Tuesday, 24 July 2012

ಚಿನ್ನದ ಫ್ರೇಮೊಳಗೆ ಸಿಹಿಸಿಹಿ ನೆನಪುಗ !



        ಆಫೀಸ್ ಮುಗ್ಸಿ ಮನೆಗೆ ಹೊರಟಿದ್ದೆ. ಫೋರಂಮಾಲ್ನ ಆ ಪಾನಿಪೂರಿ ಬುಟ್ಟಿ ಎದ್ರು ಒಂದು ಪರಿಚಯದ ಮುಖ ಕಂಡ ಹಾಗೆ ಆತ್. ಜೊತೆಲೊಂದು ಪಾಪು. ಅದ್ಕೆ ನಾಲ್ಕೋ ಐದೋ ವರ್ಷ ಇರೋಕೇನೋ. ಎಡಕೈಲಿ ಪಾನಿಪೂರಿ ತಟ್ಟೆ ಹಿಡ್ಕಂಡೇ ಆ ಪಾಪು, ಅಲ್ಲೇ ಪಕ್ಕಲಿ ಉಪ್ಪು-ಮೆಣಸು ಪೂಜಿ ಮಾರ್ತಿದ್ದ ಗಿಳಿ ಮಾವಿನಕಾಯಿ ಕಡೆಗೆ ಕೈ ತೋರ್ಸ್ತಿತ್ತ್. ಆ ನನ್ನ ಪರಿಚಯದ ಮುಖ ಪಾಪುನ ಸಮಾಧಾನ ಮಾಡಿಕಂಡ್ ಪಾನಿಪೂರಿ ತಿನ್ನಿಸಿಕೆ ಟ್ರೈ ಮಾಡ್ತಿತ್ತ್. ಅದ್ ನಂಗೆ ಗೊತ್ತಿರ್ವ ಪಾರ್ಟಿ ಹೌದೋ, ಅಲ್ವೋತಾ ನೋಡಿಯೇ ಬಿಡೋಕೂತಾ ಮನಸ್ಸಾತ್. ಆದ್ರೆ ಸಣ್ಣ ಹೆದ್ರಿಕೆ. ಹೋಗಿ ಮಾತಾಡಿಸಿಕಾಕನ ನನ್ನ ಊಹೆ ತಪ್ಪಾಗಿಬಿಟ್ಟಿದ್ದರೆ... ಸ್ವಲ್ಪ ಹೊತ್ತು ದೂರಲೇ ನಿಂತ್ ನೋಡ್ನೋತೇಳಿ, ಗಿಳಿಮಾವಿನಕಾಯಿ ಮಾರ್ತಿದ್ದ ಸೈಕಲ್ ಪಕ್ಕನೇ ಇದ್ದ ಅಂಗಡೀಂದ ಎಳೆನೀರ್ ತಕ್ಕಂಡ್ ನಿಧಾನಕ್ಕೆ ಕುಡಿಯಕ್ಕೆ ಶುರುಮಾಡ್ದೆ. ಅಷ್ಟೊತ್ತಿಗೆ ಮಾವಿನಕಾಯಿ ಬೇಕೂತಾ ಆ ಪಾಪು ಮರಡಿಕೆ ಶುರುಮಾಡಿತ್ತ್. ನಾನು ಯಾರ್ನ ಗುರುತುಹಿಡಿಯೊಕೂತಾ ನಿಂತಿದ್ದೆನೋ ಆ ಮುಖ ಪಾಪುನ ಕರ್ಕಂಡ್ ಸೀದಾ ಮಾವಿನಕಾಯಿ ಮಾರುವಲ್ಲಿಗೇ ಬಂದ್ಬಿಡ್ತ್. ನನ್ನ ಊಹೆ ಸರಿಯಾಗಿತ್ತ್. ಪಾಪು ಜೊತೆ ಇದ್ದವ್ಳು ಸುಮ !  

ಅದೊಂದು ಸುಂದರ ನೆನಪು. ಕಾಲೇಜು ದಿನಗಳ ಆ ಸಿಹಿ ಸಿಹಿ ನೆನಪುಗಳನ್ನೆಲ್ಲಾ ದೊಡ್ಡ ಗಂಟುಕಟ್ಟಿ, ಅದಕ್ಕೊಂದು ಚಿನ್ನದ ಫ್ರೇಂ ಹಾಕಿ, ದಪ್ಪ ಗಾಜುನ ಹಿಂದೆ ಅಡಗಿಸಿಟ್ಟ್, ಪುಟ್ಟ ಹೃದಯದೊಳಗೆ ಮಡಗಿಕ್ಕಂಡಿದ್ದೆ. ಯಾವಾಗಲಾದ್ರೊಮ್ಮೆ ಗ್ಯಾನ ಬಾಕಾಕನ, ಆ ಸಿಹಿ ನೆನಪುಗಳ ಗಂಟಿದ್ದ ಫ್ರೇಂನ ಕೈಲಿ ಹಿಡ್ಕಂಡ್ ಹಿಂದಿನ ದಿನಗಳಿಗೆ ಓಡಿ ಹೋಗ್ತಿದ್ದೆ. ಆಗ ಕಣ್ಣ್ಂದ ಸುರೀತ್ತಿದ್ದ ಎರಡು ಹನಿ ನೀರ್ಂದ ಆ ಗಾಜುನ ಉಜ್ಜಿ ಫಳ ಫಳತಾ ಮಾಡಿ ಮತ್ತೆ ಹೃದಯದೊಳಗೆ ಸೇರಿಸಿಕಣ್ತಿದ್ದೆ. ಇದ್ ನಂಗೆ ಸುಮಾ ಕೊಟ್ಟಿದ್ದ ಗಿಫ್ಟ್ !
ಅದ್ ಡಿಗ್ರಿ ಫೈನಲ್ ಇಯರ್. ನಾವು ಫ್ರೆಂಡ್ಸೆಲ್ಲಾ ಸೇರಕಂಡ್ ಚಿಕ್ಕ ಒಂದು ಟೂರ್ ಮಾಡಿದ್ದೊ. ನಮ್ಜೊತೆ ಸೆಕೆಂಡ್ ಇಯರ್ನ ಫ್ರೆಂಡ್ಸ್ಗ ಕೂಡ ಬಂದಿದ್ದೊ. ಆ ಗುಂಪ್ಲಿ ಸುಮನೂ ಇತ್ತ್. ಎರಡು ವರ್ಷಂದ ನಾ ಗಮನಿಸಿದ್ದ ಹಂಗೆ ತುಂಬಾ ಒಳ್ಳೇ ಗೂಡೆ. ಅಂಥ ಕಲರ್ ಏನೂ ಇತ್ಲೆ. ಆದ್ರೆ ಲಕ್ಷಣವಾಗಿ ಇತ್ತ್. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸು ಲಾಯ್ಕ ಇತ್ತ್. ನಾ ಕಾಲೇಜು ಕಲ್ಚರಲ್ ಸೆಕ್ರೆಟರಿ ಆಗಿದ್ದರಿಂದ ಎಲ್ಲಾ ಮಕ್ಕಳ ಜೊತೆ ಒಡನಾಟ ಇಟ್ಕಂಡಿದ್ದೆ. ಹಂಗಾಗಿ ಯಾರ್ಯಾರು ಹೆಂಗೆತೇಳುವ ಸಣ್ಣಮಟ್ಟಿಗಿನ ಜ್ಞಾನ ನಂಗಿತ್ತ್. ಸುಮಾ ಎಲ್ಲಾ ಸ್ಪರ್ಧೆಗಳಲ್ಲಿ ಕಾಣ್ಸಿಕಳ್ತಿದ್ರಿಂದ, ಅವ್ಳ ಬಗ್ಗೆ ನಾ ತಿಳ್ಕಂಡಿದ್ದೆ.
ನಮ್ಮ ಟೂರ್ ಉಡುಪಿ ತಲುಪಿಕಾಕನ ಸಾಯಂಕಾಲ ಆಗಿಬಿಟ್ಟಿತ್ತ್. ನಾವು ಸೀದಾ ಮಲ್ಪೆ ಬೀಚ್ಗೆ ಹೋದೊ. ಆಗಷ್ಟೇ ಸೂರ್ಯ ಮುಳುಗಿಕೆ ಶುರುವಾಗಿತ್ತ್. ಎಲ್ಲವೂ ಸಮುದ್ರಕ್ಕೆ ಇಳ್ದ್ ಆಟ ಆಡ್ತಿದ್ದರೆ, ನಾ ಅಲ್ಲೇ ಕಲ್ಲುಬೆಂಚು ಮೇಲೆ ಕುದ್ದ್ಕಂಡ್ ಸೂರ್ಯ ಮುಳುಗುದನ್ನೇ ನೋಡ್ತಿದ್ದೆ. ಆಕಾಶ ಮತ್ತೆ ಸಮುದ್ರ ಮುಟ್ಟುವಂಗೆ ಕಾಣುವ ದೊಡ್ಡ ಚಂದ್ರ ಬರೀ ಅರ್ಧ ಗಂಟೆಲಿ ಸಮುದ್ರದೊಳಕ್ಕೆ ಇಳ್ದ್ಬಿಟ್ಟಿತ್ತ್. ಅಷ್ಟೂ ಹೊತ್ತು ನಂಗೆ ಗೊತ್ತಿಲ್ಲದೆ ಸುಮ ನನ್ನ ಪಕ್ಕದಲ್ಲೇ ಕುದ್ದ್ಕಂಡ್ ನನ್ನಂಗೆ ಸೂರ್ಯಾಸ್ತಮಾನ ನೋಡಿತ್ತ್. `ಪ್ರಕೃತಿ ಆಟ ಎಷ್ಟು ಲಾಯ್ಕ ಅಲಾ... ಸೂರ್ಯ ಮುಳುಗಿಕಾಕನ ಆಕಾಶಲಿ ಹರಡುವ ಬಣ್ಣದ ಓಕುಳಿನ ಯಾವ ಕಲಾವಿದ ಬಿಡಿಸಿಕೆ ಆದೆ...?'ತಾ ಅವ್ಳು ನನ್ನ ಕಿವಿ ಹತ್ರ ಹೇಳಿಕಾಕನನೇ, ನನ್ನ ಪಕ್ಕಲೇ ಸುಮ ಅಷ್ಟೊತ್ತು ಕುದ್ದಿತ್ತ್ತಾ ಗೊತ್ತಾದ್.
ಮಾರನೇ ಉಡುಪಿ, ಕೊಲ್ಲೂರು ದೇವಸ್ಥಾನಗಳಿಗೆ ಸುತ್ತಾಡಿ ಸಂಜೆ ಹೊತ್ತು ಆಗುಂಬೆ ಸೇರಿಕೊಂಡೊ. ಅಲ್ಲೂ ಅದೇ  ಸೂರ್ಯಾಸ್ತಮಾನ  ನೋಡುವ ಅವಕಾಶ. ಜೊತೇಲಿ ಮತ್ತೆ ಸುಮ ! ಯಾಕೋ ನಂಗೆ `ಆಗುಂಬೆಯಾ... ಪ್ರೇಮಸಂಜೆಯಾ... ಮರೆಯಲಾರೆ ನಾನು...' ಹಾಡು ನೆನಪಾತ್. ಸುಮಾ ಕೂಡ ಅದೇ ಹಾಡ್ನ ನಂಗಷ್ಟೇ ಕೇಳುವಂಗೆ ಹೇಳ್ತಿತ್ತ್ ! ಬಹುಶಃ ನಮ್ಮ ಲವ್ ಅಂದೇ ಶುರುವಾತ್ ಕಂಡದೆ ! ನಾವಿದ್ದ ಬಸ್ ಆಗುಂಬೆಂದ ಶೃಂಗೇರಿ ಕಡೆ ಹೊರಡಿಕಾಕನ ಸುಮಾ ಬಂದ್ ನನ್ನ ಪಕ್ಕದಲ್ಲೇ ಕುದ್ದ್ಕಣ್ತ್. ಅಲ್ಲಿ ಹಿಡ್ಕಂಡ ನನ್ನ ಕೈನ ಅವ್ಳು ಬಿಟ್ಟದ್ ಶೃಂಗೇರಿ ತಲುಪಿದ ಮೇಲೆನೇ...ಇಬ್ಬರಲ್ಲೂ ಮಾತಿಲ್ಲೆ, ಕಥೆಯಿಲ್ಲೆ.
ಟೂರ್ ಮುಗ್ಸಿ ಬಂದ ಮೇಲೆ ನಮ್ಮಿಬ್ಬರಲ್ಲಿ ಏನೋ ಒಂಥರ ಖುಷಿಯ ಬದಲಾವಣೆ. ಒಂದು ದಿನನೂ ಬಾಯಿಬಿಟ್ಟು `ಐ ಲವ್ ಯೂ' ತಾ ಹೇಳಿಕಣದಿದ್ದರೂ, ನಾವಿಬ್ಬರು ಜನುಮದ ಜೋಡಿಗತೇಳುವ ಫೀಲಿಂಗ್. ಒಂದು ದಿನ ಮಾತಾಡ್ತ್ಲೆತೇಳಿರೆ ಏನೋ ಕಳ್ಕಂಡಂಗೆ ನೋವು. ಭಾನುವಾರ ಬಂದರೆ ಇಬ್ಬರಿಗೂ ಬೇಜಾರ್. ಅಷ್ಟೊತ್ತಿಗೆ ಕಾಲೇಜು ತುಂಬಾ ನಮ್ಮ ವಿಷಯ ಹರಡಿಬಿಟ್ಟಿತ್ತ್. ಲೆಕ್ಚರರ್ಗಳಿಗೂ ವಿಷಯ ಗೊತ್ತಾತ್. ಪಾಠಲಿ ನಾವಿಬ್ಬರೂ ಹುಷಾರ್ ಇದ್ದದ್ದರಿಂದ `ಫ್ಯೂಚರ್ ಕಡೆ ಗಮನ ಕೊಡಿ'ತಾ ಮಾತ್ರ ಹೇಳಿ ಸುಮ್ಮನೆ ಆದೋ. ಇನ್ನ್ ನಮ್ಮನ್ನ ಹಿಡಿಯವು ಯಾರೂ ಇತ್ಲೆ. ಸದ್ಯ... ನಮ್ಮ ಮನೆ ವರೆಗೆ ಈ ವಿಷಯ ತಲುಪಿತ್ಲೆ.
ಅಂತೂ ಎಕ್ಸಾಂ ಬಾತ್. ನಾನ್ ಪಾಸ್ ಮಾಡಿಕಂಡ್ ಎಂಕಾಂ ಮಾಡಿಕೆ ಮೈಸೂರು ಬಸ್ ಹತ್ತಿದೆ. ಸುಮಾ ಅದೇ ಕಾಲೇಜ್ಲಿ ಫೈನಲ್ ಇಯರ್. ಹಳೆ ನೆನಪುಗಳ್ನ ಹಸಿರಾಗಿ ಇಟ್ಕಂಡ್ ಇಬ್ಬರೂ ಲಾಯ್ಕ ಓದ್ತಿದ್ದೊ. ದಿನಾ ಫೋನ್ ಕಾಂಟ್ಯಾಕ್ಟ್ ಇತ್ತ್. ಅದೊಂದು ದಿನ ನಾ ಸುಮಾಂಗೆ ಕಾಲ್ ಮಾಡಿರೆ ಇದ್ದಕ್ಕಿದ್ದಂಗೆ ಸ್ವಿಚ್ ಆಫ್ ! ಅವ್ಳು ಓದುತ್ತಿರ್ದೇನೋತಾ ಗ್ಯಾನ ಮಾಡಿಕಂಡ್ ನಾ ಸುಮ್ಮನಾದೆ. ಅಂದ್ ಅವಳಿಂದನೂ ಕಾಲ್ ಬಾತ್ಲೆ. ಮಾರನೆ ದಿನ ಮತ್ತೆ ನಾ ಟ್ರೈ ಮಾಡ್ದೆ. ಆಗಲೂ ಸ್ವಿಚ್ ಆಫ್. ಮಧ್ಯಾಹ್ನ ಹೊತ್ತಿಗೆ ಫ್ರೆಂಡ್ ಕಾಲ್ ಮಾಡಿ ಹೇಳ್ತ್...`ಸುಮಾಂಗೆ ಎಂಗೇಜ್ಮೆಂಟ್ ಆಯ್ತು. ಹುಡುಗ ಬೆಂಗಳೂರಿನಲ್ಲಿ ಇರೋದು. ಎಂಜಿನೀಯರ್ ಅಂತೆ...' ನಂಗೆ ಆಕಾಶ ತಲೆಮೇಲೆ ಬಿದ್ದಂಗೆ ಆತ್. ಸೀದಾ ಸುಮಾ ಮನೆಗೆ ಹೋಗಿ `ಎಂಥಕ್ಕೆ ಹೀಗೆ ಮಾಡ್ದಾ' ತಾ ಕೇಳುನಾತಾ ಯೋಚನೆ ಮಾಡ್ದೆ. ಆದ್ರೆ ಯಾಕೋ ನಂಗೆ ಅದ್ ಸರಿಕಾಣ್ತ್ಲೆ. ಅಂದ್ ಕ್ಲಾಸ್ಲಿ ಕೂರಿಕೆ ಮನಸ್ಸಾಗದೆ ಕುಕ್ಕರಹಳ್ಳಿ ಕೆರೆ ಕಡೆ ಹೊರಟೆ. ಆ ಕೆರೆ ಏರಿ ಮೇಲೆ ಎಷ್ಟು ದೂರ ನಡ್ದೊಳೆತಾನೇ ನಂಗೆ ಗೊತ್ತಾತ್ಲೆ. ಸುಸ್ತಾಗಿ ಒಂದು ಕಡೆ ಬಿದ್ದುಬಿಟ್ಟಿದ್ದೆ. ಬೆಳಗ್ಗೆ ನೋಡಿಕಾಕನ ಆಸ್ಪತ್ರೇಲಿ ಇದ್ದೆ.
ಸುಮಾ ನಂಗೆ ಮೋಸ ಮಾಡ್ತಾ....? ಗೊತ್ಲೆ... ಸಿಹಿ ಸಿಹಿ ನೆನಪುಗಳನ್ನಂತೂ ಕೊಟ್ಟಿತ್ತ್. ಅದನ್ನೇ ನಾ ನನ್ನ ಎದೇಲಿ ಬೆಚ್ಚನೆ ಇಟ್ಟ್ಕಂಡಿದ್ದದ್. ಅದೆಲ್ಲಾ ಆಗಿ ಸುಮಾರು ಆರು ವರ್ಷ ಕಳ್ದಿರ್ದು. ಈಗ ನನ್ನ ಮುಂದೆ ಮತ್ತೆ ಸುಮಾ... ಜೊತೆಲೊಂದು ಪಾಪು! ನಾ ಅವಳ್ನ ಮಾತಾಡಿಸೋಕಾ ?


- ಸುನಿಲ್ ಪೊನ್ನೇಟಿ
arebhase@gmail.com

1 comment:

  1. Yenu aagadange mathadsoku cool aagi... urdade aagaa..

    ReplyDelete