ಸಣ್ಣದರಲ್ಲಿ ಇರ್ಕಾಕನ ನನ್ನ ತಾತನ ಜೊತೆ ಮಲ್ಗುದುತೇಳಿರೆ ನಂಗೆ ತುಂಬಾ ಖುಷಿ. ರಾತ್ರಿ ಊಟ ಆದುನೇ ಕಾಯ್ತಿದ್ದ್, ತಾತನಿಕ್ಕಿಂತ ಮೊದ್ಲೇ ನಾ ಅವ್ರ ಕಂಬಳಿ ಒಳಗೆ ಸೇರಿ ಬಿಡ್ತಿದ್ದೆ. ಪಾಪ ತಾತ...ಅವ್ಕೆ ಒಂದು ಅಭ್ಯಾಸ ಇತ್. ಒಮ್ಮೊಮ್ಮೆ ತಾತಂಗೆ ಗೊತ್ತಿಲ್ಲದೆ ಅವ್ರ ಹಿಂದುಗಡೆಂದ `ಗಾಳಿ' ಹೋಗಿಬಿಡ್ತಿತ್. ಕೆಲವು ಸಲ ಜೋರಾಗಿ ಸೌಂಡ್ ಬಂದ್ರೆ, ಮತ್ತೆ ಕೆಲವು ಸಲ ಸೈಲೆನ್ಸರ್ ಹಾಕಿದ್ದಂಗೆ ಶಬ್ದನೇ ಆಗದೇ ಆ `ಗಾಳಿ' ಹೊರಗೆ ಹೋಗಿ ಬಿಡ್ತಿತ್. ರಾತ್ರಿ ಟೈಂಲಿ ಇಂತದ್ದೆಲ್ಲಾ ಜೋರಾಗಿ ನಡೀತ್ತಿತ್. ಒಂದ್ಸಲ ನಂಗೆಂಥದ್ದೊ ಕೆಟ್ಟ ಕನಸು ಬಿದ್ದು ಮಧ್ಯರಾತ್ರಿಲಿ ಎಚ್ಚರ ಆಗಿಬಿಟ್ಟಿತ್. ಅಷ್ಟೊತ್ತಿಗೆ ತಾತ ಕಡೇಂದ ಆ `ಸೌಂಡ್' ಕೇಳಿಕೆ ಶುರುವಾತ್. ಮೊದ್ಲೇ ಕೆಟ್ಟ ಕನಸು ಬಿದ್ದು ಬೆವರ್ತಿದೆ. ಈಗ ಈ ಸೌಂಡ್ ಬೇರೆ... ಕೊನೆಗೆ ನಂಗೆ ತಡೆಯಕ್ಕೆ ಆಗದೆ, ತಾತನ ಅಲ್ಲಾಡಿಸಿ, ಅಲ್ಲಾಡಿಸಿ ಎಚ್ಚರ ಮಾಡ್ದೆ.
`ಎಂಥ ಕೂಸು ನಿಂದ್, ಸುಮ್ನೆ ಮಲಗಿಕೆ ಆಲೆನಾ...'ತಾ ತಾತ ನನ್ನನ್ನ ಕೇಳ್ತಿದ್ದಂಗೆ, ಮತ್ತೆ ಕಂಬಳಿ ಒಳಗೆಂದ ಅದೇ `ಪುರ್ರ್...' ಸೌಂಡ್ ! ನಂಗೆ ಕುತೂಹಲ ತಡೆಯಕ್ಕೆ ಆಗದೆ, ತಾತನ ಕೇಳಿಯೇ ಬಿಟ್ಟೆ, `ತಾತಾ, ತುಂಬಾ ಹೊತ್ತುಂದ ಕೇಳ್ತೊಳೆ...ಆಗಾಗ್ಗ ನಿಮ್ಮ ಕಂಬಳಿ ಒಳಗೆಂದ ಅದೆಂಥದ್ದೋ ಸೌಂಡ್ ಬಂದದೆಯಲ್ಲಾ... ಎಂಥ ತಾತ ಅದ್? ' ತಾತ ಬೊಚ್ಚು ಬಾಯಿಲೇ ನಗಾಡಿಕಂಡ್ ಒಮ್ಮೆ ನನ್ನ ಮುಖ ನೋಡ್ದೊ...`ಕೂಸು ಅದೆಲ್ಲಾ ನಿಂಗೆ ಅರ್ಥ ಆಲೆ...ಈಗ ಸುಮ್ಮನೆ ಮಲ್ಕ..'ತಾ ಹೇಳಿಕಂಡ್ ನನ್ನ ನಿದ್ರೆ ಮಾಡಿಸಿಕೆ ನೋಡ್ದೊ...ನಾನು ಅಷ್ಟು ಸುಲಭಕ್ಕೆ ನಿದ್ರೆ ಮಾಡಿನೆನಾ...`ಇಲ್ಲೆ ತಾತ, ನಂಗೆ ನೀವು ಹೇಳದಿದ್ದರೆ ನಿದ್ದೆನೇ ಬಾಲೆ...ನೀವು ಈಗಲೇ ಹೇಳೊಕು...'ತಾ ಹೇಳಿಕಂಡ್ ನಾ ಮರಡಿಕೆ ಶುರು ಮಾಡ್ದೆ. `ಅಯ್ಯೊ ಕೂಸು ಮಕ್ಕ ರಾತ್ರಿ ಹೊತ್ತು ಹಿಂಗೆಲ್ಲಾ ಮರಡಿಕೆ ಆದ್...ನಿದ್ದೆ ಮಾಡಪ್ಪಾ...ಜೋ...ಜೋ...'ತಾ ಮೆಲ್ಲೆ ನಂಗೆ ತಟ್ಟಿಕೆ ಶುರು ಮಾಡ್ದೊ. ನಂಗೆ ಸಿಟ್ಟ್ ಬಾತ್..ಅವ್ರ ಕೈನ ದೂಡಿ ಹಾಕಿ, `ಕಂಬಳಿ ಒಳೆಗೆಂದ ನೀವು ಎಂಥ ಸೌಂಡು ಮಾಡ್ದುತಾ ಹೇಳದಿದ್ದರೆ ನಿಮ್ಮ ಜೊತೆ ಮಾತಾಡ್ದುಲ್ಲೆ... ಟೂ... ಟೂ..'ತಾ ಹೇಳಿ ತಿರುಗಿ ಮಲಕ್ಕಂಡೆ...ಆಗ ತಾತ `ಕೂಸು, ಹಂಗೆ ಹಠ ಮಾಡಿರೆ ಹೆಂಗೆ? ಆ ಸೌಂಡ್ ಎಂಥತಾ ತಾನೆ ನಿಂಗೆ ಗೊತ್ತಾಕು...'ತಾ ಕೇಳ್ದೊ. ನಂಗೆ ಖುಷಿ ಆತ್.. ಮತ್ತೆ ತಾತನ ಕಡೆಗೆ ತಿರುಗಿದೆ. ಆಗ ಅವು ನನ್ನ ತಲೆನ ನಿಧಾನಕ್ಕೆ ಪೂಜಿಕಂಡ್ ಹೇಳ್ದೊ... `ಕೂಸು, ಅದ್ ದೇವರು ಕೊಟ್ಟ ಪೀಪಿ...ನಿಮಿಗೆಲ್ಲಾ ನಾವು ಪೀಪಿ ತೆಗ್ದು ಕೊಟ್ಟವೆಯಲ್ಲಾ.. ಆದ್ರೆ ನಮಿಗೆ ಯಾರು ಕೊಟ್ಟವೆ? ಅದ್ಕೆ ವಯಸ್ಸಾದ್ಮೇಲೆ ಆಟಾಡಿಕಂಡ್ ಇರ್ಲಿತಾ ದೇವರೇ ಆ ಪೀಪಿ ಕೊಟ್ಟದ್. ನಮ್ಗೆ ಬೇಜಾರು ಆಕಾಕನೆಲ್ಲಾ ಅದ್ನ ಊದ್ತಿದ್ದವೆ...ಗೊತ್ತಾತಾ? ಈಗ ಮಲ್ಕ...' ನನ್ನ ತಾತ ಈಗ ಇಲ್ಲೆ. ಆದ್ರೆ ಎಲ್ಲಾರೂ ಆ `ಹಿಂಬದಿಯ ಗಾಳಿ' ಶಬ್ದ ಕೇಳಿರೆ ನಂಗೆ `ದೇವರು ಕೊಟ್ಟ ಪೀಪಿ' ನೆನಪಾದೆ... ಅದು ನಿಮ್ಮ ಹತ್ರನೂ ಇರೋಕು ಕಂಡದೆಯಲ್ಲಾ...?
- `ಸುಮಾ'
arebhase@gmail.com
No comments:
Post a Comment