`ನಂಗೆ ಆ ಮಾವಿನ ಕಾಯಿ ಬೇಕು...' ಮರದ ಕೊಡೀಲಿ ಕಾಣ್ತಿದ್ದ ದಪ್ಪ ಮಾವಿನ ಕಾಯಿನ ತೋರಿಸಿಕಂಡ್ ಅನಿತಾ ಕೇಳ್ತ್.
ಅನಿಲ್ದ್ ಆಗ ಬರೀ ಪೆಚ್ಚು ನಗೆ... ಅಷ್ಟು ಎತ್ತರಕ್ಕೆ ಕಲ್ಲು ಹೊಡಿಯಕ್ಕೆ ಇವಂಗೆ ಆದುಲ್ಲೆ. ಮರಹತ್ತಿಕಂತೂ ಮೊದ್ಲೇ ಗೊತ್ಲೆ...
ಅನಿತಾಂಗೂ ಇದು ಗೊತ್ತಿತ್ತ್.... ಆದ್ರೆ ಮಾವಿನ ಕಾಯಿ ನೋಡ್ದ ಕೂಡ್ಲೇ ಮರ್ತು ಹೋಗಿತ್ತಷ್ಟೆ.... `ಅದ್ನ ಕುಯ್ದು ಕೊಡಿಕೆ ಆಲೆತಾ ನೀ ಏನೂ ಬೇಸರ ಮಾಡಿಕಂಬೇಡ, ನಾನೇ ಕುಯ್ಕೊಂಡನೆ..' ತಾ ಹೇಳ್ದ ಅನಿತಾ ಒಂದ್ ಸಣ್ಣ ಕಲ್ಲು ತಕ್ಕಂಡ್ ಗುರಿ ನೋಡಿ ಆ ಮಾವಿನ ಕಾಯಿಗೆ ಹೊಡ್ದು ಬೀಳ್ಸಿತ್ತ್...ತಿರುಗಿ ನೋಡಿರೆ, ಅನಿಲ್ ಕಾಣ್ತಿಲ್ಲೆ !
ಅನಿಲ್ ಮತ್ತೆ ಅನಿತಾ ಅಕ್ಕಪಕ್ಕದ ಮನೆಯವು... ಇಬ್ಬರ ಅಪ್ಪಂದಿರೂ ಪೊಲೀಸರೇ... ಪೊಲೀಸ್ ಕ್ವಾರ್ಟರ್ಸ್ಲಿ ಅವರ ಮನೆ ಇತ್ತ್. ಎರಡೂ ಮನೆಯವೂ ತುಂಬಾ ಲಾಯ್ಕ ಹೊಂದಿಕಂಡಿದ್ದೋ. ಮಕ್ಕಳೂ ಅಷ್ಟೇ.. ಅದರಲ್ಲೂ ಅನಿಲ್ ಮತ್ತೆ ಅನಿತಾ ಮಧ್ಯೆ ತುಂಬಾ ಆತ್ಮೀಯತೆ. ಇಬ್ಬರೂ ಆರನೇ ಕ್ಲಾಸ್. ಒಂದೇ ಬೆಂಚ್. ಊಟನೂ ಒಟ್ಟಿಗೆ ! ಅಂದ್ ಭಾನುವಾರ. ರಜೆ ಇತ್ತಲ್ಲ, ನಾರಾಯಣಾಚಾರ್ ತೋಟಕ್ಕೆ ಹಣ್ಣು ಬೇಟೆಯಾಡಿಕೆ ನುಗ್ಗಿದ್ದೊ.
ಮಾವಿನ ಕಾಯಿನ ಅನಿತಾ ಬೀಳಿಸಿಯೇ ಬೀಳಿಸುದೆತೇಳುವ ನಂಬಿಕೆ ಅನಿಲ್ಗೆ. ಹಂಗಾಗಿ ಅಂವ, ಅನಿತಾ ಕಲ್ಲು ತಕ್ಕಂಡ ಕೂಡ್ಲೆ ಮನೆಗೆ ಓಡಿತ್ತ್. ಮಾವಿನ ಕಾಯಿ ನೆಲಕ್ಕೆ ಬೀಳಿಕಾಕನ, ಉಪ್ಪು-ಮೆಣಸುಹುಡಿ ಹಿಡ್ಕಂಡ್ ಮರದ ಬುಡಲಿ ರೆಡಿ ! ಇಬ್ಬರೂ ಮರದ ಬುಡಲಿ ಕುದ್ದೊ. ಅನಿತಾ ಮಾವಿನ ಕಾಯಿನ ಬಾಯಿಲಿ ಕಚ್ಚಿ ಸಣ್ಣ ಸಣ್ಣ ಪೀಸ್ ಮಾಡಿರೆ, ಅನಿಲ್ ಅದಕ್ಕೆ ಉಪ್ಪುಮೆಣಸು ಉಜ್ಜಿ ಒಂದ್ ಕಡೆ ತೆಗೆದಿಡ್ತಿತ್ತ್. ಹಿಂಗೆ ಎಲ್ಲಾ ಪೀಸ್ಗಳಿಗೂ ಉಪ್ಪುಮೆಣಸು ಹಾಕಿ ಆದ್ಮೇಲೆ ಇಬ್ಬರೂ ಒಟ್ಟಿಗೆ ತಿಂಬಕೆ ಶುರುಮಾಡ್ದೊ...
`ಏನ್ಡ್ರೀ ಇನ್ನೂ ಆಗಿಲ್ವಾ ಸ್ಕ್ರಿಪ್ಟ್ ? ಒಂದು ಸ್ಕ್ರಿಪ್ಡ್ ಮಾಡ್ಲಿಕ್ಕೆ ಇಷ್ಟು ಹೊತ್ತು ತಕ್ಕೊಂಡ್ರೆ ಬುಲೆಟಿನ್ ಮಾಡ್ದಹಾಗೆನೇ...' ದೂರಲಿ ಕುದ್ದಿದ್ದ ಬಿಪಿ, ಬಿಪಿ ಏರ್ಸಿಕಂಡ್ ಬೈತಿತ್ತ್. `ಹೌದಲ್ಲಾ...ನಂಗೆ ಬಿಪಿ ಈ ಸ್ಕ್ರಿಪ್ಟ್ ಕೊಟ್ಟ್ ತುಂಬಾ ಹೊತ್ತು ಆತ್... ಹಾಳ್ ಯೋಚನೆಗ...ಅಲ್ಲಲ್ಲ.. ಒಳ್ಳೆ ಯೋಚನೆಗ... ಮೊದ್ಲು ಈ ಸ್ಕ್ರಿಪ್ಟ್ ಮಾಡ್ದ ಮೇಲೆ ಮತ್ತೆ ಬೇರೆ ಕೆಲ್ಸ' ತಾ ಅನಿಲ್ ಮತ್ತೆ ಸ್ಕ್ರಿಪ್ಟ್ ಬರಿಯಕ್ಕೆ ಶುರುಮಾಡ್ತ್... ಆದ್ರೂ ತಲೇಲಿ ಅನಿತಾಳದ್ದೇ ಯೋಚನೆ. ಬಿಪಿ ಅವನಿಷ್ಟಕ್ಕೆ ಅಂವ ವಟ ವಟತಾ ಹೇಳ್ತನೇ ಇತ್. ಅದ್ ನಂಗೆ ಅಲ್ಲಾತಾ ಯೋಚನೆ ಮಾಡ್ಕಂಡ್ ಅನಿಲ್ ಇವನಿಷ್ಟಕ್ಕೆ ಇಂವ ಕೆಲ್ಸ ಮುಂದುವರೆಸಿತ್.
ಅನಿಲ್ ನ ಏಳನೇ ಕ್ಲಾಸ್ ಮುಗಿತ್ತಿದ್ದಂಗೇ ಅವನಪ್ಪಂಗೆ ಟ್ರಾನ್ಸ್ಪರ್ ಆತ್. ಅದಾಗಿ ಒಂದು ವರ್ಷಕ್ಕೆ ಅನಿತಾನ ಅಪ್ಪಂಗೂ ಟ್ರಾನ್ಸ್ಪರ್ ಆಗಿತ್ತ್. ಇಬ್ಬರೂ ಎಸ್ಎಸ್ಎಲ್ಸಿಗೆ ಬರುವ ವರೆಗೂ ಕಾಂಟ್ಯಾಕ್ಟ್ ಇತ್ತ್...ಆಮೇಲೆ ಅನಿಲ್ ಜರ್ನಲಿಸಂ ಓದಿಕೆ ಉಜಿರೆಗೆ ಹೋತ್. ಅನಿತಾ ಕುಶಾಲನಗರಲಿ ಡಿಪ್ಲೊಮಾಕ್ಕೆ ಸೇರಿಕಂಡ್, ಅಲ್ಲಿ ಫೇಲ್ ಆಗಿ ಮತ್ತೆ ಪಿಯುಸಿ ಕಾಮರ್ಸ್ ಗೆ ಸೇರಿಕಂಡತ್. ಇಷ್ಟ್ ಆಕಾಕನ ಅನಿತಾ ಮತ್ತೆ ಅನಿಲ್ ದೂರ ದೂರ ಆಗಿಬಿಟ್ಟಿದ್ದೋ...
ಲಾಲ್ಬಾಗ್ಲಿ ಫಲಪುಷ್ಪ ಪ್ರದರ್ಶನ. ಅದ್ರ ಉದ್ಘಾಟನೆ ಮಾಡಿಕೆ ಸಿಎಂ ಬಂದಿದ್ದೊ. ಅನಿಲ್ ಅಲ್ಲಿ ರಿಪೋರ್ಟಿಂಗ್ ಮಾಡಿಕೆ ಬಂದಿತ್ತ್. ಬಂದೋಬಸ್ತ್ ನೋಡಿಕಂಡಿದ್ದ ಪೊಲೀಸ್ರ ಮಧ್ಯೆ ಒಬ್ಳು ಲೇಡಿ ಎಸ್ಐ ಚುರುಕಾಗಿ ಅತ್ತಿಂದಿತ್ತ ಓಡಾಡ್ತಿತ್ತ್. ಇವ್ಳನ್ನ ಎಲ್ಲೋ ನೋಡ್ಯೊಳೆಯಲ್ಲಾತಾ ಅನಿಲ್ಗೆ ಅನ್ನಿಸಿಕೆ ಶುರುವಾತ್... ಹೌದು, ಅವ್ಳು ಅನಿತಾ. ಮೆಲ್ಲನೆ ಅವ್ಳ ಹಿಂದೆ ನಿಂತ್ `ಅನಿತಾ...' ತಾ ಕರ್ತ್....ಅವ್ಳಿಗೆ ಸ್ವಲ್ಪ ಹೊತ್ತು ಗುರುತು ಸಿಕ್ಕಿತ್ಲೆ...`ನಾನ್...ಅನಿಲ್...' ಇವ್ನೇ ಪರಿಚಯ ಮಾಡಿಕಣ್ತ್... ಇಬ್ಬರಿಗೂ ಅದೊಂದು ಸರ್ಪ್ರೈಸ್ ಭೇಟಿ....
ಮಲ್ಲಿಗೆ ಹೂ ಹರಡಿದ್ದ ಹಾಸಿಗೆ ಮೇಲೆ ಅನಿಲ್ ಕುದ್ದಿತ್. ಅನಿತಾ ಅಲ್ಲೇ ಇದ್ದ ಕುರ್ಚಿ ಲಿ ಕುದ್ಕಂಡ್ ಚಾಕ್ಲಿ ಆ್ಯಪಲ್ ಕಟ್ ಮಾಡಿಕೆ ನೋಡ್ತಿತ್. ಅದ್ ಅವ್ರ ಫಸ್ಟ್ ನೈಟ್... ಚಿಕ್ಕದರಲ್ಲಿ ಇರ್ಕಾಕ ನ ಕಚ್ಚಿ ಕಚ್ಚಿ ಮಾವಿನ ಕಾಯಿ ತಿನ್ತಿದ್ದದ್ ಅನಿಲ್ ಗೆ ಯೋಚನೆ ಬಾತ್.... ಅಷ್ಟೊತ್ತಿಗೆ ಪವರ್ಕಟ್. ಲೈಟ್ ಆಫ್ ಆತ್... !
- 'ಸುಮ'
arebhase@gmail.com
No comments:
Post a Comment