ಚೌಂಡಿಕಳಕ್ಕೆ ಮೂರು ಲಾರಿಗ ಒಟ್ಟಿಗೆ ಬಾತ್ತೇಳಿರೆ ನಮ್ಗೆಲ್ಲಾ ತುಂಬಾ ಖುಷಿ...ಹೌದು, ಅಂದು ನಮ್ಮೂರಲ್ಲಿ ಯಕ್ಷಗಾನ ಇರ್ತಿತ್. ಸುಮಾರು ಒಂದು ತಿಂಗಳ ಹಿಂದಿನಿಂದನೇ ಈ ಬಗ್ಗೆ ಜೋರಾಗಿ ಪ್ರಚಾರ ನಡ್ದಿರ್ತಿತ್. ಊರಿನ ಎಲ್ಲಾ ಗೋಡೆಗಳ ಮೇಲೆ ಪೋಸ್ಟರ್. ಇಂಥ ಮೇಳಂದ ಇಂಥ ಯಕ್ಷಗಾನ...ಇಂಥವು ಇಂಥ ವೇಷ ಹಾಕಿವೆ...ಹಂಗಾಗಿ ಯಕ್ಷಗಾನ ನೋಡಿಯೇ ನೋಡೊಕುತೇಳುವ ಆಸೆ ನಮ್ಮಲ್ಲಿ ಹುಟ್ಟಿಕಂಡ್ಬಿಡ್ತಿತ್. ಯಕ್ಷಗಾನ ಶನಿವಾರ ಇದ್ರೆ ಒಳ್ಳೆದ್. ಯಾಕಂದ್ರೆ ರಾತ್ರಿಂದ ಬೆಳಗ್ಗೆ ವರೆಗೆ ಯಕ್ಷಗಾನ ನೋಡಿ ಭಾನುವಾರ ಲಾಯ್ಕ ನಿದ್ದೆ ಮಾಡಕ್ಕಲ್ಲಾ... ಹಂಗೆತೇಳಿ ಬೇರೆ ದಿನ ಯಕ್ಷಗಾನ ಇದ್ದರೆ ನೋಡ್ದುಲೆತೇನೂ ಇತ್ಲೆ, ಮನೇಲಿ ಕಾಡಿ ಬೇಡಿ ಯಕ್ಷಗಾನ ನೋಡ್ತಿದ್ದೊ. ಮಾರನೆ ದಿನ ಸ್ಕೂಲ್ಗೆ ಚಕ್ಕರ್ ಅಷ್ಟೇ....
ಯಕ್ಷಗಾನ ಮೇಳ ನಮ್ಮೂರಿಗೆ ಬಾತ್ತೇಳಿರೆ ಟೆಂಟ್ ಹಾಕ್ತಿದ್ದದ್ ಚೌಂಡಿಕಳಲಿ...ನಮ್ಗೆಲ್ಲಾ ಆ ಮೇಳದವ್ರ ಕೆಲ್ಸ ನೋಡ್ದುತೇಳಿರೆ ದೊಡ್ಡ ಅಚ್ಚರಿ. ಹಿಂದಿನ ದಿನ ಅದ್ಯಾವುದೋ ಊರುಲಿ ಯಕ್ಷಗಾನ ಮಾಡಿ ಬಂದಿದ್ದವೆ. ವೇಷ ಹಾಕುವವು ಹಗಲು ಹೊತ್ತು ಅಲ್ಲಲ್ಲಿ ಮರದ ಕೆಳಗೆ ಮಲ್ಕಂಡ್ ನಿದ್ದೆ ಮಾಡ್ತಿದ್ದವೆ. ನಾವು ಅವು ಮಲಗಿದ್ದಲಿಗೆ ಹೋಗಿ, ಅವರ ಗಾತ್ರ ನೋಡ್ಕಂಡ್ ಇಂವ ಭೀಮನ ವೇಷ ಹಾಕುದು, ಇಂವ ರಾಕ್ಷಸನ ವೇಷ ಹಾಕುದು, ಇಂವಂದ್ ಸ್ತ್ರೀ ವೇಷ ಇರುದ್ದೇನೋ ಮತ್ತೆ ಯಾರಾರ್ ಲಾಚಾರ್ನಂವ ಇದ್ದ್ರೆ ಇಂವ ಕೋಡಂಗಿ ವೇಷ ಹಾಕುದೇನೋತಾ ನಮ್ಮಲ್ಲೇ ಚರ್ಚೆ ಮಾಡಿಕಣ್ತಿದ್ದೊ. ಇನ್ನು ಅಲ್ಲೇ ಇರ್ತಿದ್ದ ಸಿಂಹಾಸನ, ಫಳ ಫಳ ಹೊಳೆಯುವ ಬಟ್ಟೆಗ, ಕಿರೀಟ...ಇಂಥದ್ದನ್ನೆಲ್ಲಾ ಮೇಳದವು ಬೈಯ್ತಿದ್ರೂ ಮುಟ್ಟಿ ನೋಡಿ ನಾವೆಲ್ಲಾ ಖುಷಿಯಾಗ್ತಿದ್ದೊ.
ಯಾವಾಗ ರಾತ್ರಿ ಆದೆಯಪ್ಪಾ, ಯಾವಾಗ ಯಕ್ಷಗಾನ ಶುರುವಾದೆಯಪ್ಪತಾ ಕಾಯ್ತಿದ್ದಂಗೆ ಆ ಸಮಯನೂ ಬಂದ್ಬಿಡ್ತಿತ್ತ್. ನಾವೆಲ್ಲಾ ಗಾಂಧಿ ಕ್ಲಾಸ್ನವು... ಅಂದ್ರೆ ನೆಲದಲ್ಲಿ ಕೂರಿಕೆ ಟಿಕೆಟ್ ತಕ್ಕಂಬದು. ಯಕ್ಷಗಾನನ ಹತ್ತಿರಂದ ನೋಡೊಕುತಾ ಇದರ ಉದ್ದೇಶ. ಹಂಗೆ ರಾತ್ರಿ ಹತ್ತುಗಂಟೆಗೆಲ್ಲಾ `ಗಜಮುಖದವಗೆ ಗಣಪಗೆ...'ತಾ ಭಾಗವತಿಕೆ ಶುರುವಾಗಿ ಮೊದಲ ವೇಷಧಾರಿ ಸ್ಟೇಜ್ ಮೇಲೆ ಬಂದುಬಿಡ್ತಿತ್. ಆ ಲೈಟ್ ಬೆಳಕ್ಲಿ ಎಲ್ಲಾ ವೇಷಧಾರಿಗಳ್ನ ನಾವು ಬಿಟ್ಟಕಣ್ಣು ಬಿಟ್ಟಂಗೆ ನೋಡ್ತಿದ್ದೊ. ಚೆಂಡೆಗೆ ಸರಿಯಾಗಿ ಅವು ಕುಣಿಯಕಾಕನ ಅಂತು, ಜೋರಾಗಿ ವಿಷಲ್ ಹೊಡೀತ್ತಿದ್ದೊ... ಈ ನಮ್ಮ ಉತ್ಸಾಹ ಇರ್ತಿದ್ದದ್ ಬೆಳಗ್ಗಿನ ಜಾವ ಮೂರುಗಂಟೆವರೆಗೆ ಮಾತ್ರ. ಅಷ್ಟುಹೊತ್ತಿಗೆ ನಿದ್ದೆ ಬಂದ್ ಕಣ್ಣು ಮುಚ್ಚಿಮುಚ್ಚಿ ಹೋಗ್ತಿದ್ದದೆ. ಈ ಯಕ್ಷಗಾನಗಳಲ್ಲಿ ಇದೇ ಸಮಯಕ್ಕೆ ರಾಕ್ಷಸರ ಪ್ರವೇಶ ಆದು. ಆ ರಾಕ್ಷಸ ವೇಷಧಾರಿಗ ಬೊಬ್ಬೆ ಹೊಡೀತಾ ಸ್ಟೇಜ್ಗೆ ಬರ್ತಿದ್ದ್ರೆ, ನಮ್ಮ ನಿದ್ದೆಯೆಲ್ಲಾ ಹಾರಿ ಹೋಗ್ತಿತ್. ಕೊನೆಗೆ ದುಷ್ಟಶಕ್ತಿ ಸಂಹಾರದ ಜೊತೆಗೆ ಯಕ್ಷಗಾನ ಮುಗಿಯಕಾಕನ ಬೆಳಗ್ಗೆ 6 ಗಂಟೆ... ಅಂದು ಹಗಲು ಪೂರ್ತಿ ಮನೇಲಿ ಒಳ್ಳೇ ನಿದ್ದೆ. ಆದ್ರೆ ಆ ಯಕ್ಷಗಾನದ ನೆನಪು ತಿಂಗಳು ಕಳೆದ್ರೂ ನಮ್ಮ ಮನಸ್ಸಲ್ಲಿ ಇರ್ತಿತ್. ಫ್ರೆಂಡ್ಸ್ಗ ಸೇರ್ಕಂಡ್ ಯಾವುದೇ ವಿಷಯ ಮಾತಾಡ್ತಿದ್ದ್ರೂ `ಅಂವ ಎಂಥ ಲಾಯ್ಕ ಕುಣೀತ್ತಿತ್ತಲ್ಲಾ...'ತಾ ಮತ್ತೆ ಯಕ್ಷಗಾನದ ಕಡೆಗೆನೇ ಮಾತು ಬರ್ತಿತ್. ಯಾವುದೋ ಕಾರಣಕ್ಕೆ ಯಕ್ಷಗಾನ ಮಿಸ್ ಮಾಡ್ಕಂಡವು ಅಂತೂ ಉರ್ದು ಹೋಗಿ ಬಿಡ್ತಿದ್ದೊ...
ಈಗ ನಮ್ಮೂರಿಗೆ ಯಕ್ಷಗಾನ ಮೇಲನೂ ಬಾಲೆ...ಬಂದ್ರೆ ಆಗಿನಂಗೆ ಇಷ್ಟಪಟ್ಟು ನೋಡವು ಸಿಕ್ಕುದೂ ಕಷ್ಟ. ಎಲ್ಲಾ ಸವಿ ಸವಿ ನೆನಪಷ್ಟೇ....
- `ಸುಮಾ'
No comments:
Post a Comment