Friday 27 April 2012

ಹೆಜ್ಜೆ ತಪ್ಪಿದ ಕುಂತಿ !


ಜಗದೇಕ ಸುಂದರಿ ಕುಂತಿ !
ಇನ್ನೂ ಹದಿನಾರರ ಹರೆಯ
ಅವ್ಳಿಗೆ ಏನೇನೋ ಆಸೆ... 
ಅರಮನೆಯ ಜೀವನ
ಚಿನ್ನದ ಪಂಜರಲಿ ಬಂಧನ !
ವಯಸ್ಸು ಏರಿದಂಗೆ...
ಜಾರುತ್ತುಟ್ಟು ಮನಸ್ಸು !
ಈಟಿ ಹಿಡ್ದ ಕಟ್ಟುಮಸ್ತು ದೇಹದ
ಕಾವಲು ಭಟನೂ ಕಣ್ಣಿಗೆ ಸುಂದರ ! 
ದೂರದ ಈಶ್ವರ ದೇವಸ್ತಾನಲಿ
ಆರತಿ ಬೆಳಕಿನ ಎದುರು ಮಿಂಚುವ
ಭಟ್ಟನ ಮಂಙನೂ
ಆಹಾ ಎಂಥ ಲಾಯ್ಕ !
ಎಲ್ಲಾ ಹರೆಯದ ಮಹಿಮೆ !  
ದಾರಿ ತಪ್ಪುತ್ತುಟ್ಟು ಕುಂತಿ
ಅಪ್ಪಂಗಂತೂ ಇಲ್ಲೆ...
ಮಗಳ ಮದುವೆ ಚಿಂತೆ
ತಪ್ಪಾದ್ದೂ ಇಲ್ಲೇ !!!
ಒಂದು ದಿನ ಮಟ ಮಟ ಮಧ್ಯಾಹ್ನ
ಗಂಗೆಯ ಒಡಲಲ್ಲಿ
ಇವಳದ್ದ್ ಬೆತ್ತಲೆ ಸ್ನಾನ ! 
ಕಣ್ಣ್ ಹೊಡ್ದೇ ಬಿಡ್ತ್ 
ನೆತ್ತಿ ಮೇಲಿನ ಸೂರ್ಯ !
ಕರಗಿಯೇ ಹೋತ್
ಏರು ಯವ್ವನದ ಕುಂತಿ
ನೇಸರನ ಅಪ್ಪುಗೆಯೊಳಗೆ !
ಮದುವೆಯಾಗದೇ ಮಿಲನ ಸುಖ !
ಸಪ್ತಪದಿ ಮೆಟ್ಟದೆ ಪುತ್ರ ಸಂತಾನ !
ಅವನೇ ಕರ್ಣ !
ದಾನ ಶೂರ ಕರ್ಣ !


- `ಸುಮಾ'
arebhase@gmail.com

Thursday 26 April 2012

ಕೆರೆಯ ನೀರು ಕೆರೆಗೆ ಚೆಲ್ಲಿ...


ಅವ್ಳು ಸುಚೀಂದ್ರಾ ದೇವಿ. ಜೋಧ್ಪುರ ಸಂಸ್ಥಾನದ ಮಹಾರಾಜ ಸುಶೀಲೇಂದ್ರನ ಒಬ್ಬಳೇ ಮಗಳು. ರಾಜ ಅವ್ಳನ ಮಗನಂಗೆ ಬೆಳೆಸಿತ್ತ್. ಯುದ್ಧಗಳಲ್ಲಿ ಯಾವ ಗಂಡಸಿಗೂ ಕಡಿಮೆ ಇಲ್ಲದಂಗೆ ಹೋರಾಡುವ ಕಲೆ ಸುಚೀಂದ್ರಾ ದೇವಿಗೆ ಅವ್ಳ ಗುರುಗ ಕಲಿಸಿದ್ದೊ. ಒಬ್ಬ ರಜಪೂತ ಹೈದ ಹೆಂಗೆ ಇದ್ದದೆಯೋ ಸುಚೀಂದ್ರಾದೇವಿಯೂ ಅಷ್ಟೇ ಧೈರ್ಯವಂತೆ, ಸಾಹಸಿಯೂ ಆಗಿತ್. ಗುರು ದ್ರೋಣಾಚಾರ್ಯಂಗೆ ಇವ್ಳು ಅಚ್ಚುಮೆಚ್ಚಿನ ಶಿಷ್ಯೆ. 18 ವರ್ಷದ ತುಂಬು ಯವ್ವನಕ್ಕೆ ಬಾಕಾಕನ, ಸುಚೀಂದ್ರಾ ದೇವಿದ್ ಗುರುಕುಲ ವಾಸನೂ ಮುಗ್ದಿತ್. ಈ ಗುರುಕುಲ ಇದ್ದದ್ ಕೇರಳಲಿ !
ಅಂದ್ ಸುಚೀಂದ್ರಾ ದೇವಿ ವಿದ್ಯಾಭ್ಯಾಸದ ಕೊನೆ ದಿನ. ಅಷ್ಟು ದಿನ ಅಲ್ಲಿ ಕಲ್ತದ್ನ ಗುರುಗಳ ಮುಂದೆ ಪ್ರದರ್ಶನ ಮಾಡುವ ಕಾರ್ಯಕ್ರಮ ಇತ್. ಹಿಂದಿನ ಒಂದು ವಾರ ಕಾಲ ತತ್ವಶಾಸ್ತ್ರ, ಗಣಿತ, ರಾಜ್ಯಾಡಳಿತ ಹಿಂಗೆ ಬೇರೆ ಬೇರೆ ವಿಷಯಗಳ ಪರೀಕ್ಷೆ ಇತ್. ಎಲ್ಲದರಲ್ಲೂ ಸುಚೀಂದ್ರಾ ದೇವಿಯೇ ಫಸ್ಟ್. ಕೊನೆ ದಿನ ಇದ್ದದ್ ಹೋರಾಟದ ವಿದ್ಯೆ. ದ್ರೋಣಾಚಾರ್ಯರ ಮಂಙ ವಿಶ್ವಜಿತು ಸೇರ್ದಂಗೆ ಅಲ್ಲಿದ್ದ ಎಲ್ಲವ್ರನ್ನೂ ಸುಚೀಂದ್ರಾ ದೇವಿ ಸೋಲಿಸಿಬಿಟ್ಟಿತ್ತ್. ಕತ್ತಿವರಸೆ ಮಾಡಿಕಾಕನ ಕಿವಿ ಹತ್ರ ಸಣ್ಣ ಗಾಯ ಆದ್ ಬಿಟ್ಟರೆ ಇವ್ಳಿಗೆ ಏನೂ ಆಗಿತ್ಲೆ. ಇಂಥ ಸುಚೀಂದ್ರಾ ದೇವಿನ ಗುರುಕುಲಂದ ಕರ್ಕಂಡ್ ಹೋಕೆ, ಜೋಧ್ಪುರಂದ ಮಹಾರಾಜ ಸುಶೀಲೇಂದ್ರ, ಮಹಾರಾಣಿ ಸೌಮಿತ್ರಿ ಸೇರಿ ರಾಜಪರಿವಾರನೇ ಕೇರಳದ ಅಲೆಪ್ಪಿ ಹತ್ರದ ಈ ಊರಿಗೆ ಬಂದಿಳಿದಿತ್. ಜೊತೆಗೆ ಗುರುಗಳಿಗಾಗಿ ಒಂಟೆಗಾಡಿಗಳಲ್ಲಿ ಚಿನ್ನ, ಬೆಳ್ಳಿ, ವಜ್ರ, ಹಣ್ಣು ಹಂಫಲು...ವಿದ್ಯೆಗೆ ಬೆಲೆ ಕಟ್ಟಿಕೆ ಆದೆನಾ ?
ಅದೊಂದು ಭಾವುಕ ಕ್ಷಣ. 10 ವರ್ಷ ಸ್ವಂತ ಮನೆಯೇ ಆಗಿಹೋಗಿದ್ದ ಗುರುಕುಲನ ಬಿಟ್ಟು ಹೋಗುವ ಟೈಂ. ಸುಚೀಂದ್ರಾ ದೇವಿಗೆ ಕಣ್ಣು ತುಂಬಿ ಬಂದಿತ್. ಯಾರು ಎಷ್ಟೇ ಧೈರ್ಯವಂತ ಆಗಿದ್ದ್ರೂ ಇಂಥ ಸಮಯಲಿ ಕಣ್ಣುತುಂಬಿ ಬಾದು ಸಹಜ. ಸುಚೀಂದ್ರಾ ದೇವಿಗೂ ಹಂಗೆನೇ ಆಗಿತ್ತ್. ಎದುರಿಗೆ ಇರ್ದು ಎಂಥದ್ದೂ ಕೂಡ ಕಾಣದಂಥ ಸ್ಥಿತಿ. ಗುರು ದ್ರೋಣಾಚಾರ್ಯ ಅಂತೂ ತಮ್ಮ ಶಿಷ್ಯೆನ ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸ್ತಿದ್ದೊ. 70ರ ಇಳಿವಯಸ್ಸಲ್ಲಿ ಇರ್ವ ಅವ್ಕೆ, ಅವ್ರ ಜೀವಮಾನಲಿ ಇಂಥ ಶಿಷ್ಯೆ ಸಿಕ್ಕಿತ್ತ್ಲೆ. ಗುರುಪುತ್ರ ವಿಶ್ವಜಿತು ದೂರಲಿ ನಿಂತ್ಕಂಡ್ ಇದ್ನೆಲ್ಲಾ ನೋಡ್ತಿತ್. ಅವನ ಕಣ್ಣ್ಲೂ ನೀರು ! ಗುರುಗಳ ಹೆಣ್ ಕಮಲಮ್ಮ ಇದನ್ನೆಲ್ಲಾ ನೋಡಿಕ್ಕಾಗದೆ, ಒಲೆಬುಡಲಿ ಹೋಗಿ ತಲೆ ಕೆಳಕ್ಕೆ ಹಾಕಿಕಂಡ್ ಕುದ್ದುಬಿಟ್ಟಿದ್ದೊ.
`ಗುರುಗಳೇ... ನಾ ಹೊರಡುತ್ತೊಳೆ, ಆಶೀವರ್ಾದ ಮಾಡಿ.' ಸುಚೀಂದ್ರಾ ದೇವಿ, ದ್ರೋಣಾಚಾರ್ಯರ ಕಾಲಿಗೆ ಬಿತ್ತ್. `ಧೀರ್ಘಾಯುಷ್ಯಮಾನುಭವ ಮಗಳೆ...' ಗುರುಗ ಕಣ್ಣು ತುಂಬಿಸಿಕಂಡ್ ಶಿಷ್ಯೆಗೆ ಆಶೀರ್ವಾದ ಮಾಡ್ದೊ. `ಗುರುಗಳೇ...ನೀವು ನಂಗೆ 10 ವರ್ಷ ನಿಮ್ಮಲಿದ್ದ ಎಲ್ಲಾ ವಿದ್ಯೆಗಳನ್ನ ಕಲ್ಸೊಳರಿ...ನಾ ಎಂಥ ಗುರುದಕ್ಷಿಣೆ ಕೊಡಲಿ?' ಸುಚೀಂದ್ರಾ ದೇವಿ ದು:ಖದಲ್ಲೇ ಕೇಳ್ತ್.... ಸುಮಾರು 2 ನಿಮಿಷ ಅಲ್ಲಿ ಮೌನ. ನಂತರ ದ್ರೋಣಾಚಾರ್ಯರೇ ಮಾತಾಡ್ದೋ...`ಮಗಳೇ ನಿನ್ನ ಹೆಬ್ಬೆರಳು ಕೊಡುತಾ ಕೇಳಿಕೆ ನಾ ಮಹಾಭಾರತದ ದ್ರೋಣಾಚಾರ್ಯ ಅಲ್ಲ... ಖಂಡಿತ ನಿನ್ನಿಂದ ನಂಗೆ ಗುರುದಕ್ಷಿಣೆ ಬೇಕು. ಸಮಯ ಬಂದಾಗ ನಾನೇ ಕೇಳಿನೆ...ನೀ ಈಗ ಹೋಗಿಬಿಟ್ಟು ಬಾ...'ತಾ ಹೇಳ್ದೊ.
ಜೋಧ್ಪುರದ ರಾಜಪರಿವಾರ ಸುಚೀಂದ್ರಾ ದೇವಿನ ಕರ್ಕಂಡ್ ವಾಪಸ್ ಹೊರಟತ್. ಇನ್ನೇನು ಅಲೆಪ್ಪಿ ಹೊಳೆ ದಾಟೊಕು...ಎದುರ್ಲಿ ದ್ರೋಣಾಚಾರ್ಯರ ಮಂಙ ವಿಶ್ವಜಿತು ! 10 ವರ್ಷಲಿ ಒಂದೇ ಒಂದು ದಿನ ಸುಚೀಂದ್ರಾ ದೇವಿ ಜೊತೆ ಮಾತಾಡದಂವ ಅಂದ್ ಧೈರ್ಯಲಿ ರಾಜಪರಿವಾರದ ಮುಂದೆ ನಿಂತಿತ್ತ್. ತನ್ನ ಪ್ರೇಮ ನಿವೇದನೆ ಮಾಡಿಕಂಬಕೆ ! ಅವನ ತಲೇಂದ ಕಾಲು ವರೆಗೆ ಇದ್ದ ಕೆಂಪು ರೇಷ್ಮೆ ಬಟ್ಟೆ ಮೇಲೆ ಬಿಳಿ ಅಕ್ಷರಲಿ ಎದ್ದು ಕಾಣುವಂಗೆ ಪ್ರೇಮ ಪತ್ರ ಬರ್ದ್, ಸುಚೀಂದ್ರಾ ದೇವಿ ಇದ್ದ ಒಂಟೆ ಗಾಡಿ ಮುಂದೆ ನಿಂತ್ಕಂಡಿತ್ತ್. `ಅಪ್ಪ ನಿನ್ನ ಹತ್ರ ಗುರುದಕ್ಷಿಣೆ ತಕ್ಕಂಡತ್ಲೆ...ಅಪ್ಪನ ಪರವಾಗಿ ನಾ ನಿನ್ನ ಹತ್ರ ಕೇಳ್ತೊಳೆ...ಗುರುದಕ್ಷಿಣೆ ನನ್ನ ಮೂಲಕ ಸಲ್ಲಿಕೆ ಆಗಲಿ...' ಮಾತಾಡಿಕೆ ಗೊತ್ತೇ ಇಲ್ಲದಂಗೆ ಇದ್ದ ವಿಶ್ವಜಿತು ಅಂದ್ ಧೈರ್ಯವಾಗಿ ಮಾತಾಡಿಕೆ ನಿಂತಿತ್ತ್. ಇವನ ಮಾತು ಕೇಳಿ ಜೋಧ್ಪುರದ ರಾಜಪರಿವಾರಕ್ಕೆ ಏನು ಮಾಡೊಕೂತಾ ಗೊತ್ತಾತ್ಲೆ...ಸುಚೀಂದ್ರಾ ದೇವಿಯೇ ಕೇಳ್ತ್, `ನಿಂಗೆ ಎಂಥ ಗುರುದಕ್ಷಿಣೆ ಬೇಕು ?' ಅಷ್ಟೇ ವೇಗಲಿ ವಿಶ್ವಜಿತುನ ಉತ್ತರ `ನಂಗೆ ನೀ ಬೇಕು...'
ಮಹಾರಾಜ ಸುಶೀಲೇಂದ್ರಂಗೆ ಇದ್ನ ಕೇಳಿ ತಲೆ ಕೆಟ್ಟು ಹೋತ್. ತನ್ನ ರಾಜ್ಯ ನೋಡಿಕಣಿಗೆ ಸರಿಯಾಗುವಂಗೆ ಮಗಳಿಗೆ ಇಲ್ಲಿ ವಿದ್ಯೆ ಕೊಡಿಸಿರೆ, ಗುರುಗಳ ಮಂಙ ಯಾಕೋ ಉಲ್ಟಾ ಹೊಡೀತುಟ್ಟಲ್ಲಾತಾ ಅನಿಸಿಕೆ ಶುರುವಾತ್. ಇದಕ್ಕೆ ಪರಿಹಾರ ಕೊಡಿಕೆ ದ್ರೋಣಾಚಾರ್ಯ ಒಬ್ಬರಿಂದಲೇ ಸಾಧ್ಯತಾ ಮತ್ತೆ ಎಲ್ಲವೂ ಗುರುಕುಲಕ್ಕೆ ವಾಪಸ್ ಬಂದೋ....`ಹೌದು, ನನ್ನ ಮಂಙ ಹೇಳ್ದು ಸರಿಯಾಗಿಯೇ ಉಟ್ಟು. ಸುಚೀಂದ್ರಾದೇವಿನ ನನ್ನ ಸೊಸೆ ಮಾಡಿಕೊಣಕೂತ ನಂಗೂ ಆಸೆ. ಅದ್ಕೆನೇ ಗುರುದಕ್ಷಿಣೆನಾ ಸಮಯ ಬಂದಾಗ ಕೇಳಿನೆತಾ ಹೇಳಿದ್ದೆ. ಆ ಸಮಯ ಈಗ ಬಂದುಟ್ಟು.. ಸುಚಿಂದ್ರಾದೇವಿ, ನೀ ನನ್ನ ಸೊಸೆ ಆದ್ರೆ, ಅದೇ ನಂಗೆ ಗುರುದಕ್ಷಿಣೆ...'ತಾ ದ್ರೋಣಾಚಾರ್ಯ ಹೇಳ್ದೊ. `ನಿಂಗೆ ನನ್ನಲ್ಲಿದ್ದ ಎಲ್ಲಾ ವಿದ್ಯೆ ಧಾರೆಯೆರೆದೊಳೆ...ಅದನ್ನೆಲ್ಲಾ ಇಟ್ಕಂಡ್ ನೀ ರಾಜ್ಯ ಆಳಿರೆ ಯಾರಿಗೂ ಪ್ರಯೋಜನ ಇಲ್ಲೆ. ಬದಲಿಗೆ ಈ ಗುರುಕುಲದ ಜವಾಬ್ದಾರಿ ತಕ್ಕಂಡ್ ನಿಂಗೆ ಗೊತ್ತಿದ್ದನ್ನ ನಾಲ್ಕು ಜನರಿಗೆ ಹೇಳಿಕೊಟ್ಟರೆ, ನಾನು ನಿಂಗೆ ಕಲಿಸಿದ್ದೂ ಸಾರ್ಥಕ ಆದೆ. ಹೆಂಗೂ ನಂಗೆ ವಯಸ್ಸಾತಲ್ಲಾ...'
ಸುಚೀಂದ್ರಾ ದೇವಿ ಕೂಡ್ಲೆ ಗುರುಗಳ ಮಾತ್ನ ಒಪ್ಪಿಕಂಡತ್. ಆದ್ರೆ ಈಗ ಕಣ್ಣೀರು ಸುರ್ಸುವ ಸರದಿ ಜೋಧಪುರದ ರಾಜದಂಪತಿದ್ದ್ !!
- `ಸುಮಾ'

Wednesday 25 April 2012

ಇಬ್ಬರೂ ಒಂದೇ... !!!


ಒಂದು ಚಿಕ್ಕ ಮಳೆ...
ಬಿಸಿ ಬಿಸಿ ಭೂಮಿಗೆ
ತಾಗ್ತಿದ್ದಂಗೆ ಆವಿಯಾಗಿ ಹೋಗ್ತುಟ್ಟು ! 
ಕಾದ ಬಾಣಲೆ ಮೇಲೆ 
ನೀರಿನ ಹನಿ ಹಾಕಿದಂಗೆ ! 
ಏ ವರುಣಾ..
ವಸುಂಧರೆ ಮೇಲೆ ನಿಂಗೆ
ಅಷ್ಟು ಪ್ರೀತಿ ಇದ್ದರೆ...
ಮನಸಾರೆ ಸುರ್ದು ಬಿಡು
ಎಲ್ಲವ್ಕೆ ತೃಪ್ತಿ ಆಗುವಂಗೆ !
ನಿನ್ನ ಮೂಡ್ ಗೊತ್ತೇ ಆಲೆಯಪ್ಪಾ....
ಥೇಟ್ ನನ್ನ ಗೂಡೆನಂಗೆ !
ಪ್ರೀತಿ ಜಾಸ್ತಿಯಾದ್ರೆ... 
ವಾಂತಿ ಬುರುವಷ್ಟು 
ಇಲ್ಲಂದ್ರೆ ತಪಸ್ಸು ಮಾಡೋಕು !
ನೀನೂ ಹಂಗೆ ತಾನೇ ?
ಒಮ್ಮೆ ಶುರುವಾದ್ರೆ..
ಹೇಸಿಗೆ ಆಗುವಂಗೆ ಬೀಳ್ತನೇ ಇದ್ದಿಯಾ !
ಇಲ್ಲಂದ್ರೆ ಆಕಾಶಕ್ಕೆ ಮುಖ ಮಾಡಿ
ಹುಡುಕೋಕು !!!
ಯಾಕಪ್ಪಾ ಇಂಥ ಗಾಂಚಾಲಿ ?
ಬಂದು ಬಿಡು ಒಮ್ಮೆ...


- `ಸುಮಾ'
arebhase@gmail.com

Tuesday 24 April 2012

ಕಥೆ ಹೇಳುವ ಚಾಮವ್ವ'


`ಒಂದೂರ್ಲಿ ಒಬ್ಬ ರಾಜ ಇತ್ತ್ ಗಡ...ಅವಂಗೊಬ್ಳು ಪೊರ್ಲುನ ಮಗ್ಳು...ಆ ಗೂಡೆಗೆ ಮದುವೆ ಮಾಡಿಕೆ ಹೈದನ ಹುಡ್ಕ್ತ್ತಿದ್ದೊ...' ಸಾಯಂಕಾಲ ಹೊತ್ತು ಸೂರ್ಯ ಮುಳುಗಿದ್ಮೇಲೆ ಚಾಮವ್ವ 
ಹಿಂಗೆ ಕಥೆ ಹೇಳ್ತಿತ್. ಬೇಸಿಗೆ ರಜೆ ಕಳಿಯಕ್ಕೆ ಬಂದಿದ್ದ ಮಕ್ಕ ಕೈಕಾಲು ಮುಖ ತೊಳ್ದು, ದೇವ್ರ ಫೋಟೋ ಹತ್ರ ಇದ್ದ ಕುಂಕುಮನ ಹಣೆಗೆ ಹಾಕ್ಕಂಡ್ ಬಂದ್ ಚಾಮವ್ವ ಹೇಳುವ ಕಥೆ ಕೇಳಿಕೆ ಕುದ್ದುಬಿಟ್ಟಿದ್ದೊ. ಚಾಮವ್ವ ಹೇಳ್ವ ಕಥೆಗಳೇ ಹಂಗೆ... ಅದ್ರಲ್ಲಿ ಒಂದು ಊರು ಇರೋಕು. ಅದಕ್ಕೊಬ್ಬ ರಾಜ, ಆ ರಾಜಂಗೊಬ್ಬ ಮಗ್ಳು, ಅವ್ಳಿಗೊಬ್ಬ ಹೈದ... ಚಾಮವ್ವನ ಪ್ರತೀ ಕಥೆಗಳಲ್ಲೂ ಇಷ್ಟು ಪಾತ್ರಗ ಇದ್ದೇ ಇದ್ದವೆ. ಆದ್ರೆ ಕಥೆ ಹೇಳುವ ರೀತಿ ಮತ್ತೆ ಅದರ ಬೆಳವಣಿಗೆ ದಿನದಿಂದ ದಿನಕ್ಕೆ ಬೇರೆಯೇ ಆಗಿದ್ದದ್ದೆ. ಎಲ್ಲಾ ಕಥೆಗಳ ಕ್ಲೈಮ್ಯಾಕ್ಸ್ಲಿ ರಾಜಕುಮಾರಿ ಮದುವೆ ಸೀನ್ ಕಡ್ಡಾಯ ! ಇಷ್ಟಾದ್ರೂ ಮಕ್ಕಳಿಗೆ ಆ ಕಥೆಗ ಬೋರ್ ಹೊಡ್ಸುಲೆ. ಏಕಂದ್ರೆ ಚಾಮವ್ವನ ಕಥೆಗಳಲ್ಲಿ ತುಂಬಾ ಉಪಕಥೆಗ ಇದ್ದವೆ. ಕಥೆ ಕೇಳ್ವ ಮಕ್ಕ ಮತ್ತೆ ಅವ್ರ ಅಪ್ಪ ಅಮ್ಮಂದಿರೂ ಈ ಉಪಕಥೆಗಳಲ್ಲಿ ಬಂದು ಹೋದವೆ. ಹಂಗಾಗಿ ಚಾಮವ್ವನ ಕಥೆ ಕೇಳ್ದುತೇಳಿರೇ, ಮಕ್ಕಳಿಗೆ ಎಲ್ಲಿಲ್ಲದ ಖುಷಿ. 
ಹಂಗೆ ನೋಡಿರೆ ಕಥೆ ಹೇಳುವ ಚಾಮವ್ವಂದೂ ದೊಡ್ಡ ಕಥೆನೇ. ಆ ಮನೆಗೆ ಚಾಮವ್ವ ದೂರದ ಸಂಬಂಧಿ. ಅಪ್ಪ ಇಲ್ಲದ ಚಾಮವ್ವಂಗೆ ಸಣ್ಣ ವಯಸ್ಸಲ್ಲೇ ಅವಳಮ್ಮ ಮದುವೆ ಮಾಡಿತ್ತ್. ಅದ್ರ ಮರು ವರ್ಷನೇ ಆ ಪುಣ್ಯಾತ್ಮಗಿತ್ತಿ ವೈಕುಂಠ ಸೇರಿಕಂಡಿತ್ತ್. ಚಾಮವ್ವನ ಗ್ರಹಚಾರ ನೋಡಿ, ಅಮ್ಮ ಸತ್ತ ಮರು ವರ್ಷನೇ ಅವ್ಳ ಗಂಡ ಗದ್ದೆಲಿ ನೀರು ಬಿಡಿಕೆ ಹೋಗಿರ್ಕಾಕನ ಹಾವು ಕಚ್ಚಿ ಸತ್ತಿತ್ತ್. ಗಂಡಸರೆಲ್ಲಾ ಸುಡುಕುಳಿಗೆ ಹೋಗಿದ್ದರೆ, ಮನೇಲಿ ಇದ್ದದ್ದ್ ಬರೀ ಹೆಂಗಸರ್ ಮಾತ್ರ. ಮರ್ಟ್ ಮರ್ಟ್ ಸುಸ್ತಾಗಿದ್ದ ಚಾಮವ್ವಂಗೆ ಕಿಬ್ಬೊಟ್ಟೆ ಹತ್ರ ಎಂಥದ್ದೋ ತಡ್ಕಳಕ್ಕಾಗದಂಗೆ ನೋವು ! ಕುದ್ದ ಜಾಗ ಎಲ್ಲಾ ರಕ್ತ !! ಅವ್ಳ ಅತ್ತೆನ ತಂಗೆ ಮಗ್ಳು ಬಂದ್ ಹೇಳಿಕಾಕನನೇ ಗೊತ್ತಾದ್... ಚಾಮವ್ವ ಅಂದ್ `ದೊಡ್ಡ'ವಳಾಗಿತ್ತ್ ! 
ಇತ್ತ ಗಂಡನ ತಿಥಿನೂ ಕಳ್ತ್ಲೇ, ಆಗಲೇ ಚಾಮವ್ವನ ಮದುವೆ ಮಾಡಿಕೊಟ್ಟಿದ್ದ ಮನೇಲಿ ಆಸ್ತಿಗಾಗಿ ಜಗಳ ಶುರುವಾಗಿತ್ತ್. ಕೊನೆಗೂ ತಿಥಿ ಕಳ್ದ ಮಾರನೇ ದಿನನೇ ಮೈದುನ ಮತ್ತೆ ಅತ್ತೆ ಸೇರಿಕಂಡ್ ಚಾಮವ್ವನ ಓಡಿಸಿಬಿಟ್ಟಿದ್ದೊ... ಉಟ್ಟ ಸೀರೆಲೇ ಚಾಮವ್ವ ಮಡಿಕೇರಿಗೆ ಬಂದ್ಬಿಟ್ಟಿತ್. ಶುಕ್ರವಾರ. ಸಂತೆ ದಿನ. ಏನು ಮಾಡ್ದುತಾ ಗೊತ್ತಾಗದೇ ಪ್ರೈವೆಟ್ ಬಸ್ ಸ್ಟ್ಯಾಂಡ್ಲಿ ಮರ್ಡ್ತಾ ಕುದ್ದಿದ್ದ ಇವ್ಳು, ಈ ಮನೆ ಯಜಮಾನನ ಕಣ್ಣಿಗೆ ಬಿದ್ದಿತ್. ಹೆಂಗಿದ್ದರೂ ದೂರದ ನೆಂಟರ್. ಒಂದೆರಡು ದಿನಲಿ ಎಲ್ಲಾ ಸರಿಯಾದು. ಆಮೇಲೆ ಇವ್ಳನ್ನ ವಾಪಸ್ ಕಳ್ಸಿರೆ ಆತ್ತೇಳಿ, ಈ ಯಜಮಾನ ತನ್ನ ಮನೆಗೆ ಕರ್ಕಂಡ್ ಬಂದ್ಬಿಡ್ತ್. ಆದ್ರೆ ಚಾಮವ್ವನ ಅವಳ ಗಂಡನ ಮನೆಯವು ವಾಪಸ್ ಕರ್ಕಂಡೇ ಹೋತ್ಲೇ...ಅವ್ಳಿಗೆ ಈ ಯಜಮಾನನ ಮನೆನೇ ಶಾಶ್ವತ ಆತ್. ಮೊದ್ಲಿಗೆ ಸ್ವಲ್ಪ ದಿನ ಮನೆ ಯಜಮಾನ್ತಿಗೆ ಇದ್ ಯಾಕೋ ಸರಿಕಂಡತ್ಲೆ. ವಯಸ್ಸಿಗೆ ಬಂದ ಗೂಡೆನ ಗಂಡ ಹಿಂಗೆ ಮನೇಲಿ ಕರ್ಕಂಡ್ ಬಂದ್ ಇಟ್ಕಂಡರೆ ಯಾವ ಹೆಣ್ಣ್ ತಾನೇ ಸಹಿಸಿಕಂಡದೆ ? ಚಾಮವ್ವನ ಜೊತೆ ಮನೆ ಯಜಮಾನಂಗೆ ಸಂಬಂಧ ಉಟ್ಟುತಾ ಊರುಲಿ ಕೆಲವು ಹೇಳಿಕಂಡ್ ತಿರುಗಿಕೆ ಶುರುಮಾಡ್ದೊ. ಬೆಂಕಿ ಇದ್ದರೆ ತಾನೇ ಹೊಗೆ ಏಳ್ದು?
ಇಷ್ಟ್ ಆಕಾಕನ ಮನೆ ಯಜಮಾನ್ತಿ ಕಾಯಿಲೆ ಬಿದ್ದತ್. ಮಲಗಿದ್ದಲ್ಲೇ ಎಲ್ಲಾ ಮಾಡಿಕಣ್ವ ಪರಿಸ್ಥಿತಿ. ಆಗ ಒಂದು ಚೂರೂ ಹೇಸಿಗೆ ಮಾಡಿಕಣದೆ ಯಜಮಾನ್ತಿಯ ಸೇವೆ ಮಾಡ್ದ್ ಇದೇ ಚಾಮವ್ವ. ಇದ್ನೆಲ್ಲಾ ನೋಡಿಕಾಕನ ಯಜಮಾನ್ತಿಗೆ ಚಾಮವ್ವನ ಮೇಲೆ ಕರುಣೆ ಬಾತ್...ಚಾಮವ್ವ ಸೇವೆ ಮಾಡ್ತಿದ್ದರೆ ಯಜಮಾನ್ತಿ ಕಣ್ಣಲ್ಲಿ ನೀರು... ಹಿಂಗೆ ಹಿಂಸೆ ಅನುಭವಿಸಿ, ಅನುಭವಿಸಿ ಒಂದು ದಿನ ಮನೆ ಯಜಮಾನ್ತಿ ತೀರಿಕಂಡ್ಬಿಡ್ತ್. ಅಷ್ಟೊತ್ತಿಗಾಗಲೇ ಆ ಮನೆ ಮಕ್ಕ ಎಲ್ಲಾ ದೊಡ್ಡವು ಆಗಿದ್ದೊ. ಹೆಣ್ಣು ಮಕ್ಕಳಿಗೆ ಮದುವೆನೂ ಆಗಿತ್ತ್. ಒಂದೆರಡು ವರ್ಷಲಿ ಗಂಡು ಮಕ್ಕಳಿಗೂ ಮದುವೆ ಆತ್. ಚಾಮವ್ವನ ಸ್ಥಿತೀಲಿ ಮಾತ್ರ ಯಾವುದೇ ಬದಲಾವಣೆ ಆತ್ಲೆ. ಆ ಮನೆಯ ಒಬ್ಬ ಸದಸ್ಯೆ ಆಗಿ ಮಾತ್ರ ಉಳ್ಕಂಡ್ಬಿಡ್ತ್.
ಇಂಥ ಚಾಮವ್ವ ಅದೆಲ್ಲಿಂದ ಕಥೆ ಕಲ್ತಿತ್ತೋ ಏನೋ.. ಈ 80ರ ವಯಸ್ಸಲ್ಲೂ ತುಂಬಾ ಲಾಯ್ಕ ಕಥೆ ಹೇಳ್ತಿತ್. ಮನೆ ಯಜಮಾನಂಗೆ ಈಗ ಸುಮಾರು 90 ವರ್ಷ. ಚಾಮವ್ವ ಕಥೆ ಹೇಳ್ತಿದ್ದರೆ, ದೂರಲಿ ಆರಾಮ ಕುಚರ್ಿಲಿ ಕುದ್ದ್ಕಂಡ್ ಒಂದೇ ಕಿವಿಲಿ ಕೇಳಿಕಂಡ್ ಅಂವ ಖುಷಿಪಡ್ತಿತ್. ಅವ್ಳು ಹೇಳುವ ಕಥೇಲಿ ಬರ್ವ ರಾಜಕುಮಾರ ನಾನೇ ಆಗಿ, ರಾಜಕುಮಾರಿ ಚಾಮವ್ವನೇ ಆಗಿದ್ದರೆ ಎಷ್ಟು ಲಾಯ್ಕ ಅಲಾ...ತಾ ಕನಸು ಕಾಣ್ತಿತ್ತ್. ಘಾಟಿ ಅಜ್ಜ !!!! ಹುಳಿ ಮುಪ್ಪಾತ್ಲೆ !!!


- `ಸುಮಾ' 
arebhase@gmail.com

Monday 23 April 2012

ಈ ಪ್ರೀತಿ ಒಂಥರಾ...


ಹಾಯ್ ಚಿನ್ನು...
ಹೆಂಗೊಳಾ ? ನೀನು ಲಾಯ್ಕನೇ ಇದ್ದಿಯ ಮತ್ತೆ ಲಾಯ್ಕ ಇರೋಕು. ಏಕೆತೇಳಿರೆ ನೀ ನನ್ನ ಹೃದಯ ಗೆದ್ದ ಗೂಡೆ ! ನಾ ಹೆಂಗಾರೂ ಇರ್ಲಿ....ನೀ ಮಾತ್ರ ಬಿಂದಾಸ್ ಆಗಿ ಇರೋಕು. ಎಷ್ಟು ಟೈಂ ಆತಲ್ಲಾ ನಾ ನಿಂಗೊಂದು ಕಾಲ್ ಮಾಡಿ... ಹೋಗ್ಲಿ, ಮೆಸೆಜ್ ಕೂಡ ಇಲ್ಲೆ. ನೀನೂ ತುಂಬಾ ಸೋಮಾರಿ ಆಗೊಳ ಅಲಾ ? ಮೊದ್ಲು ದಿನಕ್ಕೆ ಎಷ್ಟು ಸಲ ಕಾಲ್ಗ !!! ಮೆಸೆಜ್ಗಳಿಗಂತೂ ಲೆಕ್ಕನೇ ಇಲ್ಲೆ... ಸರಾಸರಿ 10 ನಿಮಿಷಕ್ಕೊಂದು ಮೆಸೆಜ್ !! ದಿನಕ್ಕೆ ನೂರು ಮೆಸೆಜ್ ಮಾಡಿರೆ, ನೂರರಲ್ಲೂ `ಐ ಮಿಸ್ ಯೂ..', `ಐ ಲವ್ ಯೂ..' ಗಂಟೆಗೊಂದು ಸಲ ಕಾಲ್ ಬಾತ್ಲೆತೇಳಿರೇ ಏನೋ ಕಳ್ಕೊಂಡ ಅನುಭವ ! ನಿಂಗೂ ಹಿಂಗೆನೇ ಆಗ್ತಿತ್ತಾ ನಂಗೆ ಗೊತ್ತು.
ಚಿನ್ನು ನಿಂಗೆ ಗೊತ್ತಾ....ನಾ ತುಂಬಾ ಸ್ವಾರ್ಥಿ. ಎಲ್ಲಾ ವಿಷಯಲೂ... ಹೌದು, ಪ್ರೀತಿ ವಿಷಯಲಿ ಕೂಡ...! ನಿನ್ನ ಪ್ರೀತಿ ನಂಗೆ ಮಾತ್ರ ಸಿಕ್ಕೊಕುತೇಳುವ ದುರಾಸೆ ! ನನ್ನ ಪ್ರೀತಿನೂ ಅಷ್ಟೆ, ನಿಂಗೆ ಮಾತ್ರ ಮೀಸಲು. ಎಡಗೈ ಮುಷ್ಟಿಯಷ್ಟೇ ನನ್ನ ಚಿಕ್ಕ ಹೃದಯಲಿ ಬರೀ ನಿಂಗೆ ಮಾತ್ರ ಸ್ಥಾನ ! ಅಲ್ಲಿ ಯಾರನ್ನೂ ಬಾಕೆ ಬಿಡ್ದುಲ್ಲೆ....ಆದ್ರೆ ಯಾಕೋ ನಿನ್ನೆ ಕಡೆಂದ ನಂಗೆ ಬರೀ ನಿರಾಸೆ ಮಾತ್ರ ಸಿಕ್ತುಟ್ಟು.
ಚಿನ್ನು, ತುಂಬಾ ಸಲ ಯೋಚನೆ ಮಾಡ್ಯೊಳೆ...ನಿನ್ನ ಕೆಲ ವರ್ತನೆಗಳ್ನ ನೋಡಿಕಾಕನೆಲ್ಲಾ ನಿಜವಾಗಿಯೂ ಇವ್ಳು ನಂಗೆ ಸಿಕ್ಕುದತಾ ನನ್ನನ್ನ ನಾನೇ ಕೇಳಿಕೊಂಡಳೆ. ಆಗ ನನ್ನ ಮನಸ್ಸುಲಿ ಬರೀ ನೆಗೆಟಿವ್ ಉತ್ತರಗಳೇ ಬರ್ತಿತ್ತ್. ಈಗ್ಲೂ ನಂಗೆ ಹಂಗೆನೇ ಅನ್ನಿಸ್ತುಟ್ಟು. ಮುಂದೆ ಯಾವಾಗಲೋ ತುಂಬಾ ನೋವು ಒಟ್ಟಿಗೆ ಅನುಭವಿಸುವ ಬದ್ಲು, ಈಗ ಸ್ವಲ್ಪ ಸ್ವಲ್ಪನೇ ಇನ್ಸ್ಟಾಲ್ಮೆಂಟ್ಲಿ ನೋವಿನ ಅನುಭವ ಆಗ್ಲಿತಾ ಒಂದು ಕಠಿಣ ನಿಧರ್ಾರ ತಕ್ಕೊಂಡೊಳೆ ! ಹೌದು... ನಿನ್ನ ಮರೆಯೊಕು. ಚಿನ್ನು... ಅದೆಷ್ಟು ಕಷ್ಟ ಗೊತ್ತಾ ? ಈ ಹೃದಯಲಿ `ಚಿನ್ನು' ತೇಳುವ ಎರಡೂವರೆ ಅಕ್ಷರ ಅಚ್ಚು ಹುಯ್ದಂಗೆ ಅಂಟಿ ಹೋಗ್ಯುಟ್ಟು. ಆ ಹೃದಯ `ಲಬ್ಡಬ್ ಲಬ್ಡಬ್' ಹೇಳುವ ಬದ್ಲು, ನಿನ್ನ ಹೆಸ್ರನ್ನೇ ಹೇಳ್ತುಟ್ಟು ! ಆದ್ರೂ ನಿನ್ನ ಮರೆಯೊಕು. ಅಂಟಿಹೋಗಿರ್ವ ನಿನ್ನ ಹೆಸ್ರುನಾ ಉಜ್ಜಿ ತೆಗೆಯನಾತೇಳಿರೆ, ಹೃದಯನೇ ಕಿತ್ತುಬಂದಂಗೆ ಅಸಾಧ್ಯ ನೋವು. ಆದ್ರೂ ಪ್ರಯತ್ನಪಡ್ತೊಳೆ ! ಯಾಕಂದ್ರೆ ನೀ ಲಾಯ್ಕ ಇರೋಕು... ನಂಗೆ ಎಷ್ಟು ನೋವಾದ್ರೂ ಪರ್ವಾಗಿಲ್ಲೆ ಚಿನ್ನು....


ಇಂತೀ (..............)
ಜಾಗ ಖಾಲಿ ಬಿಟ್ಟೊಳೆ. ನೀನೇ ಅಲ್ಲಿ ನಿಂಗೆ ಇಷ್ಟ ಬಂದಿದ್ನ ತುಂಬಿಸ್ಕಾ...
ಗುಡ್ ಬೈ.....


- `ಮಂದಸ್ಮಿತ'

Friday 20 April 2012

ಮಾಯವಾದ ನಿಧಿ !


ವಿನು ಮತ್ತೆ ದಿನು ಶಾಲೆಂದ ವಾಪಸ್ ಮನೆಗೆ ಬರ್ತಿದ್ದೊ....ಅದ್ ಮಳೆಗಾಲದ ಟೈಂ ಆಗಿದ್ದರಿಂದ ಚೇರಂಗಾಲದ ಆ ಕಾಡು ಮೂಲೇಲಿ ಐದೂವರೆಗೆಲ್ಲಾ ಕತ್ತಲೆ ಆಗಿಬಿಡ್ತಿತ್. ಅವಿಬ್ಬರೂ ಭಾಗಮಂಡಲಲಿ ಸ್ಕೂಲ್ಗೆ ಹೋಗ್ತಿದ್ದೊ. ಇವರ ಮನೇಂದ ಭಾಗಮಂಡಲಕ್ಕೆ ಸುಮಾರು 5 ಮೈಲಿ ದೂರ. ಹಂಗಾಗಿ ಮನೆ ಸೇರಿಕಾಕನ ಕತ್ತಲೆ ಆಗ್ತಿತ್. ಇಂದೂ ಹಂಗೆನೆ ಆಗಿತ್ತ್. ಕೋಳಿಕಾಡು ಹತ್ರ ಹೋಕಾಕನನೇ ಕುದುಕಗ ಮರಡಿಕೆ ಶುರುಮಾಡಿದ್ದೊ...ಇಬ್ಬರ ಪೈಕಿ ವಿನು ಸ್ವಲ್ಪ ಧೈರ್ಯವಂತ. ಆದ್ರೆ ದಿನು ಪುಕ್ಕಲ. ಹಂಗಾಗಿ ವಿನು ಮುಂದೆ ಮುಂದೆ ಹೋದರೆ, ದಿನು ಅವನ ಹಿಂದೆ ಹಿಂದೆ ಕಳ್ಳನಂಗೆ ಹೆಜ್ಜೆ ಹಾಕ್ತಿತ್. ಕೋಳಿಕಾಡು ತೋಡು ದಾಟಿ, ಈಚಪ್ಪಾಚಾರಿ ಮಂಟಿ ಮೇಲೆ ಹತ್ತಿಬಿಟ್ಟರೆ, ಇವ್ರ ಮನೆ ಗುಡ್ಡದ ಒಲೆಗೆ ಹಾಕಿದ ಬೆಂಕಿ ಕಾಣ್ತಿತ್. ಅಲ್ಲಿಂದ ಮತ್ತೊಂದು ಕಾಲು ಗಂಟೆ ಮಾತ್ರ ದಾರಿ.
ಅಣ್ಣ ಮತ್ತೆ ತಮ್ಮ ಇಬ್ಬರೂ ಈಚಪ್ಪಾಚಾರಿ ಮಂಟಿ ಹತ್ತುತ್ತಿದ್ದೊ. ಅಷ್ಟೊತ್ತಿಗೆ ಹಿತ್ತಾಳೆ ಮಡಿಕೆನ ನೆಲ್ಲಕ್ಕೆ ಜೋರಾಗಿ ಎತ್ತಿಹಾಕಿದಂಗೆ ಎಡಗಡೆ ಕಾಡೊಳಗಿಂದ ಒಂದು ಶಬ್ದ ಕೇಳ್ತ್. ವಿನು ಕುತೂಹಲಂದ ಅತ್ತ ಕಡೆ ನೋಡಿರೆ, ದಿನು ವಿನುನ ಗಟ್ಟಿಯಾಗಿ ಹಿಡ್ಕಂಡ್ಬಿಡ್ತ್. ಇವನ ಕೈ ಕಾಲೆಲ್ಲಾ ನಡಿಗಿಕೆ ಶುರುವಾತ್ ! `ಏ ಬಾರಾ ಪೋಯಿ...ಇಲ್ಲಿ ನಿಂತುಕೊಂಬದು ಬೇಡ... ನಂಗೆ ತುಂಬಾ ಹೆದರಿಕೆ ಆಗ್ತುಟ್ಟು...' ದಿನು ನಡಗಿಕಂಡ್ ನಡಗಿಕಂಡೇ ಹೇಳ್ತ್. ಅಷ್ಟೊತ್ತಿಗೆ ಮತ್ತೊಂದು ಶಬ್ದ. ಹಾವಿನ ಬಾಯಿಂದ ಬಂದದೆಯಲ್ಲಾ ಹಂಗೆ ಜೋರಾಗಿ `ಹಿಸ್ಸ್...'ತಾ.. ! ನಡುಗುತ್ತಿದ್ದ ದಿನು ಈಗ ಪ್ಯಾಂಟ್ಲೇ ಉಚ್ಚೆಹೊಯ್ಕಂಡತ್. ಇನ್ನೇನೆಲ್ಲಾ ಮಾಡ್ಕಂಡತೋ ಏನೋ ಕೆಟ್ಟ ವಾಸನೆ ಬೇರೆ ! ಆದ್ರೆ ವಿನು ಶಬ್ದ ಬಂದ ಕಡೆ ತುಂಬಾ ಧೈರ್ಯಲಿ ನೋಡ್ತಿತ್. ದಿನು ಮಾತ್ರ ಕಣ್ಣು ಮುಚ್ಚಿಕಂಡ್ ನೆಲಲಿ ಕುದ್ದೇಬಿಡ್ತ್ ! ಪುನ: ಹಿತ್ತಾಳೆ ಮಡಿಕೆ ಬಿದ್ದಂಗೆ ಸದ್ದು ! ಮತ್ತೆ ಹಾವಿನ ಬಾಯಿಂದ ಬಂದಂಗೆ `ಹಿಸ್ಸ್...' ಶಬ್ದ. ಹಿಂಗೆನೇ ಒಂದು ನಾಲ್ಕೈದು ಸಲ ಆದ್ಮೇಲೆ, ಕಾಡು ಮಧ್ಯಂದ ಒಂಥರ ಚಿನ್ನದ ಬಣ್ಣದ ಬೆಳಕು ಬಂದಂಗೆ ಆತ್. ಹಂಗೆನೇ ಅದ್ ಆಕಾಶಕಡೆಗೆ ಮುಖ ಮಾಡಿ ಒಳ್ಳೆ ಕೋಲು ಥರ ಬೆಳ್ದ್ ನಿಂತತ್ ! ವಿನುಗೆ ಏನೋ ಕನಸು ಕಾಣ್ತಿರುವಂಗೆ ಅನುಭವ ! ಕಣ್ಣು ಮುಚ್ಚಿಕೆ ಕೂಡ ಮರ್ತವನಂಗೆ ಆ ದೃಶ್ಯನೇ ನೋಡಿಕಂಡ್ ನಿಂತ್ಬಿಟ್ಟತ್. ಅಷ್ಟು ಆಕಾಕನ ಆ ಆಕಾಶದೆತ್ತರಕ್ಕೆ ಬೆಳ್ದು ನಿಂತಿದ್ದ ಕೋಲು ಕರಗಿ ನೀರಾದಂಗೆ ನೆಲದ ಮೇಲೆ ಬಿತ್ತ್ ! ಮತ್ತೆ ಅದೇ ಸದ್ದು ! ಹಿತ್ತಾಳೆ ಮಡಿಕೆ ಬಿದ್ದಂಗೆ...! ಹಾವಿನ ಬಾಯಿಂದ ಬಂದಂಗೆ `ಹಿಸ್ಸ್...' 
ಹತ್ತು ನಿಮಿಷ ಕಳ್ದ ಮೇಲೆ ಎಲ್ಲಾ ನಿಶ್ಯಬ್ದ ! ಅಷ್ಟೊತ್ತಿಗೆ ಕರಿಕತ್ತಲೆ ಬೇರೆ ಆಗಿ ಹೋಗಿತ್ತ್...ದಿನು ಹೆದ್ರಿ ಸೊಯ ತಪ್ಪಿ ಬಿದ್ದುಬಿಟ್ಟಿತ್. ಅವ್ನ ಎಚ್ಚರ ಮಾಡಿಸಿ, ಇಬ್ಬರೂ ಮೆಲ್ಲೆ ಮನೆ ಸೇರಿಕೊಂಡೊ. ನಡ್ದ ಎಲ್ಲಾ ವಿಷಯನ ವಿನು ಅಪ್ಪಂಗೆ ಹೇಳ್ತಿದ್ದರೆ, ದಿನು ಜ್ವರ ಬಂದ್ ಮಲಗಿಬಿಟ್ಟಿತ್ತ್ ! ವಿನು ಅಪ್ಪ ಸೋಮಯ್ಯಂಗೂ ಇದೆಲ್ಲಾ ಕೇಳಿ ಆಶ್ವರ್ಯ. ನಾಳೆ ಹೆಂಗಾರು ಹೋಗಿ ಆ ಜಾಗ ನೋಡೊಕುತಾ ಯೋಚನೆ ಮಾಡಿಕಂಡ್ ಮಲಗಿದೋ.
ಗುಳಿಗಂಗೆ ಕೊಡಿಕೆತಾ ಬಿಟ್ಟಿದ್ದ ದೊಡ್ಡ ಹುಂಜ ಬೆಳಗ್ಗೆ ಕೂಗಿಕೆ ಮೊದ್ಲು. ವಿನು ಮತ್ತೆ ಸೋಮಯ್ಯ ಈಚಪ್ಪಾಚಾರಿ ಮಂಟಿ ಕಡೆ ನಡ್ದಿದ್ದೊ. ನಿನ್ನೆ ಏನೇನೆಲ್ಲಾ ಆಗಿತ್ತಲ್ಲಾ ಅಲ್ಲಿಗೆ ಅಪ್ಪನ ವಿನುನೇ ಕರ್ಕಂಡ್ ಹೋರಟತ್. ಕೈಲಿ ಕೋವಿನೂ ಇತ್. ಅಲ್ಲಿ ಹೋಗಿ ನೋಡಿರೆ, ಇಬ್ಬರಿಗೂ ಆಶ್ಚರ್ಯ ! ಒಂದು ದೊಡ್ಡ ಹೊಂಡ! ಬಗ್ಗಿ ನೋಡಿರೆ, ತಲೆ ತಿರುಗುವಷ್ಟು ಆಳ ! ಹೌದು, ಅಲ್ಲಿ ನಿಧಿ ಮಾಯ ಆಗಿತ್ತ್ !
- `ಸುಮಾ'

Wednesday 18 April 2012

ಊರು ನೆನಪಾಗ್ತುಟ್ಟು !


ಊರು ನೆನಪಾಗ್ತುಟ್ಟು..
ಊರಿನ ಮಳೆ ನೆನಪಾಗ್ತಿಟ್ಟು...
ಮಳೇಲಿ ಹಸಿಮಣ್ಣಿನ ವಾಸನೆ !
ಹೊಳೇಂದ ಹತ್ತಿಕಂಡ್ ಬರ್ವ ಎಸೆಂಡ್ ಗ
ಎಸೆಂಡ್ ನ ಒಲೇಲಿ ಸುಡಿಕಾಕನ ಬರ್ವ ಘಮ ಘಮ
ಸುಟ್ಟ ಎಸೆಂಡ್ ಗೆ ಉಪ್ಪು, ಖಾರ ನಿಂಬೆಹುಳಿ ಹಾಕಿ 
ಚಪ್ಪರಿಸ್ವ ಸುಖ !
ಎಲ್ಲಾ...ಎಲ್ಲಾ ನೆನಪಾಗ್ತುಟ್ಟು... 
ಇಲ್ಲಿ ಮೊದಲ ಮಳೆ ಸುರಿಯಕಾಕನ !


- 'ಸುಮಾ'
arebhase@gmail.com

ಅಲರಾಂ ವಿಲನ್ !


ಲಾಲ್ ಬಾಗ್ ದೊಡ್ಡ ಆಲದ ಮರ. ಅದ್ರ ಕೆಳಗೆ ನಾನು ನನ್ನ ಗೂಡೆ ಇಬ್ಬರೇ...ಕೈ ಕೈ ಹಿಡ್ಕಂಡ್ ಭವಿಷ್ಯದ ಬಗ್ಗೆ ಮಾತಾಡ್ತಿದ್ದೊ. ಎಷ್ಟು ಮಕ್ಕ ಬೇಕು... ಹೆಣ್ಣಿರೋಕಾ ಇಲ್ಲ, ಗಂಡು ಆಗಿರೋಕಾ? ಎಲ್ಲಿ ಸ್ಕೂಲ್ಗೆ ಸೇರ್ಸುದು..ಹಿಂಗೆ ನಮ್ಮದೇ ಲೋಕರೂಢಿ ಮಾತುಗ. ನಾ ನಂಗೆ ಹೆಣ್ಣುಕೂಸು ಬೇಕುತೇಳಿರೆ, ಅವ್ಳು ಮಾತ್ರ ಗಂಡು ಕೂಸೇ ಬೇಕೂತಾ ಹಠ ಮಾಡ್ತಿತ್. ಕೊನೆಗೆ ಜಗಳ ಬೇಡಾತ ನಾವಿಬ್ಬರೂ ಒಂದು ಒಪ್ಪಂದಕ್ಕೆ ಬಂದೋ...ಅದು, ಅವಳಿ ಬಾಳೆಹಣ್ಣು ತಿಂಬದು. ಅವಳಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕ ಆದವೆ ಗಡ ! ಮುಂದೆ ಮಕ್ಕಳ್ನ ಎಲ್ಲಿ ಸ್ಕೂಲ್ಗೆ ಸೇರ್ಸುದು? ಏಕಂದ್ರೆ ನಾವಿಬ್ರೂ ಕೆಲ್ಸಕ್ಕೆ ಹೋದವೆ. ಆಗ ಮಕ್ಕಳ್ನ ನೋಡಿಕಣಿಕೆ ಆಕು ಅಲಾ... ನಾನ್ ನಮ್ಮ ಅಪ್ಪ, ಅಮ್ಮನ ಹತ್ರ ಮಕ್ಕಳ್ನ ಬಿಡ್ನೋ ತೇಳಿರೆ, ಅವ್ಳು ಅವ್ಳ ಅಪ್ಪ-ಅಮ್ಮನ ಹತ್ರ ನಮ್ಮ ಮಕ್ಕಳ್ನ ಬಿಡ್ನೋತಾ ಹೇಳ್ತಿತ್...ಕೊನೆಗೆ ಯಾವುದೂ ಬೇಡ, ಒಳ್ಳೆ ಹಾಸ್ಟೆಲ್ಗೆ ಸೇರ್ಸುದುತಾ ತೀರ್ಮಾನ ಆತ್. ಇಷ್ಟೆಲ್ಲಾ ಮಾತಾಡಿ ಆದ್ಮೇಲೆ, ನಮ್ಮ ಮಾತು ಇನ್ನು ಸ್ವಲ್ಪ ಹಿಂದಕ್ಕೆ ಬಂದ್ ಮದುವೆ ದಿನ ಯಾವ ಕಲರ್ನ ಬಟ್ಟೆ ಹಾಕುದೂತಾ ಚರ್ಚೆ ಶುರುವಾತ್. ನನ್ನವಳಿಗೆ ಗುಲಾಬಿ ಬಣ್ಣ ಇಷ್ಟ. ನಾನೋ ಆಕಾಶ ನೀಲಿ ಬಣ್ಣನ ಇಷ್ಟ ಪಡಂವ ! ಕೊನೆಗೂ ಅಲ್ಲೂ ರಾಜೀ ತೀರ್ಮಾನ ! ಅವ್ಳು ನಿಲಿ ಮತ್ತೆ ಗುಲಾಬಿ ಮಿಶ್ರ ಬಣ್ಣದ ಸೀರೆ ಉಟ್ಟರೆ, ನಾ ಅಂಥದ್ದೇ ಬಣ್ಣದ ಕುರ್ತಾ ಹಾಕುದೂತಾ ಒಪ್ಪಚಾರ ಆತ್. ಮುಂದಿನ ಮಾತುಕತೆ ಫಸ್ಟ್  ನೈಟ್ ಬಗ್ಗೆ ! ಯಾರು ಮೊದ್ಲು ಕಿಸ್ ಕೊಡ್ದುತಾ ನಮ್ಮಿಬ್ಬರ ಮಧ್ಯೆ ಮತ್ತೆ ಬಿಸಿ ಬಸಿ ವಾಗ್ಯುದ್ಧ ! ಅವ್ಳು ನೀನೇ ಕೊಡೋಕೂತಾ ಹೇಳಿರೆ, ನೀನೇ ಮೊದ್ಲು ಕಿಸ್ ಕೊಡೋಕೂತ ನನ್ನ ಹಠ. ಹಿಂಗೆ ಮಾತಾಡ್ತ... ಮಾತಾಡ್ತ... ವಾತಾವರಣ ತುಂಬಾ ರೊಮ್ಯಾಂಟಿಕ್ ಆದಂಗೆ ಅನ್ನಿಸ್ತ್. ಮೆಲ್ಲೆ ನನ್ನ ಗೂಡೆನ ತಬ್ಬಿ ಹಿಡ್ಕಂಡ್ ಇನ್ನೆನು ಅವ್ಳ ತುಟಿಗೊಂದು ಸಿಹಿಮುತ್ತು ಕೊಡೋಕು...ಅಷ್ಟೊತ್ತಿಗೆ `ಕೀಂ...ಕೀಂ....ಕೀಂ...' ದರಿದ್ರದ್ದ್ ಅಲ್ರಾಂ ಹೊಡ್ಕಣಿಕೆ ಶುರುಮಾಡೋಕಾ!!! ಇದ್ಯಾವ ಜನ್ಮಲಿ ನನ್ನ ಶತ್ರು ಆಗಿತ್ತೋ ಏನೋ...?

- `ಸುಮಾ'
arebhase@gmail.com

Tuesday 17 April 2012

`ಒಮ್ಮೆ ಕರಗು ವರುಣಾ...'


ಇದೆಂತಾ ಆಟ ?
ಕಣ್ಣಾಮುಚ್ಚಾಲೆನಾ?
ಸೆಖೇಲಿ ಬೆಂದು 
ಬೆವರಾಗ್ತೊಳೊ ನಾವು...
ನಿಂಗೆ ಇನ್ನೂ ತಮಾಷೆನಾ ?
ಕಪ್ಪು ಕಪ್ಪಾಗಿ...
ಹಗಲಲ್ಲೇ ಕತ್ತಲೇ ಮಾಡಿ
ಇನ್ನೇನು ಬಿದ್ದೇಬಿಟ್ಟಂಗೆ 
ನಾಟಕ ಆಡಿ 
ದುಂಡು ಊದಿಸಿಕಂಡ ಗೂಡೆನಂಗೆ 
ಮಾಯ ಆದಿಯ ಇದ್ದಕ್ಕಿದ್ದಂಗೆ !
ಅವನಿಯ ಮೇಲೆ ಕೋಪನಾ ?
ಅವಳಿಗೆಷ್ಟು ಪ್ರೀತಿ ಇನಿಯನ ಮೇಲೆ !
ವರುಣಾ...
ಒಮ್ಮೆ ದಯೆ ತೋರು...
ವಸುಂದರೆಯ ತಂಪು ಮಾಡು !
ಬಾ ಬೇಗ ಬಾ...

- `ಸುಮಾ' 
arebhase@gmail.com

Monday 16 April 2012

`ಅಲ್ಲೂ ಕಲ್ಲು, ಮುಳ್ಳು.. !'


ಯಾಕೋ ಅವ್ಳು ಈಗ ನಂಗೆ
ಲಾಯ್ಕ ಕಾಣ್ತಿಲ್ಲೆ !
ನನ್ನ ದೃಷ್ಟಿನೇ ಹಂಗೆನಾ ?
ಮೊದಲ ಪರಿಚಯದ ದಿನ
ಕಣ್ಣಲ್ಲಿ ಕಣ್ಣಿಟ್ಟು ನೋಡಿಕಾಕನ
ಅವಳೇ ಸುರಲೋಕ ಸುಂದರಿ !
ಕಾಫಿಡೇಲಿ ಎದುರುಬದುರು ಕೂತು
ಕ್ರೀಂ ಕಾಫಿ ಹೀರಿಕಾಕನ
ನಂಗೆ ಕಂಡದ್ ಬರೀ ಅವಳ
ಕೆಂಪು ತುಟಿ !
ಸುರ್ರ್ ಸುರ್ರ್ತಾ ಸ್ಟ್ರಾಲಿ
ಕಾಫಿ ಹೀರ್ತಿದ್ರೆ...
ಆ ಸ್ಟ್ರಾ ಜಾಗಲಿ ನಾ ಇದ್ದರೆ
ಬರೀ ಇಂಥ `ರೇ'ಗಳೇ...
ಆದ್ರೂ ಅಂಥ ಯೋಚನೆಗ 
ಎಷ್ಟು ಲಾಯ್ಕ ಇತ್ತಲ್ಲಾ... ! 
ಇದೆಲ್ಲಾ ಬರೀ ಸ್ವಲ್ಪ ದಿನ !
ಅವ್ಳು ಹತ್ತಿರ ಆಗ್ತಿದಂಗೆ...
ಒಳಮನಸ್ಸು ಗೊತ್ತಾಗ್ತಿದ್ದಂಗೆ
ದೂರದ ಬೆಟ್ಟ ಹತ್ತಿರ ಬರ್ತಿದ್ದಂಗೆ
ಚೂರು ಚೂರೇ ಜ್ಞಾನೋದಯ !
ಅಲ್ಲೂ ಕಲ್ಲು, ಮುಳ್ಳು, ಹಳ್ಳ, ದಿನ್ನೆ !
ಎಲ್ಲವ್ಕೂ ಹಿಂಗೆ ಆದೆನಾ ? 
ಇಲ್ಲೆ.... ನನ್ನಲ್ಲೇ ದೋಷನಾ ?


- `ಸುಮಾ'
arebhase@gmail.com

Sunday 15 April 2012

ಮನಸ್ಸಿನ ಸೇತುವೆ


ಅವೆರಡು ಊರುಗಳ ಮಧ್ಯೆ ಉದ್ದಕ್ಕೆ ಗೆರೆ ಎಳ್ದಂಗೆ ಕಾವೇರಿ ಹೊಳೆ ಹರ್ದದೆ. ಗ್ರಹಚಾರ ನೋಡಿ.. ಈ ಭಾಗಲೇ ಹೊಳೆ ತುಂಬಾ ಆಳ ಇರ್ದು. ಹಂಗಾಗಿ ಈ ಊರಿನವು ಆ ಊರಿಗೂ, ಆ ಊರಿನವೂ ಈ ಊರಿಗೂ ಬಾಕೆ ಆತಿತ್ಲೆ. ಅದೆಂಥ ದ್ವೇಷನೋ ! ಬಹುಶ: ಮಹಾಭಾರತ ಕಾಲಲಿ ಪಾಂಡವರು ಮತ್ತೆ ಕೌರವರಿಗೂ ಇಂಥ ದ್ವೇಷ ಇದ್ದಿರಿಕ್ಕಿಲ್ಲೆ. ಅಂಥ ದ್ವೇಷ ಈ ಎರಡು ಊರಿನವರ ಮಧ್ಯೆ ಇತ್. ಇನ್ನು ಕೊಡುವ, ತರ್ವ ಮಾತಂತೂ ಊಹಿಸಿಕಣಿಕೇ ಆದುಲ್ಲೆ.  ಈ ಕಡೆ ಊರಿನವ್ಕೆ ಹತ್ತಿರದ ಪೇಟೆ ಚೇರಂಬಾಣೆ. ಇನ್ನು ಆ ಕಡೆ ಊರಿನವ್ಕೆ ಹತ್ತಿರ ಇರ್ವ ಪೇಟೆ ನಾಪೋಕ್ಲು. ಆಕಸ್ಮಾತ್ ಈ ಎರಡು ಊರಿನವರ ಪೈಕಿ ಯಾರಾದ್ರೂ ಎದುರು ಬದುರು ಆದೋತಾ ಹೇಳಿರೆ, ಅಲ್ಲೊಂದು ದೊಡ್ಡ ಜಗಳ ಗ್ಯಾರಂಟಿ. ಅಂಥ ಎಷ್ಟು ಜಗಳದಲ್ಲಿ ಸುರ್ದ ರಕ್ತ ಕಾವೇರಿಲಿ ಸೇರಿ ಹೋಗ್ಯುಟ್ಟೋ ಏನೋ...ಈ ಜಗಳಂದಾಗಿನೇ ಈ ಎರಡೂ ಊರುಗಳ ಮಧ್ಯೆ ಇನ್ನೂ ಒಂದು ಸೇತುವೆ ಬಂದಿತ್ತ್ಲೆ. 
ಎರಡೂ ಶ್ರೀಮಂತ ಊರುಗ. ಕಾವೇರಿ ಹೊಳೆ ಬದಿ ಗದ್ದೆ, ಸ್ವಲ್ಪ ಒಳಗೆ ಹೋದ್ರೆ ಕಾಫಿ ತೋಟಗ.... ಹಂಗಾಗಿ ಬದುಕಿಗೆ ಏನೇ ಕೊರತೆ ಇತ್ಲೆ. ಇದ್ದ ಕೊರತೆ ಒಂದೇ ಒಂದು, ಅದ್ ಸಾಮರಸ್ಯ ! ಇಲ್ಲೂ ಲವ್ವರ್ಗ ಇದ್ದೊ... ಆದ್ರೆ ಆ ಲವ್ ಮದುವೆ ವರೆಗೆ ಹೋದ ಉದಾಹರಣೆನೇ ಇಲ್ಲೆ. ಪ್ರೇಮಿಗಳ ಪೈಕಿ ಇಬ್ಬರಲ್ಲಿ ಒಬ್ಬ ಯಾರಿಗೂ ಗೊತ್ತಾಗದೇ ಕಾಣೆಯಾಗಿಬಿಡ್ತಿದ್ದೊ. ಕಾವೇರಿ ಹೊಳೇಲಿ ಹೆಣ ಸಿಕ್ಕಿಕಾಕನನೇ ಗೊತ್ತಾಗ್ತಿದ್ದದ್, ಓಹೋ ಇಲ್ಲೊಂದು ಕೊಲೆ ಆಗಿ ಉಟ್ಟುತಾ.. ! 
ಅನಿ ಈಕಡೆ ಊರಿನ ಭೀಮಯ್ಯನ ಮಂಙ. ಅವ್ವಿ ಆಕಡೆ ಊರಿನ ಗೋಪಾಲನ ಮಗಳು. ಇಬ್ಬರದ್ದೂ ಹೊಳೆ ಕರೆ ಮನೆ. ಅನಿ ಕಿಟಕಿ ಹತ್ರ ನಿಂತ್ಕಂಡ್ ನೋಡಿರೆ, ಆ ಕಡೆ ಬದಿಲಿ ಅವ್ವಿ ಕುದ್ದಕಂಡ್ ತಲೆ ಬಾಚುದು ಕಾಣ್ತಿತ್. ಆದ್ರೂ ಎರಡೂ ಮನೆಯವ್ಕೂ ಮಾತಿಲ್ಲೆ..ಕಥೆಯಿಲ್ಲೆ.. ಕಾರಣನೂ ಗೊತ್ಲೆ. ಅನಿ ಚೇರಂಬಾಣೆ ಕಾಲೇಜಿಗೆ ಹೋದ್ರೆ, ಅವ್ವಿ ನಾಪೋಕ್ಲು ಕಾಲೇಜು. ಇಬ್ಬರದ್ದು ಹೊಳೆಬದಿಲಿ ದಾರಿ. ಇಬ್ಬರೂ ದಿನಾ ಒಂದೇ ಟೈಮಿಗೆ ಹೊರಟವೆ. ಇಂವ ಈಕಡೆ ದಾರಿ, ಅವ್ಳು ಆಕಡೆ ದಾರಿ ! ಹಂಗೆ ಒಂದು 2 ಕಿಲೋಮೀಟರ್ ನಡ್ದ ಮೇಲೆ, ಅನಿ ಎಡಕ್ಕೆ ತಿರುಗಿ ಚೇರಂಬಾಣೆಗೆ ಹೋದೆ. ಅವ್ವಿ ಬಲಕ್ಕೆ ತಿರಗಿ ನಾಪೋಕ್ಲಿಗೆ ಹೋದೆ. ಇಬ್ಬರೂ ಒಬ್ಬರಿಗೊಬ್ಬರು ನೋಡಿಕಂಡವೆ. ಸಣ್ಣ ನಗು ವಿನಿಮಯ ಆದೆ. ಆದ್ರೆ ಇಬ್ಬರೂ ಮಾತಾಡುವ ಧೈರ್ಯ ಮಾತ್ರ ತೋರಿಸಿತ್ಲೆ.
ಹೋಬಳಿ ಮಟ್ಟದ ಸ್ಪೋಟ್ಸರ್್ ನಡೆಯುದು ನಾಪೋಕ್ಲುಲಿ. ಅನಿ ಒಳ್ಳೇ ಓಟಗಾರ. ಹಂಗೆ ಅಂವ ಅವನ ಕಾಲೇಜಿಂದ ನಾಪೋಕ್ಲುಗೆ ಹೋಗಿತ್ತ್. ಇನ್ನು ಅವ್ವಿ ಖೋಖೋ ಆಟಗಾರ್ತಿ.  ಹಿಂಗಿರ್ಕಾಕನ ಅನಿಗೆ ಒಂದು ಸಣ್ಣ ಆಸೆ... ಹೆಂಗಾರೂ ಮಾಡಿ ಅವ್ವಿನ ಮಾತಾಡಿಸೋಕು ! ಅವ್ವಿಗೆ ಆಗ್ಲೇ ಅನಿ ಮೇಲೆ ಲವ್ ಹುಟ್ಟಿಬಿಟ್ಟಿತ್. ಇದ್ನ ಅನಿಗೆ ಹೇಳೊಕೂತ ಅವ್ಳೂ ಕಾಯ್ತಿತ್ ! ಕೊನೆಗೂ ಆ ಕ್ಷಣ ಬಂದೇ ಬಿಡ್ತ್. ನೂರು ಮೀಟರ್ ಓಟಲಿ ಫಸ್ಟ್ ಬಂದಿದ್ದ ಅನಿ ಫ್ರೈಜ್ ತಕ್ಕಂಡ್ ಇತ್ತ ಬಾಕಾಕನ, ಅವ್ವಿ ಧೈರ್ಯ ಮಾಡಿ ಹೋಗಿ ಅವಂಗೊಂದು ಷೆಕ್ಹ್ಯಾಂಡ್ ಕೊಟ್ಟ್ ಕಂಗ್ರಾಟ್ಸ್ ಹೇಳಿಬಿಟ್ಟತ್. ಅನಿಗೆ ಸ್ವರ್ಗಕ್ಕೆ ಮೂರೇ ಗೇಣು ! ಆದ್ರೆ ಇಬ್ಬರೂ `ಐ ಲವ್ ಯೂ' ತಾ ಮಾತ್ರ ಹೇಳ್ತ್ಲೆ.
ಇತ್ತ ಮನೆಗೆ ಬಂದರೆ ಅವ್ವಿಗೆ ಅನಿದೇ ಗ್ಯಾನ... ಅನಿ ಕಥೆನೂ ಇದಕ್ಕಿಂತ ಬೇರೆ ಇತ್ಲೆ. ಆದ್ರೆ ಮತ್ತೊಮ್ಮೆ ಮತಾಡೋ ಧೈರ್ಯ ಇಬ್ಬರಿಗೂ ಬಾತ್ಲೆ. ಯಾವತ್ತೂ ಒಂದಕ್ಕೊಂದು ಸೇರ್ದುಲ್ಲೆಯೇನೋ ಅನ್ನೋ ಹಂಗೆ ಇರ್ವ ಹೊಳೆ ಬದಿಯ ಆ ಎರಡು ದಾರಿ.. ಆ ದಾರಿಲಿ ಹೋಕಾಕನ ನಗು..ಇಷ್ಟೇ ಇವ್ರಿಬ್ಬರ ಮಧ್ಯೆ ಇದ್ದದ್. ಇಬ್ಬರದ್ದೂ ಪಿಯುಸಿ ಮುಗ್ತ್....ಬೇರೆ ಬೇರೆ ಕಡೆನೇ ಡಿಗ್ರಿ ಮಾಡ್ದೊ... ಇಬ್ಬರಿಗೂ ಬೆಂಗಳೂರ್ಲಿ ಕೆಲ್ಸನೂ ಸಿಕ್ತ್.
ಅದೊಂದು ದಿನ ಅನಿ ಅವ್ನ ಊರು ಹಬ್ಬಕ್ಕೆ ಹೊರಟಿತ್ತ್. ಅದು ರಾತ್ರಿ ಬೆಂಗಳೂರು ಬಿಟ್ಟ್ರೆ ಬೆಳಗ್ಗೆ ಮಡಿಕೇರಿ ತಲುಪ್ವ ಬಸ್. ಇನ್ನೇನು ಬಸ್ ಹೊರಡೋಕು... ಒಂದು ಗೂಡೆ ಓಡೋಡಿ ಬಂದ್ ಬಸ್ ಹತ್ತಿ ಅನಿ ಪಕ್ಕನೇ ಕುದ್ದ್ಕಂಡತ್. ನೋಡಿರೆ... ಅವ್ವಿ ! ಇಬ್ಬರಿಗೂ ಆಶ್ಚರ್ಯ. ತುಂಬಾ ಹೊತ್ತು ಮಾತೆ ಹೊರಟತ್ಲೆ. ಅನಿಯೇ ಮೆಲ್ಲೆ ಶುರು ಮಾಡ್ತ್, `ಹೆಂಗೊಳ ಅವ್ವಿ ?' `ನಾ ಲಾಯ್ಕ ಒಳೆ..ನೀ ಹೆಂಗೊಳ?...' ಹಿಂಗೆ ಶುರುವಾದ ಮಾತು, ಕೆಲಸ, ಕಾಲೇಜು, ಸ್ಪೋಟ್ಸರ್್, ಮೊದಲ ಸಲ ಮಾತಾಡ್ದ್... ನದಿ ಬದಿ ದಾರೀಲಿ ನಗು...ಎರಡು ಊರಿನ ಜಗಳದ ವರೆಗೆ ಬಂದ್ ನಿಂತತ್. `ನಾವೇ ಮುಂದೆ ನಿಂತ್ ಎರಡು ಊರುಗಳ್ನ ಒಂದು ಮಾಡೋಕು.. ಇದು ನಮ್ಮ ಕೈಲಿ ಆದೆನಾ...?' ಅವ್ವಿ ಪ್ರಶ್ನೆ. ಅದಕ್ಕೆ ಅನಿ ಉತ್ತರ...`ನಾವಿಬ್ಬರು ಮದ್ವೆಯಾದರೆ ಖಂಡಿತ ಆದೆ...' ಹಿಂಗೆ ಅವು ಬಸ್ಲಿ ಬಾಕಾಕನನೇ ಮದುವೆ ವಿಷಯ ಮಾತಾಡಿಕಂಡೊ. ಏನು ಬೇಕಾರೂ ಆಗಲಿ ಇಬ್ಬರು ಮದುವೆ ಆಕುತಾ ಡಿಸೈಡ್ ಮಾಡ್ಡೊ...ಅವ್ವಿಗೆ ಒಂಥರ ಸಮಾಧಾನ ಆತ್. ಅನಿಗೆ ಹೆಗಲಿಗೆ ಒರಗಿ ನೆಮ್ಮದಿಯ ನಿದ್ದೆ ಮಾಡ್ತ್....
ಅಂದ್ ಅನಿ ಊರುಲಿ ಹಬ್ಬ. ಮಡಿಕೇರಿ ಎಂಎಲ್ಎ ಮುಖ್ಯ ಅತಿಥಿಯಾಗಿ ಬಂದಿದ್ದೊ. ಅಂದ್ ಇನ್ನೂ ಒಂದು ಮುಖ್ಯ ಕಾರ್ಯಕ್ರಮ ಇತ್. ಅದ್ ಸೇತುವೆ ಕೆಲ್ಸಕ್ಕೆ ಗುದ್ದಲಿ ಪೂಜೆ ! ಹೌದು ಎರಡೂ ಊರಿನ ಮಧ್ಯೆ ಒಂದು ಸೇತುವೆನ ಸರ್ಕಾರ ಮಂಜೂರು ಮಾಡಿತ್ತ್. ಇನ್ನು ಜನರ ಮನಸ್ಸುಗಳ ಮಧ್ಯೆ ಸೇತುವೆ ಕಟ್ಟಿಕೆ ಮಾತ್ರ ಬಾಕಿ ಇದ್ದ್. ಆ ಕೆಲ್ಸನ ಅನಿ ಮತ್ತೆ ಅವ್ವಿ ಮಾಡಿವೆ ಬಿಡಿ....
- `ಸುಮಾ' 

Saturday 14 April 2012

ದೇವರು ಕೊಟ್ಟ ಪೀಪಿ !


ಸಣ್ಣದರಲ್ಲಿ ಇರ್ಕಾಕನ ನನ್ನ ತಾತನ ಜೊತೆ ಮಲ್ಗುದುತೇಳಿರೆ ನಂಗೆ ತುಂಬಾ ಖುಷಿ. ರಾತ್ರಿ ಊಟ ಆದುನೇ ಕಾಯ್ತಿದ್ದ್, ತಾತನಿಕ್ಕಿಂತ ಮೊದ್ಲೇ ನಾ ಅವ್ರ ಕಂಬಳಿ ಒಳಗೆ ಸೇರಿ ಬಿಡ್ತಿದ್ದೆ. ಪಾಪ ತಾತ...ಅವ್ಕೆ ಒಂದು ಅಭ್ಯಾಸ ಇತ್. ಒಮ್ಮೊಮ್ಮೆ ತಾತಂಗೆ ಗೊತ್ತಿಲ್ಲದೆ ಅವ್ರ ಹಿಂದುಗಡೆಂದ `ಗಾಳಿ' ಹೋಗಿಬಿಡ್ತಿತ್. ಕೆಲವು ಸಲ ಜೋರಾಗಿ ಸೌಂಡ್ ಬಂದ್ರೆ, ಮತ್ತೆ ಕೆಲವು ಸಲ ಸೈಲೆನ್ಸರ್ ಹಾಕಿದ್ದಂಗೆ ಶಬ್ದನೇ ಆಗದೇ ಆ `ಗಾಳಿ' ಹೊರಗೆ ಹೋಗಿ ಬಿಡ್ತಿತ್. ರಾತ್ರಿ ಟೈಂಲಿ ಇಂತದ್ದೆಲ್ಲಾ ಜೋರಾಗಿ ನಡೀತ್ತಿತ್. ಒಂದ್ಸಲ ನಂಗೆಂಥದ್ದೊ ಕೆಟ್ಟ ಕನಸು ಬಿದ್ದು ಮಧ್ಯರಾತ್ರಿಲಿ ಎಚ್ಚರ ಆಗಿಬಿಟ್ಟಿತ್. ಅಷ್ಟೊತ್ತಿಗೆ ತಾತ ಕಡೇಂದ ಆ `ಸೌಂಡ್' ಕೇಳಿಕೆ ಶುರುವಾತ್. ಮೊದ್ಲೇ ಕೆಟ್ಟ ಕನಸು ಬಿದ್ದು ಬೆವರ್ತಿದೆ. ಈಗ ಈ ಸೌಂಡ್ ಬೇರೆ... ಕೊನೆಗೆ ನಂಗೆ ತಡೆಯಕ್ಕೆ ಆಗದೆ, ತಾತನ ಅಲ್ಲಾಡಿಸಿ, ಅಲ್ಲಾಡಿಸಿ ಎಚ್ಚರ ಮಾಡ್ದೆ.
`ಎಂಥ ಕೂಸು ನಿಂದ್, ಸುಮ್ನೆ ಮಲಗಿಕೆ ಆಲೆನಾ...'ತಾ ತಾತ ನನ್ನನ್ನ ಕೇಳ್ತಿದ್ದಂಗೆ, ಮತ್ತೆ ಕಂಬಳಿ ಒಳಗೆಂದ ಅದೇ `ಪುರ್ರ್...' ಸೌಂಡ್ ! ನಂಗೆ ಕುತೂಹಲ ತಡೆಯಕ್ಕೆ ಆಗದೆ, ತಾತನ ಕೇಳಿಯೇ ಬಿಟ್ಟೆ, `ತಾತಾ, ತುಂಬಾ ಹೊತ್ತುಂದ ಕೇಳ್ತೊಳೆ...ಆಗಾಗ್ಗ ನಿಮ್ಮ ಕಂಬಳಿ ಒಳಗೆಂದ ಅದೆಂಥದ್ದೋ ಸೌಂಡ್ ಬಂದದೆಯಲ್ಲಾ... ಎಂಥ ತಾತ ಅದ್? ' ತಾತ ಬೊಚ್ಚು ಬಾಯಿಲೇ ನಗಾಡಿಕಂಡ್ ಒಮ್ಮೆ ನನ್ನ ಮುಖ ನೋಡ್ದೊ...`ಕೂಸು ಅದೆಲ್ಲಾ ನಿಂಗೆ ಅರ್ಥ ಆಲೆ...ಈಗ ಸುಮ್ಮನೆ ಮಲ್ಕ..'ತಾ ಹೇಳಿಕಂಡ್ ನನ್ನ ನಿದ್ರೆ ಮಾಡಿಸಿಕೆ ನೋಡ್ದೊ...ನಾನು ಅಷ್ಟು ಸುಲಭಕ್ಕೆ ನಿದ್ರೆ ಮಾಡಿನೆನಾ...`ಇಲ್ಲೆ ತಾತ, ನಂಗೆ ನೀವು ಹೇಳದಿದ್ದರೆ ನಿದ್ದೆನೇ ಬಾಲೆ...ನೀವು ಈಗಲೇ ಹೇಳೊಕು...'ತಾ ಹೇಳಿಕಂಡ್ ನಾ ಮರಡಿಕೆ ಶುರು ಮಾಡ್ದೆ. `ಅಯ್ಯೊ ಕೂಸು ಮಕ್ಕ ರಾತ್ರಿ ಹೊತ್ತು ಹಿಂಗೆಲ್ಲಾ ಮರಡಿಕೆ ಆದ್...ನಿದ್ದೆ ಮಾಡಪ್ಪಾ...ಜೋ...ಜೋ...'ತಾ ಮೆಲ್ಲೆ ನಂಗೆ ತಟ್ಟಿಕೆ ಶುರು ಮಾಡ್ದೊ. ನಂಗೆ ಸಿಟ್ಟ್ ಬಾತ್..ಅವ್ರ ಕೈನ ದೂಡಿ ಹಾಕಿ, `ಕಂಬಳಿ ಒಳೆಗೆಂದ ನೀವು ಎಂಥ ಸೌಂಡು ಮಾಡ್ದುತಾ ಹೇಳದಿದ್ದರೆ ನಿಮ್ಮ ಜೊತೆ ಮಾತಾಡ್ದುಲ್ಲೆ... ಟೂ... ಟೂ..'ತಾ ಹೇಳಿ ತಿರುಗಿ ಮಲಕ್ಕಂಡೆ...ಆಗ ತಾತ `ಕೂಸು, ಹಂಗೆ ಹಠ ಮಾಡಿರೆ ಹೆಂಗೆ? ಆ ಸೌಂಡ್ ಎಂಥತಾ ತಾನೆ ನಿಂಗೆ ಗೊತ್ತಾಕು...'ತಾ ಕೇಳ್ದೊ. ನಂಗೆ ಖುಷಿ ಆತ್.. ಮತ್ತೆ ತಾತನ ಕಡೆಗೆ ತಿರುಗಿದೆ. ಆಗ ಅವು ನನ್ನ ತಲೆನ ನಿಧಾನಕ್ಕೆ ಪೂಜಿಕಂಡ್ ಹೇಳ್ದೊ... `ಕೂಸು, ಅದ್ ದೇವರು ಕೊಟ್ಟ ಪೀಪಿ...ನಿಮಿಗೆಲ್ಲಾ ನಾವು ಪೀಪಿ ತೆಗ್ದು ಕೊಟ್ಟವೆಯಲ್ಲಾ.. ಆದ್ರೆ ನಮಿಗೆ ಯಾರು ಕೊಟ್ಟವೆ? ಅದ್ಕೆ ವಯಸ್ಸಾದ್ಮೇಲೆ ಆಟಾಡಿಕಂಡ್ ಇರ್ಲಿತಾ ದೇವರೇ ಆ ಪೀಪಿ ಕೊಟ್ಟದ್. ನಮ್ಗೆ ಬೇಜಾರು ಆಕಾಕನೆಲ್ಲಾ ಅದ್ನ ಊದ್ತಿದ್ದವೆ...ಗೊತ್ತಾತಾ? ಈಗ ಮಲ್ಕ...' ನನ್ನ ತಾತ ಈಗ ಇಲ್ಲೆ. ಆದ್ರೆ ಎಲ್ಲಾರೂ ಆ `ಹಿಂಬದಿಯ ಗಾಳಿ' ಶಬ್ದ ಕೇಳಿರೆ ನಂಗೆ `ದೇವರು ಕೊಟ್ಟ ಪೀಪಿ' ನೆನಪಾದೆ... ಅದು ನಿಮ್ಮ ಹತ್ರನೂ ಇರೋಕು ಕಂಡದೆಯಲ್ಲಾ...?
- `ಸುಮಾ'
arebhase@gmail.com

Friday 13 April 2012

ಜಂಬದ ಕೋಳಿ ನನ್ನ ಗೂಡೆ !


ದಿನಾ ಕನಸ್ಲಿ ಕಾಡುವ
ಗೂಡೆ ಯಾರವ್ಳು ?
ಆಕಾಶನೇ ಮೈಗೆ ಸುತ್ತಿಕಂಡ ಹಂಗೆ..
ತಿಳಿ ನೀಲಿ ಬಣ್ಣದ ಸೀರೆ !
ಮುಖ....?
ಅಸ್ಪಷ್ಟ...! 
ಅದ್ರೂ... ಸ್ವಲ್ಪ ಸ್ವಲ್ಪನೇ ಕಣ್ಣ ಮುಂದೆ
ಬಂದಂಗೆ ಆಗ್ತುಟ್ಟು !
ಅವ್ಳೇ....ಅವ್ಳೇ....ಚಂದಿರನ ಮುಖದವ್ಳು !
ನಯಾಗಾರಕ್ಕೆ ಕಡುಕಪ್ಪು ಬಣ್ಣ ಹೊಡೆದಂಗೆ
ಮೊಣಕಾಲು ಮುಟ್ಟ ಕೂದಲ ಝರಿ !
ಒಮ್ಮೆ ಇತ್ತ ಕಡೆ ತಿರುಗಿ 
ನಗಾಡುನೇ.....
ಅಲ್ಲೂ ಹುಚ್ಚು ಹಿಡಿಸ್ವ ಮಾದಕತೆ !
ಬ್ರಹ್ಮ ಪುರುಷೋತ್ತ್ಲಿ ಇರ್ಕಾಕಕನ
ದಾಳಿಂಬೆ ಬೀಜಗಳ್ನೇ ತಕ್ಕಂಡ್
ಪೋಣಿಸ್ಯುಟ್ಟು ಕಂಡದೆ..
ಆ ಫಳ ಫಳ ಹೊಳೆವ ಸಾಲು ಹಲ್ಲುಗಳ್ನ !
ಅಬ್ಬಾ ಆ ಮಾತೋ...
ಕೇಳೊಕು...ಕೇಳೊಕು...
ಮತ್ತೆ ಮತ್ತೆ ಕೇಳೊಕು ! 
ಅದೊಂದಿದ್ದರೆ ಬೇರೆ ಏನೂ ಬೇಡ...
ಅಂಥ ಸುರಸಂದರಿಗೂ ಒಂದು 
ಕಪ್ಪು ಚುಕ್ಕೆ !
ಸ್ಪಟಿಕಕ್ಕೆ ದೃಷ್ಟಿ ಆಕಾಗದಲ್ಲಾ ! 
ಒಮ್ಮೊಮ್ಮೆ ಜಾಸ್ತಿ ಅನ್ನಿಸಿದ್ರೂ 
ಅದೂ ಚೆಂದನೆ !
ಏಕಂದ್ರೆ ಅವ್ಳು ನನ್ನ ಗೂಡೆ !

- `ಸುಮಾ'
arebhase@gmail.com

Thursday 12 April 2012

ಆಕಾಶ ನೀಲಿ ಬಣ್ಣದ ಕುರ್ತಾ ಕಣ್ಣೀರು !


ಹಾಯ್...ಹೆಂಗೊಳರಿ ? ಓ ನಾ ನನ್ನ ಪರಿಚಯನೇ ಮಾಡಿಕಂಡತ್ಲೆ ಅಲಾ, ನನ್ನ ಹೆಸ್ರು ಕುರ್ತಾ... ಮದುವೆ ಮತ್ತೆ ಏನಾದ್ರೂ ದೊಡ್ಡ ಜಂಬರಗ ಇದ್ದರೆ ನನ್ನ ನೆನಪಾದೆ. ಹೈದಂಗ ನನ್ನ ಹಾಕಂಡ್ ಮಿಂಚಿವೆ. ಗೂಡೆಗಳಿಗೆ ಲೈನ್ ಹೊಡ್ದವೆ. ಕೋರಮಂಗಲ ಫೋರಮ್ ಮಾಲ್ ಎದುರು ಇರ್ವ  ಕುರ್ತಾ ಕಲೆಕ್ಸನ್ಸ್ನಲ್ಲಿ ತುಂಬಾ ನೆಮ್ಮದಿಯಾಗಿ ನನ್ನಿಷ್ಟಕ್ಕೆ ನಾನಿದ್ದೆ. ಬಿಳಿ ಬಣ್ಣದ ಗೊಂಬೆಗೆ ಆಕಾಶ ನೀಲಿ ಬಣ್ಣದ ನನ್ನನ್ನ ಹಾಕಿ ಶೋಕೇಸ್ ಒಳಗೆ ಇಟ್ಟಿದ್ದೊ. ಅವನ್ಯಾವನೋ ಪುಣ್ಯಾತ್ಮ ಫೋರಂಮಾಲ್ನ ಮೆಕ್ಡೊನಾಲ್ಡ್ಲಿ ಕುದ್ದಕಂಡ್ ಹೊಟ್ಟೆತುಂಬಿಸಿಕಾಕನ ನನ್ನ ದೂರಂದ ನೋಡಿಬಿಟ್ಟಿತ್. ಅಷ್ಟಕ್ಕೇ ಅಂವ ನಂಗೆ ಮರುಳಾಗಿಬಿಡ್ದಾ....ಸೀದಾ ನಾನಿದ್ದಲ್ಲಿಗೆ ಬಂದವನೇ ನನ್ನ ಓನರ್ ಹೇಳ್ದ ರೇಟ್ ಕೊಟ್ಟ್ ಮನೆಗೆ ತಕ್ಕಂಡ್ ಹೋಗಿಬಿಡ್ತ್. ಇನ್ನೆರಡ್ ತಿಂಗಳಲ್ಲಿ ಅವನ ಮದುವೆ. ಆದಿನ ರಿಸೆಪ್ಷನ್ ಹೊತ್ತಿಗೆ ಹಾಕಿಕೆ ಅಂವ ನನ್ನನ್ನ ತಕ್ಕಂಡಿತ್.
ಅಬ್ಬಾ ನಂಗೆ ಎಂಥಾ ಟ್ರೀಟ್ಮೆಂಟ್ ! ಅವನ ವಾರ್ಡ್ ರೋಬ್ನಲ್ಲಿ ನಂಗೆ ಬೇರೆಯದ್ದೇ ಕೋಣೆ. ಆಗ್ಲೇ ಅಲ್ಲಿದ್ದ ಟೀಷರ್ಟ್  ಫಾರ್ಮಲ್ ಷರ್ಟ್ ಗಳಿಗೆ  ನನ್ನ ನೋಡಿ ಹೊಟ್ಟೆ ಉರಿ. ಅವು ಎಷ್ಟೋ ದಿನಂದ ನೀರು ಕಾಣದೆ, ಇಸ್ತ್ರಿ ಇಲ್ಲದೆ ವಾಸನೆ ಹೊಡೀತಾ ಅಲ್ಲಿ ಬಿದ್ದಿದ್ದೊ. ಆದ್ರೆ ನಂಗೆ ಮಾತ್ರ ಒಳ್ಳೇ  ಪರ್ಫ್ಯೂಮ್ ಹಾಕಿ ಇಟ್ಟ್ ಲಾಯ್ಕ ನೋಡ್ಕಳ್ತಿತ್. ಮನೇಲಿ ಇರ್ಕಾಕನ ಗಂಟೆಗೆ ಒಂದ್ಸಲ ನನ್ನ ನೋಡಿತ್ಲೆತೇಳಿರೆ ಅವಂಗೆ ಸಮಧಾನನೇ ಇಲ್ಲೆ. ಮದುವೆ ದಿನ ನನ್ನ ಹಾಕ್ಕಂಡ್ರೆ ಹೆಂಗೆ ಕಾಣ್ದುತಾ ಹಂಗೆನೇ ಮಲಗಿಕಂಡ್ ಕನಸ್ ಕಾಣ್ತಿತ್. ನಂಗೋ ತುಂಬಾ ಖುಷಿ, ಅಲ್ಲಿ ಅಂಗಡಿಲಿ ಇರ್ಕಾಕನ ಆ ಹುಡುಗರು ದಿನಕ್ಕೆ ಒಂದು ಸಲ ನನ್ನ ಮೇಲಿದ್ದ ದೂಳು ತೆಗೆದ್ರೆ ಅದೇ ನನ್ನ ಪುಣ್ಯ. ಆದ್ರೆ ಈಗ ಇಲ್ಲಿ ಇವನ ಮನೇಲಿ ನಾನೇ ಮಹಾರಾಜ !
ಒಂದು ದಿನ ಇವನ ಅಪ್ಪನ ಕಾಲ್ ಬಾತ್. ಎಂಥ ಹೇಳ್ದೊ ನಂಗೊಂದೂ ಕೇಳಿತ್ಲೆ... ಬೈಕ್ ತಕ್ಕಂಡ್ ಬುರ್ರಾತಾ ಹೋಗಿಬಿಡ್ತ್. ವಾಪಸ್ ಬಾಕಾನ ಅವನ ಕೈಲಿ ಮಿರ ಮಿರ ಮಿಂಚುವ ಹೊಚ್ಚ ಹೊಸ ಪ್ಯಾಂಟ್, ಅದಕ್ಕೆ ಸರಿಯಾದ ಕಲರ್ನ ಷರ್ಟ್ ಟೈ... ಜೊತೆಗೊಂದು ಕೋಟ್. ಅದ್ ಅವನ ಅಪ್ಪ ಕೊಡ್ಸಿದ್. ರಿಸೆಪ್ಸನ್ಗೆ ಅದೇ ಹಾಕ್ಕಣೋಕುತಾ ಒತ್ತಾಯ ಬೇರೆ ಮಾಡಿದ್ದೊ ಗಡ. ಅಪ್ಪನ ಮಾತು ಮೀರುದು ಬೇಡಾತ ಅಂವ ಆ ಡ್ರೆಸ್ನ ಹಂಗೆ ತಂದಿತ್. ಈಗ ಅದ್ರ ಮೇಲೆನೇ ಅವನ ಇಂಟ್ರೆಸ್ಟ್. ವಾರ್ಡ್ ರೋಬ್ ಲಿ  ನಾನಿದ್ದೆಯಲ್ಲಾ ಆ ಜಾಗಕ್ಕೆ ಆ ಹೊಸ ಡ್ರೆಸ್ ಬಾತ್. ನಂಗೆ ಆ ವಾಸನೆ ಹೊಡೆಯುವ ಷರ್ಟ್ ಗಳ ಜೊತೆ ಸ್ಥಾನ ! ಅಲಾ ಇವಂಗೆ ಒಂದು ಚೂರು ಸ್ವಂತ ಬುದ್ಧಿ ಬೇಡ... ನನ್ನನ್ನ ಇಷ್ಟಪಟ್ಟು ತಕ್ಕಂಡ್ಬಂದ್ ಹಿಂಗೆ ಮಾಡ್ತುಟ್ಟಲ್ಲಾ....ನನ್ನನ್ನ ಮದುವೆ ದಿನ ಹಾಕ್ಕಂಡ್ರೆ ಅವನ ಅಪ್ಪಂಗೆ ಬೇಜಾರು ಗಡ. ಹಂಗಾರೆ ನನ್ನ ನೋವು ಕೇಳ್ದು ಯಾರು? ಆ ಅಂಗಡಿಲಾದ್ರೂ ನೆಮ್ಮದೀಲಿ ಇದ್ದೆ. ಇಲ್ಲಿ ತಂದು ಹಿಂಗೆ ಹಾಕಿಬಿಟ್ಟುಟ್ಟಲ್ಲಾ.... ಈ ಮನುಷ್ಯರ ಮನಸ್ಸೇ ಹಂಗೆ...ಮಂಗನ ಥರ. ಒಂದು ಮರಂದ ಒಂದು ಮರಕ್ಕೆ ಹಾರುದೇ ಕೆಲ್ಸ ! ಯಾರಿಗೂ ಸ್ವಂತಿಕೆ ಇಲ್ಲೆ....

- `ಸುಮಾ'
arebhase@gmail.com

ಕೊಡಗಿನ ಅದ್ಭುತ ಪ್ರಕೃತಿ ಸೌಂದರ್ಯ !

ಮಾಂದಲಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ

ಮಾಂದಲಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ



ಮಾಂದಲಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ
ಮಾಂದಲಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ
ಮಾಂದಲಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ

ಕೋಟೆ ಅಬ್ಬಿ


ಫೋಟೋಗ: ಗುಡ್ಡೆಮನೆ ಯೋಗಾನಂದ


Wednesday 11 April 2012

ನಿದ್ದೆ ಮಾಡಿಸಿದ ಭೂಮಾತೆ !


ನಂಗೆ ಹಗಲೇ ರಾತ್ರಿ !
ಮಟ್ಟಮಧ್ಯಾಹ್ನ ಉರಿಬಿಸಿಲಿಗೆ
ಫ್ಯಾನ್ ತಂಗಾಳಿ ಕೆಳಗೆ
ಸವಿ ನಿದ್ದೆ !
ಏನೋ ಒಂದು ಸುಂದರ ಕನಸು
ಮತ್ತೆ ಮಗುವಾದಂಗೆ !
ಬೆತ್ತದ ದೊಡ್ಡ ತೊಟ್ಟಿಲಲ್ಲಿ
ನಾ ಬಾಲಕೃಷ್ಣ !
ದೂರದ ಅಣ್ಣಮ್ಮ ದೇವಸ್ಥಾನದ
ಹಾಡು...
ಅದೇ ನಂಗೆ ಜೋಗುಳ !
ಹೂಂ... ತೊಟ್ಟಿಲು ಅಲ್ಲಾಡ್ತುಟ್ಟು
ಯಾರೋ ತೂಗ್ತೊಳೊ !
ಜೋಂಪಿನಲ್ಲಿ ಇದ್ದ ನಂಗೆ
ಮತ್ತೆ ಸಖತ್ ನಿದ್ದೆ...
ಸಂಜೆ 6 ಗಂಟೆಗೆ ಎದ್ದೆ !
ಟಿವಿ ನ್ಯೂಸ್ ನೋಡಿನೆ...
ಬ್ರೇಕಿಂಗ್ ನ್ಯೂಸ್
ಬೆಂಗಳೂರಲ್ಲೂ ಭೂಕಂಪ !
ಹಂಗಾರೆ ನನ್ನ ತೊಟ್ಟಿಲು ತೂಗಿದ್ದು
ಭೂಮಾತೆ !
- `ಸುಮಾ'
arebhase@mail.com

Tuesday 10 April 2012

ಅಲ್ಲಿ ಕೋಗಿಲೆ... ಇಲ್ಲಿ `ಹದ್ದು' !


ಅದು ನಮ್ಮೂರು...
ಉಗಾದಿ ಹಿಂದಿನ ದಿನ
ಜೋರು ಮಳೆ !
ವರ್ಷದ ಕೋಟಾ ತೀರೊಕಲಾ...
ಬೆವು ಬೆಲ್ಲದ ರುಚಿ 
ಬಾಯಿಂದ ಹೋಕೆ ಮೊದ್ಲು
ಮತ್ತೊಂದು ಮಳೆ !
ಹೊಸ ವರ್ಷದ ಬೋಣಿ...
ಮನೆ ಮುಂದಿನ ಮಾವಿನ
ಮರಲಿ ಎಳೆ ಚಿಗುರು..
ಅಲ್ಲೆಲ್ಲೋ ಒಳಗಿಂದ
ಕುಹೂ ಕುಹೂ ಸಂಗೀತ
ಮೈಯೆಲ್ಲಾ ತೂತು ಆದಂಗೆ
ಸೋರಿ ಬರ್ವ ಬೆವರು...
ಅದ್ಯಾರಿಗೆ ಗೊತ್ತಾತೋ ನಮ್ಮ
ಕಷ್ಟ...
ಸಂಜೆ ಹೊತ್ತುಲಿ ತಂಗಾಳಿ ! 
ಇಲ್ಲೇನುಟ್ಟು ಮಣ್ಣು ?
ಆಕಾಶ ಮುಟ್ಟುವಂಗೆ ಎತ್ತರದ
ಕಾಂಕ್ರಿಟ್ ಕಾಡು...
ಸೂರ್ಯನ ಜೊತೆಲೇ ಹುಟ್ಟಿಕೊಳ್ವ ಸೆಖೆ !
ಫ್ಯಾನ್ ಹಾಕಿರೂ ಸುಡು ಗಾಳಿ
ಎಲ್ಯುಟ್ಟು ಕೋಗಿಲೆ ?
ಇಲ್ಲಿರ್ದು... 
ಬರೀ ಕುಕ್ಕಿ ಕುಕ್ಕಿ ತಿನ್ವ `ಹದ್ದುಗಳೇ...'

- `ಸುಮಾ'
arebhase@gmail.com

Saturday 7 April 2012

ನೈಟ್ ಶಿಫ್ಟ್ !


ಜಗಕ್ಕೆಲ್ಲಾ ಸವಿನಿದ್ದೆ
ನಂಗಂತೂ ಜಾಗರಣೆ !
ಹಗಲೆಲ್ಲಾ ಬೆವರು ಸುರಿಸಿದವ್ಕೆ
ಮೆತ್ತನೆ ಹಾಸಿಗೆಲಿ ವಿಶ್ರಾಂತಿ 
ಕನಸುಗಳ ಜೊತೆ ಆಟ !
ನಾನು ಉಲ್ಟಾ ಆಸಾಮಿ...
ಸೂರ್ಯ ಹುಟ್ಟುಕಾಕನ 
ಕಂಬಳಿಯೊಳಗೆ ಮೈ !
ದೊಡ್ಡ ದೊಡ್ಡ ಕಟ್ಟಡಗಳಾಚೆ
ನೇಸರ ಮರೆಯಾಕನ ನಂಗೆ
ಶುಭ ಮುಂಜಾವು !
ಪಕ್ಕದ ಫ್ಲಾಟ್ಲಿ ಹೊಸದಾಗಿ
ಮದುವೆಯಾದವು...
ನಾ ಹೊರಗೆ ಹೆಜ್ಜೆ ಇಡಿಕಾಕನ
ಅವ್ಕೆ ರೂಮೊಳಗೆ ಪ್ರವೇಶದ ಟೈಂ
ಅಲ್ಲಿ ರಸರಾತ್ರಿ.. !
ನಂಗೆ ಶಿವರಾತ್ರಿ.. !
ಬೆಳಗ್ಗಿನವರೆಗೆ ಪದಗಳ ಜೊತೆ
ಆಟ... !
ಮತ್ತೆ ಭೂಮಿ ತಿರುಗಿದೆ !

- `ಸುಮಾ'

Thursday 5 April 2012

ನನ್ನ ಊರಿನ ಕಥೆ


ಕೊಡಗಿನ 
ಪುಟ್ಟ ಮತ್ತೆ ತುಂಬಾ ಲಾಯ್ಕದ ಊರು ಮರಗೋಡು. ಇಲ್ಲೇ ಪಕ್ಕಲಿ ಒಂದು ಸಣ್ಣ ಗ್ರಾಮ ಉಟ್ಟು. ಅದೇ ಹೊಸ್ಕೇರಿ... ಈ ಗ್ರಾಮಲಿ ಒಂದು ವಿಶೇಷ ದೇವಸ್ಥಾನ. ಹೆಸ್ರೂ ಅಷ್ಟೇ ಲಾಯ್ಕ. ಚಿಲಿಪಿಲಿ ಮಹಾದೇವ ದೇವಸ್ಥಾನ ! ಹೊಸ್ಕೇರಿತೇಳುವ ಗ್ರಾಮ ಹುಟ್ಟಿಕೆ ಕಾರಣ ಇದೇ ಮಹಾದೇವ ದೇವಸ್ಥಾನ. ತುಂಬಾ ವರ್ಷಗಳ ಹಿಂದೆ ಹೊಸ್ಕೇರಿತೇಳುದು ದೊಡ್ಡ ಕಾಡು. ಯಾರೂ ವಾಸ ಮಾಡಿಕೆ ಆಗದ ದಟ್ಟಡವಿ. ಆದ್ರೆ ಅಲ್ಲಿಗೆ ಸೌದೆ ಕಡ್ಕಂಡ್ ಹೋಕೆ ಜನ ಬರ್ತಿದ್ದೊ. ಒಬ್ಬ ಸನ್ಯಾಸಿ ಒಮ್ಮೆ ಈ ಕಾಡ್ ಗೆ ಅಲೆದಾಡಿಕಂಡ್ ಬಂದಿತ್.  ಆಗ ಅವಂಗೆ ಅಲ್ಲೊಂದು ಗುಹೆ ಮತ್ತೆ ಅಲ್ಲೊಂದು ಉದ್ಭವ ಶಿವಲಿಂಗ ಕಂಡತ್. ಹಂಗಾಗಿ ಆ ಸನ್ಯಾಸಿ ಅಲ್ಲೇ ತಪಸ್ಸಿಗೆ ಕುದ್ದುಕಣ್ತ್. ಕೊನೆಗೆ ಇವನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷ ಕೂಡ ಆತ್. ಅಲ್ಲಿಂದ ಆ ಸನ್ಯಾಸಿ ದೊಡ್ಡ ಸ್ವಾಮೀಜಿಯಾಗಿ ಬದಲಾತ್. ಸೌದೆ ಕಡಿಯಕ್ಕೆ ಬರ್ತಿದ್ದ ಜನಕ್ಕೆ ಇಲ್ಲಿ ಸ್ವಾಮೀಜಿ  ಇರುದು ಗೊತ್ತಾತ್. ಅವು ದಿನಾ ಇಲ್ಲಿಗೆ ಬಾಕೆ ಶುರುಮಾಡ್ದೊ. ಬಾಕಾಕನ ಜೊತೇಲಿ ಹಣ್ಣುಹಂಪಲು ತರ್ತಿದ್ದೊ. ಸ್ವಾಮೀಜಿ ಈ ಜನಗಳಿಗೆ ಪ್ರವಚನ ಕೊಡ್ತಿತ್. ಸ್ವಾಮೀಜಿ ಹೇಳಿದ್ದನ್ನೆಲ್ಲಾ ಕಣ್ಮುಚ್ಚಿಕಂಡ್ ಪಾಲಿಸ್ತಿದ್ದೊ. ಹಿಂಗೆ ಇರ್ಕಾಕನ ಒಂದು ದಿನ ತನ್ನ ನೋಡಿಕೆ ಬರ್ತಿದ್ದ ಜನಗಳಿಗೆ ಸ್ವಾಮೀಜಿ ಒಂದು ಸಲಹೆ ಕೊಟ್ಟತ್. ಕಾಡ್ ಕಡ್ದ್ ಮನೆಗಳ್ನ ಕಟ್ಟಿಕಣಿಕೆ ಹೇಳ್ತ್. ಸ್ವಾಮೀಜಿ ಮಾತು ಕೇಳಿ ಜನ ಅಲ್ಲಿ ಮನೆಗಳ್ನ ಕಟ್ಟಿಕೊಂಡು. ಆ ಊರಿಗೆ ಹೊಸಕೇರಿ  ಅಂತ ಹೆಸ್ರು ಕೂಡ ಇಟ್ಟೊ. ಅದೇ ಹೊಸಕೇರಿ ಈಗ ಜನಗಳ ಬಾಯಿಲಿ ಹೊಸ್ಕೇರಿ ಆಗುಟ್ಟು ! 


ಈಗಲೂ ಇಲ್ಲಿ ದೇವಸ್ಥಾನಲಿ ಮಧ್ಯರಾತ್ರಿ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಿದೆಗಡ ! ಜೊತೆಲಿ ಘಂಟಾನಾದನೂ ಕೇಳಿಬಂದದೆ. !ಹಂಗಾಗಿ ಈ ದೇವಸ್ಥಾನಕ್ಕೆ ಚಿಲಿಪಿಲಿ ಮಹಾದೇವ ದೇವಸ್ಥಾನತಾ ಹೆಸ್ರು.  ಇಲ್ಲಿ ನಿತ್ಯ ಪೂಜೆ ನಡ್ದದೆ. ಪ್ರತಿವರ್ಷ ಶಿವರಾತ್ರಿ ದಿನ ಮಹಾದೇವಂಗೆ ವಿಶೇಷ ಪೂಜೆನೂ ಇದ್ದದೆ. ಜೊತೆಗೆ ಊರವು ಜಾಗರಣೆ ಮಾಡಿವೆ. ಅಲ್ಲದೆ ಈ ದೇವಸ್ಥಾನ ತುಂಬಾ ಕಟ್ಟುನಿಟ್ಟು. ಅಶುದ್ಧಲಿ ದೇವಸ್ಥಾನಕ್ಕೆ ಪ್ರವೇಶ ಮಾಡಿಕೆ ನೋಡಿರೆ, ಗುಹೆಯ ಅಡ್ಡಕ್ಕೆ ಹುಲಿ ಮಲಗಿದಂಗೆ ಕಂಡದೆ ಗಡ....ಸಮಯ ಸಿಕ್ಕಾಕನ ನೀವೂ ಒಮ್ಮೆ ಈ ದೇವಾಲಯಕ್ಕೆ ಬನ್ನಿ...


- 'ಮಂದಸ್ಮಿತ'
(ಮಾಹಿತಿ: ಶ್ರೀ ಶಿವರಾಮ ಶಾಸ್ತ್ರಿ ಅವ್ರ 'ಚಿಲಿಪಿಲಿ ಮಹಾದೇವ' ಪುಸ್ತಕ )
arebhase@gmail.com

Wednesday 4 April 2012

ಕಥೆಯ ವ್ಯಥೆ...


ಕಥೆ ಬೇಕು ಗಡ.. 
ನನ್ನ ಗೂಡೆಗೆ ದಿನಕ್ಕೊಂದು
ಕಥೆ !
ಎಲ್ಲಿಂದ ತರ್ಲಿ ಕಥೆ ?
ನಾ ಕಥೆ ಹೇಳಿರೆ ಮಾತ್ರ
ಅವ್ಳಿಗೆ ನಿದ್ದೆ...!
ರಾಜರ ಕಥೆ... ರಾಣಿಯರ ಕಥೆ...
ಪ್ರಣಯದ ಕಥೆ...ಶೃಂಗಾರದ ಕಥೆ..
ಕಥೆಯೊಳಗೆ ಅವ್ಳೇ ಹೀರೋಯಿನ್ !
ನಾ ಹೀರೋನಾ ? ಇನ್ನೂ ಗೊತ್ಲೆ..!
ಹೆದರುಪುಕ್ಕಲಿ ಅವ್ಳು !
ರಾಕ್ಷಸರ ಕಥೆ ಬೇಡಗಡ... 
ಕನಸುಲಿ ಕಾಡುವ ಭಯ !
ಅವ್ಳೂ ದೊಡ್ಡ ಕಥೆಗಾರ್ತಿ
ಎಂಥೆಂಥ ಕಥೆಗಳ ಒಡತಿ ! 
ಮೂರು ದಿನಗಳಿಂದ ಒಂದೇ ಕಥೆ
ಕಚ - ದೇವಯಾನಿ !
ಸತ್ತ ಶುಕ್ರಚಾರ್ಯಂಗೆ ಇನ್ನೂ 
ಜೀವ ಬಾತ್ಲೆ !
ಕಚ ಮೃತ ಸಂಜೀವಿನಿ ಮಂತ್ರ ಹೇಳ್ತಿದ್ದಂಗೆ
ನನ್ನವಳಿಗೆ ನಿದ್ದೆ !
ಪಾಪ ಶುಕ್ರಚಾರ್ಯ !
ನೋಡೊಕು... 
ಇಂದಾದ್ರೂ ಅವಂಗೆ ಜೀವ ಬಂದದೆಯಾ ?

`ಸುಮಾ'

Tuesday 3 April 2012

`ಗಜಮುಖದವಗೆ ಗಣಪಗೆ....'


ಚೌಂಡಿಕಳಕ್ಕೆ ಮೂರು ಲಾರಿಗ ಒಟ್ಟಿಗೆ ಬಾತ್ತೇಳಿರೆ ನಮ್ಗೆಲ್ಲಾ ತುಂಬಾ ಖುಷಿ...ಹೌದು, ಅಂದು ನಮ್ಮೂರಲ್ಲಿ ಯಕ್ಷಗಾನ ಇರ್ತಿತ್. ಸುಮಾರು ಒಂದು ತಿಂಗಳ ಹಿಂದಿನಿಂದನೇ ಈ ಬಗ್ಗೆ ಜೋರಾಗಿ ಪ್ರಚಾರ ನಡ್ದಿರ್ತಿತ್. ಊರಿನ ಎಲ್ಲಾ ಗೋಡೆಗಳ ಮೇಲೆ ಪೋಸ್ಟರ್. ಇಂಥ ಮೇಳಂದ ಇಂಥ ಯಕ್ಷಗಾನ...ಇಂಥವು ಇಂಥ ವೇಷ ಹಾಕಿವೆ...ಹಂಗಾಗಿ ಯಕ್ಷಗಾನ ನೋಡಿಯೇ ನೋಡೊಕುತೇಳುವ ಆಸೆ ನಮ್ಮಲ್ಲಿ ಹುಟ್ಟಿಕಂಡ್ಬಿಡ್ತಿತ್. ಯಕ್ಷಗಾನ ಶನಿವಾರ ಇದ್ರೆ ಒಳ್ಳೆದ್. ಯಾಕಂದ್ರೆ ರಾತ್ರಿಂದ ಬೆಳಗ್ಗೆ ವರೆಗೆ ಯಕ್ಷಗಾನ ನೋಡಿ ಭಾನುವಾರ ಲಾಯ್ಕ ನಿದ್ದೆ ಮಾಡಕ್ಕಲ್ಲಾ... ಹಂಗೆತೇಳಿ ಬೇರೆ ದಿನ ಯಕ್ಷಗಾನ ಇದ್ದರೆ ನೋಡ್ದುಲೆತೇನೂ ಇತ್ಲೆ, ಮನೇಲಿ ಕಾಡಿ ಬೇಡಿ ಯಕ್ಷಗಾನ ನೋಡ್ತಿದ್ದೊ. ಮಾರನೆ ದಿನ ಸ್ಕೂಲ್ಗೆ ಚಕ್ಕರ್ ಅಷ್ಟೇ....
ಯಕ್ಷಗಾನ ಮೇಳ ನಮ್ಮೂರಿಗೆ ಬಾತ್ತೇಳಿರೆ ಟೆಂಟ್ ಹಾಕ್ತಿದ್ದದ್ ಚೌಂಡಿಕಳಲಿ...ನಮ್ಗೆಲ್ಲಾ ಆ ಮೇಳದವ್ರ ಕೆಲ್ಸ ನೋಡ್ದುತೇಳಿರೆ ದೊಡ್ಡ ಅಚ್ಚರಿ. ಹಿಂದಿನ ದಿನ ಅದ್ಯಾವುದೋ ಊರುಲಿ ಯಕ್ಷಗಾನ ಮಾಡಿ ಬಂದಿದ್ದವೆ. ವೇಷ ಹಾಕುವವು ಹಗಲು ಹೊತ್ತು ಅಲ್ಲಲ್ಲಿ ಮರದ ಕೆಳಗೆ ಮಲ್ಕಂಡ್ ನಿದ್ದೆ ಮಾಡ್ತಿದ್ದವೆ. ನಾವು ಅವು ಮಲಗಿದ್ದಲಿಗೆ ಹೋಗಿ, ಅವರ ಗಾತ್ರ ನೋಡ್ಕಂಡ್ ಇಂವ ಭೀಮನ ವೇಷ ಹಾಕುದು, ಇಂವ ರಾಕ್ಷಸನ ವೇಷ ಹಾಕುದು, ಇಂವಂದ್ ಸ್ತ್ರೀ ವೇಷ ಇರುದ್ದೇನೋ ಮತ್ತೆ ಯಾರಾರ್ ಲಾಚಾರ್ನಂವ ಇದ್ದ್ರೆ ಇಂವ ಕೋಡಂಗಿ ವೇಷ ಹಾಕುದೇನೋತಾ ನಮ್ಮಲ್ಲೇ ಚರ್ಚೆ ಮಾಡಿಕಣ್ತಿದ್ದೊ. ಇನ್ನು ಅಲ್ಲೇ ಇರ್ತಿದ್ದ ಸಿಂಹಾಸನ, ಫಳ ಫಳ ಹೊಳೆಯುವ ಬಟ್ಟೆಗ, ಕಿರೀಟ...ಇಂಥದ್ದನ್ನೆಲ್ಲಾ ಮೇಳದವು ಬೈಯ್ತಿದ್ರೂ ಮುಟ್ಟಿ ನೋಡಿ ನಾವೆಲ್ಲಾ ಖುಷಿಯಾಗ್ತಿದ್ದೊ.
ಯಾವಾಗ ರಾತ್ರಿ ಆದೆಯಪ್ಪಾ, ಯಾವಾಗ ಯಕ್ಷಗಾನ ಶುರುವಾದೆಯಪ್ಪತಾ ಕಾಯ್ತಿದ್ದಂಗೆ ಆ ಸಮಯನೂ ಬಂದ್ಬಿಡ್ತಿತ್ತ್. ನಾವೆಲ್ಲಾ ಗಾಂಧಿ ಕ್ಲಾಸ್ನವು... ಅಂದ್ರೆ ನೆಲದಲ್ಲಿ ಕೂರಿಕೆ ಟಿಕೆಟ್ ತಕ್ಕಂಬದು. ಯಕ್ಷಗಾನನ ಹತ್ತಿರಂದ ನೋಡೊಕುತಾ ಇದರ ಉದ್ದೇಶ. ಹಂಗೆ ರಾತ್ರಿ ಹತ್ತುಗಂಟೆಗೆಲ್ಲಾ `ಗಜಮುಖದವಗೆ ಗಣಪಗೆ...'ತಾ ಭಾಗವತಿಕೆ ಶುರುವಾಗಿ ಮೊದಲ ವೇಷಧಾರಿ ಸ್ಟೇಜ್ ಮೇಲೆ ಬಂದುಬಿಡ್ತಿತ್. ಆ ಲೈಟ್ ಬೆಳಕ್ಲಿ ಎಲ್ಲಾ ವೇಷಧಾರಿಗಳ್ನ ನಾವು ಬಿಟ್ಟಕಣ್ಣು ಬಿಟ್ಟಂಗೆ ನೋಡ್ತಿದ್ದೊ. ಚೆಂಡೆಗೆ ಸರಿಯಾಗಿ ಅವು ಕುಣಿಯಕಾಕನ ಅಂತು, ಜೋರಾಗಿ ವಿಷಲ್ ಹೊಡೀತ್ತಿದ್ದೊ... ಈ ನಮ್ಮ ಉತ್ಸಾಹ ಇರ್ತಿದ್ದದ್ ಬೆಳಗ್ಗಿನ ಜಾವ ಮೂರುಗಂಟೆವರೆಗೆ ಮಾತ್ರ. ಅಷ್ಟುಹೊತ್ತಿಗೆ ನಿದ್ದೆ ಬಂದ್ ಕಣ್ಣು ಮುಚ್ಚಿಮುಚ್ಚಿ ಹೋಗ್ತಿದ್ದದೆ. ಈ ಯಕ್ಷಗಾನಗಳಲ್ಲಿ ಇದೇ ಸಮಯಕ್ಕೆ ರಾಕ್ಷಸರ ಪ್ರವೇಶ ಆದು. ಆ ರಾಕ್ಷಸ ವೇಷಧಾರಿಗ ಬೊಬ್ಬೆ ಹೊಡೀತಾ ಸ್ಟೇಜ್ಗೆ ಬರ್ತಿದ್ದ್ರೆ, ನಮ್ಮ ನಿದ್ದೆಯೆಲ್ಲಾ ಹಾರಿ ಹೋಗ್ತಿತ್. ಕೊನೆಗೆ ದುಷ್ಟಶಕ್ತಿ ಸಂಹಾರದ ಜೊತೆಗೆ ಯಕ್ಷಗಾನ ಮುಗಿಯಕಾಕನ ಬೆಳಗ್ಗೆ 6 ಗಂಟೆ... ಅಂದು ಹಗಲು ಪೂರ್ತಿ ಮನೇಲಿ ಒಳ್ಳೇ ನಿದ್ದೆ. ಆದ್ರೆ ಆ ಯಕ್ಷಗಾನದ ನೆನಪು ತಿಂಗಳು ಕಳೆದ್ರೂ ನಮ್ಮ ಮನಸ್ಸಲ್ಲಿ ಇರ್ತಿತ್. ಫ್ರೆಂಡ್ಸ್ಗ ಸೇರ್ಕಂಡ್ ಯಾವುದೇ ವಿಷಯ ಮಾತಾಡ್ತಿದ್ದ್ರೂ `ಅಂವ ಎಂಥ ಲಾಯ್ಕ ಕುಣೀತ್ತಿತ್ತಲ್ಲಾ...'ತಾ ಮತ್ತೆ ಯಕ್ಷಗಾನದ ಕಡೆಗೆನೇ ಮಾತು ಬರ್ತಿತ್. ಯಾವುದೋ ಕಾರಣಕ್ಕೆ ಯಕ್ಷಗಾನ ಮಿಸ್ ಮಾಡ್ಕಂಡವು ಅಂತೂ ಉರ್ದು ಹೋಗಿ ಬಿಡ್ತಿದ್ದೊ...
ಈಗ ನಮ್ಮೂರಿಗೆ ಯಕ್ಷಗಾನ ಮೇಲನೂ ಬಾಲೆ...ಬಂದ್ರೆ ಆಗಿನಂಗೆ ಇಷ್ಟಪಟ್ಟು ನೋಡವು ಸಿಕ್ಕುದೂ ಕಷ್ಟ. ಎಲ್ಲಾ ಸವಿ ಸವಿ ನೆನಪಷ್ಟೇ....


- `ಸುಮಾ'

Sunday 1 April 2012

ಗ್ರಹಣದ ಚಂದಿರ !


ಯಾಕೋ ಬೇಸರ...
ಮನಸ್ಸು ತುಂಬಾ ದುಗುಡ
ಹಂಗೆ ಟೆರೇಸ್ ಮೇಲೆ ಕುದ್ದು
ಆಕಾಶ ನೋಡಿರೆ...
ಅದೆಷ್ಟು ವಿಸ್ತಾರ !
ಕಡು ಕಪ್ಪು ಸೀರೆಗೆ 
ನಕ್ಷತ್ರಗಳ ಅಲಂಕಾರ
ಒಂದು ದೊಡ್ಡದ್...ಮತ್ತೊಂದು ಸಣ್ಣದ್
ಅಲ್ಲೇ ಚಂದಮಾಮನ ಸುಂದರ
ನಗು !
ಅಯ್ಯೋ ಮರ್ತದ್ ನೆನಪಾತ್...
ನನ್ನ ಗೂಡೆನೂ ಹಿಂಗೆನೇ
ಹುಣ್ಣಿಮೆ ಚಂದಿರ !
ಥೇಟ್ ಹಂಗೆನೇ...
ಆದ್ರೂ ಎಲ್ಲೋ ಸ್ವಲ್ಪ ವ್ಯತ್ಯಾಸ..
ಇವ್ಳಿಗೆ ಎಷ್ಟೊತ್ತಿಗೆ ಗ್ರಹಣ
ಹಿಡ್ದದೆತನೇ ಗೊತ್ತಾಲೆ !
ಆದ್ರೂ ಗ್ರಹಣ ಬಿಟ್ಟಮೇಲೆ
ಅಪ್ಪಟ ಸ್ಫಟಿಕ !
ಹೂಂ...ಫೋನ್ ರಿಂಗಾಗ್ತುಟ್ಟು...
ಅವ್ಳೇ... ಅವ್ಳೇ ನನ್ನ ಗೂಡೆ
ದು:ಖ ಮಾಯ !!!!
- `ಸುಮಾ'
arebhase@gmail.com

ರಾಮನವಮಿಗೆ ಗುಳಿಗನ ಕೋಲ !


ಹಿಂದೆಲ್ಲಾ ರಾಮನವಮಿತೇಳಿರೆ ಭಾಗಮಂಡಲಲಿ ದೊಡ್ಡ ಹಬ್ಬ. 10 ದಿನ ಗೌಜಿಯೋ ಗೌಜಿ. ದಿನಕ್ಕೊಂದು ಕಾರ್ಯಕ್ರಮಗ. ಹರಿಕಥೆಂದ ಶುರುವಾಗಿ ಆರ್ಕೆ ಷ್ಟ್ರಾ ವರೆಗೆ ಎಲ್ಲಾ ಥರದ ಒಂದಕ್ಕಿಂತ ಒಂದು ಲಾಯ್ಕದ ಕಾರ್ಯಕ್ರಮಗ. ಅದ್ಕೆ ಸರಿಯಾಗಿ ಆಗಷ್ಟೇ ಪರೀಕ್ಷೆಗ ಬೇರೆ ಮುಗ್ದಿದ್ದದೆ. ಎಲ್ಲಾ ಮಕ್ಕ  ಜೈಲಿಂದ ಬಿಟ್ಟ ಹಂಗೆ ಖುಷೀಲಿ ಇದ್ದವೆ. ಭಾಗಮಂಡಲಲಿ ನಮ್ಮದೊಂದು ಟೀಂ ಇತ್. ಎಲ್ಲಾ ಬಗೆಯ `ಕಲಾವಿದರು' ಈ ಟೀಂಲಿ ಇದ್ದೊ. ಹಂಗಾಗಿ ರಾಮನವಮಿಲಿ ಎಲ್ಲಕ್ಕಿಂತ ಜಾಸ್ತಿ ಮಿಂಚುತ್ತಿದ್ದದ್ ನಮ್ಮ ಟೀಂ. ಈ ಟೀಂನ ಸದಸ್ಯರುಗ ಈಗ ಎಲ್ಲಾ ಕಡೆ ಚದುರಿ ಹೋಗ್ಯೊಳೊ. ಆದ್ರೆ ರಾಮನವಮಿ ಬಾಕಾಕನ ಎಲ್ಲವ್ಕೂ ಹಳೇದೆಲ್ಲಾ ಯೋಚನೆ ಆದೆ. 
ಭಾಗಮಂಡಲಲಿ ಜಾತ್ರೆ ಮುಗ್ದ ಮೇಲೆ ಗುಳಿಗನ ಕೋಲ ಮಾಡಿವೆ. ಒಂದು ವರ್ಷ ರಾಮನವಮಿ ದಿನ ನಾವು ಈ ಗುಳಿಗನ ಕೋಲದ ಛದ್ಮವೇಷ ಹಾಕಿಕೆ ಪ್ಲ್ಯಾನ್ ಮಾಡ್ದೊ. ದರ್ಗನಮನೆ ಅಪ್ಪಿಗೆ ಗುಳಿಗನ ವೇಷ ಹಾಕುದು, ಮತ್ತೆ ಗುಳಿಗಂಗೆ ಕೋಳಿ ಕೊಯ್ಸಿವೆಯಲಾ...ಅದ್ಕೆ ಅವನ ಮನೇಂದನೇ ಒಂದು ಕೋಳಿ ತಾದುತೇಳಿ ತೀರ್ಮಾನ ಆತ್... ಇನ್ ಕಿರಣ್ಗೆ ದೇವ್ರು ಬಾದು, ಪ್ರವೀಣ, ಗುರು, ರವಿ ಚಂಡೆ ಹೊಡೆಯುದು, ನಾ ಪೂಜಾರಿ...ಮುನ್ನ ಗುಳಿಗನ ಮುಂದೆ ನಿಂತ್ಕಂಡ್ `ಕೇಳಿಕಂಬೊದು'... ಹಿಂಗೆಲ್ಲಾ ಮಾತಾಡಿಕಂಡ್ ಒಂದು ನಾಲ್ಕ್ ದಿನ ಸಾಯಂಕಾಲ ಹೊತ್ತುಲಿ ಸ್ಕೂಲ್ ಗ್ರೌಂಡ್ಲಿ ಪ್ರ್ಯಾಕ್ಟೀಸ್ ಮಾಡ್ದೊ. ಗುಳಿಗ ತುಳು ಭಾಷೇಲಿ ಮಾತಾಡ್ದು, ಹಂಗಾಗಿ ಅಪ್ಪಿ ಸ್ವಲ್ಪ ಸ್ವಲ್ಪ ತುಳು ಮಾತಾಡಿಕೆನೂ ಕಲ್ತತ್.
ಅಂತೂ ಛದ್ಮವೇಷ ಸ್ಪರ್ಧೆ ದಿನ ಬಾತ್. ನಮ್ಗೆ ಇಂಥದ್ದೆಲ್ಲಾ ಏನೂ ಹೊಸದಲ್ಲ. ಹಂಗಾಗಿ ತುಂಬಾ ಆತ್ಮವಿಶ್ವಾಸಂದನೇ ರೆಡಿ ಆಗಿದ್ದೊ. ಎಷ್ಟರ ಮಟ್ಟಿಗೆ ಆತ್ಮವಿಶ್ವಾಸತೇಳಿರೆ, ನಮಗೇ ಮೊದಲ ಬಹುಮಾನ ಸಿಕ್ಕಿಬಿಟ್ಟದೆತಾ ಹೇಳುವಷ್ಟರ ಮಟ್ಟಿಗೆ. ಏಕೆತೇಳಿರೆ, ಆ ಹಿಂದಿನ ಮೂರು ವರ್ಷನೂ ನಮ್ಮ ಟೀಂಗೆ ಮೊದಲ ಬಹುಮಾನ ಬಂದಿತ್. ಒಂದು ವರ್ಷ ಮಲಗಿದ್ದ ಕುಂಭಕರ್ಣನ ಹೆಂಗೆ ಎಚ್ಚರ ಮಾಡಿವೆತೇಳುದುನ ಮಾಡಿ ತೋರಿಸಿದ್ದೊ...ಮತ್ತೊಂದು ವರ್ಷ ಕುಂಭಕರ್ಣನ ಜೊತೆ ಯುದ್ಧ... ಇನ್ನೊಂದು ವರ್ಷ ರಾಮ ವನವಾಸಕ್ಕೆ ಹೋಗುವ ಸೀನ್...ಹಂಗಾಗಿ ನಾವು ಈ ವರ್ಷ ಏನು ಮಾಡಿವೆತೇಳ್ದು ಎಲ್ಲವ್ಕೆ ಭಾರೀ ನಿರೀಕ್ಷೆ ಹುಟ್ಟಿಸಿತ್ತ್. ಮತ್ತೆ ನಾವು ಸ್ಟೇಜ್ ಮೇಲೆ ಬರುವ ವರೆಗೆ ನಾವು ಏನು ಮಾಡಿವೆತೇಳುದುನ ಸೀಕ್ರೆಟ್ ಆಗಿ ಇಡ್ತಿದ್ದೊ.
ಗುಳಿಗನ ಕೋಲಕ್ಕೆ ಬೇಕಾಗ್ವ ಚಿಗುರು ತೆಂಗಿನ ಗರಿನ ಯಾರ್ದೋ ತೋಟಂದ ಕಾಡಿಬೇಡಿ ತಂದಿದ್ದೊ. ಇನ್ನು ದೊಂದಿ, ರಟ್ಟ್ಲಿ ಮಾಡ್ದ ದೊಡ್ಡ ಕತ್ತಿ.. ತ್ರಿಶೂಲ, ಗುಳಿಗಂಗೆ ಕಿರೀಟ, ಒಂದು ಜೀವದ ಕೋಳಿ ಎಲ್ಲಾ ರೆಡಿಯಾಗಿತ್ತ್. ರಾಮಮಂದಿರ ಪಕ್ಕದ ವೆಟರ್ನರಿ ಆಸ್ಪತ್ರೆನೇ ನಮ್ಮ ಡ್ರೆಸ್ಸಿಂಗ್ ರೂಂ. ನಾವೆಲ್ಲಾ ಸೇರಿಕಂಡ್ ಅಪ್ಪಿಗೆ ಗುಳಿಗನ ವೇಷ ಹಾಕಿದೊ...ಎಲ್ಲಾ ಮುಗ್ದ್ ಆಕಾಕನ ಅಪ್ಪಿನ ನೋಡಿರೆ, ನಮ್ಗೇ ಹೆದ್ರಿಕೆ ಆಗುವಂಗೆ ಇತ್ ಅವನ ವೇಷ! 
ಸರಿ ಸ್ಪರ್ಧೆ ಶುರುವಾತ್. ನಮ್ಮಕ್ಕಿಂತ ಮೊದ್ಲು ಬೇರೆ ಬೇರೆಯವು ಸ್ಟೆಜ್ಗೆ ಹೋಗಿ ಬಂದೊ. ನಮ್ಮ ಟೀಂ ಹೆಸ್ರು ಕರ್ದೊ...ಸ್ಟೇಜ್ ಮೇಲೆ ಶೋ ಶುರುವಾತ್... ನಾವು ಮೊದ್ಲೇ ಪ್ರ್ಯಾಕ್ಟೀಸ್ ಮಾಡಿಕಂಡಿದ್ದಂಗೆ ಕೋಳಿ ಕೊಯ್ಯುವ ಸೀನ್ ಕೂಡ ಇತ್. ಆ ಸೀನ್ ಬಾಕಾಕನನೇ ನಮಿಗೆ ಕೋಳಿ ಯೋಚನೆ ಆದ್... ತಂದಿಟ್ಟಿದ್ದ ಕೋಳಿನ ಹಿಡ್ಕಂಬಾಕೆ ಚೆಂಡೆ ಹೊಡೀತ್ತಿದ್ದ ಪ್ರವೀಣನ ಕಳ್ಸಿದೋ... ಆದ್ರೆ ಅಂವ ಬರೀ ಕೈಲಿ ವಾಪಸ್ ಬಾತ್. ನಾವು ಇಟ್ಟ ಜಾಗಂದ ಕೋಳಿನಾ ಯಾರೋ ಎಗರಿಸಿಬಿಟ್ಟಿದ್ದೊ. ಅಂತೂ ಕೋಳಿ ಕೊಯ್ಯದೇ ನಮ್ಮ ಗುಳಿಗನ ಕೋಲ ಮುಗ್ದಿತ್. ಆದ್ರೂ ತುಂಬಾ ಲಾಯ್ಕ ಬಂದಿತ್ತ್. ಈ ವರ್ಷನೂ ಮೊದಲನೇ ಬಹುಮಾನ ನಮಗೆತೇಳುವ ಕಾನ್ಫಿಡೆನ್ಸ್ ಇತ್. ಸ್ಪರ್ಧೆ ಎಲ್ಲಾ ಮುಗ್ತ್. ಗೆದ್ದ ಟೀಂಗಳ ಹೆಸ್ರು ಹೇಳಿಕೆ ಶುರು ಮಾಡ್ದೊ...ಮೊದ್ಲಿಗೆ ಮೂರನೇ ಬಹುಮಾನ.... ಅಲ್ಲಿ ನಮ್ಮ ಟೀಂ ಹೆಸರಿಲ್ಲೆ. ಆ ಮೇಲೆ ಎರಡನೇ ಬಹುಮಾನ.... ಅಲ್ಲೂ ನಮ್ಮ ಹೆಸರಿಲ್ಲೆ. ನಮ್ಗೆಲ್ಲಾ ಖುಷಿಯೋ ಖುಷಿ... ನಮ್ಗೇ ಮೊದಲ ಬಹುಮಾನತಾ... ಸರಿ, ಮೊದಲನೇ ಬಹುಮಾನ ಯಾರಿಗೆತೇಳ್ದುನಾ ಕೂಡ ಘೋಷಣೆ ಮಾಡ್ದೊ. ನಮಗೆ ನಿರಾಸೆ ಕಾದಿತ್. ಏಕಂದ್ರೆ, ಅಲ್ಲೂ ನಮ್ಮ ಹೆಸರಿತ್ಲೆ....
ಅತೀ ಆತ್ಮವಿಶ್ವಾಸಲಿ ನಾವೊಂದು ತಪ್ಪು ಮಾಡಿಬಿಟ್ಟಿದ್ದೊ. ಛದ್ಮವೇಷ ಸ್ಪರ್ಧೆಯ ಒಂದು ಮುಖ್ಯ ನಿಯಮನೇ ನಮಿಗೆ ಮರ್ತು ಹೋಗಿತ್ತ್. ಹೌದು... ನಿಯಮದ ಪ್ರಕಾರ ಬರೀ ರಾಮಾಯಣಕ್ಕೆ ಸಂಬಂಧಿಸಿದ ವೇಷಗಳ್ನ ಮಾತ್ರ ಹಾಕಕ್ಕಾಗಿತ್ತ್. ಆದ್ರೆ ನಾವು ಗುಳಿಗನ ಕೋಲ ಮಾಡಿಕೆ ಹೋಗಿ ಬಹುಮಾನ ಕಳ್ಕೊಂಡುಬಿಟ್ಟಿದ್ದೊ....ಇಂದ್ ರಾಮನವಮಿ ಅಲಾ, ಹಂಗೆ ಈ ಸಂಗತಿ ನೆನಪಿಗೆ ಬಾತ್.
- `ಸುಮಾ'
arebhase@gmail.com