ಪುಟ್ಟ ಅವನಿಷ್ಟಕ್ಕೆ ಅಂವ ನಡ್ಕಂಡ್ ಹೋಗ್ತಿತ್ತ್. ಅಷ್ಟೊತ್ತಿಗೆ ದೂರಲಿ ಒಂದು ಗಿಣಿ ಇವನನ್ನೇ ಕರ್ದಂಗೆ ಆತ್. ಒಮ್ಮೆ ತಿರುಗಿ ನೋಡ್ತ್. ತುಂಬಾ ಲಾಯ್ಕದ ಗಿಣಿ...ಆದ್ರೆ ಹಳೇದೆಲ್ಲಾ ಗ್ಯಾನ ಆಗಿ, ಈ ಗಿಣಿ ಸಹವಾಸನೇ ಬೇಡತಾ ಮುಂದಕ್ಕೆ ಹೋತ್. ಅಷ್ಟೊತ್ತಿಗೆ ಗಿಣಿ ಮತ್ತೊಂದ್ಸಲ ಪುಟ್ಟನ ಕರ್ದಂಗೆ ಕೇಳ್ತ್. ಯಾಕೋ ಇವನ ಮನಸ್ಸು ಸ್ವಲ್ಪ ಬದಲಾದಂಗೆ ಅನ್ನಿಸಿತ್... ಇನ್ನೇನ್ ಆ ಗಿಣಿನ ಹಿಡಿಯೊಕು, ಅಷ್ಟೊತ್ತಿಗೆ ಮತ್ತೆ ಹಳೇ ವಿಷಯ ಕಣ್ಮುಂದೆ ಬಾತ್.
ಏಳು ವರ್ಷದ ಹಿಂದೆ ಇರೋಕು ಕಂಡದೆ. ಅಂದು ಸನಾ ಪುಟ್ಟ ಇದೇ ದಾರೀಲಿ ಹೋಗ್ತಿತ್. ಆಗ ಪೊಂಗಾರೆ ಮರದ ಕೆಳಗೆ ಒಂದು ಗಿಣಿ ಕಾಲು ಮುರ್ಕಂಡ್ ಬಿದ್ದಿತ್ತ್. ಇಂವ ಅದ್ರ ಹತ್ರ ಹೋದಷ್ಟೂ, ಗಿಣಿ ಕುಂಟಿಕಂಡ್ ಕುಂಟಿಕಂಡ್ ದೂರ ದೂರ ಓಡ್ತಿತ್ತ್. ಸುಮಾರ್ ಹೊತ್ತು ಪೂಸಿ ಹೊಡ್ದ್ ಆದ್ಮೇಲೆ ಆ ಗಿಣಿಗೆ ಇವನ ಮೇಲೆ ನಂಬಿಕೆ ಬಾತ್. ಇಂವ ಕೈ ತೋರಿಸ್ತಿದ್ದಂತೆ, ಕೈ ಮೇಲೆ ಹತ್ತಿ ಕುದ್ದ್ಕಣ್ತ್. ಖುಷೀಲೇ ಗಿಣಿನ ಮನೆಗೆ ತಕ್ಕಂಡ್ ಹೋತ್. ಗೋಪಾಲ ಆಚಾರಿ ಹತ್ರ ಹೇಳಿ ಒಳ್ಳೆ ಪಂಜರ ಮಾಡಿಸಿಕಂಡತ್. ಆ ಪಂಜರನ ತನ್ನದೇ ಕೋಂಬರೇಲಿ ಇಟ್ಕಂಡತ್...ದಿನಾ ಹಾಲು, ಹಣ್ಣು ಕೊಟ್ಟ್, ಮುರ್ದ್ ಹೋಗಿದ್ದ ಕಾಲಿಗೆ ಮದ್ದ್ ಹಾಕಿ ಲಾಯ್ಕ ಸಾಂಕಿತ್. ಮೂರು ತಿಂಗಳಲ್ಲೇ ಗಿಣಿ ಹುಷಾರಾತ್. ಮೈ ಕೈ ತುಂಬಿಕಂಡ್ ನಾಲ್ಕ್ ಜನ ನೋಡುವಂಗೆ ಆತ್... ಪಂಜರದ ಬಾಗಿಲ್ನ ಪುಟ್ಟ ಯಾವತ್ತೂ ಮುಚ್ಚುತ್ತಿತ್ಲೆ....ಅಷ್ಟೊಂದು ನಂಬಿಕೆ ಅವನ ಗಿಣಿ ಮೇಲೆ...
ಅದೊಂದು ದಿನ ಹೊರಗೆಲ್ಲೋ ಹೋಗಿದ್ದ ಪುಟ್ಟ ಮನೆ ಸೇರಿಕಾಕನ ಕತ್ತಲೆ ಆಗಿತ್ತ್. ಇವನ ಕೋಂಬರೆಗೆ ಬಂದ್ ಪಂಜರ ನೋಡಿರೆ ಅಲ್ಲಿ ಗಿಣಿ ಇಲ್ಲೆ ! ಕಟ್ಲ್ ಕೆಳಗೆ, ಅಟ್ಟದ ಮೇಲೆ, ಏಲಕ್ಕಿ ಗೂಡ್...ಹಿಂಗೆ ಎಲ್ಲಾ ಕಡೆ ಹುಡುಕಿತ್...ಹೂಂ, ನಾಪತ್ತೆ. ತುಂಬಾ ಬೇಸರ ಆತ್. ರಾತ್ರಿ ಸರಿ ನಿದ್ದೆನೂ ಬಾತ್ಲೆ. ಬೆಳಿಗ್ಗೆ ಎದ್ದ್ ಕಿಡಿಕಿಲೆ ನೋಡಿರೆ, ಮಾವಿನ ಮರಲಿ ಕುದ್ದಿತ್ತ್ ಇವನ ಗಿಣಿ ! ಜೊತೇಲಿ ಮತ್ತೊಂದು ಗಿಣಿ...ಪುಟ್ಟ ಕರ್ದರೆ ಅಲಾ ಎಂಥ ಮಾಡಿರೂ ಅದ್ ಇವನ ಹತ್ರ ಬಾತ್ಲೆ...ಹತ್ರ ಹೋಕಾಕನ ಜೊತೇಲಿದ್ದ ಗಿಣಿ ಜೊತೆ ಹಾರಿ ಹೋತ್ ದೂರ...ತುಂಬಾ ದೂರ. ಮತ್ತೆ ಅದ್ ಇವನ ಕಣ್ಣಿಗೆ ಬಿದ್ದಿತ್ಲೆ. ಅಂದ್ಂದ ಇಂವಂಗೆ ಗಿಣಿಗತೇಳಿರೆ ಅಷ್ಟಕಷ್ಟೇ...
ಹಿಂಗೆ ಹಳೇದನ್ನೆಲ್ಲಾ ಯೋಚನೆ ಮಾಡಿಕಂಡ್ ಹೋಕಾಕನ ಈ ಹೊಸ ಗಿಣಿ ಪುಟ್ಟನ ಹಿಂದೆನೇ ಬಾತ್. `ನನ್ನನ್ನೊಮ್ಮೆ ನಿನ್ನ ಮನೆಗೆ ಕರ್ಕಂಡ್ ಹೋಗು ಮಾರಾಯ' ತಾ ಹೇಳುವಂಗೆ ಜೋರಾಗಿ ಮರ್ಡ್ ತಿತ್ತ್. ಯಾಕೋ ಗೊತ್ಲೆ ಹೊಸ ಗಿಣಿ ಮೇಲೆ ಪುಟ್ಟಂಗೆ ಆಸೆ ಹುಟ್ಟಿತ್. ಹಂಗೆತೇಳಿ ಮನೆಗೆ ತಕ್ಕಂಡ್ ಹೋಕೆ ಮನಸ್ಸು ಒಪ್ಪಿತ್ಲೆ. ಯಾಕೆತೇಳಿರೆ ಹಳೇ ಪಂಜರ ಉಪಯೋಗಿಸದೇ ಪೂರ್ತಿ ಹಾಳಾಗಿತ್ತ್. ಅದಕ್ಕಿಂತ ಹೆಚ್ಚುತೇಳಿರೆ ಮತ್ತೊಂದು ಗಿಣಿ ತಾಕೆ ಇವನ ಮನೇಲಿ ಒಪ್ತಿತ್ಲೆ...ಅವ್ರ ಮನಸ್ಲಿ ಹಳೇ ಗಿಣಿ ಮಾಡ್ದ ಗಾಯ ಹಂಗೆನೇ ಉಳ್ಕಂಡಿತ್ತ್. ಆದ್ರೆ ಹೊಸ ಗಿಣಿ ಪುಟ್ಟನ ಬಿಡುವಂಗೆ ಕಾಣ್ತ್ಲೇ...ಇಂವ ಹೋಗುವ ದಾರೀಲಿ ದಿನಾ ಪ್ರತ್ಯಕ್ಷ ಆಗಿ ಜೋರಾಗಿ ಮರ್ಡ್ತಿತ್ತ್. ಪುಟ್ಟಂಗೆ ಈ ಗಿಣಿ ಮೇಲೆ ಆಸೆ ಜಾಸ್ತಿ ಆತ್. ಮನೇಲಿರ್ವ ಹಳೇ ಪಂಜರನ ಮೊದ್ಲು ಸರಿಮಾಡ್ತ್. ಇದಾದ್ಮೇಲೆ ಮನೆಯವ್ರನ್ನ ಒಪ್ಪಿಸಿತ್. ಇನ್ನೇನ್ ಗಿಣಿನ ತರೋಕೂತ ಆ ಗಿಣಿ ದಿನಾ ಕುದ್ದಿರ್ತಿದ್ದಲ್ಲಿ ಹೋಗಿ ನೋಡಿರೆ, ಇವನ ಎದೆ ಒಡೆಯುದೊಂದೇ ಬಾಕಿ ! ಈ ಗಿಣಿನೂ ಮತ್ತೊಂದು ಹೊಸ ಗಿಣಿ ಜೊತೆ ಕುದ್ದ್ ನಗಾಡ್ತಿತ್ತ್ !!! ಛೇ...ನಂಬಿಕಾದ್ ಗಿಣಿಗಳ್ನ...
- ಸುನಿಲ್ ಪೊನ್ನೇಟಿ
No comments:
Post a Comment