Monday 5 March 2012

ಬಂಗಾರದ ಅಂಗಡಿಯ ಗೂಡೆ


ಎಲ್ಲೆಲ್ಲೂ ಫಳ ಫಳ ಹೊಳೆವ ಚಿನ್ನ. ನೋಡಿಕಷ್ಟೇ ಚೆನ್ನ ! ಪ್ರತಿಯೊಬ್ಬರ ಮೇಲೂ ಕಣ್ಣಿಟ್ಟಿರ್ವ ಸಿಸಿ ಕೆಮೆರಾ.. ಸಣ್ಣ ಡೌಟ್ ಬಂದರೂ ಅಲರ್ಟ್  ಆಗ್ವ ಸೆಕ್ಯೂರಿಟಿಯಂವ....ಆದ್ರೂ ಮನಸ್ಸಿನೊಳಗೊಂದು ಸಣ್ಣ ಆಸೆ...ಹೊಸದಾಗಿ ಬಂದಿರ್ವ ಆ ನೆಕ್ಲೆಸ್ ಹಾಕ್ಕಂಡ್ ಕನ್ನಡಿ ಮುಂದೆ ನಿಂತುಕಣೊಕು. ನಾ ಹೆಂಗೆ ಕಂಡನೆತಾ ನೋಡೊಕು..!
ಭಾರತಿ ಮನೇಲಿ ಗೋಡೆ ಗೋಡೆಗಳಲ್ಲಿ ಕಾಣ್ತಿದ್ದದ್ದ್ ಬಡತನ. ಕಷ್ಟಪಟ್ಟು ಪಿಯುಸಿವರೆಗೆ ಓದಿತ್ತ್. ಒಳ್ಳೆ ಮಾರ್ಕ್ಸ್  ಬಂದ್ರೂ, ಡಿಗ್ರಿ ಮಾಡುದು ಬರೀ ಕನಸಾಗಿತ್ತ್. ಇದ್ರ ಜೊತೆ ಬೆನ್ನ ಹಿಂದೆ ಇಬ್ಬರು ತಂಗೆಕ ಬೇರೆ....ಒಬ್ಳು ಎಸ್ಎಸ್ಎಲ್ಸಿ, ಮತ್ತೊಬ್ಳು ಏಳನೇ ಕ್ಲಾಸ್. ಹಂಗಾಗಿ ಭಾರತಿಗೆ ಓದು ಬಿಡುದು ಅನಿವಾರ್ಯ ಆತ್. ಕಾಲೇಜಿಗೆ ಹೋಗ್ವ ಆಸೆ ಇದ್ರೂ ಮನೆ ಸ್ಥಿತಿ ಯೋಚನೆ ಮಾಡಿ, ಸುಮ್ಮನೆ ಕುದ್ದುಕಣ್ತ್.
`ಹೊಸದಾಗಿ ಪ್ರಾರಂಭ ಆಗುತ್ತಿರುವ ಚಿನ್ನಾಭರಣ ಅಂಗಡಿಯೊಂದಕ್ಕೆ ಸೆಲ್ಸ್  ಗರ್ಲ್ಸ್  ಬೇಕಾಗಿದ್ದಾರೆ...' ತಾ ಪೇಪರ್ಲಿ ಒಂದು ಜಾಹೀರಾತ್ ಬಂದಿತ್. ಪೇಟೆ ಅಂಗಡೀಲಿ ಈ ಪೇಪರ್ನ ನೋಡ್ದ ಭಾರತಿ ಅಪ್ಪ, ಮಾರನೇ ದಿನನೇ ಅವ್ಳನ್ನ ಕರ್ಕಂಡ್ ಕುಶಾಲನಗರಕ್ಕೆ ಹೋತ್. ಆ ಹೊಸ ಚಿನ್ನದಂಗಡಿಯ ಕೆಲಸ ಭಾರೀ ಜೋರಾಗಿ ನಡೀತಿತ್ತ್. ಅಲ್ಲೊಬ್ಬ ಕೂಲಿಂಗ್ ಗ್ಲಾಸ್ ಹಾಕ್ಕಂಡ್ ನಿಂತಿದ್ದವನ ಹತ್ರ ಭಾರತಿ ಮತ್ತೆ ಅವಳಪ್ಪ ಹೋದೋ.. ಅಂವ ಇವರಿಬ್ಬರನ್ನ ಅವ್ನ ಛೇಂಬರ್ಗೆ ಕರ್ಕಂಡ್ ಹೋತ್. ಭಾರತಿ ಕೈಕಟ್ಟಿ ತಲೆತಗ್ಗಿಸಿ ನಿಂತ್ಕಂಡ್, ಆ ಅಂಗಡಿಯಂವ ಕೇಳ್ದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟತ್. ಅವಂಗೂ ಖುಷಿಯಾತ್. `ನಿಮ್ಮ ಮಗಳನ್ನ ಕೆಲಸಕ್ಕೆ ತಕ್ಕೊಳ್ತಿದ್ದೀನಿ..ಸಾವಿರದ ಐನೂರು ರೂಪಾಯಿ ಸಂಬಳ...ಆಮೇಲೆ ಜಾಸ್ತಿ ಆಗುತ್ತೆ. ಆದ್ರೆ ನೀವು 10 ಸಾವಿರ ರೂಪಾಯಿ ಡಿಪಾಸಿಟ್ ಇಡ್ಬೇಕು...ಇದು ಚಿನ್ನದ ಅಂಗಡಿ ನೋಡಿ...'ತಾ ಹೇಳ್ತ್. ಹತ್ತು ಸಾವಿರ ರೂಪಾಯಿ ಇದ್ದಿದ್ದರೆ ಇವ್ಳನ್ನ ಕಾಲೇಜಿಗೆ ಕಳಿಸ್ತಿತ್ಲೆನಾ...ಇದೆಲ್ಲಾ ಆಕಿರುವ ಕೆಲಸ ಅಲ್ಲತಾ ಭಾರತಿನ ಕರ್ಕಂಡ್ ಅವಳಪ್ಪ ಮನೆಗೆ ವಾಪಸ್ ಬಾತ್.
  ಭಾರತಿ ಅಮ್ಮಂಗೆ ಎಲ್ಲಾ ವಿಷಯನೂ ಹೇಳ್ತ್...ಸಾವಿರದೈನೂರು ರೂಪಾಯಿ ಸಿಕ್ಕಿರೆ ಮನೆ ಖರ್ಚ್ ಗೆ  ಹೆಂಗೂ ಆದೆ.. ಆದ್ರೆ 10 ಸಾವಿರ ರೂಪಾಯಿ ಎಲ್ಲಿಂದ ತಾದು? ಅಷ್ಟೊತ್ತಿಗೆ, ಭಾರತಿ ಅಮ್ಮಂಗೆ ಕುತ್ತಿಗೆಲೀದ್ದ ತಾಳಿ ಚೈನ್ ಮೇಲೆ ಕಣ್ಣ್ ಬಿತ್ತ್. ಹೌದು, ಇದನ್ನ ಅಡವು ಇಟ್ಟರೆ, 12 ಸಾವಿರ ರೂಪಾಯಿ ಸಿಕ್ಕಿದೆ. 10 ಸಾವಿರನ ಚಿನ್ನದಂಗಡೀಲಿ ಡಿಪಾಸಿಟ್ ಇಟ್, ಉಳ್ದ ದುಡ್ಡ್ನ ಉಳ್ದ ಇಬ್ಬರ ಫೀಸ್ ಕಟ್ಟಿಕೆ ಆದೆತಾ ಯೋಚನೆ ಮಾಡ್ಕಂಡ್ ಸೇಟು ಅಂಗಡಿ ಕಡೆ ನಡ್ತ್. ವಾಪಸ್ ಬಾಕಾಕನ ಕುತ್ತಿಗೇಲಿ ಅರಸಿಣ ದಾರ.
ಹಂಗೆ ಭಾರತಿ ಚಿನ್ನದಂಗಡಿ ಸೇರ್ಕಂಡಿತ್. ಒಂದು ವರ್ಷ ಕಳೆದ್ರೂ ಅವಳಮ್ಮಂಗೆ ತಾಳಿ ಚೈನ್ ಬಿಡಿಸಿಕಂಬಕೆ ಆಗಿತ್ಲೆ. ಇಂಥ ಭಾರತಿಗೆ ಇಂದ್ ಕೆಟ್ಟ ಆಸೆ ಕಾಣಿಸಿಕಂಡಿತ್ತ್. ಆಗಾಗ್ಗ ಆ ನೆಕ್ಲೆಸ್ ಹತ್ರ ಹೋಗಿ ಬಾದು ಮಾಡ್ತಿತ್. ಅಂಗಡೀಲಿ ತುಂಬಾ ಜನ ಇದ್ದಿದ್ದರಿಂದ, ಎಲ್ಲವೂ ಅವರದ್ದೇ ಲೋಕದಲ್ಲಿ ಇದ್ದೊ. ಟೈಂ ನೋಡಿ ಮೆಲ್ಲೆ ಆ ಹೊಳೆಯುವ ನೆಕ್ಲೆಸ್ ತಕ್ಕಣ್ತ್.. ರೆಸ್ಟ್ರೂಂಗೆ ಹೋಗಿ ಕನ್ನಡಿ ಮುಂದೆ ನಿಂತ್ ಕುತ್ತಿಗೆಗೆ ಒಮ್ಮೆ ಹಾಕಂಬದು ನಂತ್ರ ಅದ್ನ ತಂದು ಅಲ್ಲೇ ಇಟ್ಟುಬಿಡ್ದು ಅವ್ಳ ಉದ್ದೇಶ ಆಗಿತ್ತ್. ಆದ್ರೆ ಅಲ್ಲಿ ನಡೆದದ್ದೇ ಬೇರೆ.
ಸಿಸಿ ಕೆಮೆರಾಲಿ ನೋಡ್ತಿದ್ದ ಸೆಕ್ಯೂರಿಟಿಯಂವ, ಭಾರತಿ ನೆಕ್ಲೆಸ್ ತಕ್ಕಂಡ್ ರೂಮ್ ಒಳಗೆ ಹೋಗ್ತಿದ್ದಂಗೆ ಓಡಿ ಬಂದ್ ಅಂಗಡಿಯಂವಂಗೆ ಹೇಳ್ತ್. ಅವನೋ ಹಿಂದೆ ಮುಂದೆ ಯೋಚನೆ ಮಾಡದೆ ಭಾರತಿ ಕೆನ್ನೆಗೆ ಪಟಾಪಟಾತಾ ಹೊಡ್ತ್...ಅಂಗಡಿಲಿ ಇದ್ದ ಜನರ ಎದುರೇ ಎಳ್ದು ಹೊರಗೆ ಹಾಕ್ತ್. ಇಂಥ ವಿಷಯ ಹರಡುದು ತುಂಬಾ ಸ್ಪೀಡ್....ಭಾರತಿ ಅತ್ತ್ಕಂಡ್ ಮನೆ ತಲುಪಿಕೆ ಮೊದ್ಲೇ ಅವಳಪ್ಪನ ಕಿವಿಗೆ ಈ ಸುದ್ದಿ ಬಿದ್ದಿದ್ದ್. ಬಡವನಾದ್ರೂ ಅಂವ ಮರ್ಯಾದೆಗೆ   ಹೆದ್ರುವಂವ. ಮಗಳ ಬಗ್ಗೆ ನಂಬಿಕೆ ಇದ್ರೂ, ಜನರ ಮಾತಗಳ್ನ ಎದ್ರಿಸುವ ಧೈರ್ಯ ಇತ್ಲೆ...ದನ ಕಟ್ಟುವ ಹಗ್ಗ ತಕ್ಕಂಡ್ ಹೋಗಿ, ಗದ್ದೆ ಮಧ್ಯಲಿ ಇದ್ದ ಹುಣಸೇ ಮರಕ್ಕೆ ನೇಣು ಹಾಕ್ಕಣ್ತ್. ಭಾರತಿ ಅಮ್ಮನ ಕುತ್ತಿಗೆಲೀದ್ದ ಅರಸಿಣ ದಾರನೂ ಈಗ ಕಾಣ್ತಿಲ್ಲೆ.....
- `ಸುಮ'

1 comment: