Sunday, 1 April 2012

ರಾಮನವಮಿಗೆ ಗುಳಿಗನ ಕೋಲ !


ಹಿಂದೆಲ್ಲಾ ರಾಮನವಮಿತೇಳಿರೆ ಭಾಗಮಂಡಲಲಿ ದೊಡ್ಡ ಹಬ್ಬ. 10 ದಿನ ಗೌಜಿಯೋ ಗೌಜಿ. ದಿನಕ್ಕೊಂದು ಕಾರ್ಯಕ್ರಮಗ. ಹರಿಕಥೆಂದ ಶುರುವಾಗಿ ಆರ್ಕೆ ಷ್ಟ್ರಾ ವರೆಗೆ ಎಲ್ಲಾ ಥರದ ಒಂದಕ್ಕಿಂತ ಒಂದು ಲಾಯ್ಕದ ಕಾರ್ಯಕ್ರಮಗ. ಅದ್ಕೆ ಸರಿಯಾಗಿ ಆಗಷ್ಟೇ ಪರೀಕ್ಷೆಗ ಬೇರೆ ಮುಗ್ದಿದ್ದದೆ. ಎಲ್ಲಾ ಮಕ್ಕ  ಜೈಲಿಂದ ಬಿಟ್ಟ ಹಂಗೆ ಖುಷೀಲಿ ಇದ್ದವೆ. ಭಾಗಮಂಡಲಲಿ ನಮ್ಮದೊಂದು ಟೀಂ ಇತ್. ಎಲ್ಲಾ ಬಗೆಯ `ಕಲಾವಿದರು' ಈ ಟೀಂಲಿ ಇದ್ದೊ. ಹಂಗಾಗಿ ರಾಮನವಮಿಲಿ ಎಲ್ಲಕ್ಕಿಂತ ಜಾಸ್ತಿ ಮಿಂಚುತ್ತಿದ್ದದ್ ನಮ್ಮ ಟೀಂ. ಈ ಟೀಂನ ಸದಸ್ಯರುಗ ಈಗ ಎಲ್ಲಾ ಕಡೆ ಚದುರಿ ಹೋಗ್ಯೊಳೊ. ಆದ್ರೆ ರಾಮನವಮಿ ಬಾಕಾಕನ ಎಲ್ಲವ್ಕೂ ಹಳೇದೆಲ್ಲಾ ಯೋಚನೆ ಆದೆ. 
ಭಾಗಮಂಡಲಲಿ ಜಾತ್ರೆ ಮುಗ್ದ ಮೇಲೆ ಗುಳಿಗನ ಕೋಲ ಮಾಡಿವೆ. ಒಂದು ವರ್ಷ ರಾಮನವಮಿ ದಿನ ನಾವು ಈ ಗುಳಿಗನ ಕೋಲದ ಛದ್ಮವೇಷ ಹಾಕಿಕೆ ಪ್ಲ್ಯಾನ್ ಮಾಡ್ದೊ. ದರ್ಗನಮನೆ ಅಪ್ಪಿಗೆ ಗುಳಿಗನ ವೇಷ ಹಾಕುದು, ಮತ್ತೆ ಗುಳಿಗಂಗೆ ಕೋಳಿ ಕೊಯ್ಸಿವೆಯಲಾ...ಅದ್ಕೆ ಅವನ ಮನೇಂದನೇ ಒಂದು ಕೋಳಿ ತಾದುತೇಳಿ ತೀರ್ಮಾನ ಆತ್... ಇನ್ ಕಿರಣ್ಗೆ ದೇವ್ರು ಬಾದು, ಪ್ರವೀಣ, ಗುರು, ರವಿ ಚಂಡೆ ಹೊಡೆಯುದು, ನಾ ಪೂಜಾರಿ...ಮುನ್ನ ಗುಳಿಗನ ಮುಂದೆ ನಿಂತ್ಕಂಡ್ `ಕೇಳಿಕಂಬೊದು'... ಹಿಂಗೆಲ್ಲಾ ಮಾತಾಡಿಕಂಡ್ ಒಂದು ನಾಲ್ಕ್ ದಿನ ಸಾಯಂಕಾಲ ಹೊತ್ತುಲಿ ಸ್ಕೂಲ್ ಗ್ರೌಂಡ್ಲಿ ಪ್ರ್ಯಾಕ್ಟೀಸ್ ಮಾಡ್ದೊ. ಗುಳಿಗ ತುಳು ಭಾಷೇಲಿ ಮಾತಾಡ್ದು, ಹಂಗಾಗಿ ಅಪ್ಪಿ ಸ್ವಲ್ಪ ಸ್ವಲ್ಪ ತುಳು ಮಾತಾಡಿಕೆನೂ ಕಲ್ತತ್.
ಅಂತೂ ಛದ್ಮವೇಷ ಸ್ಪರ್ಧೆ ದಿನ ಬಾತ್. ನಮ್ಗೆ ಇಂಥದ್ದೆಲ್ಲಾ ಏನೂ ಹೊಸದಲ್ಲ. ಹಂಗಾಗಿ ತುಂಬಾ ಆತ್ಮವಿಶ್ವಾಸಂದನೇ ರೆಡಿ ಆಗಿದ್ದೊ. ಎಷ್ಟರ ಮಟ್ಟಿಗೆ ಆತ್ಮವಿಶ್ವಾಸತೇಳಿರೆ, ನಮಗೇ ಮೊದಲ ಬಹುಮಾನ ಸಿಕ್ಕಿಬಿಟ್ಟದೆತಾ ಹೇಳುವಷ್ಟರ ಮಟ್ಟಿಗೆ. ಏಕೆತೇಳಿರೆ, ಆ ಹಿಂದಿನ ಮೂರು ವರ್ಷನೂ ನಮ್ಮ ಟೀಂಗೆ ಮೊದಲ ಬಹುಮಾನ ಬಂದಿತ್. ಒಂದು ವರ್ಷ ಮಲಗಿದ್ದ ಕುಂಭಕರ್ಣನ ಹೆಂಗೆ ಎಚ್ಚರ ಮಾಡಿವೆತೇಳುದುನ ಮಾಡಿ ತೋರಿಸಿದ್ದೊ...ಮತ್ತೊಂದು ವರ್ಷ ಕುಂಭಕರ್ಣನ ಜೊತೆ ಯುದ್ಧ... ಇನ್ನೊಂದು ವರ್ಷ ರಾಮ ವನವಾಸಕ್ಕೆ ಹೋಗುವ ಸೀನ್...ಹಂಗಾಗಿ ನಾವು ಈ ವರ್ಷ ಏನು ಮಾಡಿವೆತೇಳ್ದು ಎಲ್ಲವ್ಕೆ ಭಾರೀ ನಿರೀಕ್ಷೆ ಹುಟ್ಟಿಸಿತ್ತ್. ಮತ್ತೆ ನಾವು ಸ್ಟೇಜ್ ಮೇಲೆ ಬರುವ ವರೆಗೆ ನಾವು ಏನು ಮಾಡಿವೆತೇಳುದುನ ಸೀಕ್ರೆಟ್ ಆಗಿ ಇಡ್ತಿದ್ದೊ.
ಗುಳಿಗನ ಕೋಲಕ್ಕೆ ಬೇಕಾಗ್ವ ಚಿಗುರು ತೆಂಗಿನ ಗರಿನ ಯಾರ್ದೋ ತೋಟಂದ ಕಾಡಿಬೇಡಿ ತಂದಿದ್ದೊ. ಇನ್ನು ದೊಂದಿ, ರಟ್ಟ್ಲಿ ಮಾಡ್ದ ದೊಡ್ಡ ಕತ್ತಿ.. ತ್ರಿಶೂಲ, ಗುಳಿಗಂಗೆ ಕಿರೀಟ, ಒಂದು ಜೀವದ ಕೋಳಿ ಎಲ್ಲಾ ರೆಡಿಯಾಗಿತ್ತ್. ರಾಮಮಂದಿರ ಪಕ್ಕದ ವೆಟರ್ನರಿ ಆಸ್ಪತ್ರೆನೇ ನಮ್ಮ ಡ್ರೆಸ್ಸಿಂಗ್ ರೂಂ. ನಾವೆಲ್ಲಾ ಸೇರಿಕಂಡ್ ಅಪ್ಪಿಗೆ ಗುಳಿಗನ ವೇಷ ಹಾಕಿದೊ...ಎಲ್ಲಾ ಮುಗ್ದ್ ಆಕಾಕನ ಅಪ್ಪಿನ ನೋಡಿರೆ, ನಮ್ಗೇ ಹೆದ್ರಿಕೆ ಆಗುವಂಗೆ ಇತ್ ಅವನ ವೇಷ! 
ಸರಿ ಸ್ಪರ್ಧೆ ಶುರುವಾತ್. ನಮ್ಮಕ್ಕಿಂತ ಮೊದ್ಲು ಬೇರೆ ಬೇರೆಯವು ಸ್ಟೆಜ್ಗೆ ಹೋಗಿ ಬಂದೊ. ನಮ್ಮ ಟೀಂ ಹೆಸ್ರು ಕರ್ದೊ...ಸ್ಟೇಜ್ ಮೇಲೆ ಶೋ ಶುರುವಾತ್... ನಾವು ಮೊದ್ಲೇ ಪ್ರ್ಯಾಕ್ಟೀಸ್ ಮಾಡಿಕಂಡಿದ್ದಂಗೆ ಕೋಳಿ ಕೊಯ್ಯುವ ಸೀನ್ ಕೂಡ ಇತ್. ಆ ಸೀನ್ ಬಾಕಾಕನನೇ ನಮಿಗೆ ಕೋಳಿ ಯೋಚನೆ ಆದ್... ತಂದಿಟ್ಟಿದ್ದ ಕೋಳಿನ ಹಿಡ್ಕಂಬಾಕೆ ಚೆಂಡೆ ಹೊಡೀತ್ತಿದ್ದ ಪ್ರವೀಣನ ಕಳ್ಸಿದೋ... ಆದ್ರೆ ಅಂವ ಬರೀ ಕೈಲಿ ವಾಪಸ್ ಬಾತ್. ನಾವು ಇಟ್ಟ ಜಾಗಂದ ಕೋಳಿನಾ ಯಾರೋ ಎಗರಿಸಿಬಿಟ್ಟಿದ್ದೊ. ಅಂತೂ ಕೋಳಿ ಕೊಯ್ಯದೇ ನಮ್ಮ ಗುಳಿಗನ ಕೋಲ ಮುಗ್ದಿತ್. ಆದ್ರೂ ತುಂಬಾ ಲಾಯ್ಕ ಬಂದಿತ್ತ್. ಈ ವರ್ಷನೂ ಮೊದಲನೇ ಬಹುಮಾನ ನಮಗೆತೇಳುವ ಕಾನ್ಫಿಡೆನ್ಸ್ ಇತ್. ಸ್ಪರ್ಧೆ ಎಲ್ಲಾ ಮುಗ್ತ್. ಗೆದ್ದ ಟೀಂಗಳ ಹೆಸ್ರು ಹೇಳಿಕೆ ಶುರು ಮಾಡ್ದೊ...ಮೊದ್ಲಿಗೆ ಮೂರನೇ ಬಹುಮಾನ.... ಅಲ್ಲಿ ನಮ್ಮ ಟೀಂ ಹೆಸರಿಲ್ಲೆ. ಆ ಮೇಲೆ ಎರಡನೇ ಬಹುಮಾನ.... ಅಲ್ಲೂ ನಮ್ಮ ಹೆಸರಿಲ್ಲೆ. ನಮ್ಗೆಲ್ಲಾ ಖುಷಿಯೋ ಖುಷಿ... ನಮ್ಗೇ ಮೊದಲ ಬಹುಮಾನತಾ... ಸರಿ, ಮೊದಲನೇ ಬಹುಮಾನ ಯಾರಿಗೆತೇಳ್ದುನಾ ಕೂಡ ಘೋಷಣೆ ಮಾಡ್ದೊ. ನಮಗೆ ನಿರಾಸೆ ಕಾದಿತ್. ಏಕಂದ್ರೆ, ಅಲ್ಲೂ ನಮ್ಮ ಹೆಸರಿತ್ಲೆ....
ಅತೀ ಆತ್ಮವಿಶ್ವಾಸಲಿ ನಾವೊಂದು ತಪ್ಪು ಮಾಡಿಬಿಟ್ಟಿದ್ದೊ. ಛದ್ಮವೇಷ ಸ್ಪರ್ಧೆಯ ಒಂದು ಮುಖ್ಯ ನಿಯಮನೇ ನಮಿಗೆ ಮರ್ತು ಹೋಗಿತ್ತ್. ಹೌದು... ನಿಯಮದ ಪ್ರಕಾರ ಬರೀ ರಾಮಾಯಣಕ್ಕೆ ಸಂಬಂಧಿಸಿದ ವೇಷಗಳ್ನ ಮಾತ್ರ ಹಾಕಕ್ಕಾಗಿತ್ತ್. ಆದ್ರೆ ನಾವು ಗುಳಿಗನ ಕೋಲ ಮಾಡಿಕೆ ಹೋಗಿ ಬಹುಮಾನ ಕಳ್ಕೊಂಡುಬಿಟ್ಟಿದ್ದೊ....ಇಂದ್ ರಾಮನವಮಿ ಅಲಾ, ಹಂಗೆ ಈ ಸಂಗತಿ ನೆನಪಿಗೆ ಬಾತ್.
- `ಸುಮಾ'
arebhase@gmail.com

1 comment:

  1. adkke heldu josh lii hosh itkonoku tha

    ReplyDelete