ಅವ್ಳು ಸುಚೀಂದ್ರಾ ದೇವಿ. ಜೋಧ್ಪುರ ಸಂಸ್ಥಾನದ ಮಹಾರಾಜ ಸುಶೀಲೇಂದ್ರನ ಒಬ್ಬಳೇ ಮಗಳು. ರಾಜ ಅವ್ಳನ ಮಗನಂಗೆ ಬೆಳೆಸಿತ್ತ್. ಯುದ್ಧಗಳಲ್ಲಿ ಯಾವ ಗಂಡಸಿಗೂ ಕಡಿಮೆ ಇಲ್ಲದಂಗೆ ಹೋರಾಡುವ ಕಲೆ ಸುಚೀಂದ್ರಾ ದೇವಿಗೆ ಅವ್ಳ ಗುರುಗ ಕಲಿಸಿದ್ದೊ. ಒಬ್ಬ ರಜಪೂತ ಹೈದ ಹೆಂಗೆ ಇದ್ದದೆಯೋ ಸುಚೀಂದ್ರಾದೇವಿಯೂ ಅಷ್ಟೇ ಧೈರ್ಯವಂತೆ, ಸಾಹಸಿಯೂ ಆಗಿತ್. ಗುರು ದ್ರೋಣಾಚಾರ್ಯಂಗೆ ಇವ್ಳು ಅಚ್ಚುಮೆಚ್ಚಿನ ಶಿಷ್ಯೆ. 18 ವರ್ಷದ ತುಂಬು ಯವ್ವನಕ್ಕೆ ಬಾಕಾಕನ, ಸುಚೀಂದ್ರಾ ದೇವಿದ್ ಗುರುಕುಲ ವಾಸನೂ ಮುಗ್ದಿತ್. ಈ ಗುರುಕುಲ ಇದ್ದದ್ ಕೇರಳಲಿ !
ಅಂದ್ ಸುಚೀಂದ್ರಾ ದೇವಿ ವಿದ್ಯಾಭ್ಯಾಸದ ಕೊನೆ ದಿನ. ಅಷ್ಟು ದಿನ ಅಲ್ಲಿ ಕಲ್ತದ್ನ ಗುರುಗಳ ಮುಂದೆ ಪ್ರದರ್ಶನ ಮಾಡುವ ಕಾರ್ಯಕ್ರಮ ಇತ್. ಹಿಂದಿನ ಒಂದು ವಾರ ಕಾಲ ತತ್ವಶಾಸ್ತ್ರ, ಗಣಿತ, ರಾಜ್ಯಾಡಳಿತ ಹಿಂಗೆ ಬೇರೆ ಬೇರೆ ವಿಷಯಗಳ ಪರೀಕ್ಷೆ ಇತ್. ಎಲ್ಲದರಲ್ಲೂ ಸುಚೀಂದ್ರಾ ದೇವಿಯೇ ಫಸ್ಟ್. ಕೊನೆ ದಿನ ಇದ್ದದ್ ಹೋರಾಟದ ವಿದ್ಯೆ. ದ್ರೋಣಾಚಾರ್ಯರ ಮಂಙ ವಿಶ್ವಜಿತು ಸೇರ್ದಂಗೆ ಅಲ್ಲಿದ್ದ ಎಲ್ಲವ್ರನ್ನೂ ಸುಚೀಂದ್ರಾ ದೇವಿ ಸೋಲಿಸಿಬಿಟ್ಟಿತ್ತ್. ಕತ್ತಿವರಸೆ ಮಾಡಿಕಾಕನ ಕಿವಿ ಹತ್ರ ಸಣ್ಣ ಗಾಯ ಆದ್ ಬಿಟ್ಟರೆ ಇವ್ಳಿಗೆ ಏನೂ ಆಗಿತ್ಲೆ. ಇಂಥ ಸುಚೀಂದ್ರಾ ದೇವಿನ ಗುರುಕುಲಂದ ಕರ್ಕಂಡ್ ಹೋಕೆ, ಜೋಧ್ಪುರಂದ ಮಹಾರಾಜ ಸುಶೀಲೇಂದ್ರ, ಮಹಾರಾಣಿ ಸೌಮಿತ್ರಿ ಸೇರಿ ರಾಜಪರಿವಾರನೇ ಕೇರಳದ ಅಲೆಪ್ಪಿ ಹತ್ರದ ಈ ಊರಿಗೆ ಬಂದಿಳಿದಿತ್. ಜೊತೆಗೆ ಗುರುಗಳಿಗಾಗಿ ಒಂಟೆಗಾಡಿಗಳಲ್ಲಿ ಚಿನ್ನ, ಬೆಳ್ಳಿ, ವಜ್ರ, ಹಣ್ಣು ಹಂಫಲು...ವಿದ್ಯೆಗೆ ಬೆಲೆ ಕಟ್ಟಿಕೆ ಆದೆನಾ ?
ಅದೊಂದು ಭಾವುಕ ಕ್ಷಣ. 10 ವರ್ಷ ಸ್ವಂತ ಮನೆಯೇ ಆಗಿಹೋಗಿದ್ದ ಗುರುಕುಲನ ಬಿಟ್ಟು ಹೋಗುವ ಟೈಂ. ಸುಚೀಂದ್ರಾ ದೇವಿಗೆ ಕಣ್ಣು ತುಂಬಿ ಬಂದಿತ್. ಯಾರು ಎಷ್ಟೇ ಧೈರ್ಯವಂತ ಆಗಿದ್ದ್ರೂ ಇಂಥ ಸಮಯಲಿ ಕಣ್ಣುತುಂಬಿ ಬಾದು ಸಹಜ. ಸುಚೀಂದ್ರಾ ದೇವಿಗೂ ಹಂಗೆನೇ ಆಗಿತ್ತ್. ಎದುರಿಗೆ ಇರ್ದು ಎಂಥದ್ದೂ ಕೂಡ ಕಾಣದಂಥ ಸ್ಥಿತಿ. ಗುರು ದ್ರೋಣಾಚಾರ್ಯ ಅಂತೂ ತಮ್ಮ ಶಿಷ್ಯೆನ ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸ್ತಿದ್ದೊ. 70ರ ಇಳಿವಯಸ್ಸಲ್ಲಿ ಇರ್ವ ಅವ್ಕೆ, ಅವ್ರ ಜೀವಮಾನಲಿ ಇಂಥ ಶಿಷ್ಯೆ ಸಿಕ್ಕಿತ್ತ್ಲೆ. ಗುರುಪುತ್ರ ವಿಶ್ವಜಿತು ದೂರಲಿ ನಿಂತ್ಕಂಡ್ ಇದ್ನೆಲ್ಲಾ ನೋಡ್ತಿತ್. ಅವನ ಕಣ್ಣ್ಲೂ ನೀರು ! ಗುರುಗಳ ಹೆಣ್ ಕಮಲಮ್ಮ ಇದನ್ನೆಲ್ಲಾ ನೋಡಿಕ್ಕಾಗದೆ, ಒಲೆಬುಡಲಿ ಹೋಗಿ ತಲೆ ಕೆಳಕ್ಕೆ ಹಾಕಿಕಂಡ್ ಕುದ್ದುಬಿಟ್ಟಿದ್ದೊ.
`ಗುರುಗಳೇ... ನಾ ಹೊರಡುತ್ತೊಳೆ, ಆಶೀವರ್ಾದ ಮಾಡಿ.' ಸುಚೀಂದ್ರಾ ದೇವಿ, ದ್ರೋಣಾಚಾರ್ಯರ ಕಾಲಿಗೆ ಬಿತ್ತ್. `ಧೀರ್ಘಾಯುಷ್ಯಮಾನುಭವ ಮಗಳೆ...' ಗುರುಗ ಕಣ್ಣು ತುಂಬಿಸಿಕಂಡ್ ಶಿಷ್ಯೆಗೆ ಆಶೀರ್ವಾದ ಮಾಡ್ದೊ. `ಗುರುಗಳೇ...ನೀವು ನಂಗೆ 10 ವರ್ಷ ನಿಮ್ಮಲಿದ್ದ ಎಲ್ಲಾ ವಿದ್ಯೆಗಳನ್ನ ಕಲ್ಸೊಳರಿ...ನಾ ಎಂಥ ಗುರುದಕ್ಷಿಣೆ ಕೊಡಲಿ?' ಸುಚೀಂದ್ರಾ ದೇವಿ ದು:ಖದಲ್ಲೇ ಕೇಳ್ತ್.... ಸುಮಾರು 2 ನಿಮಿಷ ಅಲ್ಲಿ ಮೌನ. ನಂತರ ದ್ರೋಣಾಚಾರ್ಯರೇ ಮಾತಾಡ್ದೋ...`ಮಗಳೇ ನಿನ್ನ ಹೆಬ್ಬೆರಳು ಕೊಡುತಾ ಕೇಳಿಕೆ ನಾ ಮಹಾಭಾರತದ ದ್ರೋಣಾಚಾರ್ಯ ಅಲ್ಲ... ಖಂಡಿತ ನಿನ್ನಿಂದ ನಂಗೆ ಗುರುದಕ್ಷಿಣೆ ಬೇಕು. ಸಮಯ ಬಂದಾಗ ನಾನೇ ಕೇಳಿನೆ...ನೀ ಈಗ ಹೋಗಿಬಿಟ್ಟು ಬಾ...'ತಾ ಹೇಳ್ದೊ.
ಜೋಧ್ಪುರದ ರಾಜಪರಿವಾರ ಸುಚೀಂದ್ರಾ ದೇವಿನ ಕರ್ಕಂಡ್ ವಾಪಸ್ ಹೊರಟತ್. ಇನ್ನೇನು ಅಲೆಪ್ಪಿ ಹೊಳೆ ದಾಟೊಕು...ಎದುರ್ಲಿ ದ್ರೋಣಾಚಾರ್ಯರ ಮಂಙ ವಿಶ್ವಜಿತು ! 10 ವರ್ಷಲಿ ಒಂದೇ ಒಂದು ದಿನ ಸುಚೀಂದ್ರಾ ದೇವಿ ಜೊತೆ ಮಾತಾಡದಂವ ಅಂದ್ ಧೈರ್ಯಲಿ ರಾಜಪರಿವಾರದ ಮುಂದೆ ನಿಂತಿತ್ತ್. ತನ್ನ ಪ್ರೇಮ ನಿವೇದನೆ ಮಾಡಿಕಂಬಕೆ ! ಅವನ ತಲೇಂದ ಕಾಲು ವರೆಗೆ ಇದ್ದ ಕೆಂಪು ರೇಷ್ಮೆ ಬಟ್ಟೆ ಮೇಲೆ ಬಿಳಿ ಅಕ್ಷರಲಿ ಎದ್ದು ಕಾಣುವಂಗೆ ಪ್ರೇಮ ಪತ್ರ ಬರ್ದ್, ಸುಚೀಂದ್ರಾ ದೇವಿ ಇದ್ದ ಒಂಟೆ ಗಾಡಿ ಮುಂದೆ ನಿಂತ್ಕಂಡಿತ್ತ್. `ಅಪ್ಪ ನಿನ್ನ ಹತ್ರ ಗುರುದಕ್ಷಿಣೆ ತಕ್ಕಂಡತ್ಲೆ...ಅಪ್ಪನ ಪರವಾಗಿ ನಾ ನಿನ್ನ ಹತ್ರ ಕೇಳ್ತೊಳೆ...ಗುರುದಕ್ಷಿಣೆ ನನ್ನ ಮೂಲಕ ಸಲ್ಲಿಕೆ ಆಗಲಿ...' ಮಾತಾಡಿಕೆ ಗೊತ್ತೇ ಇಲ್ಲದಂಗೆ ಇದ್ದ ವಿಶ್ವಜಿತು ಅಂದ್ ಧೈರ್ಯವಾಗಿ ಮಾತಾಡಿಕೆ ನಿಂತಿತ್ತ್. ಇವನ ಮಾತು ಕೇಳಿ ಜೋಧ್ಪುರದ ರಾಜಪರಿವಾರಕ್ಕೆ ಏನು ಮಾಡೊಕೂತಾ ಗೊತ್ತಾತ್ಲೆ...ಸುಚೀಂದ್ರಾ ದೇವಿಯೇ ಕೇಳ್ತ್, `ನಿಂಗೆ ಎಂಥ ಗುರುದಕ್ಷಿಣೆ ಬೇಕು ?' ಅಷ್ಟೇ ವೇಗಲಿ ವಿಶ್ವಜಿತುನ ಉತ್ತರ `ನಂಗೆ ನೀ ಬೇಕು...'
ಮಹಾರಾಜ ಸುಶೀಲೇಂದ್ರಂಗೆ ಇದ್ನ ಕೇಳಿ ತಲೆ ಕೆಟ್ಟು ಹೋತ್. ತನ್ನ ರಾಜ್ಯ ನೋಡಿಕಣಿಗೆ ಸರಿಯಾಗುವಂಗೆ ಮಗಳಿಗೆ ಇಲ್ಲಿ ವಿದ್ಯೆ ಕೊಡಿಸಿರೆ, ಗುರುಗಳ ಮಂಙ ಯಾಕೋ ಉಲ್ಟಾ ಹೊಡೀತುಟ್ಟಲ್ಲಾತಾ ಅನಿಸಿಕೆ ಶುರುವಾತ್. ಇದಕ್ಕೆ ಪರಿಹಾರ ಕೊಡಿಕೆ ದ್ರೋಣಾಚಾರ್ಯ ಒಬ್ಬರಿಂದಲೇ ಸಾಧ್ಯತಾ ಮತ್ತೆ ಎಲ್ಲವೂ ಗುರುಕುಲಕ್ಕೆ ವಾಪಸ್ ಬಂದೋ....`ಹೌದು, ನನ್ನ ಮಂಙ ಹೇಳ್ದು ಸರಿಯಾಗಿಯೇ ಉಟ್ಟು. ಸುಚೀಂದ್ರಾದೇವಿನ ನನ್ನ ಸೊಸೆ ಮಾಡಿಕೊಣಕೂತ ನಂಗೂ ಆಸೆ. ಅದ್ಕೆನೇ ಗುರುದಕ್ಷಿಣೆನಾ ಸಮಯ ಬಂದಾಗ ಕೇಳಿನೆತಾ ಹೇಳಿದ್ದೆ. ಆ ಸಮಯ ಈಗ ಬಂದುಟ್ಟು.. ಸುಚಿಂದ್ರಾದೇವಿ, ನೀ ನನ್ನ ಸೊಸೆ ಆದ್ರೆ, ಅದೇ ನಂಗೆ ಗುರುದಕ್ಷಿಣೆ...'ತಾ ದ್ರೋಣಾಚಾರ್ಯ ಹೇಳ್ದೊ. `ನಿಂಗೆ ನನ್ನಲ್ಲಿದ್ದ ಎಲ್ಲಾ ವಿದ್ಯೆ ಧಾರೆಯೆರೆದೊಳೆ...ಅದನ್ನೆಲ್ಲಾ ಇಟ್ಕಂಡ್ ನೀ ರಾಜ್ಯ ಆಳಿರೆ ಯಾರಿಗೂ ಪ್ರಯೋಜನ ಇಲ್ಲೆ. ಬದಲಿಗೆ ಈ ಗುರುಕುಲದ ಜವಾಬ್ದಾರಿ ತಕ್ಕಂಡ್ ನಿಂಗೆ ಗೊತ್ತಿದ್ದನ್ನ ನಾಲ್ಕು ಜನರಿಗೆ ಹೇಳಿಕೊಟ್ಟರೆ, ನಾನು ನಿಂಗೆ ಕಲಿಸಿದ್ದೂ ಸಾರ್ಥಕ ಆದೆ. ಹೆಂಗೂ ನಂಗೆ ವಯಸ್ಸಾತಲ್ಲಾ...'
ಸುಚೀಂದ್ರಾ ದೇವಿ ಕೂಡ್ಲೆ ಗುರುಗಳ ಮಾತ್ನ ಒಪ್ಪಿಕಂಡತ್. ಆದ್ರೆ ಈಗ ಕಣ್ಣೀರು ಸುರ್ಸುವ ಸರದಿ ಜೋಧಪುರದ ರಾಜದಂಪತಿದ್ದ್ !!
- `ಸುಮಾ'
No comments:
Post a Comment