Thursday 31 May 2012

ಭಗಂಡೇಶ್ವರನ ಹತ್ತಿರ ಭೈರಾಗಿ...


ಟಕ್ ಟಕ್ ಟಕ್ ಟಕ್....ಆ ಸನ್ಯಾಸಿ ನಡ್ಕಂಡ್ ಬರ್ತಿದ್ರೆ ಹಿಂಗೆನೇ ಶಬ್ದ ಕೇಳುದು. ಯಾಕಂದ್ರೆ ಕಾಲಲ್ಲಿ ಇದ್ದದ್ದ್ ಮರದ ಚಪ್ಪಲ್ ! ಅವ್ರ ಹೆಸ್ರು ಏನೂತಾ ಯಾರಿಗೂ ಗೊತ್ತಿತ್ಲೆ. ಎಲ್ಲವೂ `ಸ್ವಾಮೀ..' ತಾ ಕರೀತ್ತಿದ್ದೊ... ನೋಡಿಕೆ ಎತ್ತರದ ಆಳು. ಉದ್ದುದ್ದ ಬಿಳಿ ತಲೆಕೂದಲು, ಯಾವತ್ತೂ ಬ್ಲೇಡ್ ಕಾಣದೇ ಇರ್ವ ಗಡ್ಡ ಮೀಸೆ. ಮುಖಲಿ ಎರಡು ಕಣ್ಣು ಬಿಟ್ಟರೆ, ಉಳಿದೆಲ್ಲಾ ಜಾಗನ ಕೂದಲು ಮುಚ್ಚಿಕಂಡ್ಬಿಟ್ಟಿತ್. ಕಾವಿ ಬಟ್ಟೆ ಹಾಕ್ತಿತ್. ದೂರಂದ ನೋಡಿರೆ ಥೇಟ್ ಬೆರ್ಚಪ್ಪ ! ಹಂಗಾಗಿ ಮಕ್ಕ ಅಳ್ತಿದ್ರೆ `ಮರ್ಡುಬೇಡ....ನೀ ಜೋರಾಗಿ ಮರ್ಟರೆ, ಆ ಸ್ವಾಮಿನ ಕರ್ದನೆ ನೋಡು..'ತಾ ಅಮ್ಮಂದಿರು ಹೆದರಿಸ್ತಿದ್ದೊ... ಮಕ್ಕ ಆಗ ಮರ್ಡುದುನ ನಿಲ್ಲಿಸಿ ಅಮ್ಮನ ಸೀರೆ ಒಳಗೆ ಮುಖ ಹಾಕಿಕಂಡ್ ಸುಮ್ನೆ ಆಗಿಬಿಡ್ತಿದ್ದೊ....
ಹಂಗೆತೇಳಿ ಆ ಸ್ವಾಮಿ ಕೆಟ್ಟವನೇನೂ ಅಲ್ಲ. ನೋಡಿಕೆ ಕುರೂಪಿ ಹಂಗೆ ಕಂಡರೂ ತುಂಬಾ ಮೃದು ಮನಸ್ಸಿನಂವ. ಭಗಂಡೇಶ್ವರ ದೇವಸ್ಥಾನ ಬಾಗಿಲಲ್ಲೇ ಇರ್ವ ಜಗುಲಿಯೇ ಅವನ ಆಸ್ಥಾನ.  ಪಕ್ಕದಲ್ಲಿ ಇರ್ವ ಮಾಸಿದ ಬಟ್ಟೆಯ ಗಂಟೇ ಅವನ ಸರ್ವಸ್ವ. ಆ ಸ್ವಾಮಿ ಎಲ್ಲೇ ಹೋದ್ರೂ ಆ ಬಟ್ಟೆಯ ಗಂಟು ಅಲ್ಲೇ, ಆ ಜಗುಲಿಯ ಮೇಲೆಯೇ ಇರ್ತಿತ್ತ್. ಅದರೊಳಗೆ ಏನುಟ್ಟುತಾ ಯಾರೂ  ಒಂದು ದಿನನೂ ಬಿಚ್ಚಿ ನೋಡಿಕೆ ಹೋತ್ಲೆ. ದೇವಸ್ಥಾನಕ್ಕೆ ಬರುವ ಭಕ್ತರು ಕೊಡುವ ಭಿಕ್ಷೆ ಹಣಲಿ ಸನ್ಯಾಸಿ ಬದುಕುತಿತ್. ಭಾಗಮಂಡಲಲಿ ಇರ್ವ ಹಿರಿ ತಲೆಗ ಕೂಡ `ಈ ಸ್ವಾಮೀಜಿ ನಾನು ಸಣ್ಣಂವ ಇರ್ಕಾಕನನೇ ನೋಡ್ಯೊಳೆ... ಆಗ್ಗಿಂದಲೂ ಹಿಂಗೆನೇ ಉಟ್ಟು'ತಾ ಹೇಳ್ತಿದ್ದೊ. ಹಂಗಾಗಿ ಅವನ ವಯಸ್ಸೆಷ್ಟು ? ಇಲ್ಲಿಗೆ ಬಂದು ಎಷ್ಟು ಸಮಯ ಆತ್ತಾ ಯಾರೋಬ್ಬರಿಗೂ ಗೊತ್ತಿತ್ಲೆ. ಇನ್ನು ಆ ಸನ್ಯಾಸಿಗೆ ಬರೀ ಮಲೆಯಾಳಂ ಭಾಷೆ ಮಾತ್ರ ಬರ್ತಿತ್ !
ಭಾಗಮಂಡಲಲಿ ನಮ್ಮದೊಂದು ದೊಡ್ಡ ಕಪಿಸೈನ್ಯ ಇತ್. ಇದೇನು ನಾವೇ ಇಟ್ಕಂಡ ಹೆಸ್ರಲ್ಲ. ನಮ್ಮ ಉಪದ್ರವ ಸಹಿಸಿಕೆ ಆಗದೇ, ಊರವೇ ಕಪಿಸೈನ್ಯತಾ ಕರೀತ್ತಿದ್ದೊ. ಭಾಗಮಂಡಲತೇಳಿರೆ ಗೊತ್ತಲ್ಲಾ, ಹೇಳಿಕೇಳಿ ಮಳೆಯ ಊರು. ಹಂಗಾಗಿ ಆ ಜೋರು ಮಳೆ ಇರ್ಕಾಕನ ನಮಿಗೆ ಸ್ಕೂಲ್ ಗ್ರೌಂಡ್ಗೆ ಹೋಗಿ ಆಡಿಕೆ ಆಗ್ತಿತ್ಲೆ. ಆಗೆಲ್ಲಾ ನಾವು ಸ್ಕೂಲ್ಂದ ಬಂದ ಕೂಡ್ಲೆ ದೇವಸ್ಥಾನಲಿ ಸೇರಿಕಂಡುಬಿಡ್ತಿದ್ದೊ. ಅಲ್ಲಿ ನಮ್ಮದೇ ಸಾಮ್ರಾಜ್ಯ. ಏನು ಮಾಡಿರೂ ಯಾರೂ ಕೇಳವು ಇತ್ಲೆ. ನಮ್ಮ ಕಪಿ ಆಟನೆಲ್ಲಾ ಆ ಸನ್ಯಾಸಿ ಅಲ್ಲೇ ಕುದ್ದ್ಕಂಡ್ ನೋಡ್ತಿತ್...ಅವನ ಕಾಡುನಂಥ ಮೀಸೆ ಒಳಗೆಂದ ಕಂಡೂ ಕಾಣದಂಗೆ ಸಣ್ಣ ನಗು ಮಿಂಚಿ ಮರೆಯಾಗ್ತಿತ್. ಬಹುಶ: ಅವಂಗೆ ಅವನ ಬಾಲ್ಯ ಕೂಡ ನೆನಪಿಗೆ ಬರ್ತಿತ್ತೋ ಏನೋ... ತುಂಬಾ ಖುಷಿಯಾದ ದಿನ ನಮಗೆಲ್ಲಾ ಕೊಬ್ಬರಿ ಮಿಠಾಯಿ ಹಂಚ್ತಿತ್ತ್....
ಅದೊಂದು ಮಳೆಗಾಲ. ಆಶ್ಲೇಷ ಮಳೆ ಕಣ್ಣುಮುಚ್ಚಿಕಂಡ್ ಹೊಡೀತ್ತಿತ್. ಭಾಗಮಂಡಲಂದ ನಾಪೋಕ್ಲುಗೆ ಹೋಗುವ ರೋಡ್ ಮೇಲೆ ಸೊಂಟದ ವರೆಗೆ ನೀರು ಬಂದಿತ್. ಇನ್ನು ಮಡಿಕೇರಿ ರೋಡ್ ಮೇಲೆ ಚೌಂಡಿ ಕಳ ಹತ್ರ ಸ್ವಲ್ಪ ಸ್ವಲ್ಪ ನೀರು ಹರೀತ್ತಿತ್ತಷ್ಟೆ....ಕಾಯಿಲೆ ಅಂದ್ರೆ ಏನೂತನೇ ಗೊತ್ತಿರದಿದ್ದ ಸನ್ಯಾಸಿಗೆ ಅಂದ್ ಜ್ವರ ಬಂದ್ಬಿಟ್ಟಿತ್. ಮಲಗಿದ್ದಲ್ಲೇ ಜೋರಾಗಿ ನಡುಗ್ತಿತ್ತ್. ಪೂಜೆಗೆ ನೀರು ತಾಕೆ ಹೋಗಿದ್ದ ಭಟ್ಟನ ಕಣ್ಣಿಗೆ ಇದ್ ಬಿದ್ದಿತ್. ಅಂವ ಊರವ್ಕೆ ವಿಷಯ ಮುಟ್ಟಿಸ್ತ್. ಅಷ್ಟುಹೊತ್ತಿಗೆ ಹೊಳೆ ನೀರು ದೇವಸ್ಥಾನದ ಮೆಟ್ಟಿಲು ವರೆಗೆ ಬಂದ್ ಬಿಟ್ಟಿತ್. ಭಾಗಮಂಡಲ ದ್ವೀಪ ಥರ ಆಗಿಬಿಡ್ತ್. ಸನ್ಯಾಸಿ ಸ್ಥಿತಿ ತುಂಬಾ ಸೀರಿಯಸ್ ಆಗಿತ್. ಎಲ್ಲವೂ ಸೇರಿ ಅವ್ನ ಭಾಗಮಂಡಲ ಆಸ್ಪತ್ರೆಗೆ ಸೇರಿಸಿದೋ....ಅಲ್ಲಿ ಡಾಕ್ಟರ್ ಇತ್ಲೆ. ನರ್ಸ್ ಟ್ರಿಟ್ಮೆಂಟ್ ಕೊಡ್ತ್. ಮಡಿಕೇರಿಗೆ ಕರ್ಕಂಡ್ ಹೋದ್ರೆ ಮಾತ್ರ ಸನ್ಯಾಸಿ ಉಳ್ದದೆತಾ ಆ ನರ್ಸ್  ಹೇಳ್ತ್.... ಹೆಂಗೆ ಕರ್ಕಂಡ್ ಹೋದು...ರಸ್ತೆ ಎಲ್ಲಾ ಬಂದ್ ಆಗಿಬಿಟ್ಟಿತ್ತಲ್ಲಾ....
ಮಾರನೆ ದಿನದ ಸೂರ್ಯನ ನೋಡಿಕೆ ಆ ಸನ್ಯಾಸಿ ಬದುಕಿತ್ಲೆ....ಊರವೆಲ್ಲಾ ಸೇರಿ, ಕೋಲಾಟ ಬಾಣೆಲಿ ಸನ್ಯಾಸಿ ಶವನ ದಫನ್ ಮಾಡ್ದೊ...ಇನ್ ಉಳ್ದಿದ್ದ ಅವನ ಆಸ್ತಿತೇಳಿರೆ, ಆ ಮಾಸಿದ ಬಟ್ಟೆಯ ಗಂಟು ಮಾತ್ರ. ಯಾರೂ ಅದ್ನ ಮುಟ್ಟಿಕೆ ಹೋತ್ಲೆ....ಅದಾಗಿ ಒಂದು ಹದಿನೈದು ದಿನ ಕಳ್ದಿರ್ದೇನೋ... ನಾವು ಆಟಾಡಿಕಂಡ್ ಇರ್ಕಾಕನ ನಮ್ಮಲ್ಲಿ ಒಬ್ಬಂಗೆ ಆ ಬಟ್ಟೆಗಂಟ್ಂದ ಹೊರಗೆ ನೂರು ರೂಪಾಯಿ ನೋಟು ಕಂಡಂಗೆ ಆತ್. ನಾವು ಹೋಗಿ ಅದ್ನ ಊರವ್ಕೆ ಹೇಳ್ದೊ...ನಾಲ್ಕೈದು ಜನ ದೊಡ್ಡವು ಬಂದ್ ಆ ಬಟ್ಟೆ ಗಂಟ್ ಬಿಚ್ಚಿರೆ....ಎಲ್ಲವ್ಕೂ ಆಶ್ಚರ್ಯ. ನೂರು ರೂಪಾಯಿ ನೋಟುನ ಕಟ್ಟುಗ, ಚಿನ್ನದ ನಾಣ್ಯಗ, ಸರ, ಬೆಳ್ಳಿಯ ಸಾಮಾನು...ಎಲ್ಲನೂ ಲೆಕ್ಕ ಹಾಕಿಕಾಕನ ಆ ತೀರಿ ಹೋದ ಸನ್ಯಾಸಿಯೇ ಭಾಗಮಂಡಲಕ್ಕೆ ದೊಡ್ಡ ಶ್ರೀಮಂತ ಆಗಿತ್ ! ಕೊನೆಗೆ ಅವನ ದುಡ್ಡುಲೇ ಜೋರಾಗಿ ತಿಥಿ ಮಾಡ್ದೋ...ಉಳ್ದ ದುಡ್ಡು ದೇವಸ್ಥಾನದ ಭಂಡಾರಕ್ಕೆ ಹಾಕಿದೊ...
ಭಾಗಮಂಡಲ ದೇವಸ್ಥಾನನೇ ಈಗ ಬದಲಾಗ್ಯುಟ್ಟು. ಆ ಸನ್ಯಾಸಿ ಕೂರ್ತಿದ್ದ ಜಗುಲಿಯ ಗುರುತೇ ಸಿಕ್ಕುಲ್ಲೆ...ನಾವು ಆಟ ಆಡ್ತಿದ್ದ ದೇವಸ್ಥಾನದ ಆ ಅಂಗಳನೂ ಕಾಣ್ತಿಲ್ಲೆ....

- `ಸುಮ' 

No comments:

Post a Comment