ಬೆಳಗ್ಗೆ ಎದ್ದರೆ ಮತ್ತೆ ಅದೇ ಹಳೇ ಕಥೆ. ಮೂಗುನೋವು ತಲೆವರೆಗೆ ಹರಡಿತ್ತ್. ಅಷ್ಟೊತ್ತಿಗೆ ಮೇಲೆ ಮನೆ ನಂದ ಒಂದು ಐಡಿಯಾ ಕೊಟ್ಟತ್.`ಒಂದೆರಡು ಹನಿ ಆರ್ಮಿ ರಮ್ ಮೂಗೊಳಗೆ ಹಾಕಿಕ್ಕ. ಮತ್ತೊಂದು ಸಿಕ್ಸ್ಟಿ ಹೊಡ್ದ್ ಮಲಗಿಬಿಡ್ ಎಲ್ಲಾ ಸರಿ ಹೋದೆ...' ಚೋಮುಣಿ ನಂದ ಹೇಳ್ದಂಗೆನೇ ಮಾಡ್ತ್. ಆದ್ರೆ ಸಿಕ್ಸ್ಟಿ ಬದಲಿಗೆ ನೈನ್ಟಿ ಸುರ್ಕಂಡ್ ಕಂಬಳಿ ಒಳಗೆ ಸೇರಿಕಂಡತ್. ಹಿಂಗೆ ಮಧ್ಯಾಹ್ನ ಮಲಗಿದಂವ ಎದ್ದದ್ ಸಾಯಂಕಾಲ 6 ಗಂಟೆಗೆ. ರಾತ್ರಿ ಇನ್ನೊಂದು ಪೆಗ್ ಏರಿಸೋಕುತಾ ಅನ್ನಿಸಿದ್ ಬಿಟ್ಟರೆ, ನಂದ ಕೊಟ್ಟ ಐಡಿಯಾಂದ ಯಾವುದೇ ಪ್ರಯೋಜನ ಆತ್ಲೆ.
ದಿನ ಕಳ್ದಂಗೆ ಚೋಮುಣಿಗೆ ನೋವು ಜಾಸ್ತಿ ಆಗ್ತಿತ್ತೇ ಹೊರತೂ ಕಡಿಮೆ ಆತ್ಲೆ. ಕೊನೆಗೆ ಚೋಮುಣಿ ನಾಡ್ಮದ್ದು ಕೊಡ್ವ ಚೆನಿಯಪ್ಪಜ್ಜನ ಹತ್ರ ಹೋತ್.... ಅವು ಚೋಮುಣಿದ್ ನಾಡಿ ಹಿಡ್ದ್ ನೋಡ್ದೊ...ಮೂಗು ಹತ್ರ ಕೈ ಬೆರಳು ಹಿಡ್ದು ನೋಡ್ದೊ...ತಲೆಗೆ ಹಿಂದುಗಡೇಂದ ಎರಡೇಟು ಕೊಟ್ಟೊ... ಹಿಂಗೆ ಪೆಟ್ಟು ಬೀಳಿಕಾಕನ ಚೋಮುಣಿಗೆ ಮೂಗೊಳೊಗೆ ಕಟ್ಟಿಕಂಡಿದ್ದದ್ ಬಿಟ್ಟ ಹಂಗೆ ಆತ್... ಅದ್ನೇ ಇಂವ ಚೆನಿಯಪ್ಪಜ್ಜಂಗೂ ಹೇಳ್ತ್...ಅದ್ಕೆ ಚೆನಿಯಪ್ಪಜ್ಜ, `ವಾರದ ಹಿಂದೆ ನೀ ಸುಡುಕುಳಿಗೆ ಹೋಗಿದ್ದಾ ?' ತಾ ಕೇಳ್ತ್. ಚೋಮುಣಿ ಕಾಫಿತೋಟ ಕಪಾತ್ ಮಾಡಿಕಂಡ್ ಗೊಟ್ಟೆಹಣ್ಣು ತಿಂದು ಬರ್ನೋತೇಳಿ ಸುಡುಕುಳಿ ಹತ್ರ ಹೋಗಿತ್ತ್.... ಹಂಗಾಗಿ ಚೆನಿಯಪ್ಪಜ್ಜನ ಪ್ರಶ್ನೆಗೆ `ಹುಂ..'ತಾ ಉತ್ತರ ಕೊಟ್ಟತ್. `ಹಂಗಾರೆ ಇದ್ ನಿನ್ನ ಚಾಂಪಂದೇ ಕಿತಾಪತಿ...ಅಂವ ಬಾಯಿಗೆ ನೀರಲ್ಲದೆ ಸತ್ತದ್ ನೋಡ್...' ತಾ ಹೇಳ್ದ ಚೆನಿಯಪ್ಪಜ್ಜ, ಸ್ವಲ್ಪ ಭಸ್ಮ ತೆಗ್ದ್ ಬಾಯಿಲಿ ಮಣಮಣತಾ ಮಂತ್ರ ಹೇಳಿ ಮೂರು ಸಲ ಅದ್ಕೆ ಸೂ..ಸೂ..ಸೂ..ತಾ ಉರುಗಿ ಚೋಮುಣಿನ ಹಣೆಗೆ ಹಚ್ಚಿತ್....`ರಾತ್ರಿ ಮಲಗಿಕಾಕನ ಈ ಭಸ್ಮನ ಮೂಗೊಳೊಗೆ ಹಾಕ್ಕಂಡ್ ಮಲಗ್. ಬೆಳಗ್ಗೆ ನಿನ್ನ ಮೂಗೊಳಗೆಂದ ಚಾಂಪ ಎದ್ದು ಓಡಿ ಹೋಗಿದ್ದದೆ....'ತಾ ಹೇಳ್ತ್. ಚೆನಿಯಪ್ಪಜ್ಜಂಗೆ ಎಲೆ, ಅಡಿಕೆ ಮತ್ತೆ 11 ರೂಪಾಯಿ ಕೊಟ್ಟು ಚೋಮುಣಿ ವಾಪಸ್ ಬಾತ್. ಚೆನಿಯಪ್ಪಜ್ಜ ಹೇಳಿದಂಗೇ ಮಾಡಿ ಮಲಗಿತ್ !
ಏನೂ ಪ್ರಯೋಜನ ಆತ್ಲೆ. ಎಡಮೂಗುಲಿ ಉಸಿರಾಡಿಕೆನೇ ಕಷ್ಟ ಆಗ್ತಿತ್. ವಿಪರೀತ ತಲೆನೋವು. ಮೂಗುಂದ ರಕ್ತ ಬೇರೆ ಬಾಕೆ ಶುರುವಾತ್. ಇದ್ನ ನೋಡಿ ಒಬ್ಬ, ಕ್ಯಾನ್ಸರ್ ಇರೋಕೇನೋತಾ ಹೇಳ್ತ್. ಮತ್ತೊಬ್ಬ, ಏಡ್ಸ್ ಇದ್ದರೆ ಹಿಂಗೆ ಆದೆ ಗಡ. ಮೂಗುಲಿ ರಕ್ತ ಸೋರಿ ಸೋರಿಯೇ ಸತ್ತುಹೋದವೆಗಡತಾ ಹೆದರಿಸ್ತ್. ಚೋಮುಣಿಗೆ ತಲೆನೇ ಕೆಟ್ಟೊತ್. ಯಾರಿಗೂ ಹೇಳದೆ ಕೇಳದೆ ಮಡಿಕೇರಿ ಬಸ್ ಹತ್ತಿತ್. ಟೋಲ್ಗೇಟ್ಲಿ ಇಳ್ದವನೆ ಸೀದಾ ಮೂಗು ಡಾಕ್ಟರ್ ಹತ್ರ ಹೋತ್. ಇಂವ ಹೇಳಿದ್ದನ್ನೆಲ್ಲಾ ಕೇಳಿ ಡಾಕ್ಟರ್ಗೆ ಸಮಸ್ಯೆ ಎಂಥದ್ತಾ ಗೊತ್ತಾತ್. ಅವು ಇಂಥ ಸುಮಾರು ಕೇಸ್ಗಳ್ನ ನೋಡಿದ್ದೊ...ಒಂದ್ ಟಾರ್ಚ್ಂದ ಅವನ ಮೂಗೊಳಗೆ ಬೆಳಕ್ ಬಿಟ್ಟ್, ಅಲ್ಲಿ ಸಣ್ಣ ಇಕ್ಕಳ ಹಾಕಿದೊ... ಒಂದೈದು ನಿಮಿಷ ಹಂಗೆನೇ ಸರ್ಕಸ್ ಮಾಡಿ, ಇಕ್ಕಳ ತೆಗ್ದೊ....ಇಕ್ಕಳ ತುದೀಲಿ ಚೋಮುಣಿದ್ ಮಧ್ಯಬೆರಳಷ್ಟು ದಪ್ಪದ ಜಿಗಣೆ !
ವಾರದ ಹಿಂದೆ ತೋಡಲಿ ನೀರು ಕುಡಿಯಕಾಕನ ಇವಂಗೆ ಗೊತ್ತಿಲ್ಲದೆ ಮೂಗೊಳಗೆ ಸೇರಿಕಂಡಿತ್ತ್. ರಕ್ತ ಕುಡ್ದು ಕುಡ್ದು, ದೊಡ್ಡದಾಗಿ ಬೆಳ್ದ್ ಇವಂಗೆ ಉಪದ್ರ ಕೊಡಿಕೆ ಶುರುಮಾಡಿತ್ತ್...ಜೊತೆಗೆ ಹುಳಿನೀರು, ಮಿಲ್ಟ್ರಿ ರಮ್, ಚೆನಿಯಪ್ಪಜ್ಜ ಕೊಟ್ಟ ಭಸ್ಮ ಬೇರೆ... !
- `ಸುಮ'
arebhase@gmail.com
No comments:
Post a Comment