Friday 10 August 2012

ಸ್ಫೂರ್ತಿಯ ಸೆಲೆ


        ಅಂದ್ ಮಡಿಕೇರಿಲಿ ಜನಜಂಗುಳಿ ಜಾಸ್ತಿ ಇತ್ತ್. ಶುಕ್ರವಾರ ಸಂತೆ ಆದ್ದರಿಂದ ಎಲ್ಲಾ ಬಸ್ಸ್ಗ ತುಂಬಿ ತುಳುಕುತಾ ಇದ್ದೊ. ಸಾಯಂಕಾಲ ಹೊತ್ತು... ಭಾಗಮಂಡಲ ರಾಮಕ್ಕೆ ಸೀಟ್ ಹಿಡಿಯಕ್ಕೆ ಸ್ಪರ್ಧೆನೇ  ಏರ್ಪಟ್ಟಂಗೆ ಕಾಂಬತಿತ್. ಅಂತೂ ಇಂತೂ ನಂಗೆ ಒಂದು ಸೀಟ್ ಸಿಕ್ಕಿತ್ತ್. ನನ್ನ ಪಕ್ಕದ ಸೀಟ್ಗೆ ಒಂದು ಗೂಡೆ ಬಂದ್ ಕುದ್ದತ್ತ್. ಪೊರ್ಲ್ನ ಗೂಡೆತಾ ಹೇಳಕ್. ಬೇಬಿ ಪಿಂಕ್ ಕಲರ್ ಚೂಡಿದಾರ್ಲಿ ಬಿಳಿ ಹೂಗಳ ಚಿತ್ತಾರ...
ಬಸ್ಸ್ ಮಡಿಕೇರಿ ಬಸ್ಸ್ಸ್ಟಾಂಡ್ಂದ ಟೋಲ್ಗೇಟ್ಗೆ ನಿಧಾನಕ್ಕೆ ಹೊರ್ಟತ್. ನಾನ್ ಸಹ ಅಷ್ಟು ಜನರ ಮಧ್ಯೆ ಸೀಟ್ ಸಿಕ್ಕಿದ ಖುಷೀಲಿ ಕಿಟಕಿಂದ ಹೊರಗೆ ನೋಡಿಕೆ ಶುರು ಮಾಡ್ಡೆ. ನಂಗೆ ಹಂಗೆ ಹೊರಗೆ ನೋಡಿಕಂಡ್ ಹೋದ್ತೇಳ್ರೆ ಭಾರೀ ಖುಷಿ. ಭಾಗಮಂಡಲ ತಲುಪುವರೆಗೂ ನಾನ್ ಯಾರ ಜೊತೆನೂ ಮಾತಡ್ತಿತ್ಲೆ. ಆದರೆ ನನ್ನ ಹತ್ರ ಕುದ್ದಿದ್ದ ಗೂಡೆ ಸುಮ್ಮನೆ ಕೂರಿಕೆ ಬುಟ್ಟತ್ಲೆ. ಅವಳಾಗಿಯೇ ಹಾಯ್ತಾ ಹೇಳ್ತ್. ಸರಿ ನಾನ್ ಸಹ ಹಾಯ್ತಾ ಹೇಳಿ ಸುಮ್ಮನೆ ಕುದ್ದಕಣಿಕೆ ನೋಡ್ದೆ. ಅವ್ಳು ಬುಡುವಂಗೆ ಕಂಡತ್ಲೆ. ಮಾತ್ ಮುಂದುವರಸುವಂಗೆ, ಎಲ್ಲಿಗೆತಾ ಕೇಳ್ತ್. ಹಿಂಗೆ ಶುರು ಆದ ಮಾತ್ ನಿಲ್ಲುವ ಯಾವ ಲಕ್ಷಣನೂ ಇತ್ಲೆ. ಅವಳ ಮುದ್ದು ಮುಖ, ಸ್ನಿಗ್ಧ ನಗು ನನ್ನ ಮನ ಸೆಳಿತ ಇತ್ತ್. ಪಟಪಟತಾ ಹರಳು ಹುರ್ದಂಗೆ ಮಾತಡ್ತ ಇತ್ತ್. ಇನ್ನೂ ಪಿಯುಸಿ ಇರ್ದುತ ಮನಸ್ಲಿ ಗ್ಯಾನ ಮಾಡಿಕಂಡೆ.
ಅವಳ ಹೆಸ್ರ್ ಗ್ರೀಷ್ಮಾತಾ ಹೇಳ್ತ್. ಅಪ್ಪ ಅಮ್ಮಂಗೆ ಒಬ್ಬಳೇ ಮಗ್ಳು. ಅಪ್ಪ ತೀರಿಕಂಡ್ ಆರ್ ತಿಂಗ ಸಹ ಆಗಿತ್ಲೆ ಗಡ. ನಂಗೆ ಪಾಪತಾ ಅನಿಸಿಕೆ ಶುರುವಾತ್. ಈಗ ತಾನೆ ಎಸ್ಎಸ್ಎಲ್ಸಿ ಪಾಸ್ ಆಗಿತ್ತ್. ಅಮ್ಮ ಮತ್ತೆ ಅವಳ್ನ ಬುಟ್ರೆ ಮನೇಲಿ ಯಾರೂ ಇಲ್ಲೆ. ಅಮ್ಮ ಕೆಲ್ಸಕ್ಕೆ ಹೊದುಲೆ. ಹಂಗಾಗಿ ಗ್ರೀಷ್ಮ ಬ್ಯೂಟಿಷಿಯನ್  ಕೋರ್ಸ್ ಮಾಡ್ತ ಉಟ್ಟು. ಕೋರ್ಸ ಮುಗ್ದಂಗೆ  ಭಾಗಮಂಡಲಲಿ ಬ್ಯೂಟಿಪಾರ್ಲರ್ ಶುರು ಮಡೋಕುತಾ ಅವಳ ಯೋಚನೆ. ಆಮೇಲೆ ಅಮ್ಮನ ಲಾಯ್ಕ ನೋಡಿಕಣೋಕುತಾ ಹೇಳಿಕಣ್ತ್. ಅಷ್ಟು ಹೊತ್ತು ಸುಮ್ಮನೆ ಕೇಳಿಕಂಡ್ ಕುದ್ದಿದ್ದ ನಾನ್ ಒಮ್ಮೆ ಅವಳ ಮುಖನ ಸೂಕ್ಷ್ಮವಾಗಿ ಗಮನಿಸಿದೆ. ಅವಳ ಕಣ್ಣುಗಳಲಿ ನೋವು, ಅಸಹಾಯಕತೆ ಯಾವುದೂ ಕಾಣ್ತ್ತಿತ್ಲೆ. ಅಲ್ಲಿ ಕಾಂಬತಿದ್ದದ್ ಗೆಲ್ಲುವ ಆತ್ಮವಿಶ್ವಾಸ ಮಾತ್ರ. ಎಂತಹ ಕಷ್ಟಕ್ಕೂ ಕುಗ್ಗದೆ ಮುನ್ನೆಡೆಯುವ ಸ್ಫೂರ್ತಿಯ ಸೆಲೆ !
ಗ್ರೀಷ್ಮಾನ ಒಂದೊಂದು ಮಾತುಗ ಮನಸ್ನ ಆಳಕ್ಕೆ ಇಳತಿರ್ಕಾಕನನೇ ಅದೇ ನಗು ಮುಖಲಿ ಬಾಯ್ ಹೇಳಿ ಕಾವೇರಿ ಕಾಲೇಜು ಸ್ಟಾಪ್ಲಿ ಇಳ್ದು ಹೋತ್. ದಿನಾ ಎಲ್ಲಾ ಇದ್ದ್ ಕೊರ್ಗಿಕಂಡ್ ಇರ್ವ ನೂರಾರ್ ಜನರ ನಡುವೆ ಇವ್ಳು ಮಾತ್ರ ವಿಶೇಷವಾಗಿ ಕಂಡತ್. ಅದೇ ಉತ್ಸಾಹಲಿ ಮನೆಕಡೆ ಹೆಜ್ಜೆ ಹಾಕಿದೆ.

- ಸ್ಪಂದನ ಗೌರಿ   

--------------------

ನೀವೂ ಬರೆಯನಿ...
ಬರ್ದದನ್ನ ಇಮೇಲ್ ಮಾಡಿ,
ನಮ್ಮ ಇಮೇಲ್ ಐಡಿ.. arebhase@gmail.com

No comments:

Post a Comment