ಆಗಷ್ಟೇ ಮಳೆ ಬಂದ್ ನಿಂತಿತ್ತ್. ಮಣ್ಣೆಲ್ಲಾ ಹಸಿಹಸಿ... ಕಾಲಿಟ್ಟರೆ ಅಲ್ಲೇ ಹೆಜ್ಜೆ ಗುರುತು ಮೂಡುವಂಗೆ ಸ್ವಲ್ಪ ಕೆಸ್ರು. ಆ ಹೊತ್ತ್ಲಿ ಅದ್ಯಾಕೋ ಲಿಲ್ಲಿಗೆ ತೋಟಕ್ಕೆ ಹೋಗುವ ಮನಸ್ಸಾತ್. ಗದ್ದೆ ಹತ್ರ ಮನೆ. ಮನೇಂದ ತೋಟಕ್ಕೆ ಸುಮಾರ್ 2 ಕಿಲೋಮೀಟರ್ ದೂರ. ಮಳೆ ಬಂದ್ ತೋಟಲಿ ಕಾಫಿ ಕಾಯಿ ಉದುರಿಬಿಟ್ಟುಟ್ಟೋ ಏನೋತೇಳುವ ಹೆದರಿಕೆ, ಅವ್ಳನ್ನ ತೋಟದ ಕಡೆ ಹೋಗುವಂಗೆ ಮಾಡ್ತ್. ಇದ್ಕೆ ಕಾರಣನೂ ಉಟ್ಟು. ಅಲ್ಲಿ ಆ 2 ಎಕರೆ ತೋಟ ಸಿಕ್ಕಿಕಾದರೆ ಲಿಲ್ಲಿ ಮತ್ತೆ ಅವ್ಳ ಗಂಡಂಗೆ ಸಾಕಪ್ಪಾ ತೋಟದ ಸಹವಾಸತಾ ಹೇಳುವಂಗೆ ಆಗಿತ್ತ್. ತೋಟ ಸಿಕ್ಕಿ, ಅಲ್ಲಿ ಹೊಸ ಗಿಡ ಹಾಕಿ...ಈಗ ಮೊದ್ಲ ಫಸಲು....
ಲಿಲ್ಲಿ ಗಂಡ ಪಳಂಗ ಆರ್ಮಿಲಿ ಇತ್. ಲಿಲ್ಲಿ ಕೂಡ ಮದುವೆ ಆದ್ಮೇಲೆ ಅವನ ಜೊತೆನೇ ಹೋಗಿತ್ತ್. ಸಿಕಂದರಾಬಾದ್ಂದ ಹಿಡ್ದ್ ಕಾಶ್ಮೀರ ಮೂಲೆಯ ಲಡಾಕ್ ವರೆಗೆ ವರ್ಷಕ್ಕೆ ಒಂದು ಜಾಗಲಿ ಪಳಂಗ ಮತ್ತೆ ಲಿಲ್ಲಿ ಟ್ರಾನ್ಸ್ಫರ್ ಹೆಸ್ರಲ್ಲಿ ಸುತ್ತಾಡಿದ್ದೊ. ರಿಟೈರ್ಡ್ ಆಗಿ ಬಂದಮೇಲೆನೇ ಶುರುವಾದ್ ತಲೆನೋವು. ಪಳಂಗನ ಅಣ್ಣ `ನಾ ಏನೇ ಆದರೂ ಪಳಂಗಂಗೆ ಪಾಲು ಕೊಡ್ಲೆ'ತಾ ಹಠ ಹಿಡ್ದ್ ಕುದ್ದಿತ್ತ್. ಪಂಚಾಯ್ತಿ ಕರ್ದ ದಿನ ಜಗಳ ಆಡಿ, ಪಂಚಾಯ್ತಿಗೆ ಬಂದವ್ಕೆನೇ ಕೋವಿ ತೋರ್ಸಿ ಓಡಿಸಿತ್ತ್. ಕೊನೆಗೆ ಕೋರ್ಟ್ ಗೆ ಹೋಗಿ ಹತ್ತು ವರ್ಷ ಕೇಸ್ ನಡ್ದ ಮೇಲೆ 2 ಎಕರೆ ಜಾಗ ಪಳಂಗಪ್ಪನ ಪಾಲಿಗೆ ಸಿಕ್ಕಿತ್ತ್. ಹಂಗಾಗಿ ಗಂಡ, ಹೆಣ್ಣ್ ಇಬ್ಬರಿಗೂ ಆ ಜಾಗದ ಮೇಲೆ ತುಂಬಾ ಪ್ರೀತಿ. ಬೆವರಿನ ಜೊತೆ ರಕ್ತ ಸುರ್ಸಿ ಅಲ್ಲಿ ಕಾಫಿ ಗಿಡ ಬೆಳೆಸಿದ್ದೊ. ತೋಟ ತುಂಬಾ ಲಾಯ್ಕ ಬಂದಿತ್ತ್.
ಈ ವರ್ಷ ಮೊದಲ ಫಸಲು ಬಾತ್ತೇಳುವ ಖುಷಿ ಗಂಡ, ಹೆಣ್ಣ್ ಇಬ್ಬರಲ್ಲೂ ಇತ್ತ್. ಆದ್ರೆ ಟೈಂ ಅಲ್ಲದ ಟೈಂಲಿ ಬಂದ ಮಳೆ ಇವರ ತಲೆಕೆಡಿಸಿತ್. ಇಂದಂತೂ ಜೋರು ಮಳೆ. ಸಣ್ಣ ನಿದ್ದೆಮಾಡಿಬಿಟ್ಟನೆತಾ ಪಳಂಗ ಮಧ್ಯಾಹ್ನ ಊಟ ಮಾಡಿ ಹಾಸಿಗೆಲಿ ಬಿದ್ದ್ಕಂಡಿತ್ತ್. ಲಿಲ್ಲಿಗೆ ಮನಸ್ಸು ಕೇಳ್ತಿತ್ಲೆ. ಗಂಡನ ಎಚ್ಚರ ಮಾಡುದು ಬೇಡತಾ ಅವ್ಳೊಬ್ಳೇ ತೋಟದ ಕಡೆ ಹೆಜ್ಜೆ ಹಾಕಿತ್ತ್...ಮಳೆ ಬಂದ್ ನಿಂತಿದ್ದರಿಂದ ಮಳೆ ಹುಳ `ಕಿರ್ರೋಂ...ಕಿರ್ರೋಂ'ತಾ ಮರಡ್ತಿದ್ದೊ.
ಸಾಯಂಕಾಲ 5 ಗಂಟೆ ಆಗಿರೊಕೇನೋ...ಪಳಂಗಂಗೆ ಎಚ್ಚರ ಆತ್. `ಲಿಲ್ಲಿ...ಲಿಲ್ಲಿ'ತಾ ಎರಡು-ಮೂರು ಸಲ ಕರ್ತ್. ಉತ್ತರ ಬಾತ್ಲೆ... ಕಾಫಿ ಕಾಯಿಸ್ತಿರುದೇನೋತಾ ಅಡುಗೆ ಕೋಂಬರೆಗೆ ಹೋಗಿ ನೋಡಿರೆ, ಅಲ್ಲಿ ಇಲ್ಲೆ. ಗುಡ್ಡದ ಒಲೆ ಹತ್ರ ಹೋಗಿ ನೋಡ್ತ್..ಅಲ್ಲೂ ಕಾಂಬಲೆ. ಲಿಲ್ಲಿ ಎಲ್ಲಿ ಹೋಗಿರುದಪ್ಪತಾ ಪಳಂಗಂಗೆ ಹೆದ್ರಿಕೆ ಶುರುವಾತ್. ಮನೆ ಹೊರಗೆ ಬಂದ್, ಪುನಃ `ಲಿಲ್ಲಿ...ಲಿಲ್ಲಿ'ತಾ ಮೂರು-ನಾಲ್ಕು ಸಲ ಕರ್ತ್. ಅವಳ ಪತ್ತೆನೇ ಇಲ್ಲೆ. ಹಂಗೆ ಹೊರಗೆ ಬಂದ್ ನೋಡಿಕಾಕನ ತೋಟಕ್ಕೆ ಹೋಗುವ ದಾರೀಲಿ ಲಿಲ್ಲಿದ್ ಚಪ್ಪಲಿ ಗುರ್ತ್ ಕಾಣ್ತ್. `ಓ...ಲಿಲ್ಲಿ ತೋಟಕ್ಕೆ ಹೋಗಿರುದೇನೋ'ತಾ ಗ್ಯಾನ ಮಾಡ್ಕಂಡ್, ಪಳಂಗ ಕೂಡ ತೋಟದ ಕಡೆಗೆ ಹೊರ್ಟತ್. `ಇಷ್ಟು ಹೊತ್ತು ತೋಟಲಿ ಎಂಥ ಮಾಡಿದೆಯಪ್ಪಾ'ತಾ ಮನಸ್ಲಿ ಬಯ್ಕಂಡೇ ನಡ್ಕಂಡಿರ್ಕಾಕನ ದಾರೀಲಿ ಆನೆದ್ ಹೆಜ್ಜೆ ಕಂಡಂಗೆ ಆತ್...ಪಳಂಗ ಇನ್ನೂ ಸ್ವಲ್ಪ ಬಗ್ಗಿ ನೋಡ್ತ್...`ಡೌಟೇ ಬೇಡ...ಈ ದಾರೀಲಿ ಆನೆ ಹೋಗುಟ್ಟು...'ತಾ ಅವಂಗೆ ಗೊತ್ತಾತ್. ಲಿಲ್ಲಿದ್ ಚಪ್ಪಲಿ ಗುರುತು ಹಿಂದೆ, ಆನೆದ್ ಹೆಜ್ಜೆ ಗುರುತು ! ಆ ಹೆಜ್ಜೆ ಗುರುತು ಹಿಂದೆನೇ ಪಳಂಗ ಹೊರ್ಟತ್....
ತೋಟಕ್ಕೆ ಹೋಗಿ ನೋಡಿರೆ, ಪಳಂಗಂಗೆ ಎದೆ ಒಡ್ದು ಹೋದೋಂದೇ ಬಾಕಿ. ಕಾಫಿಗಿಡಗಳ್ನೆಲ್ಲಾ ಆನೆ ಹಾಳು ಮಾಡಿತ್ತ್. ಆದ್ರೆ ಅಲ್ಲಿ ಎಲ್ಲೂ ಲಿಲ್ಲಿ ಕಾಣ್ತ್ಲೆ. `ಲಿಲ್ಲಿ...ಲಿಲ್ಲಿ' ತಾ ಜೋರಾಗಿ ಕರ್ದತ್... ಹುಚ್ಚನಂಗೆ ಬೊಬ್ಬೆ ಹೊಡ್ಕಂಡ್ ತೋಟ ಪೂತರ್ಿ ಓಡಾಡ್ತ್....ಕೊನೆಗೆ ದೂರಲಿ ಬೆಟ್ಟ ಮೇಲೆಂದ ಇಳ್ಕಂಡ್ ಬರ್ವ ತೋಡು ಹತ್ರ ಲಿಲ್ಲಿದ್ ಸೀರೆ ಕಂಡಂಗಂಗೆ ಆತ್... ಹತ್ತಿರ ಹೋಗಿ ನೋಡಿರೆ....ಹೌದು, ಅಲ್ಲಿ ಲಿಲ್ಲಿ ಹೆಣ ! ಯಾವುದೋ ಹಳೇ ಸಿಟ್ಟು ಇದ್ದಂಗೆ ಆನೆ ಲಿಲ್ಲಿನ ಮೆಟ್ಟಿ ಮೆಟ್ಟಿ ಕೊಂದ್ಹಾಕಿತ್ತ್ !!
- ಸುನಿಲ್ ಪೊನ್ನೇಟಿ
arebhase@gmail.com
No comments:
Post a Comment