Thursday 12 January 2012

ಭಾಗಮಂಡಲಲಿ ಭಂಡಾರ ಲೆಕ್ಕ ಹಾಕುದು...


        ಭಾಗಮಂಡಲ ಜಾತ್ರೆತೇಳಿರಿ ಗೊತ್ತಲ್ಲಾ....ಜನವೋ ಜನ. ಕೊಡಗಿನವು ಮಾತ್ರ ಅಲ್ಲ, ಕುಂದಾಪುರ, ಮಂಡ್ಯ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಜೊತೇಲಿ ವಿದೇಶಗಳಿಂದ ಕೂಡ ತುಂಬಾ ಭಕ್ತರು ಬಂದವೆ. ತುಲಾ ಸಂಕ್ರಮಣಂದ ಕಿರು ಸಂಕ್ರಮಣ ವರೆಗೆ ಭಾಗಮಂಡಲ ಮತ್ತೆ ತಲಕಾವೇರೀಲಿ ತುಂಬಾ ಜನ ಇದ್ದವೆ. ಈ ಎರಡೂ ಜಾಗಗಳಲ್ಲಿ ಮತ್ತೆ ರೋಡ್ಸೈಡ್ಲಿ ಇರ್ವ ಅಂಗಡಿಗಳಿಗೆ ಇದೊಂದು ತಿಂಗ ಭರ್ಜರಿ ವ್ಯಾಪಾರ. ಹಂಗೆನೇ ತಲಕಾವೇರಿ ಮತ್ತೆ ಭಾಗಮಂಡಲ ದೇವಸ್ಥಾನಗಳಲ್ಲಿ ಕೂಡ ದೊಡ್ಡ ಪ್ರಮಾಣಲಿ ಕಾಣಿಕೆ ಸಂಗ್ರಹ ಆದೆ.
ಜಾತ್ರೆಯ ತಿಂಗ ಮುಗ್ದ ಕೂಡ್ಲೆ, ದೇವಸ್ಥಾನಗಳಲ್ಲಿ ಸಂಗ್ರಹ ಆದ ಕಾಣಿಕೆನ ಲೆಕ್ಕ ಮಾಡಿವೆ. ಇದ್ನ `ಭಂಡಾರ ಲೆಕ್ಕ'ತಾ ಕರ್ದವೆ. ತಲಕಾವೇರೀಲಿ ಕುಂಡಿಕೆ, ಕೆರೆ ಮತ್ತೆ ಕಾಣಿಕೆ ಡಬ್ಬಿಗಳಲ್ಲಿ ಇರ್ದುನೆಲ್ಲಾ ತೆಗ್ದ್, ಮೂಟೆಗಳಲ್ಲಿ ತುಂಬಿಸಿಕಂಡ್ ಭಾಗಮಂಡಲಕ್ಕೆ ತಂದವೆ. ಇಲ್ಲೂ ಅಷ್ಟೇ, ಭಗಂಡೇಶ್ವರ ಸೇರ್ದಂಗೆ ಬೇರೆ ಬೇರೆ ಗುಡಿಗಳಲ್ಲಿರ್ವ ಕಾಣಿಕೆ ಡಬ್ಬಗಳ್ನ ಓಪನ್ ಮಾಡಿ ಅದರಲ್ಲಿ ಇರುದ್ದನ್ನೆಲ್ಲಾ ಒಂದು ಕಡೆ ತಂದು ಸುರ್ದವೆ.
ಈ ಭಂಡಾರ ಲೆಕ್ಕ ಮಾಡ್ದು ಉಟ್ಟಲ್ಲಾ.. ಒಂದ್ ಒಳ್ಳೇ ಅನುಭವ. ಜಾತ್ರೆ ಟೈಂಲಿ ಸಿಕ್ಕಿದ್ದನ್ನ ಲೆಕ್ಕ ಹಾಕಿಕೆ ದೇವಸ್ಥಾನಲಿ ಇರ್ವ ಕೆಲ್ಸದವು ಸಾಕಾಲೆ. ಅದ್ಕೆ ಭಾಗಮಂಡಲ ಟೌನ್ನ ಹೈದಂಗ ಕೂಡ ಅಲ್ಲಿ ಹೋಗಿ ಭಂಡಾರ ಲೆಕ್ಕ ಹಾಕಿಕೆ ಸೇರಿಕಂಡವೆ. ನೋಟು ಮತ್ತೆ ಕಾಯಿನ್ಗಳ್ನ ಬೇರೆ ಬೇರೆ ಮಾಡ್ದು ಚಿಕ್ಕ ಮಕ್ಕಳ ಕೆಲಸ. 50 ಪೈಸೆ, 1 ರೂಪಾಯಿ, 2 ರೂಪಾಯಿ 5 ರೂಪಾಯಿ ಹಿಂಗೆ ಕಾಯಿನ್ಗಳ್ನ ಬೇರೆ ಬೇರೆ ಮಾಡಿ ಇಡ್ದು, ಸ್ವಲ್ಪ ದೊಡ್ಡ ಮಕ್ಕಳ ಜವಾಬ್ದಾರಿ. ಇನ್, ನೋಟುಗಳ್ನ ಅದ್ರ ಮುಖಬೆಲೆಗೆ ಸರಿಯಾಗಿ ಜೋಡ್ಸುದು ಹೈಸ್ಕೂಲ್ ಹೈದಗಳ ಕೆಲ್ಸ. ಮಕ್ಕಳಿಗೆ ಹಿಂಗೆ ಜೋಡ್ಸುವ ಕೆಲ್ಸ ಮಾತ್ರ ಕೊಟ್ಟವೆ. ಇದ್ನೆಲ್ಲಾ ಮಾಡ್ಕಂಡ್ ಇರ್ಕಾಕನ ಮಧ್ಯ ಮಧ್ಯ ಸಂತೋಷ್ ಹೊಟೇಲ್ನ ಟೀ, ಪೊಕ್ಕಡ ಕೂಡ ಸಿಕ್ಕಿದೆ.
ಇನ್ ಈ ಸಣ್ಣ ಮಕ್ಕ ಬೇರೆ ಬೇರೆ ಮಾಡಿ ಇಟ್ಟಿದ್ದವೆಯಲ್ಲಾ ಆ ಕಾಯಿನ್ಗಳನ್ನ ಲೆಕ್ಕ ಮಾಡ್ದು, ಪಿಯುಸಿ ಓದ್ತಿರೋ ಹೈದಂಗ. ಅದಕ್ಕಿಂತ ದೊಡ್ಡ ಕ್ಲಾಸ್ ಇರವುಕ್ಕೆ ನೋಟುಗಳ್ನ ಲೆಕ್ಕ ಮಾಡಿಕೆ ಬಿಟ್ಟವೆ. ಭಂಡಾರ ಲೆಕ್ಕ ಮಾಡಿಕಾಕನ ನಮ್ಮ ದೇಶದ ಕಾಯಿನ್, ನೋಟ್ಗ ಮಾತ್ರ ಸಿಕ್ಕುದಲ್ಲ, ಅಮೆರಿಕಾದ ಡಾಲರ್, ಆಸ್ಟ್ರೇಲಿಯಾದ ಡಾಲರ್, ಶ್ರೀಲಂಕಾದ ರೂಪಾಯಿ, ಚಿನ್ನ, ಬೆಳ್ಳಿ ಎಲ್ಲಾ ಸಿಕ್ಕಿದೆ. ವಿಶೇಷ ತೇಳಿರೆ, ಭಸ್ಮ, ಕುಂಕುಮ, ದೇವರಿಗೆ ಬರ್ದ ಪತ್ರ ಇಂಥವೂ ಕೂಡ ಒಮ್ಮೊಮ್ಮೆ ಕಾಣಿಕೆಗಳ ಜೊತೆ ಕಾಣಿಸಿಕೊಳ್ಳುದು ಉಟ್ಟು.
ಮಧ್ಯಾಹ್ನ ಒಳಗೆ ಈ ಭಂಡಾರ ಲೆಕ್ಕ ಮಾಡ್ದು ಮುಗ್ದು ಹೋಕು. ಯಾಕೆತೇಳಿರೆ, ಮಧ್ಯಾಹ್ನ ಮೇಲೆ ಬ್ಯಾಂಕ್ಗ ಇರ್ದುಲ್ಲೆ. ಎಲ್ಲಾ ಲೆಕ್ಕ ಮಾಡಿ ಆದ್ಮೇಲೆ, ಅಂಗಡಿಯವ್ಕೆ ಚಿಲ್ಲರೆ ಬೇಕಾರೆ ಚಿಲ್ಲರೆ ಕೊಟ್ಟವೆ. ಮತ್ತೆ ಉಳ್ದದನ್ನೆಲ್ಲಾ ಮೂಟೆ ಕಟ್ಟಿ ಬ್ಯಾಂಕಿಗೆ ಹೊತ್ತ್ಕಂಡ್ ಹೋಗಿ ಹಾಕಿವೆ. ಲೆಕ್ಕಚಾರ ಎಲ್ಲಾ ಮುಗ್ದಮೇಲೆ ಅಲ್ಲಿ ಹೆಲ್ಪ್ ಮಾಡ್ದವ್ಕೆ ದೇವಸ್ಥಾನಂದ ಒಳ್ಳೇ ಒಂದು ಊಟ ಕೊಟ್ಟವೆ.
ನಾವು ಎಂಥ ತಪ್ಪಿಸಿಕಂಡ್ರೂ, ಈ ಭಂಡಾರ ಲೆಕ್ಕ ಹಾಕುವ ದಿನನ್ನಂತೂ ತಪ್ಪಿಸಿಕಣ್ತಿತ್ಲೆ. ಅಲ್ಲಿ ಎಲ್ಲವೂ ಒಂದು ಕಡೆ ಸೇರ್ಕಾಕನ ಮಾತಿಗೆ ಬರದ ವಿಷಯಗಳೇ ಇತ್ಲೇ..ಇನ್ನ್, ಅಲ್ಲಿ ಸಿಗ್ವ ಬೇರೆ ಬೇರೆ ದೇಶಗಳ ದುಡ್ಡ್ನ ನೋಡ್ದೇ ಒಂದು ಖುಷಿ. ಅಲ್ಲದೆ, ಕೆಲವು ಭಕ್ತರು ದೇವರಿಗೆ ಬರೀತ್ತಿದ್ದ ಪತ್ರಗಳಂತೂ ತುಂಬಾ ತಮಾಷೆಯಾಗಿ ಇರ್ತಿದ್ದೊ...ಇದೆಲ್ಲಾ 10-15 ವರ್ಷ ಹಿಂದಿನ ಕಥೆ. ಈಗ ಹೆಂಗುಟ್ಟೋ ಗೊತ್ಲೆ... 
arebhase@gmail.com


No comments:

Post a Comment