Tuesday, 31 January 2012

ನಿಜ...ಗೂಡೆಗಳ ಮನಸ್ಸೇ ಹಂಗೆ !


`ಐ ಲವ್ ಯೂ...' ಅನುನ ಪುಟ್ಟು ಕಣ್ಣುಗಳ್ನೇ ನೋಡ್ತಾ ಹರ್ಷ ಹೇಳ್ತಿದ್ರೆ, ಅವ್ಳ ಮುಖಲಿ ಒಂದು ಸಣ್ಣ ನಗೆ ! ಕೋರಮಂಗಲದ ಆ ಕಾಫಿ ಡೇ ಖಾಲಿ ಇರುದೇ ಅಪರೂಪ. ಅಂಥದ್ರಲ್ಲಿ ಇಂದ್ ಅವ್ರ ಅದ್ರಷ್ಟ ಲಾಯ್ಕ ಇತ್ತ್ತಾ ಕಂಡದೆ, ಗೋಡೆ ಬದಿಯ ಟೇಬಲ್ಲೇ ಸಿಕ್ಕಿತ್ತ್. ಸಂಜೆ ಹೊತ್ತು, ಹೊರಗೆ ಚಳಿ. ಒಳಗೆ ಎಸಿಯ ಕೋಟ. ಮಬ್ಬು ಬೆಳಕು. ಪ್ರೇಮಿಗಳ ಪಾಲಿಗೆ ಇದಕ್ಕಿಂತ ಒಳ್ಳೆ ವಾತಾವರಣ ಇನ್ನ್ ಎಂಥ ಬೇಕು? ಹೇಳ್ದಂಗೆ, ಹರ್ಷ ಮತ್ತೆ ಅನು ಒಬ್ಬರಿಗೊಬ್ಬರು ಮುಖಾಮುಖಿ ಭೇಟಿ ಆಗ್ತಿರ್ದು, ಇದೇ ಮೊದಲ ಸಲ...
            ಇವು ಇಬ್ಬರೂ ಕೊಡಗಿನವು. ಹರ್ಷ ಭಾಗಮಂಡಲದಂವ. ಅನು ಶನಿವಾರಸಂತೆ ಕಡೆಯ ಗೂಡೆ. ಓದಿದ್ದೆಲ್ಲಾ ಮಂಗಳೂರ್ಲಿ. ಪ್ರೈಮರಿ, ಹೈಸ್ಕೂಲ್ ಎಲ್ಲಾ ಬೇರೆ ಬೇರೆ ಸ್ಕೂಲ್ಗಳಲ್ಲಿ ಆದ್ರೂ ಕಾಲೇಜು ಮಾತ್ರ ಒಂದೇ. ಅನುಗೆ ಹರ್ಷ ಐದು ವರ್ಷ ಸೀನಿಯರ್. ಹಂಗಾಗಿ ಅವು ಆ ಟೈಂಲಿ ಪರಿಚಯ ಆಗಿತ್ಲೆ. ಫ್ರೆಂಡ್ಶಿಪ್ ಬೆಳ್ದದ್ ಫೇಸ್ಬುಕ್ಲಿ ! ಒಂದೇ ಕಾಲೇಜು... ಒಂದೇ ಜಿಲ್ಲೆ...ಒಂದೇ ಜಾತಿ..! ಗೆಳೆತನ, ಲವ್ ಆಗಿ ತಿರುಗಿಕೆ ಹೆಚ್ಚು ದಿನ ತಕಣ್ತ್ಲೆ... ಆದ್ರೂ ಹರ್ಷನ ಅನು ಸ್ವಲ್ಪ ದಿನ ಸರಿಯಾಗಿಯೇ ಆಟ ಆಡ್ಸಿತ್ತ್.                                                                                     ಹರ್ಷ ಎಂಜಿನೀಯರ್...ಫೇಸ್ಬುಕ್ಲಿ ಅನು ಹೆಸ್ರು ಕಾಣ್ಸಿದಾಗ, ಫ್ರೆಂಡ್ಸ್ ರಿಕ್ವೆಸ್ಟ್ ಕಳ್ಸಿತ್ತ್ ! ಆ ಕಡೆಂದ ರೆಸ್ಪಾನ್ಸ್ ಬಾಕೆ ಒಂದು ವಾರ ! ಇವನೇ ಮೊದ್ಲು `ಹಾಯ್...' ತಾ ಹೇಳ್ತ್... ಇಲ್ಲೂ ಅನು ತೋರ್ಸಿದ್ ನಿಧಾನ ಸ್ವಭಾವ ! ಹರ್ಷನ ಮೆಸೆಜ್ಗೆ ರೆಸ್ಪಾನ್ಸ್ ಮಾಡಿಕೆ ಒಂದು ಗಂಟೆ ತಕ್ಕಂಡಿತ್ತ್ ! ಅವ್ಳು ಅಕೌಂಟೆಂಟ್, ಬ್ಯುಸಿ ಇರುದೇನೋತಾ ತಿಳ್ಕಂಡ್ ಹರ್ಷ ಅವಂಗೆ ಅವ್ನೇ ಸಮಧಾನ ಮಾಡ್ಕಂಡತ್... ಹಿಂಗೆ ಬರೀ ಹಾಯ್ ನಿಂದ  ಶುರುವಾದ ಚಾಟಿಂಗ್ ಎಲ್ಲೆಲ್ಲೋ ಸುತ್ತಾಡಿ `ಐ ಲವ್ ಯೂ'ತಾ ಹೇಳುವಲ್ಲಿಗೆ ಬಂದು ತಲುಪಿ ಬಿಟ್ಟಿತ್ತ್. ಆದ್ರೂ ಹರ್ಷಂಗೆ, ಅನು ಅವ್ಳ ಫೋನ್ ನಂಬರ್ ಕೊಟ್ಟಿತ್ಲೆ ! ಬರೀ ಫೇಸ್ಬುಕ್ ಚಾಟಿಂಗ್ ! ಹಂಗೇ ಚಾಟ್ ಮಾಡಿ, ಮಾಡಿ, ಅನುನ ಕಾಫಿಡೇ ವರೆಗೆ ಕರ್ಕಂಡ್ ಬಾಕೆ ಹರ್ಷಂಗೆ ಸಾಕುಸಾಕಾಗಿತ್ತ್ !
`ಈಗ್ಲಾದ್ರೂ ನಿನ್ನ ನಂಬರ್ ಕೊಡ್ನೇ...' 
ಅನುನ ಪೊರ್ಲುನ ಮುಖ ನೋಡ್ತಾ ಹರ್ಷ ಕೇಳ್ತ್.... ಅದ್ಕೆ ಅನು,
`ಆತ್, ನನ್ನ ನಂಬರ್ ಕೊಟ್ಟನೆ.. ಆದ್ರೆ, ಕೂಡ್ಲೇ ನನ್ನ ಸಿಮ್ ಚೇಂಜ್ ಆದೆ...'
`ಯಾಕಪ್ಪಾ ಅನು, ಬರೀ ಫೇಸ್ಬುಕ್ ಚಾಟಿಂಗ್ ಸಾಕಾ? ಮೊಬೈಲ್ಲಿ ಮಾತಾಡ್ದು ಬೇಡನಾ?'
`ಅದ್ ಹಂಗೆ ಅಲ್ಲ ಹರ್ಷ, ನಿಂಗೊಂದು ಶಾಕಿಂಗ್ ನ್ಯೂಸ್ ಹೇಳ್ತೊಳೆ. ಇದು ಹೆಂಗೆ ನಮ್ಮ ಮೊದ್ಲ ಭೇಟಿನೋ ಹಂಗೆ ಕಡೇ ಭೇನೂ ಹೌದು'
`ಎಂಥ ಹೇಳ್ತೊಳ ಅನು, ನಂಗೊಂದೂ ಅರ್ಥ ಆಗ್ತಿಲ್ಲೆ...'
`ಹೌದು ಹರ್ಷ...ಮನೇಲಿ ನಂಗೆ ಬೇರೆ ಹೈದ ನೋಡ್ಯೊಳೊ...ಅಂವ ಅಮೆರಿಕಾಲಿ ಸಾಫ್ಟ್ವೇರ್ ಎಂಜಿನೀಯರ್...ನಾಳೆನೇ ನಮ್ಮ ಎಂಗೇಜ್ಮೆಂಟ್...' 
ಇದ್ನ ಕೇಳಿ ಹರ್ಷಂಗೆ ಏನು ಹೇಳೊಕೂತಾ ಗೊತ್ತಾತ್ಲೇ... ಕಣ್ಣು ತುಂಬಾ ನೀರ್ ತುಂಬಿಕಣ್ತ್... ಎದುರಿಗೆ ಇದ್ದದ್ದೆಲ್ಲಾ ಮಬ್ಬು ಮಬ್ಬಾಗಿ ಕಾಂಬಕೆ ಶುರುವಾತ್... ಎದುರು ಕುದ್ದಿದ್ದ ಅನು ಎದ್ದು ಹೋದೇ ಇಂವಂಗೇ ಗೊತ್ತಾತ್ಲೇ... ಅಮೆರಿಕಾದ ಟ್ವಿನ್ ಟವರ್ ಕುಸಿದು ಬಿದ್ದ ವೀಡಿಯೋ ಗೋಡೆ ಮೇಲೆ ನೇತು ಹಾಕಿದ್ದ ಟಿವೀಲಿ ಬರ್ತಿತ್ !
- 'ಸುಮಾ'
arebhase@gmail.com

Monday, 30 January 2012

ಅಯ್ಯಯ್ಯೋ....ಕುಟ್ಟಿಚಾತ !


`ನಿಂಗೆ ತಾಕತ್ ಇದ್ದ್ರೆ, ಹೊಡೀರ ನಂಗೆ...' ಜಪ್ಪು ಅಷ್ಟ್ ಹೇಳಿ ಬಾಯಿ ಮುಚ್ಚಿತ್ಲೇ, ತಲೆ ಮೇಲೆ ಡಬ್ತಾ ಒಂದ್ ಜಲ್ಲಿಕಲ್ಲು ಬಂದ್ ಬಿದ್ದ್ಬಿಡ್ತ್. ಗಾಯ ಆಗಿ ರಕ್ತ ಬಾಕೆ ಶುರುವಾತ್... ಇದಾದ್ಮೇಲೆ ಸ್ವಲ್ಪ ಹೊತ್ತು ಸೂಜಿ ಬಿದ್ದರೆ ಕೇಳಿಸುವಷ್ಟು ನಿಶ್ಯಬ್ದ ! ಜಪ್ಪುಗೆ ಏಟು ಬಿದ್ದದ್ದೇ ತಡ, ಜೊತೆ ಇದ್ದ ಇನ್ನೂ ನಾಲ್ಕು ಜನ ಬಿಸಿರಕ್ತದ ಹುಡುಗರು ಥಂಡಾ ಆಗ್ಬಿಟ್ಟೊ. ಒಬ್ಬಂಗೆ ಹೆದ್ರಿಕೆಲಿ, ಕೆಮ್ಮುಬಂದುಬಿಟ್ಟತ್. ಶಬ್ದ ಆಗದಂಗೆ ಕೆಮ್ಮಿಕೆ ನೋಡಿರೂ ಆತ್ಲೆ, ಕೆಮ್ಮು ಗಂಟಲು ದಾಟಿ ಹೊರಗೆ ಬಾತ್. ಅಷ್ಟೊತ್ತಿಗೆ ಮತ್ತೆ ಶಬ್ದ... ಈಗ ಮನೆ ಮೇಲೆ ಡಬ..ಡಬ...ತಾ ಕಲ್ಲು ಬೀಳಿಕೆ ಶುರುವಾತ್ ! ಕಲ್ಲಂದ್ರೆ, ಅದ್ ಕಲ್ಲು ಅಲ್ಲ, ಕಲ್ಲು ತರನೇ ಇರ್ವ ಮಣ್ಣಿನ ಉಂಡೆ. ಹಂಚು ಮೇಲೆ ಬಿದ್ದ್ರೆ, ಶಬ್ದ ಬಾತಿತ್. ಆದ್ರೆ, ಹಂಚು ಒಡೀತಿತ್ಲೆ ! ಜಪ್ಪು ಮತ್ತೆ ಫ್ರೆಂಡ್ಸ್ಗ ಕಟ್ಲ್ ಅಡಿಲಿ ಅಡಗಿಕೊಂಡೊ.
ಇದ್ ಸುಮಾರು 20 ವರ್ಷ ಹಿಂದಿನ ಕಥೆ. ಭಾಗಮಂಡಲ ಹತ್ರದ ತಣ್ಣಿಮಾನಿಲಿ ಒಂದು ಮನೇಲಿ ಕುಟ್ಟಿಚಾತದ ಕಾಟ ಇತ್ತ್ ! ಆಗಿನ ಕಾಲಕ್ಕೆ ಇದು ದೊಡ್ಡ ಸುದ್ದಿ. ಈಗಿನಂಗೆ ಟಿವಿಗ ಇತ್ಲೆ... ಇದ್ದಿದ್ದ್ರೆ, `ಹೀಗೂ ಉಂಟೇ...'ತಾ ಒಂದು ದೊಡ್ಡ ನ್ಯೂಸ್ ಮಾಡಿಬಿಡ್ತಿದ್ದೊ. `ಶಕ್ತಿ' ಪೇಪರ್ಲಿ ಮಾತ್ರ ಇದ್ರ ಸುದ್ದಿ ಬಂದಿತ್ತ್. ಹಗಲೆಲ್ಲಾ ಆ ಮನೆವು ಎಲ್ಲವ್ರಂಗೆ ಇರ್ತಿದ್ದೊ... ಸೂರ್ಯ ಮುಳುಗುತ್ತಿದ್ದಂಗೆ, ಇಲ್ಲಿಯ ಪರಿಸ್ಥಿತಿಯೇ ಬೇರೆ ಆಗಿಬಿಡ್ತಿತ್. ಮನೆ ಮೇಲೆ ಎಲ್ಲಿಂದಲೋ ಕಲ್ಲುಗ ಬಂದ್ ಬೀಳ್ತಿದ್ದೊ. ಮನೆಯೊಳಗೆ ಯಾರಾರು ಸಣ್ಣ ಶಬ್ದ ಮಾಡಿರೆ, ಅವ್ರ ಮೇಲೆನೂ ಕಲ್ಲುಗಳ ಸುರಿಮಳೆ ಆಗ್ತಿತ್. ಇದ್ರ, ತನಿಖೆ ಮಾಡಿಕೆ ಹೋಗಿದ್ದ ಪೊಲೀಸ್ರೂ ಕಲ್ಲೇಟು ತಿಂದ್ ಬಂದ್ ಭಾಗಮಂಡಲ ಆಸ್ಪತ್ರೇಲಿ ಎಡ್ಮಿಟ್ ಆಗಿದ್ದೊ. ಎಲ್ಲವ್ಕೆ ಇದೊಂಥರ ರಹಸ್ಯದಂಗೆ ಕಾಣ್ತಿತ್ತಲ್ಲದೆ, ತುಂಬಾ ಹೆದ್ರಿಕೆ ಕೂಡ ಹುಟ್ಟಿಸಿತ್ತ್ !
ಸುಮಾರ್ ಮೂರು ತಿಂಗ ಎಲ್ಲೆಲ್ಲೂ ಇದೇ ಸುದ್ದಿ... ತುಂಬಾ ಜನ ತಲೆಗೆ ಹೆಲ್ಮೆಟ್ ಹಾಕ್ಕಂಡ್ ಹೋಗಿ ಕೂಡ, ಕಲ್ಲು ಎಲ್ಲಿಂದ ಬರ್ತಿರ್ದುತಾ ಪತ್ತೆ ಹಚ್ಚಿಕೆ ನೋಡ್ದೊ. ಹೆಲ್ಮೆಟ್ ಹಾಕ್ಕಂಡ್ ಇರೋವ್ಕೆ, ಬೆನ್ನು ಮೇಲೆ ಕಲ್ಲಿನ ಏಟ್ ಬೀಳ್ತಿತ್. ಅಟ್ಟಕ್ಕೆ ಇಟ್ಟ ಏಣಿ ಹತ್ರ ಯಾರಾರ್ ಹೋದ್ರೆ, ತಲೆ ಮೇಲೆ ದೊಡ್ಡದೊಡ್ಡ ಕಲ್ಲುಗ ಬಂದು ಬೀಳ್ತಿದ್ದೊ. ಜಪ್ಪುನಂಥವು, `ಕುಟ್ಟಿಚಾತ'ನನ್ನೇ ಆಟ ಆಡಿಸೋಕುತೇಳಿ `ತಾಕತ್ತಿದ್ದರೆ, ಬೆನ್ನುಮೇಲೆ ಹೊಡಿ... ತಾಕತ್ತಿದ್ದರೆ ಹೊಟ್ಟೆಗೆ ಹೊಡಿ'ತಾ ಹೇಳ್ತಿದ್ದೊ... ಆಶ್ಚರ್ಯತೇಳಿರೆ, ಅವು ಹೇಳ್ತಿದ್ದಲ್ಲಿಗೆ ಬಂದ್ ಕಲ್ಲು ಬೀಳ್ತಿತ್ ! ಜಪ್ಪು ಮತ್ತೆ ಅವ್ನ ಫ್ರೆಂಡ್ಸ್ಗೆ ಭೂತ, ಪ್ರೇತಗಳಲ್ಲಿ ನಂಬಿಕೆ ಇತ್ಲೆ... ಪೊಲೀಸ್ರು ಬೇಡತಾ ಹೇಳಿರೂ ಅವು `ಕುಟ್ಟಿಚಾತ' ರಹಸ್ಯನ ಬಯಲು ಮಾಡಿಕೆ ಹೊರಟೋ...
  ಈ `ಕುಟ್ಟಿಚಾತ' ಕಾಟ ಇದ್ದ ಮನೇಲಿ ಕರೆಂಟ್ ಇತ್ಲೆ. ಸೀಮೆ ಎಣ್ಣೆ ದೀಪ ಹೊತ್ತಿಸಿರೂ ಅದ್ ಗಾಳಿಗೆ ಕೆಟ್ಟು ಹೋಗ್ತಿತ್ತ್. ಒಂದ್ ದಿನ ಜಪ್ಪು ಮತ್ತೆ ಫ್ರೆಂಡ್ಸ್ಗ ಹಗಲು ಹೊತ್ಲಿ ಹೋಗಿ ಆ ಮನೆನ ತಪಾಸಣೆ ಮಾಡ್ದೊ. ಎಲ್ಲ ನೋಡಿಯಾಕನ, `ಕುಟ್ಟಿಚಾತ'ದ ಬಗ್ಗೆ ಇವ್ಕೆ ಅನುಮಾನ ಶುರುವಾತ್. ಆ ಮನೆಯ ಅಟ್ಟಕ್ಕೆ ಹೋಗುವ ಬಾಗಿಲಿಗೆ ಬೀಗ ಹಾಕಿದ್ದೊ. ಕೀ ಕೇಳಿರೆ, ಮನೆಯವು ಕೊಟ್ಟಿತ್ಲೆ. ರಾತ್ರಿ ಆಕಾಕನ ಆ ಮನೆಯ ಇಬ್ಬರು ಗಂಡು ಮಕ್ಕ ನಾಪತ್ತೆ ಆಗಿರ್ತಿದ್ದೊ ! `ಕೌಂಡಿನ್ಯ'ನ ಪತ್ತೆದಾರಿ ಕಾದಂಬರಿಗಳ್ನ ಓದ್ತಿದ್ದ ಜಪ್ಪು ಮತ್ತೆ ಟೀಂಗೆ ಈಗ ತಾವೇ ಪತ್ತೆದಾರರಾದಂಗೆ ರೋಮಾಂಚನ ಆತ್. ಏಕಂದ್ರೆ, ಅಲ್ಲಿ ನಿಜವಾಗಿಯೂ ನಡೀತಾ ಇರ್ದು ಏನುತೇಳುದು ಈ ಟೀಂಗೆ ಗೊತ್ತಾಗಿತ್ತ್ !
ಅಂದ್ ಸಾಯಂಕಾಲ ಪೊಲೀಸ್ರನ್ನ ಕರ್ಕಂಡ್ ಜಪ್ಪು ಮತ್ತೆ ಟೀಂ `ಕುಟ್ಟಿಚಾತ' ಮನೆಗೆ ಮತ್ತೆ ಹೋದೊ. ಅಂಗಳಕ್ಕೆ ಕಾಲಿಡ್ತಿದ್ದಂಗೆ ಶುರುವಾತ್ ಕಲ್ಲಿನ ಮಳೆ.... ಕಲ್  ಬಂದ ಕಡೆ  ಟಾರ್ಚ್  ಹಾಕಿರೆ, ಒಂದ್ ಕಲ್ಲು ಬಂದ್ ಟಾರ್ಚ್ ನೇ    ಫಳಾರ್  ತಾ  ಒಡ್ದ್ ಹಾಕಿತ್ ! ಒಬ್ಬ ಪೊಲೀಸನ ತಲೆ ತೂತ ಆಗಿ ರಕ್ತ ಬಾತ್. ಉಳ್ದವೆಲ್ಲಾ ಹೆಲ್ಮೆಟ್ ಹಾಕ್ಕೊಂಡಿದ್ದೊ. ಒಂದರ ಹಿಂದೆ ಒಂದ್ ಕಲ್ಲು ಬಂದ್ ಬೀಳ್ತನೇ ಇತ್ತ್. ಅಷ್ಟು ದಿನ ಯಾರೂ ಮಾಡದ ಕೆಲ್ಸನ ಇಂದ್ ಜಪ್ಪು ಮತ್ತೆ ಟಿಂ ಮಾಡ್ದೊ.... ಎಲ್ಲಿಂದ ಕಲ್ಲುಗ ಬಂದ್ ಬೀಳ್ತಿದ್ದನೋ, ಅದೇ ಕಡೆಗೆ ವಾಪಸ್ ಇವು ಕಲ್ಲು ಹೊಡೆಯುದು...ಯಾವಾಗ ಈ ಕಡೆಂದ ಕಲ್ಲು ಹೊಡಿಯಕ್ಕೆ ಶುರುಮಾಡ್ದನೋ, `ಕುಟ್ಟಿಚಾತ' ಕಡೇಂದ ಬರ್ವ ಕಲ್ಲ್ ನಿಂತತ್. ಕೂಡ್ಲೇ ಈ ಪತ್ತೆದಾರಿ ಟೀಂ ಮನೆ ಒಳಗೆ ನುಗ್ಗಿತ್. ಅಲ್ಲಿ ಮತ್ತೆ ಕಲ್ಲಿನ ಮಳೆ!
ಜಪ್ಪು ಸೀದ ಅಟ್ಟದ ಏಣಿ ಕಡೆ ನಡ್ತ್.... ಏಣಿ ಮೆಟ್ಟಿಲು ಹತ್ತುತ್ತಿದ್ದಂಗೆ, ಕಲ್ಲೇಟು ಜಾಸ್ತಿ ಆಗ್ತನೇ ಹೋತ್.. ಆದ್ರೂ ಜಪ್ಪು ಹೆದ್ರಿತ್ಲೆ... ಈಗ ಅಟ್ಟದ ಬಾಗ್ಲು ಬೀಗ ಓಪನ್ ಆಗಿತ್. ಅಟ್ಟದ ಮೇಲೆ ಹೋದ್ರೆ, ಕಲ್ಲು ಇವನ ಮುಖದ ಮೇಲೆನೇ ಬರ್ತಿತ್ತ್... ಏನಾರೂ ಆಗ್ಲಿತಾ ಜಪ್ಪು ಕಲ್ಲುಗ ಬರ್ತಿದ್ದ ಕಡೆಗೆನೇ ನುಗ್ಗಿತ್....ಅಷ್ಟೊತ್ತಿಗೆ ಕಲ್ಲುಗ ಇವ್ನ ಹತ್ರ ಬಾದು ನಿಂತತ್.. ಯಾರೋ ಕಾಲು ಹಿಡ್ಕಂಡಂಗೆ ಆತ್...ಕತ್ತಲಲ್ಲೇ ಒಂದು ದ್ವನಿನೂ ಕೇಳಿಬಾತ್...`ಅಣ್ಣಾ....ದಯವಿಟ್ಟೂ ಎಂಥ ಮಾಡ್ಬೇಡಿ, ನಮ್ಮ ತಪ್ಪನ್ನ ಕ್ಷಮಿಸಿ...' ಜಪ್ಪು ಕೆಳಗೆ ಬಗ್ಗಿ ನೋಡಿರೆ, ಕಾಲುಬುಡಲಿ ಆ ಮನೆಯ ಸಣ್ಣಮಂಞ ! `ಕುಟ್ಟಿಚಾತ' ಕಾಟದ ರಹಸ್ಯ ಹೊರಗೆ ಬಂದಿತ್.
ಪೊಲೀಸ್ ರೈಟರ್ ಸುಬ್ಬಯ್ಯ ಟೇಬಲ್ ಮೇಲೆ ಕುದ್ದಕಂಡ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ರೆ, ನೆಲದ ಮೇಲೆ ಕುದ್ದಿದ್ದ `ಕುಟ್ಟಿಚಾತ'ಗ ತಲೆ ತಗ್ಗಿಸಿಕಂಡ್ ಉತ್ತರ ಕೊಡ್ತಿದ್ದೊ... ಅಪ್ಪ ಊರ್ಲಿ ತುಂಬಾ ಸಾಲ ಮಾಡಿತ್ತ್... ಸಾಲ ಕೊಟ್ಟವು ಮನೆ ಕಡೆ ಬಾದು ಬೇಡಾತ, ಆ ಮನೆಯ ಇಬ್ಬರು ಮಕ್ಕ `ಕುಟ್ಟಿಚಾತ'ದ ಆಟ ಆಡಿದ್ದೊ... ದೊಡ್ಡ ಮಂಞ ಮರಗಳ ಮೇಲೆ ಕುದ್ದ್ಕಂಡ್ ರಾತ್ರಿ ಹೊತ್ತು ಕಲ್ಲು ಹೊಡೀತ್ತಿದ್ದ್ರೆ, ಸಣ್ಣಮಂಞ ಮನೆ ಅಟ್ಟದ ಮೇಲೆ ಕುದ್ದ್ಕಂಡ್ ತನ್ನ ಕೆಲ್ಸ ಮಾಡ್ತಿತ್. ಜಪ್ಪು ಮತ್ತೆ ಟೀಂ ಈ `ಕುಟ್ಟಿಚಾತ' ರಹಸ್ಯನ ಬಯಲು ಮಾಡ್ದ ಮೇಲೆ ಇಲ್ಲಿನ ಜನ ನೆಮ್ಮದಿಯ ಉಸಿರುಬಿಟ್ಟೋ...
- 'ಸುಮಾ'
arebhase@gmail.com

Sunday, 29 January 2012

ಘಜ್ನಿ ಮಹಮ್ಮದ್ !


ಗೂಡೆನ ಪರೀಕ್ಷೆ ನಡೆದದೆ
ಘಜ್ನಿ ಮಹಮದ್ನ 
ದಂಡೆ ಯಾತ್ರೆನಂಗೆ
ಮತ್ತೆ...ಮತ್ತೆ...ಮತ್ತೆ...!
ಹೈದಂಗಳ ಹಾವಳಿ ತಡೆಯಕ್ಕಾಗದೇ
ಕೊನೆಗೊಮ್ಮೆ...
ಅಪ್ಪ-ಅಮ್ಮ ಮಾಡುವೆ 
ಮದುವೆ ಏರ್ಪಾಡು....!
ನೆಂಟರದ್ ಅದೇ ರಾಗ...
ನಿಮ್ಮ ಗೂಡೆ ನಮಗಿಷ್ಟ
ವರದಕ್ಷಿಣೆ ಬೇಡ...
ಹಂಗೆನೆ ಮಾಡಿಕೊಡಿ ಮದುವೆ
ಒಮ್ಮೆ ಸಿಕ್ತಾ ಒಪ್ಪಿಗೆ...
ಶುರು ಮಾಡಿವೆ ತಮ್ಮ ಚಾಳಿ... 
ಚಿನ್ನ ಬೇಕು....ಸೈಟ್ ಬೇಕು !
ಎಂಥ ನಾಟಕ ! 
ಅವ್ಕೆ ಬೇಕಿರ್ದು ಗೂಡೆ ಅಲ್ಲ
ಅವ್ಳ ಜೊತೆ ಬರ್ವ
ಸಂಪತ್ತು !
ಮತ್ತೆ, 
ಘಜ್ನಿ ಮಹಮ್ಮದ್ ನೆನಪಾದೆ !

- ತಳೂರು ಡಿಂಪಿತಾ
arebhase@gmail.com

Saturday, 28 January 2012

ಮಾತಾಡುವ ಮಂಗ !


ಕೋಡ ಕಿತ್ತುಳಿ ಹಣ್ಣಾಗಿರ್ದೇನೋ ನೋಡ್ಕಂಡ್ ಬರ್ನೋತೇಳಿ ಅಪ್ಪಿ, ಮಕ್ಕಿ ತೋಟ ಕಡೆ ಹೊರಟಿತ್ತ್. ಈಚೆಗೆ ತೋಟದಲ್ಲಿ ಮಂಗಗಳ ಕಾಟ ಬೇರೆ ಜಾಸ್ತಿ... ಯಾವ ಹಣ್ಣುಗಳ್ನೂ ಬಿಡ್ದುಲ್ಲೆ... ಅದ್ಕೆ ಕೋಡ ಕಿತ್ತುಳಿ ಸ್ವಲ್ಪ ಹಣ್ಣಗಿದ್ರೂ ಕುಯ್ಕಂಡ್ ಬರೋಕ್ಕುತೇಳಿ, ಅಪ್ಪಿ ಫಾಸ್ಟಾಗಿ ತೋಟದ ಕಡೆ ಹೆಜ್ಜೆ ಹಾಕ್ತಿತ್ತ್. ಅಷ್ಟೊತ್ತಿಗೆ ಎಲ್ಲೋ ದೂರಲಿ ಕೂಸು ಮರ್ಡುದು ಕೇಳ್ದಂಗೆ ಆತ್... ಅಂವ ಅಲ್ಲೇ ಸ್ವಲ್ಪ ಹೊತ್ತು ನಿಂತ್ಕಂಡ್ ಧ್ವನಿ ಕೇಳ್ದ ಕಡೆ ಮತ್ತೊಮ್ಮೆ ಕಿವಿ ಕೊಟ್ಟತ್. ಹೌದು, ಏನೋ ಶಬ್ದ ಬಂದಂಗೆ ಆಗ್ತುಟ್ಟು.... ಅಪ್ಪಿ, ಆ ಶಬ್ದ ಬರ್ತಿದ್ದ ಕಡೆ ನಡ್ತ್.
ಗೋಳಿ ಮರದ ಕೆಳಗೆ ಒಂದ್ ಮರಿ ಮಂಗ ! ಹೆಂಗೋ ಹಿಂಡ್ಂದ್ ತಪ್ಪಿಸಿಕಂಡ್ ಅಲ್ಲಿ ಬಿದ್ದಿತ್. ಕಾಲಿಗೆ ಎಂಥದ್ದೋ ಗಾಯ ಆಗಿದ್ದ್ರಿಂದ, ನೋವು ತಡ್ಕಂಬಕೆ ಆಗದೆ ಮರ್ಡ್ತಿತ್. ಅಪ್ಪಿ ಅದ್ರ ಹತ್ರ ಹೋತ್, `ಏಯ್, ಅಲ್ಲೇ ನಿಂತ್ಕ... ಹತ್ರ ಬರ್ಬೇಡ....' ಏನಾಶ್ಚರ್ಯ ! ಮರಿಮಂಗಂಗೆ ಮಾತಾಡಿಕೆ ಬತರ್ಿತ್ತು. ಅದೂ ಅರೆಭಾಷೆಲಿ ! ಅಪ್ಪಿ ಒಂದ್ಸಲ, ಸುತ್ತ ತಿರ್ಗಿ ನೋಡ್ತ್, ಯಾರಾರ್ ನನ್ನ ಮಂಗ ಮಾಡಿಕೆ ಹಿಂಗೆ ಆಟ ಆಡಿಸ್ತೊಳನೋ ಏನೋತಾ ಅವಂಗೆ ಸಂಶಯ. ಅಷ್ಟು ಹೊತ್ತಿಗೆ ಮರಿಮಂಗ, `ನೀನೆಂಥ ಒಳ್ಳೇ ಕೋಡನಂಗೆ ಆಡ್ದು, ಇತ್ತ ನೋಡ್... ನಾನೇ ಮಾತಾಡ್ತಿರ್ದು..'ತಾ ಹೇಳ್ತ್. ಇಷ್ಟು ಹೊತ್ತು ಆಶ್ಚರ್ಯಂದ ನೋಡ್ತಿದ್ದ ಅಪ್ಪಿಗೆ ಈಗ ಹೆದ್ರಿಕೆ ಶುರುವಾತ್. ಗೋಳಿ ಮರಂದ ಆ ಕಡೆನೇ ಅವ್ರ ಮನೆಯವ್ರ ಸುಡುಕಳಿ ಇರ್ದು... ಈ ಮರಿಮಂಗಂಗೆ ಅಲ್ಲಿಂದ ಬಂದ ಭೂತ ಏನಾರೂ ಮೆಟ್ಟಿಕಂಡುಟ್ಟಾ...ತಾ ಯೋಚಿಸಿಕೆ ಶುರುಮಾಡ್ತ್....`ಭೂತನೂ ಇಲ್ಲೆ, ಪಿಶಾಚಿನೂ ಇಲ್ಲೆ...ನೀ ಹೆದ್ರಿಕಂಬದು ಬೇಡ...' ಮರಿಮಂಗ ಅಪ್ಪಿಗೆ ಸಮಧಾನ ಮಾಡಿಕೆ ನೋಡ್ತ್....
ಅಪ್ಪಿ ಮೊನ್ನೆ ಟಿವಿಲಿ ಉಪೇಂದ್ರ ಆ್ಯಕ್ಟ್ ಮಾಡಿರುವ `ಹಾಲಿವುಡ್' ಫಿಲಂ ನೋಡಿತ್ತ್. ಅದ್ರಲ್ಲೂ ಹಿಂಗೆನೇ, ಮಂಗ ಮಾತಾಡ್ತಿತ್ತ್... ಇನ್ನೊಬ್ಬ್ರ ಮನಸ್ಸ್ಲಿ ಇದ್ದದ್ದನ್ನ ಇದ್ದಂಗೆ ಹೇಳ್ತಿತ್... ನಮ್ಮ ತೋಟಕೆ ಬಂದಿರ್ದು, ಅಂಥದ್ದೇ ಒಂದ್ ಮಂಗ ಇರೋಕೇನೋತಾ ಇವಂಗೆ ಖುಷಿ ಆತ್... ಮನೆಗೆ ತಕ್ಕಂಡ್ ಹೋಗಿ ಕಟ್ಟಿ ಹಾಕಿಕ್ಕಂಡ್ ಟಿವಿ ಅವ್ಕೆ ಫೋನ್ ಮಾಡೊಕುತಾ ಮನಸ್ಲೇ ಯೋಚನೆ ಮಾಡ್ಕಂಡತ್... ಅಷ್ಟೊತ್ತಿಗೆ ಮಂಗ, `ನೀ ಹಂಗೆಲ್ಲಾ ಯೋಚನೆ ಮಾಡ್ದು ಬೇಡ.. ನಾನ್ ನಿನ್ನ ಜೊತೆ ಬಾಲೆ...ನಂಗೆ ಇಲ್ಲಿ ತುಂಬಾ ಕೆಲ್ಸ ಉಟ್ಟುತಾ' ಹೇಳ್ತ್... ಅದ್ಕೆ ಅಪ್ಪಿ, `ನೀ ಹಿಂಗೆ ಕಾಡ್ಲಿ ಏಕೆ ಕಷ್ಟ ಪಟ್ಟಿಯಾ, ನನ್ ಜೊತೆ ಬಾ... ದಿನಾ ನಿಂಗೆ ಒಳ್ಳೇ ಊಟ ಕೊಟ್ಟನೆ' ತಾ ಹೇಳ್ತ್. `ಏ ಹೋಗಿ ನಿನ್ನ ಕೆಲ್ಸ ನೋಡ್ರಾ, ನೀನ್ ನನ್ನನ ಟಿವಿಯವ್ಕೆಲ್ಲಾ ತೋರ್ಸಿ ದೊಡ್ಡ ಹೀರೋ ಆಕುತಾ ಒಳ. ಅದೆಲ್ಲಾ ಆಕಿರ್ವ ಕೆಲ್ಸ ಅಲ್ಲ. ನೀ ಮೊದ್ಲು ಇಲ್ಲಿಂದ ನಡೀ...' ತಾ ಮರಿ ಮಂಗ ಸ್ವಲ್ಪ ಜೋರಾಗಿ ಸಿಟ್ಟ್ಲಿ ಹೇಳ್ತ್. `ನೀ ಬಾತ್ಲೆತೇಳಿರೇ, ನಿನ್ನನ ಎಳ್ಕಂಡ್ ಹೋನೆ'ತಾ ಅಪ್ಪಿ ಮರಿಮಂಗಂಗೆ ಹೆದ್ರಿಸಿತ್. ಮರಿಮಂಗ ಅಷ್ಟಕ್ಕೆಲ್ಲಾ ಹೆದ್ರುವಂಗೆ ಕಾಣಿಸ್ತಿಲ್ಲೆ...`ಏಯ್... ಏನ್ ನಿನ್ನ ಅವಾಝ್... ನಮ್ಮವರೆನ್ನಲ್ಲಾ ಕರ್ದರೆ ನೀ ಉಚ್ಚೆ ಹೊಯ್ಕಂಡ್ ಓಡಕು ಹಂಗೆ ಮಾಡ್ನೆ..' ತಾ ಮರಿಮಂಗ, ಅಪ್ಪಿಗೆ ಜೋರು ಮಾಡ್ತ್. ಜೊತೆಗೆ ಜೋರಾಗಿ ಕಿರ್ಚಿಕೆ ಶುರು ಮಾಡ್ತ್... ಅದೆಲ್ಲಿದ್ದೋ ಏನೋ... 20-30 ಮಂಗಗ ಗೋಳಿ ಮರಲಿ ಪ್ರತ್ಯಕ್ಷ ಆದೊ. ಅದ್ರಲ್ಲಿ ಒಂದ್ ದೊಡ್ಡ ಮಂಗ, `ಏಯ್ ಅಪ್ಪಿ, ನೀ ಇಲ್ಲಿಂದ ಹೋದಿಯಾ ಇಲ್ಲ ಪಾಠ ಕಲ್ಸೊಕಾ' ತಾ ಕೇಳ್ತ್. ಅಪ್ಪಿಗೂ ಸಿಟ್ಟ್ ಬಾತ್ `ನೀವು ಏನು ಮಾಡಿಯರಿ ನೋಡೇ ಬಿಟ್ನೆ'ತಾ ಮರಿ ಮಂಗನ ಹಿಡ್ಕಣಿಕೆ ಅದ್ರ ಕುತ್ತಿಗೆಗೆ ಕೈ ಹಾಕೋಕು... ಅಷ್ಟೊತ್ತಿಗೆ ಮೇಲಿಂದ ಒಳ್ಳೇ ಮಳೆ ಸುರ್ದಂಗೆ, ಎಲ್ಲಾ ಮಂಗಗ ಒಟ್ಟಿಗೆ ಸೇರ್ಕಂಡ್ ಇವನ ಮೇಲೆ ಉಚ್ಚೆ ಹುಯ್ದು ಬಿಟ್ಟೊ....ಅದ್ರ ಜೊತೆಗೆ ಅಪ್ಪಿ ಅಪ್ಪನ ಧ್ವನಿ ಕೇಳ್ದಂಗೆ ಆತ್... `ಬೋ...ಮಂಞ...ನಾಳೆಂದ ಪರೀಕ್ಷೆ ಗಡ, ಇನ್ನೂ ಬಿದ್ದುಕೊಂಡೊಳ... ಏದ್ದ್ ಓದಿಕೆ ಆಲೆ ನಿಂಗೆ' ಹಂಗೆ ಹೇಳಿಕಂಡೆ, ಅಪ್ಪ ಇನ್ನು ಒಂದು ಬಿಂದಿಗೆ ನೀರು ತಂದ್, ಅಪ್ಪಿ ಮೇಲೆ ಸುರ್ತ್... ಸದ್ಯ, ಇದ್ ಮಂಗಗ ಉಚ್ಚೆ ಹುಯ್ದದ್ ಅಲ್ಲಲಾ ತೇಳ್ಕಂಡ್ ಬಾತ್ ರೂಂ ಕಡೆ ಹೆಜ್ಜೆ ಹಾಕ್ತ್ ಅಪ್ಪಿ...

- `ಸುಮಾ' 
arebahse@gmail.com

Friday, 27 January 2012

ಯೋಧನ ಕನವರಿಕೆ...


ಇಂಚು, ರಣಬಿಸ್ಲ್ನ ಮರಳುಗಾಡ್ ದೇಶದ ಬಾರ್ಡರ್ಲಿ ಹಗಲುನ ಬಿಸಿಬೆವರ್ಲಿ ಹೆಗಲ್ ಮೇಲೆ ಗನ್ ಹಿಡ್ಕಂಡ್ ತಿರಿಗಿರೆ, ರಾತ್ರಿನ ಮೈ ಕೊರೆಯುವ ಕ್ವಾಟಲಿ ಟೆಂಟ್ನೊಳಗೆ ಪೆಗ್ಗು ಹೊಡ್ಕೊಂಡ್ ನಿನ್ನ ಗ್ಯಾನಲಿ ಸ್ವಪ್ನ ಕಂಡುಕೊಂಡು ನಾ ಕಳೆಯುತೊಳನೇ...
ಇಂಚು, ಸತ್ಯ ಹೇಳ್ತೊಳನೇ ಕೇಳ್... ಅಂದು ನಾ ರಜೆಲಿ ಬಾಕನ, ಇಬ್ಬರ್ ಸೇರ್ಕಂಡ್ ಸುಳ್ಳಿನ ಮಾಲೆನ ಪೋಣಿಸಿ ಮನೆಯಿಂದ ಹೊರಟ್, ಕೈಕೈ ಹಿಡ್ಕಂಡ್ ದೂರದ ಊರುನ ಬಸ್ ಹತ್ತಿ ಜೊತೇಲಿ ಕುದ್ದ್ಕಂಡು ಮಾತಾಡ್ಕಂಡ್  ಪ್ರಯಾಣ ಮಾಡ್ದ ಅನುಭವನ ನಾ ಹೆಂಗೇ  ವರ್ಣಿಸಲಿನೇ ..?
ಅಲ್ಲೊಂದು ಫಿಲಂ ಥಿಯೇಟರ್... ಆ ಕತ್ತಲೆ... ನಿನ್ನ ಸ್ಪರ್ಷದ ರೋಮಾಂಚನ... ನಿನ್ನ ಬಿಸಿ ಅಪ್ಪುಗೆ... ಆ ಏದುಸಿರಿನ ಗಂಧ... ಇಲ್ಲೂ ನೆನಪಾಗ್ತುಟ್ಟು... ಅಲೆಅಲೆಯಾಗಿ ಅರಳುತ್ತಲೇ ಉಟ್ಟು ಆಹಾ..! ಎಂಥ ಮಧುರ ಅನುಭವ..! 
ಇಂಚು, ನಿನ್ನ ಮಧುಪಾತ್ರೆಯಂಥ ಕಣ್ಣುಗ... ಮುಂಜಾವಿನ ಇಬ್ಬನಿಯ ಹನಿಗಳಂಗೆ, ಸ್ವಪ್ನಗಳನ್ನ ಕಾಣ್ತಾ, ನೀ ಸಿಹಿಯಾಗಿ ನರಳುವ ಹೊತ್ತಲಿ ನಾನಿಲ್ಲಿ ದೇಶದ ಮೂಲೆಲಿ ಮುಳ್ಳು ತಂತಿನ ಬೇಲಿಗಳ ಈಚೆ ನಿಂತ್ಕಂಡ ಏರಲು ಹೊರಟಿರುವ ಸೂರ್ಯನ, ಮರಳುಧೂಳೆಬ್ಬಿಸಿ ಅಡಗಿಸುವ ಭೋಗರ್ಾಳಿಯ ಹಿಂದಿನ ಬದಿಲಿ ನೆರೆದೇಶದ ಕಳ್ಳರ್ಯಾರೋ ಇರೋಕುತ್ತಾ ಕಷ್ಟಪಟ್ಟು ಹುಡುಕುತೊಳನೇ.............
ಇಂಚು, ಮೊನ್ನೆ ಇದ್ದಕ್ಕಿದಂಗೇ ನಿನ್ನ ನೆನಪಾಗಿ, ನಿನ್ನ ನೋಡೋಕುತ್ತಾ ಅನ್ನಿಸಿ, ಎದೆನೋವುತಾ ಸುಳ್ಳು ಹೇಳಿ ಮೆಡಿಕಲ್ ಲೀವ್ ಹಾಕಿ ಬಂದಬುಡನಾ ತಾ ಗ್ಯಾನ ಮಾಡಿ ಮೆಲ್ಲೆ ನನ್ನ ಫ್ರೆಂಡ್ಗೆ ಹೇಳ್ಕಾಕನ, ಅಂವ ನಂಗೆ ಒಂದ್ ಮಾತ್ ಹೇಳ್ತ್, "ನಿನ್ನಂಥವಂಗೆ ಯಾಕೆರಾ ಬೇಕಿತ್ತ್ ಈ ಕೆಲಸ" ಅವನ ಮಾತು ನನ್ನ ಕೆನ್ನೆಗೆ ಹೊಡ್ದಷ್ಟು ನೋವಾತೇನೋ.....? ಇಂಚು, ನೀನೇ ಹೇಳ್ನೇ.. "ನಾನೂ ಮನುಷ್ಯ ತಾನೇ..." ದೇಶಕಾಯುತ್ತಾ ಒಳೆತಾ ನನ್ನ ಹೃದಯ ಲವ್ ಮಾಡಿಕೆ ಬತ್ತುತಾ ಗನ್ ಮೇಲೆ ಬರ್ಕೊಂಡುಟ್ಟಾ?
         ಇಂಚು, ನಾನೊಬ್ಬ ದೇಶ ಕಾಯುವ ಸೈನಿಕತಾ ಗೊತ್ತಿದ್ದರೂ ನೀನು ನನ್ನ ಒಪ್ಪಿಕೊಂಡಳೊಲ್ಲಾ, ಅದಿಕ್ಕೆ ನಂಗೆ ತುಂಬಾ ಆಶ್ಚರ್ಯ ಆಗ್ತುಟ್ಟುನೇ....!, ಏನು ಮಾಡುದು ಹೇಳ್.. ನಾ ಅರಸಿ ಬಂದ ವೃತ್ತಿನೇ ಅಂಥದ್ದ್. ಇಲ್ಲಿ ಎಲ್ಲಿಟ್ಟುನೇ ಪ್ರೇಮರಸದ ಸುಖದ ಅರಿವು, ದಿನಾದಿನಾ ಲೆಕ್ಕ ಹಾಕಿಕಾಗದಷ್ಟು ನಿರಂತರ ನಿರೀಕ್ಷೆಗ... ಏಕಾಂತಲಿ ತೀವ್ರ ಗೊಂದಲ, ಚಡಪಡಿಕೆ.... ಆದರೂ ದೇಶ ಕಾಯಲೇ ಬೇಕು.
ಇಂಚು, ನಂಗೇ ಯಾಕೋ ಇಂದ್ ರಾತ್ರಿ ತಡಕಣಿಕೆ ಆಗದೇ, ಮನಸ್ಸೊಳಗಿನ ಬಯಕೆ, ಭಾವನೆಗಳನ್ನ ನಿನ್ನ ಹತ್ತಿರ ಹೇಳ್ಕಣಕೂತಾ ಬರಿತೊಳೆನೆ....
ಆಯ್ಯೋ....! ಇಂಚು, ಎಲ್ಲೋ ಸ್ವಲ್ಪ ದೂರಲಿ ಗುಂಡ್ನ ಸೌಂಡ್ ಕೇಳ್ತುಟ್ಟು.. ಇಂದ್ ಯಾವ ಹೆಣ್ಣು ಅನಾಥೆಯಾದೆಯೋ, ಯಾವ ಮಕ್ಕ ಅಪ್ಪನ ಕಳಕಂಡವೆಯೋ, ಯಾವ ಅಮ್ಮಂಗೆ ಮಂಞ ಶಾಶ್ವತ ನೆನಪಾದೆಯೋ, ಹಿಂಗೆ ಸತ್ತ ವೀರನ ಕಣ್ಣಂಚಿನ ಕಡೆ ಗಳಿಗೇಲಿ ಅಚ್ಚಾದ ಬಿಂಬವೂ ಯಾವ ಗೂಡೆದೋ... ನಾಳೆ ದಿನ ನನ್ನ ಕಥೆನೂ ಇಷ್ಟೇ ಮಾರಾಯ್ತಿ !
      ಇಂಚು, ಇಲ್ಲಿ ತುಂಬಾ ಹೊತ್ತಾಗ್ಯುಟ್ಟು. ಅಲ್ಲಿ ನೀ ಮೈ ಕೊರೆಯುವ ಚಳಿಗೆ ಕಂಬಳಿ ಹೊದ್ಕಂಡ್ ನನ್ನ ನೆನಪ್ಲಿ ಒಬ್ಬಳೇ ಬೆಚ್ಚಗೇ ಮಲಗಿಯೊಳ... ಅಯ್ಯೋ ಪಾಪ.....! ಆಗಲೇ ಹೇಳದ್ನಲ್ಲಾ, ಎಲ್ಲೋ ಗುಂಡ್ನ ಸೌಂಡ್ ಕೇಳ್ತುಟ್ಟುತಾ... ಇನ್ನ್ ಸ್ವಲ್ಪ ಹೊತ್ಲೇ, ನನ್ನ ಫ್ರೆಂಡ್ ಹರಿ ಜೊತೆ ಅಲ್ಲಿಗೆ ಹೋಗ್ತೊಳೆ.. ಶತ್ರುಗಳ ಜೊತೆ ಹೋರಾಡೋಕು.. ನಮ್ಮಿಬ್ಬರ ಪ್ರಿತಿ ನನ್ನ ಗನ್ಗೂ ಗೊತ್ತುಟ್ಟು... ನಾ ಸೋಲುಲೆ... ಗೆದ್ದು ನಿನ್ನ ಹತ್ರ ಬಂದನೆ....ಕಾಯ್ತಾ ಇರ್... 


- ತಳೂರು ಡಿಂಪಿತಾ
arebhase@gmail.com

Thursday, 26 January 2012

ಚೋಮುಣಿ ಲವ್ ಸ್ಟೋರಿ..


ಲಾಯರ್ ಚೋಮುಣಿಯ
ಲವ್ಸ್ಟೊರಿ ಕೇಳಿ..
ಐದನೇ ಕ್ಲಾಸ್ಲೇ ಅಂವ
ದೊಡ್ಡ ಶೂರ !
ಮಿಸ್ಗೆ ಕಣ್ಣ್ ಹೊಡ್ದಂವ !
6ನೇ ಕ್ಲಾಸ್ಲೇ 
ಪಕ್ಕದಲ್ಲಿ ಕೂತಿದ್ದ ಗೂಡೆಗೆ
ಕಾಳ್ ಹಾಕಿತ್ತ್ !
ಅವಳದ್ದೊಂದು ಸಣ್ಣ ಸ್ಮೈಲ್
ಇವನ ಜೀವನ `ಪಾವನ' ! 
ಹೈಸ್ಕೂಲ್ಗೆ ಬಾಕಾಕನ
ಮೀಸೆ ಬಂದಿತ್ತ್ !
ಆದ್ರೂ ಅಮ್ಮನ ಪಾಲಿಗೆ
ಇಂವ ಇನ್ನೂ ಕೂಸೇ.. !
ಇಲ್ಲೂ ಒಂದು ಲವ್ !
ಪಿಯುಸಿಲೀ ಕಣ್ಣ್ ಬಿತ್
`ಪ್ರೀತಿ' ಮೇಲೆ
ಅವಳೋ ಬಿಂಕದ ಸಿಂಗಾರಿ
ಇಂವ ಏನು ಕಮ್ಮಿನಾ ?
ಡೈರಿಮಿಲ್ಕ್ ಕೊಟ್ಟೇ ಬಲೆಗೆ ಹಾಕಿಕಣ್ತ್ !
ಎಲ್ಎಲ್ಬಿಲಿ ಇಂವನ್ದ್
`ಪ್ರತಿಭಾ' ಪ್ರದರ್ಶನ !
ಐದು ವರ್ಷದ ಲವ್
ಇನ್ನೇನು ಮದುವೆ ಆಕು
ಅಪ್ಪ ನೋಡಿದ್ದೊ ನರ್ಸ್ ಗೂಡೆ !
ಅಂತೂ ಮದುವೆ ಆತ್
ಇಂವನ್ದ್ ಈಗ್ಲೂ ಬೇಲಿ 
ಹಾರುವ ಬುದ್ಧಿ...
ಮತ್ತೊಂದು ಗೂಡೆನ ನೋಡ್ಕಂಡುಟ್ಟು 
ಅವ್ಳೂ ಲಾಯರ್ !
- `ಸುಮ'
arebhase@gmail.com

Wednesday, 25 January 2012

ವನಸುಮ...


ಸುತ್ತ ಮುತ್ತ ಬೆಟ್ಟ ಗುಡ್ಡಗ
ಹಚ್ಚ ಹಸಿರು, ದಟ್ಟ ಕಾಡು
ಸುತ್ತಿ ಹರಿವ ಜುಳು ಜುಳು ಹೊಳೆ..
ಆಕಾಶ ದಾಟಿ ಹರಡ್ಯುಟ್ಟು
ಘಮ ಘಮ ಪರಿಮಳ ! 
ಹಾಡಿದರೆ ಕೋಗಿಲೆ ಕಂಠ
ಕುಣಿದರೆ ಮುಂಗಾರಿನ ನವಿಲು 
ನಡೆದರೆ ಅಚ್ಚಬಿಳಿಯ ಹಂಸ 
ಹೆಜ್ಜೆ ಮೇಲೆ ಹೆಜ್ಜೆ 
ಕಾಲ್ಲಿ ಬಂಗಾರದ ಗೆಜ್ಜೆ !
ಗೋಧೂಳಿಯ ನೇಸರನ ಬಣ್ಣ
ಸಿಂಹಿಣಿಯ ವೈಯ್ಯಾರದ ನಡು ಸಣ್ಣ
ಬಾಯಿಬಿಟ್ಟರೆ ಸಿಹಿಸಿಹಿ ಹಾಲ್ನೊರೆ
ಮಾತಾಡಿಕೆ ಬಿಟ್ಟರೆ ನಿಲ್ಲದೇ ಹರಿವ ತೊರೆ
ಬದುಕುವ ಚಲ, ಮನಸ್ಲಿ ಬಲ !
ಮತ್ತೊಮ್ಮೆ ನೋಡೊಕು ಅನ್ಸುವ
ಪೊರ್ಲುನ ಗೂಡೆ !
ಮೇಲೆ ಶಾಂತ ಸಮುದ್ರ...
ಒಳಗೆ ಜೀವ ಕೊಲ್ಲುವ ಹಾಲಾಹಲ!
ಅದೆಂಥ ನೋವು ? 
ಆಸರೆ ಇಲ್ಲದೆ ನಿಲ್ಲುಲೆ ಬಳ್ಳಿ 
ನಂಗೆ ಮರವಾಗುವ ಆಸೆ !

- 'ಸುಮ'
arebhase@gmail.com

Sunday, 22 January 2012

ಪಾತರಗಿತ್ತಿ ಪಕ್ಕ....

 ಹಿಂದಿನ ದಿನ ಸಾಯಂಕಾಲ ನಮ್ಮ ಮಾಸ್ಟರ್  ಪ್ಲ್ಯಾನ್ ರೆಡಿ ಆಗಿತ್ತ್ ... ಕಾಫಿ ತೋಟಕೆ ಹೋದು..ಅಲ್ಲಿ ಹುಳಿ, ಪೇರಳೆ ಕಾಯಿ ತಿಂಬದು ಮತ್ತೆ ಆಟ ಆಡ್ದು..ಸರಿ ಹೊತಾರೆ  ಒಂದ್ ಹ ತ್ತೂವರೆಗೆ ಹೋದು ತಾ  ಯೋಚನೆ ಮಾಡ್ದೋ. ಈ ನಮ್ಮ ದೀಶು  ಹೊತಾರೆ  ಆರೂವರೆಗೆ ಬಂದ್ ಎಲ್ಲವರನ ಎಬ್ಬಿಸಿತ್..ಈಗಲೇ ಪೂಯಿ ತಾ  ಒಳ್ಳೆ ಆರ್ ತಿಂಗಳಿಗೆ ಹುಟ್ಟಿದವರಂಗೆ ಮಾಡ್ತಾ ಇತ್.. ಮನೇಂದ  ಅಂಗಳಕ್ಕೆ ಸನಾ  ಕಾಲಿಡಿಕೆ ಆಗ್ತಾ ಇತ್ಲೇ... ಅಷ್ಟ್ ಚಳಿ ಇತ್.. ಕೊನೆಗೆ  ದೀಶುಗೆ ಸಮಾಧಾನ ಮಾಡ್ಕನ ಎಲ್ಲವಕೆ ಸಾಕಾಗಿ ಹೋಗಿತ್..ನಾವು ಸೂರ್ಯನ
ಮುಖ ನೋಡ್ ದೇ ಹತ್ತ್  ಗಂಟೆಗೆ...ಸ್ವಲ್ಪ  ಚಳಿ ಕಡಿಮೆ ಆದಮೇಲೆ ಒಂದ್ ಹತ್ತೂವರೆಗೆ  ಹೋಕೆ ನಮ್ಮ ಮಕ್ಕಳ ಸೈನ್ಯ ರೆಡಿ ಆಗಿತ್..ದೀಶು, ಚೇತು ,ಚುಮ್ಮಿ. ಗಮ್ಬೂಟು ಹಾಕಿ ಕೈಲೊಂದು ಬಿಲ್ಲು ಬ್ಯಾಗ್ ಹಿಡ್ಕಂಡ್ ರೆಡಿ ಆಗಿದ್ದೋ...ನಮ್ಮ ಮಕ್ಕಳ ಸೈನ್ಯದ ಲೀಡರ್ "ಪವಿ"ನೇ ಇರೋಕು ತಾ ನೀವೆಲ್ಲಾ  ಗ್ಯಾನ  ಮಾಡ್ತಾ ಒಳರಿತಾ  ನಂಗೆ ಗೊತ್ತು...ನೀವೇ ಹಂಗೆ ಮನಸ್ಲಿ  ಗ್ಯಾನ  ಮಾಡ್ಕಂದ್ರೆ ಅದ್  ನಿಜ ಆಕುತಾ  ಇಲ್ಲೇ ಅಲ??? ಯಾಕೆ ಹೇಳ್ರೆ ನಮ್ಮ ಲೀಡರ್
ಚೇತು...ತೋಟದ  ದಾರಿ ಗೊತ್ತಿದ್ದದ್   ಅವಂಗೆ ಮಾತ್ರ.. ಎಲ್ಲವ್ ದೇವರ ಸ್ತೋತ್ರ ಹೇಳಿ ಪ್ರಯಾಣ ಶುರು ಮಾಡುವೆ ಗಡ ..ನಾವು ಮಾತ್ರ ಚೋಮ್ಬೇಶ್ವರ  ಹಾಡ್ ಕೇಳ್ತಾ ಶುರು ಮಾಡ್ ದೋ..ಆ ಹಾಡ್ ಮುಗ್ತ್
ಹೇಳ್ರೆ ಕೊಲವೇರಿ ಶುರು ಆತ್..ಎಲ್ಲವೂ  ನನ್ನ ಮೊಬೈಲ್ ಬ್ಯಾಟರಿ ನ ಕೊಲೆ ಮಾಡಿಕೆ ಸಂಚ್ ಹಾಕ್ತಾ ಇರೋ ಹಂಗೆ  ಕಾಣ್ತಾ ಇತ್ ..ಏನ್ ಮಾಡಿಕೆ ಆಲೆ..ಅತ್ತ  ಹಾಡ್ .ಇತ್ತ್ತ ನಮ್ಮ ದೀಶು, ಚುಮ್ಮಿ ,ತನು ದ್  ಗಲಾಟೆ ಬೇರೆ ..ಒಬ್ಬೊಬ್ಬರೂ  ಗಿನ್ನಿಸ್ ರೆಕಾರ್ಡ್ ಮಾಡೋ  ಹಂಗೆ  ಗಲಾಟೆ ಮಾಡ್ತಾ ಇದ್ದೋ...ಹಿಂಗೆ ಮುಂದೆ ಪಿಜಿನ್ ಗಳಿಗೆ  ಸವಾಲ್ ಹಾಕೊಂಗೆ ನಾವೆಲ್ಲಾ ಸಾಲಾಗಿ  ಹೋಗ್ತಾ ಇದ್ದೋ..ಚೇತು ಮುಂದೆ ಇತ್..ನಾನ್ ಮಾತ್ರ ಮಧ್ಯಲಿ ಇದ್ದೆ...ಎಸ್, ನೀವೆಲ್ಲಾ ಈಗ ಗ್ಯಾನ
ಮಾಡ್ತಾ ಇರೋದು... ಕರೆಕ್ಟ್, ...ನಂಗೆ ಸ್ವಲ್ಪ ಧೈರ್ಯ ಜಾಸ್ತಿ,...!!!!!!!! ಹ ಹ ಹ... ಅಂತೂ ಕೊನೆಗೆ ಹುಳಿ ಮರ ಸಿಕ್ಕಿತ್..ಚೇತು ಮರಕ್ಕೆ ಹತ್ತಿ ಕೊಯ್ದು ಕೊಡ್ ತಾ ಇತ್,..ನಾವು ಬ್ಯಾಗ್ ತುಂಬಿಸ್ತಾ ಇದ್ದೋ...ಹಂಗೆ ಹುಳಿ ತಿನ್ದ್ಕಂಡ್ ಮುಂದೆ ಹೋಗ್ತಾ  ಇರ್ಕಾಕನ  ಒಳ್ಳೆ ಏರೋಪ್ಲೇನ್  ಹೋದಂಗೆ  ಸದ್ದ್ ಕೇಳ್ತಾ ಇತ್..... ನಮ್ಮ ನೀತು ಆಕಾಶ ನೋಡ್ದೇ ಬಾತ್,...ಅಲ್ಲಿ ಎಂತನೂ ಇತ್ತ್ಲೆ...ಹಂಗೆ ಸ್ವಲ್ಪ ಮುಂದೆ ಹೋಗಿ ಕುದ್ದ್ಕಂಡ್ ಹುಳಿ ತಿನ್ತಾ ಇದ್ದೋ ...ಏನೋ ಒಂದ್ತರಾ ವಿಚಿತ್ರ ಸೌಂಡ್ ಕೇಳ್ತಾ ಇತ್...ಇನ್ನೇನ್ ಪಿ.ಟಿ
ಉಷಾ ನ  ರೆಕಾರ್ಡ್ ಬ್ರೇಕ್ ಮಾಡಿ ಮನೆಗೆ ಓಡ್ದು  ಒಂದೇ ಬಾಕಿ...ಹಂಗೆ ಹಿಂದೆ ತಿರ್ಗಿ ನೋಡ್ರೆ ಎಲ್ಲವ್ಕೆ ಶಾಕ್..

ಅದೊಂದ್ ಚಿಟ್ಟೆ...ಅದಕೊಂದ್ ಉದ್ದ ಬಾಲ...ನಾವ್ ಯಾರ್ ಸ ಅಷ್ಟೊಂದ್  ಲಾಯ್ಕದ ದೊಡ್ಡ ಚಿಟ್ಟೆ ಇದೂವರೆಗೆ ನೋಡಿತ್ ಲೇ ...ನಮಿಗೆಲ್ಲ ತುಂಬಾ ಖುಷಿ ...ಅದನ ಹಿಡ್ಕಂಡ್ ಆಟ ಆಡ ದೋ..ತುಂಬಾ ಫೋಟೋ ತೆಗ್ದೋ..ಮನೆಗೆ ತಕಂಡ್ ಹೋಗಿ
ಎಲ್ಲವ್ಕೆ ತೋರ್ಸೊಕುತಾ  ಹೊರಟೋ..ಏನ್ ಮಾಡ್ದು,... ನಮ್ಮ ದೀಶು ನ ಪುಟ್ಟ ಕೈಲಿ ದೊಡ್ಡ ಚಿಟ್ಟೆ ನಿಂತತ್ಲೆ ...ಅದ್ ಹಾರಿ ಹೋತ್...ಮತ್ತೆ ಇವರ ಜಗಳ ಗಿನ್ನಿಸ್ ರೆಕಾರ್ಡ್ ಸೇರೋ ಮೊದಲೇ ಜಾಗ ಖಾಲಿ ಮಾಡ್ದು ಒಳ್ಳೇದ್ ತಾ   ಗ್ಯಾನ ಮಾಡಿ ಹೊರಟೋ..ಮನೆಗೆ ತಲ್ಪಕನ ಗಂಟೆ ಒಂದೂವರೆ ಆಗಿತ್...ಎಲ್ಲವ್ಕೆ ತೋಟಲಿ ನಡ ದ ಕಥೆ ಕೇಳಿ ಕೇಳಿ ಸಾಕಾಗಿ ಹೊತ್....ಇದ್ ನಮ್ಮ " ಮಕ್ಕಳ ಸೈನ್ಯದ" ಸಾಧನೆ...ಆ ಚಿಟ್ಟೆನ ಫೋಟೋ ನ ನೋಡಿ ನೀವೂ ಖುಷಿ ಪಡಿ..

- ಪವಿತ್ರ ನೆರಿಯನ - ಭಾವನೆಗಳ ಪಲ್ಲವಿ..

Saturday, 21 January 2012

ಮರದ ಪೆಟ್ಟಿಗೆ ಒಳಗೆ ಬಣ್ಣದ ಜಾದೂ !


          ಅದಿನ್ನೂ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ ಕಾಲ. ಭಾಗಮಂಡಲಲಿ, ರೇಡಿಯೋ ರಿಪೇರಿ ಮಾಡುವ ರಮೇಶನ ಅಂಗಡಿಗೆ ಮೊದ್ಲು ಟಿವಿ ಬಾತ್. ಅಂದಿನವ್ಕೆ ರೇಡಿಯೋಲಿ ಬರೀ ಧ್ವನಿ ಮಾತ್ರ ಕೇಳಿ ಗೊತ್ತಿತ್ತ್. ರೇಡಿಯೋದಂಗೆನೇ ಕಾಣ್ವ ಡಬ್ಬಿಲಿ ಧ್ವನಿ ಜೊತೆ ಪಿಕ್ಚರ್ ಕೂಡ ಬಂದದೆತೇಳಿರೇ, ಅದು ಆಗಿನವ್ಕೇ `ಹೀಗೂ ಉಂಟೇ'ತಾ ಕೇಳಿಕೊಳ್ಳವಂಗೆ ಆಗಿತ್ತ್.                                                             ಭಾಗಮಂಡಲಲಿ ಆಗ ಇದ್ದದ್ ಐವತ್ತೋ, ಅರವತ್ತೋ ಮನೆಗ. ಬಡವರೇ ಜಾಸ್ತಿ. ಆ ಟೈಂಲಿ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿಗೆನೇ 6-7 ಸಾವಿರ ರೂಪಾಯಿ ಇತ್ತ್. ಆವತ್ತಿಗೆ ಅದ್ ದೊಡ್ಡ ಮೊತ್ತ. ಅಷ್ಟು ದುಡ್ಡ್ಲಿ ನಾಲ್ಕ್ ಜನರ ಒಂದ್ ಸಂಸಾರದ ವರ್ಷದ 
ಖರ್ಚ್  ಕಲ್ದಬಿಡ್ತಿತ್ತ್. ಹಂಗಾಗಿ ಸ್ವಲ್ಪ ದುಡ್ಡಿದ್ದವು ಮಾತ್ರ ಟಿವಿ ತಕ್ಕಂಬಕೆ ಧೈರ್ಯ ಮಾಡ್ದೊ. ಅಂಥವರನ್ನೇ ನೋಡಿ ಈ ರೇಡಿಯೋ ರಿಪೇರಿ ಮಾಡುವ ರಮೇಶ, ಗಾಳ ಹಾಕ್ತಿತ್ತ್.


ಆಗ ಬರ್ತಿದ್ದ ಟಿವಿ, ಒಂದು ದೊಡ್ಡ ಮರದ ಡಬ್ಬ ! ಅದ್ಕೆ ಈ ಅಂಗಡಿಗಳಿಗೆ ಇದ್ದಂಗೆ ಷಟರ್ಸ್ ಬಾಗಿಲು ಬೇರೆ. ಅದಕ್ಕೊಂದು ಆ್ಯಂಟೆನಾ.. ಇದ್ದದ್ದೇ ಒಂದ್ ಚಾನೆಲ್ ದೂರದರ್ಶನ. ಅದೂ ಲಾಯ್ಕ ಸಿಕ್ಕೋಕು ತೇಳಿರೆ, ದಿನಾ ಮರದ ಮೇಲೆ ಹತ್ತಿ ಅಲ್ಲಿ ಕಟ್ಟಿರ್ವ ಆ್ಯಂಟೆನಾ ಜೊತೆ ಸರ್ಕಸ್ ಮಾಡೊಕು. ಮನೆಯೊಳಗೆ ಒಬ್ಬ ಇದ್ಕಂಡ್, ಟಿವಿ ನೋಡ್ಕಂಡ್, `ಬಲಕ್ಕೆ ತಿರುಗ್ಸು, ಎಡಕ್ಕೆ ತಿರುಗ್ಸು'ತಾ ಹೇಳೊಕು. ಎಲ್ಲಾ ಸರಿಯಾಗಿ ಮರದ ಮೇಲಿದ್ದಂವ ಇಳ್ದ್ ಬಾಕಾಕ, ಅದೆಲ್ಲಿಂದೋ ಗಾಳಿ ಬಂದ್ ಆ್ಯಂಟೆನನಾ ತಿರುಗಿಸಿ ಬಿಟ್ಟಿರ್ತಿತ್ ! ಮತ್ತೆ ಅದೇ ಕತೆ, ಮರ ಹತ್ತುದು, ಆ್ಯಂಟೆನಾ ಜೊತೆ ಸರ್ಕಸ್.
ಅದ್ ರಾಮಾಯಾಣ ಧಾರಾವಾಹಿ ಕಾಲ. ಭಾನುವಾರ ಬೆಳಗ್ಗೆ ಟಿವಿಲಿ ಬರ್ತಿತ್. ಶುಕ್ರವಾರದ ಪ್ರಜಾವಾಣಿ ಪೇಪರ್ಲಿ, ಮುಂದಿನ ಭಾನುವಾರ ಬರ್ವ ಕಥೆನ ಡೈಲಾಗ್ ಸಮೇತ ಕೊಡ್ತಿದ್ದೊ. ಹಂಗಾಗಿ ಆ ಕಥೆನ ಟಿವಿಲಿ ಹೇಂಗೆ ತೋರ್ಸಿವೆತೇಳುವ ಇಂಟ್ರೆಸ್ಟ್ ಪೇಪರ್ ಓದಿದವ್ಕೆ ಇತರ್ಿತ್ತ್. ಟಿವಿ ಇರ್ವ ಮನೆ ಹುಡ್ಕಂಡ್ ಹೋಗಿ ರಾಮಾಯಾಣ ನೋಡ್ತಿದ್ದೊ. ಭಾನುವಾರ ರೇಡಿಯೋ ರಿಪೇರಿ ಮಾಡುವ ರಮೇಶನ ಅಂಗಡೀಲಿ `ಹೌಸ್ಫುಲ್' ಪ್ರದರ್ಶನ. ಇನ್ ಅವನ ಮನೇಲೂ ಒಂದು ಟಿವಿ ಇಟ್ಟಿತ್ತ್. ಅಲ್ಲೂ ಜನ ! ಅದ್ ಬಿಟ್ರೆ, ಪೂರ್ಣಿಮಾ  ಟೀಚರ್, ಹೆಡ್ಮಾಸ್ಟರ್ ಮನೇಲೂ ಟಿವಿಗ ಇದ್ದೊ. ಮಕ್ಕ ಎಲ್ಲಾ ಹೆಡ್ಮಾಸ್ಟರ್ ಮನೆಗೇ ಟಿವಿ ನೋಡಿಕೆ ಹೋಗ್ತಿದ್ದೊ. ಅಲ್ಲಿ ಇದ್ದದ್ ಕಲರ್ ಟಿವಿ !
ಭಾಗಮಂಡಲಕ್ಕೆ ಮೊದ್ಲು ಕಲರ್ ಟಿವಿ ಬಂದದ್ದ್ ಹೆಡ್ಮಾಸ್ಟರ್ ಮನೆಗೆ. ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ ನೋಡಿ ಆಶ್ಚರ್ಯ ಪಡ್ತಿದ್ದವ್ಕೆ, ಟಿವಿ ಒಳಗೆ ಕಲರ್ ಕಲರ್ ಪಿಕ್ಚರ್ ಬಂದದೆತಾ ಹೇಳ್ದು `ಪ್ರಪಂಚದ ಎಂಟನೇ ಅದ್ಭುತ'! ಹಂಗಾಗಿ, `ಒಮ್ಮೆ ನೋಡಿಯೇ ಬಿಡ್ನೋತೇಳಿ' ಹೆಡ್ಮಾಸ್ಟರ್ ಮನೆಗೆ ಬಂದ್ ಕಲರ್ ಟಿವಿಲಿ `ರಾಮಾಯಣ' ನೋಡ್ತಿದ್ದೊ. ಈ ಊರ್ಲಿ `ಡಿಶ್' ಮೊದ್ಲಿಗೆ ಬಂದದ್ದ್ ಕೂಡ ಹೆಡ್ಮಾಸ್ಟರ್ ಮನೆಗೆನೇ... ಅಷ್ಟು ಹೊತ್ತಿಗೆ `ರಾಮಾಯಣ' ಮುಗ್ದ್, `ಮಹಾಭಾರತ' ಶುರು ಆಗಿತ್ತ್. `ಡಿಡಿ ಚಂದನ' ಮೆಲ್ಲೆ ಕಣ್ಣ್ ಬಿಡ್ತಿತ್. ಆಗ ಸದ್ ಬರೀ, `ಬೆಂಗಳೂರು ದೂರದರ್ಶನ' ಭಾನುವಾರ ಒಂದು ಕನ್ನಡ ಫಿಲಂ, ಶುಕ್ರವಾರ ಚಿತ್ರಮಂಜರಿ ಆಗ ಫೇಮಸ್. ಟಿವಿ ಅಲ್ಲಿವರೆಗೆ ಬುದ್ಧಿವಂತರ ಆಯ್ಕೆ ಆಗಿತ್ತ್. ಯಾವಾಗ ಚಾನೆಲ್ಗಳ ಸಂಖ್ಯೆ ಜಾಸ್ತಿ ಆತೋ ಟಿವಿ `ಮೂರ್ಖರ ಪೆಟ್ಟಿ' ಆಗಿಬಿಟ್ಟತ್. 
arebhase@gmail.com  

Thursday, 19 January 2012

ಒಲವೇ ನೀ ಎಲ್ಲಿ ಒಳಾ ..??

ನನ್ನ ಪ್ರೀತಿಯ ಹೈದ..ನನ್ನ ಕಾಡುವ ಹೈದ..ನಿಂಗೆ ಗೊತ್ತು ತಾನೇ, ನಾನ್ ನಿನ್ನ ಮುಖ ನೋಡದೆ  ಹೊತಾರೆ ಎದ್ದೆಳುಲೆತಾ..ಹೇಯ್  ನೀನೇ  ನನ್ನ ಅಲಾರಂ ಕ್ಲಾಕ್ ರಾ.. ನಾನ್ ಕಾಲೇಜಿಗೆ ಬಸ್ಲಿ ಹೋಕಾಕನಸಾ  ನೀ ನನ್ನ ಫಾಲೋ ಮಾಡಿಯಾ  .. ಹೇ ಇಲ್ಲೇತಾ ಹೇಳ್ಬೆಡಾ..ಈ ವಿಷಯಎಲ್ಲವಕೇ ಗೊತ್ತು...ಮತ್ತೆ, ದಿನಾ  ಕೆಮೆಸ್ಟ್ರಿ 
ಕ್ಲಾ ಸ್ಲಿ  ,ಬಂದ್ ಕಿಟಿಕಿ ಸೆರೆಂದ ಇಣುಕಿ ನೋಡ್ತಿದ್ದ...ಮೊದಲೇ ನಾನ್ ಕಾರ್ಬನ್ ಕಾಪಿ, ನನ್ನ  ಮಸಿಕೆಂಡ  ಮಾಡುವ ಯೋಚನೇಲಿ ಇದ್ದ ಅಲಾ...ನಂಗೆ ಗೊತ್ತು ರಾ ...ಆಗ ಎಲ್ಲ ನಾನ್ ನಿಂಗೆ  ಎಷ್ಟ್  ಬೈತ ಇದ್ದೆ ಗೊತ್ತಾ .??? ನೀ ನನ್ನ 
ನೋಡ್ಕಾಗದ್ತಾ  ,ಕ್ಲಾಸ್ಲಿ ಬೇರೆ ಜಾಗಲಿ ಕುದ್ದಿದ್ದೆ ಗೊತ್ತಾ...!!ಒಂದ್  ಸಲ ಬಸ್ ದ ಕಿಟಕಿನೇ ಮುಚ್ಹಿದ್ದೆ..ನಂಗೆ ಗೊತ್ತುರಾ ಅದಿಕೆ ನಿಂಗೆ
ನನ್ನ ಮೇಲೆ ಸಿಟ್ಟತಾ...ಹೇಯ್, ನಾನ್ ನಿನ್ನ ತುಂಬಾ ಮಿಸ್ ಮಾಡ್ಕತಾ ಒಳೆರಾ          
...ನಿನ್ನಂದಾಗಿ ನಾನ್ 
ಹೊತಾರೆ ಎಳ್ಕಾಕಾಕನ ಗಂಟೆ  8..ಎಷ್ಟೋ ಸಲ ಬಸ್ ಬೇರೆ ಮಿಸ್ ಆದೆ...ಈಗ ನನ್ನ ಫಾಲೋ ಮಾಡಿಕೆ ...ಕ್ಲಾಸಿಲಿ ನನ್ನ ಕಾಡಿಕೆ ಯಾರ್ ಇಲ್ಲೆರಾ..ನನ್ನ ಫೀಲಿಂಗ್ ನಿಂಗೆ ಅರ್ಥ ಆಗ್ತಾ ಉಟ್ತಾ ?..."ನೀ ನಿಲ್ಲದೆ ನನಗೇನಿದೆ "ತಾ  ಹಾಡು ಹೇಳಕುತಾ  ಅನ್ನಿಸಿದೆ...ಮತ್ತೆ ಈಗ ನೀ ಯಾಕೆ ಬೇಗ ಬಾಲೆ...ನಾನ್ ಕಳೆದ ವಾರ ಮಡಿಕೇರಿಗೆ ಹೋಗಿದ್ದರೆ ಅಲ್ಲಿ ಎಷ್ಟ್  ಚಳಿ ಉಟ್ಟು ಗೊತ್ತಾ...?? ಎಲ್ಲವೂ ನಿನ್ನೇ ಕಾಯ್ತಾ ಇದ್ದೋ..!! ಅದ್ಸರಿ, ನಿಂಗೆ ಈ ಪ್ರಪಂಚ ಸುತ್ತಿಕೆ ವೀಸಾ ಯಾರ್ ಕೊಟ್ಟದ್ ರಾ...?? ನೀ ಮತ್ತೆ ಅಲ್ಲಿಗೆಲ್ಲಾ  ಹೋಗ್ಬೆಡಾ    ...ನನ್ನ  ಹತ್ರ  ಮೊದಲು  ಬಾ.. ಹೇಯ್, ನಿಂಗೆ
ಮತ್ತೊಂದ್ ವಿಷಯ ಗೊತ್ತಾ ...ಎಲ್ಲಾ  ಪೇಪರ್ ಲಿ ಆ ನಿನ್ನ ಅತ್ತೆ ಮಗಳ,
ತಮ್ಮನ,ತಂಗೆನ,ಭಾವನ ,ತಮ್ಮನ ಹೆಣ್ ಅದೇ ರ ಆ "ಚಳಿ "   ..ಹೊಸ ದಾಖಲೆ ಬರ್ದುಟ್ಟು ಗಡ..ಅದರ್ದೇ  ಸುದ್ದಿ ...ನಂಗೆ ಅದೆಲ್ಲಾ ಗೊತ್ಹ್ಲೆ  ನೀ ಬೇಗ ಬಾ ಅಷ್ಟೇ...ಅಷ್ಟೇ..ಅಷ್ಟೇ......!!!
ನಂಗೆ ಗೊತ್ತು ನಾ ಎಷ್ಟ್ ಜೋರು ಕೂಗಿ ಹೇಳ್ರೂ  ನಿಂಗೆ  ಕೇಳ್ದುಲೆತಾ...ಅದಿಕೆ ನಾನ್ ನಮ್ಮ ಅರೆಭಾಷೆ ಬ್ಲಾಗಿ ಗೆ ನಿನ್ನ ಬಗ್ಗೆ ಬರ್ದ್ ಕಳಿಸ್ತಾ
ಒಳೆ..ಅವು ನಿನ್ನ ಹುಡುಕಿ ಕೊಟ್ತವೆ..   ಮತ್ತೆ ನೀ ಬೇಗ 9 ಗಂಟೆ ಮೊದಲೇ ಬರೋಕು... ನಾನ್ ನಿನ್ನ ವಿವರನ ಬರ್ದ್ ಕಳಿಸ್ತಾ ಒಳೆ...
ನಮ್ಮ ಬ್ಲಾಗಿನ ಸಂಪಾದಕರೇ  ಸ್ವಲ್ಪ ವಿವರ ನೋಡಿಕಣಿ,...
ಹೆಸರು - ಸೂರ್ಯ ಆಲಿಯಾಸ್ ರವಿ..
ಸ್ತಳ - ಆಕಾಶ
ಬಣ್ಣ - ಒಂತರಾ ಕೆಮ್ಪುಮಿಶ್ರ ಹಳದಿ ಇರೋಕು..
ಎತ್ತರ- 12345678910 ಕಿ.ಮಿ
ದಪ್ಪ -ನನ್ನಕಿಂತ ಒಂದ್ಚೂರು ಸಣ್ಣ..
ಕೈ ಕಾಲ್ ಇಲ್ಲೆ...
ಉರುಟು ಮುಖ...ಕಣ್ , ಬಾಯಿ ಗೊತ್ಹ್ಲೆ...
ನೀವೆಲ್ಲ ಸೇರಿ ಅವನ್ನ ಹುಡುಕಿ ಕೊಡಿ.....ಹೇಯ್ ಗೋಡೆಗಳೇ ಅಂವ    ನನ್ನ ಹೈದ  ನೀವೆಲ್ಲಾ  ಜಾಸ್ತಿ  ಹುಡುಕಿಕೆ ಹೋಗ್ಬಡಿ ...ಅವ ಸಕತ್ ಹಾಟ್ ಗೊತ್ತಾ....????

ನಿನಗಾಗಿ,
ನಿನ್ನ ಪ್ರೀತಿಯ ಪವಿ ..

- ಪವಿತ್ರ ನೆರಿಯನ 
ಭಾವನೆಗಳ ಪಲ್ಲವಿ.

Wednesday, 18 January 2012

ಕೊಡಗುಲಿ ಚಳಿ ಚಳಿ...

  ಮಡಿಕೇರೀಲಿ 4 ಡಿಗ್ರಿ ಚಳಿ ! 112 ವರ್ಷಗಳ ಹಿಂದೆ ಇಂಥ ಕೋಟ ಇತ್ತ್ಗಡ. ಅದ್ಬಿಟ್ಟರೆ ಈಗಿನ ಚಳಿ ದಾಖಲೆ ಬರ್ದುಟ್ಟು. 
ಮೊನ್ನೆ ಮಧ್ಯಾಹ್ನ 12ಗಂಟೆಗೆ ಗೆಳೆಯ ಧ್ಯಾನ್   ಪೂಣಚ್ಚ ಕಾಲ್ ಮಾಡಿತ್ತ್. ನಡು ಮಧ್ಯಾಹ್ನದ ಆ ಹೊತ್ತಲ್ಲೂ ಚಳಿ ತಡೆಯಕ್ಕಾದೆ ಅಂವ, ಅಷ್ಟೊತ್ತಿಗೆನೇ ಒಂದ್ ಪೆಗ್ ಏರ್ಸಿ ಆಗಿತ್ತ್ ! ಕೊಡಗ್ನ ಕನರ್ಾಟಕದ ಕಾಶ್ಮೀರತಾ ಹೇಳಿವೆ. ಈಗಿನ ಕೋಟದ ಕಾಟ ನೋಡಿರೆ, ಹಂಗೆನೇ ಅನ್ನಿಸಿದೆ. ಕಾಶ್ಮೀರಲಿ ವಾತಾವರಣ ಮೈನಸ್ 0 ಕ್ಕಿಂತ ಕಡಿಮೆ ಆಗಿ, ಹಿಮದ ಮಳೆ ಸುರೀತ್ತುಟ್ಟು. ರಸ್ತೆಗಳ ಮೇಲೆಲ್ಲಾ ಐಸ್ ಬಿದ್ದ ವಾಹನಗಳ ಓಡಾಟನೇ ಕಷ್ಟ ಆಗಿಬಿಟ್ಟುಟ್ಟು. ನಮ್ಮ ಕೊಡಗುಲಿ ಏನು ಕಮ್ಮಿ, ಇಲ್ಲೂ ಬೆಳಗ್ಗೆ ಬೆಳಗ್ಗೆನೇ ಮಂಜು ಬಿದ್ದಿದ್ದದೆ. ಬಗ್ಗಿದರೆ ಕಾಲೇ ಕಾಂಬಲೆ ಅಂಥ ಮಂಜು ! 
ಹೋದ ತಿಂಗ ಭಾಗಮಂಡಲದ ನನ್ನ ಫ್ರೆಂಡ್ ಮುನ್ನನ ಜೊತೆ ಮಾತಾಡಿಕಾಕನ ಚಳಿ ಇಲ್ಲೆತಾ ಬೇಸರ ಮಾಡಿಕಣ್ತಿತ್ತ್. ಪಾಪ, ಹೊಸದಾಗಿ ಮದುವೆ ಆದಂವ, ಬೇಸರ ಇದ್ದದ್ದೇ... ! ಭಾಗಮಂಡಲಲಿ ಜಾತ್ರೆ ಕಳ್ದ ಕೂಡ್ಲೆ, ಚಳಿಗಾಲ ಶುರುವಾದಂಗೆ ಲೆಕ್ಕ. ನವೆಂಬರ್, ಡಿಸೆಂಬರ್ಲಿ ಅಂತೂ ಚಳಿ ತಡ್ಕಂಬಕ್ಕೆ ಆದುಲ್ಲೆ. ಆದ್ರೆ, ಈ ವರ್ಷ ಹವಾಮಾನ ಸ್ವಲ್ಪ ಬದಲಾವಣೆ ಆಗಿತ್ತ್. ಚಳಿ ಈಗ ಅಂದ್ರೆ, ಜನವರಿಲಿ ಶುರುವಾಗ್ಯುಟ್ಟು. ಅದೇ ಮುನ್ನಾ ಈಗ ಚಳಿ ತಡ್ಕಂಬಕ್ಕೆ ಆಲೆತಾ ಬೊಬ್ಬೆ ಹೊಡ್ದದೆ. ಕೈ ಕಾಲೆಲ್ಲಾ ಮರಗಟ್ಟಿ ಹೋಗುವಂಗೆ ಕೋಟಗಡ ! ಭಾಗಮಂಡಲದ ಅಜ್ಜಂಗ ಹೇಳುವ ಪ್ರಕಾರ, ಅವು ಅವ ಜೀವನಲ್ಲಿ ಇಂಥ ಚಳಿ ನೋಡಿತ್ಲೆ ಗಡ. 
ಯಾವ ವರ್ಷ ಚಳಿಗಾಲಲಿ ಜಾಸ್ತಿ ಚಳಿ ಇದ್ದದೆನೋ ಅದರ ಮುಂದೆ ಬರ್ವ ಮಳೆಗಾಲದಲ್ಲಿ ಮಳೆ ಕಡಿಮೆ ಇದ್ದದೆತಾ ಹೇಳಿವೆ. ನೋಡೊಕು, ಈ ವರ್ಷ ಏನು ಆದೆತಾ ...

Tuesday, 17 January 2012

ಭೂಮಿ ಮೇಲಿನ ಸ್ವರ್ಗ ರಾಮೋಜಿ ಫಿಲಂ ಸಿಟಿ


ಭೂಮಿ ಮೇಲೆ ಮನುಷ್ಯ ಕಟ್ಟಿದ ಸ್ವರ್ಗತೇಳುದು ಏನಾರ್ ಇದ್ದ್ರೆ, ಅದ್ ರಾಮೋಜಿ ಫಿಲಂ ಸಿಟಿ ! ನೀವು ಹೈದರಾಬಾದ್ಗೆ ಹೋದ್ರೆ, ರಾಮೋಜಿ ಫಿಲಂ ಸಿಟಿ ನೋಡ್ದುನ ಮಾತ್ರ ಮಿಸ್ ಮಾಡ್ಕಂಬೇಡಿ. ಅದಕ್ಕಾಗಿ ಒಂದ್ ದಿನ ರಿಸರ್ವ್ ಮಾಡಿ ಇಟ್ಟ್ಬಿಡಿ...ಇದ್ರಿಂದ ಖಂಡಿತ ನಿಮ್ಗೆ ಯಾವುದೇ ನಷ್ಟ ಆದುಲ್ಲೆ... ನಾನ್ ಈಟಿವಿಲಿ ಕೆಲ್ಸ ಮಾಡಿಕಾಕನ ನಾಲ್ಕು ವರ್ಷ ಅಲ್ಲೇ ಇದ್ದೆ. ಇಡೀ ರಾಮೋಜಿ ಫಿಲಂ ಸಿಟೀನ ತಿರುಗಾಡ್ವ ಅವಕಾಶ ತುಂಬಾ ಸಲ ಸಿಕ್ಕಿತ್ತ್. ಅದ್ನೆಲ್ಲಾ ನಾ ಸರಿಯಾಗೇ ಉಪಯೋಗಿಸಿಕಂಡೆ...ಅಲ್ಲಿನ ಪ್ರತಿಯೊಂದು ನಿಮರ್ಾಣ ಕೂಡ ಒಂದು ಆಶ್ಚರ್ಯನೇ... ಹ್ಯಾಟ್ಸಪ್ ರಾಮೋಜಿ ರಾವ್ !
ಈಟಿವಿಗೆ ಸೇರಿಕಂಡ ಕೂಡ್ಲೇ ಹೊಸಬರಿಗೆ ಅಲ್ಲೊಂದ್ ಕ್ಲಾಸ್ ತಕ್ಕಂಡವೆ. ರಾಮೋಜಿ ಗ್ರೂಪ್ಗೆ ಸೇರ್ದ ಎಲ್ಲಾ ಸಂಸ್ಥೆಗಳನ್ನ ಪರಿಚಯ ಮಾಡಿಕೊಡ್ದು, ಆ ಕ್ಲಾಸ್ನ ಉದ್ದೇಶ. ಸ್ಲೈಡ್ ಶೋ, ಫಿಲಂ ಶೋ ಮತ್ತೆ ಪವರ್ಪಾಯಿಂಟ್ ಉಪಯೋಗಿಸಿಕಂಡ್ ಆ ಕ್ಲಾಸ್ಲಿ ಮಾಹಿತಿ ಕೊಟ್ಟವೆ. ನಂಗೆ ಆಗ ಇಷ್ಟ ಆದ್ ರಾಮೋಜಿ ಫಿಲಂ ಸಿಟಿ. ಸುಮಾರ್ 1400 ಎಕರೆ ಪ್ರದೇಶಲಿ ಈ ಫಿಲಂ ಸಿಟಿ ಹರಡಿ ನಿಂತುಟ್ಟು. ಈ ಜಾಗ ರಾಮೋಜಿ ರಾವ್ ಕೈಗೆ ಸಿಕ್ಕಿಕೆ ಮೊದ್ಲು ಬರಡು ಬೆಂಗಾಡು. ಕಾಲ್ ಹಾಕಿದ್ದಲ್ಲೆಲ್ಲಾ ಸಿಕ್ಕುದು ಬರೀ ಕಲ್ಲು. ತಲೆ ಸುಡುವ ಬಿಸಿಲು. ಆದ್ರೆ ಈಗ ನೋಡಿರೆ, ಎಲ್ಲಾ ಅದಲು ಬದಲು. `ನೀವು ಬರುವಾಗ ಬರೀ ಹಣ ತೆಗೆದುಕೊಂಡು ಬನ್ನಿ, ವಾಪಸ್ ಹೋಗುವಾಗ ಒಂದು ಸಿನಿಮಾ ಮಾಡಿ ರೀಲ್ ಡಬ್ಬ ತೆಗೆದುಕೊಂಡು ಹೋಗಬಹುದು' ಫಿಲಂ ಸಿಟಿ ಸುತ್ತಾಡಿಸಿಕಾಕನ ಅಲ್ಲಿನ ಗೈಡ್ಗ ಹಿಂದಿಲಿ ಈ ಮಾತ್ ಹೇಳಿವೆ. ಇದು ನೂರಕ್ಕೆ ನೂರು ಸತ್ಯ. ಒಂದು ಸಿನಿಮಾ ಮಾಡಿಕೆ ಏನೇನು ಬೇಕೋ ಎಲ್ಲಾ ಅಲ್ಲಿ ಸಿಕ್ಕಿದೆ. ಕಥೆಗಾರ, ನಿದರ್ೇಶಕ, ಆ್ಯಕ್ಟರ್ಸ್ ಹಿಂಗೆ... ನಿಮಗೆ ಸಮುದ್ರದ ಸೆಟ್ ಬೇಕ್ತೇಳಿರೆ, ಒಂದೆರಡು ದಿನಲಿ ಅದ್ನೂ ರೆಡಿ ಮಾಡಿ ಕೊಡ್ವ ಕಲಾವಿದರು ಅಲ್ಲಿ ಒಳೊ. ತೆಲುಗುನ `ಮಗಧೀರ' ಸಿನಿಮಾದಲ್ಲಿನ ಅದ್ಭುತ ಸೆಟ್ ಅಲ್ಲಿದ್ದೇ. ಕನ್ನಡ, ತಮಿಳು, ಹಿಂದಿ, ಇಂಗ್ಲೀಷ್ ಫಿಲಂಗಳ ಶೂಟಿಂಗ್ ಕೂಡ ಅಲ್ಲಿ ನಡ್ದದೆ. ಹಂಗಾಗಿ ಅಮಿತಾಬ್ ಬಚ್ಚನ್, ಕರೀನಾ ಕಪೂರ್ ಸೇರ್ದಂಗೆ ದೊಡ್ಡ ದೊಡ್ಡ ಆ್ಯಕ್ಟರ್ಗಳ್ನ ನೋಡ್ವ ಭಾಗ್ಯ ನಂಗೆ ಸಿಕ್ಕಿತ್ತ್. ನಿಮ್ಗೆ ಅದೃಷ್ಟ ಇದ್ದ್ರೆ, ನಿಮ್ಗೂ ಇಂಥವೆಲ್ಲಾ ನೋಡಿಕೆ ಸಿಗ್ವ ಸಾಧ್ಯತೆ ತಳ್ಳಿಹಾಕಿಕೆ ಆದುಲೆ...
ಅಲ್ಲಿನ ವ್ಯವಸ್ಥೆ ಕೂಡ ತುಂಬಾ ಅಚ್ಚುಕಟ್ಟು. ಟೂರ್ ಬಂದವ್ರನ್ನ ಲಾಯ್ಕಲಿ ನೋಡಿ ಕಂಡವೆ. ಒಮ್ಮೆ ರಾಮೋಜಿ `ಕೋಟೆ' ಒಳಗೆ ನುಗ್ಗಿದ ಮೇಲೆ ಅವ್ರ ಬಸ್ಲೇ ಕರ್ಕಂಡ್ ಹೋದವೆ. ಎಲ್ಲಾ ಕಡೆ ಅವ್ರ ಗೈಡ್ಗ ಇದ್ದವೆ. ಪ್ರತಿಯೊಂದನ್ನ ವಿವರಿಸಿ ಹೇಳಿವೆ. ಫಿಲಂ ಸಿಟಿ ಒಳಗೆ ಊಟಕ್ಕೆ, ಉಳ್ಕಣಿಕೆ ಎಲ್ಲಾ ರೀತಿಯ ಸೌಲಭ್ಯಗ ಮಾಡ್ಯೊಳೊ. ಅಲ್ಲಿ ಏನೇನ್ ಉಟ್ಟುತಾ ಬರವಣಿಗೆಲಿ ಹೇಳಿಕೆ ತುಂಬಾ ಕಷ್ಟ... ನೀವೇ ಒಮ್ಮೆ ಹೋಗಿ ನೋಡಿ. ಆದ್ರೆ, ಮಾಚರ್್ ಮಧ್ಯ ಭಾಗಂದ ಜೂನ್ ಮಧ್ಯ ಭಾಗದ ವರೆಗೆ ಅಲ್ಲಿ ಹೋದು ಬೇಡ. ಏಕೆತೇಳಿರೆ, ತುಂಬಾ ಬಿಸಿಲು ಇದ್ದದೆ. 45 ಡಿಗ್ರಿಗಿಂತ ಜಾಸ್ತಿ ಬಿಸಿ, ತಡ್ಕಂಬಕೆ ಆದುಲ್ಲೆ. ಹೈದರಾಬಾದ್ ಟೂರ್ಗೆ ಇದ್ ಒಳ್ಳೇ ಟೈಂ.. ರಾಮೋಜಿ ಫಿಲಂ ಸಿಟಿ ವೆಬ್ಸೈಟ್...www.ramojifilmcity.com


ಚಿಂತೆ ಜ್ವಾಲಾಮುಖಿಯಾಕನ...


ಚಿಂತೆ ಚಿತೆಯ ಕಿಡಿ
ನೂರಾರ್ ಯೋಜನೆಗಳ್ನ
ಸರದಿಲಿ ಕಳೆಗುಂದ್ಕನ 
ಗೆಲುವುಗಳ ಗೋಡೆ..........
ಕುಸ್ತ್ ಮಾಯವಾಗಿ 
ಜೀವ ಬರಡಾಗಿ ನಿಂತತ್........!
ನಿಮಿಷದ ಧ್ಯಾನ...........!
ಲೋಕದ ಪ್ರದಕ್ಷಿಣೆ ಹಾಕಿತ್ 
ಮತ್ತೆ ಕಣ್ಣ್ ಮಿಟುಕಿಸಿರೆ
ಕುದ್ದ ಜಾಗನೇ ಬ್ಯಾರೆಯಾಗಿ 
ದುತ್ತನೆ ಕೆಡಗಿದಂಗೆ
ನಿತ್ಯದ ಕೊರಗ್ ರೋಗದ ಬಾಧೆಗೆ
ಸುಖದ ಜೀವ ರೋಗಿಯ ಪಾಲಿಗೆ
ಅದರೇನ್ ಮಾಡುದು............?
ಮನಸ್ಸ್ ಸ್ಥೀಮಿತನೇ ಒಳ್ಳೇ ಮದ್ದು
     

- ಕುಲ್ಲಚನ ತಾರಾರವಿ, 
ಕುಂಬಳದಾಳು 
arebhase@gmail.com

Monday, 16 January 2012

ಕುವೆಂಪು


ಮಲೆನಾಡ ಮೈಸಿರಿಲಿ ಕಣ್ ತೆರೆದ
ಮಲ್ಲಿಗೆಯ ನಾಡ್ಲಿ ಬೆಳ್ದ
ನಿಸರ್ಗ ಚೆಲುವಿಗೆ ಒಲಿದ,
ಚೈತ್ರದ ಕುಸುಮಗಳ್ಲಿ ನಲಿದ,
ಕನ್ನಡ ಅವ್ವನ ಕೂಸಾಗಿ................!
ಬರ್ದ ಕವನಗಳ್ನ ಸವಿಯಾಗಿ
ಅಂದ್ ಕನ್ನಡ ಅವ್ವನ ತೊಟ್ಟ್ಲ್ಲಿ
ಕೇಕೆಯ ಪೊರ್ಲ್ನ ಕಂದ
ಮತ್ತಿಂದ್ ಕನ್ನಡ ನಾಡಲಿ 
ಮಹಾಶಯ ಕವಿಯಾಗಿ ನಿಂತ
ಮುಪ್ಪುನ ನಯನ ಸೆಳೆಯುತ್ತಿತ್ 
ಮುಪ್ಪು ಮುತ್ತಿರುವ ನಿಸರ್ಗ ಕಡೆ
ಬರ್ದ್ಟ್ಟ ಮೆರ್ದಿಟ್ಟ ಅಕ್ಷರ ಹಸಿರಾಗಿಟ್ಟು 
ಹಾ ಕನ್ನಡತ ಹೇಳ್ರೆ ಬಹಳ ಖುಷಿ ನಿಂಗೆ
ಅವನ ವರ್ಣನೆತಾ ಹೇಳ್ರೆ ಬಲು ರೀತಿ ನಿಂದ್   

- ಕುಲ್ಲಚನ ತಾರಾರವಿ, ಕುಂಬುಳದಾಳು  
arebhase@gmail.com

ನಿದ್ರೆಗೆ ಜಾರಿದಾಗ...

ಕುದ್ದಿದ್ದೆ ನಾನ್ ಕ್ಲಾಸ್ಲಿ ...
ಮನಸಿಲ್ಲದ ಮನಸ್ಲಿ !!
ಮೊಬೈಲ್ ಕಡೆ ಕಣ್ಣಾಡಿಸಿದೆ..
ಹಂಗೆ ಸುಮ್ಮನೆ,...
ಮೆಸೇಜ್  ಇತ್ಲೆ .. ಮಿಸ್ಡ್  ಕಾಲ್  ಇತ್ಲೆ...!!
ಗೆಳತಿಗೆ ಕೀಟಲೆ ,
ಮಾಡಿಕೆ  ಮನಸಿತ್ಲೇ..!!
ಗೀಚೋಣ ಹೇಳ್ರೆ ..
ಏನೂ ತೋಚಿತ್ಲೆ..!!
ದೂರಲಿ ಕೇಳ್ತಾ ಇತ್..
ಯಾರೋ ಹಾಡ್  ಹೇಳ್ದಂಗೆ...!!
ಕೇಳಿ ಕೇಳಿ ಹಂಗೆ,
ಜಾರಿ ಬಿದ್ದೆ ನಿದ್ರೆಗೆ...!!!!!
ಎದ್ದ್  ನೋಡ್ರೆ ನಾನಿದ್ದೆ..
ಲೈಬ್ರರಿಲಿ .....!!
ಕಣ್ಣುಜ್ಜಿ ಮತ್ತೆ ನೋಡ್ದೆ..
ಕ್ಲಾಸ್ ಅಲ್ಲ ಲೈಬ್ರರಿನೇ !!!
ಹೋ ಕನಸ್ ಲಿ ,ಮತ್ತೊಂದ್
ಕನಸ್ ಕಂಡಿದ್ದೆ ನಾನ್...!!
ನಗೆ ಬಾತ್,
ಕನಸ್ನ  ಗ್ಯಾನ ಮಾಡಿ..!!
ಎಲ್ಲ ನಿದ್ರಾ ದೇವಿ
ಕೃಪೆತಾ  ಹೇಳಿ..
ಹೊರಟ್ ಹೋದೆ..
ಕ್ಲಾಸಿಗೆ....!!!!
ನಿನಗಾಗಿ..


ಪವಿತ್ರ ನೆರಿಯನ, ಭಾವನೆಗಳ ಪಲ್ಲವಿ
arebhase@gmail.com

ನನ್ನೂರು ನಂಗೆ ಪ್ರೀತಿ

ಒಂದೂರು...
ಊರಂದ್ರೆ ಅಂಥ ದೊಡ್ಡದೇನಲ್ಲಾ...
ಒಂದ್ಹತ್ತು ಮನೆಗ
ಮನೆಗೆ ನಾಲ್ಕರಂಗೆ ನಲವತ್ತು ಜನಗ
ನಾಲ್ಕು ಗೂಡಂಗಡಿಗ
ಒಂದ್ ದೊಡ್ಡ ಹೆಂಡದಂಗಡಿ !
ಇದ್ ಇದ್ರೆನೇ ಊರು !
ಆ ಊರಲ್ಲೂ ಸೂರ್ಯ ಹುಟ್ಟಿದೆ
ಬೆಟ್ಟದ ಮೂಲೇಲಿ ಮರದ ಸೆರೇಲಿ
ದೊಡ್ಡ ಕೆಂಪು ಚೆಂಡಿನಂಗೆ
ಸಂಜೆ ಒಮ್ಮೆ ಮರೆಯಾದೆ !
ಅಲ್ಲೂ ಅಜ್ಜಿ ಸಾಂಕಿದ ಕೋಳಿ ಕೂಗಿದೆ !
ಅತ್ತೆ, ಸೊಸೆ ಜಗಳ ಆಡಿವೆ
ಅಪ್ಪನ ಆಸ್ತಿಗಾಗಿ ಸಣ್ಣಮಂಞ
ಕೋವಿ ಹಿಡ್ಕಂಡದೆ !
ಇಲ್ಲೂ ಬೆಟ್ಟದ ಮೇಲೆನೇ ಹೊಳೆ
ಹುಟ್ಟುದು !
ಗಂಗೆ ಹಸುನ ಹಾಲಿನ ಬಣ್ಣ ಬಿಳಿ !
ಮಲ್ಲಿಗೆ ಹೂವಿಗೆ ಅದೇ ಪರಿಮಳ
  ಮತ್ತೆಂಥ ವಿಶೇಷ ?
ಅದ್ ನನ್ನ ಊರು !
ನನ್ನ ಬೆಳೆಸಿದ ಊರು !
ಅನ್ನ ಕೊಟ್ಟ ಊರು !
ಅಕ್ಷರ ಕಲಿಸಿದ ಊರು !
arebhase@gmail.com

Sunday, 15 January 2012

`ಕಲ್ಯಾಣಿ ಬಿರಿಯಾನಿ' ಗೊತ್ತಾ...?


ಹೈದರಾಬಾದ್ತಾ ಹೇಳಿರೆ ಕಣ್ಮುಂದೆ ಬಾದು ಬಿರಿಯಾನಿ. `ಹೈದರಾಬಾದ್ ಬಿರಿಯಾನಿ' ವರ್ಲ್ಡ್ ಫೇಮಸ್. ಬೆಂಗಳೂರ್ಲಿ ಕೂಡ `ಹೈದರಾಬಾದ್ ಬಿರಿಯಾನಿ' ಹೊಟೇಲ್ಗ ತುಂಬಾ ಒಳೊ. ಆದ್ರೆ, ಹೈದರಾಬಾದ್ಲಿ ಸಿಗ್ವ ಬಿರಿಯಾನಿ ಟೇಸ್ಟೇ ಬೇರೆ. ಅದ್ರಲ್ಲೂ `ಬಾವರ್ಚಿ  ಹೈದರಾಬಾದ್ ಬಿರಿಯಾನಿ' ಅಂತೂ ಸಕತ್ ರುಚಿ, ಅದೆಂಥ ಹಾಕುವೆತಾ ಮಾತ್ರ ಗೊತ್ಲೆ. ಬಾಸ್ಮತಿ ಅಕ್ಕಿಯಿಂದನೇ ಬಿರಿಯಾನಿ ಮಾಡ್ದರಿಂದ ರೇಟೂ ಜಾಸ್ತಿ...ಕಡಿಮೆತೇಳಿರೆ ನೂರು ರೂಪಾಯಿಂದ ಶುರು ಆದೆ. ಅದೇ ಹೈದರಾಬಾದ್ಲಿ ಇನ್ನೂ ಒಂದು ಬಿರಿಯಾನಿ ಸಿಕ್ಕಿದೆ. ಅದ್ `ಕಲ್ಯಾಣಿ ಬಿರಿಯಾನಿ'
`ಕಲ್ಯಾಣಿ ಬಿರಿಯಾನಿ' ಹೆಸ್ರು ಕೇಳಿಕೆ ಎಷ್ಟು ಲಾಯ್ಕನೋ, ನೋಡಿಕೂ ಅಷ್ಟೇ ಲಾಯ್ಕ ಇದ್ದದೆ...ಕಡ್ಡಿಹಂಗೆ ಉದ್ದುದ್ದ ಬಾಸ್ಮತಿ ಅಕ್ಕಿಯ ಅನ್ನ, ಅದಕ್ಕೆ ಕೆಂಪು-ಹಸಿರು ಬಣ್ಣ, ಮೇಲೆ ಹಂಗೆ ಹರಡಿರ್ವ ಏಲಕ್ಕಿ, ಲವಂಗ, ಪಟ್ಟೆ, ಸಂಬಾರ ಸೊಪ್ಪು...ಮೂಳೆ ಇಲ್ಲದ ಮೆತ್ತನೆ ಮಾಂಸ ! ಘಮ ಘಮ ಪರಿಮಳ. ಆದ್ರೂ ಇದ್ರ ರೇಟ್ ತುಂಬಾ ಕಡ್ಮೆ... ಹೈದರಾಬಾದ್ನ ಹೈವೆ ಸೈಡ್ನ ಡಾಬಾಗಳಲ್ಲಿ 35 ರೂಪಾಯಿ ಕೊಟ್ರೆ, ಹೊಟ್ಟೆತುಂಬಾ `ಕಲ್ಯಾಣಿ ಬಿರಿಯಾನಿ' ಸಿಕ್ಕಿದೆ. 
ಹೈದರಾಬಾದ್ನ ರಾಮೋಜಿ ಫಿಲಂ ಸಿಟೀಲಿ ಈಟಿವಿ ಆಫೀಸ್ ಇರ್ದು. ನಾವೆಲ್ಲಾ ಅಲ್ಲಿಂದ ಸುಮಾರು 30 ಕಿಲೋಮೀಟರ್ ದೂರದ `ಸುಷ್ಮಾ'ತೇಳುವಲ್ಲಿ ರೂಂ ಮಾಡಿಕಂಡಿದ್ದೊ. ರುಚಿ ನೋಡ್ನೋತೇಳಿರೆ, ನಾವು ಇದ್ದಲ್ಲಿ ಈ `ಕಲ್ಯಾಣಿ ಬಿರಿಯಾನಿ' ಸಿಕ್ತಿತ್ಲೆ. ಕಂಪೆನಿ ಬಸ್ಲಿ ಆಫೀಸ್ಗೆ ಹೋಕಾಕನ, ಬಾಕಾಕನ `ಕಲ್ಯಾಣಿ ಬಿರಿಯಾನಿ - 35 ರೂ.' ತೇಳುವ ಬೋರ್ಡ್  ನಮ್ಮ ಕಣ್ಣ್ಕುಕ್ಕುತ್ತಿತ್. ಒಂದ್ಸಲ ತಿಂದುನೋಡೊಕುತೇಳುವ ಆಸೆನೂ ನಮಗೆಲ್ಲಾ ಬಂದ್ಬಿಟ್ಟಿತ್ತ್. ಆದ್ರೂ ಏನೋ ಒಂದು ಸಣ್ಣ ಅನುಮಾನ....ಹೊಟೇಲ್ಗಳಲ್ಲಿ ಅಷ್ಟೊಂದು ರೇಟ್ ಇರ್ವ ಬಿರಿಯಾನಿ ಈ ಡಾಬಾಗಳಲ್ಲಿ ಇಷ್ಟು ಕಡ್ಮೆಗೆ ಮಾರಿವೆಯಲ್ಲಾ.. ಏನೋ ಮಸಲತ್ತು ಉಟ್ಟುತಾ ತಲೆ ಕೊರಿಯಕೆ ಶುರುವಾತ್. ಒಂದ್ ವೀಕ್ಲಿ ಆಫ್ ದಿನ `ಶೋಧ'ನೆಗೆ ಹೊರಟೋ...
ಸಂಜೆ ಹೊತ್ತ್... ಹಯತ್ನಗರದಲ್ಲಿರ್ವ, ಡಾಬಾಕ್ಕೆ ತುಂಬಾ ಲಾಯ್ಕಲಿ ಸೀರಿಯಲ್ ಲೈಟ್ ಹಾಕಿದ್ದೊ. ಚಿರಂಜೀವಿದ್  ಯಾವುದೋ ಒಂದ್ ತೆಲುಗು ಹಾಡ್ ಜೋರಾಗಿ ಕೇಳ್ತಿತ್. ಒಳಗೆ ಡಿಮ್ ಲೈಟ್ ಇರ್ವ ಒಂದ್ ಕಡೆ ಹೋಗಿ ಕುದ್ದೊ. ಡಾಬಾ ಪೂತರ್ಿ ಬಿರಿಯಾನಿ ಘಮ ಘಮ ! ನಮ್ಮ ಜೊತೆ ಇದ್ದಂವ ಒಬ್ಬ `ಕಲ್ಯಾಣಿ ಬಿರಿಯಾನಿ'ಗೆ ಆರ್ಡರ್ ಮಾಡಿಯೇ ಬಿಡ್ತ್. ಕಾಲು ಗಂಟೆ ವೇಯ್ಟ್ ಮಾಡ್ದ ಮೇಲೆ ನಮ್ಮ ಟೇಬಲ್ಗೆ ಬಿಸಿಬಿಸಿ `ಕಲ್ಯಾಣಿ ಬಿರಿಯಾನಿ' ಬಾತ್.... ಏನೋ ಡೌಟ್ ಇಟ್ಕಂಡ್ ಮಾಂಸನ ಮುಟ್ಟಿ ನೋಡ್ದೆ... ಯಾಕೋ ಅದ್ ಚಿಕನ್ ಇದ್ದಂಗೆ ಇತ್ಲೆ... ಎಲ್ಲಕ್ಕಿಂತ ಮೊದ್ಲ್ ಆರ್ಡರ್ ಮಾಡ್ದಂವ ಅದಾಗ್ಲೆ ಚಪ್ಪರಿಸಿಕೆ ಶುರ್ ಮಾಡಿಯಾಗಿತ್ತ್. `ಬೋನ್ಲೆಸ್' ಮಾಂಸನ ಎಳ್ದೆಳ್ದ್ ತಿನ್ತಿತ್. ಅಂವ ಹಂಗೆ ತಿಂಬಕಾಕನ ನಂಗೆ ದೂರದಲ್ಲೆಲ್ಲೂ `ಅಂಬಾ' ತೇಳ್ದ ಹಂಗೆ ಆತ್ !
ವೇಯ್ಟರ್ನ ಕರ್ದ್, ನಂಗೆ ಗೊತ್ತಿರ್ವ ಹರಕುಮುರುಕು ತೆಲುಗುಲಿ ಅವ್ನ ಇದೆಂಥ ಮಾಂಸತಾ ಕೇಳ್ದೆ... ನನ್ನ ಊಹೆ ಸರಿಯಾಗಿತ್... ಅದೆಂಥ ಮಾಂಸತಾ ವೇಯ್ಟರ್ ಹೇಳ್ತಿದ್ದ್ರೆ, ನನ್ ಪಕ್ಕ ಚಪ್ಪರಿಸ್ತಿದ್ದಂವ ಬಾಯಿಗೆ ಕೈ ಅಡ್ಡ ಇಟ್ಟ್ಕಂಡ್ ವಾಷ್ಬೇಷನ್ ಕಡೆ ಓಡ್ತಿತ್... ಆಗ ನನ್ನ ಮುಂದೆ ಇದ್ದ `ಕಲ್ಯಾಣಿ ಬಿರಿಯಾನಿ' ಮಧ್ಯೆಂದನೂ `ಅಂಬಾ' ತೇಳುವ ಧ್ವನಿ ಕೇಳ್ತಿತ್...    
arebhase@gmail.com

Friday, 13 January 2012

ಮಿನುಪುಳ


ಹಗಲೆಲ್ಲ ಜಂದು
ನಕ್ಕು ನಲಿದು
ರಾತ್ರಿಯಲಿ ಒಳನಡೆದು 
ರಾಣಿಯರು ನಿದ್ರಿಸಿದಾಗ.........!
          ನೀನೊಬ್ಬಳೆ ಬೆಳಕ
          ಹೊತ್ತುಕೊಂಡು ಹಾರಡಿಯ 
          ನಿಂಗೆಷ್ಟು ಪೊಗರು
          ನಾನೊಂದು ಮಿನುಪುಳವಾಗಿದ್ದರೆ..........!
ಆಗಸದಿ ತಾರೆ ಮಿನುಗಿದರೆ
ಭೂಮಿಗೆ ನೀನೊಂದು
ತಾರೆಗಳಂಗೆ ಮಿನುಗುವ 
ಅಪ್ಸರ ರಾಣಿ..........!
        ಗೀಳಿ ಕೋಗಿಲೆಗಳ
        ಕಲರವ ಪೊದರಿನಲ್ಲಿ
        ನೀ ಮಿಂಚುತೊಳ, ತಾರ ಸುಂದರಿನಂಗೆ
        ನಿಂಗೆ ಯಾರು ತೊಡಸಿದೊ
        ಬೆಳಗುವ ಹೊದಿಕೆಯ..............!
                                                 

ಕುಲ್ಲಚನ ತಾರಾರವಿ, 
ಕುಂಬುಳುದಾಳು
aeebhase@gmail.com      

Thursday, 12 January 2012

ಭಾಗಮಂಡಲಲಿ ಭಂಡಾರ ಲೆಕ್ಕ ಹಾಕುದು...


        ಭಾಗಮಂಡಲ ಜಾತ್ರೆತೇಳಿರಿ ಗೊತ್ತಲ್ಲಾ....ಜನವೋ ಜನ. ಕೊಡಗಿನವು ಮಾತ್ರ ಅಲ್ಲ, ಕುಂದಾಪುರ, ಮಂಡ್ಯ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಜೊತೇಲಿ ವಿದೇಶಗಳಿಂದ ಕೂಡ ತುಂಬಾ ಭಕ್ತರು ಬಂದವೆ. ತುಲಾ ಸಂಕ್ರಮಣಂದ ಕಿರು ಸಂಕ್ರಮಣ ವರೆಗೆ ಭಾಗಮಂಡಲ ಮತ್ತೆ ತಲಕಾವೇರೀಲಿ ತುಂಬಾ ಜನ ಇದ್ದವೆ. ಈ ಎರಡೂ ಜಾಗಗಳಲ್ಲಿ ಮತ್ತೆ ರೋಡ್ಸೈಡ್ಲಿ ಇರ್ವ ಅಂಗಡಿಗಳಿಗೆ ಇದೊಂದು ತಿಂಗ ಭರ್ಜರಿ ವ್ಯಾಪಾರ. ಹಂಗೆನೇ ತಲಕಾವೇರಿ ಮತ್ತೆ ಭಾಗಮಂಡಲ ದೇವಸ್ಥಾನಗಳಲ್ಲಿ ಕೂಡ ದೊಡ್ಡ ಪ್ರಮಾಣಲಿ ಕಾಣಿಕೆ ಸಂಗ್ರಹ ಆದೆ.
ಜಾತ್ರೆಯ ತಿಂಗ ಮುಗ್ದ ಕೂಡ್ಲೆ, ದೇವಸ್ಥಾನಗಳಲ್ಲಿ ಸಂಗ್ರಹ ಆದ ಕಾಣಿಕೆನ ಲೆಕ್ಕ ಮಾಡಿವೆ. ಇದ್ನ `ಭಂಡಾರ ಲೆಕ್ಕ'ತಾ ಕರ್ದವೆ. ತಲಕಾವೇರೀಲಿ ಕುಂಡಿಕೆ, ಕೆರೆ ಮತ್ತೆ ಕಾಣಿಕೆ ಡಬ್ಬಿಗಳಲ್ಲಿ ಇರ್ದುನೆಲ್ಲಾ ತೆಗ್ದ್, ಮೂಟೆಗಳಲ್ಲಿ ತುಂಬಿಸಿಕಂಡ್ ಭಾಗಮಂಡಲಕ್ಕೆ ತಂದವೆ. ಇಲ್ಲೂ ಅಷ್ಟೇ, ಭಗಂಡೇಶ್ವರ ಸೇರ್ದಂಗೆ ಬೇರೆ ಬೇರೆ ಗುಡಿಗಳಲ್ಲಿರ್ವ ಕಾಣಿಕೆ ಡಬ್ಬಗಳ್ನ ಓಪನ್ ಮಾಡಿ ಅದರಲ್ಲಿ ಇರುದ್ದನ್ನೆಲ್ಲಾ ಒಂದು ಕಡೆ ತಂದು ಸುರ್ದವೆ.
ಈ ಭಂಡಾರ ಲೆಕ್ಕ ಮಾಡ್ದು ಉಟ್ಟಲ್ಲಾ.. ಒಂದ್ ಒಳ್ಳೇ ಅನುಭವ. ಜಾತ್ರೆ ಟೈಂಲಿ ಸಿಕ್ಕಿದ್ದನ್ನ ಲೆಕ್ಕ ಹಾಕಿಕೆ ದೇವಸ್ಥಾನಲಿ ಇರ್ವ ಕೆಲ್ಸದವು ಸಾಕಾಲೆ. ಅದ್ಕೆ ಭಾಗಮಂಡಲ ಟೌನ್ನ ಹೈದಂಗ ಕೂಡ ಅಲ್ಲಿ ಹೋಗಿ ಭಂಡಾರ ಲೆಕ್ಕ ಹಾಕಿಕೆ ಸೇರಿಕಂಡವೆ. ನೋಟು ಮತ್ತೆ ಕಾಯಿನ್ಗಳ್ನ ಬೇರೆ ಬೇರೆ ಮಾಡ್ದು ಚಿಕ್ಕ ಮಕ್ಕಳ ಕೆಲಸ. 50 ಪೈಸೆ, 1 ರೂಪಾಯಿ, 2 ರೂಪಾಯಿ 5 ರೂಪಾಯಿ ಹಿಂಗೆ ಕಾಯಿನ್ಗಳ್ನ ಬೇರೆ ಬೇರೆ ಮಾಡಿ ಇಡ್ದು, ಸ್ವಲ್ಪ ದೊಡ್ಡ ಮಕ್ಕಳ ಜವಾಬ್ದಾರಿ. ಇನ್, ನೋಟುಗಳ್ನ ಅದ್ರ ಮುಖಬೆಲೆಗೆ ಸರಿಯಾಗಿ ಜೋಡ್ಸುದು ಹೈಸ್ಕೂಲ್ ಹೈದಗಳ ಕೆಲ್ಸ. ಮಕ್ಕಳಿಗೆ ಹಿಂಗೆ ಜೋಡ್ಸುವ ಕೆಲ್ಸ ಮಾತ್ರ ಕೊಟ್ಟವೆ. ಇದ್ನೆಲ್ಲಾ ಮಾಡ್ಕಂಡ್ ಇರ್ಕಾಕನ ಮಧ್ಯ ಮಧ್ಯ ಸಂತೋಷ್ ಹೊಟೇಲ್ನ ಟೀ, ಪೊಕ್ಕಡ ಕೂಡ ಸಿಕ್ಕಿದೆ.
ಇನ್ ಈ ಸಣ್ಣ ಮಕ್ಕ ಬೇರೆ ಬೇರೆ ಮಾಡಿ ಇಟ್ಟಿದ್ದವೆಯಲ್ಲಾ ಆ ಕಾಯಿನ್ಗಳನ್ನ ಲೆಕ್ಕ ಮಾಡ್ದು, ಪಿಯುಸಿ ಓದ್ತಿರೋ ಹೈದಂಗ. ಅದಕ್ಕಿಂತ ದೊಡ್ಡ ಕ್ಲಾಸ್ ಇರವುಕ್ಕೆ ನೋಟುಗಳ್ನ ಲೆಕ್ಕ ಮಾಡಿಕೆ ಬಿಟ್ಟವೆ. ಭಂಡಾರ ಲೆಕ್ಕ ಮಾಡಿಕಾಕನ ನಮ್ಮ ದೇಶದ ಕಾಯಿನ್, ನೋಟ್ಗ ಮಾತ್ರ ಸಿಕ್ಕುದಲ್ಲ, ಅಮೆರಿಕಾದ ಡಾಲರ್, ಆಸ್ಟ್ರೇಲಿಯಾದ ಡಾಲರ್, ಶ್ರೀಲಂಕಾದ ರೂಪಾಯಿ, ಚಿನ್ನ, ಬೆಳ್ಳಿ ಎಲ್ಲಾ ಸಿಕ್ಕಿದೆ. ವಿಶೇಷ ತೇಳಿರೆ, ಭಸ್ಮ, ಕುಂಕುಮ, ದೇವರಿಗೆ ಬರ್ದ ಪತ್ರ ಇಂಥವೂ ಕೂಡ ಒಮ್ಮೊಮ್ಮೆ ಕಾಣಿಕೆಗಳ ಜೊತೆ ಕಾಣಿಸಿಕೊಳ್ಳುದು ಉಟ್ಟು.
ಮಧ್ಯಾಹ್ನ ಒಳಗೆ ಈ ಭಂಡಾರ ಲೆಕ್ಕ ಮಾಡ್ದು ಮುಗ್ದು ಹೋಕು. ಯಾಕೆತೇಳಿರೆ, ಮಧ್ಯಾಹ್ನ ಮೇಲೆ ಬ್ಯಾಂಕ್ಗ ಇರ್ದುಲ್ಲೆ. ಎಲ್ಲಾ ಲೆಕ್ಕ ಮಾಡಿ ಆದ್ಮೇಲೆ, ಅಂಗಡಿಯವ್ಕೆ ಚಿಲ್ಲರೆ ಬೇಕಾರೆ ಚಿಲ್ಲರೆ ಕೊಟ್ಟವೆ. ಮತ್ತೆ ಉಳ್ದದನ್ನೆಲ್ಲಾ ಮೂಟೆ ಕಟ್ಟಿ ಬ್ಯಾಂಕಿಗೆ ಹೊತ್ತ್ಕಂಡ್ ಹೋಗಿ ಹಾಕಿವೆ. ಲೆಕ್ಕಚಾರ ಎಲ್ಲಾ ಮುಗ್ದಮೇಲೆ ಅಲ್ಲಿ ಹೆಲ್ಪ್ ಮಾಡ್ದವ್ಕೆ ದೇವಸ್ಥಾನಂದ ಒಳ್ಳೇ ಒಂದು ಊಟ ಕೊಟ್ಟವೆ.
ನಾವು ಎಂಥ ತಪ್ಪಿಸಿಕಂಡ್ರೂ, ಈ ಭಂಡಾರ ಲೆಕ್ಕ ಹಾಕುವ ದಿನನ್ನಂತೂ ತಪ್ಪಿಸಿಕಣ್ತಿತ್ಲೆ. ಅಲ್ಲಿ ಎಲ್ಲವೂ ಒಂದು ಕಡೆ ಸೇರ್ಕಾಕನ ಮಾತಿಗೆ ಬರದ ವಿಷಯಗಳೇ ಇತ್ಲೇ..ಇನ್ನ್, ಅಲ್ಲಿ ಸಿಗ್ವ ಬೇರೆ ಬೇರೆ ದೇಶಗಳ ದುಡ್ಡ್ನ ನೋಡ್ದೇ ಒಂದು ಖುಷಿ. ಅಲ್ಲದೆ, ಕೆಲವು ಭಕ್ತರು ದೇವರಿಗೆ ಬರೀತ್ತಿದ್ದ ಪತ್ರಗಳಂತೂ ತುಂಬಾ ತಮಾಷೆಯಾಗಿ ಇರ್ತಿದ್ದೊ...ಇದೆಲ್ಲಾ 10-15 ವರ್ಷ ಹಿಂದಿನ ಕಥೆ. ಈಗ ಹೆಂಗುಟ್ಟೋ ಗೊತ್ಲೆ... 
arebhase@gmail.com


ಬಿದಿರ ಚೆದರಂಗಿ


ವನವನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ
ನಿನ್ನ ನೋಡದವು ಯಾರೊಳೋ ?
ನಿನ್ನ ಹೆಸರ ಕೇಳದವು ಯಾರೊಳೋ?
ನಿನ್ನ ಸೊಬಗಿಗೆ
ಎಲ್ಲವೂ ಮೈ ಮರೆತೋಳ
ನೀ ಬೇಕು ಎಲ್ಲವಕ್ಕೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.........
ಮುಗ್ಧಕಂದನಾಗಿರಕನ
ಹೊತ್ತುಕೂಳಿನ ಜೊತೆಗಾದೆ
ಎತ್ತರವಾಗಿ ಬೆಳೆದು
ಬಡವರ ಗುಡುಸಿನ ಪೊದರಾದೆ
ಮೊಳೆಕೆಯೊಡಕನ ಕೆಂಪುಡಿಗೆ ಧರಿಸಿ ಬಂದೆ
ಬೆಳೆದಂಗೆ ಹಸಿರುಡಿಗೆ ಧರಿಸಿ ಮೆರೆದೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.........
ತೂಗುವ ಕಂದನ ತೊಟ್ಟಿಲಾದೆ
ಬೆಣ್ಣೆ ತೆಗೆಯುವ ಸಾಧನವಾದೆ
ಕುರಡಂಗೆ ಕಣ್ಣಾದೆ
ಕುಂಟಂಗೆ ಕಾಲಾದೆ
ತಾತಂಗೆ ಕೈಗೋಲಾದೆ
ಅಕ್ಷರಮಾಲೆಗೆ ಹಾಳೆಯಾದೆ
ಜೋಡು ಎತ್ತುಗಳ ಗಾಡಿಗಾದೆ
ನದಿ ದಾಟುವ ತೆಪ್ಪವಾದೆ
ಪಕ್ಷಿವಾಸಕ್ಕೆ ಪೊದರಾದೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.......
ಅರವತ್ತು ವರ್ಷಕೊಮ್ಮೆ ಬಂದದೆ
ನಿಂಗೆ ಕಟ್ಟೆ
ನಿನ್ನ ನೋಡದವೂ ಯಾರೊಳೋ ?
ನಿನ್ನ ಹೆಸರನ್ನ ಕೇಳದವು ಯಾರೊಳೋ ?
ನಿನ್ನ ಪೊಲರ್ುಗೆ ಮೈ ಮರೆಯದವೂ
ಯಾರೊಳೋ ?
ವನಭನಗಳಲ್ಲಿ ನೀ ಬೆಳೆದೋಳ
ಪೊಲರ್ುನ ಬಿದಿರಾಗಿ.........


ಕುಲ್ಲಚನ ತಾರಾರವಿ,
ಕುಂಬುಳುದಾಳು

arebhase@gmail.com

Wednesday, 11 January 2012

ನೀವೂ ಬರೆಯಕ್..




ಅರೆಭಾಷೆ ಬ್ಲಾಗ್ಗೆ ನೀವೂ ಬರೆಯಕ್... ಆದ್ರೆ ಅದ್ ಅರೆಭಾಷೆಲೇ ಇರೋಕು. ಕಥೆ, ಕವನ, ಲೇಖನ, ಹನಿಗವನ... ಹಿಂಗೆ ಏನ್ ಬೇಕಾರ್ ಬರೆಯನಿ... ಅದ್ ಓದುವಂಗೆ ಇರ್ಲಿ ಅಷ್ಟೇ... ಕೆಲವು ಜನ ಕನ್ನಡ ಮತ್ತೆ ಇಂಗ್ಲಿಷ್ಲಿ ಬರ್ದು ಕಳಿಸ್ತೊಳೊ. ದಯವಿಟ್ಟು ಕ್ಷಮಿಸಿ.... ಅರೆಭಾಷೆ ಬ್ಲಾಗ್ಲಿ ಬರೀ ಅರೆಭಾಷೆಯ ಬರಹಗಳನ್ನ ಮಾತ್ರ ಹಾಕುದು... ನುಡಿ ಸೇರ್ದಂಗೆ ಯಾವುದೇ ಯೂನಿಕೋಡ್ ಭಾಷೆಲಿ ಬರ್ದು ಕಳ್ಸಿ... ನಮ್ಮ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂಗೆ ಫೋಟೋ, ವೀಡಿಯೋ, ಆಡಿಯೋ ಇದ್ದರೂ ಕಳ್ಸಿಕೊಡಿ....
-ಸಂ. 
arebhase@gmail.com

ನೇಗಿಲ ಯೋಗಿಯ ಭಾಗ್ಯದಾತೆ !


ಅದೇನೋ ದೂರದ ಬೆಟ್ಟಗಳಂದ


ಜನ್ಮತಾಳಿ ಹರಿದು ಬಾತ್
ಕನ್ಯಾ ಚಿಕ್ಲಿಹೊಳೆ..!
ಇವಳಿಗೊಂದು ಅಡ್ಡಕಟ್ಟೆ
ದಟ್ಟ ಮರಗಳ ಬೆಟ್ಟ ಗುಡ್ಡಗಳ
ತನ್ನಯ ಸೆರಗಿನಲ್ಲಿ
ಅವರಿಸಿ ನಿಂತುಟ್ಟು 
ಈ ಕನ್ಯಾ ಚಿಕ್ಲಿಹೊಳೆ..!
ಸುತ್ತೆಲ್ಲಾ ಕೈಯ ಬೀಸಿ
ಸೇರಗ್ಹರಡಿ ವಿಶಾಲವಾಗಿ
ವಿಸ್ಮಯಕರವಾಗಿ ನಿಂತುಟ್ಟು
ಈ ಕನ್ಯಾ ಚಿಕ್ಲಿಹೊಳೆ..!
ಇವಳ ಸೊಬಗ ನೋಡಿಕೆ
ಬಂದವೆ ಹಲವು ಮಂದಿ
ಸಂಜೆಯ ಹೊಂಬೆಳಕಿನಲ್ಲಿ
ಹಕ್ಕಿಗಳ ಚಿಲಿಪಿಲಿನಾದೊಂದಿಗೆ
ತಂಪಾದ ತಂಗಾಳಿ ಬೀಸಿಕಾಕನ
ಬಂಗಾರದ ಬಣ್ಣಲಿ ಹೊಳ್ದದೆ
ಈ ಕನ್ಯಾ ಚಿಕ್ಲಿಹೊಳೆ..!
ಗಗನ ನಡುಗಿ ಮಿಂಚು ಎರಗಿ
ಭೂ ತಾಯಿ ಜಡೆಬಿಚ್ಚಿ ಮೈದೊಳೆದಾಗ
ಭೋರ್ಗರೆದು  ಉಕ್ಕಿ ಹರಿವಳು 
ಈ ಕನ್ಯಾ ಚಿಕ್ಲಿಹೊಳೆ..!
ನೇಗಿಲು ಹಿಡ್ದವ್ರ ಬಾಳಿಗೆ ಬೆಳಕಾಗಿ
ಪ್ರವಾಸಿಗರ ನಗುನಲಿವಿನ ಮಾತುಗಳಿಗೆ
ಕಿವಿಯಾಗಿ ರಾತ್ರಿಯಿಡಿ ಒಂದೇ ಒಂದು 
ಕುಟಿರವಾಸಿಗಳ ಗುಗುಣುಮಾತು 
ಕೇಳುತ್ತುಟ್ಟು 
ಈ ಕನ್ಯಾ ಚಿಕ್ಲಿಹೊಳೆ..!
ನೋಡಿರೆ ಮತ್ತೊಮ್ಮೆ ನೋಡುವಾಸೆ
ಹಾಡಿರೆ ಮತ್ತೊಮ್ಮೆ ಹಾಡುವಾಸೆ
ಎಲ್ಲಾ ಕೋಮಲ ಹೃದಯಗಳ
ತಲ್ಲಣಗೊಳಿಸುವಾಕೆ
ಈ ಕನ್ಯಾ ಚಿಕ್ಲಿಹೊಳೆ..!

ಕುಲ್ಲಚನ ತಾರಾರವಿ,
ಕುಂಬುಳುದಾಳು


                         


Tuesday, 10 January 2012

ನಿನ್ನ ಹಾಡು !


ಒಂದು ಪುಟ್ಟ ಹೃದಯ
ಎಡಗೈ ಮುಷ್ಟಿಯಷ್ಟೇ ದಪ್ಪ
ಅದ್ ಮರ್ತೇಬಿಟ್ಟುಟ್ಟು... 
ಲಬ್ಡಬ್ ಲಬ್ಡಬ್ ಶಬ್ದ
ಅಲ್ಲಿ ಕೇಳ್ದು ಬರೀ ನಿನ್ನ ಹೆಸ್ರು !
ಅದ್ಯಾವ ಮೋಡಿ ಮಾಡ್ಯೊಳನೆ ?
ನಿದ್ದೆಲೆಲ್ಲಾ ನಿನ್ನದೇ ಕನವರಿಕೆ !
ಕನಸಲ್ಲೂ, ಮನಸ್ಸಲ್ಲೂ ನೀನೇ..ನೀನೇ..
ನೀ ಮಯಾ ಕನ್ನಿಕೆಯಾ ?
ಕೆಂಪು ಗುಲಾಬಿ ಎಸಳಿನ ಮೇಲೆ
ಫಳ ಫಳ ಹೊಳೆಯೋ ಮಂಜಿನ ಮುತ್ತು !
ಮನೆ ಗೋಡೆ ಸುತ್ತ ಹಬ್ಬಿರ್ವ
ಮೈಸೂರು ಮಲ್ಲಿಗೆಯ ಘಮ ಘಮ !
ಅದ್ ನೀನೇ... ಮರಳುಗಾಡಿನ ಓಯಸಿಸ್
ಗೋಧೂಳಿಯ ಹೊತ್ತಲ್ಲಿ 
ದೊಡ್ಡಕೆರೆ ಮೂಲೇಲಿ ಮುಳುಗ್ವ ಸೂರ್ಯ
ಆಕಾಶಕ್ಕೆಲ್ಲಾ ಓಕುಳಿ ಹರಡಿ
ತಾನೂ ನಾಚಿ ಕೆಂಪು ಕೆಂಪಾದೆ ನೇಸರ...
ಅದೂ ಥೇಟ್ ನನ್ನ ಗೂಡೆನಂಗೆ !
arebhase@gmail.com

ಯಮಹ ಸ್ಕೂಟರ್ ಬೈಕ್ !


ಡೆಲ್ಲಿಲಿ ಭಾರಿ ಜೋರಾಗಿ ಆಟೋ ಎಕ್ಸ್ ಪೋ ನಡ್ತ್. ಇಲ್ಲಿ ತುಂಬಾ ಕಂಪೆನಿಗ ಹೊಸ ಹೊಸ ವಾಹನಗಳ್ನ ಪ್ರದರ್ಶನ ಮಾಡ್ದೋ. ಅದ್ರಲ್ಲಿ ಯಮಹ ಸಂಸ್ಥೆ ಸ್ಕೂಟರ್ ಬೈಕ್ ನ ರಿಲೀಸ್ ಮಾಡ್ತ್.  ಯಮಹ ಬ್ರಾಂಡ್ ರಾಯಬಾರಿ ಜಾನ್ ಅಬ್ರಾಹಂ officeal ಆಗಿ  ಸ್ಕೂಟರ್ Launch ಮಾಡ್ದೋ
 
- ಪ್ರವೀಣ್ ನಡುಮನೆ
 arebhase@gmail.com