ಗಿಣಿ...ಅವ್ಳ ಹೆಸ್ರೇ ಹಂಗೆ. ಅಪ್ಪ, ಅಮ್ಮನ ಒಬ್ಳೇ ಮುದ್ದಿನ ಕೂಸು. ಗಿಣಿ ಥರನೇ ಸಾಕಿದ್ದೋ...ಥೇಟ್ ಪಂಜರದ ಗಿಣಿಯಂಗೆ ! ಅಂತಿಂಥ ಪಂಜರ ಅಲ್ಲ, ಚಿನ್ನದ ಪಂಜರ ! ಗಿಣಿಗೂ ಕನಸುಗಳಿದ್ದೋ...ಆದ್ರೆ ಆ ಕನಸುಗಳೆಲ್ಲಾ ಚಿನ್ನದ ಪಂಜರದೊಳಗೆ ಕರಗಿಹೋಗಿತ್ತ್. ಮನೆ ಬಿಟ್ಟು ಹೊರಗೆ ಹೋಗುವಂಗೆನೇ ಇಲ್ಲೆ....ಎಲ್ಲಾ ಕುದ್ದಲ್ಲಿಗೇ ಬರ್ತಿತ್ತ್. ಬೆಳಗ್ಗೆ 6 ಗಂಟೆಗೆ ಆಯಾ ಬಂದ್ ಎದ್ದೇಳಿಸಿ, ಬ್ರಷ್ ಮಾಡ್ಸಿ, ಹಾರ್ಲಿಕ್ಸ್ ಕುಡಿಸಿರೆ, 7 ಗಂಟೆಗೆ ಯೋಗ ಟೀಚರ್, 8 ಗಂಟೆಗೆ ಕರಾಟೆ ಮಾಸ್ಟರ್ ಬಂದ್ ಅವ್ಳಿಗೆ ಯೋಗ ಮತ್ತೆ ಕರಾಟೆ ಹೇಳಿಕೊಡ್ತಿದ್ದೊ. 10 ಗಂಟೆಂದ ಸಂಜೆ ನಾಲ್ಕು ಗಂಟೆ ವರೆಗೆ ಪಾಠ. ಅದಕ್ಕೂ ಟೀಚರ್ಗ ಮನೆಗೆ ಬರ್ತಿದ್ದೊ. ಎಲ್ಲಾ ಒಂಥರ ಮೆಕ್ಯಾನಿಕಲ್ ಆಗಿ ನಡೀತ್ತಿತ್ತ್. ಇಂಥ ಗಿಣಿ, ಎಸ್ಎಸ್ಎಲ್ಸಿ ಪರೀಕ್ಷೆ ಬರಿಯಕ್ಕೆ ಹೋಗಿತ್ತ್. ಅದೇ ಅವ್ಳು ಮೊದಲ ಸಲ ಮನೇಂದ ಹೊರಕ್ಕೆ ಹೋದ್...
ಎಸಿ ಕಾರ್. ಮುಂದೆ ಡ್ರೈವರ್ ಮತ್ತೆ ಟೀಚರ್. ಹಿಂದೆ ಸಿಟ್ಲಿ ಆಚೆ ಈಚೆ ಅಪ್ಪ-ಅಮ್ಮ. ಮಧ್ಯಲಿ ಗಿಣಿ. ಕಾರು ಮುಂದಕ್ಕೆ ಹೋಗ್ತಿದ್ದಂಗೆ ಹಿಂದಕ್ಕೆ ಓಡ್ತಿದ್ದ ಗಿಡ, ಮರಗಳ್ನ ಗಿಣಿ ತುಂಬಾ ಆಶ್ಚರ್ಯಂದ ನೋಡ್ತಿತ್ತ್. ಇವ್ಳು ಪರೀಕ್ಷೆ ಬರೆಯಕ್ಕಾಗಿದ್ದ ಶಾಲೆ ಹತ್ರ ಬಾತ್. ಗೇಟ್ ಹತ್ರ ಒಬ್ಬ ಸುರಸುಂದರಾಂಗ ಹೈದ..! ಫೋಟೋ ತೆಗ್ದ ಹಂಗೆ ಗಿಣಿ ಮನಸ್ಲಿ ಅವನ ಚಿತ್ರ ಸೇವ್ ಆಗಿಬಿಟ್ಟತ್...ಪರೀಕ್ಷೆ ಬರೆಯಕಾಕನ ಪಕ್ಕದ ಸಿಟ್ಲಿ ಕೂಡ ಅವ್ನೇ..! ಆ ಹೈದನ ಕಣ್ಣ್ಲಿ ಭವಿಷ್ಯದ ದಾರಿ ಸ್ಪಷ್ಟವಾಗಿ ಕಾಣ್ತಿತ್ತ್. ಓದಿದ್ದನ್ನೆಲ್ಲಾ ತುಂಬಾ ಲಾಯ್ಕಲಿ ಪೇಪರ್ ಮೇಲೆ ಭಟ್ಟಿ ಇಳಿಸ್ತಿತ್ತ್. ಆದ್ರೆ ಗಿಣಿಗೆ ಮಾತ್ರ ಎಂಥ ಬರೆಯೋಕುತನೇ ಗೊತ್ತಾತ್ಲೆ...ಆ ಸುರಸುಂದರಾಗನ ನೋಡಿಕಂಡೇ ಕಾಲ ಕಳ್ದ್ಬಿಟ್ಟತ್. ಆರು ಪರೀಕ್ಷೆಯ ಆರೂ ದಿನನೂ ಇದೇ ಕಥೆ....ಮನೆಗೆ ಬಂದರೂ ಯಾವುದಕ್ಕೂ ಮನಸ್ಸಿಲ್ಲೆ...ಕಣ್ಣುಬಿಟ್ಟರೆ, ಕಣ್ಣು ಮುಚ್ಚಿರೆ ಎಲ್ಲೆಲ್ಲೂ ಅದೇ ಹೈದನ ಚಿತ್ರ. ಗಿಣಿಗೆ ಜ್ವರ ಬಾತ್.
ದೊಡ್ಡ ದೊಡ್ಡ ಡಾಕ್ಟರ್ಗಳೆಲ್ಲಾ ಬಂದ್ ನೋಡ್ದೊ...ಗಿಣಿಗೆ ಬಂದ ಜ್ವರ ಯಾವುದುತಾ ಯಾರಿಗೂ ಗೊತ್ತಾತ್ಲೆ. ಅವ್ಳನ್ನ ಅಮೆರಿಕಾಕ್ಕೆ ಕರ್ಕಂಡ್ ಹೋಕೆ ಪ್ಲ್ಯಾನ್ ಮಾಡ್ದೊ. ಅಷ್ಟೊತ್ತಿಗೆ ಗಿಣಿಗೆ ಬಂದ ಜ್ವರದ ಹಿಂದಿನ ಕಾರಣ ಅವ್ಳ ಟೀಚರ್ಗೆ ಗೊತ್ತಾತ್. ಪರೀಕ್ಷೆ ದಿನ ಪಕ್ಕಲಿ ಕುದ್ದಿದ್ದ ಹೈದನ ಫೋಟೋನ ತಂದ್ ಗಿಣಿ ಮುಂದೆ ಹಿಡಿಯಕಾಕನ, ಅವ್ಳ ಕಣ್ಣ್ಲಿ ವಿಶೇಷ ಬೆಳಕು ! ಟೀಚರ್ ತಡ ಮಾಡ್ತ್ಲೆ...ಹೋಗಿ ಆ ಹೈದನ ಕರ್ಕಂಡ್ ಬಾತ್...ಅವ್ನನ್ನ ನೋಡ್ತಿದ್ದಂಗೆ ಗಿಣಿ ಹೊರಗೆ ಓಡಿ ಹೋತ್...ಅವನ ಕೈ ಹಿಡ್ಕಂಡ್ ಗೇಟ್ ದಾಟಿತ್....
- ಸುನಿಲ್ ಪೊನ್ನೇಟಿ
`ಜನ ಈಗ ನಮ್ಮ ಹೆಸರೇಳಿಕೂ ಹೆದರ್ತೊಳೊ...'
`ಅಲ್ಲಮತ್ತೆ...ಹಿಂಗೆ ರೇಟ್ ಆಕಾಶ ಕಡೆ ಓಡ್ತಿದ್ದರೆ ಇನ್ನೇನಾದೆ..'
`ಹೌದು....ಪ್ರೀತಿಲಿ `ಚಿನ್ನಾ' ತಾ ಕಿವಿಹತ್ರ ಬಂದ್ ಹೇಳಿಕಣಿಕೂ ಹಿಂದೆ ಮುಂದೆ ನೋಡಿವೆ'
`ಇನ್ನೆಂಥ...? 20 ವರ್ಷಗಳ ಹಿಂದೆ ಹಿಂಗೆ ಇತ್ತಾ?'
`ಎಲ್ಲಿತ್ತ್? ಪುತ್ತೂರಿಗೆ 10ಸಾವಿರ ರೂಪಾಯಿ ತಕ್ಕಂಡ್ ಹೋಗಿದ್ದರೆ, ಬಾಕಾಕನ ಒಳ್ಳೇ ಎರಡಳೆ ಚೈನ್ ತಕ್ಕಂಡ್ ಬರಕ್ಕಾಗಿತ್ತ್.'
`ಈಗ ಹೋದ ಹೋದಲ್ಲಿ ನಮ್ಮ ಅಂಗಡಿಗ... ಈ ಅಂಗಡಿಗ ಜಾಸ್ತಿ ಆದಷ್ಟೂ ನಮ್ಮ ರೇಟ್ ಜಾಸ್ತಿ ! ನಿನ್ನೆ 10 ಗ್ರಾಂಗೆ 32 ಸಾವಿರ ರೂಪಾಯಿ..!'
`ಹುಂ...ದೀಪಾವಳಿ ಬಾಕಾಕನ 50 ಸಾವಿರ ರೂಪಾಯಿ ಆದೆ ಗಡ..!'
`ಹಿಂಗಾದರೆ ದೇವರೇ ಗತಿ..! ನಿನ್ನ ಮುಖಲಿ ಕೂರಿಸಿಯೊಳಲಾ ಆ ನೀಲಿ ಕಲ್ಲು...ನಿಂಗೆ ತುಂಬಾ ಲಾಯ್ಕ ಕಂಡದೆ...ಸುರಸುಂದರಾಂಗ..!'
`ಸಾಕ್...ಸಾಕ್...ತುಂಬಾ ಹೊಗುಳುಬೇಡ. ನೀ ಏನು ಕಮ್ಮಿ ಪೊರ್ಲು ಒಳಾ...? ಆಕಾರ ಸಣ್ಣ ಆದ್ರೂ... ಬಂದವು ಒಂದ್ಸಲ ನಿನ್ನನ್ನ ಅವ್ರ ಬೆರಳಿಗೆ ಹಾಕ್ಕಂಡ್ ನೋಡಿವೆ...'
`ಹೌದೌದು....ನೀ ನಂಗೆ ಹಂಗೆ ಹೇಳಿರೆ ನಾಚಿಕೆ ಆದೆ...!'
`ಛಿ..ಕಳ್ಳಿ... ನೀ ನಾಚಿಕಂಡ್ರೂ ತುಂಬಾ ಲಾಯ್ಕ ಕಂಡಿಯಾ...ನಿನ್ನ ಮುಖಲಿರ್ವ ನೇರಳೆ ಹರಳಂತೂ ಸೂಪರ್...'
`ಇನ್ನೆಷ್ಟು ದಿನರಾ ಹಿಂಗೆ?'
`ಹೆಂಗೆ...?'
`ಅದೇ ಈಗ ಒಳಾ ಅಲಾ ಜೊತೆ ಜೊತೆಲೇ...ಹಂಗೆ...'
`ಶ್....ಶಬ್ದ ಮಾಡ್ಬೇಡಾ...ಅವ್ಳು ಬರ್ತುಟ್ಟು....'
`ಅವ್ಳು ಅಂದ್ರೆ.... ಯಾರ್ ?'
`ಅದೇ...ಅವ್ಳ ಬಾಯ್ಫ್ರಂಡ್ ಬೆರಳಿಗೆ ಹಾಕಿಕೇತಾ ಆರ್ಡರ್ ಕೊಟ್ಟು ನನ್ನ ರೆಡಿ ಮಾಡಿಸಿತ್ತಲ್ಲಾ, ಅವ್ಳು....'
`ಹಂಗಾರೆ ಈಗ ನೀ ನನ್ನ ಬುಟ್ಟು ಹೋದಿಯಾ ?'
`ಹುಂ....ಡೀಯರ್...ನಾ ಹೋಗದಿದ್ದರೆ, ಈ ಆಚಾರಿ ಬುಟ್ಟದೆನಾ? ಅವ್ಳ ಕೈಂದ 20 ಸಾವಿರ ರೂಪಾಯಿ ತಕ್ಕಂಡತ್ಲೆನಾ...? ಏಯ್....ಅಲ್ಲಿ ನೋಡ್...'
`ಎಂಥ...?'
`ಅದೇ, ಗರ್ಲ್ ಫ್ರಂಡ್ಗೆ ಕೊಡಿಕೆತಾ ಆರ್ಡರ್ ಕೊಟ್ಟು ನಿನ್ನ ರೆಡಿ ಮಾಡಿಸಿತ್ತಲ್ಲಾ...ಅಂವ ಬರ್ತುಟ್ಟು...'
`ಅಯ್ಯೋ...ಇಷ್ಟು ಬೇಗ ನಾವು ದೂರ-ದೂರ ಆಗ್ತೊಳಲಾ...'
`ನಿರಾಸೆ ಬೇಡ ಡೀಯರ್...ಮತ್ತೆ ನಾವಿಬ್ಬರೂ ಒಟ್ಟು ಸೇರುನೋ...ಅವಿಬ್ಬರೂ ಕೈ ಕೈ ಹಿಡ್ಕಂಡಾಗ...!!'
- ಸುನಿಲ್ ಪೊನ್ನೇಟಿ
arebhase@gmail.com
ಮುಂಬೈ ಧೋಬಿಘಾಟ್ ಗೊತ್ತುಟ್ಟಲ್ಲಾ...? ತುಂಬಾ ಫಿಲಂಗ ಅಲ್ಲಿ ಶೂಟಿಂಗ್ ಆಗುಟ್ಟು. ಅಂಥ ಧೋಬಿ ಘಾಟ್ಗ ಎಲ್ಲಾ ಊರುಗಳಲ್ಲೂ ಇದ್ದದೆ. ಆದ್ರೆ ಅಷ್ಟು ದೊಡ್ಡದು ಇರುದುಲ್ಲೆ ಅಷ್ಟೇ...ನನ್ನ ಊರುಲಿ ಕೂಡ ಒಂದು ಧೋಬಿಘಾಟ್ ಉಟ್ಟು. ಭಕ್ತರ ಪಾಪಗಳ್ನ ತೊಳಿಯುವ ಕನ್ನಿಕಾ ಹೊಳೆ, ಸಂಗಮಕ್ಕೆ ಬರ್ವ ಮೊದ್ಲು ಈ ಧೋಬಿಘಾಟ್ಲಿ ಬಟ್ಟೆಗಳ ಕೊಳೆ ತೆಗ್ದು ಬಂದದೆ. ಆ ಊರಿನ ಪೋಲೀಸ್ ಇನ್ಸ್ಪೆಕ್ಟರ್ಂದ ಹಿಡ್ದ್, ಪಂಚಾಯಿತಿ ಕುಲುವಾಡಿ ವರೆಗಿನ ಖಾಕಿ ಯೂನಿಫಾರಂ. ಅನಂತ ಭಟ್ಟರ್ಂದ ಹಿಡ್ದ್ ಗೌರ್ಮೆಂಟ್ ಆಸ್ಪತ್ರೆ ಡಾಕ್ಟರ್ ವರೆಗಿನ ಬಿಳಿ ಬಟ್ಟೆ ಕ್ಲೀನ್ ಆದು ಇಲ್ಲಿಯೇ... ಧೋಬಿ ಘಾಟ್ಗಿಂತ ಕೆಳಗೆ ಇರವ್ಕೆ ಇದ್ಯಾವುದೂ ಗೊತ್ತಾಲೆ. ಎಲ್ಲವೂ ಅದೇ ನೀರ್ನ ಕುಡ್ದವೆ. ಅದೇ ನೀರ್ಲಿ ಸ್ನಾನ ಮಾಡಿವೆ. ಅದೇ ನೀರ್ಲಿ ಈಜಾಡಿವೆ.
ಕನ್ನಿಕಾ ಹೊಳೆಯ ಆ ಕಲ್ಲುಗ ಬಟ್ಟೆ ಒಗೆಯುವವ್ಕಾಗಿ ಅಲ್ಲಿ ಹುಟ್ಟಿಕಣ್ತೋ, ಅಥ್ವಾ ಆ ಕಲ್ಲುಗಳ್ನ ನೋಡಿಕಂಡ್ ಬಟ್ಟೆ ಒಗೆಯುವವು ಅಲ್ಲಿ ಮನೆ ಕಟ್ಟಿಕೊಂಡೊಳನಾ ? ಗೊತ್ಲೆ. ಆ ಜಾಗನೂ ಅಷ್ಟೇ, ತುಂಬಾ ಲಾಯ್ಕ ಉಟ್ಟು. ಮೊಣಕಾಲು ವರೆಗೆನೇ ಹರಿಯುವ ಕನ್ನಿಕಾ ಹೊಳೆ...ಕುದ್ದ್ಕಂಡ್, ನಿಂತ್ಕಂಡ್, ಬೇಕಾರೆ ಮಲಗಿಕಂಡೂ ಒಗೆಯಕ್ಕೆ ಅನುಕೂಲ ಆಗುವ ದೊಡ್ಡ, ದೊಡ್ಡ ಕಲ್ಲುಗ. ಒಗ್ದ ಬಟ್ಟೆಗಳ್ನ ಒಣಗಿಕೆ ಹಾಕಿಕೆ ದೊಡ್ಡ ಬಾಣೆ... ಇನ್ನೆಂಥ ಬೇಕು ? ಬಟ್ಟೆ ಒಗ್ದು ಒಗ್ದು ಸುಸ್ತಾತಾ? ಅಲ್ಲೇ ಸ್ವಲ್ಪ ಮೇಲೆ ಒಂದು ಹೊಂಡ ಉಟ್ಟು. ಯಾವ ಸ್ವಿಮ್ಮಿಂಗ್ಪೂಲ್ಗೂ ಅದ್ ಕಡಿಮೆ ಇಲ್ಲೆ. ಜೀಪ್ಗಳ ಹಳೇ ಟ್ಯೂಬ್ನ ಸೊಂಟಕ್ಕೆ ಕಟ್ಟಿಕಂಡ್ ನೀರಿಗಿಳಿದ್ರೆ, ಸ್ವರ್ಗ ಸುಖ !
ಹೇಳಿಕೇಳಿ ನನ್ನೂರು ಮಳೆಯ ತವರೂರು ! ಒಂದು ವರ್ಷ ಹಂಗೆನೇ ಆತ್. ಜೋರು ಮಳೆ...ಒಂದು ವಾರ ಕಣ್ಣುಮುಚ್ಚಿಕಂಡ್ ಹೊಡ್ತ್. ಸಂಗಮದ ಹೊಳೆ ನೀರು ದೇವಸ್ಥಾನ ಮೆಟ್ಟಿಲು ದಾಟಿ, ಸಂತೋಷ್ ಹೊಟೇಲಿಗಾಗಿ, ಕಾವೇರಿ ದರ್ಶಿನಿಗೆ ನುಗ್ಗಿ, ವಿಜಯಲಕ್ಷ್ಮೀ ಷೆಡ್ ವರೆಗೆ ಬಂದ್ಬಿಡ್ತ್. ನಮ್ಮ ಧೋಬಿಘಾಟ್ ಪೂರ್ತಿ ಮುಳುಗಿ ಹೋಗಿ, ಬಟ್ಟೆ ಒಗೆಯುವವರ ಮನೆಯೊಳಗೆ ಮೊಣಕಾಲು ಗಂಟ ನೀರು ಬಂದಿತ್ತ್. ಮತ್ತೆ ಒಂದು ವಾರ ಇದೇ ಸ್ಥಿತಿ. ಇದಾದ್ಮೇಲೆ ಸ್ವಲ್ಪ ಸ್ವಲ್ಪನೇ ಮಳೆ ಕಡಿಮೆ ಆತ್. ಹೊಳೆ ನೀರೂ ಇಳ್ತ್. ಬಟ್ಟೆ ಒಗಿಯಕ್ಕೆ ಕನ್ನಿಕಾ ಹೊಳೆಗೆ ಹೋದ್ರೆ ಅಲ್ಲಿ ಎಂಥ ಉಟ್ಟು? ಮಣ್ಣು...ಹೌದು ಮಣ್ಣಲ್ಲ, ಬರೀ ಕೆಸ್ರು. ದೊಡ್ಡ ದೊಡ್ಡ ಕಲ್ಲುಗ ಕೆಸರೊಳಗೆ ಹೂತು ಹೋಗಿದ್ದೊ. ಬಟ್ಟೆ ಒಣಗಿಕೆ ಹಾಕುವ ಬಾಣೆ ತುಂಬಾ ನೀರು ನಿತ್ಕಂಡ್ ಕೆರೆ ಥರ ಆಗಿತ್ತ್. ಸ್ವಿಮ್ಮಿಂಗ್ಪೂಲ್ ಥರ ಇದ್ದ ಹೊಂಡಲಿ ಮರಳು ರಾಶಿ...ನಮ್ಮ ಜೀವನನೂ ಹಿಂಗೆ ತಾನೇ.... ಇಂದ್ ಇದ್ದಂಗೆ ನಾಳೆ ಇರ್ದುಲ್ಲೆ!!!
- ಸುನಿಲ್ ಪೊನ್ನೇಟಿ
arebahse@gmail.com
ಆಗಷ್ಟೇ ಮಳೆ ಬಂದ್ ನಿಂತಿತ್ತ್. ಮಣ್ಣೆಲ್ಲಾ ಹಸಿಹಸಿ... ಕಾಲಿಟ್ಟರೆ ಅಲ್ಲೇ ಹೆಜ್ಜೆ ಗುರುತು ಮೂಡುವಂಗೆ ಸ್ವಲ್ಪ ಕೆಸ್ರು. ಆ ಹೊತ್ತ್ಲಿ ಅದ್ಯಾಕೋ ಲಿಲ್ಲಿಗೆ ತೋಟಕ್ಕೆ ಹೋಗುವ ಮನಸ್ಸಾತ್. ಗದ್ದೆ ಹತ್ರ ಮನೆ. ಮನೇಂದ ತೋಟಕ್ಕೆ ಸುಮಾರ್ 2 ಕಿಲೋಮೀಟರ್ ದೂರ. ಮಳೆ ಬಂದ್ ತೋಟಲಿ ಕಾಫಿ ಕಾಯಿ ಉದುರಿಬಿಟ್ಟುಟ್ಟೋ ಏನೋತೇಳುವ ಹೆದರಿಕೆ, ಅವ್ಳನ್ನ ತೋಟದ ಕಡೆ ಹೋಗುವಂಗೆ ಮಾಡ್ತ್. ಇದ್ಕೆ ಕಾರಣನೂ ಉಟ್ಟು. ಅಲ್ಲಿ ಆ 2 ಎಕರೆ ತೋಟ ಸಿಕ್ಕಿಕಾದರೆ ಲಿಲ್ಲಿ ಮತ್ತೆ ಅವ್ಳ ಗಂಡಂಗೆ ಸಾಕಪ್ಪಾ ತೋಟದ ಸಹವಾಸತಾ ಹೇಳುವಂಗೆ ಆಗಿತ್ತ್. ತೋಟ ಸಿಕ್ಕಿ, ಅಲ್ಲಿ ಹೊಸ ಗಿಡ ಹಾಕಿ...ಈಗ ಮೊದ್ಲ ಫಸಲು....
ಲಿಲ್ಲಿ ಗಂಡ ಪಳಂಗ ಆರ್ಮಿಲಿ ಇತ್. ಲಿಲ್ಲಿ ಕೂಡ ಮದುವೆ ಆದ್ಮೇಲೆ ಅವನ ಜೊತೆನೇ ಹೋಗಿತ್ತ್. ಸಿಕಂದರಾಬಾದ್ಂದ ಹಿಡ್ದ್ ಕಾಶ್ಮೀರ ಮೂಲೆಯ ಲಡಾಕ್ ವರೆಗೆ ವರ್ಷಕ್ಕೆ ಒಂದು ಜಾಗಲಿ ಪಳಂಗ ಮತ್ತೆ ಲಿಲ್ಲಿ ಟ್ರಾನ್ಸ್ಫರ್ ಹೆಸ್ರಲ್ಲಿ ಸುತ್ತಾಡಿದ್ದೊ. ರಿಟೈರ್ಡ್ ಆಗಿ ಬಂದಮೇಲೆನೇ ಶುರುವಾದ್ ತಲೆನೋವು. ಪಳಂಗನ ಅಣ್ಣ `ನಾ ಏನೇ ಆದರೂ ಪಳಂಗಂಗೆ ಪಾಲು ಕೊಡ್ಲೆ'ತಾ ಹಠ ಹಿಡ್ದ್ ಕುದ್ದಿತ್ತ್. ಪಂಚಾಯ್ತಿ ಕರ್ದ ದಿನ ಜಗಳ ಆಡಿ, ಪಂಚಾಯ್ತಿಗೆ ಬಂದವ್ಕೆನೇ ಕೋವಿ ತೋರ್ಸಿ ಓಡಿಸಿತ್ತ್. ಕೊನೆಗೆ ಕೋರ್ಟ್ ಗೆ ಹೋಗಿ ಹತ್ತು ವರ್ಷ ಕೇಸ್ ನಡ್ದ ಮೇಲೆ 2 ಎಕರೆ ಜಾಗ ಪಳಂಗಪ್ಪನ ಪಾಲಿಗೆ ಸಿಕ್ಕಿತ್ತ್. ಹಂಗಾಗಿ ಗಂಡ, ಹೆಣ್ಣ್ ಇಬ್ಬರಿಗೂ ಆ ಜಾಗದ ಮೇಲೆ ತುಂಬಾ ಪ್ರೀತಿ. ಬೆವರಿನ ಜೊತೆ ರಕ್ತ ಸುರ್ಸಿ ಅಲ್ಲಿ ಕಾಫಿ ಗಿಡ ಬೆಳೆಸಿದ್ದೊ. ತೋಟ ತುಂಬಾ ಲಾಯ್ಕ ಬಂದಿತ್ತ್.
ಈ ವರ್ಷ ಮೊದಲ ಫಸಲು ಬಾತ್ತೇಳುವ ಖುಷಿ ಗಂಡ, ಹೆಣ್ಣ್ ಇಬ್ಬರಲ್ಲೂ ಇತ್ತ್. ಆದ್ರೆ ಟೈಂ ಅಲ್ಲದ ಟೈಂಲಿ ಬಂದ ಮಳೆ ಇವರ ತಲೆಕೆಡಿಸಿತ್. ಇಂದಂತೂ ಜೋರು ಮಳೆ. ಸಣ್ಣ ನಿದ್ದೆಮಾಡಿಬಿಟ್ಟನೆತಾ ಪಳಂಗ ಮಧ್ಯಾಹ್ನ ಊಟ ಮಾಡಿ ಹಾಸಿಗೆಲಿ ಬಿದ್ದ್ಕಂಡಿತ್ತ್. ಲಿಲ್ಲಿಗೆ ಮನಸ್ಸು ಕೇಳ್ತಿತ್ಲೆ. ಗಂಡನ ಎಚ್ಚರ ಮಾಡುದು ಬೇಡತಾ ಅವ್ಳೊಬ್ಳೇ ತೋಟದ ಕಡೆ ಹೆಜ್ಜೆ ಹಾಕಿತ್ತ್...ಮಳೆ ಬಂದ್ ನಿಂತಿದ್ದರಿಂದ ಮಳೆ ಹುಳ `ಕಿರ್ರೋಂ...ಕಿರ್ರೋಂ'ತಾ ಮರಡ್ತಿದ್ದೊ.
ಸಾಯಂಕಾಲ 5 ಗಂಟೆ ಆಗಿರೊಕೇನೋ...ಪಳಂಗಂಗೆ ಎಚ್ಚರ ಆತ್. `ಲಿಲ್ಲಿ...ಲಿಲ್ಲಿ'ತಾ ಎರಡು-ಮೂರು ಸಲ ಕರ್ತ್. ಉತ್ತರ ಬಾತ್ಲೆ... ಕಾಫಿ ಕಾಯಿಸ್ತಿರುದೇನೋತಾ ಅಡುಗೆ ಕೋಂಬರೆಗೆ ಹೋಗಿ ನೋಡಿರೆ, ಅಲ್ಲಿ ಇಲ್ಲೆ. ಗುಡ್ಡದ ಒಲೆ ಹತ್ರ ಹೋಗಿ ನೋಡ್ತ್..ಅಲ್ಲೂ ಕಾಂಬಲೆ. ಲಿಲ್ಲಿ ಎಲ್ಲಿ ಹೋಗಿರುದಪ್ಪತಾ ಪಳಂಗಂಗೆ ಹೆದ್ರಿಕೆ ಶುರುವಾತ್. ಮನೆ ಹೊರಗೆ ಬಂದ್, ಪುನಃ `ಲಿಲ್ಲಿ...ಲಿಲ್ಲಿ'ತಾ ಮೂರು-ನಾಲ್ಕು ಸಲ ಕರ್ತ್. ಅವಳ ಪತ್ತೆನೇ ಇಲ್ಲೆ. ಹಂಗೆ ಹೊರಗೆ ಬಂದ್ ನೋಡಿಕಾಕನ ತೋಟಕ್ಕೆ ಹೋಗುವ ದಾರೀಲಿ ಲಿಲ್ಲಿದ್ ಚಪ್ಪಲಿ ಗುರ್ತ್ ಕಾಣ್ತ್. `ಓ...ಲಿಲ್ಲಿ ತೋಟಕ್ಕೆ ಹೋಗಿರುದೇನೋ'ತಾ ಗ್ಯಾನ ಮಾಡ್ಕಂಡ್, ಪಳಂಗ ಕೂಡ ತೋಟದ ಕಡೆಗೆ ಹೊರ್ಟತ್. `ಇಷ್ಟು ಹೊತ್ತು ತೋಟಲಿ ಎಂಥ ಮಾಡಿದೆಯಪ್ಪಾ'ತಾ ಮನಸ್ಲಿ ಬಯ್ಕಂಡೇ ನಡ್ಕಂಡಿರ್ಕಾಕನ ದಾರೀಲಿ ಆನೆದ್ ಹೆಜ್ಜೆ ಕಂಡಂಗೆ ಆತ್...ಪಳಂಗ ಇನ್ನೂ ಸ್ವಲ್ಪ ಬಗ್ಗಿ ನೋಡ್ತ್...`ಡೌಟೇ ಬೇಡ...ಈ ದಾರೀಲಿ ಆನೆ ಹೋಗುಟ್ಟು...'ತಾ ಅವಂಗೆ ಗೊತ್ತಾತ್. ಲಿಲ್ಲಿದ್ ಚಪ್ಪಲಿ ಗುರುತು ಹಿಂದೆ, ಆನೆದ್ ಹೆಜ್ಜೆ ಗುರುತು ! ಆ ಹೆಜ್ಜೆ ಗುರುತು ಹಿಂದೆನೇ ಪಳಂಗ ಹೊರ್ಟತ್....
ತೋಟಕ್ಕೆ ಹೋಗಿ ನೋಡಿರೆ, ಪಳಂಗಂಗೆ ಎದೆ ಒಡ್ದು ಹೋದೋಂದೇ ಬಾಕಿ. ಕಾಫಿಗಿಡಗಳ್ನೆಲ್ಲಾ ಆನೆ ಹಾಳು ಮಾಡಿತ್ತ್. ಆದ್ರೆ ಅಲ್ಲಿ ಎಲ್ಲೂ ಲಿಲ್ಲಿ ಕಾಣ್ತ್ಲೆ. `ಲಿಲ್ಲಿ...ಲಿಲ್ಲಿ' ತಾ ಜೋರಾಗಿ ಕರ್ದತ್... ಹುಚ್ಚನಂಗೆ ಬೊಬ್ಬೆ ಹೊಡ್ಕಂಡ್ ತೋಟ ಪೂತರ್ಿ ಓಡಾಡ್ತ್....ಕೊನೆಗೆ ದೂರಲಿ ಬೆಟ್ಟ ಮೇಲೆಂದ ಇಳ್ಕಂಡ್ ಬರ್ವ ತೋಡು ಹತ್ರ ಲಿಲ್ಲಿದ್ ಸೀರೆ ಕಂಡಂಗಂಗೆ ಆತ್... ಹತ್ತಿರ ಹೋಗಿ ನೋಡಿರೆ....ಹೌದು, ಅಲ್ಲಿ ಲಿಲ್ಲಿ ಹೆಣ ! ಯಾವುದೋ ಹಳೇ ಸಿಟ್ಟು ಇದ್ದಂಗೆ ಆನೆ ಲಿಲ್ಲಿನ ಮೆಟ್ಟಿ ಮೆಟ್ಟಿ ಕೊಂದ್ಹಾಕಿತ್ತ್ !!
- ಸುನಿಲ್ ಪೊನ್ನೇಟಿ
arebhase@gmail.com
ಚಂದಮಾಮತಾ ಹೇಳಿರೆ ನಂಗೊಂಥರ ಖುಷಿ...ಅವನ ನೋಡ್ತಿದ್ದರೆ ಮನಸ್ನ ದುಃಖ ಎಲ್ಲಾ ಮಾಯ ಆಗ್ತಿತ್..ಆದ್ರೆ ಇಂದ್ಯಾಕೋ ಚಂದಮಾಮಂಗೂ ನನ್ನ ಬಗ್ಗೆ ಜಿಗುಪ್ಸೆ ಬಂದುಟ್ಟು ಕಂಡದೆ....ಅಂವ ನಂಗೆ ಮುಖನೇ ತೋರಿಸ್ತಿಲ್ಲೆ. ನಾ ಯಾರ ಹತ್ರ ನನ್ನ ನೋವು ಹೇಳಿಕಣಲಿ? ಈ ಮೊದ್ಲು ಯಾವತ್ತು ಕೂಡ ಹಿಂಗೆ ಆಗಿತ್ತ್ಲೆ...ಸಣ್ಣಂವ ಇರ್ಕಾಕನ ನಾ ಊಟನೇ ಸರಿಯಾಗಿ ಮಾಡ್ತಿತ್ಲೆ. ಆಗ ಅಮ್ಮ ಒಂದ್ ಕೈಲಿ ನನ್ನ ಎತ್ತಿಕಂಡ್, ಮತ್ತೊಂದು ಕೈಲಿ ಹಾಲು ಕಲಿಸಿದ ಅನ್ನ ಹಿಡ್ಕಂಡ್, ನಂಗೆ ಚಂದ್ರನ ತೋರಿಸ್ತಿತ್ತ್...ಅದ್ಯಾಕೋ ಗೊತ್ಲೆ, ಚಂದ್ರನ ನೋಡ್ತಿದ್ದಂಗೆ ತಟ್ಟೆಲಿದ್ದ ಅನ್ನ ಎಲ್ಲಾ ಖಾಲಿ ಆಗಿಬಿಡ್ತಿತ್ತ್. ಬಾಯಿಗೆ ತುತ್ತು ಕೊಟ್ಕಂಡೇ ಚಂದ್ರನ ಒಳ್ಳೊಳ್ಳೇ ಕಥೆಗಳ್ನ ಹೇಳ್ತಿದ್ದೊ ಅಮ್ಮ...ಹಿಂಗೆ ನಂಗೂ, ಚಂದಮಾಮಂಗೂ ಒಂಥರ ನೆಂಟಸ್ಥನ ಬೆಳ್ತ್. ಲೆಕ್ಕ ಇಲ್ಲದಷ್ಟು ಸಲ ನಂಗೆ ಬದುಕಿನ ಭರವಸೆ ಕೊಟ್ಟದ್ ಇದೇ ಚಂದಮಾಮ. ಮನಸ್ಸೊಳಗೆ ಎಂಥದ್ದೇ ನೋವು, ಸಂಕಟ, ದುಃಖ ಇರ್ಲಿ, ಒಂದರ್ಧ ಗಂಟೆ ಸುಮ್ಮನೆ ಚಂದ್ರ ನೋಡ್ತಿದ್ದರೆ ಸಾಕ್ ಎಲ್ಲಾ ಮಾಯ ಆಗಿ ನನ್ನಲ್ಲಿ ಹೊಸ ಮನುಷ್ಯ ಹುಟ್ಟಿಕಂಡ್ಬಿಡ್ತಿತ್ತ್...ಆದ್ರೆ ಈಗ ಎಲ್ಲಾ ಉಲ್ಟಾ...ಅದ್ಕೆ ಸರಿಯಾಗಿ ಕೆಟ್ಟ ಕನಸು ಬೇರೆ...
ನಾ ಒಂದು ಹಕ್ಕಿ. ಅದೇ ಚಂದ್ರ ಮೇಲೆ ಕುದ್ದ್ಕಂಡ್ ನನ್ನ ಕರೀತುಟ್ಟು. ಆ ತಂಪಾದ ಬೆಳಕು ನನ್ನಲ್ಲಿ ಎಂಥದ್ದೋ ಆಸೆ ಹುಟ್ಟಿಸ್ಯುಟ್ಟು. ನನ್ನ ರೆಕ್ಕೆಗಳಲ್ಲಿ ಶಕ್ತಿ ಇಲ್ಲೆ...ಆದ್ರೂ ಚಂದ್ರನ ಸೇರುವ ಆಸೆ. ಇದ್ದ ಬದ್ದ ಎಲ್ಲಾ ಬಲ ಸೇರಿಸಿ ಆಕಾಶ ಕಡೆ ಹಾರಿನೆ...ಹೂಂ, ಆಗ್ತಿಲ್ಲೆ...ರೆಕ್ಕೆಗಳಲ್ಲಿ ತುಂಬಾ ನೋವು. ಕಣ್ಣೆತ್ತಿ ಚಂದ್ರನ ನೋಡಿನೆ. ಅಂವ ಇನ್ನೂ ಅಲ್ಲಿ ನಗ್ತುಟ್ಟು. ಎರಡೂ ಕೈ ಬೀಸಿ ನನ್ನ ಕರೀತುಟ್ಟು...ಆ ನಗು ನಂಗೆ ಅಯಸ್ಕಾಂತ ! ತುಟಿಕಚ್ಚಿ ನೋವೆಲ್ಲಾ ಸಹಿಸಿಕಂಡ್ ಚಂದ್ರನ ಹತ್ತಿರ ಹೋಕಾಕನ ಅಂವ ಅಲ್ಲಿಂದ ನನ್ನ ಜೋರಾಗಿ ತಳ್ಳಿಬಿಟ್ಟದೆ...ಕಣ್ಣು ಬಿಟ್ಟು ನೋಡಿರೆ, ನಾ ರೆಕ್ಕೆ ಮುರ್ಕಂಡ್ ಬಿದ್ದಿದ್ದೆ... ನಿದ್ದೆಂದ ಎಚ್ಚರ ಆತ್....
ಮಧ್ಯರಾತ್ರಿ 1 ಗಂಟೆಗೆ ಮತ್ತೆ ಹೊರಗೆ ಬಂದೆ. ಈಗ್ಲಾದ್ರೂ ಚಂದ್ರ ಕಾಂಬದೇನೋತಾ ಆಸೆ. ಭಾಗಮಂಡಲಲಿ, ಕುಶಾಲನಗರಲಿ, ಮೈಸೂರ್ಲಿ, ಹೈದರಾಬಾದ್ಲಿ, ಡೆಲ್ಲಿಲಿ...ಹಿಂಗೆ ಎಲ್ಲಾ ಕಡೆ ನನ್ನ ಜೊತೆ ಬರ್ತಿದ್ದ ಚಂದ್ರ ಬೆಂಗಳೂರ್ಲಿ ಮಾತ್ರ ನನ್ನ ಅನಾಥ ಮಾಡಿಬಿಟ್ಟುಟ್ಟು...
`ಚಂದಮಾಮ, ನೀನೇ ಹಿಂಗೆ ಮಾಡಿರೆ ನನ್ನ ಮತ್ತೆ ಮನುಷ್ಯನಾಗಿ ಮಾಡುದು ಯಾರ್? ಮೋಡದ ಮರೇಂದ ಹೊರಗೆ ಬಾ...ಕಾದನೆ, ನಿಂಗಾಗಿ ಕಾದನೆ, ಗಂಟೆ....ದಿನ...ವಾರ...ತಿಂಗ...ಅಷ್ಟೇ... ಅದಕ್ಕಿಂತ ಜಾಸ್ತಿ ಆಲೆ...ನೀ ಬಾರದಿದ್ದರೆ ನಾ ಉಳಿಯಲ್ಲೆ...'
- ಸುನಿಲ್ ಪೊನ್ನೇಟಿ
arebhase@gmail.com
ಪುಟ್ಟ ಅವನಿಷ್ಟಕ್ಕೆ ಅಂವ ನಡ್ಕಂಡ್ ಹೋಗ್ತಿತ್ತ್. ಅಷ್ಟೊತ್ತಿಗೆ ದೂರಲಿ ಒಂದು ಗಿಣಿ ಇವನನ್ನೇ ಕರ್ದಂಗೆ ಆತ್. ಒಮ್ಮೆ ತಿರುಗಿ ನೋಡ್ತ್. ತುಂಬಾ ಲಾಯ್ಕದ ಗಿಣಿ...ಆದ್ರೆ ಹಳೇದೆಲ್ಲಾ ಗ್ಯಾನ ಆಗಿ, ಈ ಗಿಣಿ ಸಹವಾಸನೇ ಬೇಡತಾ ಮುಂದಕ್ಕೆ ಹೋತ್. ಅಷ್ಟೊತ್ತಿಗೆ ಗಿಣಿ ಮತ್ತೊಂದ್ಸಲ ಪುಟ್ಟನ ಕರ್ದಂಗೆ ಕೇಳ್ತ್. ಯಾಕೋ ಇವನ ಮನಸ್ಸು ಸ್ವಲ್ಪ ಬದಲಾದಂಗೆ ಅನ್ನಿಸಿತ್... ಇನ್ನೇನ್ ಆ ಗಿಣಿನ ಹಿಡಿಯೊಕು, ಅಷ್ಟೊತ್ತಿಗೆ ಮತ್ತೆ ಹಳೇ ವಿಷಯ ಕಣ್ಮುಂದೆ ಬಾತ್.
ಏಳು ವರ್ಷದ ಹಿಂದೆ ಇರೋಕು ಕಂಡದೆ. ಅಂದು ಸನಾ ಪುಟ್ಟ ಇದೇ ದಾರೀಲಿ ಹೋಗ್ತಿತ್. ಆಗ ಪೊಂಗಾರೆ ಮರದ ಕೆಳಗೆ ಒಂದು ಗಿಣಿ ಕಾಲು ಮುರ್ಕಂಡ್ ಬಿದ್ದಿತ್ತ್. ಇಂವ ಅದ್ರ ಹತ್ರ ಹೋದಷ್ಟೂ, ಗಿಣಿ ಕುಂಟಿಕಂಡ್ ಕುಂಟಿಕಂಡ್ ದೂರ ದೂರ ಓಡ್ತಿತ್ತ್. ಸುಮಾರ್ ಹೊತ್ತು ಪೂಸಿ ಹೊಡ್ದ್ ಆದ್ಮೇಲೆ ಆ ಗಿಣಿಗೆ ಇವನ ಮೇಲೆ ನಂಬಿಕೆ ಬಾತ್. ಇಂವ ಕೈ ತೋರಿಸ್ತಿದ್ದಂತೆ, ಕೈ ಮೇಲೆ ಹತ್ತಿ ಕುದ್ದ್ಕಣ್ತ್. ಖುಷೀಲೇ ಗಿಣಿನ ಮನೆಗೆ ತಕ್ಕಂಡ್ ಹೋತ್. ಗೋಪಾಲ ಆಚಾರಿ ಹತ್ರ ಹೇಳಿ ಒಳ್ಳೆ ಪಂಜರ ಮಾಡಿಸಿಕಂಡತ್. ಆ ಪಂಜರನ ತನ್ನದೇ ಕೋಂಬರೇಲಿ ಇಟ್ಕಂಡತ್...ದಿನಾ ಹಾಲು, ಹಣ್ಣು ಕೊಟ್ಟ್, ಮುರ್ದ್ ಹೋಗಿದ್ದ ಕಾಲಿಗೆ ಮದ್ದ್ ಹಾಕಿ ಲಾಯ್ಕ ಸಾಂಕಿತ್. ಮೂರು ತಿಂಗಳಲ್ಲೇ ಗಿಣಿ ಹುಷಾರಾತ್. ಮೈ ಕೈ ತುಂಬಿಕಂಡ್ ನಾಲ್ಕ್ ಜನ ನೋಡುವಂಗೆ ಆತ್... ಪಂಜರದ ಬಾಗಿಲ್ನ ಪುಟ್ಟ ಯಾವತ್ತೂ ಮುಚ್ಚುತ್ತಿತ್ಲೆ....ಅಷ್ಟೊಂದು ನಂಬಿಕೆ ಅವನ ಗಿಣಿ ಮೇಲೆ...
ಅದೊಂದು ದಿನ ಹೊರಗೆಲ್ಲೋ ಹೋಗಿದ್ದ ಪುಟ್ಟ ಮನೆ ಸೇರಿಕಾಕನ ಕತ್ತಲೆ ಆಗಿತ್ತ್. ಇವನ ಕೋಂಬರೆಗೆ ಬಂದ್ ಪಂಜರ ನೋಡಿರೆ ಅಲ್ಲಿ ಗಿಣಿ ಇಲ್ಲೆ ! ಕಟ್ಲ್ ಕೆಳಗೆ, ಅಟ್ಟದ ಮೇಲೆ, ಏಲಕ್ಕಿ ಗೂಡ್...ಹಿಂಗೆ ಎಲ್ಲಾ ಕಡೆ ಹುಡುಕಿತ್...ಹೂಂ, ನಾಪತ್ತೆ. ತುಂಬಾ ಬೇಸರ ಆತ್. ರಾತ್ರಿ ಸರಿ ನಿದ್ದೆನೂ ಬಾತ್ಲೆ. ಬೆಳಿಗ್ಗೆ ಎದ್ದ್ ಕಿಡಿಕಿಲೆ ನೋಡಿರೆ, ಮಾವಿನ ಮರಲಿ ಕುದ್ದಿತ್ತ್ ಇವನ ಗಿಣಿ ! ಜೊತೇಲಿ ಮತ್ತೊಂದು ಗಿಣಿ...ಪುಟ್ಟ ಕರ್ದರೆ ಅಲಾ ಎಂಥ ಮಾಡಿರೂ ಅದ್ ಇವನ ಹತ್ರ ಬಾತ್ಲೆ...ಹತ್ರ ಹೋಕಾಕನ ಜೊತೇಲಿದ್ದ ಗಿಣಿ ಜೊತೆ ಹಾರಿ ಹೋತ್ ದೂರ...ತುಂಬಾ ದೂರ. ಮತ್ತೆ ಅದ್ ಇವನ ಕಣ್ಣಿಗೆ ಬಿದ್ದಿತ್ಲೆ. ಅಂದ್ಂದ ಇಂವಂಗೆ ಗಿಣಿಗತೇಳಿರೆ ಅಷ್ಟಕಷ್ಟೇ...
ಹಿಂಗೆ ಹಳೇದನ್ನೆಲ್ಲಾ ಯೋಚನೆ ಮಾಡಿಕಂಡ್ ಹೋಕಾಕನ ಈ ಹೊಸ ಗಿಣಿ ಪುಟ್ಟನ ಹಿಂದೆನೇ ಬಾತ್. `ನನ್ನನ್ನೊಮ್ಮೆ ನಿನ್ನ ಮನೆಗೆ ಕರ್ಕಂಡ್ ಹೋಗು ಮಾರಾಯ' ತಾ ಹೇಳುವಂಗೆ ಜೋರಾಗಿ ಮರ್ಡ್ ತಿತ್ತ್. ಯಾಕೋ ಗೊತ್ಲೆ ಹೊಸ ಗಿಣಿ ಮೇಲೆ ಪುಟ್ಟಂಗೆ ಆಸೆ ಹುಟ್ಟಿತ್. ಹಂಗೆತೇಳಿ ಮನೆಗೆ ತಕ್ಕಂಡ್ ಹೋಕೆ ಮನಸ್ಸು ಒಪ್ಪಿತ್ಲೆ. ಯಾಕೆತೇಳಿರೆ ಹಳೇ ಪಂಜರ ಉಪಯೋಗಿಸದೇ ಪೂರ್ತಿ ಹಾಳಾಗಿತ್ತ್. ಅದಕ್ಕಿಂತ ಹೆಚ್ಚುತೇಳಿರೆ ಮತ್ತೊಂದು ಗಿಣಿ ತಾಕೆ ಇವನ ಮನೇಲಿ ಒಪ್ತಿತ್ಲೆ...ಅವ್ರ ಮನಸ್ಲಿ ಹಳೇ ಗಿಣಿ ಮಾಡ್ದ ಗಾಯ ಹಂಗೆನೇ ಉಳ್ಕಂಡಿತ್ತ್. ಆದ್ರೆ ಹೊಸ ಗಿಣಿ ಪುಟ್ಟನ ಬಿಡುವಂಗೆ ಕಾಣ್ತ್ಲೇ...ಇಂವ ಹೋಗುವ ದಾರೀಲಿ ದಿನಾ ಪ್ರತ್ಯಕ್ಷ ಆಗಿ ಜೋರಾಗಿ ಮರ್ಡ್ತಿತ್ತ್. ಪುಟ್ಟಂಗೆ ಈ ಗಿಣಿ ಮೇಲೆ ಆಸೆ ಜಾಸ್ತಿ ಆತ್. ಮನೇಲಿರ್ವ ಹಳೇ ಪಂಜರನ ಮೊದ್ಲು ಸರಿಮಾಡ್ತ್. ಇದಾದ್ಮೇಲೆ ಮನೆಯವ್ರನ್ನ ಒಪ್ಪಿಸಿತ್. ಇನ್ನೇನ್ ಗಿಣಿನ ತರೋಕೂತ ಆ ಗಿಣಿ ದಿನಾ ಕುದ್ದಿರ್ತಿದ್ದಲ್ಲಿ ಹೋಗಿ ನೋಡಿರೆ, ಇವನ ಎದೆ ಒಡೆಯುದೊಂದೇ ಬಾಕಿ ! ಈ ಗಿಣಿನೂ ಮತ್ತೊಂದು ಹೊಸ ಗಿಣಿ ಜೊತೆ ಕುದ್ದ್ ನಗಾಡ್ತಿತ್ತ್ !!! ಛೇ...ನಂಬಿಕಾದ್ ಗಿಣಿಗಳ್ನ...
- ಸುನಿಲ್ ಪೊನ್ನೇಟಿ