ಸೇರ್ದರ್ಂದ, ಮೊದಲನೇ ಸಲ ಭಾಗಮಂಡಲ ಬುಟ್ಟು ಪಟ್ಟಣ ಸೇರಿದ್ದೆ. ಅಮ್ಮನ ಸೆರಗ್ನ ಹಿಡ್ಕಂಡ್ ಓಡಾಡ್ತಿದ್ದ ನಂಗೆ, ಮೈಸೂರಿಗೆ ಹೊಂದಿಕಣಿಕೆ ಕಷ್ಟ ಆಗ್ತಿತ್ತ್. ನನ್ನ ಹಾಸ್ಟೆಲ್ ರೂಮ್ಮೇಟ್ ಆಗಿ ಸಿಕ್ಕಿದವ್ಳು ಸಾನ್ವಿ. ಅವ್ಳು ತುಂಬಾ ಲವಲವಿಕೆಂದ ಇರ್ತಿತ್. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಕೆ ಜಾಸ್ತಿ ಟೈಮ್ ಬೇಕಾತ್ಲೆ. ಹೊಸ ಫ್ರೆಂಡ್ಸ್, ಹೊಸ ಕಾಲೇಜು, ಹೊಸ ಜೀವನಕ್ಕೆ ಮನ್ಸ್ತೇಳುವ ಹಕ್ಕಿ ರೆಕ್ಕೆನ ಮೆಲ್ಲಮೆಲ್ಲನೆ ಬಿಚ್ಚಿ ಹಾರಿಕೆ ಶುರು ಮಾಡಿತ್ತ್.
   ಸಾನ್ವಿಯ ಅಣ್ಣ ವಿಕಾಸ್ ಬೆಂಗಳೂರ್ಲಿ ಇಂಜಿನಿಯರಿಂಗ್ ಮಾಡ್ತಿತ್ತ್. ಅವಂಗೆ ಸಾನ್ವಿತೇಳ್ರೆ ಜೀವ. ವಾರಕ್ಕೆ ಒಮ್ಮೆ ಅವಳ್ನ ನೋಡಿಕೆ ಮೈಸೂರ್ಲಿ ಪ್ರತ್ಯಕ್ಷ ಆಗ್ತಿತ್ತ್. ಅವಳ ಬೆಸ್ಟ್ ಫ್ರೆಂಡ್ ನಾನೇ ಆದ್ದರಿಂದ ಅವನ ಮೀಟ್ ಮಾಡಿಕೆ ಅವಳೊಟ್ಟಿಗೆ ನಾನ್ ಸಹ ಹೋದು ಮಮೂಲಿ ಆಗಿತ್ತ್. ಅವ್ಳಿಗೆ ಸಿಗ್ವ ಪಾನಿಪೂರಿಂದ ಹಿಡ್ದ್ ಐಸ್ಕ್ರೀಮ್ವರಗೆ ಎಲ್ಲಾ ಸಹ ನಂಗೂ ಸಿಗ್ತಿತ್ತ್. ದಿನ ಕಳ್ದಂಗೆ ವಿಕಾಸ್ ಮೇಲೆ ಪ್ರೀತಿ ಹುಟ್ಟಿಕೆ ಶುರುಆತ್. ಹೆಂಗೆ ಅವನ ಹತ್ರ ಹೇಳ್ದುತಾ ಗೊತ್ತಾಗದೆ ಮನಸ್ಲೇ ಮಂಡಿಗೆ ತಿನ್ತಿದ್ದೆ. ಒಂದ್ ದಿನ ಸಾನ್ವಿ ಮೊಬೈಲ್ ರಿಂಗ್ ಆಗ್ತಿತ್. ನಾನ್ ರಿಸೀವ್ ಮಾಡ್ಕಾಕಕನ ವಿಕಾಸ್ ಮಾತಾಡ್ತಿತ್. ಅಂವ "ನಂಗೆ ನೀನ್ತೇಳ್ರೆ ಇಷ್ಟ, ನಾನ್ ನಿನ್ನ ತುಂಬಾ ಪ್ರೀತ್ಸ್ತೊಳೆ"ತಾ ಹೇಳ್ತ್. ಇತ್ತ ಸಾನ್ವಿಗೆ ವಿಷ್ಯ ಗೊತ್ತಾಗಿ ಅವ್ಳು ಸಹ ಅತ್ತಿಗೆ ಅತ್ತಿಗೆತಾ ಕರ್ದ್ ತನ್ನ ಒಪ್ಪಿಗೆನ ಸೂಚಿಸಿತ್ತ್. 
  ಇನ್ನು  ಓದುವ ವಿಷ್ಯಕ್ಕೆ ಬಂದರೆ ಸಾನ್ವಿ ಮತ್ತೆ ವಿಕಾಸ್ ಯಾಗೊಳೂ ಮುಂದೆ ಇದ್ದರೆ, ನಾನ್ ಸಾಮಾನ್ಯ ವಿದ್ಯಾಥರ್ಿನಿ. ಫಸ್ಟ್ರ್ಯಾಂಕ್ ಬಾರದಿದ್ದರೂ ಫೇಲ್ ಅಂತು ಆಗ್ತಿತ್ಲೆ. ನಮ್ಮ ಡಿಗ್ರಿ ಮುಗ್ಸೊ ಹೊತ್ತಿಗೆ ವಿಕಾಸ್ನ ಇಂಜಿನಿಯರಿಂಗ್ ಮುಗ್ದಿತ್ತ್. ಆದ್ರೆ ರಿಸೆಷನ್ನಿಂದಾಗಿ ಅವಂಗೆ ಒಳ್ಳೆ ಮಾರ್ಕ್ಸ್ ಇದ್ದರೂ ಕೆಲ್ಸ ಸಿಕ್ಕಿಕೆ ಕಷ್ಟ ಆತ್. ಅಂವ ಎಂ.ಟೆಕ್ ಮಾಡುವ ನಿರ್ಧಾರಕ್ಕೆ ಬಂದಿತ್ತ್. ಹಾಸನಲಿ ಕಾಲೇಜಿಗೆ ಸೇರಿಕಣ್ತ್. ಇತ್ತ ನಾನ್ ಎಂ.ಕಾಮ್ ಮಾಡಿಕೆ ಕೊಣಾಜೆಗೆ ಸೆರ್ರೆ, ಸಾನ್ವಿ  ಮೈಸೂರ್ಲಿ ಕಾಲೇಜಿಗೆ ಸೇರಿಕಣ್ತ್. ಅಂವ ನನ್ನ ಆಗಾಗ ಬಂದ್ ನೋಡಿಕಂಡ್ ಹೋಗ್ತಿತ್ತ್. ಅಷ್ಟು ಹೊತ್ತ್ಗೆ ಅಂವನ ಮನೆಲಿ ವಿಷ್ಯ ಗೊತ್ತಾಗಿ ಅಮ್ಮ , ಎರ್ಡ್ ವರ್ಷ ಲಾಯ್ಕ ಓದಿಕಣಿ ಆಮೇಲೆ ನಿಮ್ಮ ಮದುವೆತಾ ಹೇಳ್ದೊ. ಅದೇ ಖುಷಿಲಿ ದಿನ ಕಳ್ದದ್ ಗೊತ್ತೇ ಆತ್ಲೆ.
   ನನ್ನ ಎಮ್.ಕಾಮ್. ಮುಗ್ದ್ ಮೂರ್ತಿಂಗ ಆಗಿತ್ತ್. ಮನೆಲಿ ನಂಗೆ ಗಂಡ್ ಹುಡ್ಕಿಕೆ ಶುರು ಮಾಡಿದ್ದೊ. ಅಷ್ಟು ಹೊತ್ತಿಗೆ ನಾನ್ ಮಡಿಕೇರಿಲಿ ಲೆಕ್ಚರರ್ ಆಗಿ ಸೇರಿದ್ದೆ. ಅಂವ ಬೆಂಗಳೂರ್ ನಾನ್ ಮಡಿಕೇರಿ ಆದ ಮೇಲೆ ಕಾಂಟ್ಯಾಕ್ಟ್ ಕಮ್ಮಿ ಆಗಿತ್ತ್. ಮದುವೆ ವಿಷ್ಯ ಬಂದಾಗೆಲ್ಲಾ, ನಾನ್ ಮದ್ವೆ ಆದ್ ಎರ್ಡ್ ವರ್ಷ ಕಳ್ದ ಮೇಲೆನೆತಾ ಹೇಳ್ತಾ ಇತ್ತ್. ಇತ್ತ ಸಾನ್ವಿದ್ ಮದ್ವೆ ಆಗಿ ಗಂಡನ ಜೊತೆ ಫಾರಿನ್ಗೆ ಹಾರಿ ಹೋಗಿತ್ತ್. 
ನಂಗೆ ಮನೇಲಿ ಹೈದ ನೋಡ್ದೊ. ಮನೆಲಿ ತುಂಬಾ ಹಠ ಮಾಡ್ತಿದ್ದೊ. ವಿಕಾಸ್ಗೆ ಫೋನ್ ಮಾಡ್ರೆ ನಾನ್ ನಿನ್ನ ಮದ್ವೆ ಆಕೆ ಆದುಲೆ ನಾನ್ ಪಿ.ಹೆಚ್.ಡಿ ಮಾಡಿಕೆ  ಅಮೇರಿಕಕ್ಕೆ ಹೋಗ್ತೋಳೆತ ಬಾಂಬ್ ಸಿಡ್ಸಿತ್ತ್. ಬೇರೆ ದಾರಿ ಇಲ್ಲದೆ ಈ ಮದುವೆಗೆ ಒಪ್ಪಿಕೊಂಡೊಳೆ. ಒಡ್ದ ಮನ್ಸ್ನ ಚೂರ್ಗಳ್ನ ಜೋಡ್ಸಿಕಂಡ್ ಹೊಸ ಜೀವನಕ್ಕೆ ತಯಾರಾಗ್ತಾ ಒಳೆ....

 - ಸ್ಪಂದನ ಗೌರಿ
arebhase@gmail.com

Tuesday, 21 August 2012

ಸುಹಾಸಿನಿ


ಇನ್ನೂ ನಂಗೆ ಲಾಯ್ಕ
ನೆನಪುಟ್ಟು..
ಆ ಗೂಡೆನ ನಗು !
ಹೆಸರೂ ಅಷ್ಟೇ...
ಸುಹಾಸಿನಿ !
ಥೇಟ್ ಮುತ್ತಿನ ಹಾರದ
ಸುಹಾಸಿನಿಯಂಗೆ...
ನಗಾಡಿರೆ ಬಾಯಿ ತುಂಬಾ
ಮುತ್ತಿನಹಾರ ಪೋಣಿಸಿದಂಗೆ !
ತುಂಬಾ ಸಲ ಹೇಳೊಕೂತಾ
ಅನ್ನಿಸಿಟ್ಟು....
ಜೋರು ನಗಾಡ್ಬೇಡನೇ ಗೂಡೆ
ನಾಳೇಂದ ಚಂದ್ರ ಬೆಳದಿಂಗಳ ಚೆಲ್ಲಿಕಿಲ್ಲೆ !!
ಆದ್ರೆ...
ಮಾತೆಲ್ಲಾ ಮೌನ
ಮೊದಲ ಸಲ `ಐ ಲವ್ ಯೂ'ತಾ 
ಹೇಳಿಕೆ ಹೊರಟ ಹೈದನಂಗೆ
ಬಾಯಿಯೆಲ್ಲಾ ಒಣಗಿದೆ !
ನೀರು ಬೇಕು ನೀರು...
ಬಾಯಾರಿಕೆನೂ ಮರೆಸಿದೆ !
ಊಟ ಬೇಡ...ನಿದ್ದೆ ಬಾಲೆ..
ಅವಳ ನಗು ಕಣ್ಣು ಮುಂದಿದ್ದರೆ !

- ಸುನಿಲ್ ಪೊನ್ನೇಟಿ
arebhase@gmail.com

Sunday, 19 August 2012

ಥ್ಯಾಂಕ್ಸ್ ಪುಟ್ಟಾ..!



ಚೋಮುಣಿ ತುಂಬಾ ಸೋಮಾರಿ. ಸೂರ್ಯ ಬಂದ್ ಕಾಲಿಗೆ ಕಿಕ್ಕಳಿ ಮಾಡ್ದ ಮೇಲೆನೇ ಅಂವ ಎದ್ದೇಳ್ದು. ಹಾಸಿಗೆಗೇ ಕಾಫಿ ಬರೋಕು. ಕಾಫಿಗೆ ಸಕ್ಕರೆ ಹಾಕಿರಿಕ್ಕಾದ್. ಬೆಲ್ಲ ಹಾಕಿದ ನೀರ್ನ ಒಲೇಲಿ ಕುದ್ಸಿ, ಕುದ್ಸಿ ಜೋನಿ ಥರ ಆದ್ಮೇಲೆ ಹುಡಿ ಹಾಕಿ ಮಾಡ್ದ ಕಾಫಿನೇ ಆಕು. ರುಚೀಲಿ ಒಂದುಚೂರು ಹೆಚ್ಚುಕಮ್ಮಿ ಆದ್ರೂ, ಕಾಫಿನ ಗ್ಲಾಸ್ ಸಮೇತ ಕಿಡ್ಕಿಂದ ಹೊರಗೆ ಬಿಸಾಕಿ ಬಿಡ್ತಿತ್ತ್. ಹಂಗಾಗಿ ಚೋಮುಣಿನ ಹೆಣ್ಣ್ ಚುಮ್ಮಿ, ಹೆದ್ರಿಕಂಡ್ ಹೆದ್ರಿಕಂಡೇ ಹೋಗಿ ಗಂಡಂಗೆ ಕಾಫಿ ಕೊಡ್ತಿತ್ತ್. ಹಂಗೆತೇಳಿ ಮಲಗಿದವ್ನ ಎದ್ದೇಳ್ಸಿ ಕಾಫಿ ಕೊಡುವಂಗಿಲ್ಲೆ. ಅದಕ್ಕೂ ಒಂದು ರಿತಿ ನೀತಿ ಉಟ್ಟು. ಚುಮ್ಮಿ ಸದ್ದಾಗದಂಗೆ ಮೆಲ್ಲನೆ ಚೋಮುಣಿನ ಕೋಂಬರೆ ಹತ್ರ ಹೊಗ್ತಿತ್ತ್. ಸದ್ದಾಗದಂಗೆ ಬಾಗಿಲು ಸೆರೇಲಿ ಬಗ್ಗಿ ನೋಡ್ತಿತ್ತ್. ಎಚ್ಚರ ಇದ್ದ್, ಮಲಗಿದ್ದಲ್ಲೇ ಆಚೆ ಈಚೆ ಹೊರಳಾಡ್ತಿದ್ದರೆ ಮಾತ್ರ ಕಾಫಿ ಗ್ಲಾಸ್ ತಕ್ಕಂಡ್ ಹೋಗಿ ಅಂವನ ಮುಂದೆ ಹಿಡೀತಿತ್ತ್. ಆಗ ಚೋಮುಣಿ ಹಾಸಿಗೆಲೇ ಒಮ್ಮೆ ಮೈಮುರ್ದ್, ಊರಿಗೆಲ್ಲಾ ಕೇಳುವಂಗೆ ಆ...ಆ...ತಾ ಆಕಳಿಸಿ ಎದ್ದ್ ಕೂತ್ಕಣ್ತಿತ್. ಹೆಣ್ಣ್ನ ಒಮ್ಮೆ ತಲೆಂದ ಕಾಲ್ ವರೆಗೆ ನೋಡಿ, ಅವಳ ಕೈಂದ ಕಾಫಿ ತಕ್ಕಣ್ತಿತ್ತ್. ಒಂದು ಗುಟುಕು ಕಾಫಿ ಚೋಮುಣಿದ್ ಗಂಟ್ಲ್ಲಿ ಇಳಿವ ವರೆಗೆ ಚುಮ್ಮಿಗೆ ಒಂಥರಾ ಟೆನ್ಶನ್. ಎಲ್ಲಿ ಕಾಫಿನ ಗ್ಲಾಸ್ ಸಮೇತ ಕಿಡ್ಕಿಂದ ಬಿಸಾಕಿಬಿಟ್ಟದೆಯೇನೋತಾ ಹೆದ್ರಿಕೆ....ಅಂವ ಸುರ್...ಸುರ್... ತಾ ಬಾಯಿ ಚಪ್ಪರಿಸಿಕಂಡ್ ಕುಡ್ತ್ತೇಳಿರೆ ಇವಳಿಗೆ ನೆಮ್ಮದಿ. ಸೆರ್ಗ್ನ ಸೊಂಟಕ್ಕೆ ಸಿಕ್ಕಿಸಿಕಂಡ್ ಹಟ್ಟಿಗೆ ಸಗಣಿ ಬಾಚಿಕೆ ಹೋಗಿಬಿಡ್ತಿತ್ತ್. ಈ ಪುಣ್ಯಾತ್ಮ ಮಾತ್ರ ಗ್ಲಾಸ್ಲಿ ಜೆಂಡ್ ಕೂಡ ಬಿಡದಂಗೆ ಕಾಫಿನ ಕುಡ್ದ್ ಪುನಃ ಗುಡಿ ಹೊದ್ದ್ ಮಲಗಿಬಿಡ್ತಿತ್. ಮತ್ತೆ ಇಂವ ಏಳ್ತಿದ್ದ್, `ಹೋಯ್...ರೊಟ್ಟಿ ಆಗುಟ್ಟು ಬನ್ನಿಯಾ ತಿಂಬಕೆ..'ತಾ ಹೆಣ್ಣ್ ಕರ್ದ ಮೇಲೆನೇ...   
ಸ್ನಾನ ಮಾಡುದು ಇರ್ಲಿ, ಹಲ್ಲು ಕೂಡ ಉಜ್ತಿತ್ಲೆ. ಬಿಸಿನೀರ್ನ ಒಂದ್ಸಲ ಬಾಯೊಳಗೆ ಹಾಕಿ ಬುಳುಬುಳುತಾ ಮುಕ್ಕಳ್ಸಿ, ಪ್ಲೇಟ್ ಹಿಡ್ಕಂಡ್ ಒಲೆ ಬುಡಲಿ ಕುದ್ದ್ಬಿಡ್ತಿತ್ ಚೋಮುಣಿ. ಯಾರು ಎಷ್ಟು ಹೇಳಿರೂ ಈ ಕೆಟ್ಟ ಬುದ್ಧಿನ ಇಂವ ಬಿಡ್ತಿತ್ಲೆ. ಮೂರು ದಿನಕ್ಕೊಂದ್ಸಲ ರಾತ್ರಿ ಮಲಿಗಿಕೆ ಮೊದ್ಲು ಸ್ನಾನ ಮಾಡ್ತಿತ್ತ್. ಅದೂ ಊಟ ಮಾಡ್ದಮೇಲೆ. `ನಿಮಿಗೆ ಊಟಕ್ಕೆ ಮೊದ್ಲು ಸ್ನಾನ ಮಾಡಿಕೆ ಎಂಥ ರೋಗ..'ತಾ ತುಂಬಾ ಸಲ ಹೆಣ್ಣ್ ಬೈದುಟ್ಟು. ಅದಕ್ಕೆ ಚೋಮುಣಿದ್ ಉತ್ತರ ಎಂಥ ಗೊತ್ತಾ? `ಊಟಕ್ಕೆ ಮೊದ್ಲು ಸ್ನಾನ ಮಾಡಿರೆ, ಹೊಕ್ಕುಳಲಿ ಇರ್ವ ಕೊಳೆ ಹೋಲೆ...ಅದೇ ಊಟ ಆದ್ಮೇಲೆ ಸ್ನಾನ ಮಾಡಿರೆ ಹೊಕ್ಕುಳ ಮುಂದೆ ಬಂದಿದ್ದದೆ. ಸ್ನಾನ ಮಾಡಿಕನ ಸುಲಭಲಿ ಕೊಳೆ ಹೋದೆ ಗೊತ್ತಾ..'ತಾ ವಿತಂಡ ವಾದ ಮಾಡ್ತಿತ್ತ್. ಚುಮ್ಮಿ ತಲೆ ತಲೆ ಚಚ್ಚಿಕಂಡ್ ರಾತ್ರಿ ಉಳ್ದ ಅನ್ನ, ಸಾರ್ನ ತೆಗ್ದ್ ಗೋಡೆಪೆಟ್ಟಿಗೆಯೊಳಗೆ ಇಟ್ಟ್ ಚಿಲ್ಕ ಸಿಕ್ಕಿಸಿ ಹೋಗಿ ಮಲಗಿಕಣ್ತಿತ್. ಇಂಥ ಈ ಜೋಡಿದ್ ಲವ್ ಮ್ಯಾರೇಜ್ತಾ ಹೇಳಿರೆ ನೀವು ನಂಬಿಕ್ಕಿಲ್ಲೆ.
ಚೇರಂಗಾಲಲಿ ಎರಡು ವರ್ಷಕ್ಕೆ ಒಂದ್ಸಲ ಹಬ್ಬ. ಒಂದು ವರ್ಷ ತಣ್ಣಿಮಾನಿಲಿ ಹಬ್ಬ ಇದ್ದರೆ, ಇನ್ನೊಂದು ವರ್ಷ ಚೇರಂಗಾಲಲಿ. ಒಂಥರ ಪರ್ಯಾಯ ಉತ್ಸವ ಇದ್ದಂಗೆ ! ಹಂಗೆ ಆ ವರ್ಷನೂ ಚೇರಂಗಾಲಲಿ ಹಬ್ಬ ಬಂದಿತ್ತ್. ಆಗಷ್ಟೇ ಪಿಯುಸಿ ಪರೀಕ್ಷೆ ಬರ್ದಿದ್ದ ಚೋಮುಣಿ, ಹಬ್ಬ ದಿನ ದೇವಸ್ಥಾನ ಬಾಣೇಲಿ ಐಸ್ಕ್ಯಾಂಡಿ ಮಾರಿಕೆ ಕುದ್ದ್ಕಂಡಿತ್ತ್. ಎರಡು ಮೂರು ಮಾಪ್ಳೆ ಹೈದಂಗಳೂ ಐಸ್ಕ್ಯಾಂಡಿ ಡಬ್ಬ ತಂದ್ ವ್ಯಾಪಾರ ಮಾಡ್ತಿದ್ದೊ... ಆದ್ರೆ ಗೂಡೆಗ ಮಾತ್ರ ಚೋಮುಣಿ ಹತ್ರನೇ ಬಂದ್ ಐಸ್ಕ್ಯಾಂಡಿ ತಕ್ಕಣ್ತಿದ್ದೊ. ಆ ಪೈಕಿ ಒಂದ್ ಗೂಡೆ ಚೋಮುಣಿಗೆ ತುಂಬಾ ಇಷ್ಟ ಆತ್. `ಲವ್ ಎಟ್ ಫಸ್ಟ್ ಸೈಟ್'ತಾ ಹೇಳಿವೆಯಲ್ಲಾ..ಹಂಗೆ. ಆ ಗೂಡೆನೂ ಹಂಗೆನೇ. ಅಲ್ಲಿ ದೇವಸ್ಥಾನಲಿ ತೆರೆ ಜೋರಾಗಿ ನಡೀತ್ತಿದ್ದರೆ, ಅವಳ ಕಣ್ಣೆಲ್ಲಾ ಚೋಮುಣಿ ಮೇಲೆನೇ. ನಾಲ್ಕೈದ್ ಸಲ ಬಂದ್ ಐಸ್ಕ್ಯಾಂಡಿ ತಕ್ಕಂಡ್ ಹೋತ್. ಐದನೇ ಸಲ ಚೋಮುಣಿ ದುಡ್ಡ್ ತಕ್ಕಣ್ತ್ಲೆ. ಇವಳೇ ಅವನ ಜೋಬೊಳಗೆ 5 ರೂಪಾಯಿ ನೋಟ್ ತುರ್ಕಿಸಿತ್ತ್. ಆ ಗೂಡೆನೇ ಚುಮ್ಮಿ. ಹಬ್ಬ ಮುಗ್ದ ಮೇಲೆ ದನ ನೋಡಿಕೆ ಹೋಕಾಕನ, ಮದುವೆ ಮನೆಗಳಲ್ಲಿ, ಕೂಸಿಗೆ ಹೆಸ್ರು ಹಾಕುವಲ್ಲಿ.. ಹಿಂಗೆ ಆಗಾಗ ಭೇಟಿ ಆಗ್ತಿದ್ದೊ. ಕೊನೆಗೆ ಇಬ್ಬರ ಮನೆಯವ್ಕೂ ವಿಷಯ ಗೊತ್ತಾತ್. ಒಂದು ದಿನ ಭಾಗಮಂಡಲ ಗೌಡಸಮಾಜಲಿ ಜೋರಾಗಿ ಮದುವೆನೂ ಆತ್.
ಮೂರು ತಿಂಗ ಎಲ್ಲಾ ಸರಿ ಇತ್ತ್. ಮತ್ತೆ ಎಂಥ ಆತೋ ಯಾರಿಗೂ ಗೊತ್ಲೆ. ಚೋಮುಣಿ ದೊಡ್ಡ ಸೋಮಾರಿ ಆಗಿಬಿಡ್ತ್. ಇದೇ ಗ್ಯಾನಲಿ ಅವನ ಅಪ್ಪ, ಅಮ್ಮ ಸತ್ತುಹೋದೊ. ಮನೆ ಜವಾಬ್ದಾರಿ ಚುಮ್ಮಿ ಹೆಗಲಿಗೆ ಬಿತ್ತ್. ಚೋಮುಣಿನ ಮೊದಲಿನಂಗೆ ಮಾಡಿಕೆ ಇವ್ಳು ತುಂಬಾ ಕಷ್ಟ ಪಟ್ಟತ್. ಇದ್ದ ಬದ್ದ ದೇವರು ದೆವ್ವಗಳಿಗೆಲ್ಲಾ ಹರಕೆ ಹೊತ್ತ್ಕಂಡತ್. ತೋಟದ ಮೂಲೆಲಿರ್ವ ಕರಿಚೌಂಡಿಗೆ ಹಂದಿ ಕೊಯ್ಸಿನೆತಾ ಹೇಳಿಕಂಡತ್...ಊಹುಂ, ಚೋಮುಣಿ ಬದಲಾತ್ಲೆ. ಹಂಗೆನೇ ಎರಡು ವರ್ಷ ಕಳ್ತ್.
ಒಂದ್ ದಿನ ಬೆಳಗ್ಗೆ ಚುಮ್ಮಿ ಚೋಮುಣಿಗೆ ಕಾಫಿ ತಂದ್ ಕೊಡಿಕಾಕನ ವಾಂತಿ ಮಾಡಿಕಂಡ್ಬಿಡ್ತ್. ಅಲ್ಲೇ ತಲೆ ತಿರುಗಿ ಬಿದ್ದ್ತ್. ಗುಡಿ ಹೊದ್ದ್ ಮಲಗಿಕಂಡಿದ್ದ ಚೋಮುಣಿಗೆ ಹೆದ್ರಿಕೇಲಿ ಸ್ವಲ್ಪ ಹೊತ್ತು ಏನು ಮಾಡೊಕೂತ ಗೊತ್ತಾತ್ಲೆ. ಅಡುಗೆ ಕೋಂಬರೆಗೆ ಹೋಗಿ ಸ್ವಲ್ಪ ನೀರ್ ತಂದ್ ಚುಮ್ಮಿದ್ ತಲೆಗೆ ಹಾಕಿ ತಟ್ಟಿತ್. ಅವ್ಳಿಗೆ ಎಚ್ಚರ ಆಗಿ ಕುದ್ದ ಕೂಡ್ಲೆ ಓಡಿ ಹೋಗಿ ಅಣ್ಣಿನ ಜೀಪ್ ತಂದ್ ಭಾಗಮಂಡಲ ಆಸ್ಪತ್ರೆಗೆ ಕರ್ಕಂಡ್ ಹೋಗಿ ಸೇರ್ಸಿತ್. ಚುಮ್ಮಿನ ಪರೀಕ್ಷೆ ಮಾಡ್ದ ಡಾಕ್ಟರ್ ಹೊರಗೆ ಬಂದ್. `ಕಂಗ್ರಾಟ್ಸ್ ಚೋಮುಣಿ...ನೀವು ಅಪ್ಪ ಆಗ್ತಿದ್ದೀರಿ.. ಬೇಗ ಸ್ವೀಟ್ ಕೊಡಿ'ತಾ ಖುಷಿ ವಿಷಯನ ಹೇಳಿ ಮತ್ತೆ ಒಳಗೆ ಹೋತ್.
ಈಗ ಎಲ್ಲಾ ಉಲ್ಟಾ...ಚೋಮುಣಿ ಜಾಗಲಿ ಚುಮ್ಮಿ ! ಇವನೇ ಬೇಗ ಎದ್ದ್ ಕಾಫಿ ಮಾಡಿಕಂಡ್ ಹೋಗಿ     ಮಲಗಿದಲ್ಲಿಯೇ ಅವಳಿಗೆ ಕುಡಿಸಿದೆ. ಹಟ್ಟಿಗೆ ಹೋಗಿ ಸಗಣಿನೂ ಬಾಚಿದೆ. ಇದನ್ನೆಲ್ಲಾ ನೋಡ್ದ ಚುಮ್ಮಿ ಹೊಟ್ಟೆ ಮೇಲೆ ಕೈಯಾಡಿಸಿಕಂಡ್ `ಥ್ಯಾಂಕ್ಸ್ ಪುಟ್ಟ'ತಾ ಹೇಳಿ ಕಣ್ಣ್ಮುಚ್ಚಿಕಂಡತ್. ಅಲ್ಲಿ ಖುಷಿಯ ಕಣ್ಣೀರು !

- ಸುನಿಲ್ ಪೊನ್ನೇಟಿ
arebhase@gmail.com