Friday, 20 July 2012

ಹನೀ...


ಮಳೆಗಾಲದ ರಜೆ. ನಾವೆಲ್ಲಾ ಕಳ್ಳ-ಪೊಲೀಸ್ ಆಟ ಆಡ್ತಿದ್ದೊ. ಹೆಚ್ಚುಕಮ್ಮಿ ಎಲ್ಲವೂ ಹೈಸ್ಕೂಲ್ ಮಕ್ಕ. ಗಂಡು, ಹೆಣ್ಣುತೇಳುವ ವ್ಯತ್ಯಾಸ ಇತ್ಲೆ. ನಾ ಮತ್ತೆ `ಅವ್ಳು' ಇಬ್ಬರೂ ಕಳ್ಳರ ಟೀಮ್ಲಿ ಇದ್ದೊ. ಏಣಿದ್ ಹಿಂದೆ ಕತ್ತಲೆ ಜಾಗಲಿ ಅಡಗಿಕಂಡಿದ್ದೊ. ನಾವು ಇಬ್ಬರೂ ಅಲ್ಲಿ ಅಡಗಿ ಕುದ್ದೊಳೊತೇಳುದು ಪೊಲೀಸ್ ಟೀಮ್ಗೆ ಗೊತ್ತೇ ಆತ್ಲೆ. ನಮ್ಮನ್ನ ಹುಡುಕಿಕಂಡ್ ಅದೇ ಏಣಿ ಮೆಟ್ಟಿಲು ಹತ್ತಿ ಅಟ್ಟ ಸೇರಿಕಂಡೊ. `ಅವ್ಳು' ಮೆಲ್ಲೆ ನನ್ನ ಕಿವಿ ಹತ್ರ ಬಂದ್ ಹೇಳ್ತ್, `ಪೆದ್ದುಗ...ನಾವಿಲ್ಲಿ ಕುದ್ದಿರ್ದು ಗೊತ್ತೇ ಆತ್ಲೆ...' ನಾ ಅವ್ಳ ಬಾಯಿಗೆ ಅಡ್ಡ ಕೈ ಇಟ್ಟ್ ಹೇಳ್ದೆ, `ಶ್...ಮೆಲ್ಲೆ ಮಾತಾಡ್ನೇ ಬಜಾರಿ, ಅವ್ಕೆ ಕೇಳಿಬಿಟ್ಟರೆ ನಾವು ಸಿಕ್ಕಿಬಿದ್ದವೆ...' ನಾ ಬಜಾರಿತಾ ಹೇಳ್ದ್ ಅವ್ಳಿಗೆ ಸಿಟ್ಟು ಬಾತ್. ಅವ್ಳ ಬಾಯಿಗೆ ಅಡ್ಡ ಇಟ್ಟಿದ್ದ ನನ್ನ ಕೈನ ಕಿತ್ತು ಹಾಕಿ ಜೋರಾಗಿ ಕಿರುಚಿಕೆ ಶುರು ಮಾಡ್ತ್, `ನಿನ್ನ ಅಜ್ಜಿ ಬಜಾರಿ. ನಂಗೆನೇ ಬಜಾರಿತಾ ಹೇಳಿಯಾ...ಮಾಡ್ನೆ ಇರ್ ನಿಂಗೆ'ತಾ ಹೇಳಿಕಂಡ್, ನಾಯಿ ಓಡಿಸಿಕೆತಾ ಅವಳಮ್ಮ ಅಲ್ಲಿಟ್ಟಿದ್ದ ದೊಣ್ಣೆ ಹಿಡ್ಕಂಡ್ ಓಡಿಸಿಕಂಡ್ ಬಾತ್... ಅವ್ಳ ಕೈಗೆ ಸಿಕ್ಕದೆ ನಾ ಓಡಿದರೂ, ಪೊಲೀಸ್ ಟೀಂ ಕೈಗೆ ನಾವಿಬ್ರೂ ನಾವಾಗೇ ಸಿಕ್ಕಿಹಾಕ್ಕೊಂಡೊ. ಮತ್ತೆ ನಮ್ಮ ನಮ್ಮಲ್ಲೇ ಜಗಳ. `ನಿನ್ನಿಂದಾಗೇ ಸಿಕ್ಕಿ ಹಾಕ್ಕಂಡದ್... ನಿನ್ನಿಂದಾಗೇ ಸಿಕ್ಕಿ ಹಾಕ್ಕಂಡದ್...'
`ಅವ್ಳು' ಮತ್ತೆ ನಾನ್ ಒಂದೇ ಕ್ಲಾಸ್. ಬಹುಶಃ ನಾಲ್ಕನೇ ಕ್ಲಾಸ್ಲಿ ಇರ್ಕಾಕನ ಕಂಡದೆ, ಅವಳಪ್ಪ ಟ್ರಾನ್ಸ್ಫರ್ ಆಗಿ ನಮ್ಮೂರಿಗೆ ಬಂದಿತ್ತ್. ನಮ್ಮ ಮನೆ ಹಿಂದೆನೇ ಅವೂ ಮನೆ ಮಾಡಿದ್ದೊ. ಲಾರಿಂದ ಸಾಮಾನು ಇಳಿಸಿಕಾಕನ ನಾ ನಮ್ಮ ಮನೆ ಕಾಂಪೌಂಡ್ ಮೇಲೆ ಕುದ್ದ್ಕಂಡ್ ನೋಡ್ತಿದ್ದೆ. ಸ್ವಲ್ಪ ಹೊತ್ಲೇ ಅವ್ಳ ಅಮ್ಮ, ಅಕ್ಕ ಇನ್ಯಾರ್ಯಾರೋ ಒಂದು ಜೀಪ್ಲಿ ಬಂದೊ. `ಅವ್ಳು' ನನ್ನ ಕ್ಲಾಸ್ತಾ ಆಗ ನಂಗೆ ಗೊತ್ತಿತ್ಲೆ. ಆದ್ರೆ ಮಾರನೇ ದಿನನೇ ಅವ್ಳನ್ನ ನನ್ನ ಸ್ಕೂಲಿಗೇ ಸೇರ್ಸಿದೋ. ಆಗ ಶಾಲೆ ಶುರುವಾಗಿ ತುಂಬಾ ದಿನ ಆಗಿತ್ತ್. ಎಲ್ಲಾ ಸಬ್ಜೆಕ್ಟ್ನ ಎರಡೆರಡು, ಮೂರು ಮೂರು ಪಾಠಗ ಮುಗ್ದಿದ್ದೊ. ಹಂಗೆತೇಳಿ ಹೊಸ ಸ್ಟುಡೆಂಟ್ಗೆ ಮತ್ತೆ ಪಾಠ ಮಾಡಿಕೆ ಆಲೆಲ.. ಅದ್ಕೆ ಕ್ಲಾಸ್ಲಿ ತುಂಬಾ ಹುಷಾರ್ನ ಹೈದ ಆಗಿದ್ದ ನನ್ನ ಹತ್ರನೇ ಅವ್ಳನ್ನ, ಕಾಮಿನಿ ಟೀಚರ್ ಕೂರ್ಸಿದೊ. ಅಂದ್ನ ವರೆಗೆ ಆಗಿದ್ದ ಪಾಠಗಳ್ನೆಲ್ಲಾ ಅವ್ಳಿಗೆ ಹೇಳಿಕೊಡ್ದು ನನ್ನ ಜವಾಬ್ದಾರಿ ಆಗಿತ್ತ್. ಹಂಗೆ ನನ್ನ ಮತ್ತೆ `ಅವ್ಳ' ಫ್ರೆಂಡ್ಶಿಪ್ ಶುರುವಾತ್. ಅವ್ಳ ಮನೆಗೆ ನಾನು ಹೋದು, ನನ್ನ ಮನೆಗೆ ಅವ್ಳು ಬಾದು ಇದೆಲ್ಲಾ ಅಂದ್ಂದನೇ ಶುರುವಾತ್.
ಫ್ರೆಂಡ್ಶಿಪ್ ಶುರುವಾದ ದಿನಂದನೇ ನಮ್ಮ ಮಧ್ಯೆ ಜಗಳನೂ ನಡೀತಿತ್ತ್. ಆದ್ರೆ ಅದೆಲ್ಲಾ ಸ್ವಲ್ಪ ಹೊತ್ತು ಮಾತ್ರ. ಹೈಸ್ಕೂಲ್ ಮೆಟ್ಟಿಲು ಹತ್ತಿರೂ ನಮ್ಮಿಬ್ರ ಫ್ರೆಂಡ್ಶಿಪ್ ಹಂಗೆನೇ ಇತ್ತ್. ಸ್ಕೂಲ್ ಇದ್ದದ್ ನಮ್ಮ ಮನೇಂದ ಮೂರು ಕಿಲೋಮೀಟರ್ ದೂರಲಿ. ನಾವಿಬ್ಬರೂ ಒಟ್ಟಿಗೆ ನಡ್ಕಂಡೇ ಹೋಗಿ ಬರ್ತಿದ್ದೊ. ನಮ್ಮಿಬ್ಬರ ಬುತ್ತಿ ಹಂಚಿಕಂಡ್ ತಿಂತಿದ್ದೊ. ಒಟ್ಟಿಗೆ ಕುದ್ದ್ಕಂಡ್ ಓದ್ತಿದ್ದೊ. ಹಿಂಗಿರ್ಕಾಕನ ಯಾರೋ ಒಬ್ಬ ಪುಣ್ಯಾತ್ಮ ಒಂದು ದಿನ ಕ್ಲಾಸ್ನ ಬೋರ್ಡ್ ಮೇಲೆ ಅವಳ ಮತ್ತೆ ನನ್ನ ಹೆಸ್ರು ಬರ್ದು ಮಧ್ಯಲಿ ಲವ್ಸಿಂಬಲ್ ಹಾಕಿಬಿಟ್ಟಿತ್ತ್. ಅದ್ನ ನೋಡಿ `ಅವ್ಳು' ನಗಾಡಿಕಂಡ್ ಸುಮ್ಮನಾಗಿಬಿಟ್ಟತ್. ಆದ್ರೆ ನಂಗೆ ಹೆದ್ರಿಕೆ.. ಮನೇಲಿ ಗೊತ್ತಾದ್ರೆ ಏನಪ್ಪಾ ಕಥೆ ? ಹೇಳಿ ಕೇಳಿ ಅವಳಪ್ಪ ಪೊಲೀಸ್. ನಾ ಯಾವತ್ತೂ ಲವ್ ಬಗ್ಗೆ ಯೋಚಿಸದಿದ್ದರೂ, ಬೋರ್ಡ್ ಮೇಲೆ ನಮ್ಮ ಹೆಸ್ರು ಕೆತ್ತಿದವನ ಮೇಲೆ ಸಿಟ್ಟು ಬಾತ್. ಅಂವ ಕೈಗೆ ಸಿಕ್ಕಿದ್ದರೆ, ದೊಡ್ಡ ಲಡಾಯಿ ಆಗಿಬಿಡ್ತಿತ್ತೋ ಏನೋ...
ಆ ಘಟನೆ ನಡ್ದ ಅಂದ್ ಕೂಡ ನಾವಿಬ್ಬರು ಒಟ್ಟಿಗೆ ಮನೆ ಕಡೆ ಹೊರಟಿದ್ದೊ. ಸ್ವಲ್ಪ ದೂರ ಇಬ್ಬರೂ ಮಾತಾಡ್ತ್ಲೆ. ಐಬಿ ಹತ್ರ ಹೋಕಾಕನ ಅವಳೇ ಮೆಲ್ಲೆ ಶುರುಮಾಡ್ತ್... `ಹಂಗೆ ಇದ್ದರೆ ಎಷ್ಟು ಲಾಯ್ಕ ಅಲಾ...' ನಾ ಕೇಳ್ದೆ, `ಹೆಂಗೆ...?' ಅದಕ್ಕವ್ಳು... `ಅದೇ, ಬೋರ್ಡ್ ಮೇಲೆ ಯಾವನೋ ಒಬ್ಬ ಬರ್ದಿತ್ತಲ್ಲಾ ಹಂಗೆ...' `ಅವ್ಳು' ಹೇಳಿದ್ನ ಕೇಳಿ ನಂಗೆ ಏನು ಹೇಳೊಕೂತಾ ಗೊತ್ತಾತ್ಲೆ. ನಗಾಡಿಕಂಡ್ ಸುಮ್ನೆ ಆಗಿಬಿಟ್ಟೆ. ಆದ್ರೆ ಅಂದ್ಂದ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಇನ್ನೂ ಜಾಸ್ತಿ ಆತ್. ತುಂಬಾ ಪರ್ಸನಲ್ತೇಳುವಾ ವಿಷಯಗಳ್ನೂ ಹಂಚಿಕೊಳ್ತಿದ್ದೊ. ಆದ್ರೆ ಈ ಎಲ್ಲಾ ಖುಷಿ ಹೆಚ್ಚು ದಿನ ಇತ್ಲೆ. ಒಂದು ಭಾನುವಾರ `ಅವ್ಳು ' ಶಕ್ತಿಪೇಪರ್ ತಂದ್ ನನ್ನ ಮುಂದೆ ಹಿಡ್ತ್.
`ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಭಾರೀ ವಗರ್ಾವಣೆ' ತಾ ಇದ್ದ ಹೆಡ್ಡಿಂಗ್ ಕೆಳಗೆ ಅವಳಪ್ಪಂಗೆ ಟ್ರಾನ್ಸ್ಫರ್ ಆದ ವಿಷಯನೂ ಇತ್ತ್. ನೋಡ್ತಿದ್ದಂಗೆ ನನ್ನ ಕಣ್ಣಲ್ಲಿ ನೀರು ಬಂದ್ ಅಕ್ಷರಗಳೇ ಕಾಣದಂಗೆ ಆತ್...ಹಂಗಾಗಿ ಎಲ್ಲಿಗೆ ಟ್ರಾನ್ಸ್ಫರ್ ಆಗ್ಯುಟ್ಟುತಾ ಕೂಡ ಗೊತ್ತಾತ್ಲೆ. ತಲೆ ಎತ್ತಿ ನೋಡಿರೆ ಅವಳ ಕಣ್ಣಲ್ಲೂ ನೀರು. ಏನೂ ಮಾತಾಡ್ತ್ಲೇ. ಗಟ್ಟಿಯಾಗಿ ನನ್ನ ಕೈನ ಹಿಡ್ಕಂಡ್ ಅವಳ ಕಣ್ಣಿಗೆ ಒತ್ತಿಕಂಡತ್... ಮತ್ತೆ ತಿರುಗಿನೂ ನೋಡದೆ ಹೊರಟೋತ್. ನನ್ನ ಮುಂಗೈ ಮೇಲೆ ಇದ್ದ ಅವ್ಳ ಕಣ್ಣೀರ ಹನಿನಾ ಎಷ್ಟು ಹೊತ್ತು ಹಂಗೆನೇ ಹಿಡ್ಕಂಡ್ ನೋಡ್ತಿದ್ದೆತಾ ನಂಗೆನೇ ಗೊತ್ತಾತ್ಲೆ. ಅವ್ಳ ಹೆಸ್ರೂ `ಹನೀ...'

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment