ಅದೊಂದು ದಿನ ಸಾಯಂಕಾಲದ ಹೊತ್ತು. ಆಗಷ್ಟೇ ಮಳೆ ಬಂದ್ ನಿಂತಿತ್ತ್... ಆದ್ರೆ ಮರಗಳ ಎಲೆಗಳಿಂದ ಕೆಳಗೆ ಬಿಳ್ತಿದ್ದ ಹನಿಗ ಪುರುಷೊತ್ತ್ ತಕ್ಕಂಡಿತ್ಲೆ. ಆ ನಿಶ್ಯಬ್ದಲಿ `ಟಪ್... ಟಪ್..' ತಾ ನೆಲಕ್ಕೆ ಬೀಳುವ ಸದ್ದು ತಂಬಾ ಸ್ಪಷ್ಟವಾಗಿ ಕೇಳ್ತಿತ್ತ್. ಮಳೆಯೆಲ್ಲಾ ಸುರಿದಿದ್ದರಿಂದ ಮೋಡಗಳ ಹಿಂಡು ಕೂಡ ತಮ್ಮ ಕೆಲ್ಸ ಮುಗ್ತುತಾ ಹೇಳುವಂಗೆ ಜಾಗ ಖಾಲಿ ಮಾಡಿದ್ದೊ. ಹೆದರಿದ್ದಂಗೆ ಅಡಗಿಕಂಡಿದ್ದ ಸೂರ್ಯ ಮೆಲ್ಲನೇ ಮುಖ ತೋರಿಸಿತ್ತ್. ನಾಚಿಕೆನೋ..ಇಲ್ಲ ಅಷ್ಟೊತ್ತು ಅಡಗಿ ಕುದ್ದಿದ್ದಕ್ಕೆ ಅವಮಾನನೋ... ಅವನ ಮುಖ ಎಲ್ಲಾ ಕೆಂಪು ಕೆಂಪು ! ಅದರ ಪ್ರತಿಬಿಂಬ ಭೂಮಿ ಮೇಲೆ ಬಿದ್ದ್ ಅಲ್ಲೊಂದು ಸುಂದರ ವಾತಾವರಣ ನಿರ್ಮಾಣ ಆಗಿತ್ತ್. ಮನೆ ಮಾಡ್ಲಿ ನಿಂತ್ಕಂಡ್ ನೋಡಿರೆ ಥೇಟ್ ರವಿವರ್ಮನ ಕುಂಚಲಿ ಅರಳಿದ ಚಿತ್ರದಂಗೆ ಕಾಣ್ತಿತ್ತ್ ! ಆ ಖುಷಿ ಇದ್ದದ್ದ್ ಸ್ವಲ್ಪ ಹೊತ್ತು ಮಾತ್ರ.
ಅಷ್ಟು ಹೊತ್ತು ಇಲ್ಲದ ಮಳೆಹುಳಗ ಆಗ ಮರಡಿಕೆ ಶುರುಮಾಡ್ದೊ. `ಕಿರ್ರಿ...ಕಿರ್ರಿ...ಕಿರ್ರಿ...'ತಾ ಕಿವಿ ತೂತ ಆಗುವಂಗೆ ಶಬ್ದ. ಅದು ಅಪಶಕುನನಾ ? ಗೊತ್ಲೆ.... ಇನ್ನೊಂದು ಕಡೆಂದ `ಊ..ಊ..ಊ...' ತಾ ನಾಯಿಗಳ ಮರಡಾಟ. ಛೇ...ಇನ್ನೂ ಆರೂವರೆ ಗಂಟೆ ಆತ್ಲೆ. ಇಷ್ಟು ಬೇಗ ಈ ನಾಯಿಗಳಿಗೆ ಎಂಥಾತ್ ? ಅಷ್ಟೊತ್ತಿಗೆ ಒಂದು ಹಿಂಡು ದನಗ ಬಾಲ ಮೇಲೆ ಎತ್ತಿಕಂಡ್ ನಿಶಾನೆಮೊಟ್ಟೆ ಕಡೇಂದ ಓಡಿಬಂದೊ.. ಆ ಹಿಂಡ್ಲಿ ಸುಮಾರು 30-40 ದನಗ ಇದ್ದೊ ಕಂಡದೆ. ಎಲ್ಲವೂ ತುಂಬಾ ಹೆದರಿದ್ದೋ. ತೊಳೆದಿಟ್ಟ ಕನ್ನಡಿ ಹಂಗೆ ಫಳ ಫಳತಾ ಹೊಳೀತಿದ್ದ ನೆಲ, ದನಗಳ ಹೆಜ್ಜೆ ತಾಂಗಿ ಕೆಸರು ಗದ್ದೆಯಾಗಿಬಿಡ್ತ್. ಅಲ್ಲಿ.. ಆ ಪರಿಸರಲಿ ಏನು ಆಗ್ತುಟ್ಟುತಾ ಗೊತ್ತಾಗ್ತಿಲ್ಲೆ. ಆದ್ರೆ ಮುಂದೆ ಏನೋ ಕಾದುಟ್ಟುತಾ ಭವಿಷ್ಯ ಹೇಳುವಂಗೆ ಗುಮ್ಮಗ `ಊಂ...ಊಂ..ಊಂ..'ತಾ ರಾಗ ಶುರು ಮಾಡಿದ್ದೊ. ಹಂಗಾರೆ ಅಲ್ಲಿ ಎಂಥ ಅಪಾಯ ಕಾದುಟ್ಟು ?
ವರ್ಷ ವರ್ಷ ಅಲ್ಲಿ ದಾರಿ ಬದಿ ಇರ್ವ ಗುಳಿಂಗನ ಕಲ್ಲು ಎದ್ರು ಊರವೆಲ್ಲಾ ಸೇರಿಕಂಡ್ ಕೋಳಿ ಕುಯ್ಸುತ್ತಿದ್ದೊ. ಆದ್ರೆ ಈಸಲ ಕೋಳಿ ಕುಯ್ಸೋಕೂತ ಗ್ಯಾನ ಮಾಡಿಕಾಕನ ಆಟಿ ತಿಂಗ ಬಂದುಬಿಟ್ಟಿತ್ತ್. ಅಗೆ, ನಾಟಿತಾ ಎಲ್ಲವೂ ಬ್ಯುಸಿ ಆಗಿಬಿಟ್ಟಿದ್ದೊ. ಹಂಗಾರೆ ಈ ವರ್ಷ ಕೋಳಿ ಕುಯ್ತ್ಲೇತಾ ಹೇಳಿ ಗುಳಿಂಗ ಸಿಟ್ಟು ಮಾಡಿಕಂಡುಟ್ಟಾ ? ಈ ಅಮವಾಸ್ಯೆ ದಿನನೇ ಹಿಂಗೆಲ್ಲಾ ಆಗ್ತುಟ್ಟುತಾ ಹೇಳಿರೆ, ಅಂಥ ಒಂದು ಡೌಟ್ ಬರ್ತುಟ್ಟು. ಹಿಂಗೆ ಯೋಚನೆ ಮಾಡಿಕಂಡ್ ಇರ್ಕಾಕನ ಅದೇ ಆ ನಿಶಾನೆಮೊಟ್ಟೆ ಕಾಡ್ ಕಡೇಂದ ಆನೆಗ ಘೀಳಿಟ್ಟ ಶಬ್ದ... ಜೊತೆಗ ಒಂದು ಹುಲಿ ಕೂಡ ಘರ್ಜಿಸಿದಂಗೆ ಆತ್. ಹೌದು, ಆ ಕಡೆ ಕೇರಳ ಕಾಡ್ಂದ ಒಂದು ಹುಲಿ ಕೂಡ ನಿಶಾನೆಮೊಟ್ಟೆಗೆ ಬಂದು ಸೇರಿಕಂಡುಟ್ಟು ಗಡ. ಹೋದ ವಾರ ಹೊಳೆಕರೆ ಬಸಪ್ಪನ ಹೂಡುವ ಎತ್ತುನೇ ಆ ಹುಲಿ ಕೊಟ್ಟಿಗೆಂದ ಎಳ್ಕಂಡ್ ಹೋಗಿತ್ತ್ !
ಊರವ್ಕೆಲ್ಲಾ ಹೆದ್ರಿಕೆ ಶುರುವಾತ್. ಅವ್ರವ್ರ ಮನೇಲೇ ಕುದ್ದ್ಕಂಡ್ ಗುಳಿಂಗನ ಪ್ರಾರ್ಥನೆ ಮಾಡಿಕೆ ಶುರು ಮಾಡ್ದೊ. `ನಮ್ಮ ಊರುನ ಕಾಪಾಡಪ್ಪ ದೇವ್ರೇ...ಆಟಿ ತಿಂಗ ಮುಗ್ದ ಕೂಡ್ಲೇ ಮನೆಗೆ ಎರಡರಂಗೆ ಕೋಳಿ ಕುಯ್ಸಿವೆ....'ತಾ ಹೇಳಿಕಂಡೊ... ಆದ್ರೆ ಯಾಕೋ ಇವ್ರ ಪ್ರಾರ್ಥನೆ ಗುಳಿಂಗನ ಕಿವಿ ವರೆಗೆ ಹೋದ ಹಂಗೆ ಕಾಣ್ತ್ಲೇ.... ಜೋರಾಗಿ `ಛಳಾರ್' ತಾ ಒಂದು ಶಬ್ದ ಜೊತೇಲಿ ಮನೆಯೆಲ್ಲಾ ಹೊತ್ತಿ ಉರ್ದು ಹೋಗುವಂಗೆ ಮಿಂಚಿನ ಬೆಳಕು. ಅದ್ರ ಹಿಂದೆನೇ ಭೂಮಿ ನಡುಗುವಂಗೆ ಗುಡುಗು. ಒಲೆ ಮುಂದೆ ಬೆಂಕಿ ಕಾಯಿಸಿಕಂಡ್ ಕುದ್ದಿದ್ದ ವಯಸ್ಸಾದವು ಹಂಗೆನೇ ದೊಡ್ಡ ದೊಡ್ಡ ಹೆಜ್ಜೆ ಹಾಕಿಕಂಡ್ ಬಂದ್ ಕಂಬಳಿ ಒಳಗೆ ಸೇರಿಕಂಡೊ....ಸಣ್ಣ ಮಕ್ಕ ಅಮ್ಮನ ಸೆರಗು ಹಿಂದೆ ಅಡಗಿಕಂಡೊ....ಮನೆಯಜಮಾನತಾ ಅನ್ನಿಸಿಕಂಡವು ಭತ್ತಕಡಿಕೆ ಒಳಗೆ, ಅಲ್ಲಿ-ಇಲ್ಲಿ ಅಡಗಿಸಿ ಇಟ್ಟ್ಕಂಡಿದ್ದ ಬಾಟಲಿಗಳ್ನ ಹೊರಗೆ ತೆಗ್ದ್ ಖಾಲಿ ಮಾಡ್ದೊ. ಮಿಂಚು, ಗುಡುಗು ಜೋರಾಗ್ತಿದ್ದಂಗೆ ಸಣ್ಣಗೆ ಮಳೆ ಹನಿಯಕೆ ಶುರುವಾತ್...ನಿಮಿಷ ನಿಮಿಷಕ್ಕೂ ಮಳೆಯ ರಭಸ ಜೋರಾಗ್ತನೇ ಹೋತ್....ಅಷ್ಟೊತ್ತಿಗೆ ಬಂದ ಒಂದು ಮಿಂಚು ತಾಂಗಿ ಗುಳಿಂಗನ ಕಲ್ಲು ಸನಾ ಚೂರು ಚೂರು ಆಗಿಬಿಟ್ಟತ್. ಅಷ್ಟೇ ಊರವ್ಕೆ ನೆನಪಿದ್ದದ್...!
ಮಾರನೇ ದಿನ ಎಲ್ಲಾ ಟೀವಿಗಳಲಿ ಒಂದೇ ಸುದ್ದಿ...`ನಿಶಾನೆ ಮೊಟ್ಟೆಯಲಿ ಮೇಘ ಸ್ಫೋಟ...ಬೆಟ್ಟದ ಕೆಳಗಿನ ಊರು ನಿರ್ನಾಮ...'
ಗುಳಿಂಗಂಗೆತಾ ಬಿಟ್ಟಿದ್ದ ಹುಂಜ ಪೊಂಗಾರೆ ಮರದ ಮೇಲೆ ಕುದ್ದ್ಕಂಡ್ `ಕೊಕ್ಕೊ...ಕ್ಕೋ'ತಾ ಕೂಗ್ತಿತ್ತ್ !
- ಸುನಿಲ್ ಪೊನ್ನೇಟಿ
arebhase@gmail.com
No comments:
Post a Comment