Tuesday, 28 February 2012

`ಎಡವಟ್ಟು ಗೂಡೆ...'


ಯಾವತ್ತು ನೋಡಿರೂ ಅವ್ಳ ಮೊಬೈಲ್ ಬ್ಯುಸಿ... ಕೇಳಿರಿ ನೆಟ್ವರ್ಕ್   ಪ್ರಾಬ್ಲಂನ ನೆಪ... ದೂರದ ಊರುಲಿ ಓದುತುಟ್ಟು... ದಿನಾ ಕಾಂಟ್ಯಾಕ್ಟ್ ಲಿ  ಇರ್ಲಿತೇಳಿ ಮೊಬೈಲ್ ತೆಗ್ಸಿಕೊಟ್ರೆ, ಮನೆಯವ್ರ ಜೊತೆನೇ ಮಾತಾಡಿಕೆ ಸಿಕ್ಕುದುಲ್ಲೆ...ಹಂಗಾರೆ ಅವ್ಳು ಹಂಗೆ ದಿನಾ ಕೊರೆಯುದು ಯಾರ ಜೊತೆ? ಅಪ್ಪನಂಥ ಅಪ್ಪಂಗೇ ಡೌಟ್ ಶುರುವಾತ್. ಸ್ವಲ್ಪ ದಿನಲೇ ಅದಕ್ಕೆ ಉತ್ತರನೂ ಸಿಕ್ತ್...
`ಸಂಜೂ ಐ ಲವ್ ಯೂ ಕಣೋ....' ತಾ ಅಪ್ಪನ ಇನ್ ಬಾಕ್ಸ್ ಗೆ    ಒಂದು ಮೆಸೆಜ್ ಬಂದ್ ಬಿದ್ದಿತ್ ! ಅದ್ ಅವ್ಳೇ ಮಾಡಿಕಂಡ ಎಡವಟ್ಟು... ಪ್ರಿಯಕರಂಗೆ ಕಳ್ಸಕ್ಕಾಗಿದ್ದ ಮೆಸೆಜ್ನ ಯಾವುದೋ ಗ್ಯಾನಲಿ ಅವ್ಳ ಅಪ್ಪನ ಹೆಸ್ರಿಗೇ ಕಳ್ಸಿಬಿಟ್ಟಿತ್ ! ಹಂಗೆ ಅವ್ಳು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತ್... ಮುಂದೆ ಏನಾತ್ ? ನಂಗೂ ಗೊತ್ಲೆ... ನೋಡ್ತಾ ಒಳೆ, ನನ್ನ ಮಾವ ಆಗವು ಏನು ಮಾಡಿವೆತಾ...


- 'ಸುಮಾ'
arebhase@gmail.com

Monday, 27 February 2012

ನನ್ನೊಲವೇ ...

ಬಣ್ಣ ಬಣ್ಣದ  ಈ ಹೊಸ ಲೋಕಲಿ..
ನಿನ್ನದೇ  ಕನಸುಗ......!
ವರ್ಣಿಸಲಾಗ್ತಾ ಇಲ್ಲೇ..!!
ಕ್ಷಣ ಕ್ಷಣ ನಿನ್ನದೇ ಗ್ಯಾನ...!
ಅನುದಿನ ನಿನ್ನದೇ ಹುಡುಕಾಟ..!
ಮುಂಜಾನೆ ಮಂಜಿನ ಹನಿಲೂ   
ನಿನ್ನದೇ ಮುಖ..!
ಸೂರ್ಯನ ಪ್ರತೀ  ಕಿರಣಲಿ..
ನಿನ್ನದೇ ಸ್ಪರ್ಶ..!
ತಂಪು ಗಾಳಿಲೂ
ನಿನ್ನದೇ ಸಿಂಚನ...!!
ಎಂತಾ ಹೇಳೋಕು..
ಈ ಹೊಸ ತರ ಅನುಭವಕ್ಕೆ...!!
ಗೊತ್ತಾಗ್ತಾ ಇಲ್ಲೇ ಏನುತಾ ...!!
ಮತ್ತೆ ನಿನ್ನನೇ ,ಹುಡುಕ್ತಾ ಒಳೆ...
ಪ್ರೀತಿಯ ಹಂಬಲಲಿ!!!

- 'ಪಲ್ಲವಿ'



ಉಪ್ಪುಕಾರ ಮತ್ತೆ ಮಾವಿನ ಕಾಯಿ !


`ನಂಗೆ ಆ ಮಾವಿನ ಕಾಯಿ ಬೇಕು...' ಮರದ ಕೊಡೀಲಿ ಕಾಣ್ತಿದ್ದ ದಪ್ಪ ಮಾವಿನ ಕಾಯಿನ ತೋರಿಸಿಕಂಡ್ ಅನಿತಾ ಕೇಳ್ತ್. 
ಅನಿಲ್ದ್ ಆಗ ಬರೀ ಪೆಚ್ಚು ನಗೆ... ಅಷ್ಟು ಎತ್ತರಕ್ಕೆ ಕಲ್ಲು ಹೊಡಿಯಕ್ಕೆ ಇವಂಗೆ ಆದುಲ್ಲೆ. ಮರಹತ್ತಿಕಂತೂ ಮೊದ್ಲೇ ಗೊತ್ಲೆ... 
ಅನಿತಾಂಗೂ ಇದು ಗೊತ್ತಿತ್ತ್.... ಆದ್ರೆ ಮಾವಿನ ಕಾಯಿ ನೋಡ್ದ ಕೂಡ್ಲೇ ಮರ್ತು ಹೋಗಿತ್ತಷ್ಟೆ.... `ಅದ್ನ ಕುಯ್ದು ಕೊಡಿಕೆ ಆಲೆತಾ ನೀ ಏನೂ ಬೇಸರ ಮಾಡಿಕಂಬೇಡ, ನಾನೇ ಕುಯ್ಕೊಂಡನೆ..' ತಾ ಹೇಳ್ದ ಅನಿತಾ ಒಂದ್ ಸಣ್ಣ ಕಲ್ಲು ತಕ್ಕಂಡ್ ಗುರಿ ನೋಡಿ ಆ ಮಾವಿನ ಕಾಯಿಗೆ ಹೊಡ್ದು ಬೀಳ್ಸಿತ್ತ್...ತಿರುಗಿ ನೋಡಿರೆ, ಅನಿಲ್ ಕಾಣ್ತಿಲ್ಲೆ !
ಅನಿಲ್ ಮತ್ತೆ ಅನಿತಾ ಅಕ್ಕಪಕ್ಕದ ಮನೆಯವು... ಇಬ್ಬರ ಅಪ್ಪಂದಿರೂ ಪೊಲೀಸರೇ... ಪೊಲೀಸ್ ಕ್ವಾರ್ಟರ್ಸ್ಲಿ ಅವರ ಮನೆ ಇತ್ತ್. ಎರಡೂ ಮನೆಯವೂ ತುಂಬಾ ಲಾಯ್ಕ ಹೊಂದಿಕಂಡಿದ್ದೋ. ಮಕ್ಕಳೂ ಅಷ್ಟೇ.. ಅದರಲ್ಲೂ ಅನಿಲ್ ಮತ್ತೆ ಅನಿತಾ ಮಧ್ಯೆ ತುಂಬಾ ಆತ್ಮೀಯತೆ. ಇಬ್ಬರೂ ಆರನೇ ಕ್ಲಾಸ್. ಒಂದೇ ಬೆಂಚ್. ಊಟನೂ ಒಟ್ಟಿಗೆ ! ಅಂದ್ ಭಾನುವಾರ. ರಜೆ ಇತ್ತಲ್ಲ, ನಾರಾಯಣಾಚಾರ್ ತೋಟಕ್ಕೆ ಹಣ್ಣು ಬೇಟೆಯಾಡಿಕೆ ನುಗ್ಗಿದ್ದೊ.
ಮಾವಿನ ಕಾಯಿನ ಅನಿತಾ ಬೀಳಿಸಿಯೇ ಬೀಳಿಸುದೆತೇಳುವ ನಂಬಿಕೆ ಅನಿಲ್ಗೆ. ಹಂಗಾಗಿ ಅಂವ, ಅನಿತಾ ಕಲ್ಲು ತಕ್ಕಂಡ ಕೂಡ್ಲೆ ಮನೆಗೆ ಓಡಿತ್ತ್. ಮಾವಿನ ಕಾಯಿ ನೆಲಕ್ಕೆ ಬೀಳಿಕಾಕನ, ಉಪ್ಪು-ಮೆಣಸುಹುಡಿ ಹಿಡ್ಕಂಡ್ ಮರದ ಬುಡಲಿ ರೆಡಿ ! ಇಬ್ಬರೂ ಮರದ ಬುಡಲಿ ಕುದ್ದೊ. ಅನಿತಾ ಮಾವಿನ ಕಾಯಿನ ಬಾಯಿಲಿ ಕಚ್ಚಿ ಸಣ್ಣ ಸಣ್ಣ ಪೀಸ್ ಮಾಡಿರೆ, ಅನಿಲ್ ಅದಕ್ಕೆ ಉಪ್ಪುಮೆಣಸು ಉಜ್ಜಿ ಒಂದ್ ಕಡೆ ತೆಗೆದಿಡ್ತಿತ್ತ್. ಹಿಂಗೆ ಎಲ್ಲಾ ಪೀಸ್ಗಳಿಗೂ ಉಪ್ಪುಮೆಣಸು ಹಾಕಿ ಆದ್ಮೇಲೆ ಇಬ್ಬರೂ ಒಟ್ಟಿಗೆ ತಿಂಬಕೆ ಶುರುಮಾಡ್ದೊ...
`ಏನ್ಡ್ರೀ ಇನ್ನೂ ಆಗಿಲ್ವಾ ಸ್ಕ್ರಿಪ್ಟ್ ? ಒಂದು ಸ್ಕ್ರಿಪ್ಡ್ ಮಾಡ್ಲಿಕ್ಕೆ ಇಷ್ಟು ಹೊತ್ತು ತಕ್ಕೊಂಡ್ರೆ ಬುಲೆಟಿನ್ ಮಾಡ್ದಹಾಗೆನೇ...' ದೂರಲಿ ಕುದ್ದಿದ್ದ ಬಿಪಿ, ಬಿಪಿ ಏರ್ಸಿಕಂಡ್ ಬೈತಿತ್ತ್. `ಹೌದಲ್ಲಾ...ನಂಗೆ ಬಿಪಿ ಈ ಸ್ಕ್ರಿಪ್ಟ್ ಕೊಟ್ಟ್ ತುಂಬಾ ಹೊತ್ತು ಆತ್... ಹಾಳ್ ಯೋಚನೆಗ...ಅಲ್ಲಲ್ಲ.. ಒಳ್ಳೆ ಯೋಚನೆಗ... ಮೊದ್ಲು ಈ ಸ್ಕ್ರಿಪ್ಟ್ ಮಾಡ್ದ ಮೇಲೆ ಮತ್ತೆ ಬೇರೆ ಕೆಲ್ಸ' ತಾ ಅನಿಲ್ ಮತ್ತೆ ಸ್ಕ್ರಿಪ್ಟ್ ಬರಿಯಕ್ಕೆ ಶುರುಮಾಡ್ತ್... ಆದ್ರೂ ತಲೇಲಿ ಅನಿತಾಳದ್ದೇ ಯೋಚನೆ. ಬಿಪಿ ಅವನಿಷ್ಟಕ್ಕೆ ಅಂವ ವಟ ವಟತಾ ಹೇಳ್ತನೇ ಇತ್. ಅದ್ ನಂಗೆ ಅಲ್ಲಾತಾ ಯೋಚನೆ ಮಾಡ್ಕಂಡ್ ಅನಿಲ್ ಇವನಿಷ್ಟಕ್ಕೆ ಇಂವ ಕೆಲ್ಸ ಮುಂದುವರೆಸಿತ್.
ಅನಿಲ್ ನ  ಏಳನೇ ಕ್ಲಾಸ್ ಮುಗಿತ್ತಿದ್ದಂಗೇ ಅವನಪ್ಪಂಗೆ ಟ್ರಾನ್ಸ್ಪರ್ ಆತ್. ಅದಾಗಿ ಒಂದು ವರ್ಷಕ್ಕೆ ಅನಿತಾನ ಅಪ್ಪಂಗೂ ಟ್ರಾನ್ಸ್ಪರ್ ಆಗಿತ್ತ್. ಇಬ್ಬರೂ ಎಸ್ಎಸ್ಎಲ್ಸಿಗೆ ಬರುವ ವರೆಗೂ ಕಾಂಟ್ಯಾಕ್ಟ್ ಇತ್ತ್...ಆಮೇಲೆ ಅನಿಲ್ ಜರ್ನಲಿಸಂ ಓದಿಕೆ ಉಜಿರೆಗೆ ಹೋತ್. ಅನಿತಾ ಕುಶಾಲನಗರಲಿ ಡಿಪ್ಲೊಮಾಕ್ಕೆ ಸೇರಿಕಂಡ್, ಅಲ್ಲಿ ಫೇಲ್ ಆಗಿ ಮತ್ತೆ ಪಿಯುಸಿ ಕಾಮರ್ಸ್ ಗೆ    ಸೇರಿಕಂಡತ್. ಇಷ್ಟ್ ಆಕಾಕನ ಅನಿತಾ ಮತ್ತೆ ಅನಿಲ್ ದೂರ ದೂರ ಆಗಿಬಿಟ್ಟಿದ್ದೋ...
ಲಾಲ್ಬಾಗ್ಲಿ ಫಲಪುಷ್ಪ ಪ್ರದರ್ಶನ. ಅದ್ರ ಉದ್ಘಾಟನೆ ಮಾಡಿಕೆ ಸಿಎಂ ಬಂದಿದ್ದೊ. ಅನಿಲ್ ಅಲ್ಲಿ ರಿಪೋರ್ಟಿಂಗ್ ಮಾಡಿಕೆ ಬಂದಿತ್ತ್. ಬಂದೋಬಸ್ತ್ ನೋಡಿಕಂಡಿದ್ದ ಪೊಲೀಸ್ರ ಮಧ್ಯೆ ಒಬ್ಳು ಲೇಡಿ ಎಸ್ಐ ಚುರುಕಾಗಿ ಅತ್ತಿಂದಿತ್ತ ಓಡಾಡ್ತಿತ್ತ್. ಇವ್ಳನ್ನ ಎಲ್ಲೋ ನೋಡ್ಯೊಳೆಯಲ್ಲಾತಾ ಅನಿಲ್ಗೆ ಅನ್ನಿಸಿಕೆ ಶುರುವಾತ್... ಹೌದು, ಅವ್ಳು ಅನಿತಾ. ಮೆಲ್ಲನೆ ಅವ್ಳ ಹಿಂದೆ ನಿಂತ್ `ಅನಿತಾ...' ತಾ ಕರ್ತ್....ಅವ್ಳಿಗೆ ಸ್ವಲ್ಪ ಹೊತ್ತು ಗುರುತು ಸಿಕ್ಕಿತ್ಲೆ...`ನಾನ್...ಅನಿಲ್...' ಇವ್ನೇ ಪರಿಚಯ ಮಾಡಿಕಣ್ತ್... ಇಬ್ಬರಿಗೂ ಅದೊಂದು ಸರ್ಪ್ರೈಸ್ ಭೇಟಿ....
ಮಲ್ಲಿಗೆ ಹೂ ಹರಡಿದ್ದ ಹಾಸಿಗೆ ಮೇಲೆ ಅನಿಲ್ ಕುದ್ದಿತ್. ಅನಿತಾ ಅಲ್ಲೇ ಇದ್ದ ಕುರ್ಚಿ ಲಿ ಕುದ್ಕಂಡ್ ಚಾಕ್ಲಿ ಆ್ಯಪಲ್ ಕಟ್ ಮಾಡಿಕೆ ನೋಡ್ತಿತ್. ಅದ್ ಅವ್ರ ಫಸ್ಟ್ ನೈಟ್... ಚಿಕ್ಕದರಲ್ಲಿ ಇರ್ಕಾಕ ನ ಕಚ್ಚಿ ಕಚ್ಚಿ ಮಾವಿನ ಕಾಯಿ ತಿನ್ತಿದ್ದದ್ ಅನಿಲ್ ಗೆ   ಯೋಚನೆ ಬಾತ್.... ಅಷ್ಟೊತ್ತಿಗೆ ಪವರ್ಕಟ್. ಲೈಟ್ ಆಫ್ ಆತ್... !
- 'ಸುಮ'
arebhase@gmail.com

Saturday, 25 February 2012

ಕೆಲಸದ ಖುಷಿ..


ತುಂಬಾ ದಿನ ಕಳ್ದ ಮೆಲೆ ಇಂದ್ ನಾ ಬೆಳಗ್ಗಿನ ಸೂರ್ಯನ ನೋಡ್ದೆ ! ಥ್ಯಾಂಕ್ಸ್ ಟೂ ಸೀನ.... ನನ್ನ ಶಿಫ್ಟ್ ಇರ್ದು ಮಧ್ಯಾಹ್ನ 3ರಿಂದ ರಾತ್ರಿ 12. ರಾತ್ರಿ 11 ರಿಂದ ಬೆಳಗ್ಗೆ 7ರ ವರೆ ಸೀನ ಬಾಕಾಗಿತ್ತ್. ಆದ್ರೆ ಹುಷಾರಿಲ್ಲೆತೆ ಕೊನೇ ಕ್ಷಣದಲ್ಲಿ ಅಂವ ಕೈ ಕೊಟ್ಟ್ಬಿಟ್ಟಿತ್ತ್. ಹಂಗಾಗಿ ನಿನ್ನೆ ನಂಗೆ ಡಬ್ಬಲ್ ಶಿಫ್ಟ್. ಇದ್ದ ನ್ಯೂಸ್ಗಳನ್ನೆಲ್ಲಾ ನಾನೇ ರಾತ್ರಿ 8 ಮತ್ತೆ 11.30 ನ್ಯೂಸ್ಗಳಲ್ಲಿ ಮುಗಿಸಿಬಿಟ್ಟಿದ್ದೆ. ಇನ್ನು ಬೆಳಗ್ಗೆ 6 ಮತ್ತು 7 ಗಂಟೆಗೆ ಎಂಥ ಕೊಡ್ದುತೇಳಿ, ಬೇರೆ ಬೇರೆ ಜಿಲ್ಲೆಗಳಿಂದ ಬಂದ ಸುದ್ದಿಗಳನ್ನ ಬೆದಕ್ತಾ ಎರಡು ಬುಲೆಟಿನ್ಗಳಿಗೆ ಬೇಕಾಗುವಷ್ಟು ಸ್ಟೋರಿಗಳನ್ನ ಮಾಡಿಸಿ ಪೇಪರ್ ಓದಿಕಂಡ್ ಕುದ್ದಿದ್ದೆ.
ಬೆಳಗ್ಗೆ 4 ಗಂಟೆ ಆಗಿತ್. ನಂ ರಿಪೋರ್ಟರ್ ಸನತ್ ಕಣ್ಣುಜ್ಜಿಕಂಡ್ ಬಂದ್...`ಒಂದ್ ಟಿಕ್ಕರ್ ಇದೆ ಹಾಕ್ಕೊಳ್ಳಿ' ತಾ ಬೆಂಗಳೂರು ಶಿವಾಜಿನಗರದ ರಸೆಲ್ ಮಾರ್ಕೆಟ್ಗೆ ಬೆಂಕಿ ಬಿದ್ದ ಸುದ್ದಿನ ಕೊಟ್ಟ್, ಕ್ಯಾಮರಾ ಡಿಪಾರ್ಟ್ಮೆಂಟ್ ಕಡೆ ಓಡ್ತ್. ನಮ್ಮ ಮೀಡಿಯಾಗಳಲ್ಲಿ ಸುದ್ದಿಯ ಪ್ರಾಮುಖ್ಯತೆ ಲೆಕ್ಕಾಹಾಕಿಕೆ ಕೆಲವೊಂದು ಮಾನದಂಡಗ ಒಳೊ... ಒಂದು ಆ್ಯಕ್ಸಿಡೆಂಟ್ ಆಗಿ, ಅಲ್ಲಿ ಸತ್ತಿರುವವರ ಸಂಖ್ಯೆ ಜಾಸ್ತಿ ಆಗಿದ್ದಷ್ಟೂ ಆ ನ್ಯೂಸ್ನ `ಭಾರ' ಜಾಸ್ತಿ ಆಗ್ತಾ ಹೋದೆ ! ಎಲ್ಲಾರು ಬೆಂಕಿ ಹೊತ್ತಿಕೊಂಡಾಗ ಕೂಡ, ಅಲ್ಲಿರುವ ಫೈರ್ ಎಂಜಿನ್ಗಳ ಮೇಲೆ ಆ ಸುದ್ದಿಯ ಹಣೆ ಬರಹ ನಿಧರ್ಾರ ಆದೆ ! ಹಂಗೆ, ರಸೆಲ್ ಮಾಕರ್ೆಟ್ಗೆ ಬೆಂಕಿ ಆರಿಸಿಕೆ 12 ಫೈರ್ ಎಂಜಿನ್ಗ ಹೋಗಿಯುಟ್ಟುತಾ ಸನತ್ ಹೇಳಿತ್ತ್. ಹಂಗಾಗಿ ನಾ ಬೆಂಕಿ ಬಿದ್ದ ಸುದ್ದಿನ `ಟಿಕ್ಕರ್' ಬದಲಿಗೆ `ಬ್ರೇಕಿಂಗ್'ಗೆ ಹಾಕಿದೆ. ಇಷ್ಟು ಆಕಾಕನ ಬೆಳಗ್ಗೆ 4.20. ಈ ಸುದ್ದಿ ಮೊದ್ಲು ಕಾಣಿಸಿಕಂಡದ್ ನಮ್ಮ ಟೀವಿಲಿ !
ನಂಗೆ ಇನ್ನು ನ್ಯೂಸ್ ಇದ್ದದ್ 6 ಗಂಟೆಗೆ. ಹಂಗಾಗಿ ಅಷ್ಟೂ ಹೊತ್ತು ಎಲ್ಲಾ ಬೆಳವಣಿಗೆಗಳ್ನ ಬ್ರೇಕಿಂಗ್ ಕೊಡ್ತಾ ಬಂದೆ. ಸಂದೇಶ್, ವಂದನಾ ಮತ್ತೆ ಗಣಿ ನನ್ನ ಜೊತೆ ಇದ್ದೊ. ಒಂದು ಕಡೆ ಬ್ರೇಕಿಂಗ್ ಕೊಡ್ತಾ, ಮತ್ತೊಂದು ಕಡೆ 6 ಗಂಟೆ ನ್ಯೂಸ್ಗೆ ರೆಡಿಯಾಗ್ತಿರ್ಕಾಕನ ಟೈಂ ಹೋದ್ದೇ ಗೊತ್ತಾತ್ಲೆ...5.30ರ ಹೊತ್ತಿಗೆ ನಮ್ಗೆ ವಿಷ್ಯುವಲ್ ಸಿಕ್ತ್. ಸನತ್ ಜೊತೆ ಹೋಗಿದ್ದ ಡ್ರೈವರ್ ಕ್ಯಾಸೆಟ್ ತಂದ್ ಕೊಟ್ಟಿತ್ತ್. ಸುಮಾರು 10 ನಿಮಿಷದ ವಿಷ್ಯುವಲ್ ಇತ್. ಆ ವಿಷ್ಯುವಲ್ ನೋಡ್ದ ಕೂಡ್ಲೇ, ಬೆಂಕಿ ಎಷ್ಟು ಜೋರಾಗಿ ಹೊತ್ತಿಕೊಂಡುಟ್ಟುತಾ ಗೊತ್ತಾತ್. ಕೂಡ್ಲೇ ನನ್ನ ಸೀನಿಯರ್ ಗಮನಕ್ಕೆ ತಂದೆ. ಅವು ನಂಗೆ ಎಲ್ಲಾ ಸ್ವಾತಂತ್ರ್ಯ ಕೊಟ್ಟೊ. `ನೀವೇ ಡಿಸಿಶನ್ ತಗ್ಗೊಂಡು ಬುಲೆಟಿನ್ ಮಾಡಿ' ತಾ ಮನೇಂದನೇ ಹೇಳ್ದೊ. ಸರಿ, ನನ್ನ ಟೀಂನ ಅಲರ್ಟ್  ಮಾಡಿಕಂಡ್ 6 ಗಂಟೆ ನ್ಯೂಸ್ನ ಶುರು ಮಾಡಿಯೇ ಬಿಟ್ಟೆ. ರೋಹಿಣಿ ಆ್ಯಂಕರ್. ಅವ್ಕೆ ನಾ ಸ್ಕ್ರಿಪ್ಟ್ ಕೊಟ್ಟಿತ್ಲೆ. ಏನೇನು ಆಗಿಟ್ಟುತಾ ಬರೀ ಪಾಯಿಂಟ್ಗಳ್ನ ಮಾತ್ರ ಕೊಟ್ಟಿದ್ದೆ. ರೋಹಿಣಿ ಅದನ್ನೇ ಇಟ್ಟ್ಕಂಡ್ 6ರಿಂದ ಆರೂವರೆ ತನಕ ತುಂಬಾ ಲಾಯ್ಕ ಮ್ಯಾನೇಜ್ ಮಾಡ್ತ್. ಮತ್ತೆ 7ರಿಂದ ಏಳೂವರೆ ವರೆಗೆ ಇದ್ದ ನ್ಯೂಸ್ನಲ್ಲೂ ಬೆಂಗಳೂರು ಬೆಂಕಿ ವಿಷಯನೇ ತಕ್ಕಂಡಿದ್ದೆ. ಎರಡೂ ಬುಲೆಟಿನ್ ತುಂಬಾ ಲಾಯ್ಕ ಬಾತ್...ಇದರ ಕ್ರೆಡಿಟ್ ನಮ್ಮ ಟೀಂಗೆ...

- ಸುನಿಲ್ ಪೊನ್ನೇಟಿ 
arebhase@gmail.com

ನಾ ಬೆಳ್ದನೆ...ಎತ್ತರೆತ್ತರ !


ಅವ್ಳು ಭೂಮಿ, ನಾ ಆಕಾಶ...
ಇಬ್ಬರೂ ಸೇರಿಕೆ ಸಾಧ್ಯನಾ ?
ಆದ್ರೂ ಒಂದು ಸಣ್ಣ ಆಶಾವಾದ
ಬಯಲಲ್ಲಿ ನಿಂತು ದೂರಕ್ಕೆ ನೋಡಿ !
ಅಲ್ಲಿ ವಸುಂಧರೆ ಜೊತೆ ಗಗನದ ಸಂಗಮ !
ದೊಡ್ಡ ಕಾಫಿ ತೋಟ, ಅರಮನೆಯಂಥ ಮನೆ
ಅವ್ಳ ಮನೇಲಿ ಇರವ್ಕೆಲ್ಲಾ ಒಂದೊಂದು ಕಾರು !
ಬೆಟ್ಟದ ಮೇಲೆ ಗದ್ದೆ, ಹುಲ್ಲಿನ ಗುಡಿಸಲು
ನಾ ಹೊರಗೆ ದುಡಿದರೇ ನಮ್ಮ ಜೀವನ ರಥ !
ಮಾತೆತ್ತಿದರೆ ಅವಳಪ್ಪನ ಕೈಗೆ ಬಂದದೆ ಕೋವಿ !
ನಾನೋ ಬಡವ.. `ಗುಂಡು'ಗೆ ಗುಂಡಿಗೆ ಕೊಡೊಕಾ ?
ಪೀಡಿಸಿ, ಪೀಡಿಸಿ ಹಿಂದೆ ಬಿದ್ದವ್ಳು ಈಗ ಮೌನಿ !
ನಾನೇ ಮುಂದಕ್ಕೆ ಹೆಜ್ಜೆ ಇಡೊಕು...ಎದೇಲಿ ಅವಲಕ್ಕಿ !
ನೆತ್ತಿಮೇಲೆ ಸಿಟ್ಟಿನ ಸೂರ್ಯ
ಕಾಲ ಕೆಳಗೆ ಕಾದ ಮರಳು
ಹೊಟ್ಟೆಯೊಳಗೆ ನೋವಿನ ಸಂಕಟ
ಏಳು ಹೇಳ್ದು ? ಏನು ಮಾಡ್ದು ?
ಸಂಬಂಧ ಬೆಳೆಸೀಕೆ ಅಂತಸ್ಥೇ ಗೋಡೆನಾ ?
ಕತ್ತಲೆ ಕಳ್ದ್ ಬೆಳಕು ಬಂದೇ ಬರೋಕು
ನಾನೂ ಬೆಳ್ದನೆ ಎತ್ತರೆತ್ತರ...ಅವಳಪ್ಪನ ಸಮಕ್ಕೆ !
ಸಮುದ್ರಂಚಿನ ಹೊಸದಿಗಂತ ನಂಗೆ ಪ್ರೇರಣೆ !

- `ಸುಮ'
arebhase@gmail.com

Thursday, 23 February 2012

ಅಹಲ್ಯ ಟೀಚರ್ ಗೆ ಅಶ್ರುನಮನ...


ನಂಗೆ ಪಾಠ ಮಾಡ್ದ ಗುರುಗಳ ಬಗ್ಗೆ ನಾ ನಿನ್ನೆಯಷ್ಟೇ `ಮೈ ಆಟೋಗ್ರಾಫ್' ತಾ ಒಂದು ಲೇಖನ ಬರ್ದಿದ್ದೆ. ನನ್ನ ಕನ್ನಡನ ಕೆತ್ತಿ ತಿದ್ದಿಕೊಟ್ಟ ಅಹಲ್ಯ ಟೀಚರ್ ಬಗ್ಗೆನೂ ಹೇಳ್ಕಂಡಿದ್ದೆ.... ವಿಪರ್ಯಾಸತೇಳಿರೆ, ಅವು ತೀರಿಕಂಡ್ ನಿನ್ನೆಗೆ ಮೂರು ದಿನ ಆಗಿಬಿಟ್ಟಿತ್ತ್. ನಂಗೆ ಮಾತ್ರ ಈ ವಿಷಯ ಗೊತ್ತಾಗಿತ್ಲೆ. ನಿನ್ನೆ ರಾತ್ರಿ ಮನೆಗೆ ಫೋನ್ ಮಾಡಿಕಾಕನ ನನ್ನ ಅಮ್ಮ ಇದನ್ನ ಹೇಳ್ದೊ... ಇನ್ನ್ ಬ್ಲಾಗ್ಲಿ `ಮೈ ಆಟೋಗ್ರಾಫ್' ನೋಡ್ದ ಗೆಳೆಯ ಮುನ್ನ ಇಂದ್ ಬೆಳಗ್ಗೆ ಫೋನ್ ಮಾಡಿ, `ಅಹಲ್ಯ ಟೀಚರ್ ತೀರ್ಕೊಂಡೊ ಮಾರಾಯ...' ತಾ ಹೇಳ್ತ್. ಯಾಕೋ ನನ್ನ ಎದೇಲಿ ಒಂಥರ ತಳಮಳ...ಕಮ್ಯುನಿಕೇಶನ್ ಇಂದ್ ಹೆಂಗೆ ಬೆಳ್ದ್ ನಿಂತುಟ್ಟು...ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ! ಆದ್ರೂ ನನ್ನ ಪ್ರೀತಿಯ ಟೀಚರ್ ಇನ್ನಿಲ್ಲೆತಾ ಗೊತ್ತಾಕೆ ನಂಗೆ ಮೂರು ದಿನ ಬೇಕಾತ್ ! 
ಅಹಲ್ಯ ಟೀಚರ್ನಂಗೆ ಇರವು ಬಹುಶ: ಇಂದ್ ಭೂತಕನ್ನಡಿ ಹಾಕಿ ಹುಡುಕಿರೂ ಸಿಕ್ಕಿಕಿಲ್ಲೆ. ಅವ್ರ ಲೈಫ್ಲಿ ಅದೆಷ್ಟು ಸಾವಿರ ಮಕ್ಕಳಿಗೆ ಪಾಠ ಮಾಡ್ಯೊಳೋ ಏನೋ... 2 ವರ್ಷದ ಹಿಂದೆ ಭಾಗಮಂಡಲಲಿ ಸಿಕ್ಕಿರ್ಕಾಕನ ನನ್ನನ್ನ ಹೆಸ್ರು ಹೇಳಿ ಗುರುತು ಹಿಡಿದಿದ್ದೊ... ಹೆಸ್ರು ಮಾತ್ರ ಅಲ್ಲ, ಅಡ್ಡ ಹೆಸ್ರೂ ಅವ್ಕೆ ಯೋಚನೆ ಇತ್... ಮುನ್ನ ಶಾಲೆಗೆ ಬಾಕಾಕನ ಅವಂಗೆ `ಕುಂಡಕೋಳಿ' ತಾ ಅಡ್ಡ ಹೆಸ್ರಿತ್ತ್. ಅಹಲ್ಯ ಟೀಚರ್ ಮೊನ್ನೆ ಮೊನ್ನೆ ವರೆಗೂ ಅವ್ನನ್ನ ಹಂಗೆನೇ ಕರೀತಿದ್ದೊ.
ಐದನೇ ಕ್ಲಾಸ್ಲಿ ಅಹಲ್ಯ ಟೀಚರ್ ಕನ್ನಡ ಮತ್ತೆ ವಿಜ್ಞಾನ ಪಾಠ ಮಾಡ್ತಿದ್ದೊ. ಪ್ರತಿಯೊಬ್ಬರ ಮೇಲೂ ಅವ್ರ ಗಮನ ಇರ್ತಿತ್ತ್. ನನ್ನ ಕನ್ನಡ ಅಕ್ಷರಗಳ್ನ ನೊಡಿ ಅವು `ಕೋಳಿ ಕಾಲು ಥರ ಬರೀತೀಯ..' ತಾ ಬೈತಿದ್ದೊ.. ಈಗ್ಲೂ ನನ್ನ ಅಕ್ಷರ ಇರ್ದು ಹಂಗೆನೇ...! ಆದ್ರೆ ಕನ್ನಡ ಶಬ್ದಗಳ ಜೊತೆ ಆಟ ಆಡುದುನ ಹೇಳಿಕೊಟ್ಟಿದ್ದೊ.. ಅವು ಕ್ಲಾಸ್ಲಿ ಬರೆಸ್ತಿದ್ದ ಪ್ರಬಂಧ, ನಮ್ಮ ಬರವಣಿಗೆಗೆ ಒಂದೊಳ್ಳೆ ಅಡಿಪಾಯ ಹಾಕಿಕೊಟ್ಟಿತ್ತ್. ತಪ್ಪು ಮಾಡಿರೆ ಕೋಲು ಮುರ್ದು ಹೋಗುವಂಗೆ ಹೊಡೀತ್ತಿದ್ದೊ...ಅಲ್ಲಿ ಪ್ರೀತಿ ಇತ್ತ್ !
ಅಹಲ್ಯ ಟೀಚರ್ ತುಂಬಾ ಲಾಯ್ಕ ಹಾಡ್ತಿದ್ದೊ... ಡ್ಯಾನ್ಸ್ ಮಾಡಿಕೆ ಬರ್ತಿತ್ತ್... ಆಗೆಲ್ಲಾ ಸ್ಕೂಲ್ಡೇಗಳಿಗೆ ಈಗಿನಂಗೆ ಸಿಡಿ ಹಾಕ್ಕೊಂಡೋ, ಕ್ಯಾಸೆಟ್ ಹಾಕ್ಕಂಡೋ ಕುಣೀತಿತ್ಲೆ... ಅಹಲ್ಯ ಟೀಚರ್ ಹಾಡಿಗೆ ಮಕ್ಕ ಕುಣಿಯದುತೇಳಿರೆ ಅದೇ ದೊಡ್ಡ ಖುಷಿ. ಭಾಗಮಂಡಲಲಿ ನಡೆವ ರಾಮನವಮಿಲೂ ಅಹಲ್ಯ ಟೀಚರ್ ಹಾಡು ದೊಡ್ಡ ಆಕರ್ಷಣೆ.
ಅಹಲ್ಯ ಟೀಚರ್ ಇನ್ನೂ ಹೆಚ್ಚು ಟೈಂ ಬದುಕುತಿದ್ದೊ... ಆದ್ರೆ ಬ್ಲಡ್ ಕ್ಯಾನ್ಸರ್ ಅವ್ರನ್ನ ಬಲಿತಕ್ಕಂಡ್ಬಿಡ್ತ್... ಪ್ರೀತಿಯ ಟೀಚರ್, ಇದ್ ನಿಮಿಗೆ ನನ್ನ ಅಶ್ರುನಮನ...


- 'ಸುಮ'

arebhase@gmail.com

Wednesday, 22 February 2012

ಮೈ ಆಟೋಗ್ರಾಫ್ !


ನಮ್ಮ ಜೀವನಲಿ ಅಪ್ಪ ಮತ್ತೆ ಅಮ್ಮನಷ್ಟೇ ಪ್ರಭಾವ ಉಂಟುಮಾಡ್ದು, ನಮಿಗೆ ಪಾಠ ಹೇಳಿಕೊಟ್ಟ ಟೀಚರ್ಗ...ಅವ್ರ ನೆನಪು ನಾವು ಬದುಕಿ ಇರ್ವ ತನಕ ಇದ್ದದೆ...ನಂಗೆ ನೆನಪಿರುವಂಗೆ ಮೊದಲ ಸಲ ಅಕ್ಷರ ಹೇಳಿಕೊಟ್ಟದ್ ನನ್ನ ಅಮ್ಮ. ಇದಾದ್ಮೇಲೆ ಅಂಗನವಾಡಿಯ ರುಕ್ಮಿಣಿ ಟೀಚರ್ ! ಅದ್ ಮಹಿಳಾ ಸಮಾಜದವು ನಡೆಸ್ತಿದ್ದ `ಶಿಶು ವಿಹಾರ'. ಆಗೆಲ್ಲಾ ಪುಟಾಣಿಗಳಿಗೆ ಅಂಗನವಾಡಿಯೇ ಮೊದಲ ಪಾಠಶಾಲೆ. ದಿನಾ ಮಿಠಾಯಿ ತಂದ್ಕೊಟ್ಟ್ ಪ್ರೀತಿಯಿಂದ ನೋಡ್ಕಂಡ ರುಕ್ಮಿಣಿ ಟೀಚರ್, ಈಗ್ಲೂ ನನ್ನ ಹೆಸರು ನೆನಪಿಟ್ಟುಕೊಂಡೊಳೊ ! 
ಅಕ್ಷರಗಳನ್ನ ಜೋಡಿಸಿ ಶಬ್ದಗಳ್ನ ಓದಿಕೆ ಹೇಳಿಕೊಟ್ಟದ್, ಕಾವೇರಮ್ಮ ಟೀಚರ್...`ಕಮಲಳ ಲಂಗ ಝಳ ಝಳ...' ತಾ ಅವು ಅಂದ್ ಹೇಳಿಕೊಟ್ಟದ್ ಇಂದಿಗೂ ಕಿವೀಲಿ ಗುಂಯ್ತಾ ಕೇಳ್ದಂಗೆ ಆದೆ. 
ಶಾಲೆಗಳಲ್ಲಿ ಹೊಡ್ದವೆತಾ ಮೊದ್ಲ ಸಲ ಗೊತ್ತಾದ್ 2ನೇ ಕ್ಲಾಸ್ಲಿ. ವೇದಾವತಿ ಟೀಚರ್ ಕೈಂದ ತಿಂದ ಪೆಟ್ಟು ಪೆನ್ನು ಹಿಡಿಯಕಾಕನೆಲ್ಲಾ ಯೋಚನೆ ಆಗ್ತಿದ್ದೆ !
ಒಂದೇ ಕ್ಲಾಸ್, ಎರಡು ಸೆಕ್ಷನ್... ಇಂಥದ್ದೆಲ್ಲಾ ಉಟ್ಟುತಾ 3ನೇ ಕ್ಲಾಸ್ಲಿ ಗೊತ್ತಾತ್. ನಾ ಮೂರನೇ ಕ್ಲಾಸ್ಲಿ ಬಿ ಸೆಕ್ಷನ್. ಯಶೋಧ ಟೀಚರ್ ನಮ್ಗೆ ಕ್ಲಾಸ್ ಟೀಚರ್. ಅದ್ಯಾಕೋ ಮಧ್ಯದಲ್ಲೇ ಕೆಲಸ ಬಿಟ್ಟು ಹೋಗಿಬಿಟ್ಟೊ...ಅವು ಹೋದ ಮೇಲೆ ಎ, ಬಿ ಎರಡೂ ಸೆಕ್ಷನ್ ಒಟ್ಟಿಗೆ ಸೇರ್ಸಿದೊ. ಲೀಲಾವತಿ ಟೀಚರ್ ಆಗ ಕ್ಲಾಸ್ ಟೀಚರ್. ಇಲ್ಲಿ ಮತ್ತೊಂದು ಶಿಕ್ಷೆ ಪರಿಚಯ ಆತ್, ಅದ್.. ಬಸ್ಕಿ ಹೊಡೆಯುದು !
ನಾಲ್ಕನೇ ಕ್ಲಾಸ್ಲಿ ಕಾಮಿನಿ ಟೀಚರ್ ಕ್ಲಾಸ್ ಟೀಚರ್...15 ಮನೆ ವರೆಗೆ ಮಗ್ಗಿ ಕಲ್ಸಿದ್ದ್ ಅವೇ...! ಈಗ್ಲೂ ನಂಗೆ 15 ಮನೆಗಿಂತ ಜಾಸ್ತಿ ಮಗ್ಗಿ ಬಾಲೆ.
ಒಂದೊಂದು ಸಬ್ಜೆಕ್ಟ್ಗೆ ಒಂದೊಂದು ಟೀಚರ್ ಬಂದವೆತಾ ಗೊತ್ತಾದ್ 5ನೇ ಕ್ಲಾಸ್ಲಿ. ಇಲ್ಲಿಂದಲೇ ನಮ್ಮ ಇಂಗ್ಲೀಷ್ ಕ್ಲಾಸ್ ಶುರುವಾತ್. ಲಕ್ಷ್ಮಣ ಮಾಸ್ಟರ್ ಇಂಗ್ಲೀಷ್ ಹೇಳಿಕೊಡ್ತಿದ್ದೊ. ಅಹಲ್ಯ ಟೀಚರ್ ಕನ್ನಡ ಪಾಠ ಮಾಡ್ತಿದ್ದೊ. ಎಲ್ಲವೂ ಪೈಪೋಟಿ ಮೇಲೆ ಮಕ್ಕಳಿಗೆ ಹೊಡ್ದ್ ಕಲ್ಸ್ತಿದ್ದೊ... ನನ್ನ ಕನ್ನಡಕ್ಕೆ ಒಂದು ರೂಪ ಕೊಟ್ಟದ್ ಅಹಲ್ಯ ಟೀಚರ್.
ಆರನೇ ಕ್ಲಾಸ್ಲಿ ಹಿಂದಿ ಕಲಿಕೆಯೂ ಶುರುವಾತ್. ರುಕ್ಮಿಣಿ ಟೀಚರ್ ಹಿಂದಿ ಹೇಳಿಕೊಡ್ತಿದ್ದೊ...ಇದೇ ಟೈಂಲಿ ಗೀತಾ ಟೀಚರ್ ಹೆಡ್ಮಿಸ್ ಆಗಿ ಬಂದೋ...ಸೈನ್ಸ್ ಕ್ಲಾಸ್ ಇವೇ ತಕ್ಕಣ್ತಿದ್ದೊ... ಪಾಠ ಪುಸ್ತಕ ಬಿಟ್ಟು ಬೇರೆ ಪ್ರಪಂಚ ಕೂಡ ಉಟ್ಟುತಾ ಕಲ್ಸಿಕೊಟ್ಟದ್ ಇದೇ ಗೀತಾ ಟೀಚರ್. ಅವು ಬಂದ ಮೇಲೆ ಶಾಲೆಲಿ `ವಾರ್ತೆ ' ಓದುದು ಶುರುವಾತ್. ನಾನೇ ವಾರ್ತಾ ವಾಚಕ !
ಏಳನೇ ಕ್ಲಾಸ್ಗೆ ಬಾಕಾಕನ ಚೆಡ್ಡಿ ಹೋಗಿ ಪ್ಯಾಂಟ್ ಬಂದಿತ್ತ್. ತಿಮ್ಮಯ್ಯ ಮಾಸ್ಟ್ರು ಥರದ ದೂವರ್ವಾಸ  ಮುನಿಗಳ ಪಾಠ ಕೇಳುವ ಯೋಗನೂ ಸಿಕ್ಕಿತ್ತ್... ಶರ್ಮಾ ಮಾಸ್ಟರ್ ಇಂಗ್ಲಿಷ್ನ ನಮ್ಗೆ ಅರ್ದು ಅರ್ದು ಕುಡಿಸುವ ಕೆಲಸ ಮಾಡ್ದೊ.. ನೀರಧಿ   ಟೀಚರ್ ನಮ್ಮ ಕನ್ನಡನ ಸುಂದರವಾಗಿ ಕೆತ್ತಿದೋ... ಆಗ ನಾ ಒಂದು ಕಥೆ ಬರ್ದ್ `ಶಕ್ತಿ' ಪೇಪರ್ಗೆ ಕಳ್ಸಿದ್ದೆ...`ಔದಾರ್ಯ' ತಾ ಅದ್ರ ಹೆಸ್ರು. ಕಳ್ಸಿದ್ದೇ ಮರ್ತು ಹೋಗಿದ್ದ ಒಂದು ದಿನ ಆ ಕಥೆ ಪೇಪರ್ಲಿ ಬಂದೇ ಬಿಡ್ತ್... ಹಂಗೆ ನನ್ನ ಮೊದಲ ಕಥೆಗೆನೇ ಪೇಪರ್ಲಿ ಸ್ಥಾನ ಸಿಕ್ಕಿಬಿಟ್ಟಿತ್.
8ನೇ ಕ್ಲಾಸ್... ಹೈಸ್ಕೂಲ್. ಮನೇಂದ ಸ್ವಲ್ಪ ದೂರ. ಮಧ್ಯಾಹ್ನ ಊಟಕ್ಕೆ ಬಾಕೆ ಆಲೆ. ಮೊದಲ ಸಲ ಬುತ್ತಿ ತಕ್ಕಂಡ್ ಹೋಕೆ ಕಲ್ತೆ. 9 ಮತ್ತೆ 10ನೇ ಕ್ಲಾಸ್ಲಿ ನಮ್ಮ ಮೇಲೆ ಟೀಚರ್ಗಳ ಪ್ರಭಾವ ತುಂಬನೇ ಜಾಸ್ತಿ. ಶ್ರೀ ಕೃಷ್ಣ ಭಟ್ (ಭಟ್ಟ ಮಾಸ್ಟ್ರು), ಪೂಣರ್ಿಮಾ ಟೀಚರ್, ಗೀತಭಾವೆ ಟೀಚರ್, ದಿವಾಕರ ಮಾಸ್ಟ್ರ್...ಹಿಂಗೆ ನಮ್ಮ ಜೀವನಕ್ಕೆ ಒಳ್ಳೇ ಫೌಂಡೇಶನ್ ಹಾಕಿಕೊಟ್ಟವ್ರ ಸಂಖ್ಯೆ ತುಂಬಾ ಉಟ್ಟು...
ಪಿಯುಸಿ ಅಂತೂ ಮರೆಯಕ್ಕೇ ಆಲೆ. ಇಲ್ಲೂ ಪೆಟ್ಟು ತಿಂದವು ನಾವು ! ಕೋಪಟ್ಟಿ ಬೆಟ್ಟದ ಸಪೂರ ಬೆತ್ತಲಿ ರಾಮಕೃಷ್ಣ ಸರ್ ಹೊಡೀತ್ತಿದ್ದ ಪೆಟ್ಟು... ಯೋಚನೆ ಮಾಡಿರೆ, ಈಗಲೂ ಮೈ ನಡುಗಿದೆ. ಆದ್ರೂ ಅವು ನನ್ನ ಫೆವರಿಟ್ ಲೆಕ್ಚರರ್.. ಇಂದಿಗೂ ಕಾಂಟ್ಯಾಕ್ಟ್ಲಿ ಒಳೆ....
ಆದ್ರೆ ಪಿಯುಸಿ ನಂತರದ ಗುರುಗಳ ಬಗ್ಗೆ ಅಷ್ಟೊಂದು ಟಚ್ ಇರ್ದುಲ್ಲೆತ್ತಾ ನನ್ನ ಅಭಿಪ್ರಾಯ.. ನೀವು ಏನು ಹೇಳಿಯರಿ ? 
- `ಸುಮ'


(ಇಂಥ ಸವಿ ನೆನಪುಗಳ್ನ ನೀವೂ ಬರೆಯಕ್... ಬರ್ದದನ್ನ mail ಮಾಡಿ )arebhase@gmail.com

Monday, 20 February 2012

`ಮುತ್ತಿನ' ಡಾಕ್ಟರ್ !...


ಮಾಣಿಕ್ಯದ ದಂತಗ
ಮನುಷ್ಯರಿಗೆ ಬೇಕು
ಮಾವಿನ ಕಾಯಿಗಿಯಕ್ಕೆ
ಮಾಣಿಕ್ಯದ ದಂತ
ಇದ್ದರೆ ಬಾಳ್
ಮುರ್ದರೆ ಗೋಳ್
ಬದುಕೆಲ್ಲಾ ಬರೀ ಧೂಳ್
ನಮಿಗೆ ಒಂದು ಸಲ ನವೀನ ಜಲ್ಮ
ಅವುಕೆ ಎರಡು ಸಲ ನವೀನ ಜಲ್ಮ
ಕೃತಕ ಜಲ್ಮ ಹಲವು ಸಲ
ಅವುಗಳ ರಕ್ಷಣೆಗೆ
ದಂತವೈದ್ಯರ್ !
ಹಲವು ರಸಗಳ ನುಂಗುವ
ಹೊಲಸ್ ಬಾಯಿಗೆ ನಾಚಿಪದೆ
ಹುಳುಕು ಹಲ್ಲಿಗೆ ಅಂಜಿಪದೆ
ಕೃತಕ ಮುತ್ತುಮಣಿಗಳ
ಜೋಡಿಸುವೆ ಜೋಡು ಬಾಯಿಗೆ
ಜೀವನದ ಬಾಳ ಬೆಳಗಿಸಿ
ಅವನಾಸೆಯ ಈಡೆರಿಸುವೆ
ಧನ್ಯ ದಂತ ವೈದ್ಯರ್ಗ
ಅವ ಹೃದಯದಲಿ
ಕರುಣೆಯ ಕಿರಣ
ಬೆರಳ್ಲಿ ಚಿಕಿತ್ಸೆಯ ಚಳಕ
ಅಂವ ಸಮಾಜಕ್ಕೆ ಧನ್ಯ

- ಕುಲ್ಲಚನ ತಾರಾರವಿ
www.arebhase.blogspot.com

Sunday, 19 February 2012

ಮತ್ಸ್ಯಗಂಧ


ಭಾನುವಾರ
ನಮಸ್ತೆ ಹೆಂಗೊಳರಿ?
ಫೈನ್...
ತಿಂಡಿ ಆತಾ... ಎಂಥ ಸ್ಪೆಷಲ್ ?
ಹಾಂ ಆತ್...ಹೊಳೆಮೀನ್ ಸಾರ್, ಪುಂಡಿ !


ಸೋಮವಾರ
ಹಾಯ್...ಊಟ ಆತಾ?
ಆತ್
ಗಮ್ಮತ್ತಾ...?
ಅಂಥದ್ದೇನಿಲ್ಲೇ...ಕಾಟ್ಲಾ ಫ್ರೈ !


ಮಂಗಳವಾರ
ಹಲೋ...ಎಷ್ಟು ಬೇಗ ಕತ್ತಲಾಗಿಬಿಡ್ತಲ್ಲಾ...
ಹುಂ.... ಸೂರ್ಯಂಗೆ ತುಂಬಾ ಅರ್ಜೆಂಟ್ !
ಹೌದೌದು...ಊಟಕ್ಕೆ ಎಂಥ ?
ಚಪಾತಿ, ಮತ್ತಿಮೀನ್ ಸಾರು !


ಬುಧವಾರ...
ಗುಡ್ಮಾರ್ನಿಂಗ್...ತುಂಬಾ ಚಳಿ ಅಲಾ ಇಂದ್...
ಹೌದಪ್ಪಾ.. ಸೋಮಾರಿ ಸೂರ್ಯ.. ಏಳುದೇ ಲೇಟ್ !
ತಿಂಡಿಗೆ ಏನು ಮಾಡ್ಯೊಳರಿ ?
ರೊಟ್ಟಿ....ಐಲೇಮೀನ್ ಗಸಿ !


ಗುರುವಾರ...
ಹೋ ಏನು ಸೆಕೆ...
ಹುಂ.. ಈ ಸೂರ್ಯಂಗೆ ಏಷ್ಟು ಅಹಂಕಾರ !
ಊಟ ಮಾಡಿದ್ರಾ ?
ಹುಂ... ಈಗಷ್ಟೇ ಆತ್, ನಂಗ್ ಮೀನ್ ಹುರ್ದದ್ !


ಶುಕ್ರವಾರ...
ಗುಡ್ಇವ್ನಿಂಗ್.. ರಾಧಾ ಸೀರಿಯಲ್ ನೋಡಿದ್ರಾ?
ನೋಡ್ದೆ... ನೋಡ್ದೆ.. ಲಾಯ್ಕ ಇತ್...
ಅಡುಗೆ ಆತಾ ?
ಮಾಡ್ತಾ ಒಳೆ...ಸೀಗಡಿ ಸಾರು !


ಶನಿವಾರ...
ಆ... ಆ... ಆ... ಗುಡ್ಮಾರ್ನಿಂಗ್ ...
ಇನ್ನೂ ನಿದ್ದೆ ಬಿಟ್ಟತ್ಲೆನಾ ?
ಅಯ್ಯೋ.. ತಿಂಡಿ ಮಾಡ್ತೊಳೆ... ನಿಂದಾತಾ?
ಶನಿವಾರ... ನಂಗೆ ಉಪವಾಸ !




ಸಮುದ್ರದೊಳಗೆ ಮುರಾಯಿ ಮೀನು ಹೇಳ್ತಿತ್ತ್...
ಅಬ್ಬಾ ಇಂದ್ ನಾ ಬದುಕಿದೆ !

`ಸುಮ'
arebhase@gmail.com

Friday, 17 February 2012

ಜಂಬದ ಕೋಳಿ !


ಬಿಂಕದ ಸಿಂಗಾರಿ
ಚೆಲುವಿನ ವಯ್ಯಾರಿ
ಅವ್ಳು ಜಂಬದ ಕೋಳಿ !
ಕುದುರೆ ಬಾಲದ ಜುಟ್ಟು
ಹಂಗೆನೇ ಓಡ್ದೆ....
ಆದ್ರೂ ಸ್ವಲ್ಪ ನಿಧಾನ
ಹಳೇ ರಾಮ ಬಸ್ನಂಗೆ !
ವಟ ವಟ ಮಾತು...
ಮಳೆಗಾಲದ ಕಪ್ಪೆಗಳಿಗೇ ನಾಚಿಕೆಯಾದೆ !
ನಿಂತಲ್ಲಿ ನಿಲ್ಲುಲ್ಲೆ...ಕುದ್ದಲ್ಲಿ ಕೂರುಲ್ಲೆ..
ಆ ಕಪ್ಪೆಗಳಂಗೆನೇ ಹಾರ್ತನೇ ಇರೋಕು !
ಒಂದಿಷ್ಟು ಚೇಷ್ಟೆ...ಕಾಲೆಳೆಯುದು..
ಜಾರಿಬಿದ್ದರೆ ನಗಾಡುದು !
ದಾಳಿಂಬಿ ಬೀಜ ಪೋಣಿಸಿಟ್ಟಂಗೆ
ಫಳ ಫಳ ಹೊಳೆಯುವ ಹಲ್ಲುಗ !
ಏನಿದ್ದರೂ ಏನು ಫಲ ?
ಅವ್ಳು ಜಂಬದ ಕೋಳಿ !
- `ಸುಮ'
arebhase@gmail.com

Thursday, 16 February 2012

ಕನ್ನಡ ಆಂಟಿಯ ಇಂಗ್ಲೀಷ್ ವ್ಯಾಮೋಹ..

ಅಲ್ಲಿ ಎಲ್ಲೋ ನನ್ನ ಮೊಬೈಲ್ ರಿಂಗ್ ಆದಂಗೆ ಆಗ್ತಾ ಇತ್ತ್. ತಕ್ಷಣ ಎಚ್ಚರ ಆತ್ ..ಗಂಟೆ
ನೋಡ್ರೆ ಆರೂವರೆ ಆಗಿತ್..ಅಲ್ಲೇ ಹತ್ರ ಇದ್ದ ಮೊಬೈಲ್ ಕಡೆ ಕಣ್ಣಾಡಿಸಿದೆ.. ನಾಲ್ಕ್ ಮಿಸ್ಸ್ ಡ್  ಕಾಲ್ ಇತ್ತ್    ..ಅಯ್ಯೋ ಕನಸಲಿ ಅಲ್ಲ ನಿಜವಾಗಿ ಮೊಬೈಲ್ ರಿಂಗ್
ಆಗಿತ್ತ್  ..ನೋಡ್ರೆ ನನ್ನ ಫ್ರೆಂಡ್ ಕಾಲ್ ! ...ಯಾಕಪ್ಪ ಇವಳಿಗೆ ಎಂತಾತ್ ,...ಹೊತಾರೆ ಹೊತಾರೆ ನಾಲ್ಕ್ ಸಲ ಯಾಕೆ ಕಾಲ್ ಮಾಡಿಟ್ಟುತಾ ಗ್ಯಾನ ಮಾಡಿಕಂಡ್  ನಾನೇ ಫೋನ್  ಮಾಡ್ದೆ..ಅತ್ತಂದ ಅವ್ಳು ಹೇಳ್ತ್ , ಇಂದ್ ಕಾಲೇಜಿಗೆ ರಜೆ ಗಡ ಅಲ್ಲಿ ನ್ಯೂಸ್ ಚಾನೆಲ್ ಲಿ ಕೊಡ್ತಾ ಒಳೋ ನೋಡ್ ತಾ ..ನಾನ್ ಹಾಸಿಗೆಂದ ಎದ್ದವಳೇ ಹೋಗಿ ಟಿ.ವಿ. ಹಾಕಿದೆ..ಅದರಲಿ ನಮ್ಮ
ಕರ್ನಾಟಕ ರಾಜ್ಯ ಕಂಡ ಅತ್ಯಂತ ಸಜ್ಜನ ರಾಜಕಾರಣಿ  ವಿ.ಎಸ್. ಆಚಾರ್ಯ ತೀರಿ
ಹೋದಕ್ಕೆ ಉಡುಪಿ ಮತ್ತೆ ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ರಜೆ ತಾ ..

ಅತ್ತಂದ,ಇತ್ತಂದ ಫೋನ್ ...ರಜೆ ಉಟ್ಟುತಾ  ಟೆ.ವಿ. ಲಿ ..ಇಲ್ಲೆತಾ  ಪೇಪರ್ಲಿ... ಕೊನೆಗೆ  ಹಂಗೂ ಹಿಂಗೂ ಮಾಡಿ ಕ್ಲಾಸಿಗೆ ಹೋದುತಾ  ನಿರ್ಧಾರ ಮಾಡಿ ಆಗಿತ್ತ್  ಅಷಟ್  ಹೊತ್ತಿಗಾಗಲೇ ಗಂಟೆ ಎಳ್ ಆಗಿತ್ ... ಅರ್ಧ ಗಂಟೇಲಿ ಎಲ್ಲಾ  ಕೆಲಸ ಮುಗ್ಸಿ ಹೊಕಾರೆ  ಸಾಕಾಗಿತ್...ಅಂತೂ ನನ್ನ ಬಸ್ ನನಗಾಗಿ ಕಾಯ್ತಾ ಇತ್..ಡ್ರೈವರ್ ಅಂಕಲ್ ಕೆಳ್ದೋ, ಇಂದ್ ರಜೆ ಇಲ್ಲೇನಾ ತಾ.. .ನಾ ಗೊತ್ಲೇತೇಳಿ ನನ್ನ ಪಾಡಿಗೆ ಹೋಗಿ ನನ್ನ ಮಾಮೂಲು ಸೀಟ್ಲಿ ಕುದ್ದೆ..ಯಾಕೋ ನಿದ್ದೆನೂ        ಸರಿಯಾಗಿ ಬಿಟ್ಟಿತ್ಲೇ..ತಿಂಡಿನೂ ತಿಂದಿತ್ಲೇ ..ಜೋರಾಗಿ ಹಸಿವು  ಬೇರೆ ಆಗ್ತಾ ಇತ್...ಸರಿ ಎಂತ ಮಾಡದು ,ಬಸ್ಸ್ ಲಿ   ಒಂದ್
ಗಂಟೆ ಒಳ್ಳೆ ನಿದ್ರೆ ಮಾಡಿ, ಕ್ಯಾಂಟೀನ್ ಗೆ  ಹೋಗಿ ತಿಂಡಿ ತಿಮ್ಬೋದು 
ತಾ  ಗ್ಯಾನ ಮಾಡಿ ಹಂಗೆ ಕುದ್ದಿದೆ...ಇಂದ್ ಯಾಕೋ ನಮ್ಮ ಕಂಡೆಕ್ಟರ್ ಅಣ್ಣ ಸ್ವಲ್ಪ ಲೇಟಾಗಿ ಟಿಕೆಟ್ ತೆಗಿಯೊಂಗೆ ಕಾಣ್ತಾ ಇತ್..ಸರಿ ಒಂದ್ಸಲ ಟಿಕೆಟ್ ತೆಗ್ದ ಮೇಲೆ ಮಲ್ಗೊನೋ ತಾ ಮನಸ್ ಲೇ  ಯೋಚನೆ ಮಾಡ್ತಾ ಇದ್ದೆ...ಅಷ್ಟ್ಹೊತ್ತಿಗೆ   ನಮ್ಮ ಬಸ್ ರೈಲ್ವೆ ಸ್ಟೇಷನ್ ಹತ್ರ ಬಂದ್
ತಲಪಿತ್...ಅಲ್ಲೇ ಸುಮಾರ್ ಜನ ಹತ್ತಿದೋ..ನೋಡ್ತಾ ಇದ್ದಂಗೆ ನಮ್ಮ ಬಸ್ ಫುಲ್
ಆಗುವಷಟ್   ಜನ ಬಂದ್ ಹತ್ತಿದೋ.. ಅವರಲ್ಲಿ ಒಂದ್ ಸಣ್ಣ ಸಂಸಾರ ಇತ್..ಗಂಡ, ಹೆಣ್ ಮತ್ತೆ 2 ಮಕ್ಕ...ಒಂದ್ ಕೂಸಿಗೆ ನಾಲ್ಕ್ ವರ್ಷ ಇರುದೇನೋ..ಮತ್ತೊಂದ್   ಕೂಸಿಗೆ ಒಂದೂವರೆ ವರ್ಷ ಆಗಿರದು..ಗಂಡ ನಾಲ್ಕ್ ಮಕ್ಕಳಿಗೆ ಸಮ ಆಗಿರೋ ಒಂದ್ ದೊಡ್ಡ
ಬ್ಯಾಗ್  ಹಿಡ್ಕಂಡ್ ಹಿಂದೆಂದ ಹತ್ತಿತ್..ಹೆಣ್ಣ್ ಆ ಎರಡ ಮಕ್ಕಳ ಹಿಡ್ಕಂಡ್ ಮುಂದೆಂದ ಹತ್ತಿತ್..ಒಳ್ಳೆ ಬ್ಯಾಗ್ ತಂದ್  ಕೊಡೋವರಂಗೆ ಆ ಸಣ್ಣ ಕೂಸನ ನನ್ನ  ಕೈಲಿ ಕೊಟ್ಟು...ಇನ್ನೊಂದ್ ಕೂಸನ ತನ್ನ ಹತ್ರ ಆ ಆಂಟಿ  ಕೂರ್ಸಿಕಂಡ್ತ್  ...  ಅವಳ ಮುಖಲಿ   ಸಣ್ಣ ನಗೆ ಬೇರೆ.. 

ಇತ್ತ ನನ್ನ ಒಂದ್  ಕೈಲಿ  ಬ್ಯಾಗ್, ಇನ್ನೊಂದ್ ಕೈಲಿ ಬುಕ್ ... ಈಗ ಈ ಕೂಸ್ ಬೇರೆ,...ಇಂದ್ ಬಸ್ಲಿ  ನಾನ್ ನಿದ್ರೆ ಮಾಡ್ದಂಗೆ ತಾ  ಗ್ಯಾನ ಮಾಡಿಕಂಡೆ...ಆ ಆಂಟಿ ಮಕ್ಕಳೇ ನೀರ್ ಬೇಕಾ ..ಮಿಟಾಯಿ ಬೇಕಾ ..ರೀ ಟಿಕೆಟ್ ತೆಗಿಯನಿ ಅದ್ ಇದ್  ತ ಅತ್ತಂದ ಇತ್ತ, ಇತ್ತಂದ ಅತ್ತ ತಿರ್ಗಿಕಂಡ್ ಮಾತಾಡ್ತಾ ಇತ್..ವಿಚಿತ್ರ ಹೇಳ್ರೆ ಅವು ಮಾತಾಡ್ತಿದ್ದದ್ದ್ ಇಂಗ್ಲೀಷಿಲಿ !..ಓ ಈ ಆಂಟಿಗೆ ಕನ್ನಡ ಬಾಲೆ ಕಂಡದೆ ತಾ  ಅನ್ಕಂಡೆ  ..ಹಂಗೆ ಬಸ್ ಹೊರಟ್ ಒಂದ್ ೫ ನಿಮಿಷ
ಆಗಿರು ದು. ಒಂದ್ ಫೋನ್ ಬಾತ್..ಆಶ್ಚರ್ಯ ಹೇಳ್ರೆ ಆ ಗಂಡ ಹೆಣ್ಣು ಇಬ್ಬರೂ  ಫೋನ್ ಲಿ ಕನ್ನಡಲೇ ಮಾತಾದ್ದೋ..ಪುಣ್ಯಾ ಈ ಆಂಟಿ  ನನ್ನ ಹತ್ರ ಮಾತಾಡದಿದ್ದರೆ ಸಾಕ್ ತಾ  ಅಂದ್ಕಂಡೆ. ಅಷ್ಟೋತ್ತಿಗೆ ಆ ಆಂಟಿ, 'ನೀ ಏನ್ ಮಾಡ್ತಾ ಒಳ' ತಾ  ಪೀಠಿಕೆ ಹಾಕಿ ಮಾತಾಡಿಕೆ  ಶುರು
ಮಾಡ್ತ್..ನಾನ್ ಸ ಬೇರೆ ದಾರಿ ಇಲ್ಲದೆ ಮಾತಾಡಿದೆ..ಹಂಗೆ ನಂಗೆ ಸ್ವಲ್ಪ ಕುತೂಹಲ ಜಾಸ್ತಿ ಆಗಿ, ನೀವೆಲ್ಲಿರ್ದು ತಾ ಕೇಳ್ದೆ...ಅಯ್ಯೋ ರಾಮ ಯಾಕೆ ಬೇಕಿತ್ ನಂಗೆ ಕೇಳುವ
ಕೆಲಸ..'ನಾನ್  ಇರ್ದು  ಬೆಂಗಳೂರ್' ..ತಾ  ಶುರು ಮಾದ್ದ  ಆ  ಆಂಟಿ ನಮ್ಮ ಯುನಿವರ್ಸಿಟಿ ಗೇಟ್ ಬಂದರೂ, ಅವರ ಹಿಸ್ಟೇರಿ ಹೇಳಿ ಮುಗಿಸಿತ್ಲೆ . ನನಗೋ ತಲೆ ಅಲ್ಲಾಡಿಸಿ
ಅಲ್ಲಾಡಿಸಿ ಸಾಕಾಗಿತ್..ನಾನ್ ಕ್ಲಾಸಿಲಿ ನಿದ್ದೆ ಸಾ ಹಂಗೆ ತೂಗುಲೇ...ಇನ್ನೇನು ನನ್ನ
ತಲೆ ವೈಬ್ರೇಶನ್  ಮೋಡ್ ಗೆ ಹೊದೊಂದೇ ಬಾಕಿ.. ಪುಣ್ಯಕ್ಕೆ ನನ್ನ ಸ್ಟಾಪ್
ಬಾತ್..ಬದುಕಿದೆಯಾ  ಬಡ ಜೀವವೇ ತಾ  ಆ ಆಂಟಿ ಕೈಗೆ ಕೂಸ್ ಕೊಟ್ಟೆ...ಆ ಇಂಗ್ಲೀಷ್  ಜೋಗುಳಕ್ಕೆ ಕೂಸ್ ನಿದ್ದೆ ಮಾಡಿತ್ ...ಅದನ್ನ  ಅವರಮ್ಮನ ಕೈಗೆ ಕೊ ಟ್ಟು  ಟಾಟಾ ಮಾಡಿ ಬಸ್ಸ್ ಇಳಿಯಕನ ನನ್ನ ನಿದ್ರೆ ಮಾಯಾ ಆಗಿ ಹೊಗಿತ್ತ್ ..ಈ ಆಂಟಿನ  ಇಂಗ್ಲೀಷ್   ವ್ಯಾಮೋಹಕ್ಕೆ  ನಗಾಡೋಕೋ ..ಇಲ್ಲೆ ಮರ್ಡೊಕೋ  ತಾ  ಗೊತ್ತಾತ್ಲೇ. ಇಲ್ಲಿ ನಮ್ಮ ಮುಖ್ಯಮಂತ್ರಿ  ಚಂದ್ರು
..ಆ ರಕ್ಷಣಾ ವೇದಿಕೆವು..ಕನ್ನಡ ಉಳಿಸಿ ಬೆಳೆಸಿ..ಕನ್ನಡ ಶಾಲೆ ಮುಚ್ಚ ಕ್ಕಾದ್...ಕಡ್ಡಾಯ ಕನ್ನಡ ಕಲಿಕೆತೆಲ್ಲಾ  ಮಾತಾಡುವೆ..ಆದರೆ ನಮ್ಮ ಕನ್ನಡದ ತಾಯಂದಿರೇ  ಸ್ವಲ್ಪ ಕಂಗ್ಲೀಷ್ ಕಲ್ಸಿರಾದ್ರೂ  ನಮ್ಮ ಕನ್ನಡ ಅಲ್ಪ ಸ್ವಲ್ಪ ಉಳಿಯೋದೇನೋ...ಈ ಆಂಟಿ ಥರ  ಇಂಗ್ಲೀಷ್  ಕಲ್ಸಿರೆ,  ಈಗ ನಾವು ಆ ಡೈನೋಸಾರ್ ನ   ಪಳೆಯುಳಿಕೆ ತಾ  ಕರ್ದವೆ ಅಲ, ಹಂಗೆ ಕನ್ನಡನೂ 
ಪಳೆಯುಳಿಕೆ ತಾ  ಕರೆಯೋ ಕಾಲ ದೂರ ಇಲ್ಲೇತಾ  ಮನ್ನಸ್ಲೇ  ಗ್ಯಾನ ಮಾಡಿಕಂಡ್   ಕ್ಯಾಂಟೀನ್ ಹತ್ರ ಹೊರಟೆ...



- ಪವಿತ್ರ ನರೆಯನ  

Wednesday, 15 February 2012

ಅಡೋಳಿನಾ...?


ಹೂವಿನ ಜೊತೆ ನಾರೂ
ಸ್ವರ್ಗಕ್ಕೆ ಹೋತ್ಗಡ !
ಮದುಮಂಙನ ಜೊತೆ
ಅಡೋಳಿ ಇದ್ದಂಗೆ !
ಬೇಡಪ್ಪಾ ಬೇಡ 
ಅಡೋಳಿ ಸಹವಾಸ !
ಮದುವೆ ಹೈದಂಗೆ ಅಲ್ಲಿ
ಗೂಡೆ ಇದ್ದದೆ...
ಬೆಳಗ್ಗೆಂದ ಸಂಜೆವರೆಗೆ ಕುದ್ದದೆ...
ಅಡೋಳಿಗೆ ಯಾವ ಹಣೇಬರಹ !
ಇವನೂ ಜೊತೇಲಿ `ಕುದ್ದದೆ...'
ಹೊಸ ಜೋಡಿಯ ಪಿಸುಮಾತು
ಅದೆಂಥದ್ದಕ್ಕೋ ಕಿಸಕ್ಕನೇ ನಗು...
ಅಡೋಳಿದ್ ಅದೇ ಪೆಚ್ಚು ಮುಖ !
ಬಂದವೆಲ್ಲಾ ಮಾತಾಡಿಸುದು...
ಒಂದಿಷ್ಟು ಗ್ರೂಪ್ ಫೋಟೋ...
ಸ್ನೇಹಿತರ ತರಲೆ....
ಅಡೋಳಿ ಮಾತ್ರ
ಕಬಾಬ್ಲಿ ಮೂಳೆ !
ಬೇಕಾ ಅಡೋಳಿ ಕೆಲ್ಸಾ ?
- `ಸುಮ'
arebhase@gmail.com

Tuesday, 14 February 2012

ಕಾಡುವ ಗೂಡೆ !


ಮಲೆನಾಡ ಸೆರಗಿಂದ 
ಇಳ್ದು ಬಂದ ಸುಂದರಿ...
ಹುಣ್ಣಿಮೆ ಚಂದ್ರನ ಮುಖ
ನಾನೇ ಗೂಡೆ ನಿನ್ನ ಸಖ !
ಕೆಂಪು ಕೆನ್ನೆಯ ಚೆಲುವೆ
ಅದೇ ಬಣ್ಣದ ಸೀರೆ ನಿಂಗೊಪ್ಪುಲೆ !
ಆಕಾಶದ ನೀಲಿ, ನಕ್ಷತ್ರಗಳ ಫಳ ಫಳ
ಬಂಗಾರದ ಅಂಚು....ನಿಂಗೆ ಅದೇ ಚೆಂದ !
ಥೇಟ್ ಸಮುದ್ರದ ಅಲೆ ಎದ್ದಂಗೆ
ಹಣೆ ಮೇಲೆ ಸುರುಳಿ ಕೂದಲು
ಯಾರೋ ನೂಲಿಟ್ಟ್ ಗೆರೆ ಎಳ್ದೊಳೋ...
ನೆತ್ತಿಮೇಲೆ ಬೈತಲೆ ಸಿಂಗಾರ !
ಭೂಮಿ ಮೇಲೆ ಆಗಷ್ಟೇ ಬಿದ್ದ ಮಂಜಿನ ಹನಿ
ಅದೇ.. ಅದೇ.. ತಾಜಾ ತುಟಿ !
ದೊಡ್ಡ ಮರದ ಉದ್ದ ಸಂಪಿಗೆ 
ಆ ಮೂಗಿಗೆ ಇನ್ನೇನ್ ಹೇಳಕ್ !
ಒಮ್ಮೆ ಕಣ್ಮುಂದೆ ಬಂದು ಹೋದೆ
ನೆನಪು ಇನ್ನೂ ಹಸಿರಾಗಿ ಉಟ್ಟು..
ಹುಡುಕುತ್ತೊಳೆ ನಿನ್ನನ್ನೇ....
ಎಲ್ಲಿ ಒಳನೇ ನನ್ನ ಗೂಡೆ ?

- 'ಸುಮ' 
arebhase@gmail.com

ನಿಸರ್ಗಧಾಮದ ಜಿಂಕೆಗ...

 ಇವು ಕುಶಾಲನಗರದ ಕಾವೇರಿ ನಿಸರ್ಗಧಾಮದ  ಜಿಂಕೆಗ. ಕಾಡಿನಲ್ಲಿ ಖುಷಿಯಾಗಿ ಓಡಾಡಿಕಂಡ್   ಇದ್ದವು, ಇಲ್ಲಿ ಬೇಲಿಯೊಳಗೆ ಬಂಧಿ. ತಮಗೆ ಬೇಕಾದಷ್ಟು ತಿಂದು ಆರಾಮವಾಗಿ ಇದ್ದ ಜಿಂಕೆಗಳಿಗೆ, ಈಗ ಇಲ್ಲಿಗೆ ಬರ್ವ ಪ್ರವಾಸಿಗ ಕೊಡ್ವ ಕೈ ತುತ್ತು ಆಹಾರ !



arebhase@gmail.com           

Saturday, 11 February 2012

`ಎಣ್ಣೆ ಅರಸಿಣಕ್ಕೆ ಇದೆಂಥಾ ಹಠ !'


`ಏ SURF ತಕ್ಕಂಬಾರಾ...ಈ ಎಣ್ಣೆ ಅರಸಿಣ ಮೈಗೆ ಲಾಯ್ಕ ಅಂಟಿಕೊಂಡುಟ್ಟು...' ಹೊಳೆ ಮಧ್ಯಲಿ ನಿಲ್ಲಿಸಿಕಂಡ್ ಜೀಪು ತೊಳ್ದ್ ಅಭ್ಯಾಸ ಇದ್ದ ಮಂಜು ಬಾತ್ರೂಮ್ಂದ ಬೊಬ್ಬೆ ಹಾಕ್ತಿತ್ತ್. ಹೌದು, ಅಂವ ಹೇಳ್ದು ನಿಜ. ಮದುಮಂಙ ಗಿರಿಗೆ ಎಲ್ಲವೂ ಸೇರ್ಕಂಡ್ ಲಾಯ್ಕ ಎಣ್ಣೆಅರಸಿಣ ಉಜ್ಜಿಬಿಟ್ಟಿದ್ದೋ... ಮನೆ ಒಳಗೆ 5 ಜನರಿಂದ ಮಾತ್ರ ಶಾಸ್ತ್ರ ಮಾಡ್ಸೊಕೂತ ಹೈದನ ಅಮ್ಮ ಯೋಚನೆ ಮಾಡಿತ್ತ್.. ಆದ್ರೆ ಐದು ಹೋಗಿ ಹತ್ತು ಜನ ಬಂದ್ರೂ ಶಾಸ್ತ್ರ ನಿಲ್ಲುವಂಗೆ ಕಾಣ್ತಿತ್ಲೆ... ಅಡೋಣಿ 15ರ ವರೆಗೆ ಲೆಕ್ಕ ಇಟ್ಟ್ಕಂಡಿತ್ತ್... ಮತ್ತೆ ಯಾರ್ಯಾರೋ ಬಂದ್ ಹೈದಂಗೆ ಎಣ್ಣೆ ಅರಸಿಣ ಉಜ್ಜಿದೇ ಉಜ್ಜಿದ್... ಇದು ಮನೆ ಒಳಗಿನ ಕಥೆ ಆತ್... 
ಚಪ್ಪರದ ಕೆಳಗೂ ಅಷ್ಟೇ...ಐದು ಜನಕ್ಕೆ ಮುಗ್ಸೊಕೂತ ಹೆಣ್ಣ್ಜನ ಎಲ್ಲಾ ಯೋಚನೆ ಮಾಡ್ಕಂಡಿದ್ದೋ... ಆದ್ರೆ ಅದ್ 7, 9, 11 ಕಡೆಗೆ 15 ಜನಕ್ಕೆ ಬಂದ್ ನಿಂತತ್. ಹಂಗಾಗಿ ಮದುಮಂಙ ಗಿರಿಗೆ ಎಣ್ಣೆ ಅರಸಿಣ ಶಾಸ್ತ್ರ ಹೋಗಿ ಎಣ್ಣೆ ಅರಸಿಣಲಿ ಸ್ನಾನ ಆಗಿಬಿಟ್ಟಿತ್ತ್...! ಬಾತ್ರೂಂಗೆ ಹೋಗಿ ಅದ್ನ ತೊಳ್ದು ತೆಗೆಯಕ್ಕೆ ಬರೋಬ್ಬರಿ ಎರಡೂವರೆ ಗಂಟೆ ಹಿಡ್ತ್. ಮೊದಲಿಗೆ ಅವನ ಮೈಗೆ ಪೂರ ಬಾಳೆ ಹಣ್ಣು ಗಿಮ್ಚಿ ಉಜ್ಜಿದೊ... ಅಲ್ಲಿ ಪೂರಾ ಬಾಳೆ ಹಣ್ಣ್ನ ಘಮ ಬಾಕೆ ಶುರುವಾತ್... ಆದ್ರೆ, ಯಾವುದೇ ಪ್ರಯೋಜನ ಆತ್ಲೆ.... ಅಷ್ಟೊತ್ತಿಗೆ ಯಾರೋ ಒಬ್ಬ ಮೈದಲಿ ಉಜ್ಜಿರೆ ಜಿಡ್ಡು ಬಿಟ್ಟದೆ ಹೇಳ್ತ್.... ಪಾಪ ಅವಂಗೆ ತಿಂಡಿ ಮಾಡುವ ಹುಡೀತಾ ಗೊತ್ತಿತ್ತ್. ಆದ್ರೆ, ಅದ್ ಮೈದನಾ ಅಥವಾ ಕಡ್ಲೆ ಹುಡಿನಾತಾ ಹೇಳುವ ಕನ್ಫ್ಯೂಶನ್ ! ಸರಿ, ಇನ್ನೊಬ್ಬ ಕಡ್ಲೆಹುಡಿ ತಕ್ಕಂಡ್ಬನ್ನೇತಾ ಹೋತ್...
ಮದುಮಂಙಂಗೆ ಸ್ನಾನ ಮಾಡಿಸುವ ಜವಾಬ್ದಾರಿ ಹೊತ್ತುಕಂಡಿದ್ದದ್ ಮಂಜು... ಅವ್ರ ಊರುಲಿ ಕೆಸರು ಗದ್ದೆಯಂಗೆ ಇರುವ ರೋಡ್ಲಿ ಓಡಿದ ಮಣ್ಣ್ ಮೆತ್ತಿದ ಜೀಪುನ ತೊಳ್ದ್ ಅವಂಗೆ ಗೊತ್ತಿತ್ತ್ ! ಆ ಪುಣ್ಯಾತ್ಮನೋ, ಜೀಪು ತೊಳ್ದಂಗೆನೇ ಮದುಮಂಙನ ಮೀಯಿಸಿಕೆ ನಿಂತಿತ್ತ್... ಬರ್ಮುಡ  ಚೆಡ್ಡಿ, ಹಳೇ ಟೀ ಶರ್ಟ್  ಒಂದು ಬಕೆಟ್ ಮತ್ತೊಂದು ಲೋಟ ! ಇಲ್ಲಿ ಬಿಸಿ ಬಿಸಿ ನೀರೊಂದು ಮಾತ್ರ ಜಾಸ್ತಿ ಇತ್ತ್ ! 
ಮದುಮಂಙಂಗೆ ಉಜ್ಜಿದ್ದ ಬಾಳೆಹಣ್ಣ್ನ ತೊಳ್ದು ತೆಗೆದ್ರೂ ಎಣ್ಣೆ ಅರಸಿಣ ಮಾತ್ರ ಅವ್ನ ಮೈಂದ ಕಡಿಮೆ ಆತ್ಲೆ. ಸೀಗೆಕಾಯಿ ಸೋಪು ಹಾಕಿದೋ....ಶ್ಯಾಂಪು ಯೂಸ್ ಮಾಡ್ದೊ... ಕಡ್ಲೆಪುಡಿ ತಕ್ಕಂಬಾಕೆ ಹೋಗಿದ್ದವ್ನೂ ಅಷ್ಟೊತ್ತಿಗೆ ಅಲ್ಲಿಗೆ ಬಂದು ತಲುಪಿತ್ತ್. ಅದನ್ನೂ ಹಾಕಿದ್ದಾತ್ ! ಅಂತೂ ಎರಡೂವರೆ ಗಂಟೆ ಮೂರ್ನಾಲ್ಕು ಜನ ಸೇರ್ಕಂಡ್ ಬೆವ್ರು ಇಳಿಸಿದ ಮೇಲೆನೇ ಗಿರಿ ಮೈಲಿದ್ದ ಎಣ್ಣೆ ಅರಸಿಣ ಮಾಯ ಆದ್ ! ಇದನ್ನೆಲ್ಲಾ ನೋಡಿಕಾಕನ, ಮುಂದೊಂದು ದಿನ ನನ್ನ ಮದುವೆಲೂ ಹಿಂಗೆ ತಾನೆತಾ ಸಣ್ಣಗೆ ಬೆವರು ಬಾತ್...

`ಸುಮ'
arebhase@gmail.com

Friday, 10 February 2012

ಅರೆಭಾಷೆ ವಾರ್ತೆ

ಫೆಬ್ರವರಿ 10ಕ್ಕೆ ಮಡಿಕೇರಿ ಆಕಾಶವಾಣೀಲಿ ಪ್ರಸಾರ ಆದ ಅರೆಭಾಷೆ ವಾರ್ತೆ 

KSRTC `ತಿಗಣೆ ಸೇವೆ'


ಅದ್ ಬೆಳಗಿನ ಜಾವ ಮೂರು ಗಂಟೆ. ಮೈಸೂರ್ BUS STAND ಲಿ   ಇಳ್ದ್, ನನ್ನೂರು ಕಡೆ ಹೋಗ್ವ ಬಸ್ನ ಹುಡ್ಕಂಡ್ ಪ್ಲಾಟ್ಫಾರಂನಿಂದ ಪ್ಲಾಟ್ಫಾರಂಗೆ ಅಲ್ದಾಡ್ತಿದ್ದೆ. ಮಡಿಕೇರಿ ಕಡೆ ಹೋಗ್ವ ಬಸ್ ದೂರಲಿ ನಿಂತಿರ್ದು ಕಾಣ್ತ್. ಬಸ್ ಬಾಗ್ಲ್ ಹತ್ರ ತುಂಬಾ ಜನ ನಿಂತ್ಕಂಡ್ ಮೈ ಕೈ ತೊರ್ಸಿಕಂಡ್ ಡ್ರೈವರ್ ಕಂಡೆಕ್ಟರ್ಗೆ ಬಾಯಿಗೆ ಬಂದಂಗೆ ಬೈತಿದ್ದೊ...ಹತ್ರ ಹೋಗಿ ನೋಡಿರೆ, ನಂಗೆ ಪರಿಚಯದ ಲವ, ಅವ್ನ ಹೆಣ್ ಮತ್ತೆ ಭಾಗಮಂಡಲದ ರಿತೇಶ್ ಆ ಗುಂಪುಲಿ ಇದ್ದೊ. `ನೀ ಮಾತ್ರ ಈ ಬಸ್ಗೆ ಹತ್ ಬೇಡ...' ಮೂರು ಜನನೂ ಒಂದೇ ಉಸುರುಲಿ ಹೇಳ್ದೊ...ಸಿಕ್ಕಿದ ಬಸ್ ಹತ್ತುದು ಬಿಟ್ಟು ಇವರದ್ದೆಂಥಪ್ಪ ಪಿರಿಪಿರಿತಾ ಕೇಳಿರೆ....
ಪುನ: ಮೈ ಕೈ ತೊರ್ಸಿಕಂಡ್ ಮೂರು ಜನನೂ ಒಬ್ಬರ ಹಿಂದೆ ಒಬ್ರು ನಡ್ದ ಕಥೆ ಹೇಳಿಕೆ ಶುರುಮಾಡ್ದೊ. ನಾ ಬಂದ ಬಸ್ಗಿಂತ ಮೊದ್ಲು ಅವ್ರಿದ್ದ ಬಸ್ ಬೆಂಗಳೂರು ಬಿಟ್ಟಿತ್ತ್. ನಾ ಲಾಯ್ಕ ನಿದ್ದೆ ಮಾಡ್ಕಂಡ್ ಮೈಸೂರು ತಲುಪಿದ್ದೆ. ಆದ್ರೆ ಅವು ಅಲ್ಲಿಂದ ಇಲ್ಲಿ ತನಕ ಕಣ್ಣು ಮುಚ್ಚಿತ್ಲೆ...ಬದ್ಲಿಗೆ ಮೈ ಕೈ ತೊರ್ಸಿಕಂಡ್ ಗಾಯ ಮಾಡಿಕಂಡ್ ಬಿಟ್ಟಿದ್ದೊ. ಕಾರಣ ಆ ಬಸ್ಲಿದ್ದ ತಿಗಣೆ ಸಂತಾನ ! ಬಸ್ ಲೈಟ್ ಆಫ್ ಮಾಡ್ದ ಕೂಡ್ಲೇ, ಸೆರೆಮರೆಲಿದ್ದ ಅಪ್ಪ ತಿಗಣೆ, ಅಮ್ಮ ತಿಗಣೆ, ಮಕ್ಕತಿಗಣೆ, ಅಜ್ಜ ತಿಗಣೆ, ಅಜ್ಜಿ ತಿಗಣೆ ಎಲ್ಲಾ ಸೇರ್ಕಂಡ್ ದಾಳಿ ಇಟ್ಟಿದ್ದೊ... ಆ ಬಸ್ನ ಕ್ಲೀನ್ ಮಾಡದೆ ಎಷ್ಟು ದಿನ ಆಗಿತ್ತೋ ಏನೋ...ಹಂಗೆ ತಿಗಣೆ ಕಚ್ಚಿಸಿಕಂಡವ್ರ ಸಿಟ್ಟು ಬಸ್ ಡ್ರೈವರ್ ಮತ್ತೆ ಕಂಡೆಕ್ಟರ್ ಕಡೆಗೆ ತಿರ್ಗಿತ್ತ್. ಮೈಸೂರು ತಲುಪಿದ ಕೂಡ್ಲೇ, ಬಸ್ಂದ ಇಳ್ದ್ ಜಗಳ ಶುರು ಮಾಡಿದ್ದೋ. ಏನೇ ಆದ್ರೂ ತಿಗಣೆ ಬಸ್ಲಿ ಬಾಲೆ. ನಮಗೆ ಬೇರೆ ಬಸ್ ಬೇಕುತಾ ಹಠ ಹಿಡ್ದಿದ್ದೊ.
ಕೊನೆಗೆ ಮಡಿಕೇರಿಗೆ ಹೋಗವ್ಕೆ ಗೋಣಿಕೊಪ್ಪಕ್ಕಾಗಿ ಹೋಗುವ ಬಸ್ ಹತ್ತಿಸಿ, ಕಂಡಕ್ಟರ್ ಕೈ ತೊಳ್ಕಣ್ತ್. ಕುಶಾಲನಗರ ಕಡೆ ಹೋಗವು ಮತ್ತೆ ತಿಗಣೆ ಕಚ್ಚಿಸಿಕಂಡೇ ಅದೇ ಬಸ್ಲಿ ಪ್ರಯಾಣ ಮಾಡ್ದೊ. ಇದ್ನೆಲ್ಲಾ ನೋಡ್ತಿದ್ದ ನಾನ್ ಮಾತ್ರ ನಾಲ್ಕು ಗಂಟೆವರೆಗೆ ಕಾದ್ ಬೇರೆ ಬಸ್ ಹತ್ತಿದೆ. 
ಈಗ ಒಂದು ತಿಂಗಳ ಹಿಂದೆ ಸಾರಿಗೆ ಮಂತ್ರಿ ಆರ್ ಅಶೋಕ್ ಡೆಲ್ಲಿಗೆ ಹೋಗಿ ಗರಿ ಗರಿ ಬಟ್ಟೆ ಹಾಕಂಡ್ ಒಂದ್ ಪ್ರಶಸ್ತಿ ತಕ್ಕಂಡಿದ್ದೊ. ಅದು ಅತ್ಯುತ್ತಮ ಸೇವೆಗಾಗಿ ಸೆಂಟ್ರಲ್ ಗೌರ್ನಮೆಂಟ್ ಕೊಡ್ವ ಪ್ರಶಸ್ತಿ. ಆ ಪ್ರಶಸ್ತಿ ಕೊಟ್ಟವ್ರನ್ನ ಒಮ್ಮೆ ಈ ತಿಗಣೆ ಬಸ್ಲಿ ಕೂರ್ಸೊಕು.... ಆಗ ಗೊತ್ತಾದೆ ನಮ್ಮ ಕೆಎಸ್ಆರ್ಟಿಸಿ `ಸೇವೆ'
- `ಸುಮ'
arebhase@gmail.com

Wednesday, 8 February 2012

`ಏಕೆ ಈ ಮೌನ ?'


ರಜೆ ಇತ್ತ್. ಏನೋ ಒಂತರ ಬೋರ್ ಆಗ್ತಿತ್ತ್. ಯಾಕೋ ಯಾರಿಗೂ ಹೇಳಿಕಣಿಕೆ ಆಗದಷ್ಟು ನೋವು, ಸಂಕಟ, ದುಃಖ.... ಹಳೆ ನೆನಪುಗಳ ಮೆರವಣಿಗೆ.. ಅಂದು ಇದ್ದ ಸಂತೋಷ, ನಲಿವುಗಳೆಲ್ಲಾ ಮಾಯಾವಾದಂಗೆ ಆಗ್ತುಟ್ಟು. ಹಿಂಗೇ ಆಲೋಚನೆ ಮಾಡಿಕಂಡ್ ತೋಟದ ಕರೆಲ್ಲಿರುವ ಗದ್ದೆ ಏರಿಲಿ ನಡ್ಕಕಂಡ್ ಹೋಗ್ತಿದ್ದೆ...ಇನ್ನೇನು ಚಂದ್ರ ಕಾಣಿಸಿಕೊಳ್ವ ಹೊತ್ತಾತ್. ಗೆಳೆಯ ಇಂದ್ ಯಾಕೋ ನಿನ್ನ ಜೊತೆ ಇರಕ್ಕುತ್ತಾ ಮನಸ್ಸು   ಬಯಸುತ್ತುಟ್ಟು. ಮೆಲ್ಲೆನೆ ನಾ ಹೆಜ್ಜೆ ಹಾಕಿದಂಗೆ, ಪೋರ್ಲನ ದುಂಡು ಮುಖ ಹೊತ್ತ್ಕಂಡ್ ಹಾಲು ಚೆಲ್ಲಿದಂಗೆ ಬೆಳದಿಂಗಳ ಸೂಸಿಕಂಡ್ ಚಂದಮಾಮನೂ ಹಿಂದೆ ಹಿಂದೆನೇ ಬರ್ತಿತ್ತ್. ಇನ್ನೇನ್ ನನ್ನ ಮನಸ್ಸಿಗೆ ತಡಕಾಣಿಕೆ ಆಗದೆ, ಮೊಬೈಲ್ ತೆಗ್ದು ಕಾಲ್ ಮಾಡಿರೇ ಅತ್ತ ಕಡೆಯಿಂದ ಮಾತೇ ಇಲ್ಲೆ. ಇಬ್ಬರಲ್ಲೂ ಮೌನ ! ಅಂದು ಮಾತಾಡಿದರೂ ಮುಗಿಯದಷ್ಟು ಮತ್ತಷ್ಟು ಮಾತಿನ ರಸಪಾಕ... ಗೆಳೆಯ ಇಂದೇಕೆ  ನಿನ್ನಲ್ಲಿ ಮಾತುಗಳೇ ಇಲ್ಲದ ಮೌನ ? ತಣ್ಣನೆಯ ಗಾಳಿ ಬೀಸ್ತುಟ್ಟು. ಪೊಂಗರೆಮರದ ಒಣ ಎಲೆಗ ಪರಪರ ಸದ್ದ್ ಮಾಡಿಕಂಡ್ ಹಿಂದಿನ ನಮ್ಮಿಬ್ಬರ ಮಾತಿನ ಲೋಕಕ್ಕೆ ಜಾರಿಸ್ತುಟ್ಟು. 
  ಅಂದು ಆ ಪಾರ್ಕ್ ನ  ಕಲ್ಲು ಬೆಂಚಿನ ಮೇಲೆ ಕುದ್ದು, ನಿನ್ನ ತೊಡೆಯ ಮೇಲೆ ತಲೆಯಿಟ್ಟು, ನಿನ್ನ ನೋಟದಲ್ಲಿ ಅದೆಂಥ ಖುಷಿ ನಂಗೇ ! ಎಷ್ಟು ನೋಡಿರೂ ಸಾಕಾಗ್ತಿಲ್ಲೆ. ಮತ್ತೆ ಮತ್ತೆ ನೋಡಕುತ್ತಾ ಅನ್ನಿಸ್ತಿತ್ತ್. ಪಕ್ಕದಲ್ಲಿ ಯಾರಾದರೂ ನಂಗೆ ಗೊತ್ತಿರವು ಒಳನಾತ ಸಂದೇಹ ಪಟ್ಕಂಡ್ ನೋಡ್ರೆ, ನಿಂಗೆ ಮುಸಿ ಮುಸಿ ನಗು.
   ಎಷ್ಟೋ ಸಲ ನನ್ನ ಮನಸ್ಸಿನಾಳದ ಮಾತುಗಳನ್ನ ನಿನ್ನ ಹತ್ತಿರ ಹೇಳಿ ಕಣೋಕುತ್ತಾ ಅನ್ನಿಸಿದ್ರೂ, ನಾಚಿಕೆಯೋ ಭಯದಿಮದಲೋ ಹೇಳದೇ ಹೋಗ್ತಿದ್ದೆ. ಒಮ್ಮೆ ಅದನ್ನೆಲ್ಲಾ ಬದಿಗಿಟ್ಟು ನಿನ್ನೆದುರಿಗೆ ಪ್ರೀತಿಯ ಮಾತಡು ಅನ್ನುವಷ್ಟುರಲ್ಲಿ ಏನ್ವೋ ಒಂಥರ ಹಿಂಜರಿಕೆ ನನ್ನ ತಡೆದು ಬೀಡ್ತಿತ್. ನೀ ಎದುರಿಗೆ ಬಾಕನ ಎಲ್ಲವೂ ಮರ್ತ್ ಹೋಗಿ ನಗುವೊಂದು ಬಿಟ್ಟರೆ ಬೇರೆ ಏನೂ ನಂಗೆ ಹೊಳೆಯುತ್ತಿತ್ಲೆ.
   ಗದ್ದೆ ಏರಿಲಿ ಎಸಂಡು ಹೋದ ದಾರಿ ನೋಡಕಂಡ್ ಹೋಗ್ತೊಳೆ. ಆದ್ರೆ, ನನ್ನ ಮನಸಿನ ತುಂಬಾ ಉತ್ಸಾಹ ತಂದ ನೀ ಮಾತ್ರ ಮೌನ ಮುರ್ತ್ಲೇ. 
   ಗದ್ದೆ ಬದಿಯ ಹೊಳೆ ಮಧ್ಯಲಿ ಹರಿಯುವ ತಿಳಿ ನೀರು ಸುತ್ತಲೂ ಹಸಿರಿನಿಂದ ಕೂಡಿರುವ ಮರಗಿಡಗ ಎಲ್ಲವೂ ಮಾಮುಲಿನಂಗೆ ಸಂತೋಷ ಕೊಡುತ್ತಾ ಉಟ್ಟು. ಕಣ್ಣು ಹಾಯಿಸಿದಷ್ಟು ದೂರ ದೂ..........ರಕ್ಕೆ ಹೋಗಿ ಮತ್ತೆ ಕೆಳೆಗೆ  ಬಂದು ಮತ್ತೆ ಮೇಲೆ ನೋಡ್ರೆ ಎಣಿಸಿಕಾಗದಷ್ಟು ನಕ್ಷತ್ರಗಳ ಚಿತ್ರ ಬಿಡಿಸಿದ ಆಕಾಶನೊಮ್ಮೆ ನೋಡಿ ನನ್ನ ಹೃದಯಲಿ ನೀ ಭಿತ್ತಿದ ಎಣಿಸಿಕಾಗದ ನೆನಪುಗಳ ರಾಶಿ. ಓ ಗೆಳಯಾ ಇನ್ನೂ ಏಕೆ ಇಷ್ಟು ಮೌನ ?
ಗೆಳಯ ನಿನ್ನ ಬಿಟ್ಟು ಬೇರೆ ಯೋಚನೆಗಳಿಲ್ಲೆ... ಭಾವನೆಗಳಿಲ್ಲೆ... ನಿನ್ನ ಬಿಟ್ಟು ಬೇರೆಯೇನೂ ಬೇಕಿಲ್ಲೆ ನಂಗೇ.ನಿನ್ನ ನೆನಪುಗ ನನ್ನ ಮನಸಿನ ಪುಟದಲ್ಲಿ ಮರೆತು ಮೌನವಾಗಿಟ್ಟು. ಹಂಗೇ ನಿನ್ನ ಮನಸಿನಲ್ಲಿರೋ ಮೌನಕ್ಕೂ ಕಾರಣ ಇರೋಕಲ್ವಾ? ಆ ಕಾರಣ ನಾನೇ ಆಗಿರುದಾ ?
    ಗೆಳಯ... ನೀನಿದ್ದ ನಿನ್ನೆಗಳಲ್ಲಿರುವ ನಾ, ನೀನಿರದ ನಾಳೆಗಳಲ್ಲಿ ಬದುಕಲಾರೆ... ಮೌನ ಮುರಿದು ಮಾತನಾಡು ಗೆಳಯ ಪ್ಲೀಸ್ ಪ್ಲೀಸ್ ಪ್ಲೀಸ್....

- ತಳೂರು ಡಿಂಪಿತಾ
arebhase@gmail.com

Tuesday, 7 February 2012

ವಾಸ್ತವ..

ಮುದುಡಿಹೋದ ಕುಸುಮದ
ಎಸಳ್ ಲಿ ಅದೇನೋ ಬಯಕೆ ..!!!
ಪುನ ಘಮಿಸೋ ಆಸೆ...
ದುಂಬಿಯೊಂದು ಬಾದುತ..
ನಿರೀಕ್ಷೆ....!!
ಆದರೆ,ಅದೆಲ್ಲನ ಹುಸಿ
ಮಾಡ್ತ್  "ವಾಸ್ತವ"..!!!
ಮುಂಜಾನೆ ಮಂಜುಲಿ
ರವಿಕಿರಣದ ಹೊಂಬೆಳಕು ..
ಹನಿ ಇಬ್ಬನಿ ತಂಪು...
ಇದೆಲ್ಲದರ ಮಧ್ಯ ಅರಳಿ
ನಿಂತಿತ್  ನವಕುಸುಮ..!!
ಹೊಸಜೀವನ
ಅದರ ಪಾಲಾಗಿತ್..!!
ಘಮಿಸೋ ಆಸೆ...ದುಂಬಿಯ ನಿರೀಕ್ಷೆನ
ಹಸಿಯಾಗಿಸಿತ್ "ವಾಸ್ತವ"...!!!!



ನಿನಗಾಗಿ..
ಪವಿ-ಭಾವನೆಗಳ ಪಲ್ಲವಿ.


Monday, 6 February 2012

ಚಿತ್ರಗುಪ್ತಂಗೇ ಫಿಟ್ಟಿಂಗ್ !


`ಏ... ಯಾರಲ್ಲಿ, ಎಳ್ಕಂಡ್ಬನ್ನಿ ಅವ್ನ...' ಮೀಸೆ ತಿರಿಗಿಸಿಕಂಡ್ ತನ್ನ ಧೂತರಿಗೆ ಯಮ ಆರ್ಡರ್ ಮಾಡ್ತ್ ! ಪಾಪ ಚೋಮುಣಿ, ಧೂತರ ಮಧ್ಯೆ ನಡಗಿಕಂಡ್ ನಿಂತಿತ್ತ್. ಹಂಗೆನೇ ಅವ್ನ ಎಳ್ಕಂಡ್ಬಂದ ಯಮಧೂತಂಗ, ಯಮನ ಮುಂದೆ ನಿಲ್ಲಿಸಿದೋ...
ಚೋಮುಣಿನ ನೋಡ್ದ ಯಮ, ಚಿತ್ರಗುಪ್ತನ ಕೇಳ್ತ್, `ಚಿತ್ರಗುಪ್ತ, ಇಂವ ನೋಡಿಕೆ ಇನ್ನೂ ಹೈದನಂಗೆ ಉಟ್ಟು...ನಿಜವಾಗಿಯೂ ಇವ್ನ ಆಯುಷ್ಯ ಮುಗ್ದುಟ್ಟಾ?' ಅದ್ಕೆ ಚಿತ್ರಗುಪ್ತ, `ಮಹಾಪ್ರಭು, ನೀವು ಹೇಳ್ದು ಸರಿ. ಇವಂಗೆ ಇನ್ನೂ 24 ವರ್ಷ. ಆದ್ರೆ 74 ವರ್ಷದವು ಮಾಡುವ ಕೆಲ್ಸನೆಲ್ಲಾ ಮಾಡಿ ಮುಗ್ಸಿಟ್ಟು.' ಚಿತ್ರಗುಪ್ತನ ಮಾತು ಕೇಳಿ ಯಮಂಗೆ ಸ್ವಲ್ಪ ಸಿಟ್ಟು ಬಾತ್. `ಚಿತ್ರಗುಪ್ತ, ಏನೇ ಹೇಳಿ... 24 ವರ್ಷದ ಇವ್ನನ್ನ ಇಷ್ಟು ಬೇಗ ಇಲ್ಲಿಗೆ ಕರ್ಕಂಡ್ಬಂದದ್ ಸರಿ ಕಾಣ್ತಿಲ್ಲೆ...' ಅಷ್ಟು ಹೊತ್ತು ಹೆದ್ರಿಕಂಡ್ ನಿಂತಿದ್ದ ಚೋಮುಣಿಗೆ, ಯಮ ತನ್ನ ಪರ ಇರ್ದು ನೋಡಿ ಧೈರ್ಯ ಬಾತ್. ಯಮನ ಜೊತೆಗೆನೇ ಮಾತಿಗೆ ಇಳ್ತ್...`ಯಮ, ಈ ಚಿತ್ರಗುಪ್ತ ನಿಂಗೆ ಗೊತ್ತಿಲ್ಲದಂಗೆ ಏನೇನೋ ಫಿಟ್ಟಿಂಗ್ ಇಡ್ತುಟ್ಟು. ನಾನಿನ್ನು ಮದುವೆ ಆತ್ಲೆ... ಮದುವೆ ಆಗಿ ಏನೇನೋ ಸಾಧನೆ ಮಾಡೊಕೂತ ಉಟ್ಟು. ಅಷ್ಟರಲ್ಲೇ ಇಂವ ನನ್ನನ ಇಲ್ಲಿಗೆ ಕರ್ಸಿಕೊಂಡುಟ್ಟು ನೋಡು... ನಾನ್ ಲವ್ ಮಾಡ್ತಿರ್ವ ಗೂಡೆದ್ ಪರಿಸ್ಥಿತಿ ಏನಾಗ್ಬೇಡ....'ತಾ ಕೇಳ್ತ್. ಯಮಂಗೂ ಅವ್ನ ಯವ್ವನದ ದಿನಗ ಯೋಚನೆ ಆತ್, ಚೋಮುಣಿ ಹೇಳ್ದು ಸರಿಯಾಗಿಯೇ ಉಟ್ಟು... ಈ ಚಿತ್ರಗುಪ್ತನೇ ಎಂಥದ್ದೋ ತಪ್ಪು ಲೆಕ್ಕಾಚಾರ ಹಾಕಿಬಿಟ್ಟುಟ್ಟುತಾ ಧೂತರಿಗೆ ಆಜ್ಞೆ ಮಾಡ್ತ್, `ಎಲ್ಲಿಂದ ಕರ್ಕಂಡ್ ಬಂದದೋ ಅಲ್ಲಿಯೇ ಇವ್ನನ್ನ ಬಿಟ್ಟು ಬನ್ನಿ...' ಅಷ್ಟೊತ್ತಿಗೆ ಚಿತ್ರಗುಪ್ತಂಗೆ ಉರ್ದ್ಹೋತ್...`ಮಹಾಪ್ರಭು... ಅವ್ನನ್ನ ನೀವು ವಾಪಸ್ ಕಳ್ಸಿರೆ, ನಾನ್ ಇಲ್ಲಿ ನನ್ನ ಕೆಲ್ಸಕ್ಕೆ ರಾಜೀನಾಮೆ ಕೊಟ್ಟನೆ. ನೀವು ಮಾಡುದು ಮಾಡ್ಕಣಿ...'ತಾ ಹೇಳಿ ಕುದ್ದಲ್ಲಿಂದ ಎದ್ದ್ನಿಂತತ್. `ಸಮಧಾನ...ಸಮಧಾನ ಚಿತ್ರಗುಪ್ತ. ನೀನ್ ಸಿಟ್ಟು ಮಾಡಿಕಂಬೇಡ. ನೀ ರಾಜೀನಾಮೆ ಕೊಟ್ಟರೆ ಇಲ್ಲಿಗೆ ನಾ ಯಾರ್ನ ನೇಮಕ ಮಾಡ್ಲಿ?' ಚಿತ್ರಗುಪ್ತನ ಯಮ ಸಮಧಾನ ಮಾಡಿಕೆ ನೋಡ್ತ್. ಯಮ ಅಷ್ಟ್ ಹೇಳ್ದೇ ತಡ, ಚಿತ್ರಗುಪ್ತ ಮಾತ್ನ ಮುಂದುವರೆಸಿತ್....
`ಮಹಾಪ್ರಭು...ನಾ ಈ ಚೋಮುಣಿನ ಇಲ್ಲಿಗೆ ಕರ್ಸಿದ ಉದ್ದೇಶನ ಬೇರೆ'
`ಹೌದಾ... ಚಿತ್ರಗುಪ್ತ? ಎಂಥ ಅದ್ ?'
`ಮಹಾಪ್ರಭು, ಇಂವ ಉಟ್ಟಲ್ಲಾ ಚೋಮುಣಿ... ಸಾಫ್ಟ್ ವೇರ್  ಎಂಜಿನೀಯರ್...'
`ಹಂಗಂದ್ರೆ ಎಂಥ ಚಿತ್ರಗುಪ್ತ?'
`ಅಂದ್ರೆ ಕಂಪ್ಯೂಟರ್ ನೆಲ್ಲಾ ಈ ಚೋಮುಣಿ ಅರ್ದು ಕುಡ್ದುಬಿಟ್ಟುಟ್ಟು ಮಹಾಪ್ರಭು...'
`ಚಿತ್ರಗುಪ್ತ.. ಕಂಪ್ಯೂಟರ್ ಅಂದ್ರೆ ಎಂಥ?'
`ಮಹಾಪ್ರಭು, ಹಂಗೆ ಬನ್ನಿ ವಿಷಯಕ್ಕೆ... ಇಲ್ಲಿ ಉಟ್ಟಲ್ಲ ಈ ದೊಡ್ಡ ದೊಡ್ಡ ಪುಸ್ತಕಗ.. ಇದ್ನೆಲ್ಲಾ ಒಂದೇ ಕಂಪ್ಯೂಟರ್ಲಿ ತುಂಬುಸಿ ಇಡಕ್. ಭೂಲೋಕದಲ್ಲಿರುವವರ ಹೆಸರನ್ನೆಲ್ಲಾ ಕಂಪ್ಯೂಟರ್ಲಿ ಸೇವ್ ಮಾಡಿಟ್ಟರೆ ತುಂಬಾ ಉಪಯೋಗ ಆದೆ. ಅವ್ರ ಪಾಪ, ಪುಣ್ಯ ಕೂಡ ಲೆಕ್ಕ ಹಾಕಿಕೆ ಇದ್ರಿಂದ ಒಳ್ಳೆದ್. ಯಾರಾದ್ರು ಒಬ್ಬನ ಹೆಸ್ರು ಟೈಪ್ ಮಾಡಿ ಸರ್ಚ್   ಕೊಟ್ಟರೆ, ಅವ್ನ ಪೂರ್ತಿ    ಜಾತಕ ಅದ್ರಲ್ಲಿ ಸಿಕ್ಕಿಬಿಟ್ಟದೆ.'
`ಹಂಗೆನಾ ಚಿತ್ರಗುಪ್ತ ವಿಷಯ...ಕಂಪ್ಯೂಟರ್ಗೂ ಚೋಮುಣಿಗೂ ಏನು ಸಂಬಂಧ?'
`ಮಹಾಪ್ರಭು...ನಂಗೊಂದು ಕಂಪ್ಯೂಟರ್ ತೆಗ್ಸಿಕೊಡಿ...ಚೋಮುಣಿ ಕೈಲಿ ಅದ್ರ ಪಾಠ ಹೇಳಿಸಿಕಂಡನೆ.. ಮತ್ತೆ ಕೆಲ್ಸ ಸುಲಭ ಆದೆ.'
ಅಷ್ಟೊತ್ತಿಗೆ ಚೋಮುಣಿ ಮಧ್ಯೆ ಬಾಯಿ ಹಾಕಿತ್..
`ಹೌದು.. ಯಮ. ಕಂಪ್ಯೂಟರ್ ಇದ್ದರೆ ನಿಂಗೆ ಒಂದು ಕೈ ಹೆಚ್ಚಿಗೆ ಬಂದಂಗೆ ಇದ್ದದೆ. ಈ ಚಿತ್ರಗುಪ್ತ ಇಲ್ಲದಿದ್ದರೂ ನೀನೇ ಮ್ಯಾನೇಜ್ ಮಾಡಕ್' ಚಿತ್ರಗುಪ್ತ ಮೇಲಿದ್ದ ಸಿಟ್ಟ್ನ ಚೋಮುಣಿ ಹಿಂಗೆ ತೀರ್ಸಿಕಂಡತ್.
`ಹೌದಾ... ಹಂಗಾರೆ ನೀ ಈಗ್ಲೇ ಯಮಲೋಕಕ್ಕೆ ಒಂದು ಕಂಪ್ಯೂಟರ್ ತಂದ್ಕೊಡು...ನಂಗೂ ಈ ಚಿತ್ರಗುಪ್ತನ ಸಹವಾಸ ಸಾಕುಸಾಕಾಗ್ಯುಟ್ಟು. ಅವಂಗೆ ರಿಟೈರ್ಮೆಂಟ್ ಕೊಟ್ಟನೆ... ನಂಗೆ ಕಂಪ್ಯೂಟರ್ ಕಲ್ಸಿ ನೀ ಬೇಕಾರೆ ನಿನ್ನ ಗೂಡೆ ಹತ್ರ ಹೋಕ್...'ತಾ ಯಮ ಹೇಳ್ತ್....
ತನ್ನ ಬಾಣ ತನ್ನ ಕುರ್ಚಿಗೇ  ಬಂದ್ ಚುಚ್ಚಿಕಂಡದನ್ನ ಕಂಡ್ ಚಿತ್ರಗುಪ್ತ ಕಣ್ಣೊರೆಸಿಕಂಡ್ ಮನೆ ಕಡೆ ನಡ್ತ್... ಚೋಮುಣಿ ಮುಖಲೊಂದು ಸಣ್ಣ ನಗು ಕಾಣ್ಸಿಕಂಡ್ ಮಾಯ ಆತ್ !
- 'ಸುಮಾ' 
arebhase@gmail.com

Sunday, 5 February 2012

ಕಂಬಳಿ ಹಣ್ಣು ಲವ್ !


ಆಗ ಐದನೇ ಕ್ಲಾಸ್. 'ಉಪ್ಪಿಟ್ಟು ಸ್ಕೂಲ್' ಗಳಲ್ಲಿ ಎಬಿಸಿಡಿ ಕಲಿವಾ ಟೈಂ. ಲಕ್ಷ್ಮಣ ಮಾ ಸ್ಟರ್  ಇಂಗ್ಲೀಷ್ ಆಲ್ಫಬೆಟ್ ಹೇಳಿಕೊಡ್ವ ಮೊದ್ಲೇ ಮಕ್ಕ 'LOVE' ತಿಳ್ಕೊಂಡುಬಿಟ್ಟಿದ್ದೊ. ಪ್ರಪಂಚ ಏನೂತಾ ಇನ್ನೂ ಗೊತ್ತಾಗಿತ್ಲೆ.... ಆಗ್ಲೇ ಲವ್ ! ಬಹುಶ: ಲವ್ ತೇಳಿರೂ ಆಗ ಅವ್ಕೆ ಅರ್ಥ ಗೊತ್ತಿತ್ಲೆಯೇನೋ ! ಕನ್ನಡಲಿ ನೆಟ್ಟಗೆ ನಾಲ್ಕು ಅಕ್ಷರನೂ ಬರಿಯಕ್ಕೆ ಬಾತಿತ್ಲೆ. 'ನನ್ನ ಶಾಲೆ' ತೇಳುವ ವಿಷಯದ ಮೇಲೆ ಪ್ರಬಂಧ ಬರೆಯೊಕುತೇಳಿರೂ ಅಹಲ್ಯ ಟೀಚರ್ ಕೈಲಿ `ದಡ್ಡ..ದಡ್ಡ'ತಾ ಹೇಳಿಸಿಕಂಡ್, ಬರೆ ಬರುವಂಗೆ ಕುಂಡೆಗೆ ಹೊಡ್ಸಿಕಣಕಾಗಿತ್ತ್. ಅಂಥದ್ರಲ್ಲಿ  ಲವ್ ಲೆಟರ್  ಬೇರೆ ಕೇಡು ! 
ಗಂಡು ಮಕ್ಕಳೇ ಒಟ್ಟಿಗೆ ಕುದ್ದರೆ ಜೋರು ಗಲಾಟೆ ಮಾಡಿವೆತೇಳಿ, ಇಬ್ಬರು ಹುಡುಗರ ಮಧ್ಯೆ ಒಂದು ಗೂಡೆನ ಕೂರ್ಸಿಬಿಡ್ತಿದ್ದೋ...ಅಂದ್ರೆ, ಒಂದು ಬೆಂಚ್ಲಿ ನಾಲ್ಕುಜನ ಇದ್ದರೆ ಅಲ್ಲಿ ಇಬ್ಬರು ಗೂಡೆಗೂ ಇರ್ತಿದ್ದೋ .  ಇದು ಕಾಮಿನಿ ಟೀಚರ್ದ್ ಐಡಿಯಾ ! 'ಉರಿಬರೋವ್ಕೆ' ಜೊತೇಲೆ ಗೂಡೆಗ ಇದ್ದರೇನು, ಹೈದಂಗ ಇದ್ದರೇನು ? ಕೋತಿ ಕೋತಿನೇ....ಇಲ್ಲೂ ಮಂಗಾಟ ಮುಂದುವರೆಸಿದ್ದೋ. ಹಿಂಗೆ ಗೂಡೆಗ ಒಟ್ಟಿಗೆ ಕುದ್ದ್ಕಂಡಿದ್ರಿಂದ ಏನೋ, ಹೈದಂಗಳಲ್ಲಿ ಲವ್ ಫೀಲಿಂಗ್ ಶುರುವಾತ್. ಗೂಡೆಗಳಲ್ಲೂ ಈ ಭಾವನೆ ಇದ್ದಿರ್ದು... ಇಂದಿಗೂ ಅವ್ರ ಮನಸ್ನ ಯಾರ್ ಸರಿಯಾಗಿ ಅರ್ಥ ಮಾಡ್ಕೊಂಡೊಳೋ ಹೇಳಿ... 
ಹಿಂಗಿರ್ಕಾಕನ ಒಬ್ಬ ಭಟ್ಟರ ಹೈದಂಗೆ ಬೇರೆ ಜಾತಿ ಗೂಡೆ ಮೇಲೆ ಮನಸ್ಸಾತ್ ! ನೆನಪಿಟ್ಟ್ಕಣಿ, ಇದು ಐದನೇ ಕ್ಲಾಸ್ನ ವಿಷಯ ! ಆ ಭಟ್ಟನ ಮನೇಲಿ ರೇಷ್ಮೆ ಬೆಳೀತ್ತಿದ್ದೊ. ರೇಷ್ಮೆ ಹುಳಕ್ಕೆ ಹಾಕಿವೆಯಲ್ಲಾ, ಹಿಪ್ಪುನೇರಳೆ ಸೊಪ್ಪು... ಆ ಗಿಡಲಿ ಒಂದು ಹಣ್ಣು ಆದೆ. 'ಕಂಬಳಿ ಹಣ್ಣು'ತಾ ಅದ್ರ ಹೆಸ್ರ್. ನಮ್ಮ ಹೀರೋ, ಗೂಡೆಗೆ ಇಂಪ್ರೆಸ್ ಮಾಡಿಕೆ ಅವ್ಳಿಗೆ 'ಕಂಬಳಿ ಹಣ್ಣು' ತಂದ್ಕೊಡ್ತಿತ್. ಇದು ಪ್ರೀತಿತಾ ಹೇಳ್ದು ಆ ಟೈಂಲಿ ಅವ್ರಿಬ್ಬರ ಮನಸ್ಸ್ಲಿ ಇತ್ತೋ ಏನೋ ಗೊತ್ಲೆ. ಆದ್ರೆ ದಿನ ಕಳ್ದಂಗೆ ಅವ್ರಿಬ್ಬರ ಸಂಬಂಧ ಜಾಸ್ತಿ ಆತ್. ಅವ್ಳು ಕ್ಲಾಸ್ಗೆ ಬಾತ್ಲೆತೇಳಿರೆ ಇಂವ, ಇಂವ ಬಾತ್ಲೆತೇಳಿರೇ ಅವ್ಳು ದಿನಪೂರ್ತಿ ಮಂಕಾಗಿ ಕುದ್ದುಬಿಡ್ತಿದ್ದೋ....
ಅವ್ರಿಬ್ಬರ ಮಧ್ಯೆ ಆತ್ಮೀಯತೆ ಎಷ್ಟಿತ್  ತ್ತೇಳಿರೆ, ತಂದ ಬುತ್ತಿನ ಇಬ್ಬರೂ ಹಂಚಿಕಂಡ್ ತಿಂತಿದ್ದೊ. ಒಂದು ದಿನ ಮಧ್ಯಾಹ್ನ ಹೊತ್ತ್. ನಮ್ಮ ಹೀರೋಯಿನ್ ರೊಟ್ಟಿ ತಂದಿತ್ತ್. ಅದಕ್ಕೆ ಬೇಕಾದ ಸಾರ್ ಕೂಡ ಬೇರೆಯೇ ಡಬ್ಬಿಲಿ ಹಾಕಿಕಂಡ್ ಬಂದಿತ್ತ್. ಅವ್ಳ ಮನೇಲಿ ಯಾವಾಗ ನೋಡಿರೂ ರೊಟ್ಟಿ. ತಿಂದ್  ತಿಂದ್  ಬೇಸರ ಆಗಿತ್ತ್. ಇನ್ನು ಈ ಭಟ್ಟನ ಟಿಫಿನ್ಲಿ ಚಪಾತಿ ಮತ್ತೆ ಸಕ್ಕರೆ ತುಪ್ಪ ! ಅವ್ನ ಮನೇಲೂ ಅಷ್ಟೇ, ದಿನಾ ಅದೇ ಚಪಾತಿ. ಹಂಗಾಗಿ ಅವು ತಂದಿದ್ದನ್ನ ಅದಲು ಬದಲು ಮಾಡ್ಕೊಂಡೊ. ಭಟ್ಟ ರೊಟ್ಟಿನ ಚಪ್ಪರಿಸಿಕಂಡ್ ತಿಂದತ್. ಎಲ್ಲಾ ತಿಂದ್ ಆದ್ಮೇಲೆ ನೋಡಿರೆ ಟಿಫಿನ್ ಲಿ ಮೂಳೆ ! ಭಟ್ಟ ತಿಂದದ್ದೆಲ್ಲಾ ಹಂಗೆನೇ ವಾಪಸ್ ಬಂದಿತ್ತ್!
ಈ ಭಟ್ಟ ಓದುದರಲ್ಲಿನೂ ತುಂಬಾ ಹುಷಾರಿತ್ತ್. 7ನೇ ಕ್ಲಾಸ್ಲಿ ಇವನೇ ಸ್ಕೂಲ್ಗೆ ಫಸ್ಟ್. ಇದಾದ್ಮೆಲೆ ಈ ಜೋಡಿ ಒಂದೇ ಹೈಸ್ಕೂಲ್ಗೆ ಸೇರ್ದೊ. ಅಲ್ಲೂ ಇಬ್ಬರದ್ದೂ ಒಂದೇ ಸೆಕ್ಷನ್. ಸ್ವಲ್ಪ ಸ್ವಲ್ಪ ಮೀಸೆ ಬರ್ತಿತ್ ನೋಡಿ, ಇವಂಗೆ, ಓದುದು ಬಿಟ್ಟ್ ಬೇರೆ ಕಡೆ ಗಮನ ಜಾಸ್ತಿ ಆತ್. ಗೂಡೆಗೂ ಅಷ್ಟೆ... 8ನೇ ಕ್ಲಾಸ್ ಅರ್ಧ ವಾರ್ಷಿಕ ಪರೀಕ್ಷೇಲಿ ನಮ್ಮ ಹೀರೋಗೆ ಸಿಕ್ಕಿದ ಮಾರ್ಕ್ಸ್   ನೋಡಿ ಆವನ ಅಪ್ಪಂಗೆ ಯಾಕೋ ಡೌಟ್ ಬಾತ್. ಸುಮ್ನೆ ಒಮ್ಮೆ ಇವನ ಸ್ಕೂಲ್ ಬ್ಯಾಗ್   ಕೊಡ್ಕಿ ನೋಡ್ದೊ... ದಪ...ದಪ ತಾ 10-15 ಲವ್ಲೆಟರ್ ಕೆಳಕ್ಕೆ ಬಿತ್ತ್. ಅದೇ ಹಿಪ್ಪುನೇರಳೆ ಗಿಡದ ಕೋಲು ತಕ್ಕಂಡ್, ಅದ್ ಮುರಿಯುವಂಗೆ ಬಾರ್ಸಿದೋ... ಮಾರನೇ ದಿನನೇ ಟಿಸಿ ತೆಗ್ದ್ ನಮ್ಮ ಹೀರೋನ ಕರ್ಕಂಡ್ ಹೋಗಿ ಪುತ್ತೂರ್ಲಿ ಹೈಸ್ಕೂಲ್ಗೆ ಸೇರಿಸಿದೋ...
ಹೀರೋಯಿನ್ ಮನೆಗೂ ವಿಷಯ ಗೊತ್ತಾತ್. ಇವ್ಳನ ಹಿಂಗೆ ಬಿಟ್ಟರೆ ಮರ್ಯಾ ದೆ ಹರಾಜು ಹಾಕುದುತೇಳಿ, ಸ್ಕೂಲ್ ಬಿಡ್ಸಿದೋ... ಅದರ ಮುಂದಿನ ವರ್ಷ ಮದುವೆನೂ ಮಾಡ್ದೋ...ಅವ್ಳ ಮಕ್ಕ ಈಗ ಹೈಸ್ಕೂಲ್ ಓದ್ತೊಳೊ... ಇನ್ ಹೀರೋ ದೊಡ್ಡ ಎಂಜಿನೀಯರ್, ಮದುವೆ ಆಕೆ ಹೊರಟುಟ್ಟು....ಗೂಡೆ ಹುಡುಕುತ್ತೊಳೋ...
- 'ಸುಮಾ'
arebhase@gmail.com

ಮಾಯವಾದ ಮಲೆನಾಡು !


ಒಂದ್ ದೊಡ್ಡ ಕಾಡು...
ಮಟಮಟ ಮಧ್ಯಾಹ್ನ ಮಾತ್ರ 
ಅಲ್ಲಿ ಸೂರ್ಯಂಗೆ ಪ್ರವೇಶ !
ಮಳೆಬಂದರೂ ನೆಲ ಮುಟ್ಟುಲ್ಲೇ...
ಎತ್ತರದ ಮರಗ, ತಬ್ಬಿ ನಿಂತಿರ್ವ ದಪ್ಪ ಬಳ್ಳಿ !
ಹಾಲು ಹರಿದಂಗೆ ಹೊಳೆ...
ನೇಸರಂಗೆ ಮುತ್ತಿಕ್ಕಿಕ್ಕೆ ಹಾರುವ
ಬಣ್ಣಬಣ್ಣದ ಮೀನುಗ !
ಆಹಾರಕ್ಕೆ ಒಂಟಿ ಕಾಲ್ಲಿ
ತಪಸ್ಸು ಮಾಡ್ವ ಬಕಪಕ್ಷಿ !
ದೂರಲಿ ಮರಡುವ ಗುಳ್ಳೆನರಿ
ಘೀಳಿಡ್ವ ಆನೆಯ ಜೋರು ದನಿ
ಅಲ್ಲೆಲ್ಲೋ ಹುಲಿ ಕೈಗೆ ಸಿಕ್ಕಿಹಾಕಿಕಂಡ
ಗಂಗೆ ಹಸುನ ನೋವಿನ ಕೂಗು !
ಈಗ ಇದೆಲ್ಲಾ ಬರೀ ಕನಸಷ್ಟೇ...!
ಎಲ್ಲಿ ಉಟ್ಟು ಮಲೆನಾಡು ?

- 'ಸುಮ' 
arebhase@gmail.com

Saturday, 4 February 2012

ಆಸೆ ನಿರೀಕ್ಷೆ...

ಪಂಜರದ ಗಿಣಿ ನಾನ್....
ಗರಿಬಿಚ್ಚಿ ಹಾರೋ ಆಸೆ ನಂಗೆ...!!!!!
ಕತ್ತಲಾವರಿಸಿಟ್ಟು ಮನಸಲಿ..
ಕಾಣ್ತಾ ಇಲ್ಲೇ ನಾ,
ಹೋಗೋ ದಾರಿ...
ಹಾರಿಕೆ ಅಸಾಧ್ಯನಾ ನಂಗೆ??
ಭಾವನೆಯ ಪಂಜರಂದ
ಹೊರಬರೋ ಆಸೆ ನಂಗೆ..!!
ಸಾಗೋಕು ನಾ ಮತ್ತಷ್ಟು  ದೂರ..
ನೋವಿನ  ಬಂಧನ ತಡೆಯಾದೆನಾ....???
ಮನಸಿನ ವೀಣೆನ ನುಡಿಸೋ
ಆಸೆ ನಂಗೆ..!!
ಕನಸಿನ ಗೋಪುರ ಮತ್ತೆ 
ತಡೆಯಾದೆನಾ...??
ಆಸೆಗಳ ಸರಮಾಲೇಲಿ ನಿರೀಕ್ಷೆ
ನಂಗೆ ಮನೆಯಾತಾ...???
ಕಾರಣ ನಂಗೆ ಗೊತ್ಹ್ಲೆ...
ಕೊನೆಗೂ..ನಿರೀಕ್ಷೆಯ ಪಂಜರ
ನನ್ನಾವರಿಸಿ ಬಿಟ್ಟತ್...!!!!!
ನಿನಗಾಗಿ ,

- ಪವಿ - ಭಾವನೆಗಳ ಪಲ್ಲವಿ...

Friday, 3 February 2012

ಅಳುವ ಔಷಧಿ !


ದು:ಖ ಅಂದ್ರೆ ಹಿಂಗೆನೂ
ಇದ್ದದೆನಾ?
ಗಂಟಲು ಸೆರೆ ಉಬ್ಬಿಬಂದು
ಮರ್ಡೊಕುತೇಳಿಕಾಕನ ಸ್ವಾಭಿಮಾನದ ಪ್ರಶ್ನೆ
ಕಣ್ಣಲ್ಲಿ ನೀರಿನ ಪಸೆ...
ಉಕ್ಕಿ ಹೊರಬಂದಂಗೆ ಆದ್ರೂ
ಅಲ್ಲೇ ಇಂಗಿ ಹೋಗ್ವ ಹನಿ !
ಸುನಾಮಿಗೂ ಮೊದ್ಲು ಹಿಂದಕ್ಕೆ
ಸರಿಯುವ ಸಮುದ್ರದಂಗೆ !
ಮತ್ತೆ ಎಲ್ಲಾ ಶಕ್ತಿ ಸೇರ್ಸಿ 
ಒಮ್ಮೆಲೇ ನುಗ್ಗಿಬರುವ ರಕ್ಕಸ ಅಲೆಗ
ಕಣ್ಣೀರಿಗೂ ಅಂಥ ಶಕ್ತಿ ಉಟ್ಟಾ?
ಹೌದು....!
ಹೃದಯದ ಸುತ್ತ ಹೆಪ್ಪುಗಟ್ಟಿ ನಿಂತ
ಬೇಸರದ ಮಂಜುಗಡ್ಡೆ !
ನಮಗೆ ನಾವೇ ಹೇಳಿಕೊಳ್ವ
ಸಾಂತ್ವನದ ಬಿಸಿಯುಸಿರು !
ಅಷ್ಟೇ ಸಾಕ್....
ಉಕ್ಕಿ ಬರ್ವ ಅಶ್ರುಧಾರೆಲಿ
ಎಲ್ಲವೂ ಕೊಚ್ಚಿ ಹೋದೆ....
ಮನಸ್ಸು ಹಗುರ ಆದೆ....
ದು:ಖ ಆಗ್ತುಟ್ಟಾ?
ಒಮ್ಮೆ ಅತ್ತುಬಿಡಿ !
- 'ಸುಮಾ'

Thursday, 2 February 2012

ಮೆಟ್ರೋ ಗಾಡಿಯ ಸವಾರಿ


ಮೆಟ್ರೋ ರೈಲ್ಲಿ ಕೂರೊಕುತೇಳ್ವ ನನ್ನ ಆಸೆ ಕೊನೆಗೂ ಈಡೇರ್ತ್. ಮೆಟ್ರೋ ಪ್ರಯಾಣ ತುಂಬಾ ಬೇರೆಯದ್ದೇ ಅನುಭವ ಕೊಟ್ಟದೆತಾ ಅದರಲ್ಲಿ ಹೋಗಿ ಬಂದವು ಹೇಳ್ತಿದ್ದೊ... ಅದ್ರೆ, ನಂಗೆ ಆ ರೀತಿ ವಿಶೇಷತಾ ಏನೂ ಅನ್ನಿಸ್ತಿಲ್ಲೆ. ವೋಲ್ವೋ ಬಸ್ಲಿ ಕುದ್ದ್ಕಂಡ್, ರೈಲ್ವೆ ಕಂಬಿ ಮೇಲೆ ಹೋದಂಗೆ ಆತಷ್ಟೆ ! ವೋಲ್ವೊದಲ್ಲಿ ಒಳ್ಳೇ ಕುಷನ್ ಸೀಟ್ ಆದ್ರೂ ಇದ್ದದೆ. ಮೆಟ್ರೋಲಿ ಅದೂ ಇಲ್ಲೆ ಬಿಡಿ ! (ಮೆಟ್ರೋ ಡಿಸೈನ್ ಮಾಡಿರುದೇ ನಿಂತ್ಕಂಡ್ ಹೋಗವ್ಕೆ...)
ಡೆಲ್ಲೀಲಿ ಮೆಟ್ರೋ ರೈಲ್ನ ಜನ ತುಂಬಾ ಇಷ್ಟ ಪಟ್ಟಳೋ... ಅಲ್ಲಿ ರೈಲೊಳಗೆ ಸಿಟು ಸಿಕ್ಕೋಕುತೇಳಿರೆ ಏಳೇಳು ಜನ್ಮಲಿ ಪುಣ್ಯ ಮಾಡಿರೊಕು ! ಬರೀ ಪೀಕ್ಅವರ್ಲಿ ಮಾತ್ರ ಈ ಪರಿಸ್ಥಿತಿ ಅಲ್ಲ. ದಿನದ ಹೆಚ್ಚು ಟೈಂ ಹಿಂಗೆನೇ ಇದ್ದದೆ. ಆದ್ರೆ, ಬೆಂಗಳೂರು ಜನಕ್ಕೆ ಮೆಟ್ರೋ ರೈಲ್ ಏಕೋ ಇಷ್ಟ ಆದಂಗೆ ಕಾಣ್ತಿಲ್ಲೆ. ಈಗ್ಲೂ ಇದನ್ನ ಜನ ಒಂಥರ ಪಿಕ್ನಿಕ್ಸ್ಪಾಟ್ನಂಗೆ ನೋಡ್ದು ಬಿಟ್ಟರೆ, ದಿನ ನಿತ್ಯದ ಉಪಯೋಗಕ್ಕೆ ಬಳಸುವವು ತುಂಬಾ ಕಡಿಮೆ. ಇದ್ಕೆ ಕಾರಣ ಏನಿರ್ದು ?
`ನಮ್ಮ ಮೆಟ್ರೋ' ಈಗ ಓಡ್ತಿರ್ದು, ಎಂಜಿ ರೋಡ್ನಿಂದ ಬಯ್ಯಪ್ಪನಹಳ್ಳಿವರೆಗೆ ಮಾತ್ರ. ಇದ್ರ ಮಧ್ಯೆ ನಾಲ್ಕೈದು ಸ್ಟೇಷನ್ಗ ಸಿಕ್ಕಿವೆ. ಇಲ್ಲಿ ಇಳ್ದು ಬೇರೆ ಕಡೆ ಹೋಕುತೇಳಿರೆ, ಮತ್ತೆ ಬಿಎಂಟಿಸಿ ಅಥ್ವಾ ಆಟೋ ಬೇಕೇ ಬೇಕು. ಒಂದು ವೇಳೆ, ಬೆಂಗ್ಳೂರ್ಲಿ `ನಮ್ಮ ಮೆಟ್ರೋ'ದ ಯೋಜನೆ ಪೂರ್ತಿ ಆದ್ರೆ, ಅಂದ್ರೆ ಎಲ್ಲಾ ಕಡೆ ಹರಡಿರೆ ತುಂಬಾ ಜನ ಇದ್ನ ಉಪಯೋಗಿಸಿವೆಯೋ ಏನೋ... ಈಗ ಮೆಟ್ರೋ ಕೆಲ್ಸ ನಡೀತ್ತಿರುವ ಸ್ಥಿತಿ ನೋಡಿರೆ ಸದ್ಯಕ್ಕಂತೂ ಇದು ಮುಗಿಯುವಂಗೆ ಕಾಣ್ತಿಲ್ಲೆ.
ಒಂದಂತೂ ನಿಜ. ವೋಲ್ವೋ ಬಸ್ಲಿ ಹೋದ್ರೆ, ದಾರಿಯುದ್ದಕ್ಕೆ ಟ್ರಾಫಿಕ್ಜಾಂ ಕಿರಿಕಿರಿ. ಎಂಜಿ ರೋಡ್ನಿಂದ ಬಯ್ಯಪ್ಪನಹಳ್ಳಿಗೆ ಬಸ್ಲಿ ಹೋಕೆ ಕಡ್ಮೆ ಅಂದ್ರೂ 40 ನಿಮಿಷ ಬೇಕಾದು. ಆದ್ರೆ ಮೆಟ್ರೋ ರೈಲು ತಕಂಬದು ಬರೀ 7 ನಿಮಿಷ ! ದೇವ್ರೇ, ಬೆಂಗಳೂರ್ಲಿ ಎಲ್ಲಾ ಕಡೆ ಬೇಗ ಮೆಟ್ರೋ ರೈಲು ಓಡಲಿಯಪ್ಪಾ...
- 'ಸುಮಾ'

Wednesday, 1 February 2012

ಕೊಡಗ್ನ ಸೌಂದರ್ಯ !


 ಎಷ್ಟು ಪೋರ್ಲುನ  ಕೊಡಗ್ 
        ಎಷ್ಟು ಅಂದದ ಕೊಡಗ್ 
ಕರ್ನಾಟಕ  ಕಾಶ್ಮೀರ ಖ್ಯಾತಿಯ ಕೊಡಗ್
ಹಚ್ಚ ಹಸ್ರ್ ದಟ್ಟಮರಗಳ ಕೊಡಗ್ 
ತೊರೆ ಕಣಿವೆ ಬೆಟ್ಟಗಳ ಪೋರ್ಲುನ ಕೊಡಗ್ 
ಸುಗಂಧ ಹೂಗಳ ಪೋರ್ಲುನ ಕೊಡಗ್
       ಎಷ್ಟು ಪೋರ್ಲುನ ಕೊಡಗ್ 
       ಎಷ್ಟು ಅಂದದ ಕೊಡಗ್ 
ಪರ ಪರ ಮಳೆ ಬರುವ ಕೊಡಗ್ 
ಕಾರ್ಮೋಡಗಳ ಹೊದಿಯುವ ಕೊಡಗ್ 
ಉರಿಯುವ ಮನಸಿಗೆ ತಂಪ್ನ ಸೂಸುವ ಕೊಡಗ್ 
ಪ್ರವಾಸಿಗರ ಮನಸ್ನ ಸೆಳೆಯುವ ಕೊಡಗ್ 
      ಎಷ್ಟು ಪೋರ್ಲುನ ಕೊಡಗ್ 
      ಎಷ್ಟು ಅಂದದ ಕೊಡಗ್ 
ನಿನ್ನ ಮಡಿಲೊಳಗೆ ಬೆಳೆಯುವ ಮಕ್ಕ ನಾವು 
ಹಸಿರ ಭೂಸಿರಿಯ ತೊಟ್ಟ ಕೊಡಗ್ 
ತಂಪ ಕಂಪ ಭೀಕರ ಗಾಳಿಯ ಬೀಸುವ ಕೊಡಗ್ 
ಜುಳು ಜುಳು ಮಂಜುಳ ಸ್ವರಗಳ ನಾದದಿ 
ಹರಿಯುವ ಕಾವೇರಿ ಮಾತೆಯ ಕ್ಷೇತ್ರದಿ
     ಸುಂದರ ಪೋರ್ಲುನ ಕೊಡಗ್
     ಅಂದದ ಕೊಡಗ್
       
ಕುಲ್ಲಚನ ತಾರಾರವಿ, 
ಕುಂಬಳದಾಳು
arebhase@gmail.com