Thursday, 28 June 2012

ಹರಿಸೇವೆ


ತೋಟದಲ್ಲಿದ್ದ ಬಳ್ವ ಹಲಸು ಜೋರು ಮಳೆಗೆ ಹಣ್ಣಾಗಿ ಕರಗಿ ಹೋಗಿತ್ತ್. ತೋಟದ ತುಂಬಾ ಅದೇ ವಾಸನೆ. ಒಂಥರ ಹಣ್ಣು ಹಣ್ಣು ವಾಸನೆ. ಮರದ ಬುಡಲಿ ಆನೆ ಲದ್ದಿ. ಹಣ್ಣು ತಿಂಬಕೆ ಬಹಶಃ ಆನೆಗ ರಾತ್ರಿ ಬಂದಿದ್ದೊ ಕಂಡದೆ. ಹತ್ತು ಹನ್ನೆರಡು ವರ್ಷಗಳಿಂದ ತೋಟನ ಹಂಗೆ ಬಿಟ್ಟಿದ್ದರಿಂದ ಕಾಡು ಕೂಡಿ ಹೋಗಿತ್ತ್. ಕಾಫಿಗಿಡಗಳೆಲ್ಲಾ ಎಲ್ಲೆಲ್ಲೂ ಕೊಂಬೆ ಹರಡಿಕಂಡ್, ತಿಂಗಳು ಗಟ್ಟಲೆ ಕೂದಲು ಕತ್ತರಿಸದ ಮನುಷ್ಯನಂಗೆ ಕಾಣ್ತಿತ್ತ್. ಒಳ್ಳೇಮೆಣಸು ಬಳ್ಳಿ ಸಿಕ್ಕಸಿಕ್ಕಲ್ಲಿ ಹರಡಿಕಂಡಿತ್ತ್. ಇನ್ನ್ ಗುಂಡಿ ತೋಟಲ್ಲಿದ್ದ ಏಲಕ್ಕಿ ಗಿಡಗಳ್ನ ನೋಡುವಂಗೆನೇ ಇತ್ಲೆ....ಬೇಲಿನೂ ಅಷ್ಟೇ, ಹೆಸರಿಗೆ ಮಾತ್ರತೇಳುವಂಗೆ ಕಾಣ್ತಿತ್. ಅಕ್ಕಪಕ್ಕದ ಮನೆಗಳವು ದನಗಳ್ನ ಈ ತೋಟಕ್ಕೆ ಹೊಡ್ದು ಕಳಿಸ್ತಿದ್ದೊ. ಒಟ್ಟಾರೆ ಈಗಿರುವ ತೋಟನ ಸರಿಮಾಡುದಕ್ಕಿಂತ ಹೊಸ ತೋಟ ಮಾಡುದೇ ಉತ್ತಮತೇಳುವ ಪರಿಸ್ಥಿತಿ ಇತ್ತ್.   
ಕಾಳಪ್ಪಂಗೆ ಬೆಂಗಳೂರು ಜೀವನ ಸಾಕಾಗಿತ್ತ್. ಸುಮಾರು 15 ವರ್ಷ ಸಿಕ್ಕಸಿಕ್ಕಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲ್ಸ ಮಾಡ್ತ್. ಹಂಗೆತೇಳಿ ಅವಂಗೆ ಬೆಂಗಳೂರ್ಲಿ ಸೆಟ್ಲ್ ಆಕುತೇಳುವ ಆಸೆಯೇನೂ ಇತ್ಲೆ. ಆರ್ಮಿಂದ  ಬಂದ ಕೂಡ್ಲೇ, ತೋಟ ನೋಡ್ಕಂಡ್ ಮನೇಲೇ ಇರ್ವ ಯೋಚನೆ ಇತ್ತ್. ಹೆಣ್ಣ್ ಹೆಂಗಿದ್ದರೂ ಮಡಿಕೇರಿಲಿ ಟೀಚರ್. ಮಕ್ಕ ಅವಳ ಜೊತೆನೇ ಇದ್ಕಂಡ್ ಸ್ಕೂಲ್ಗೆ ಹೋದರೆ, ನಾ ತೋಟ ನೋಡಿಕಂಡ್ ಇರಕ್ ತೇಳುವ ಯೋಚನೆ ಕಾಳಪ್ಪಂದ್. ಆದ್ರೆ ಎಲ್ಲಾ ನಾವು ಯೋಚನೆ ಮಾಡಿಕಂಡಂಗೆ ಎಲ್ಲಿ ಆದೆ? ಕಾಳಪ್ಪ ಆರ್ಮಿಲಿ ಇರ್ವ ವರೆಗೆ ಎಲ್ಲವೂ ಲಾಯ್ಕ ಇತ್. ತಮ್ಮ ಚೋಮುಣಿಗೆ ಅಣ್ಣತೇಳಿರೆ ಪಂಚಪ್ರಾಣ. ಆರ್ಮಿಂದ ಬಾಕಾಕನ ಬೆಂಗಳೂರಿಗೇ ಜೀಪ್ ಮಾಡಿಕಂಡ್ ಹೋಗಿ ಕರ್ಕಂಡ್ ಬರ್ತಿತ್. ವಾಪಸ್ ಹೋಕಾಕನನೂ ಅಷ್ಟೇ ಜೀಪ್ ಮಾಡಿಕಂಡ್ ಬೆಂಗಳೂರಿಗೆ ಹೋಗಿ ಕಳ್ಸಿ ಬರ್ತಿತ್ತ್. ಇದೆಲ್ಲಾ ಕಾಳಪ್ಪ ಮಿಲಿಟರಿಂದ ರಿಟೈರ್ಡ್  ಆಗಿ ಬರ್ವ ವರೆಗೆ ಮಾತ್ರ.
15 ವರ್ಷ ಸರ್ವೀಸ್ ಮಾಡಿ ಕಾಳಪ್ಪ ರಿಟೈರ್ಡ್ ಆಗಿ ಮನೆಗೆ ಬಾತ್. ಅಲ್ಲೀವರೆಗೆ ಕಾಳಪ್ಪನ ಪಾಲಿಗೆ ಬಂದ ಜಾಗನ ಚೋಮುಣಿನೇ ನೋಡ್ಕಣ್ತಿತ್. ಇನ್ನು ಮುಂದೆ ನನ್ನ ಜಾಗನ ನಾನೇ ಮಾಡಿನೆತಾ ಕಾಳಪ್ಪ ಅವನ ತೋಟದ ಜವಾಬ್ದಾರಿ ತಕ್ಕಂಡತ್. ಎರಡು-ಮೂರು ತಿಂಗ ಎಲ್ಲಾ ಸರಿ ಇತ್ತ್. ಅಣ್ಣ, ತಮ್ಮ ಇಬ್ಬರು ಸೇರಿಕಂಡ್ ರಾತ್ರಿ ಹೊತ್ತ್ ದಿನಾ ಒಂದು ಬಾಟಲಿ ಮಿಲಿಟರಿ ರಮ್ ಖಾಲಿ ಮಾಡ್ತಿದ್ದೊ. ಊರುಲಿ ಎಲ್ಲಿ ಹಂದಿ ಹೊಡೆದ್ರೂ ಇಬ್ರೂ ತಂದ್ ಸಮಾ ತಿನ್ತಿದ್ದೊ. ಒಂದು ದಿನ ಚೋಮುಣಿನ ಕೋಳಿಗ ಕಾಳಪ್ಪ ಆಗಷ್ಟೇ ನೆಟ್ಟಿದ್ದ ಒಳ್ಳೆಮೆಣಸು ಬಳ್ಳಿನೆಲ್ಲಾ ಕೇರಿ ಹಾಕಿಬಿಟ್ಟೊ. `ಸ್ವಲ್ಪ ದಿನ ನಿನ್ನ ಕೋಳಿಗಳ್ನ ನನ್ನ ತೋಟ ಕಡೆ ಬಿಡ್ಬೇಡರಾ...'ತಾ ಕಾಳಪ್ಪ ಚೋಮುಣಿಗೆ ಹೇಳ್ದೇ ತಪ್ಪಾಗಿಬಿಡ್ತ್. ಚೋಮುಣಿ ಜಗಳಕ್ಕೆ ನಿಂತತ್. ಅಲ್ಲಿಂದ ಕಾಳಪ್ಪ ತಮ್ಮನ ಜೊತೆ ಮಾತಾಡುದುನ ಕೂಡ ನಿಲ್ಲಿಸಿಬಿಡ್ತ್. ಆದ್ರೆ ಚೋಮುಣಿ ಸುಮ್ಮನಾತ್ಲೆ. ದಿನಾ ಕುಡ್ದು ಬಂದ್ ಸಣ್ಣ ಸಣ್ಣ ವಿಷಯಗಳಿಗೂ ಜಗಳ ಆಡಿಕೆ ಶುರು ಮಾಡ್ತ್. ಒಂದು ದಿನ ಅಂತೂ ಕೋವಿ ತಕ್ಕಂಡ್ ಬಂದ್ ಗುಂಡು ಹೊಡ್ದೇಬಿಡ್ತ್. ಆದ್ರೆ ಚೋಮುಣಿ ಟ್ರಿಗರ್ ಅಮುಕ್ತಿದ್ದಂಗೆ ಅವನ ಹೆಣ್ಣ್ ಬಂದ್ ಕೋವಿನ ಮೇಲೆಕ್ಕೆ ನೂಕಿದ್ರಿಂದ ಗುಂಡು ಆಕಾಶ ಕಡೆ ಹೋತ್. ಇಲ್ಲದಿದ್ದರೆ ಅಂದ್ ಕಾಳಪ್ಪ ಹೆಣ ಆಗಿರ್ತಿತ್ತ್, ಚೋಮುಣಿ ಜೈಲು ಸೇರಿಕಣ್ತಿತ್.
ಈ ಗುಂಡು ಹೊಡೆದ ಘಟನೆ ಆದ್ಮೇಲೆ ಕಾಳಪ್ಪ ಮನೆ ಬಿಟ್ಟು ಬೆಂಗಳೂರು ಸೇರಿಕಣ್ತ್. ಸೆಕ್ಯೂರಿಟಿ ಏಜೆನ್ಸೀಲಿ ಕೆಲ್ಸ. ಏಜನ್ಸಿಯವು ಡ್ಯೂಟಿಗೆ ಹಾಕಿದ ಕಡೆ ಇಂವ ಕೆಲಸ ಮಾಡೊಕು. ಬ್ಯಾಂಕ್, ಫ್ಯಾಕ್ಟರಿ, ಸ್ಕೂಲ್, ಕಾಲೇಜು..ಹಿಂಗೆ ಸುಮಾರು ಕಡೆ ಕಾಳಪ್ಪ ಸೆಕ್ಯುರಿಟಿ ಆಗಿ ಕೆಲ್ಸ ಮಾಡ್ತ್. ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಮಡಿಕೇರಿಗೆ ಹೆಣ್ಣ್ ಹತ್ರ ಹೋಗಿ ಬರ್ತಿತ್ತ್. ಆದ್ರೆ ತೋಟದ ಕಡೆ ತಲೆ ಹಾಕಿತ್ತ್ಲೆ. ಹಿಂಗಿರ್ಕಾಕನ ಒಂದು ದಿನ ಎಟಿಎಂಗೆ ದುಡ್ಡು ತಕ್ಕಂಡ್ ಹೋಗುವ ವ್ಯಾನ್ಗೆ ಕಾಳಪ್ಪನ ಸೆಕ್ಯುರಿಟಿಯಾಗಿ ಅವನ ಏಜನ್ಸಿಯವು ಕಳಿಸಿದ್ದೊ. ಕೋರಮಂಗಲದ ಹತ್ರ ಇರ್ವ ಎಟಿಎಂ ಅದ್. ಅಷ್ಟಾಗಿ ಜನ ಓಡಾಡುದುಲ್ಲೆ ಅಲ್ಲಿ. ಇನ್ನೇನು ದುಡ್ಡು ತುಂಬಿದ ಪೆಟ್ಟಿಗೆನ ವ್ಯಾನ್ಂದ ಇಳ್ಸೊಕು, ಅಷ್ಟೊತ್ತಿಗೆ ಮೂರು ಜನ ಡಕಾಯಿತರು ನುಗ್ಗಿಬಂದೊ. ಅವ್ರ ಕೈಲಿ ಲಾಂಗ್ ಬಿಟ್ಟರೆ ಬೇರೆಂಥದ್ದೂ ಇತ್ಲೆ. ವ್ಯಾನ್ಲಿ ಕೂಡ ಇದ್ದದ್ ಮೂರೇ ಜನ. ಡ್ರೈವರ್, ಬ್ಯಾಂಕಿನಂವ ಮತ್ತೆ ಕಾಳಪ್ಪ. ಇನ್ನೇನು ಒಬ್ಬ ಡಕಾಯಿತ ಡ್ರೈವರ್ ಮೇಲೆ ಲಾಂಗ್ ಬೀಸೊಕು, ಕಾಳಪ್ಪ ಆ ಡಕಾಯಿತನ ಕಾಲಿಗೆ ಗುಂಡು ಹೊಡ್ತ್. ಅಷ್ಟೊತ್ತಿಗೆ ಹಿಂದೆಂದ ಇನ್ನೊಬ್ಬ ಡಕಾಯಿತ ಕಾಳಪ್ಪನ ಕುತ್ತಿಗೆಗೆ ಲಾಂಗ್ ಬೀಸಿಕೆ ನೋಡ್ತ್. ಆದ್ರೆ ಆಗ ಕಾಳಪ್ಪ ಕೈ ಅಡ್ಡ ಹಿಡ್ದದ್ರಿಂದ ಆ ಪೆಟ್ಟು ಕೈಗೆ ಬಿತ್ತ್. ಇಷ್ಟೆಲ್ಲಾ ಆಗ್ತಿದ್ದಂಗೆ ಜನ ಸೇರಿಕೆ ಶುರುವಾತ್. ಇಬ್ಬರು ಡಕಾಯಿತರು ಕಾಲಿಗೆ ಗುಂಡು ಬಿದ್ದವನನ್ನ ಅಲ್ಲಿಯೇ ಬಿಟ್ಟು ಪರಾರಿ ಆದೊ. ಕಾಳಪ್ಪನ ಸಾಹಸಂದ ಅಂವ ಕೆಲಸ ಮಾಡ್ತಿದ್ದ ಏಜೆನ್ಸಿ ಓನರ್ಗೆ ತುಂಬಾ ಖುಷಿ ಆತ್. ಪ್ರಮೋಶನ್ ಕೊಟ್ಟು ಕಾಳಪ್ಪನ ಆಫೀಸ್ಲೇ ಇಟ್ಟ್ಕಣ್ತ್.
ಅಂದ್ ಮಡಿಕೇರಿ ಗೌಡ ಸಮಾಜಲಿ ಕಾಳಪ್ಪನ ಅಕ್ಕನ ಮಗನ ಮದುವೆ. ಎಲ್ಲಾ ನೆಂಟರಿಷ್ಟರು ಬಂದಿದ್ದೊ. ಕಾಳಪ್ಪನೂ ಹೋಗಿತ್ತ್. ಚೋಮುಣಿನೂ ಬಂದಿತ್ತ್. ಸುಮಾರು ಹತ್ತು ವರ್ಷಂದ ಅವು ಇಬ್ಬರೂ ಒಬ್ಬರನ್ನೊಬ್ಬರು ನೋಡಿತ್ಲೆ. ಈಗ ಕಾಳಪ್ಪನ ನೋಡಿಕಾಕನ ಚೋಮುಣಿ ಕಣ್ಣಲಿ ನೀರು ಬಾತ್. ಸೀದಾ ಬಂದವನೇ ಕಾಳಪ್ಪನ ಕಾಲ್ ಹಿಡ್ಕಂಡತ್. `ನಾ ತಪ್ಪು ಮಾಡಿಬಿಟ್ಟೆ...ಇನ್ನು ನಿನ್ ಜೊತೆ ಜಗಳ ಆಡುಲೆ... ಮನೆಗೆ ಬಾ...ಪ್ಲೀಸ್...' ಅಣ್ಣನ ಮುಂದೆ ಮರ್ಟ್ಕಂಡ್ ಚೋಮುಣಿ ಹೇಳ್ತಿದ್ದರೆ, ಕಾಳಪ್ಪನ ಕಣ್ಣ್ಲಿ ಕೂಡ ನೀರು...ಅಷ್ಟೊತ್ತಿಗೆ ಕಾಳಪ್ಪಂಗೂ ಬೆಂಗಳೂರು ಸಾಕಾಗಿ ಹೋಗಿತ್ತ್. ವಾಪಸ್ ತೋಟಕ್ಕೆ ಬಾಕೆ ಮನಸ್ಸು ಮಾಡ್ತ್.
ಕಾಳಪ್ಪ ಹೊಸದಾಗಿ ತೋಟ ಮಾಡಿಕೆ ಇಳ್ತ್. ಚೋಮುಣಿ ಹಳೇದೆಲ್ಲಾ ಮರ್ತು ಅಣ್ಣನ ಸಹಾಯಕೆ ಬಾತ್. ಐದೇ ವರ್ಷಲಿ ಕಾಳಪ್ಪನ ಹೊಸ ತೋಟ ರೆಡಿ ಆತ್. ಅಣ್ಣ, ತಮ್ಮ ಇಬ್ಬರೂ ಸೇರಿಕಂಡ್ ಒಂದು ದೊಡ್ಡ ಮನೆನೂ ಕಟ್ಟಿದೋ. ಕಾಳಪ್ಪನ ಹೆಣ್ಣ್ಗೂ ರಿಟೈರ್ ಆಗುಟ್ಟು. ಅಣ್ಣ ಮತ್ತೆ ತಮ್ಮ ಇಬ್ಬರ ಮಕ್ಕಳೂ ಬೆಂಗಳೂರುಲಿ ಕೆಲಸಕ್ಕೆ ಸೆರಿಕೊಂಡೊಳೊ...ಈಗ ಹರಿಸೇವೆ ಮಾಡಿವೆ ಗಡ !
 - `ಸುಮಾ'

No comments:

Post a Comment