ಭೂಮಿಗೆ ಒಡೆಯನೇ ಗೌಡ... ಕನ್ನಡಲಿ ಒಂದ್ ಗಾದೆ ಮಾತು ಉಟ್ಟು... `ಊರಿಗೊಬ್ಬ ಗೌಡ, ದೇಶಕೊಬ್ಬ ದೊರೆ' ನಾವು ಹಿಂದೂಗ. ತಿರುಪತಿ ವೆಂಕಟಮಣ ನಮ್ಮ ಮನೆದೇವ್ರು. ಅದ್ಕೆ ಐನ್ ಮನೇಲ್ಲಿ ಹರಿಸೇವೆ ಮಾಡೋ ಆಚರಣೆ ಉಟ್ಟು. ಇನ್ನು ನಾವು ಶೃಂಗೇರಿ ಮಠಕ್ಕೆ ನಡ್ಕಂಡವೆ. ನಮ್ಮಲ್ಲಿ ಯಾವುದೇ ಒಳ್ಳೇ ಕೆಲ್ಸ ಶುರು ಮಾಡಿಕೆ ಮೊದ್ಲು, ಶೃಂಗೇರಿ ಮಠದ ಗುರುಗಳಿಗೆ ಗುರುಕಾಣಿಕೆ ಕೊಡುವ ಕ್ರಮ ಉಟ್ಟು. ಈಗಲೂ ಮದುವೆ ನಡೆಯಕಾಕನ `ತೆರ' ಅಂತ ತೆಗೆದಿಟ್ಟವೆ.
"ಗೌಡ" ಜನಾಂಗದವು 10 ಕುಟುಂಬ 18 ಗೋತ್ರಕ್ಕೆ ಸೇರಿದವು. ಮದುವೇಲಿ "ಹತ್ತು ಕುಟುಂಬ ಹದಿನೆಂಟು ಗೋತ್ರ ಜಾತಿ ಸಭೆ ಸಮಸ್ತರ ಸಂಗಡ ಕೇಳಿ" ಅಂತ ಹೇಳಿಯೇ ಎಲ್ಲಾ ಕೆಲ್ಸಗಳನ್ನ ಶುರು ಮಾಡುವೆ...
ನಮ್ಮ ಇತಿಹಾಸ ನೋಡಿರೆ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲಕ್ಕೆ ಥಳಕು ಹಾಕಿಕೊಂಡುಟ್ಟು. ತಾಳಿಕೋಟೆ ಯುದ್ಧಲಿ ವಿಜಯನಗರ ಸಾಮ್ರಾಜ್ಯ ಪತನ ಆದೆ. ಆಗ ಮುಸ್ಲೀಮರ ಕೆಳಗೆ ಇರೀಕೆ ಇಷ್ಟಪಡದೆ ಗೌಡುಗ ಅಲ್ಲಿಂದ ಇಕ್ಕೆರಿ ಸಂಸ್ಥಾನಕ್ಕೆ ಬಂದವೆ. ಇಕ್ಕೇರಿ ಅರಸ ಗೌಡುಗಳಿಗೆ ದಕ್ಷಿಣಕನ್ನಡ ಜಿಲ್ಲೇಲಿ ನೆಲೆಕೊಟ್ಟದೆ. ಇನ್ನು ನಮ್ಮವು ಕೊಡಗಿಗೆ ಬಂದುದರ ಹಿಂದೆನೂ ಒಂದೊಳ್ಳೆ ಇತಿಹಾಸ ಉಟ್ಟು...
ಅದ್ 18ನೇ ಶತಮಾನ ಮುಗೀತಿದ್ದ ಟೈಂ... ಟಿಪ್ಪುಸುಲ್ತಾನ್ ಕೊಡಗಿನ ಮೇಲೆ ದಾಳಿ ಮಾಡ್ದೆ. ಭಾಗಮಂಡಲದ ದೇವುಟು ಪರಂಬು ಅನ್ನೋ ಜಾಗಲಿ ಅಂವ ಸುಮಾರು 80 ಸಾವಿರ ಜನ ಕೊಡಗಿನವ್ರನ್ನ ಸೇರ್ಸಿದೆ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಕರ್ಕೊಂಡು ಹೋಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡ್ಸಿದೆ. ಈಗ್ಲೂ ಕೊಡಗಿನ ಕೆಲ ಮುಸ್ಲಿಂ ಕುಟುಂಬಗ ಮನೆ ಹೆಸ್ರು ಇಟ್ಕೊಂಡಿರ್ದು ಆ ಇತಿಹಾಸಕ್ಕೆ ಸಾಕ್ಷಿ. ಇನ್ನ್ ಅಷ್ಟ್ ಜನ ಮೈಸೂರು ಕಡೆ ಹೋದ್ಮೇಲೆ, ಕೊಡಗಿನ ಕೃಷಿ ಭೂಮಿ ಪಾಳು ಬಿದ್ದದೆ. ಆಗ ಸುಳ್ಯದ ಕೆಲ ಜಾಗಗ ಕೊಡಗಿನ ವೀರರಾಜೇಂದ್ರನ ವಶಲಿ ಇತ್ತ್. ಅಲ್ಲಿದ್ದ ಗೌಡುಗಳ್ನ ವೀರರಾಜೇಂದ್ರ ಕೊಡಗಿಗೆ ಕರ್ಕೊಂಡು ಬಂದದೆ. ಜಮ್ಮಾ, ಉಂಬುಳಿ , ಜಹಾಗೀರ್ ಭೂಮಿ ಕೊಟ್ಟ್, ಕೃಷಿ ಕೆಲಸಕ್ಕೆ ಬಿಟ್ಟದೆ. ಹಂಗೆ ಕೊಡಗಿನಲ್ಲೂ ಗೌಡುಗ ಸೇರಿಕೊಂಡವೆ...
ಅರೆಭಾಷೆ ಗೌಡುಗ ಈಗ ದಕ್ಷಿಣಕನ್ನಡ ಮತ್ತೆ ಕೊಡಗುಲಿ ತುಂಬಾ ಸಂಖ್ಯೇಲಿ ಒಳೊ... ಬದುಕು ಹುಡುಕ್ತಾ ದೇಶ ವಿದೇಶಗಳಲ್ಲೂ ನೆಲೆಸಿಯೊಳೊ... ಈಗ ಆತಂಕ ಇರ್ದು ಭಾಷೆ ಬಗ್ಗೆ.. ನಮ್ಮ ಅರೆಭಾಷೆ ಮಾತಾಡವ್ರ ಸಂಖ್ಯೆ ಕಡಿಮೆ ಆಗ್ತುಟ್ಟು.... ಭಾಷೆನ ಉಳಿಸೋ ಜವಾಬ್ದಾರಿ ಈಗ ನಮ್ಮ ಮೇಲೆ ಉಟ್ಟು... ಇಲ್ಲಿ ನೀವೂ ಬರೆಯನಿ... ಅರೆಭಾಷೇಲೇ ಇರ್ಲಿ...
- ತಳೂರು ಡಿಂಪಿತಾ,
ರಂಗಸಮುದ್ರ
(ಇಲ್ಲಿರ್ದು ಲೇಖಕರ ಸಂಗ್ರಹ ಮಾಹಿತಿ - ಸಂ.)