Thursday 31 May 2012

ಭಗಂಡೇಶ್ವರನ ಹತ್ತಿರ ಭೈರಾಗಿ...


ಟಕ್ ಟಕ್ ಟಕ್ ಟಕ್....ಆ ಸನ್ಯಾಸಿ ನಡ್ಕಂಡ್ ಬರ್ತಿದ್ರೆ ಹಿಂಗೆನೇ ಶಬ್ದ ಕೇಳುದು. ಯಾಕಂದ್ರೆ ಕಾಲಲ್ಲಿ ಇದ್ದದ್ದ್ ಮರದ ಚಪ್ಪಲ್ ! ಅವ್ರ ಹೆಸ್ರು ಏನೂತಾ ಯಾರಿಗೂ ಗೊತ್ತಿತ್ಲೆ. ಎಲ್ಲವೂ `ಸ್ವಾಮೀ..' ತಾ ಕರೀತ್ತಿದ್ದೊ... ನೋಡಿಕೆ ಎತ್ತರದ ಆಳು. ಉದ್ದುದ್ದ ಬಿಳಿ ತಲೆಕೂದಲು, ಯಾವತ್ತೂ ಬ್ಲೇಡ್ ಕಾಣದೇ ಇರ್ವ ಗಡ್ಡ ಮೀಸೆ. ಮುಖಲಿ ಎರಡು ಕಣ್ಣು ಬಿಟ್ಟರೆ, ಉಳಿದೆಲ್ಲಾ ಜಾಗನ ಕೂದಲು ಮುಚ್ಚಿಕಂಡ್ಬಿಟ್ಟಿತ್. ಕಾವಿ ಬಟ್ಟೆ ಹಾಕ್ತಿತ್. ದೂರಂದ ನೋಡಿರೆ ಥೇಟ್ ಬೆರ್ಚಪ್ಪ ! ಹಂಗಾಗಿ ಮಕ್ಕ ಅಳ್ತಿದ್ರೆ `ಮರ್ಡುಬೇಡ....ನೀ ಜೋರಾಗಿ ಮರ್ಟರೆ, ಆ ಸ್ವಾಮಿನ ಕರ್ದನೆ ನೋಡು..'ತಾ ಅಮ್ಮಂದಿರು ಹೆದರಿಸ್ತಿದ್ದೊ... ಮಕ್ಕ ಆಗ ಮರ್ಡುದುನ ನಿಲ್ಲಿಸಿ ಅಮ್ಮನ ಸೀರೆ ಒಳಗೆ ಮುಖ ಹಾಕಿಕಂಡ್ ಸುಮ್ನೆ ಆಗಿಬಿಡ್ತಿದ್ದೊ....
ಹಂಗೆತೇಳಿ ಆ ಸ್ವಾಮಿ ಕೆಟ್ಟವನೇನೂ ಅಲ್ಲ. ನೋಡಿಕೆ ಕುರೂಪಿ ಹಂಗೆ ಕಂಡರೂ ತುಂಬಾ ಮೃದು ಮನಸ್ಸಿನಂವ. ಭಗಂಡೇಶ್ವರ ದೇವಸ್ಥಾನ ಬಾಗಿಲಲ್ಲೇ ಇರ್ವ ಜಗುಲಿಯೇ ಅವನ ಆಸ್ಥಾನ.  ಪಕ್ಕದಲ್ಲಿ ಇರ್ವ ಮಾಸಿದ ಬಟ್ಟೆಯ ಗಂಟೇ ಅವನ ಸರ್ವಸ್ವ. ಆ ಸ್ವಾಮಿ ಎಲ್ಲೇ ಹೋದ್ರೂ ಆ ಬಟ್ಟೆಯ ಗಂಟು ಅಲ್ಲೇ, ಆ ಜಗುಲಿಯ ಮೇಲೆಯೇ ಇರ್ತಿತ್ತ್. ಅದರೊಳಗೆ ಏನುಟ್ಟುತಾ ಯಾರೂ  ಒಂದು ದಿನನೂ ಬಿಚ್ಚಿ ನೋಡಿಕೆ ಹೋತ್ಲೆ. ದೇವಸ್ಥಾನಕ್ಕೆ ಬರುವ ಭಕ್ತರು ಕೊಡುವ ಭಿಕ್ಷೆ ಹಣಲಿ ಸನ್ಯಾಸಿ ಬದುಕುತಿತ್. ಭಾಗಮಂಡಲಲಿ ಇರ್ವ ಹಿರಿ ತಲೆಗ ಕೂಡ `ಈ ಸ್ವಾಮೀಜಿ ನಾನು ಸಣ್ಣಂವ ಇರ್ಕಾಕನನೇ ನೋಡ್ಯೊಳೆ... ಆಗ್ಗಿಂದಲೂ ಹಿಂಗೆನೇ ಉಟ್ಟು'ತಾ ಹೇಳ್ತಿದ್ದೊ. ಹಂಗಾಗಿ ಅವನ ವಯಸ್ಸೆಷ್ಟು ? ಇಲ್ಲಿಗೆ ಬಂದು ಎಷ್ಟು ಸಮಯ ಆತ್ತಾ ಯಾರೋಬ್ಬರಿಗೂ ಗೊತ್ತಿತ್ಲೆ. ಇನ್ನು ಆ ಸನ್ಯಾಸಿಗೆ ಬರೀ ಮಲೆಯಾಳಂ ಭಾಷೆ ಮಾತ್ರ ಬರ್ತಿತ್ !
ಭಾಗಮಂಡಲಲಿ ನಮ್ಮದೊಂದು ದೊಡ್ಡ ಕಪಿಸೈನ್ಯ ಇತ್. ಇದೇನು ನಾವೇ ಇಟ್ಕಂಡ ಹೆಸ್ರಲ್ಲ. ನಮ್ಮ ಉಪದ್ರವ ಸಹಿಸಿಕೆ ಆಗದೇ, ಊರವೇ ಕಪಿಸೈನ್ಯತಾ ಕರೀತ್ತಿದ್ದೊ. ಭಾಗಮಂಡಲತೇಳಿರೆ ಗೊತ್ತಲ್ಲಾ, ಹೇಳಿಕೇಳಿ ಮಳೆಯ ಊರು. ಹಂಗಾಗಿ ಆ ಜೋರು ಮಳೆ ಇರ್ಕಾಕನ ನಮಿಗೆ ಸ್ಕೂಲ್ ಗ್ರೌಂಡ್ಗೆ ಹೋಗಿ ಆಡಿಕೆ ಆಗ್ತಿತ್ಲೆ. ಆಗೆಲ್ಲಾ ನಾವು ಸ್ಕೂಲ್ಂದ ಬಂದ ಕೂಡ್ಲೆ ದೇವಸ್ಥಾನಲಿ ಸೇರಿಕಂಡುಬಿಡ್ತಿದ್ದೊ. ಅಲ್ಲಿ ನಮ್ಮದೇ ಸಾಮ್ರಾಜ್ಯ. ಏನು ಮಾಡಿರೂ ಯಾರೂ ಕೇಳವು ಇತ್ಲೆ. ನಮ್ಮ ಕಪಿ ಆಟನೆಲ್ಲಾ ಆ ಸನ್ಯಾಸಿ ಅಲ್ಲೇ ಕುದ್ದ್ಕಂಡ್ ನೋಡ್ತಿತ್...ಅವನ ಕಾಡುನಂಥ ಮೀಸೆ ಒಳಗೆಂದ ಕಂಡೂ ಕಾಣದಂಗೆ ಸಣ್ಣ ನಗು ಮಿಂಚಿ ಮರೆಯಾಗ್ತಿತ್. ಬಹುಶ: ಅವಂಗೆ ಅವನ ಬಾಲ್ಯ ಕೂಡ ನೆನಪಿಗೆ ಬರ್ತಿತ್ತೋ ಏನೋ... ತುಂಬಾ ಖುಷಿಯಾದ ದಿನ ನಮಗೆಲ್ಲಾ ಕೊಬ್ಬರಿ ಮಿಠಾಯಿ ಹಂಚ್ತಿತ್ತ್....
ಅದೊಂದು ಮಳೆಗಾಲ. ಆಶ್ಲೇಷ ಮಳೆ ಕಣ್ಣುಮುಚ್ಚಿಕಂಡ್ ಹೊಡೀತ್ತಿತ್. ಭಾಗಮಂಡಲಂದ ನಾಪೋಕ್ಲುಗೆ ಹೋಗುವ ರೋಡ್ ಮೇಲೆ ಸೊಂಟದ ವರೆಗೆ ನೀರು ಬಂದಿತ್. ಇನ್ನು ಮಡಿಕೇರಿ ರೋಡ್ ಮೇಲೆ ಚೌಂಡಿ ಕಳ ಹತ್ರ ಸ್ವಲ್ಪ ಸ್ವಲ್ಪ ನೀರು ಹರೀತ್ತಿತ್ತಷ್ಟೆ....ಕಾಯಿಲೆ ಅಂದ್ರೆ ಏನೂತನೇ ಗೊತ್ತಿರದಿದ್ದ ಸನ್ಯಾಸಿಗೆ ಅಂದ್ ಜ್ವರ ಬಂದ್ಬಿಟ್ಟಿತ್. ಮಲಗಿದ್ದಲ್ಲೇ ಜೋರಾಗಿ ನಡುಗ್ತಿತ್ತ್. ಪೂಜೆಗೆ ನೀರು ತಾಕೆ ಹೋಗಿದ್ದ ಭಟ್ಟನ ಕಣ್ಣಿಗೆ ಇದ್ ಬಿದ್ದಿತ್. ಅಂವ ಊರವ್ಕೆ ವಿಷಯ ಮುಟ್ಟಿಸ್ತ್. ಅಷ್ಟುಹೊತ್ತಿಗೆ ಹೊಳೆ ನೀರು ದೇವಸ್ಥಾನದ ಮೆಟ್ಟಿಲು ವರೆಗೆ ಬಂದ್ ಬಿಟ್ಟಿತ್. ಭಾಗಮಂಡಲ ದ್ವೀಪ ಥರ ಆಗಿಬಿಡ್ತ್. ಸನ್ಯಾಸಿ ಸ್ಥಿತಿ ತುಂಬಾ ಸೀರಿಯಸ್ ಆಗಿತ್. ಎಲ್ಲವೂ ಸೇರಿ ಅವ್ನ ಭಾಗಮಂಡಲ ಆಸ್ಪತ್ರೆಗೆ ಸೇರಿಸಿದೋ....ಅಲ್ಲಿ ಡಾಕ್ಟರ್ ಇತ್ಲೆ. ನರ್ಸ್ ಟ್ರಿಟ್ಮೆಂಟ್ ಕೊಡ್ತ್. ಮಡಿಕೇರಿಗೆ ಕರ್ಕಂಡ್ ಹೋದ್ರೆ ಮಾತ್ರ ಸನ್ಯಾಸಿ ಉಳ್ದದೆತಾ ಆ ನರ್ಸ್  ಹೇಳ್ತ್.... ಹೆಂಗೆ ಕರ್ಕಂಡ್ ಹೋದು...ರಸ್ತೆ ಎಲ್ಲಾ ಬಂದ್ ಆಗಿಬಿಟ್ಟಿತ್ತಲ್ಲಾ....
ಮಾರನೆ ದಿನದ ಸೂರ್ಯನ ನೋಡಿಕೆ ಆ ಸನ್ಯಾಸಿ ಬದುಕಿತ್ಲೆ....ಊರವೆಲ್ಲಾ ಸೇರಿ, ಕೋಲಾಟ ಬಾಣೆಲಿ ಸನ್ಯಾಸಿ ಶವನ ದಫನ್ ಮಾಡ್ದೊ...ಇನ್ ಉಳ್ದಿದ್ದ ಅವನ ಆಸ್ತಿತೇಳಿರೆ, ಆ ಮಾಸಿದ ಬಟ್ಟೆಯ ಗಂಟು ಮಾತ್ರ. ಯಾರೂ ಅದ್ನ ಮುಟ್ಟಿಕೆ ಹೋತ್ಲೆ....ಅದಾಗಿ ಒಂದು ಹದಿನೈದು ದಿನ ಕಳ್ದಿರ್ದೇನೋ... ನಾವು ಆಟಾಡಿಕಂಡ್ ಇರ್ಕಾಕನ ನಮ್ಮಲ್ಲಿ ಒಬ್ಬಂಗೆ ಆ ಬಟ್ಟೆಗಂಟ್ಂದ ಹೊರಗೆ ನೂರು ರೂಪಾಯಿ ನೋಟು ಕಂಡಂಗೆ ಆತ್. ನಾವು ಹೋಗಿ ಅದ್ನ ಊರವ್ಕೆ ಹೇಳ್ದೊ...ನಾಲ್ಕೈದು ಜನ ದೊಡ್ಡವು ಬಂದ್ ಆ ಬಟ್ಟೆ ಗಂಟ್ ಬಿಚ್ಚಿರೆ....ಎಲ್ಲವ್ಕೂ ಆಶ್ಚರ್ಯ. ನೂರು ರೂಪಾಯಿ ನೋಟುನ ಕಟ್ಟುಗ, ಚಿನ್ನದ ನಾಣ್ಯಗ, ಸರ, ಬೆಳ್ಳಿಯ ಸಾಮಾನು...ಎಲ್ಲನೂ ಲೆಕ್ಕ ಹಾಕಿಕಾಕನ ಆ ತೀರಿ ಹೋದ ಸನ್ಯಾಸಿಯೇ ಭಾಗಮಂಡಲಕ್ಕೆ ದೊಡ್ಡ ಶ್ರೀಮಂತ ಆಗಿತ್ ! ಕೊನೆಗೆ ಅವನ ದುಡ್ಡುಲೇ ಜೋರಾಗಿ ತಿಥಿ ಮಾಡ್ದೋ...ಉಳ್ದ ದುಡ್ಡು ದೇವಸ್ಥಾನದ ಭಂಡಾರಕ್ಕೆ ಹಾಕಿದೊ...
ಭಾಗಮಂಡಲ ದೇವಸ್ಥಾನನೇ ಈಗ ಬದಲಾಗ್ಯುಟ್ಟು. ಆ ಸನ್ಯಾಸಿ ಕೂರ್ತಿದ್ದ ಜಗುಲಿಯ ಗುರುತೇ ಸಿಕ್ಕುಲ್ಲೆ...ನಾವು ಆಟ ಆಡ್ತಿದ್ದ ದೇವಸ್ಥಾನದ ಆ ಅಂಗಳನೂ ಕಾಣ್ತಿಲ್ಲೆ....

- `ಸುಮ' 

Tuesday 29 May 2012

ಮಾತಿನ ಜಾಣ ಡೀವಿ !


ನಮ್ಮ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಒಳೊ ಅಲಾ....ಮಾತ್ಲಿ ತುಂಬಾ ಹುಷಾರ್. ಹೇಳಿಕೇಳಿ ರಾಜಕಾರಣಿ. ಮಾತೇ ಅವ್ಕೆ ಬಂಡವಾಳ. ನಗಾಡಿಕಂಡ್ ನಗಾಡಿಕಂಡೇ ಬಾಂಬ್ ಹಾಕಿಬಿಟ್ಟವೆ. ಸಿಎಂ ಕುರ್ಚಿ ಕೊಟ್ಟ ಯಡಿಯೂರಪ್ಪನೇ ಯಾವಾಗ  ಕುರ್ಚಿ ಅಲ್ಲಾಡಿಸಿಕೆ ಶುರುಮಾಡ್ತೋ, ಸದಾನಂದ ಗೌಡ ಕೂಡ ಹುಷಾರಾಗಿಬಿಟ್ಟೊ. ಯಡಿಯೂರಪ್ಪ ನೇರವಾಗಿ ಸದಾನಂದ ಗೌಡರ ಬಗ್ಗೆ ಮಾತಾಡಿರೆ, ಈ ಸದಾನಂದ ಗೌಡರದ್ದ್ ರೇಷ್ಮೆ ಬಟ್ಟೆಲಿ ಚಪ್ಪಲಿ ಸುತ್ತಿ ಹೊಡೆದಂಗೆ ಮಾತ್. ಯಾವುದೋ ಜೋಶ್ಲಿ ಏನೇನೋ ಮಾತಾಡಿ ಯಡಿಯೂರಪ್ಪಂಗೆ ಟಾಂಗ್ ಕೊಟ್ಟುಬಿಟ್ಟವೆ. ಆ ಯಡಿಯೂರಪ್ಪನೋ ದೂರ್ವಾಸ ಮುನಿಯ ಇನ್ನೊಂದು ಅವತಾರ. ಮುಖ ಎಲ್ಲಾ ಕೆಂಪು ಮಾಡ್ಕಂಡ್ ಇರ್ವ ಕಡ್ಡಿಮೀಸೆ ಮೇಲೆ ಕೈ ಆಡಿಸಿ, ನೇರಾನೇರಾ ಯುದ್ಧಕ್ಕೆ ಇಳ್ದುಬಿಟ್ಟದೆ. ಏನೋ ಹೇಳಿವೆಯಲ್ಲಾ `ಸುಮ್ಮನೆ ಇರಲಾರದೆ....'ತಾ. ಹಂಗೆ ಈ ಸದಾನಂದ ಗೌಡ ಕೂಡ.
ಇಂದ್ ಏನಾತ್ ಗೊತ್ತಾ? ಫಿಲಂ ಆ್ಯಕ್ಟರ್ ಅಂಬರೀಷ್ ಬರ್ತ್ ಡೇಗಾಗಿ  ಬೆಂಗಳೂರ್ಲಿ ಒಂದು ಫೋಟೋ ಪ್ರದರ್ಶನ ಇಟ್ಕೊಂಡಿದ್ದೊ. ಇದರ ಉದ್ಘಾಟನೆ ಮಾಡ್ದ್ ದೇವರಗುಂಡ ಸದಾನಂದ ಗೌಡ. ಉದ್ಘಾಟನೆ ಮಾಡಿಯಾದ ಮೇಲೆ ಮಾತಾಡೋಕಲಾ...ನಮ್ಮ ಗೌಡ್ರು ಇಂದ್ ಯಾಕೋ ಏನೋ ತುಂಬಾ ಖುಷಿ ಮೂಡ್ಲಿ ಇದ್ದೊ. ಅಂಬರೀಷ್ನ ಹೊಗಳ್ತಾ.. ಹೊಗಳ್ತಾ...ಮೆಲ್ಲೆ ಯಡಿಯೂರಪ್ಪನ ಕಾಲು ಎಳ್ದುಬಿಟ್ಟೊ...`ನಾಯಕರಾಗಿದ್ದು ಖಳನಾಯಕರಾದವರನ್ನ ನಮ್ಮಲ್ಲಿ ನಾವು ನೋಡಿದ್ದೇವೆ. ಆದ್ರೆ ಅಂಬರೀಷ್ ಖಳನಾಯಕನಾಗಿದ್ದು, ನಾಯಕರಾದವರು.' ಇದ್ ಸದಾನಂದ ಗೌಡ ಹೇಳ್ದ ಮಾತ್. ನೋಡೊಕು, ಇದ್ಕೆ ನಾಳೆ ಯಡಿಯೂರಪ್ಪ ಎಂಥ ಕಮೆಂಟ್ ಕೊಟ್ಟದೆತಾ...
ಸದಾನಂದ ಗೌಡ ತಿಂಗಳ ಹಿಂದೆನೂ ಮಂಗಳೂರ್ಲಿ ಇದೇ ಇದೇ ಥರ ಮಾತಾಡಿದ್ದೊ. `ಮೊದ್ಲೆಲ್ಲಾ ತಪ್ಪು ಮಾಡುವಾಗ ದೇವರ ಬಗ್ಗೆ ಹೆದರಿಕೆ ಇತ್ತು. ಆದ್ರೆ ಈಗ ಹಾಗಲ್ಲ, ತಪ್ಪು ಮಾಡಿ ದೇವರಿಗೆ ದೊಡ್ಡ ಮೊತ್ತದ ಕಾಣಿಕೆ ನೀಡಿದ್ರೆ ಆತ ಕ್ಷಮಿಸಿಬಿಡ್ತಾನೆ ಅಂತ ಕೆಲವ್ರು ನಂಬಿಬಿಟ್ಟಿದ್ದಾರೆ...' ತಾ ಹೇಳಿ ಯಡಿಯೂರಪ್ಪನ ಇಂಡೈರೆಕ್ಟಾಗಿ ಉರಿಸಿಬಿಟ್ಟಿದ್ದೊ. ಹಿಂಗೆ ಸದಾನಂದ ಗೌಡ ಹೇಳ್ದ ಮಾರನೇ ದಿನ ಯಡಿಯೂರಪ್ಪನ ಮುಖ ನೋಡಕಾಗಿತ್ತ್... ಟಿವಿಯವರ ಮುಂದೆ ಮಾತಾಡಿಕಾಕನ ಮುಖದ ಮೇಲೆ ನಗು ತಂದ್ಕೊಂಡ್ರೂ ಒಳಗೊಳಗೆ ಉರ್ದುಹೋಗಿತ್. ಈ ಬಗ್ಗೆ ಮತ್ತೆ ಸದಾನಂದ ಗೌಡರ ಹತ್ರ ಮಾಧ್ಯಮದವು ಪ್ರತಿಕ್ರಿಯೆ ಕೇಳಿರೆ ನಗಾಡಿಕಂಡ್ ಅವ್ರ ಉತ್ತರ `ನೋ ಕಮೆಂಟ್...'
ಸದಾನಂದ ಗೌಡ ಯಾವಾಗ್ಲೂ ಹೆಂಗೆ ಕೋಲ್ಗೆಟ್ ನಗು ತೋರಿಸ್ತಿದ್ದವೆನೂ, ಹಂಗೆ ಮಾತಿನ ಜಾಣ ಕೂಡ ಹೌದು. ಇಂದ್ ಯಡಿಯೂರಪ್ಪನ ಬಗ್ಗೆ ಮಾತಾಡಿಯೊಳಲಾ, ಈ ಬಗ್ಗೆ ನಾಳೆ ಅವ್ರನ್ನ ಕೇಳಿ ನೋಡಿ, ಅವು ಹೇಳ್ದು...`ನೋ ಕಮೆಂಟ್...'ತಾ. ಹಂಗೆತೇಳಿ ನಾನೇನೂ ಸದಾನಂದ ಗೌಡರ ಬಗ್ಗೆ ಕಮೆಂಟ್ ಮಾಡ್ತಿಲ್ಲೆ... ಅವ್ರ ಮಾತಿನ ಶಕ್ತಿ ಬಗ್ಗೆ ಹೇಳ್ದ್ ಅಷ್ಟೇ...

- `ಸುಮ'
arebahse@gmail.com

Monday 28 May 2012

ಗೋಸುಂಬೆ...


ಎಷ್ಟು ಪೊರ್ಲುನ ಹೂ !
ಒಂದೊಂದು ಎಸಳಿಗೂ
ಒಂದೊಂದು ಬಣ್ಣ !
ಪರಿಮಳನೂ ಅಷ್ಟೇ ಲಾಯ್ಕ !
ವಾರದ ಏಳೂ ದಿನ
ಘಮ ಘಮ ಘಮ !
ಇರ್ದು ಒಂದೇ ಹೂ...
ಅವತಾರಗ ಮಾತ್ರ ಬೇರೆ ಬೇರೆ !
ಒಂದು ದಿನ ಮಲ್ಲಿಗೆಯಂಗೆ
ಮತ್ತೊಂದು ದಿನ ಗುಲಾಬಿಯಂಗೆ
ಆದ್ರೆ ಗಿಡಲಿ ಮುಳ್ಳು ಇಲ್ಲೆ !
ದುಂಬಿನ ಬೀಳಿಸಿಕೆ ಎಂತೆಂಥ ವೇಷ !
ಹೂವಿನ ಚೆಂದಕ್ಕೆ 
ಮರುಳಾತ್ ದುಂಬಿ...
ಕನಸು ಮನಸುಲಿ ಅದರದ್ದೇ ಗ್ಯಾನ
ಒಂದೇ ಒಂದು ಸಲ....
ಒಂದೇ ಒಂದು ಸಲ
ಹೀರಿಯೇ ಬಿಡೋಕು ಮಕರಂದ !
ಹೂವಿಗೂ 
ದುಂಬಿಯ ಸಹವಾಸದ ಬಯಕೆ..
ಪಾಪ ದುಂಬಿ...
ಅದಕ್ಕೆಂಥ ಗೊತ್ತು...
ಇದ್ ಸೆಂಟ್ ಮೆತ್ತಿಕಂಡಿರ್ವ
ಪ್ಲಾಸ್ಟಿಕ್ ಹೂವು !


- `ಸುಮ'
arebhase@gmail.com

Saturday 26 May 2012

ಸಂಪಿಗೆ ಮರ


ಅದೊಂದು ಹಳೇ ಶಾಲೆ. ನೂರು ವರ್ಷ ತುಂಬಿದ ನೆನಪಿಗೆ ಕಳ್ದ ವರ್ಷ ಇಲ್ಲಿ ಶತಮಾನೋತ್ಸವ ಸಮಾರಂಭ ಕೂಡ ಮಾಡಿದ್ದೊ. ಈ ಶಾಲೆ ಗೇಟ್ ಹತ್ರ ಒಂದು ದೊಡ್ಡ ಸಂಪಿಗೆ ಮರ ಉಟ್ಟು. ಬಹುಶಃ ಈ ಸಂಪಿಗೆ ಮರಕ್ಕೆ ಆ ಶಾಲೆಯಷ್ಟೇ ವಯಸ್ಸಾಗಿರುದೋ ಏನೋ.. ಆ ಸ್ಕೂಲ್ನ 2ನೇ ಕ್ಲಾಸ್ ಹುಡುಗರು ನಿಂತ್ಕಂಡ್ ಸೂಸು ಮಾಡುದು ಇದೇ ಮರದ ಕೆಳಗೆ ! ಹಂಗಾಗಿ, ಎಲ್ಲಾ ಕಡೆ ಹಸಿರು ಹುಲ್ಲು ಕಂಡರೆ ಸಂಪಿಗೆ ಮರದ ಬುಡಲಿ ಹುಲ್ಲು ಒಣಗಿ ಹೋಗಿದ್ದದೆ. ಇಲ್ಲೂ ಹಸಿರು ಕಾಣೋಕುತೇಳಿರೆ ಬೇಸಿಗೆ ರಜೆ ಬಾಕು ಅಷ್ಟೇ.. ! ಮರದ ಮೇಲೆ ತುಂಬಾ ಥರದ ಪಕ್ಷಿಗ ಗೂಡು ಕೂಡ ಕಟ್ಟಿಕೊಂಡೊಳೊ.
ಈ ಸಂಪಿಗೆ ಮರ ವರ್ಷಕ್ಕೆ ಒಮ್ಮೆ ಹೂ ಬಿಟ್ಟದೆ. ಆಗ ನೋಡೊಕು ಇದ್ರ ಪೊರ್ಲುನ...ಇಡೀ ಮರಕ್ಕೆ ಬಿಳಿ ಬಟ್ಟೆ ಹಾಸಿದಂಗೆ ಇದ್ದದೆ. ಸುಮಾರು ಒಂದು ಕಿಲೋ ಮೀಟರ್ ದೂರದ ವರೆಗೆ ಘಮಘಮತಾ ಪರಿಮಳ ಹರಡಿದ್ದದೆ. ಹೂ ಬಿಟ್ಟಿರ್ಕಾಕನ ಈ ಮರ ತುಂಬಾ ನೋವು ತಿಂದದೆ. ಟೀಚರ್ಗೆ ಕೊಟ್ಟು ಅವ್ರನ್ನ ಖುಷಿಪಡಿಸಿಕೆ ಸಣ್ಣ ಮಕ್ಕಳಿಗೆ ಹೂ ಬೇಕು. ಇನ್ನು ಸ್ವಲ್ಪ ದೊಡ್ಡ ಹೈದಂಗ ಆದ್ರೆ, ಅವು ಲೈನ್ ಹೊಡಿವ ಗೂಡೆಗಳಿಗೆ ಕೊಡಿಕೆ ಬೇಕು. ವಯಸ್ಸಾದವ್ಕೆ, ದೇವಸ್ಥಾನಕ್ಕೆ ತಕ್ಕಂಡ್ ಹೋಕೆ ಹೂವು ಬೇಕು. ಆದ್ರೆ ಕುಯ್ಯುದು ಹೆಂಗೆ ?  ಹೇಳಿಕೇಳಿ ಇದು ಭಾರೀ ದೊಡ್ಡ ಮರ. ಯಾರಿಗೂ ಹತ್ತಿಕೆ ಆಲೆ. ಗಳು ತಕ್ಕಂಡ್ ಬೀಳ್ಸುನೋತೇಳಿರೆ ಅಷ್ಟು ದೊಡ್ಡ ಗಳು ಕೂಡ ಸಿಕ್ಕುಲ್ಲೆ ! ಹಂಗಾಗಿ ಹೂವು ಬೇಕುತೇಳವು ಕಲ್ಲು ಹೊಡ್ದು ತಮ್ಮ ಆಸೆ ತೀರಿಸಿಕಂಡವೆ. 10 ಕಲ್ಲುಗಳಲ್ಲಿ 1 ಕಲ್ಲು ಮಾತ್ರ ಹೂವಿಗೆ ತಾಗಿದೆ. ಉಳ್ದ ಕಲ್ಲುಗಳ ಪೆಟ್ಟು ಎಲ್ಲಾ ಈ ಪಾಪದ ಮರಕ್ಕೆನೇ ! ತನ್ನ ಜೀವನಲಿ ಇಂಥ ಅದೆಷ್ಟು ಪೆಟ್ಟು ತಿಂದುಟ್ಟೋ ಏನೋ... ಆದ್ರೂ ಪ್ರತೀ ವರ್ಷ ನಗಾಡ್ತನೇ ಮರದ ತುಂಬಾ ಹೂ ಅರಳಿಸಿದೆ ! ಆದ್ರೆ ಬರ್ವ ವರ್ಷಂದ ಈ ಮರಲಿ ಹೂ ಸಿಕ್ಕುಲೆ !
ಶಾಲೆ ಶತಮಾನೋತ್ಸವ ಮಾಡ್ದೊ ಅಲಾ.... ಆಗ ಹಳೇ ವಿದ್ಯಾರ್ಥಿ ಗಳ ಕೈಯಿಂದ ತುಂಬಾ ಡೊನೇಷನ್ ಕಲೆಕ್ಟ್ ಮಾಡಿದ್ದೊ. ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ದುಡ್ಡು ಸಂಗ್ರಹ ಆಗಿರುದು. ಈಗ ಅದ್ರ ಅರ್ಧದಷ್ಟು ದುಡ್ಡು ಉಳ್ಕೊಂಡುಟ್ಟು. ಅದನ್ನ ಹೆಂಗಾರೂ ಮಾಡಿ ಖರ್ಚು  ಮಾಡೋಕು ನೋಡಿ, ಅದ್ಕೆ, ಒಂದು ನಾಲ್ಕು ರೂಂ ಕಟ್ಟಿಸಿರೆ ಹೆಂಗೆತಾ ಒಬ್ಬ ಕಮಿಟಿ ಮೆಂಬರ್ಗೆ ಸ್ನಾನ ಮಾಡಿಕಾಕನ ತಲೆಗೆ ಐಡಿಯಾ ಹೊಳ್ತ್. ಅದ್ನ ಉಳ್ದವ್ರ ತಲೆಗೂ ತುಂಬಿಸಿತ್. ಈಗ ಇರುವ ರೂಂಗಳೇ ಮಕ್ಕ ಇಲ್ಲದೆ ಬೀಗ ಹಾಕ್ಕಂಡ್ ಧೂಳ್ ಹಿಡ್ಕಂಡ್ ಬಿದ್ದಟ್ಟು. ಅದ್ರ ಜೊತೆಗೆ ಇನ್ನೂ ನಾಲ್ಕು ರೂಂ ಕಟ್ಟಿಕೆ ಕಮಿಟಿಯವು ತೀರ್ಮಾನ  ತಕ್ಕೊಂಡೊ. ಮತ್ತೊಬ್ಬ ಮನೆಹಾಳ ಇನ್ನೊಂದು ಐಡಿಯಾ ಕೊಟ್ಟತ್... `ಆ ಸಂಪಿಗೆ ಮರನ ಬುಡ ಸಮೇತ ಕಿತ್ತು ಹಾಕನ. ರೂಂಗಳ್ನ ಕಟ್ಟಿಕೆ ಜಾಗ ಸಿಕ್ಕಿದೆ. ಕಿಟಕಿ ಬಾಗಿಲು ಮಾಡಿಸಿಕೆ ಮರನೂ ಸಿಕ್ಕಿದೆ.' 
ಹಂಗೆ ಆ ಸಂಪಿಗೆ ಮರಕ್ಕೆ ಈಗ ಕೊನೆಗಾಲ ಬಂದು ಮುಟ್ಟಿಟ್ಟು. ಈಚಪ್ಪಾಚಾರಿ ದಿನಾ ಗರಗಸಕ್ಕೆ ಅರ ಹಾಕಿ ಹಾಕಿ ಹರ್ತ ಮಾಡಿ ರೆಡಿಯಾಗಿ ನಿಂತುಟ್ಟು. ಯಾಗ ಮರ ಬೀಳಿಸಿವೆ ಗೊತ್ಲೆ.... ಮರ ಬಿದ್ದ ಮೇಲೆ ಅಲ್ಲಿ ಗೂಡು ಕಟ್ಟಿಕಂಡಿರ್ವ ನೂರಾರು ಪಕ್ಷಿಗ ಇನ್ನೆಲ್ಲಿ ಹೋದವೆ ? ಅದು ಬಿಡಿ, ಎರಡನೇ ಕ್ಲಾಸ್ ಹೈದಂಗ ಇನ್ಯಾವ ಮರದ ಬುಡಲಿ ಸೂಸು ಮಾಡಿವೆ ? ಎಷ್ಟು ಬುದ್ಧಿಗೇಡಿಗಳಪ್ಪಾ ಈ `ದೊಡ್ಡವು' ?

- `ಸುಮ'

Friday 25 May 2012

`ಸೂರ್ಯ ಕಲಿಸುವ ಬದುಕಿನ ಪಾಠ'


ಸಂಜೆ ಹೊತ್ತು. ಸಮುದ್ರದಲಿ ತುಂಬಾ ದೂರಲಿ ಸೂರ್ಯ ಮುಳುಗುವ ಸೂಚನೆ ಸಿಕ್ಕಿತ್ತ್. ಮಲ್ಪೆ ಬೀಚ್ನ ಕಲ್ಲು ಬೆಂಚ್ಲಿ ಕುದ್ದ್ಕಂಡ್ ನಾ ಅದ್ನೇ ನೋಡ್ತಿದ್ದೆ. ನಂಗೆ ಮೊದ್ಲಿಂದನೂ ಅಷ್ಟೇ, ಸಮುದ್ರ ಅಂದ್ರೆ ತುಂಬಾ ಹೆದ್ರಿಕೆ. ಆದ್ರೆ ಸೂರ್ಯ ಮುಳುಗುದನ್ನ ನೋಡುದುತೇಳಿರೆ ಎಲ್ಲಿಲ್ಲದ ಖುಷಿ. ನಾ ಉಡುಪಿಗೆ ಹೋದ್ರೆ ಸಂಜೆ ಹೊತ್ತು ಮಲ್ಪೆ ಬೀಚ್ಗೆ ಒಂದು ವಿಸಿಟ್ ಇದ್ದೇ ಇದ್ದದೆ. ಅಲ್ಲಿ ಹೋದರೂ ಸಮುದ್ರಕ್ಕೆ ಇಳಿಯಲ್ಲೆ...ದೂರಲಿ ರೋಡ್ಂದ ಆಚೆಬದಿ ಇರ್ವ ಕಲ್ಲುಬೆಂಚ್ಮೇಲೆ ಕುದ್ದ್ಕಂಡ್ ಸೂರ್ಯ ಮುಳುಗುದನ್ನ ಪ್ರತೀ ಸೆಕೆಂಡ್ ಕೂಡ ಅನುಭವಿಸಿನೆ.
ಇಂದ್ ಕೂಡ ಹಂಗೆನೇ...ಅದೇ ಸೂರ್ಯಾಸ್ತಮಾನ  ಕಣ್ತುಂಬಿಸಿಕಣಿಕೆ  ಕುದ್ದಿದ್ದೆ. ಸೂರ್ಯನ ಆಯುಷ್ಯ ಒಂದು ದಿನ ಮಾತ್ರ. ಅವಂಗೂ ನಮ್ಮಂಗೆ ಬಾಲ್ಯ, ಯವ್ವನ, ವೃದ್ಧಾಪ್ಯ ಉಟ್ಟು. ಆದ್ರೆ ಎಲ್ಲವನ್ನೂ ಒಂದೇ ದಿನಲಿ ಮುಗಿಸಿಬಿಟ್ಟದೆ. ನೋಡಿ...ಅಂವ ಬೆಳಗ್ಗೆ ಹುಟ್ಟಿಕಾಕನ ಹೆಂಗಿದ್ದದೆ? ಥೇಟ್ ಸಣ್ಣ ಕೂಸು ! ಅದ್ಕೆ ಅದನ್ನ ಪುರಾಣ ಕಥೆಗಳಲೆಲ್ಲಾ ಬಾಲಸೂರ್ಯತಾ ವರ್ಣಿಸಿ ರ್ದು. ಹನುಮಂತ ಸಣ್ಣವ ಆಗಿರ್ಕಾಕಕನ ಇದೇ ಬಾಲ ಸೂರ್ಯನ ಚೆಂಡ್ತಾ ತಿಳ್ಕಂಡ್ ಹಿಡಿಯಕ್ಕೆ ಹೋಗಿ, ಬಿದ್ದ್ ಮುಖಕ್ಕೆ ಪೆಟ್ಟು ಮಾಡಿಕಂಡಿತ್ತ್ಗಡ ! ಅದಲ್ಲಿ ಇರ್ಲಿ ಬುಡಿ....
ಹೊತ್ತುಕಳ್ದಂಗೆ ಸೂರ್ಯನ ರೂಪ ಕೂಡ ಬದಲಾಗ್ತಾ ಹೋದೆ. ಮಟ ಮಟ ಮಧ್ಯಾಹ್ನ ಸಮಯಲಿ ಅವಂಗೆ ತುಂಬು ಯವ್ವನ ! ಅದಕ್ಕೆ ಸೊಕ್ಕುಲಿ ಮೆರ್ದದೆ. ಎಷ್ಟು ಸಾಧ್ಯನೋ ಅಷ್ಟು ಕಿತಾಪತಿ ಮಾಡ್ದೆ. ಸಿಟ್ಟಾಗುವ ಜನ ಶಾಪ ಹಾಕಿವೆ. ಈ ಶಾಪ ಸೂರ್ಯಂಗೆ ತಟ್ಟಿತೋ ಏನೋತಾ ಹೇಳುವಂಗೆ ನಿಧಾನಕ್ಕೆ ಯವ್ವನದ ಮದ ಇಳ್ದದೆ. ನಾಲ್ಕು ಗಂಟೆ ಹೊತ್ತಿಗೆಲ್ಲಾ ಸೂರ್ಯಂಗೆ ವೃದ್ಧಾಪ್ಯ....ಕೋಪ, ತಾಪ ಎಲ್ಲಾ ಇಳ್ದಿದ್ದೆ. ಇನ್ನು ಸಮುದ್ರಲಿ ಮುಳುಗುವ ಹೊತ್ತಿಗಂತೂ ಗಂಭೀರ ಸ್ವರೂಪ. ಜೀವನದ ಎಲ್ಲಾ ಕಷ್ಟ, ಸುಖಗಳನ್ನ ಅನುಭವಿಸಿದ ಮುಖಭಾವ !
ಸೂರ್ಯಾಸ್ತಮಾನ ಒಬ್ಬೊಬ್ಬರಿಗೆ ಒಂದೊಂದು ರೀತಿಲಿ ಕಂಡದೆ. ಅದು ಅವರ ಮನಸ್ಥಿತಿ ಮೇಲೆ ನಿಂತುಟ್ಟು. ಆದ್ರೆ ನಂಗೆ ಮಾತ್ರ ಅಲ್ಲಿ ಜೀವನಾನುಭವ ಕಂಡದೆ. ಸಮುದ್ರದಲ್ಲಿ ಸೂರ್ಯ ಮಾಯ ಆಗಿ ಕತ್ತಲು ಆಗ್ತಿದ್ದಂಗೆ ನಾ ಹೊಸ ಮನುಷ್ಯ ಆಗಿದ್ದನೆ...
 - `ಸುಮಾ'
arebhase@gmail.com

Wednesday 23 May 2012

ಕರೀತ್ತುಟ್ಟು ಕನ್ನಿಕಾ ..


ಬ್ರಹ್ಮಗಿರಿಯ ಹಿಂದೆ ಹುಟ್ಟಿ
ತಣ್ಣಿಮಾನೀಲಿ ತಣ್ಣನೆ ಹರ್ದು
ತ್ರಿವೇಣಿ ಸಂಗಮಲಿ ಮುಗಿಯುವ
ನಿನ್ನ ಜೀವನ ಅದೆಷ್ಟು ಸಣ್ಣದ್
ಅಕ್ಕ ಕಾವೇರಿ... ತಂಗಿ ಸುಜ್ಯೋತಿ 
ಜೊತೆ ಸೇರಿ ಹರಿವ ನೀನೇ ಪುಣ್ಯವಂತೆ ! 
ಅನಂತಭಟ್ಟರ ಮನೆ ಹತ್ರ
ಸಣ್ಣ ತೋಡುನಂಗೆ ಕಂಡಿಯಾ
ನಮಗಾಗ ಅದೇ ದೊಡ್ಡ ಹೊಳೆ !
ಅಪ್ಪ, ಅಮ್ಮನ ಕಣ್ಣು ತಪ್ಪಿಸಿ
ಓಡಿ ಬಂದ್.. 
ಅಲ್ಲಿ ಈಜು ಹೊಡೀವ ಮಜಾ 
ಇನ್ನೆಲ್ಲಿ ಸಿಕ್ಕಿದೆ ?
ನಮ್ಮದೊಂದು ಕಪಿಸೈನ್ಯ
ನೀರೊಳಗೆ ಮರಿ `ಗೊಮ್ಮಟೇಶ್ವರ'ಗ !
ಆ ಸುಖ... 
ಚಡ್ಡಿ ಹಾಕ್ಕಂಡ್ರೆ ಕಾಂಬಲೆ !
ಹೊಳೆಬದಿಯ ಮಾವಿನ ಮರ
ಮರ ಮೇಲಿಂದ ಹೊಡೀವ ಡೈ
ನಮ್ಮ ಬೊಬ್ಬೆಗೆ ನಿದ್ರೆಲೇ ಕಿಟಾರನೇ
ಕಿರುಚುವ ಅಣ್ಣಯ್ಯ ಭಟ್ಟ ಮಂಙ
ದೊಡ್ಡ ಕೋಲು ಹಿಡ್ಕಂಡ್ ಬರ್ವ 
ಗುರುನ ಅಮ್ಮ... 
ಚಡ್ಡಿಬಿಟ್ಟು ಗದ್ದೇಲಿ ಓಡ್ವ ನಾವು...!
ಒಂದಕ್ಕಿಂತ ಒಂದು ಸಿಹಿ ಸಿಹಿ ಬಾಲ್ಯ
ಹಳೇ ನೆನಪುಗಳ್ನ ಗಂಟುಕಟ್ಟಿಕಂಡ್
ಮೊನ್ನೆ ಮೊನ್ನೆ ಕನ್ನಿಕೆಯ ಹತ್ರ ನನ್ನ ಪಯಣ
ಹಂಗೆ ಸುಮ್ಮನೆ 
ಹೊಳೆ ದಂಡೆ ಮೇಲೊಂದು ವಾಕಿಂಗ್ 
ಅನಂತ ಭಟ್ಟರಿಗೆ ವಯಸ್ಸಾಗ್ಯುಟ್ಟು
ಹೊಳೆಬದಿಯ 
ಆ ಮಾವಿನ ಮರಕ್ಕೂ ವೃದ್ಧಾಪ್ಯ
ಕನ್ನಿಕೇಲಿ ನೀರು ಕಮ್ಮಿ ಆದಂಗೆ
ಕಾಣ್ತುಟ್ಟು.. 
ಅಲ್ಲಿ ಈಜಾಡುವ ಮಕ್ಕಳೂ ಇಲ್ಲೆ !


- `ಸುಮಾ'
arebhase@gmail.com

Monday 21 May 2012

ಹೂ ನಗು


ಪುಟ್ಟದೊಂದು ಮನೆ
ಮನೆಮುಂದೆ ಸಣ್ಣ
ಹೂತೋಟ
ಅವ್ಳ ಕನಸು...
ಮನೆಯಂತೂ ರೆಡಿಯಾತ್ !
ಹೂ ತೋಟದ ಕೆಲಸನೂ
ಶುರುವಾತ್...
ಮಕ್ಕಿತೋಟದ ಕಾಡುಮಣ್ಣು
ಗಂಗೆ ಹಸುನ ಸಗಣಿ
ಚೋಮ ತಂದಿಟ್ಟ ಗುದ್ದಲಿ
ಅಡುಗೆ ಮನೆಯ ನೀರು
ಹೇಮಾ ಮನೆಯ ಗುಲಾಬಿ ಗಿಡ !
ಪ್ರೇಮಾ ತೋಟಂದ ಡೇಲಿಯಾ ಗಡ್ಡೆ
ಇನ್ನೆಲ್ಲಿಂದೋ ಸೇವಂತಿಗೆ
ಮತ್ಯಾರೋ ಕೊಟ್ಟ ಸೂಜಿ ಮಲ್ಲಿಗೆ
ಸಣ್ಣ ತೋಟ ತುಂಬಾ ಈಗ
ಪುಟ್ಟ ಪುಟ್ಟ ಗಿಡಗ..!
ನೋಡ ನೋಡ್ತಿಂಗೆ ಕಳ್ದೇ ಹೋತ್
ಒಂದು ವರ್ಷ !
ಗಿಡಗಳಲೆಲ್ಲಾ ಹೂವು ಅರಳಿ 
ಆ ನಗು ಎಂಥ ಚೆಂದ !


- `ಸುಮಾ'
arebhase@gmail.com

Sunday 20 May 2012



ಎತ್ತು ಏರಿಗೆ, ಕೋಣ ನೀರಿಗೆ...


`ತುಂಬಾ ಇನ್ನೋಸೆಂಟ್ನಂಗೆ ಇದ್ದವೆಯಲ್ಲಾ ಅವ್ರನ್ನ ನಂಬಿಕೆ ಆದ್...' ಮೆಟ್ರೋ ರೈಲ್ಲಿ ಕುದ್ದ್ಕಂಡ್ ಸುಮಂತ್ನ ಕೈಯೊಳಗೆ ಕೈ ಇಟ್ಟ್ಕಂಡ್ ಸೌಮ್ಯಾ ಹೇಳ್ತಿತ್...ಸುಮಂತ್ ಮಾತ್ರ ಕೇಳಿಯೂ ಕೇಳದಂಗೆ ಎದುರುಬದಿ ಕಿಟಕಿಲಿ ಹಿಂದಕ್ಕೆ ಓಡಿ ಹೋಗ್ತಿರ್ವ ದೊಡ್ಡ ದೊಡ್ಡ ಕಟ್ಟಡಗಳ್ನ ನೋಡ್ತಾ ಕುದ್ದ್ಕಂಡಿತ್ತ್. ಆದ್ರೆ ಸೌಮ್ಯಾ ಮಾತು ನಿಲ್ಲಿಸುವಂಗೆ ಕಾಣ್ತಿತ್ಲೆ... `ಆ ಗಾನಾ ಉಟ್ಟಲ್ಲಾ, ನೋಡಿಕೆ ಎಷ್ಟು ಸೈಲೆಂಟ್ ಗೊತ್ತಾ...' ಮೆಟ್ರೋ ರೈಲ್ ರಿಚ್ಮಂಡ್ ಸ್ಟೇಷನ್ಲಿ ನಿಂತಿತ್ತ್. 10 ಜನ ಇಳ್ದ್ ಒಂದೈದ್ ಜನ ಹತ್ತಿದೋ...ಭಾನುವಾರ ಆಗಿದ್ದ್ರಿಂದ, ಕೆಲ್ಸಕ್ಕೆತಾ ಹೇಳಿ ಮೆಟ್ರೋಕ್ಕೆ ಹತ್ತುವು ಯಾರೂ ಇತ್ಲೆ. ಎಲ್ಲವೂ ಒಂಥರ ಪಿಕ್ನಿಕ್ಗೆ ಬಂದಂಗೆ ಮೆಟ್ರೋಲಿ ಎಂಜಾಯ್ ಮಾಡ್ತಿದ್ದೊ. ಎದ್ರು ಸೀಟ್ಲಿ ಲವರ್ ಜೊತೆ ಕುದ್ದಿದ್ದಂವ ಹೆಂಗಾರೂ ಮಾಡಿ ತಮ್ಮಿಬ್ಬರ ಫೋಟೋ ತೆಗೆಯುಕೂತಾ ಕೆಮರಾನಾ ಉಲ್ಟಾಪಲ್ಟಾ ಹಿಡ್ಕಂಡ್ ಸರ್ಕಸ್ ಮಾಡ್ತಿತ್. ಇದ್ನ ನೋಡಿ, ಸುಮಂತ್ಗೆ ನಗು... ಈ ನಗು ನೋಡಿ ಸೌಮ್ಯಂಗೆ ಸಿಟ್ಟ್ ಬಾತ್, `ಹೌದು...ನಾ ಎಂಥ ಹೇಳಿರೂ ನಿಂಗೆ ನಗು...ಗಾನನ ವಿಷ್ಯನಾ ಸೀರಿಯಸ್ ಆಗಿ ಹೇಳ್ತೊಳೆ ಮಾರಾಯ...' ಸುಮಂತ್ ಸೌಮ್ಯಾನ ಸಮಾಧಾನ ಮಾಡಿಕೆ ನೋಡ್ತ್...`ಹೇ ಚಿನ್ನು....ನಾ ಅದ್ಕಲ್ಲ ನಗಾಡ್ದ್... ಅಲ್ಲಿ ಕುದ್ದುಟ್ಟಲ್ಲಾ ಅಂವ ನೋಡು, ಫೋಟೋ ತೆಗೆಯಕ್ಕೆ ಹೆಂಗೆ ಪರ್ದಾಡ್ತುಟ್ಟುತಾ... ಅದ್ನ ನೋಡಿ ನಗು ಬಾತ್..' ಸುಮಂತ್, ಸೌಮ್ಯಾನ ಕರೆಯುದೇ ಹಂಗೇ...ಚಿನ್ನುತಾ. ಸೌಮ್ಯಾಂಗೂ ಅದ್ನ ಕೇಳಿಕೆ ಖುಷಿ. ಸೌಮ್ಯಾ ಮತ್ತೆ ಶುರುಮಾಡ್ತ್... `ಆ ಗಾನಾ ಉಟ್ಟಲ್ಲಾ, ಅವ್ಳು ನಿನ್ನೆ ಆಫೀಸ್ಗೆ ಜೀನ್ಸ್ ಹಾಕ್ಕಂಡ್ ಬಂದಿತ್ತ್...' ಆದ್ರೆ ಸುಮಂತ್ ಇದ್ನೆಲ್ಲಾ ಕೆಳ್ವ ಮೂಡ್ಲಿ ಇತ್ಲೆ. ಮೊದ್ಲ ಸಲ ಮೆಟ್ರೋ ಹತ್ತಿದ್ದ್ರಿಂದ, ಅದ್ರ ಖುಷೀಲೇ ಇತ್....ಸೌಮ್ಯ ಮಾತ್ರ ಗಾನಾ ವಿಷ್ಯನ ನಿಲ್ಲಿಸುವಂಗೆನೇ ಕಾಣ್ತಿತ್ಲೆ... ಈ ಗೂಡೆಗಳೇ ಹಂಗೆ, ಎದುರಿಗೆ ಇರವು ಕೇಳೊಕುತಾ ಏನೂ ಇಲ್ಲೆ, ಕಲ್ಲುಬಂಡೆ ಇದ್ದರೂ ಮಾತಾಡೋಕುತಾ ಅನ್ನಿಸಿದ್ದನ್ನ ಹೇಳ್ತನೇ ಇದ್ದವೆ. ಸುಮಂತ್ನಂತವು ಅದ್ನ ಒಂದು ಕಿವೀಲಿ ಕೇಳಿ ಮತ್ತೊಂದು ಕಿವೀಲಿ ಬಿಡ್ತನೇ ಇದ್ದವೆ. ಸೌಮ್ಯಾನೂ ಗೂಡೆ ತಾನೆ... `ಆ ಗಾನಾ, ಅವ್ಳ ಹತ್ರ ಮಾತ್ರ ಜೀನ್ಸ್ ಇರ್ವಂಗೆ ಆಡ್ತಿತ್ ಗೊತ್ತಾ....' ಮುಂದಿನ ನಿಲ್ದಾಣ ಬೈಯ್ಯಪ್ಪನಹಳ್ಳಿ...ತಾ ಸ್ಕ್ರೀನ್ ಮೇಲೆ ಬರ್ತಿದ್ದದ್ದನ್ನ ಹಂಗೆನೇ ನೋಡಿಕಂಡ್ ಕುದ್ದಿತ್ ಸುಮಂತ್ ! `ಏನ್ತಾರೂ ಮಾತಾಡ್ರಾ, ನೀನೇನು ಮೂಗನಾ...' ಸೌಮ್ಯಾನ ಪ್ರಶ್ನೆ. ಅದ್ಕೆ ಅಷ್ಟೇ ಕೂಲಾಗಿ ಸುಮಂತ್ ಉತ್ತರ, `ಎದ್ದೇಳ್ ಬೇಗ...ಬೈಯ್ಯಪ್ಪನಹಳ್ಳಿ ಬಾತ್.' ಅಂದ್ಹಂಗೆ ಇವಿಬ್ರೂ ಮುಂದಿನ ತಿಂಗ ಮದುವೆ ಆಗ್ತೊಳೊ...ಗೋವಿಂದ, ಗೋವಿಂದಾ...!!!
- 'ಸುಮಾ'

Saturday 19 May 2012

`ಕಪ್ಪು ಕೊತ್ತಿ !'


ಅಟ್ಟದ ಮೇಲೆ ಟಾರ್ಚ್ ಹಾಕಿರೆ
ಎರಡು ಕೆಂಡದುಂಡೆಗ !
ದೂರಲಿ ಉಡೋತ್ಮೊಟ್ಟೆ
ಹತ್ತುತ್ತಿರ್ವ ರಾಮಾಬಸ್ನ
ಮಿಣಕು ಮಿಣಕು ಹೆಡ್ಲೈಟ್ನಂಗೆ !
ಕೇಳಿಯೂ ಕೇಳಿಸದಿರ್ವ 
ಅದ್ರ ಹಾರ್ನ್ !
ಟ್ರೈವರ್ ರಾಘವಣ್ಣನ ಕೈಲಿ
ಇರ್ವ ಶಕ್ತಿ ಅಷ್ಟೆನಾ ?
ಆ   ಹಾರ್ನ್  ಶಬ್ದನೇ ಹಂಗೆನಾ ?
ಅದಕ್ಕಿಂತ್ಲೂ ಲಾಯ್ಕ ಉಟ್ಟು
ಈ ಅಟ್ಟದ ಯಜಮಾನನ
ಸೊಕ್ಕಿನ ಧ್ವನಿ...!
ಮೀಯಾಂವ್ ಮೀಯಾಂವ್....!!! 
ಅತ್ತೆ ಮೇಲಿನ ಸಿಟ್ಟೆಲ್ಲಾ
ಇದ್ರ ಮೇಲೆನೇ...!
ಛೇ... ಪಾಪದ ಕೊತ್ತಿ
ದೆವ್ವಗಳಂಗೆ ಓಡ್ವ ಇಲಿ ಹಿಡಿಯಕ್ಕೆ
ಇದೇ ಬೇಕು !
ಕೊನೆಗೆ ಬಹುಮಾನ...
`ನಿನ್ನ ಗುಮ್ಮ ಮೆಟ್ಟ...' 
ಹೊಟ್ಟೆ ಚುರುಗುಟ್ಟಿ
ಹೆಜ್ಜೆ ಮೇಲೆ ಹೆಜ್ಜೆ ಹಾಕ್ಕಂಡ್
ಹಾಲು ಕುಡಿಯಕ್ಕೆ ಬಂದರೆ
ಚೀಪೆ ಏಟು..!
ಇದೂ ಒಂದು ಜೀವನನಾ ?
ರಾಮಾ ಬಸ್ಗೂ ವಯಸ್ಸಾತ್ !
ತಲಕಾವೇರಿ ಬೆಟ್ಟ ಹತ್ತಿಕ್ಕಾಲೆ
ಇದಕ್ಕೂ ಉಬ್ಬಸ !
ಡ್ರೈವರ್ ರಿಟೈರ್ಡ್ ಆದೋ...
ಒಲೆ ಬುಡಲಿ ಕೊತ್ತಿ
ರೊಟ್ಟಿ ಸುಟ್ಟು 
ಉಳ್ದ ಬೂದಿಲಿ ಸ್ನಾನ !
ಯವ್ವನಲಿ ಹಿಡ್ದ ಇಲಿಗಳೆಷ್ಟೋ....
ಈಗ ಅವೇ ಬಂದ್ 
ಮೀಸೆ ಎಳ್ದವೆ !
ಬಿದ್ದವ್ಕೆ ನಾಲ್ಕು ಏಟು ಜಾಸ್ತಿ
ಆ ಮನೆ ಕೂಸುಗೂ ಸಸಾರ
ಬಾಲ ಎಳ್ದದೆ !
10 ಜನ ಸೇರಿ ನೂಕಿರೂ
ಬರೀ ಬುರು ಬುರು ಶಬ್ದ !
ರಾಮಾ ಬಸ್ ಸ್ಟಾರ್ಟ್ ಆಲೆ
ಮುಗ್ತ್ ಅದ್ರ ಕಥೆ..
ಗುಜರಿ ಅಂಗಡಿಯೇ ಗತಿ !
ದೂರಲಿ ಬೈನೆ ಮರದ ಮೇಲೆ
ಹದ್ದು ಹಾರಾಡ್ತುಟ್ಟು !
ಗದ್ದೆ ಮಧ್ಯೆ ಸತ್ತ ಕೊತ್ತಿ 
ಇಷ್ಟೇ ಜೀವನ....

- `ಸುಮಾ'

Friday 18 May 2012

ಪ್ರೀತಿ ಮಾಯೆ !


ಎಲ್ಲಿ ಹೋತ್ 
ಆ ಪ್ರೀತಿ ?
ಒಂದೇ ತಿಂಗಳಿಗೆ 
ಸಾಕಾತಾ ? 
ನಿನ್ನ ಕಾಲ್ಗೆ ನಾ
ನನ್ನ ಕಾಲ್ಗೆ ನೀ
ಕಾಯುತ್ತಿದ್ದ ಸುಖ !
ಗಂಟೆಗೊಮ್ಮೆ ಮಾತಾಡದಿದ್ದರೆ..
ಹುಸಿ ಮುನಿಸಿನ ಆಟ !
ಮೆಸೆಜ್ಗಳಿಗಂತೂ...
ಪುರುಷೋತ್ತೇ ಇತ್ಲೆ !
ಸೆಕೆಂಡ್ಗೊಂದು ಹಾಯ್...
ನಿಮಿಷಕ್ಕೊಂದು ಲವ್ ಯೂ
ಮಧ್ಯೆ ಮಧ್ಯೆ ಮಿಸ್ಯೂ...
ಅದೆಲ್ಲಾ ಎಲ್ಲಿ ಹೋತ್ ಈಗ ?
ಮಾತಾಡಿಕೆ ಶುರುಮಾಡಿರೆ
ರಾತ್ರಿ ಬೆಳಗಾಗ್ತಿತ್ !
ಕೋಳಿ ಕೂಗುವವರೆಗೂ
ಕೊರೆದ ದಿನಗಳೆಷ್ಟೋ..!
ಅಲ್ಲಿ ಬಾರದ ವಿಷಯಗಳೇ ಇಲ್ಲೆ !!!
ಇಬ್ಬರದ್ದೂ ಒಂದೇ ಟೇಸ್ಟ್ !
ಆದ್ರೆ ಈಗ ಇದ್ದಕಿದ್ದಂಗೆ 
ಏನಾತ್ ?
ಒಮ್ಮೆಲೇ ಪ್ರೀತಿ ಮಾಯವಾತಾ?
ಅಂದ್ ಆಡಿದ್ದೆಲ್ಲಾ ನಾಟಕನಾ ?
ಒಳ್ಳೇ ನಟಿ ನೀ....
ನಂಗೆ ಅದೊಂದು ಮಧುರ
ನೆನಪು...
ನಾ ಮರೆಯಲ್ಲೆ...ಎಂದೆಂದಿಗೂ...
ನಿನ್ನ ಸಿಹಿಧ್ವನಿ 
ನನ್ನ ಮೊಬೈಲ್ಲಿ 
ಈಗಲೂ ಉಟ್ಟು...
ಮನಸ್ಸು ಕೆಟ್ಟಾಗ ಅದೇ 
ನಂಗೆ ಸಂಜೀವಿನಿ.. !
- `ಸುಮಾ' 
arebhase@gmail.com

Thursday 17 May 2012

ಕಾಲ್ಗೆಜ್ಜೆ....


ಫಳ ಫಳ ಹೊಳೆಯ್ವ
ಹೊಸ ಗೆಜ್ಜೆ !
ಮುಟ್ಟಿರೆ ಸಾಕ್...
ಘಲ್ ಘಲ್ ಶಬ್ದ !
ಹಂಗೆನೇ ನೋಡಿಕೆ 
ಅದೆಷ್ಟು ಲಾಯ್ಕ !
ಇನ್ ನನ್ನ ಗೂಡೆನ
ಕಾಲಲಿದ್ದರೆ ?
ಹಾಲಲ್ಲಿ ತೊಳ್ದಂಗೆ
ನಯವಾದ ಪಾದ !
ಇನ್ನೂ ಘಮ ಘಮತಾ
ಹೇಳ್ತಿರ್ವ ಉಗುರು ಬಣ್ಣ !
ಆಕಾಶ ನೀಲಿ ಕಲರ್ನ ಪ್ಯಾಂಟ್ಗೆ
ಚಿನ್ನದ ಜರಿಯಂಚು...
ಮಧ್ಯಲಿ ಮಿರಮಿರ ಮಿಂಚುವ
ಕಾಲ್ಗೆಜ್ಜೆ !
ಅವ್ಳು ನಡ್ದರೆ ಭೂಮಿಗೇ
ನಾಚಿಕೆ !
ನನ್ನೆದೆಯೊಳಗೆ 
ಝಲ್ ಝಲ್ ನಾದ...
ಅವ್ಳು ನನ್ನ ಗೂಡೆ !

- `ಸುಮಾ'
arebhase@gmail.com
ಫೋಟೋ :ದಿಗ್ವಾಸ್ ಹೆಗಡೆ ಫೋಟೋಗ್ರಫಿ

Wednesday 16 May 2012

ಅಟ್ಟದ ಮೇಲೆ `ಸುಟ್ಟ ದೆವ್ವ' !


`ಡಬ...ಡಬ...ಡಬ...' ಯಾರೋ ಅಟ್ಟದ ಮೇಲೆ ಜೋರಾಗಿ ಓಡ್ದಂಗೆ ಶಬ್ದ ! ಮಲಗಿದ್ದ ಚಿನ್ನು ಹೆದರಿಕೆಲಿ ಎದ್ದು ಕೂತ್ಕಣ್ತ್. ಹೊರಗೆ ಮಳೆ... ಮಡಿಕೇರಿಯ ಮೈ ಕೊರಿಯುವ ಚಳಿ ಬೇರೆ... ಆದ್ರೂ ಮುಖದ ತುಂಬಾ ಬೆವ್ರು. ನಿನ್ನೆಯಷ್ಟೇ ಅವ್ಳು ಬೆಂಗಳೂರಿಂದ ಊರಿಗೆ ಬಂದಿತ್. ಮಾವನ ಮಂಙನ ಮದುವೆಗೆ. ಇಂದ್ ಚಪ್ಪರ. ನಾಳೆ ಮುಹೂರ್ತ. ಅಪ್ಪ, ಅಮ್ಮ ಇವಳೊಬ್ಬಳನ್ನೇ ಮನೇಲಿ ಬಿಟ್ಟು ಚಪ್ಪರಕ್ಕೆ ಹೋಗಿದ್ದೊ. ಮಗಳಿಗೆ ಭಾರೀ ಧೈರ್ಯತೇಳುವ ನಂಬಿಕೆ, ಆ ಅಪ್ಪ ಅಮ್ಮಂಗೆ ! ಆದ್ರೆ ಅವಳ ಧೈರ್ಯ ಅವಳಿಗೆ ಮಾತ್ರ ಗೊತ್ತಿತ್.... ಹೆದರಿಕಂಡೇ ಹೋಗಿ ಫ್ರಿಡ್ಜ್ ಬಾಗಿಲು ತೆಗ್ದ್ ತಣ್ಣನೆ ನೀರು ಕುಡ್ದ ಬಂದ್ ಮತ್ತೆ ಮಲಗಿತ್, ಚಿನ್ನು.
ಮಿಲಿಟರಿ ಮಾವ ತಂದುಕೊಟ್ಟಿದ್ದ ದಪ್ಪ ಕಂಬಳಿ ಒಳಗೆ ಮೈ ಸೇರಿಸಿಕಂಡಿತ್ ಚಿನ್ನು. ನಿದ್ರೆ ಬಂದ್ ಕಣ್ಣ್ ಮುಚ್ಚಿ ಮುಚ್ಚಿ ಹೋಗ್ತಿತ್. ಆದ್ರೆ ಕಣ್ಣು ಮುಚ್ಚಿಕೆ ಹೆದ್ರಿಕೆ. ಹಂಗೇ ಒಂಥರ ಮಂಕ್... ಅಷ್ಟೊತ್ತಿಗೆ ಅಟ್ಟದ ಮತ್ತೆ ಮತ್ತೆ ಶಬ್ದ... `ಡಬ...ಡಬ...ಡಬ...' ! ಮಾವನ ಮನೆ ಅವ್ವ ಹೇಳ್ತಿದ್ದ ದೆವ್ವದ ಕಥೆಗ ಚಿನ್ನುಗೆ ನೆನಪಿಗೆ ಬಾತ್. ತುಂಬಾ ಹಿಂದೆ ಚಿನ್ನುನ ಅಮ್ಮ ಚಿಕ್ಕವಳಿರ್ಕಾಕನ, ಅವ್ರ ದೊಡ್ಡ ಅಣ್ಣ ಕಾವೇರಿ ಹೊಳೇಲಿ ಈಜಿಕೆ ಹೋಗಿ ಸತ್ತುಹೋಗಿದ್ದೊಗಡ. ಅವು ದೆವ್ವ ಆಗಿ ಆಗಾಗ್ಗ ಮನೆಯವ್ಕೆ ತುಂಬಾ ತೊಂದರೆ ಕೊಡ್ದು ಮಾಡ್ತಿದ್ದೊ ಗಡ. ರಾತ್ರಿ ಹೊತ್ತು ಅಟ್ಟದ ಮೇಲೆಲ್ಲಾ ಓಡಾಡಿ ಯಾರಿಗೂ ನಿದ್ದೆ ಮಾಡಿಕೆ ಬಿಡ್ತಿತ್ಲೆ ಗಡ. ಮತ್ತೆ ಯಾರೋ ಹೇಳ್ದೋತೇಳಿ ಕೇರಳಕ್ಕೆ ಹೋಗಿ ಮಂತ್ರವಾದಿ ಹತ್ರ ಪೂಜೆ ಮಾಡಿಸಿಕಂಡ್ ಬಂದ ಮೇಲೆ ಎಲ್ಲಾ ಸರಿಯಾತ್ ಗಡ. ಅವ್ವ ಹೇಳ್ದ ಈ ಕಥೆ ಯೋಚನೆ ಆಗ್ತಿದ್ದಂಗೆ ಚಿನ್ನುಗೆ ಇನ್ನಷ್ಟು ಹೆದ್ರಿಕೆ ಆಕೆ ಶುರುವಾತ್. ಹೋದ ವರ್ಷ ಮಳೆಗಾಲಿ ಗದ್ದೆಲಿ ನೀರುಕಟ್ಟಿಕೆ ಹೋಗಿ ಚರಂಡಿಲಿ ಮುಳುಗಿ ಸತ್ತ ಚಿಕ್ಕಪ್ಪನ ಗ್ಯಾನ ಆತ್. ಅವೇ ಎಲ್ಲಾರು ಬಂದ್ ಹಿಂಗೆ ಉಪದ್ರವ ಕೊಡ್ತೊಳನತಾ ಕೈಕಾಲೆಲ್ಲಾ ನಡಿಗಿಕೆ ಶುರುವಾತ್. ಲೈಟ್ ಹಾಕಿಕಂಡ್ ಮಲಗಿನೆತೇಳಿರೆ ಮಳೆ ಬಂದ್ ಕರೆಂಟ್ ಬೇರೆ ನಾಪತ್ತೆ. ಅಪ್ಪ, ಅಮ್ಮಂಗೆ ಫೋನ್ ಮಾಡ್ನೊತೇಳಿರೇ, ಲ್ಯಾಂಡ್ ಲೈನ್ ಡೆಡ್. ಮೊಬೈಲ್ ಬ್ಯಾಟರಿ ಚಾರ್ಜ್ ಖಾಲಿ.
ಸ್ವಲ್ಪ ಹೊತ್ತು ನಿಶ್ಯಬ್ದ... ಎಲ್ಲಾ ಕಡೆ ಮೌನ... ಹಣೆ ಮೇಲೆ ಬರ್ತಿದ್ದ ಬೆವ್ರು ಒರೆಸಿಕಂಡ್ ಚಿನ್ನು, ಹಾಸಿಗೆ ಮೇಲೆ ಕುದ್ದುಕಂಡಿತ್ತ್. ಮತ್ತೆ ಅಟ್ಟಲಿ ಶಬ್ದ ! ಒಂದರ ಮೇಲೆ ಒಂದು ಜೋಡಿಸಿಟ್ಟಿದ್ದ ಪಾತ್ರೆಗಳೆಲ್ಲಾ ಉರುಳಿ ಬಿದ್ದಂಗೆ... `ಡಣ.. ಡಣ... ಡಣ... ತಾ. ಚಿನ್ನುಗೆ ಸ್ವಲ್ಪ ಸ್ವಲ್ಪ ಉಳ್ಕೊಂಡಿದ್ದ ಧೈರ್ಯನೂ ಈಗ ಮಾಯ ಆಗಿತ್ತ್. `ಡಣ.. ಡಣ... ಡಣ...' ಶಬ್ದ ಕಡಿಮೆ ಆಗ್ತಿದ್ದಂಗೆ, ಯಾರೋ ಗೋಡೆನ ಮಾಂದಿದಂಗೆ `ಪರ... ಪರ... ಪರ..' ತಾ ಶಬ್ದ. ಪುನಃ ಯಾರೋ ಓಡಾಡಿದಂಗೆ `ಡಬ...ಡಬ...ಡಬ...' ಇದ್ನೆಲ್ಲಾ ಕೇಳ್ತಾ ಕೇಳ್ತಾ ಚಿನ್ನುಗೆ ಎಷ್ಟೊತ್ತಿಗೆ ನಿದ್ದೆ ಹತ್ತಿತೋ ಗೊತ್ತಾತ್ಲೆ...
ಮುಹೂರ್ತ ಮಡಿಕೇರಿಲಿ. ಹಂಗಾಗಿ ಚಿನ್ನುನ ಅಪ್ಪ, ಅಮ್ಮ ಬೆಳಿಗ್ಗೆನೆ ಮನೆಗೆ ಬಂದೊ...ಮಗ್ಳು ಇನ್ನೂ ಎದ್ದಿತ್ಲೆ... ಮಲಗಿದ್ದಲ್ಲೇ ಏನೋ ಗೊಣಗೊಣತಾ ಹೇಳ್ತಿತ್ತ್. ಮುಟ್ಟಿ ನೋಡಿರೆ, ಸುಡು ಸುಡು ಜ್ವರ ! ಇವ್ಕೆ ಹೆದರಿಕೆ ಶುರುವಾತ್. ತುಂಬಾ ದಿನ ಕಳ್ದ್ ಮಗ್ಳು ಮನೆಗೆ ಬಂದುಟ್ಟು...ಹಿಂಗೆ ಬಂದ್ ಜ್ವರಲಿ ಮಲಗುವಂಗೆ ಆತಲ್ಲತಾ ಬೇಸರನೂ ಆತ್. ಚಿನ್ನುನಾ ಎದ್ದೇಳಿಸಿಕೆ ನೋಡಿರೆ, ಅವ್ಳ ಬಾಯಿಲಿ ಬರ್ವ ಮಾತು `ದೆವ್ವ...ದೆವ್ವ..' ಕೊನೆಗೆ ಅಮ್ಮ, ಚಿನ್ನುನ ತೊಡೆ ಮೇಲೆ ಮಲಗಿಸಿಕಂಡ್ ಸಮಧಾನ ಹೇಳಿಕಾಕನ ರಾತ್ರಿ ನಡ್ದದ್ದನ್ನೆಲ್ಲಾ ಒಂದೂ ಬಿಡದಂಗೆ ಹೇಳಿಕಂಡ್ ಜೋರಾಗಿ ಮರಡಿಕೆ ಶುರುಮಾಡ್ತ. 
ಅಮ್ಮಂಗೆ ಎಲ್ಲಿತ್ತೋ ಸಿಟ್ಟು, ಅಪ್ಪನ ಮುಖ ನೋಡಿಕಂಡ್, `ನಾ ನಿಮಿಗೆ ಅಂದೇ ಹೇಳ್ದೆ... ಭತ್ತ ತಂದ್ ಅಟ್ಟಲಿ ಹಾಕ್ಬೇಡಿತಾ, ನೀವೆಲ್ಲಿ ಕೇಳಿಯರಿ ನನ್ನ ಮಾತು. ಯಾಗ ನೀವು ಭತ್ತ ತಂದು ಅಟ್ಟಕೆ ಹಾಕಿದ್ರೋ ಅಂದ್ಂದ ಈ ರೋಗ ಶುರುವಾತ್. ಒಂದು ದಿನನೂ ನಿದ್ದೆ ಇಲ್ಲೆ... ಮದ್ದ್ ತಂದ್ ಇಡಿ, ತಿಂದಾದ್ರೂ ಸಾಯ್ಲಿತೇಳಿರೆ ನಿಮ್ಮ ಕೈಲಿ ಆದೂ ಆತ್ಲೆ... ಪಾಪ ಕೂಸು, ನೋಡಿ ಎಷ್ಟು ಹೆದ್ರಿಕಂಡುಟ್ಟು. ಇಂದೇ ತೀಮರ್ಾನ ಆಗ್ಲಿ... ಒಂದೋ ಈ ಮನೇಲಿ ನಾ ಇರೋಕು, ಇಲ್ಲದಿದ್ದ್ರೆ, ಆ ಹಂದಿ ಮರಿಗಳಂಗೆ ಒಳೋ ಅಲಾ ಆ ಅಟ್ಟದ ಮೇಲಿನ ಹೆಗ್ಗಣಗ... ಅವು ಇರೋಕು... ಗೊತ್ತಾತಾ ? ಬಾ ಮಗ್ಳು ನೀ... ಬಿಸಿ ಬಿಸಿ ಕಾಫಿ ಕೊಟ್ಟನೆ ' ಅಲ್ಲಿಗೆ ದೆವ್ವದ ರಹಸ್ಯ ಏನುತಾ ಗೊತ್ತಾಗಿ ಚಿನ್ನು ಮುಖಲಿ ಸಣ್ಣದೊಂದು ನಗು ಕಾಣಿಸಿಕಂಡತ್ !

`ಸುಮಾ'
arebhase@gmail.com

Tuesday 15 May 2012

ಸಂಜೆ ಐದರ ಮಳೆ


ವಾವ್...
ಮೂರು ಗಂಟೆಗೇ ಸಂಜೆಕತ್ತಲು !
ಆಕಾಶಕ್ಕೇ ಕೊಡೆ ಹಿಡ್ದಂಗೆ
ಕಪ್ಪು ಮೋಡ ರಾಶಿ !
ಕಿವಿ ಒಡೆಯುವಂಗೆ 
ಗುಡುಗು ಸಿಡಿಲು !
ಬಾತ್ ನೋಡಿ.. 
ಸಂಜೆ ಐದರ ಮಳೆ
ಕೈಲಿ ಬಿಸಿ ಬಿಸಿ ಕಾಫಿ ಕಪ್
ಹಂಗೆ ಒಮ್ಮೆ ನೆನಪಾತ್
ಕವಿಮಾತು.. 
ಮನಸ್ಸು ಗಾಂಧಿ ಬಜಾರು !
ಹೊರಗೆ ಆಲಿಕಲ್ಲು..
ಕಿಟಕಿ ಕಂಬಿಗೆ ಬಿದ್ 
ಠಣಠಣ ಶಬ್ದ...
ನನ್ನ ಗೂಡೆನ ಕಾಲುಗೆಜ್ಜೆನಂಗೆ !
ನಮ್ಮೂರಿನಂಗೆ ಅಲ್ಲ...
ಈ ಬೆಂಗಳೂರು ಮಳೆ
ಒಮ್ಮೆ ಸುರಿದರೆ ರಸ್ತೆ ಮೇಲೆ
ಕೊಳಚೆ ಹೊಳೆ !
ಬಸಿಲು ಕಾದು ಬೆವರು ಹರೀತ್ತಿದ್ದರೆ
ಬಾ ಮಳೆಯೇ ಬಾ... ಹಾಡು
ಆಕಾಶ ತೂತಾದಂಗೆ ಸುರಿದರೆ
ವರುಣಂಗೂ ಶಾಪ !
ಈಗ ತಣ್ಣಂಗೆ ಆದಂಗುಟ್ಟು
ಅವನ ಕೋಪ...
ಸದ್ಯ ಮಳೆ ನಿಂತತ್ !

- `ಸುಮಾ'

Monday 14 May 2012

ಅಳುವಿನ ಅಸ್ತ್ರ !


ಏಕೆ ಪುಟ್ಟಾ ?
ನಿಂಗೂ ಸಿಟ್ಟು ಬಂದದೆನಾ !
ಅಬ್ಬಬ್ಬಾ....
ಮಾತಾಡಿಕೆ ಬಾರದಿದ್ದರೂ
ಅದೆಂಥಾ ಕೋಪ...!
ನಿನ್ನಲ್ಲಿರ್ದು ಒಂದೇ ಆಯುಧ..
ಅದನ್ನೇ ಹಿಡ್ಕಂಡ್ ಎಷ್ಟು 
ಆಟ ಆಡಿಸಿಯಾ ?
ನಿನ್ನ ಅಳುಗೆ ಅಷ್ಟು ಶಕ್ತಿ ಉಟ್ಟಾ !
ಖುಷಿಯಾದ್ರೆ... 
ಬಾಯಿ ತುಂಬಾ ನಗು !
ಸಿಟ್ಟು ಬಂದರೆ ಅದೇ ಜಾಗಲಿ
ರಾಗಮಾಲಿಕೆ...!
ನಿನ್ನ ಮನಸ್ಸೋ... 
ಕ್ಷಣ ಚಿತ್ತ ಕ್ಷಣ ಪಿತ್ತ !
ನನ್ನ ಗೂಡೆನೂ ನಿನ್ನಂಗೇ...
ಒಂದೇ ವ್ಯತ್ಯಾಸ
ನೀನಿನ್ನೂ ಹಾಲುಗಲ್ಲದ ಹಸುಕೂಸು
ಅವಳೋ... 
ಬೇಡ ಬಿಡು
ಹೇಳಿರೆ ಮತ್ತೆ ಅವಳಿಗೆ ಸಿಟ್ಟು !
 
- `ಸುಮಾ'
arebhase@gmail.com

Sunday 13 May 2012

ಮಳೆ ಮತ್ತೆ ಎಸೆಂಡ್...


ಕಳ್ದ ಮಂಗಳವಾರ ನಮ್ಮೂರ್ಲಿ ಜೋರು ಮಳೆ. ಮಳೆಗಾಲಲಿ ಹಾರಂಗಿ ನೀರು ಬಿಟ್ರೆ ಮಾತ್ರ ತುಂಬ್ವ ಕೆರೆ, ಮೊನ್ನೆನ ಆ ಮಳೆಗೆನೇ ಭತರ್ಿ ಆಗಿಬಿಟ್ಟಿತ್ ! ರೋಡ್ ಮೇಲೆ ಹಾಕಿದ್ದ ಮಣ್ಣೆಲ್ಲಾ ಕೊಚ್ಚಿ ಹೋಗಿ ಬರೀ ಕಲ್ಲುಗ ಮಾತ್ರ ಉಳ್ಕೊಂಡಿದ್ದೊ. ಅದ್ ಈ ವರ್ಷದ ಮೊದ್ಲ ದೊಡ್ಡ ಮಳೆ. ಕೊಲ್ಲಿಲಿ ಎಸೆಂಡ್ ಹತ್ತಿಕೆ ಇದಕ್ಕಿಂತ ಒಳ್ಳೆ ಕಾಲ ಯಾವ್ದು ಇದ್ದದೆ ಹೇಳಿ...
ನನ್ನ ಅದೃಷ್ಟಕ್ಕೆ ನಂಗೆ ಎರಡು ದಿನ ಒಟ್ಟೊಟ್ಟಿಗೆ ರಜೆ ಸಿಕ್ಕಿಬಿಡ್ತ್. ಸೀದಾ ಊರಿ ಹಾರಿದೆ. ಬಸ್ಲಿ ಕಿಟಕಿ ಸೈಡ್ ಕುದ್ದುಕಂಡ್ ಕಣ್ಣುಮುಚ್ಚಿರೇ ಕನಸ್ಲಿ ಕೂಡ ಬರ್ತಿದ್ದದ್, ಎಸೆಂಡ್ನ ಸುಟ್ಟ ದೊಡ್ಡಕೊಂಬು ! ಊರು ತಲುಪಿಕಾಕನ ಸರಿಯಾಗಿ ಮೂಡುಬಿದಿರೆಯಿಂದ ನನ್ನ ಅತ್ತೆ ಬಂದಿದ್ದೊ. ಮುಕ್ಕೋಡ್ಲುಂದ ಮಾವನ ಮಂಙ ಮಂಜು ಬಂದಿತ್. ಎಲ್ಲವೂ ಎಸೆಂಡ್ ಗುರುಗಳೇ. ವಿಶೇಷತೇಳಿರೆ ನಮ್ಮ ಮೂರೂ ಜನಕ್ಕೂ ಎಸೆಂಡ್ ಹಿಡಿಯಕ್ಕೆ ಬಾಲೆ. ಯಾರಾರೂ ಹಿಡ್ದ್ ಸುಟ್ಟುಕೊಟ್ಟರೆ, ಬಾಯಿ ಚಪ್ಪರಿಸಿಕಂಡ್ ತಿಂದವೆ. ಆದ್ರೂ ಒಬ್ಬೊಬ್ಬರೂ ಒಂದೊಂದು ಕತ್ತಿ ಹಿಡ್ಕಂಡ್ ಕೊಲ್ಲಿ ಕಡೆ ನಡ್ಡೊ...
ಅದೊಂದು ಸಣ್ಣ ಕೊಲ್ಲಿ. ನಮ್ಮ ಜಾಗಲಿ ಸುಮಾರು ಅರ್ಧ ಕಿಲೋಮೀಟರ್ ಹೋಗಿ, ಅಲ್ಲಿರ್ವ ದೊಡ್ಡ ಕೆರೆ ಸೇರಿದೆ. ಒಂದು ಮಳೆ ಬಂದರೆ ಸಾಕ್, ಸಾಲು ಸಾಲು ಎಸೆಂಡ್ಗ ಕೊಂಬುಗಳ್ನ ಒಳ್ಳೇ ಕಟ್ಟಿಂಗ್ಪ್ಲೇಯರ್ನಂಗೆ ಮಾಡಿಕಂಡ್ ಆ ಕೊಲ್ಲಿಲಿ ಹತ್ತಿಕಂಡ್ ಬಂದವೆ. ಎಲ್ಲಾ ದೊಡ್ಡ ದೊಡ್ಡ ಎಸೆಂಡ್ಗ. ಅದೇ ಆಸೇಲಿ ನಾವು ಕತ್ತಿ ಹಿಡ್ಕಂಡ್ ಕೊಲ್ಲಿ ಕಡೆ ಹೋದ್. ನಮ್ಮ ಗ್ರಹಚಾರಕ್ಕೆ ಒಂದೇ ಒಂದು ಎಸೆಂಡ್ ನಮ್ಮ ಕಣ್ಣಿಗೆ ಬಿದ್ದತ್ಲೆ... ಹಂಗೆನೇ ಮುಖ ಚಪ್ಪೆ ಮಾಡಿಕಂಡ್ ಮನೆಗೆ ವಾಪಸ್ ಬಂದೋ.
ಎಲ್ಲೋ ಹೊರಗೆ ಹೋಗಿದ್ದ ನನ್ನ ಅಪ್ಪ ಆಗಷ್ಟೇ ಮನೆಗೆ ಬಂದಿದ್ದೋ...ನಮ್ಮ ಕಥೆ ಕೇಳಿ ಅವ್ಕೆ ಜೋರು ನಗು. ಎಸೆಂಡ್ ಹಿಡಿಯಕ್ಕೆ ಅವು ಎಕ್ಸ್ಪಪರ್ಟ್. `ಕೊಲ್ಲೀಲಿ ಅಷ್ಟು ನೀರು ಹೋಗ್ತುಟ್ಟು...ಅಲ್ಲಿ ಎಸೆಂಡ್ ಇದ್ದರೆ, ಅದೆಂಗೆ ಕಣ್ಣಿಗೆ ಬಿದ್ದದೆ... ಕೊಲ್ಲಿ ಒಳಗೆ ಇಳಿಯೊಕು. ಆಗ ಎಸೆಂಡ್ ಸಿಕ್ಕಿದೆ' ತಾ ಹೇಳಿ ಮತ್ತೆ ನಮ್ಮನ್ನ ಕರ್ಕಂಡ್ ಕೊಲ್ಲಿ ಕಡೆ ಹೊರಟೊ..
ಅವು ಹೇಳಿದ್ದ್ ನಿಜ ಆಗಿತ್. ನಾವು ಕೊಲ್ಲಿ ಕರೇಲಿ ಓಡಾಡಿ ವಾಪಸ್ ಬಂದಿದ್ದೊ. ಅದ್ಕೆ ಎಲ್ಲೂ ನಮ್ಮ ಕಣ್ಣಿಗೆ ಎಸೆಂಡ್ ಬಿದ್ದಿತ್ಲೆ. ಆದ್ರೆ ಈಗ ನನ್ನ ಅಪ್ಪ ಸೀದಾ ಕೊಲ್ಲಿಗೆ ಇಳ್ದೊ. ನೀರೊಳಗೆ ಅವು ಕಾಲು ಆಡಿಸ್ತಿದ್ದಂಗೆ, ಎಸೆಂಡ್ಗಳ ಕೊಂಬು ಕಾಂಬಕೆ ಶುರುವಾತ್... ಹಂಗೆ ಕೊಲ್ಲಿಯುದ್ದಕ್ಕೂ ಎಸೆಂಡ್ ಬೇಟೆ ಶುರುವಾತ್. ಬರೀ ಅರ್ಧ ಗಂಟೆಲೇ ಸುಮಾರು ಎಸೆಂಡ್ಗ ಸಿಕ್ಕಿದೊ. ಒಂದಕ್ಕಿಂತ ಒಂದ್ ದೊಡ್ಡದ್. ಇದ್ದದ್ರಲ್ಲಿಯೇ ದೊಡ್ಡ ಕೊಂಬು ತಕ್ಕಂಡ್ ನಾ ಮನೆಗೆ ಓಡಿದೆ. ಗುಡ್ಡದ ಒಲೇಲಿ ಒಳ್ಳೆ ಕೆಂಡ ಇತ್. ಲಾಯ್ಕ ಸುಟ್ಟ್, ಅದ್ಕೆ ಸ್ವಲ್ಪ ಉಪ್ಪು, ಮೆಣಸು ನಿಂಬೆ ಹುಳಿ ಹಾಕಿ ತುಂಬಾ ಟೈಂ ನಂತರ ಎಸೆಂಡ್ ಕೊಂಬುದು ಟೇಸ್ಟ್ ನೋಡ್ದೆ. ಮತ್ತೆ ರಾತ್ರಿಗೂ ಅದೇ ಎಸೆಂಡ್ ಸಾರ್.. ನಮ್ಮ ಮೂಡುಬಿದರೆ ಅತ್ತೆ ತುಂಬಾ ರುಚಿ ರುಚಿಯಾಗಿ ಗೈಪು ಮಾಡಿದ್ದೊ....
ಯಾರೋ ನನ್ನ ಕೇಳ್ತಿದ್ದೊ, ಮಳೆ ಅಂದ್ರೆ ನಿಂಗೆ ಯಾಕೆ ಅಷ್ಟೊಂದು ಇಷ್ಟತಾ... ಮಳೆ ಬಂದ್ರೆ ತಾನೇ ಎಸೆಂಡ್ ಸಿಕ್ಕುದು ! ಅಣಬೆ ಏಳುದು ! ಕಣಿಲೆ ಕಾಣ್ಸಿಕಂಬದು !  ಜಡಿ ಮಳೇಲಿ ಇಂಥ ತಿನಿಸುಗಳ್ನ ತಿಂಬೋದನ್ನ ತಪ್ಪಿಸಿಕಣಿಕೆ ಯಾರಿಗೆ ಮನಸ್ಸಾದೆ ? ಅದ್ಕೆ ನಂಗೆ ಮಳೆ ಇಷ್ಟ. ಈಗಿನ್ನೂ ಮೇ ತಿಂಗ... ಇನ್ನೊಂದು ತಿಂಗಳ್ಲಿ ಮಳೆ ಶುರುವಾದೆ... ನನ್ನ ರಜೆಗಳ್ನೆಲ್ಲಾ ಹಂಗೇ ಉಳ್ಸಿಕಂಡೊಳೆ, ನನ್ನೂರಿನ ಮಳೆಗಾಲನ ಅನುಭವಿಸಿಕೆ... 
- `ಸುಮಾ'

Friday 11 May 2012

ಅರೆಭಾಷೆಗೊಂದು ರೇಡಿಯೋ !!


ಅರೆಭಾಷೆಗೊಂದು ರೇಡಿಯೋ !!


ಹೌದು...


ನಮ್ಮ ಭಾಷೇಲೇ 
ಒಂದು ಆನ್ ಲೈನ್ ರೇಡಿಯೋ ಬರ್ತುಟ್ಟು !!


ಅರೆಭಾಷೆ ರೇಡಿಯೋಕ್ಕೆ 
ಒಂದೊಳ್ಳೇ ಹೆಸ್ರು ಹೇಳಿ...


ಪ್ರೋಗ್ರಾಂ ಹೆಂಗಿರೋಕು ತಿಳ್ಸಿ ... 
arebhase@gmail.com

Monday 7 May 2012

`ಸತ್ಯಮೇವ ಜಯತೇ...


ತುಂಬಾ ಸಮಯದ ನಂತರ ಕೊನೆಗೂ ಟಿವಿಲಿ ಒಂದು ಒಳ್ಳೆ ಕಾರ್ಯಕ್ರಮ ಶುರುವಾಗ್ಯುಟ್ಟು. ಅದೇ `ಸತ್ಯಮೇವ ಜಯತೇ...' ಪ್ರತೀ ಭಾನುವಾರ ಬೆಳಗ್ಗೆ 11 ಗಂಟೆಗೆ ಕನ್ನಡ ಬಿಟ್ಟ್ ದೇಶದ 8 ಭಾಷೆಗಳಲ್ಲಿ ಈ ಕಾರ್ಯಕ್ರಮ ನೋಡಕ್. ದೂರದರ್ಶನ ಮತ್ತೆ ಸ್ಟಾರ್ ಪ್ಲಸ್ಲಿ ಹಿಂದಿ ಭಾಷೆಲಿ ಬಂದದೆ. ಎಲ್ಲಾ ಸರಿಯಾಗಿ ಇದ್ದಿದ್ದರೆ ಕನ್ನಡದಲ್ಲಿ ಸುವರ್ಣ ಟಿವಿಲಿ ಈ ಕಾರ್ಯಕ್ರಮ ಬರಕಾಗಿತ್ತ್. (ಕನ್ನಡದಲಿ ಪ್ರೋಗ್ರಾಂ ಕೂಡ ರೆಡಿಯಾಗಿತ್. ಅದ್ರ ಲಿಂಕ್ ಈ ಲೇಖನದ ಕೊನೆಲಿ ಕೊಟ್ಟನೆ...ಒಮ್ಮೆ ನೋಡಿ. ನಿಜಕ್ಕೂ ನಿಮಿಗೆ ಇಷ್ಟ ಆದೆ.) ಆದ್ರೆ ನಮ್ಮಲ್ಲಿ ಡಬ್ಬಿಂಗ್ ವಿರೋಧಿಗ ಅದ್ ಪ್ರಸಾರ ಆಗದಂಗೆ ತಡ್ದೊಳೊ.
`ಸತ್ಯಮೇವ ಜಯತೇ...' ಅಮೀರ್ ಖಾನ್ ನಡೆಸಿಕೊಡ್ವ ಕಾರ್ಯಕ್ರಮ. ಅವನ ಸಿನಿಮಾಗಳಂಗೆ ಇದೂ ಕೂಡ ತುಂಬಾ ವಿಭಿನ್ನವಾಗಿ ಉಟ್ಟು. ಮೊನ್ನೆ ಭಾನುವಾರ ಪ್ರಸಾರ ಆದ ಮೊದಲ ಕಾರ್ಯಕ್ರಮನೇ ಇದಕ್ಕೆ ಸಾಕ್ಷಿ. ಅಂದಿನ ವಿಷಯ ಹೆಣ್ಣು ಬ್ರೂಣ ಹತ್ಯೆ.... ಅದರ ಪರಿಣಾಮ, ಹೆಣ್ಣುಮಕ್ಕ ಅನುಭವಿಸ್ವ ನೋವು-ಕಷ್ಟ. ಇದನ್ನೆಲ್ಲಾ ಅಮೀರ್ ಖಾನ್ ತುಂಬಾ ಲಾಯ್ಕ ಜನರ ಮುಂದೆ ಇಟ್ಟತ್. ನೋವು ಅನುಭವಿಸಿದ ಹೆಣ್ಣುಮಕ್ಕ ಅವ್ರ ಕಥೆ ಹೇಳಿಕಣಿಕಾಕನ ಅಮೀರ್ ಖಾನ್ ಕಣ್ಣಲ್ಲೂ ನೀರ್ ಬಾತ್. ಅಂವ ದೊಡ್ಡ ಆ್ಯಕ್ಟರ್ ಆಗಿರ್ದು, ಆದ್ರೆ ಅವ್ನ ಕಣ್ಣೀರು ನಟನೆತಾ ಅನ್ನಿಸ್ತಿತ್ಲೆ. ಅದ್ ನೋವು ಹೃದಯಕ್ಕೆ ಮುಟ್ಟಿದಾಗ ಬರ್ವ ಕಣ್ಣೀರು. ಇದ್ನೆಲ್ಲಾ ನೋಡ್ತಿರ್ಕಾಕನ ನೋಡುವವರ ಕಣ್ಣು ತೇವ ಆದ್ರೂ ಆಶ್ಚರ್ಯ ಇಲ್ಲೆ.
ತುಂಬಾ ಹಿಂದೆ ರಾಮಾಯಣ ಮತ್ತೆ ಮಹಾಭಾರತ ಧಾರಾವಾಹಿ ಪ್ರಸಾರ ಆಗ್ತಿದ್ದ ಸ್ಲಾಟ್ಲೇ ಈಗ `ಸತ್ಯಮೇವ ಜಯತೇ' ಬರ್ತುಟ್ಟು. ಮೊದಲ ಕಾರ್ಯಕ್ರಮನ ಲಕ್ಷಾಂತರ ಜನ ನೋಡ್ಯೊಳೊ. ವಾರಂದ ವಾರಕ್ಕೆ ಇದ್ರ ಜನಪ್ರಿಯತೆ ಹೆಚ್ಚಾಗುವ ಸುಳಿವು ಸಿಕ್ಕುಟ್ಟು. ಸೆಲೆಬ್ರಿಟಿಗ ಅಂತೂ ಅಮೀರ್ಖಾನ್ನ ಹಾಡಿ ಹೊಗಳ್ಯೊಳೊ... ಈ ಭಾನುವಾರ ನೀವೂ ನೋಡಿ, ಬೆಳಿಗ್ಗೆ 11 ಗಂಟೆಗೆ. ಒಂದೊಳ್ಳೆ ಕಾರ್ಯಕ್ರಮನ ಮಿಸ್ ಮಾಡ್ಕಣ್ಬೇಡಿ...


- `ಸುಮಾ'

ಸತ್ಯಮೇವ ಜಯತೇ... ಕನ್ನಡದಲ್ಲಿ... ಇಲ್ಲಿ ಕ್ಲಿಕ್ ಮಾಡಿ. 
arebhase@gmail.com

Sunday 6 May 2012

ಗಂಡ - ಹೆಣ್ಣ್ ಜಗಳ....



`ಏ ಪುಟ್ಟಾ, ಮರ್ಯಾದೇಲಿ ಕುದ್ದ್ಕಂಡ್ ಓದು... ಇಲ್ಲರೆ ನಿನ್ನ ಅಪ್ಪನಂಗೆ ಆಗಿಬಿಟ್ಟಿಯಾ...'

`ಎಂಥದ್ನೆ ನೀ ಮಾತಾಡ್ದು...ಮಂಙನ ಮುಂದೆ ನನ್ನ ಮಾನ ತೆಗಿತ್ತೊಳಲಾ...ನಾ ಈಗ ಎಂಥ ಮಾಡ್ಯೊಳೆತಾ...?' 

`ಅದೇ...ನಾ ಮಾತಾಡಿದ್ರೆ ನಿಮ್ಮ ಮಾನ ಹೋದೆ.... ನಾ ತಲೆ ಎತ್ತಿಕಂಡ್ ತಿರುಗಾಡ್ವಂಗೆ ನೀವು ನಂಗೆ ಎಂಥಾರ್ ಮಾಡಿ ಕೊಟ್ಟೊಳರಿಯಾ...?'

`ಪುಟ್ಟಾ... ಆ ಪುಸ್ತಕ ಬಿಸಾಕಿ ಇಲ್ಲಿ ಬಾ. ನಿನ್ನ ಅಮ್ಮಂಗೆ ಹೇಳ್, ಬಾಯಿ ಮುಚ್ಚಿಕಂಡ್ ಬಿದ್ದಿರಿಕೆ...ಇಲ್ಲಂದ್ರೆ ಚೀಪೆಲೇ ಹೊಡ್ದು ಸಾಯಿಸಿ ಬಿಟ್ಟನೆ....'

`ಹುಂ ಸಾಯಿಸಿಯರಿ....ಅದೊಂದು ಬಾಕಿ ಇತ್ ನಿಮಿಗೆ...ನೆಂಟರ್ ಬಂದ್ರೆ ಕೋಳಿ ಕೊಲ್ಲಿಕೆ ನಿಮ್ಮ ಅಣ್ಣನ ಮಂಙ ಗಣಿ ಬರೋಕು...ಇನ್ನ್ ನನ್ನ ಸಾಯಿಸಿವೆ ಗಡ...'

`ನೋಡ್... ನೀ ಜಾಸ್ತಿ ಮಾತಾಡ್ಬಡ...ನಂಗೆ ಪಿತ್ತ ನೆತ್ತಿಗೇರ್ದೆ...'

`ಪಿತ್ತ ನೆತ್ತಿಗೇರಿರೆ ಕಹಿಹುಳಿ ಜ್ಯೂಸ್ ಮಾಡಿ ಕುಡಿಯನಿ...ಕಾಳಪ್ಪನ ಮನೆ ಹಿಂದೆ ಹೋಗಿ ಆ ಎನ್ಎಸ್ ಸುರ್ಕಂಬೊದಲ್ಲಾ...'

`ಹೌದು....ನಾ ಎನ್ಎಸ್ ಆದ್ರೂ ಕುಡ್ದನೆ, ಭತ್ತ ಸಾರಾಯಿ ಆದ್ರೂ ಕುಡ್ದನೆ.. ನಿನ್ನ ಅಪ್ಪ ದುಡ್ಡು ಕೊಟ್ಟದೆನಾ ?'

`ನನ್ನ ಅಪ್ಪನ ವಿಷಯ ಮಾತಾಡ್ಬೇಡಿ....ಮದುವೆ ಆಕಾಕನ ಪೆಟ್ಟಿಗೆಗೆ ಸಾವಿರದ ಒಂದು ರೂಪಾಯಿ ಹಾಕಿತ್ಲೆನಾ? ಅದ್ನ ಏನು ಮಾಡ್ದರಿ? ನೀವು ನುಂಗಿ ನೀರು ಕುಡ್ತಲೆನಾ?' 

`ಓಹೋ... ಅದು ದೊಡ್ಡ ವಿಷಯನಾ ? ಸಾವಿರದ ಒಂದು ರೂಪಾಯಿ ಮತ್ತೆ ನಾಲ್ಕು ಸೀರೆ ಪೆಟ್ಟಿ ಒಳಗೆ ಹಾಕಿಬಿಟ್ಟರೆ ಸಾಕಾ ?'

`ನನ್ನ ಅಪ್ಪ ಅಷ್ಟಾದ್ರೂ ಹಾಕ್ಯೊಳೊ... ಮದುವೆ ಆದ್ಮೇಲೆ ನೀವು ನಂಗೆ ಒಂದಾದ್ರೂ ಸೀರೆ ತೆಗ್ದುಕೊಟ್ಟೊಳರಿಯಾ?' 

`ಮತ್ತೆ ಕೊಟ್ಟತ್ಲೆನಾ ? ಕಳ್ದ ವರ್ಷ ಚೇರಂಗಾಲ ಹಬ್ಬಕ್ಕೆ ಮಡಿಕೇರಿ ಸಂತೆಲಿ ನಿನ್ನ ಅಪ್ಪ ತೆಗ್ದು ಕೊಟ್ಟದಾ ?'

`ಹೌದೌದು... ಎಷ್ಟು ಒಳ್ಳೆ ಸೀರೆ ಅದ್....ಮಸಿ ಬಟ್ಟೆ ಮಾಡಿಕೆನೂ ಆಗ್ತಿಲ್ಲೆ....'

`ನೋಡ್ ನಂಗೆ ಸುಮ್ನೆ ಸಿಟ್ಟ್ ಬರ್ಸ್ ಬೇಡ... ಒಲೇಲಿ ಇಟ್ಟ ಅನ್ನ ಏನಾತ್ ನೋಡು ಕರಿ ಕರಿ ವಾಸನೆ ಬರ್ತುಟ್ಟು... ಏ ಪುಟ್ಟಾ, ಇಲ್ಲಿ ಬಾ...'

`ಪುಟ್ಟ ಯಾಕೆ ಈಗ ? ಅಂವ ಅಲ್ಲಿ ಓದಿಕಣ್ಲಿ... ಇಲ್ಲಿ ನಾ ಇಲ್ಲೆನಾ ? ಎಂಥಕೆ ಅಂವ..'

`ಏನಿಲ್ಲೆ... ಒಂದು ಗ್ಲಾಸ್ ಕಾಫಿ ಬೇಕಿತ್ತ್...'

`ಅಷ್ಟೆ ತಾನೇ... ನಾ ತಂದು ಕೊಟ್ಟನೆ...'

`ಅಬ್ಬಾ....ದೊಡ್ಡ ಮಳೆ ಬಂದ್ ನಿಂತಂಗೆ ಆತ್....' 

- `ಸುಮಾ'


Saturday 5 May 2012

ಹೊಲ ಮೇಯ್ದ ಬೇಲಿ !


ನಂಬೂದರಿಯ ಹಣೇಲಿದ್ದ ಅಷ್ಟೂ ಗೆರೆಗೆ ನೆರಿಗೆಗಳಾಗಿ ಅಲ್ಲಿ ಹಾಕ್ಕಂಡಿದ್ದ ಗಂಧಬೊಟ್ಟು ಉದುರಿ ಬೀಳ್ತಿತ್ತ್ ! ತಲೆ ಮೇಲೆ ಗಿರ ಗಿರ ತಿರುಗ್ವ ಫ್ಯಾನ್ಂದ ತಣ್ಣನೆ ಗಾಳಿ ಬರ್ತಿದ್ದರೂ ಮುಖ ತುಂಬಾ ಬೆವ್ರು ! ಮಣ ಮಣ ಮಂತ್ರ ಹೇಳ್ತಾ ಮರದ ಮಣೆ ಮೇಲೆ ಇದ್ದ ಕವಡೆಗಳ ರಾಶಿನ ನಂಬೂದರಿ ಬಲಗೈಲಿ ತಿರುಗಿಸ್ತನೇ ಇದ್ದೊ...ಅವರ ಎದುರು ಇದ್ದ ಕಾಲುದೀಪಲಿ ಎಣ್ಣೆ ಮುಗ್ದ್ ಕರಿ ಕರಿ ವಾಸನೆ ಬಂದ್ ದೀಪ ಕೆಟ್ಟು ಹೋದರೂ ಅದರ ಬಗ್ಗೆ ಇವ್ಕೆ ಗ್ಯಾನನೇ ಇಲ್ಲೆ. ಅಲ್ಲಿ ಚಾಪೆ ಮೇಲೆ ಕುದ್ದಿದ್ದವು, ಕೈ ಕಟ್ಟಿಕಂಡ್ ನಿಂತಿದ್ದವು, ಕಣ್ಣುಮುಚ್ಚಿ ಮಂತ್ರ ಹೇಳ್ತಿದ್ದ ನಂಬೂದರಿ ಮುಖದಲ್ಲಿ ಆಗುವ ಬದಲಾವಣೆಗಳ್ನ ಬಿಟ್ಟಕಣ್ ಬಿಟ್ಟಂಗೆ ಭಯ ಭಕ್ತಿಲಿ ನೋಡ್ತಿದ್ದೊ....
ಅದು ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ. ಆ ತಣ್ಣೀರುಹಳ್ಳದ ಜನ ಎಲ್ಲಾ ಸೇರಿ ಭಗವತಿ ದೇವಸ್ಥಾನಲಿ ಇದ್ನ ಇಟ್ಟುಕೊಂಡಿದ್ದೊ. ಈ ಊರಿನ ಜನ ಸಂಖ್ಯೆ ತುಂಬಾ ಕಡ್ಮೆ. ಅಬ್ಬಬ್ಬಾತೇಳಿರೆ ಒಂದು 30 ಮನೆಗೆ ಇರುದೇನೋ. ಒಂದೊಂದು ಮನೆಗೆ ನಾಲ್ಕು ನಾಲ್ಕು ಜನತಾ ಲೆಕ್ಕ ಹಾಕಿರೂ ತಲೆಗಳ ಸಂಖ್ಯೆ 150 ದಾಟುಲ್ಲೆ. ಇಲ್ಲಿ ಎಲ್ಲವ್ಕೂ ವರ್ಷ ಪೂತರ್ಿ ಕೆಲ್ಸ ಕೊಡುವಷ್ಟು ಗದ್ದೆ, ಕಾಫಿ ತೋಟಗ ಉಟ್ಟು. ಆದ್ರೆ ಪ್ರಯೋಜನ ಇಲ್ಲೆ. ಇಲ್ಲಿನವ್ರ ಗ್ರಹಚಾರನೋ ಏನೋ...ಗಿಡ ತುಂಬಾ ಕಾಫಿ ಫಸಲು ಬಿಟ್ಟ ವರ್ಷ ಜೋರಾಗಿ ಮಳೆ ಬಂದ್ ಎಲ್ಲನೂ ಉದುರಿ ಹೋಗಿಬಿಡ್ತಿತ್ತ್. ಇನ್ನ್ ಭತ್ತಕ್ಕೆ ವರ್ಷಕ್ಕೊಂದು ರೋಗ ! ಎಲ್ಲಾ ಬಿಟ್ಟು ಶುಂಠಿ ಬೆಳ್ದರೆ, ಆ ವರ್ಷ ಮೂಟೆಗೆ ನೂರು ರೂಪಾಯಿಗೂ ಕೇಳುವವು ಇರ್ದುಲ್ಲೆ. ಪರಿಸ್ಥಿತಿ ಹಿಂಗಿರ್ಕಾಕನ ಭಗವತಿ ದೇವಸ್ಥಾನದ ಭಟ್ಟ ಕೊಟ್ಟ ಐಡಿಯಾನೇ ಅಷ್ಟಮಂಗಲ ಪ್ರಶ್ನೆ.
ಅಷ್ಟಮಂಗಲ ಪ್ರಶ್ನೆ ಇಡುದ್ರಲ್ಲಿ ನೀಲೇಶ್ವರದ ನಂಬೂದರಿಗ ತುಂಬಾ ಫೇಮಸ್. ಕೊಡಗುನ ತುಂಬಾ ಕಡೆಗಳಲ್ಲಿ ಅವು ಈ ಕೆಲ್ಸ ಮಾಡ್ಯೊಳೊ...ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಟ್ಟೊಳೊ. ಹಂಗಾಗಿ ತಣ್ಣೀರು ಹಳ್ಳದ ಜನ ನಂಬೂದರಿಗಳ್ನ ನಂಬಿ ತಮ್ಮ ಊರಿಗೆ ಕರ್ಕಂಡ್ ಬಂದಿದ್ದೊ. ನಂಬೂದರಿ ತಣ್ಣೀರುಹಳ್ಳಕ್ಕೆ ಬಂದದ್ ಒಂದು ಗುರುವಾರ. ಊರೊಳಗೆ ಕಾಲಿಡ್ಕಾಕನ ರಾತ್ರಿ ಹತ್ತೂವರೆ ಗಂಟೆ. ಮಡಿಕೇರಿಗೆ ಬಸ್ಲಿ ಬಂದಿದ್ದ ನಂಬೂದರಿ ಮತ್ತೆ ಟೀಂನ ಪಳಂಗಪ್ಪ ಹೋಗಿ ಅವ್ನ ಜೀಪ್ಲಿ ಕರ್ಕಂಡ್ ಬಂದಿತ್ತ್. ನಂಬೂದರಿ ಜೊತೆ ಅವ್ರ ಇಬ್ಬರು ಶಿಷ್ಯರೂ ಇದ್ದೊ. ನಂಬೂದರಿ ಮತ್ತೆ ಟೀಂ ಇದ್ದ ಪಳಂಗಪ್ಪನ ಜೀಪು ತಣ್ಣೀರುಹಳ್ಳ ಊರೊಳಗೆ ಬರ್ತಿದ್ದಂಗೆ ಜೀಪ್ನ ಮುಂದುಗಡೆ ಬಲ ಭಾಗದ ಟೈರ್ ಪಂಕ್ಚರ್ ಆತ್ !
ನಂಬೂದರಿ ಮತ್ತೆ ಟೀಂಗೆ ಭಗವತಿ ದೇವಸ್ಥಾನದ ಭಟ್ಟನ ಮನೆಲಿ ಊಟ ಮತ್ತೆ ನಿದ್ದೆಗೆ ವ್ಯವಸ್ಥೆ ಆಗಿತ್ತ್. ಊರುನ ಎಲ್ಲಾ ಕಥೆನ ಭಟ್ಟ ನಂಬೂದರಿಗೆ ತಿಳಿಸಿತ್. ಎಲ್ಲಕ್ಕೂ ನೀವೇ ಪರಿಹಾರ ಹುಡುಕಿ ಕೊಡೋಕುತನೂ ಕೇಳಿಕಂಡಿತ್ತ್ !
ಹಂಗೆ ಆ ಶುಕ್ರವಾರ ಬೆಳಗ್ಗೆ ಭಗವತಿ ದೇವಸ್ಥಾನದ ಬಾಡೆಲಿ ಅಷ್ಟಮಂಗಲ ಪ್ರಶ್ನೆ ಶುರುವಾತ್. ಮರದ ಮಣೆ ಮೇಲೆ ನಂಬೂದರಿ ಕವಡೆ ಉರುಳಿಸಿದಂಗೆಲ್ಲಾ, ಬರೀ ಅವಲಕ್ಷಣಗಳೇ ಕಂಡ್ಬರ್ತಿತ್. ಅದ್ಕೆನೇ ನಂಬೂದರಿ ಮುಖದ ಮೇಲೆ ಬೆವ್ರು ಕಾಣಿಸಿಕಂಡದ್. ಕುದ್ದ ಜಾಗನೇ ಯಾಕೋ ಸರಿಯಿಲ್ಲೆತಾ ಅವ್ಕೆ ಅನ್ನಿಸಿಕೆ ಶುರುವಾತ್. ಭಟ್ಟನ ಮುಖನೇ ಒಮ್ಮೆ ನೋಡ್ದೊ. ಅವನ ಮುಖಲೂ ಎಂಥದ್ದೊ ಹೆದ್ರಿಕೆ ! ಕುದ್ದಲ್ಲಿಂದ ಎದ್ದ ನಂಬೂದರಿ ಸೀದಾ ದೇವರ ಗರ್ಭಗುಡಿ ಒಳಗೆ ನುಗ್ಗಿದೊ... ಅಲ್ಲಿ ನೋಡಿರೆ, ಪಂಚಲೋಹದ ಭಗವತಿ ವಿಗ್ರಹ ಇರಕ್ಕಾದಲ್ಲಿ ಅದೇ ಥರದ ಮರದ ವಿಗ್ರಹ !
ಭಟ್ಟ ಊರವ್ರ ಮುಂದೆ ಬೆತ್ತಲಾಗಿತ್ತ್ ! ಅವ್ನ ಇಸ್ಪೀಟ್ ಆಟದ ಆಸೆಗೆ ಪಂಚಲೋಹದ ವಿಗ್ರಹ ಮೈಸೂರು ಸೇಟ್ದ್ ಅಂಗಡಿ ಸೇರಿಕಂಡಿತ್ತ್ !!!
- `ಸುಮಾ'

Friday 4 May 2012

ಟಿಕ್...ಟಿಕ್...ಟಿಕ್...


 ಪುಟ್ಟಂಗೆ ಅವ್ನ ಕೈಲಿರ್ವ ವಾಚ್ತೇಳಿರೆ ಪಂಚಪ್ರಾಣ... ಒಂದ್ ನಾಲ್ಕೈದು ಸಲ ರಿಪೇರಿಗೆ ಕೊಡುಕಾಕನ ಬಿಚ್ಚಿದ್ ಬಿಟ್ಟರೆ, ಆ ವಾಚ್ ಅವನ ಜೀವನ ಸಂಗಾತಿ ! ಬಲಗೈಲಿ ವಾಚ್ ಇದ್ದೇ ಇರೋಕು. ಮಲಗಿಕಾಕನ, ಸ್ನಾನ ಮಾಡಿಕಾಕನ ಇನ್ನೂ ಏನೇ ಮಾಡ್ತಿರ್ಲಿ....ಪುಟ್ಟ ವಾಚ್ ಮಾತ್ರ ಬಿಚ್ಚುವಂವ ಅಲ್ಲ ! ಏಕೆ ಅವಂಗೆ ಈ ವಾಚ್ ಮೇಲೆ ಅಷ್ಟು ಪ್ರೀತಿ ?
  ಅದ್ ಹೆಚ್ಎಂಟಿ ಸುಜಾತಾ ವಾಚ್. ತುಂಬಾ ಹಳೇ ಮಾಡೆಲ್. ಪುಟ್ಟ 2ನೇ ಕ್ಲಾಸ್ಲಿ ಇದ್ದಿರ್ದೇನೋ...ಸ್ಕೂಲ್ಗೆ ಹೋಕಾಕನ ಸೊಸೈಟಿ ಅಪ್ಲಿ ಆ ವಾಚ್ ಇವಂಗೆ ಬಿದ್ಸಿಕ್ಕಿತ್. ಕಿವಿ ಹತ್ರ ಹಿಡ್ದ ನೋಡ್ಕಾಕಕನ `ಟಿಕ್...ಟಿಕ್...ಟಿಕ್...' ತಾ ಹೇಳ್ತಿತ್. ಭಾಗಮಂಡಲದ ಆ ಮಹಾ ಮಳೆಲೂ ಈ ವಾಚ್ ನಡೀತುಟ್ಟುತೇಳಿರೆ... ಪುಟ್ಟಂಗೆ ಸಕ್ಕತ್ ಆಶ್ಚರ್ಯ. ಹಂಗೆನೇ ಚೆಡ್ಡಿ ಜೇಬಿಗೆ ಇಳಿಸಿಕಂಡತ್. ಶಾಲೆಲಿ ಪಾಠ ಕೇಳಿಕೇ ಮನಸ್ಸಿಲ್ಲೆ. ಎಡ ಕೈಲಿ ಆಗಾಗ್ಗ ಜೇಬು ಮುಟ್ಟಿ ನೋಡಿಕಣ್ತಿತ್. ಮತ್ತೊಮ್ಮೆ ಬಲಕೈ ನೋಡಿಕಂಡ್...`ನಾಳೇಂದ ನೀ ಖಾಲಿ ಇರುಲ್ಲೆ...'ತಾ ಮನಸ್ಸಲ್ಲೇ ಹೇಳಿಕಣ್ತಿತ್. ಕೊನೆಗೂ ಸಂಜೆ ಆತ್.
ಮನೆಗೆ ಹೋಗ್ವ ದಾರೀಲಿ ಪುಟ್ಟ ಜೇಬ್ಂದ ಮೆಲ್ಲೆ ವಾಚ್ನ ಹೊರಗೆ ತೆಗ್ತ್. ಬಲಗೈಗೆ ಕಟ್ಟಿಕೆ ನೋಡಿರೆ, ಅದ್ರ ಚೈನ್ ತುಂಬಾ ದೊಡ್ಡದ್. ಇವ್ನ ಕೈ ಥರದ ನಾಲ್ಕು ಕೈ ಆ ವಾಚ್ ಚೈನ್ ಒಳಗೆ ಸೇರಿಸಕ್ಕಾಗಿತ್ ! ಪುಟ್ಟಂಗೆ ನಿರಾಸೆ. ವಾಚ್ ಸಿಕ್ಕಿರೂ ಕೈಗೆ ಕಟ್ಟಿಕಣಿಕೆ ಆಗ್ತಿಲ್ಲೆಯಲ್ಲಾತಾ... ಕೊನೆಗೆ ಪುಟ್ಟನ ಅಪ್ಪನೇ ಅವಂಗೆ ಸಮಧಾನ ಮಾಡ್ತ್. ಸೀತಾರಾಮನ ಅಂಗಡಿಗೆ ಹೋಗಿ ಪುಟ್ಟನ ಕೈ ಅಳತೆಗೆ ಸರಿ ಹೋಗುವಂಗೆ ಚೈನ್ನ ಕಟ್ ಮಾಡಿಸಿ ತಂದ್ ಕೊಡ್ತ್....
ಈಗ ಪುಟ್ಟಂಗೆ ಹೆಚ್ಚು ಕಡಿಮೆ 55 ವರ್ಷ. ಹೆಸ್ರು ಮಾತ್ರ ಪುಟ್ಟ. ಆಕಾರ ದೊಡ್ಡದೇ...! ಅಂವ ಊರಿಗೆ ದೊಡ್ಡ ಸಾಹುಕಾರ. 12 ಬಸ್ಗಳ ಓನರ್. ಕೊಡಗ್ನ ಎಲ್ಲಾ ಊರುಗಳಿಗೆ ತಲಕಾವೇರಿಂದ ಬಸ್ ಬಿಟ್ಟುಟ್ಟು. ಕೋಳಿಕಾಡು ಹತ್ರ ಒಂದೈವತ್ ಎಕರೆ ಕಾಫಿ ತೋಟ ಕೂಡ ಮಾಡ್ಯುಟ್ಟು. ಆದ್ರೂ ಕೈಲಿರ್ವ ಹಳೇ ಹೆಚ್ಎಂಟಿ ಸುಜಾತಾ ವಾಚ್ ಮಾತ್ರ ಬದಲಾತ್ಲೆ. ಕೈ ದಪ್ಪ ಆದಂಗೆ ಚೈನ್ನ ಗಾತ್ರ ದೊಡ್ಡದ್ ಮಾಡ್ಸಿಕಂಡದ್ ಬಿಟ್ಟರೆ, ಆ ವಾಚ್ ಕೂಡ ಹಂಗೆನೇ ಉಟ್ಟು. ಅಂವ ಈರೀತಿ ಬೆಳೆಯಕ್ಕೆ ಕೈಲಿರ್ವ ವಾಚ್ ಕಾರಣತೇಳುದು ಪುಟ್ಟನ ನಂಬಿಕೆ. ಫಾರಿನ್ಲಿರ್ವ ಮಕ್ಕ ಅಪ್ಪಂಗೆ ರ್ಯಾಡೋ ವಾಚ್ ಗಿಫ್ಟ್ ಕೊಟ್ಟರೂ, ಪುಟ್ಟ ಮಾತ್ರ ಅದ್ನ ಮುಟ್ಟಿನೂ ನೋಡಿತ್ಲೆ ! ಹೆಚ್ಎಂಟಿ ಸುಜಾತ ವಾಚ್ ಮೇಲೆ ಇವಂಗೆ ಅಷ್ಟು ಪ್ರೀತಿ !
ಅಂದ್ ಪುಟ್ಟನ 12 ಬಸ್ಗಳ ಕುಟುಂಬಕ್ಕೆ 13ನೇ ಬಸ್ ಬಂದ್ ಸೇರಿಕಂಡ ದಿನ. ಅದೇನು ಅಪಶಕುನನೋ ಏನೋ... ಆ ಹೊಸ ಬಸ್ನ ಡ್ರೈವರ್ ಸ್ಟಾರ್ಟ್  ಮಾಡ್ತಿದ್ದಂಗೆ, ಪುಟ್ಟಂಗೆ ಎದೆನೋವು ಕಾಣಿಸಿಕಂಡತ್. ಕೂಡ್ಲೇ ಆಸ್ಪತ್ರೆಗೆ ಕರ್ಕಂಡ್ ಹೋದೋ...ಡಾಕ್ಟರ್ ಬಾಯಿಂದ ಒಂದೇ ಮಾತ್ `ಸ್ಸಾರಿ....' ಪುಟ್ಟನ ಬಲಗೈಲಿದ್ದ ಆ ಹಳೇ ಹೆಚ್ಎಂಟಿ ವಾಚ್ ಮಾತ್ರ `ಟಿಕ್...ಟಿಕ್...ಟಿಕ್...' ತಾ ಹೇಳ್ತನೇ ಇತ್ !!!
- `ಸುಮಾ'