Tuesday 24 April 2012

ಕಥೆ ಹೇಳುವ ಚಾಮವ್ವ'


`ಒಂದೂರ್ಲಿ ಒಬ್ಬ ರಾಜ ಇತ್ತ್ ಗಡ...ಅವಂಗೊಬ್ಳು ಪೊರ್ಲುನ ಮಗ್ಳು...ಆ ಗೂಡೆಗೆ ಮದುವೆ ಮಾಡಿಕೆ ಹೈದನ ಹುಡ್ಕ್ತ್ತಿದ್ದೊ...' ಸಾಯಂಕಾಲ ಹೊತ್ತು ಸೂರ್ಯ ಮುಳುಗಿದ್ಮೇಲೆ ಚಾಮವ್ವ 
ಹಿಂಗೆ ಕಥೆ ಹೇಳ್ತಿತ್. ಬೇಸಿಗೆ ರಜೆ ಕಳಿಯಕ್ಕೆ ಬಂದಿದ್ದ ಮಕ್ಕ ಕೈಕಾಲು ಮುಖ ತೊಳ್ದು, ದೇವ್ರ ಫೋಟೋ ಹತ್ರ ಇದ್ದ ಕುಂಕುಮನ ಹಣೆಗೆ ಹಾಕ್ಕಂಡ್ ಬಂದ್ ಚಾಮವ್ವ ಹೇಳುವ ಕಥೆ ಕೇಳಿಕೆ ಕುದ್ದುಬಿಟ್ಟಿದ್ದೊ. ಚಾಮವ್ವ ಹೇಳ್ವ ಕಥೆಗಳೇ ಹಂಗೆ... ಅದ್ರಲ್ಲಿ ಒಂದು ಊರು ಇರೋಕು. ಅದಕ್ಕೊಬ್ಬ ರಾಜ, ಆ ರಾಜಂಗೊಬ್ಬ ಮಗ್ಳು, ಅವ್ಳಿಗೊಬ್ಬ ಹೈದ... ಚಾಮವ್ವನ ಪ್ರತೀ ಕಥೆಗಳಲ್ಲೂ ಇಷ್ಟು ಪಾತ್ರಗ ಇದ್ದೇ ಇದ್ದವೆ. ಆದ್ರೆ ಕಥೆ ಹೇಳುವ ರೀತಿ ಮತ್ತೆ ಅದರ ಬೆಳವಣಿಗೆ ದಿನದಿಂದ ದಿನಕ್ಕೆ ಬೇರೆಯೇ ಆಗಿದ್ದದ್ದೆ. ಎಲ್ಲಾ ಕಥೆಗಳ ಕ್ಲೈಮ್ಯಾಕ್ಸ್ಲಿ ರಾಜಕುಮಾರಿ ಮದುವೆ ಸೀನ್ ಕಡ್ಡಾಯ ! ಇಷ್ಟಾದ್ರೂ ಮಕ್ಕಳಿಗೆ ಆ ಕಥೆಗ ಬೋರ್ ಹೊಡ್ಸುಲೆ. ಏಕಂದ್ರೆ ಚಾಮವ್ವನ ಕಥೆಗಳಲ್ಲಿ ತುಂಬಾ ಉಪಕಥೆಗ ಇದ್ದವೆ. ಕಥೆ ಕೇಳ್ವ ಮಕ್ಕ ಮತ್ತೆ ಅವ್ರ ಅಪ್ಪ ಅಮ್ಮಂದಿರೂ ಈ ಉಪಕಥೆಗಳಲ್ಲಿ ಬಂದು ಹೋದವೆ. ಹಂಗಾಗಿ ಚಾಮವ್ವನ ಕಥೆ ಕೇಳ್ದುತೇಳಿರೇ, ಮಕ್ಕಳಿಗೆ ಎಲ್ಲಿಲ್ಲದ ಖುಷಿ. 
ಹಂಗೆ ನೋಡಿರೆ ಕಥೆ ಹೇಳುವ ಚಾಮವ್ವಂದೂ ದೊಡ್ಡ ಕಥೆನೇ. ಆ ಮನೆಗೆ ಚಾಮವ್ವ ದೂರದ ಸಂಬಂಧಿ. ಅಪ್ಪ ಇಲ್ಲದ ಚಾಮವ್ವಂಗೆ ಸಣ್ಣ ವಯಸ್ಸಲ್ಲೇ ಅವಳಮ್ಮ ಮದುವೆ ಮಾಡಿತ್ತ್. ಅದ್ರ ಮರು ವರ್ಷನೇ ಆ ಪುಣ್ಯಾತ್ಮಗಿತ್ತಿ ವೈಕುಂಠ ಸೇರಿಕಂಡಿತ್ತ್. ಚಾಮವ್ವನ ಗ್ರಹಚಾರ ನೋಡಿ, ಅಮ್ಮ ಸತ್ತ ಮರು ವರ್ಷನೇ ಅವ್ಳ ಗಂಡ ಗದ್ದೆಲಿ ನೀರು ಬಿಡಿಕೆ ಹೋಗಿರ್ಕಾಕನ ಹಾವು ಕಚ್ಚಿ ಸತ್ತಿತ್ತ್. ಗಂಡಸರೆಲ್ಲಾ ಸುಡುಕುಳಿಗೆ ಹೋಗಿದ್ದರೆ, ಮನೇಲಿ ಇದ್ದದ್ದ್ ಬರೀ ಹೆಂಗಸರ್ ಮಾತ್ರ. ಮರ್ಟ್ ಮರ್ಟ್ ಸುಸ್ತಾಗಿದ್ದ ಚಾಮವ್ವಂಗೆ ಕಿಬ್ಬೊಟ್ಟೆ ಹತ್ರ ಎಂಥದ್ದೋ ತಡ್ಕಳಕ್ಕಾಗದಂಗೆ ನೋವು ! ಕುದ್ದ ಜಾಗ ಎಲ್ಲಾ ರಕ್ತ !! ಅವ್ಳ ಅತ್ತೆನ ತಂಗೆ ಮಗ್ಳು ಬಂದ್ ಹೇಳಿಕಾಕನನೇ ಗೊತ್ತಾದ್... ಚಾಮವ್ವ ಅಂದ್ `ದೊಡ್ಡ'ವಳಾಗಿತ್ತ್ ! 
ಇತ್ತ ಗಂಡನ ತಿಥಿನೂ ಕಳ್ತ್ಲೇ, ಆಗಲೇ ಚಾಮವ್ವನ ಮದುವೆ ಮಾಡಿಕೊಟ್ಟಿದ್ದ ಮನೇಲಿ ಆಸ್ತಿಗಾಗಿ ಜಗಳ ಶುರುವಾಗಿತ್ತ್. ಕೊನೆಗೂ ತಿಥಿ ಕಳ್ದ ಮಾರನೇ ದಿನನೇ ಮೈದುನ ಮತ್ತೆ ಅತ್ತೆ ಸೇರಿಕಂಡ್ ಚಾಮವ್ವನ ಓಡಿಸಿಬಿಟ್ಟಿದ್ದೊ... ಉಟ್ಟ ಸೀರೆಲೇ ಚಾಮವ್ವ ಮಡಿಕೇರಿಗೆ ಬಂದ್ಬಿಟ್ಟಿತ್. ಶುಕ್ರವಾರ. ಸಂತೆ ದಿನ. ಏನು ಮಾಡ್ದುತಾ ಗೊತ್ತಾಗದೇ ಪ್ರೈವೆಟ್ ಬಸ್ ಸ್ಟ್ಯಾಂಡ್ಲಿ ಮರ್ಡ್ತಾ ಕುದ್ದಿದ್ದ ಇವ್ಳು, ಈ ಮನೆ ಯಜಮಾನನ ಕಣ್ಣಿಗೆ ಬಿದ್ದಿತ್. ಹೆಂಗಿದ್ದರೂ ದೂರದ ನೆಂಟರ್. ಒಂದೆರಡು ದಿನಲಿ ಎಲ್ಲಾ ಸರಿಯಾದು. ಆಮೇಲೆ ಇವ್ಳನ್ನ ವಾಪಸ್ ಕಳ್ಸಿರೆ ಆತ್ತೇಳಿ, ಈ ಯಜಮಾನ ತನ್ನ ಮನೆಗೆ ಕರ್ಕಂಡ್ ಬಂದ್ಬಿಡ್ತ್. ಆದ್ರೆ ಚಾಮವ್ವನ ಅವಳ ಗಂಡನ ಮನೆಯವು ವಾಪಸ್ ಕರ್ಕಂಡೇ ಹೋತ್ಲೇ...ಅವ್ಳಿಗೆ ಈ ಯಜಮಾನನ ಮನೆನೇ ಶಾಶ್ವತ ಆತ್. ಮೊದ್ಲಿಗೆ ಸ್ವಲ್ಪ ದಿನ ಮನೆ ಯಜಮಾನ್ತಿಗೆ ಇದ್ ಯಾಕೋ ಸರಿಕಂಡತ್ಲೆ. ವಯಸ್ಸಿಗೆ ಬಂದ ಗೂಡೆನ ಗಂಡ ಹಿಂಗೆ ಮನೇಲಿ ಕರ್ಕಂಡ್ ಬಂದ್ ಇಟ್ಕಂಡರೆ ಯಾವ ಹೆಣ್ಣ್ ತಾನೇ ಸಹಿಸಿಕಂಡದೆ ? ಚಾಮವ್ವನ ಜೊತೆ ಮನೆ ಯಜಮಾನಂಗೆ ಸಂಬಂಧ ಉಟ್ಟುತಾ ಊರುಲಿ ಕೆಲವು ಹೇಳಿಕಂಡ್ ತಿರುಗಿಕೆ ಶುರುಮಾಡ್ದೊ. ಬೆಂಕಿ ಇದ್ದರೆ ತಾನೇ ಹೊಗೆ ಏಳ್ದು?
ಇಷ್ಟ್ ಆಕಾಕನ ಮನೆ ಯಜಮಾನ್ತಿ ಕಾಯಿಲೆ ಬಿದ್ದತ್. ಮಲಗಿದ್ದಲ್ಲೇ ಎಲ್ಲಾ ಮಾಡಿಕಣ್ವ ಪರಿಸ್ಥಿತಿ. ಆಗ ಒಂದು ಚೂರೂ ಹೇಸಿಗೆ ಮಾಡಿಕಣದೆ ಯಜಮಾನ್ತಿಯ ಸೇವೆ ಮಾಡ್ದ್ ಇದೇ ಚಾಮವ್ವ. ಇದ್ನೆಲ್ಲಾ ನೋಡಿಕಾಕನ ಯಜಮಾನ್ತಿಗೆ ಚಾಮವ್ವನ ಮೇಲೆ ಕರುಣೆ ಬಾತ್...ಚಾಮವ್ವ ಸೇವೆ ಮಾಡ್ತಿದ್ದರೆ ಯಜಮಾನ್ತಿ ಕಣ್ಣಲ್ಲಿ ನೀರು... ಹಿಂಗೆ ಹಿಂಸೆ ಅನುಭವಿಸಿ, ಅನುಭವಿಸಿ ಒಂದು ದಿನ ಮನೆ ಯಜಮಾನ್ತಿ ತೀರಿಕಂಡ್ಬಿಡ್ತ್. ಅಷ್ಟೊತ್ತಿಗಾಗಲೇ ಆ ಮನೆ ಮಕ್ಕ ಎಲ್ಲಾ ದೊಡ್ಡವು ಆಗಿದ್ದೊ. ಹೆಣ್ಣು ಮಕ್ಕಳಿಗೆ ಮದುವೆನೂ ಆಗಿತ್ತ್. ಒಂದೆರಡು ವರ್ಷಲಿ ಗಂಡು ಮಕ್ಕಳಿಗೂ ಮದುವೆ ಆತ್. ಚಾಮವ್ವನ ಸ್ಥಿತೀಲಿ ಮಾತ್ರ ಯಾವುದೇ ಬದಲಾವಣೆ ಆತ್ಲೆ. ಆ ಮನೆಯ ಒಬ್ಬ ಸದಸ್ಯೆ ಆಗಿ ಮಾತ್ರ ಉಳ್ಕಂಡ್ಬಿಡ್ತ್.
ಇಂಥ ಚಾಮವ್ವ ಅದೆಲ್ಲಿಂದ ಕಥೆ ಕಲ್ತಿತ್ತೋ ಏನೋ.. ಈ 80ರ ವಯಸ್ಸಲ್ಲೂ ತುಂಬಾ ಲಾಯ್ಕ ಕಥೆ ಹೇಳ್ತಿತ್. ಮನೆ ಯಜಮಾನಂಗೆ ಈಗ ಸುಮಾರು 90 ವರ್ಷ. ಚಾಮವ್ವ ಕಥೆ ಹೇಳ್ತಿದ್ದರೆ, ದೂರಲಿ ಆರಾಮ ಕುಚರ್ಿಲಿ ಕುದ್ದ್ಕಂಡ್ ಒಂದೇ ಕಿವಿಲಿ ಕೇಳಿಕಂಡ್ ಅಂವ ಖುಷಿಪಡ್ತಿತ್. ಅವ್ಳು ಹೇಳುವ ಕಥೇಲಿ ಬರ್ವ ರಾಜಕುಮಾರ ನಾನೇ ಆಗಿ, ರಾಜಕುಮಾರಿ ಚಾಮವ್ವನೇ ಆಗಿದ್ದರೆ ಎಷ್ಟು ಲಾಯ್ಕ ಅಲಾ...ತಾ ಕನಸು ಕಾಣ್ತಿತ್ತ್. ಘಾಟಿ ಅಜ್ಜ !!!! ಹುಳಿ ಮುಪ್ಪಾತ್ಲೆ !!!


- `ಸುಮಾ' 
arebhase@gmail.com

No comments:

Post a Comment