Sunday, 12 August 2012

ಚೋಮುಣಿಗೆ ದೇವರು ಬಂದದೆ..!


ಊರಲ್ಲೆಲ್ಲಾ ಒಂದೇ ಸುದ್ದಿ...`ಚೋಮುಣಿಗೆ ಮೈಮೇಲೆ ದೇವರು ಬಂದದೆ ಗಡ..!' ಚೋಮುಣಿ ಬೆಳಗ್ಗೆ ಐದೂವರೆಗೆ ಎದ್ದದೆ. ಎದ್ದ ಕೂಡ್ಲೇ ಎಂಥೆಲ್ಲಾ ಮಾಡೋಕೋ ಅದನ್ನೆಲ್ಲಾ ಅಂವ ಹೊಳೆಕರೆಗೆ ಹೋಗಿ ಮಾಡ್ದೆ. ಅಲ್ಲಿಯೇ ಸ್ನಾನ ಮಾಡಿ, ಬಿಳಿಪಂಚೆ ಉಟ್ಟ್ಕಂಡ್ ಬಂದ್, ಮನೆ ಹತ್ರ ಇರ್ವ ದೇವ್ರ ಕಲ್ಲು ಎದ್ರು ಕೈಮುಗ್ದ್ ನಿಂತ್ಕಣ್ತ್ತೇಳಿರೆ....ಕಾಲ್ಂದ ತಲೆ ವರೆಗೆ ಗಡ ಗಡತಾ ನಡ್ಗಿಕೆ ಶುರುವಾದೆ. ಹಂಗೆ ನಡ್ಗ್ತಾ... ನಡ್ಗ್ತಾ...ಕಾಲೆತ್ತಿ ಹೆಜ್ಜೆನೂ ಹಾಕಿದೆ. ಮತ್ತೆ ಬಾಯಿಲಿ ಉಸ್...ಉಸ್...ತಾ ಶಬ್ದ ಮಾಡ್ತಾ ಅರ್ಥ ಆಗದ ಭಾಷೇಲಿ ಎಂತೆಂಥದ್ದೋ ಗೊಣಗಿದೆ. ಅವನ ಅವ್ವ, ಹೆಣ್ಣ, ಮಕ್ಕ ದೂರಲಿ ನಿಂತ್ಕಂಡ್ ಕೈಮುಗ್ದವೆ. ಈಚೆಗೆ ಒಂದೆರಡು ದಿನಂದ ಒಂದಿಬ್ಬರು ಊರವೂ ಬರ್ತೊಳೊ. 
ಹಂಗೆತೇಳಿ ಚೋಮುಣಿಗೆ ಮೈಮೇಲೆ ದೇವ್ರು ಬಾಕೆ ಶುರುವಾಗಿ ತುಂಬಾ ದಿನ ಏನೂ ಆತ್ಲೆ. ನಾಲ್ಕು ತಿಂಗಳ ಹಿಂದೆ ಊರು ಹಬ್ಬಲಿ ಮೇದರ ಚಂಗನ ಚೆಂಡೆ ಶಬ್ದ ಕೇಳಿಕಾಕನ ಇವನ ಮೈ ಎಲ್ಲಾ ನಡ್ಗಿತ್ತ್. ಭಟ್ಟ ಬಂದ್ ತೀರ್ಥ ಹಾಕಿದ ಮೇಲೆನೇ ಸರಿಯಾದ್. ಮತ್ತೆ ಮೂಲೆಗದ್ದೆ ಬಸಪ್ಪನ ಮನೆ ಹರಿಸೇವೆಲಿ ಜಾಗಟೆ ಬಾರಿಸಿಕಂಡ್ ಶಂಖ ಊದಿಕಾಕನನೂ, ಚೋಮುಣಿದ್ ಕೈಕಾಲೆಲ್ಲಾ ನಡುಗಿ ಒಂದೆರಡು ಸಲ ಹಾರಿ ಹಾರಿ ಬಿದ್ದಿತ್ತ್. ದಾಸ ಬಂದ್ ಧೂಪದ ಹೊಗೆ ಇವನ ಮುಂದೆ ಹಿಡ್ದಾದ ಮೇಲೆ ಇಂವ ಸರಿಯಾಗಿದ್ದದ್ದ್. 
ಚೋಮುಣಿ ದೊಡ್ಡ ಕುಡುಕ. ಎಲ್ಲವೂ ಬೆಳಗ್ಗೆ ಮುಖ ತೊಳ್ದು ಕಾಫಿ ಕುಡ್ದರೆ, ಇಂವ ಹೆಂಡ ಕುಡಿತಿತ್ತ್. ಎದ್ದ ಕೂಡ್ಲೇ ಒಂದು ಸಿಕ್ಸ್ಟಿ ತಕ್ಕಣದಿದ್ದರೆ ಇವನ ಕೈಕಾಲೆಲ್ಲಾ ಗಡಗಡತಾ ನಡಗ್ತಿತ್ತ್. ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿಗೆಲ್ಲಾ ಚೋಮುಣಿ ಮನೇಲಿ ಇತ್ಲೆತೇಳಿರೆ ಅಂವ ಎಲ್ಲಾರೂ ಚರಂಡೀಲಿ ಬಿದ್ದ್ಹೋಗಿಟ್ಟುತನೇ ಅರ್ಥ. ಕೊನೆಗೆ ಹೆಣ್ಣ್ ಮತ್ತೆ ಮಕ್ಕ ಹೋಗಿ ಹುಡಿಕ್ಯಾಡಿ ಮನೆಗೆ ಎಳ್ಕಂಡ್ ಬರೋಕು. ಮೂರುಕಾಸಿನ ಸಂಪಾದನೆ ಸನಾ ಇತ್ಲೆ. ಇದೇ ಕೊರುಗುಲಿ ಚೋಮುಣಿ ಅಪ್ಪ ಕೈಲಾಸ ಸೇರಿಕಂಡಿತ್ತ್. ಅವ್ವ, ಹೆಣ್ಣ್, ಮಕ್ಕಳಿಗೆ ಇವನ ಮೇಲೆ ಒಂದು ಚೂರು ಕೂಡ ಗೌರವ ಇತ್ಲೆ. ಒಂದು ದಿನ ಹಿಂಗೆ ಚೋಮುಣಿ ಟೈಟಾಗಿ ಮನೆಗೆ ಬಂದಿರ್ಕಾಕನ ಹೆಣ್ಣ್ ಜೊತೆ ಜೋರಾಗಿ ಜಗಳ ಆತ್. ಅವ್ಳು `ನಾನೀಗ್ಲೇ ಮಕ್ಕಳ ಜೊತೆ ಹೊಳೆಗೆ ಹಾರಿ ಸತ್ತುಬಿಟ್ಟನೆ'ತಾ ಹೊರಟು ನಿಂತಾಕನ ಚೋಮುಣಿಗೆ `ಜ್ಞಾನೋದಯ' ಆದಂಗೆ ಆತ್. `ನಾಳೆಂದ ನಿನ್ನಾಣೆಗೂ ಬಾಟ್ಲಿ ಮುಟ್ಟುಲೆ'ತಾ ಹೆಣ್ಣ್ನ ತಲೆ ಮೇಲೆ ಕೈ ಇಟ್ಟ್ ಶಪಥ ಮಾಡ್ತ್. ಅದರಂಗೆನೇ ನಡ್ಕಣ್ತ್ ಕೂಡ...!
ಚೋಮುಣಿ ಆ ಶಪಥ ಮಾಡಿತ್ತಲ್ಲಾ... ಅದರ ಮಾರನೇ ದಿನಂದನೇ ಅಂವ ಮನೆ ಹತ್ರ ಇರ್ವ ಹೊಳೆಗೆ ಹೋಗಿ ಸ್ನಾನ ಮಾಡಿಕೆ ಶುರು ಮಾಡ್ದ್. ಆ ದಿನಂದನೇ ಅವಂಗೆ ದೇವರು ಬರ್ತಿರ್ದು ! ದೇವರು ಬಂದಿರ್ಕಾಕನ ಬರೀ ವಟ ವಟತಾ ಎಂಥೆಂತದ್ದೋ ಗೊಣಗ್ತಿದ್ದ ಚೋಮುಣಿ, ಮನೆ ಹತ್ರ ಜನ ಸೇರ್ತಿದ್ದಂಗೆ ಎಲ್ಲವ್ಕೂ ಅರ್ಥ ಆಗುವ ಸ್ಪಷ್ಟ ಕನ್ನಡಲೇ ಮಾತಾಡಿಕೆ ಶುರುಮಾಡ್ತ್. ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರನೂ ಕೊಡ್ತಿತ್ತ್. ಅದೇ ಟೈಮ್ಲಿ ಕೋಳಿಕಾಡು ಗಂಗುನ ನಾಲ್ಕು ಲೀಟರ್ ಹಾಲು ಕೊಡ್ವ ಹಸು ಕಾಣೆ ಆಗಿತ್ತ್. ಎಲ್ಲಿ ಹುಡುಕಿರೂ ಸಿಕ್ಕಿತ್ಲೆ. ಕೊನೆಗೆ ಗಂಗು ಒಂದು ದಿನ ಬೆಳಗ್ಗೆ ಚೋಮುಣಿ ಹತ್ರ ಬಾತ್. ಅವನ ಮೈಮೇಲೆ ದೇವ್ರು ಬರ್ತಿದ್ದಂಗೆ, ಗಂಗು ಎರಡೂ ಕೈ ಜೋಡ್ಸಿ...`ಸಾಮಿ, ನನ್ನ ಪಟೇಯ ಹಸು ವಾರಂದ ಕಾಣ್ತಿಲ್ಲೆ...ಒಳ್ಳೆ ಹಸು ಸಾಮಿ. ದಿನಕ್ಕೆ ನಾಲ್ಕು ಸೇರು ಹಾಲು ಕೊಡ್ತಿತ್ತ್. ಎಲ್ಲಿ ಉಟ್ಟುತಾ ಹೇಳಿರೆ ನಿಂಗೆ ನೂರಾಒಂದು ರೂಪಾಯಿ ಕಾಣಿಕೆ ಹಾಕಿನೆ..'ತಾ ಹೇಳಿಕಂಡತ್. ಕುಣ್ದಾಡಿಕಂಡೆ ಸ್ವಲ್ಪ ಹೊತ್ತು ಕಣ್ಣ್ಮುಚ್ಚಿಕಂಡ ಚೋಮುಣಿ, `ಹೆದರಬೇಡ ಶಿಶು...ನಿನ್ನ ಹಸು ಎಲ್ಲಿದೆ ಅಂತ ನನಗೆ ಗೊತ್ತು. ಅದಾಗಿಯೇ ನಿನ್ನ ಮನೆಗೆ ಬರುತ್ತದೆ...ನೀನು ನಿಶ್ಚಿಂತೆಯಿಂದ ಮನೆಗೆ ಹೋಗು...'ತಾ ಹೇಳ್ತ್. ಆಶ್ಚರ್ಯತೇಳಿರೆ, ಗಂಗು ಮನೆಗೆ ಹೋಗಿ ತಲುಪಿಕಾಕನ ಅವನ ಪಟೇಯ ಹಸು ಕೊಟ್ಟಿಗೆಲಿ ನಿಂತ್ಕಂಡ್ ತಲೆ ಅಲ್ಲಾಡಿಸ್ತಿತ್ತ್. ಹೇಳಿಕಂಡಿದ್ದಂಗೆ ಗಂಗು, ಚೋಮುಣಿ ಮನೆ ಮುಂದೆ ದೇವ್ರ ಕಲ್ಲು ಹತ್ರ ಇದ್ದ ಭಂಡಾರ ಡಬ್ಬಿಗೆ ನೂರಾಒಂದು ರೂಪಾಯಿ ಕಾಣಿಕೆನೂ ಹಾಕಿ, ಕೈ ಮುಗ್ದ್ ಬಾತ್.
ಇಂಥ ವಿಷಯ ಎಲ್ಲಾ ಊರೊಳಗೆ ಬೇಗ ಬೇಗ ಹರಡಿ ಬಿಟ್ಟದೆ. ಹಂಗಾಗಿ ದಿನ ಕಳ್ದಂಗೆ ಸಮಸ್ಯೆ ಹೇಳಿಕಂಡ್ ಚೋಮುಣಿ ಹತ್ರ ಬರ್ವವರ ಸಂಖ್ಯೆನೂ ಜಾಸ್ತಿ ಆತ್. ಒಂದೇ ವರ್ಷಲಿ, ಮನೆ ಮುಂದೆ ಇದ್ದ ಕಲ್ಲು ಸುತ್ತ ದೇವಸ್ಥಾನನೂ ಎದ್ದ್ನಿಂತ್ಕಂಡತ್ ! ಈಗೀಗ ಚೋಮುಣಿ ಎಷ್ಟು ಬ್ಯುಸಿ ಇದ್ದದೇತಾ ಹೇಳಿರೆ, ಇವನ ಹತ್ರ ಬರುವವು ಮೂರು ದಿನದ ಹಿಂದೆನೇ ಬುಕ್ ಮಾಡಿ ಅಪಾಯಿಂಟ್ಮೆಂಟ್ ತಕ್ಕಣೊಕು...ಕೈಲಿ ಸ್ವಲ್ಪ ದುಡ್ಡು ಓಡ್ತಿದ್ದಂಗೆ ಚೋಮುಣಿ ಮತ್ತೆ ಕುಡಿತ ಶುರು ಮಾಡ್ತ್. ಆದ್ರೆ ಮೊದಲಿನಂಗೆ ಚರಂಡಿಗೆ ಬೀಳುವಂಗೆ ಕುಡೀತಿತ್ಲೆ. ಬಾರ್ಗೆ ಹೋಗಿ ಫ್ರೆಂಡ್ಸ್ ಜೊತೆ ನಾಲ್ಕ್ ಪೆಗ್ಗು ಹಾಕಿ ಹಂಗೇ ಕಾರ್ ಹತ್ತಿ ಮನೆಗೆ ವಾಪಸ್ ಬಂದ್ಬಿಟ್ಟದೆ.. ಮತ್ತೆ ಬೆಳಗ್ಗೆ ಮೈ ಮೇಲೆ ದೇವರು ಬರ್ಸಿಕಣಿಕೆ ರೆಡಿ ಆಕೊಲಾ....!

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment