Monday 9 January 2012

ಮೂಕ ಪಕ್ಷಿಗಳ ಶಾಪ !




ಬರೆ ಸೈಡ್ಲಿ ನಾವು ಮಾತಾಡಿಕ್ಕಂಡ್ ಹೋಗ್ತಿದ್ದೊ. ಅಷ್ಟೊತ್ತಿಗೆ ಗಾಂಧಿ ಗುಲಾಬಿ ಬಲ್ಲೆಂದ ಒಂದ್ ಕೊಟ್ಟುಮುರ್ಚಾ  ಹಕ್ಕಿ ಪರ್ರ್...ತಾ ಹಾರಿ ಹೋತು. ಇದ್ನ ನೋಡ್ದ ರಕ್ಕಿ ಹೈದ, ಮೆಲ್ಲನೆ ಆ ಬಲ್ಲೆ ಒಳಗೆ ಮೈ ಕೈ ಗಾಯ ಮಾಡ್ಕಂಡ್ ನುಗ್ಗಿತ್... ಅಲ್ಲಿಂದನೇ `ಏ ಬಾರ ಇಲ್ಲಿ... ಕೊಟ್ಟುಮುರ್ಚಾ  ಗೂಡು ನೋಡ್' ತಾ ಬೊಬ್ಬೆ ಹಾಕ್ತ್. ನಾನೂ ಕಷ್ಟಪಟ್ಟ್ ಆ ಬಲ್ಲೆ ಒಳಗೆ ನುಗ್ಗಿರೆ, ಅಲ್ಲೊಂದು ಪುಟ್ಟ ಪಕ್ಷಿಗೂಡು !
ಬೈನೆ ನಾರ್, ಒಣಗಿದ ಎಲೆಗ, ಗರಿಕೆ ಹುಲ್ಲು ಎಲ್ಲಾ ಸೇರ್ಸಿ, ಕೊಟ್ಟುಮುರ್ಚಾ ಹಕ್ಕಿ ತುಂಬಾ ಲಾಯ್ಕಲಿ ಗೂಡ್ ಕಟ್ಟಿತ್ತ್. ಗೂಡೊಳಗೆ ಮೆತ್ತನೆ ಪುಕ್ಕ, ಅದ್ರ ಮೇಲೆ ಬಿಳಿ ಮತ್ತೆ ಕೆಂಪು ಚುಕ್ಕಿಗಳಿರ್ವ ಮೂರು ಸಣ್ಣ ಮೊಟ್ಟೆಗ. ಮೊಟ್ಟೆ ಮುಟ್ಟಿಕೇತ ನಾನ್ ಗೂಡ್ ಹತ್ರ ಕೈ ಹಾಕಿಕಾಕನ ರಕ್ಕಿ ಬೊಬ್ಬೆ ಹೊಡ್ತ್, `ಮುಟ್ಬೇಡ... ಮುಟ್ಬೇಡ... ಮೊಟ್ಟೆನ ಮನುಷ್ಯ ಮುಟ್ಟಿರೆ, ಹಕ್ಕಿಗ ಮತ್ತೆ ಬಾಲೆ...' ಕರೆಂಟ್ ಶಾಕ್ ಹೊಡ್ದಂಗೆ ನಾ ಕೈನ ವಾಪಸ್ ತಕ್ಕಂಡೆ. ಈ ರಕ್ಕಿ ಕಣ್ಣಿಗೆ ಒಂದ್ಸಲ ಪಕ್ಷಿ ಗೂಡು ಬಿದ್ರೆ, ಅದ್ಕೆ ಉಳಿಗಾಲ ಇಲ್ಲೆತಾ ನಂಗೆ ಗೊತ್ತಿತ್ತ್.
ಕಾಡ್ ಮಧ್ಯೆ ಮನೆ ಇರ್ವಲ್ಲಿ ಸಾಯಂಕಾಲ ಆರೂವರೆಗೆಲ್ಲಾ ಕತ್ತಲೆ ಆಗಿಬಿಟ್ಟದೆ. ಅಷ್ಟೊತ್ತಿಗೆ ರಕ್ಕಿ ಹೆಡ್ಲೈಟ್ ಕಟ್ಟಿಕಂಡ್ ರೆಡಿಯಾತ್. ಕೈಲಿ ಒಂದು ಕತ್ತಿ. ಜೊತೆಗೆ ದಾಸ ನಾಯಿ. ಅಂವ ಮುಂದೆ ಮುಂದೆ...ನಂಗೆ ಬರ್ಬೆಡತಾ ಹೇಳಿರೂ ನಾ ಅವನ ಹಿಂದೆ ಹೆಜ್ಜೆ ಹಾಕಿದೆ. ಆ ಕೊಟ್ಟುಮುರ್ಚಾ  ಗೂಡು ಇದ್ದಲ್ಲಿಗೆ ನಿಧಾನಕ್ಕೆ ನಾವು ಹೋದೊ. ಒಂದು ಚೂರು ಶಬ್ದ ಆಗದಂಗೆ ನಮ್ಮ ಹೆಜ್ಜೆ...ದಾಸ ನಾಯಿಗೂ ಇದೆಲ್ಲಾ ಅಭ್ಯಾಸ ಇತ್ತ್. ಅದೂ ಬಾಲ ಅಲ್ಲಾಡಿಸಿಕಂಡ್ ನಮ್ಮ ಹಿಂದೆ ಸದ್ದಾಗದಂಗೆ ಬಾತ್.
ಪಕ್ಷಿ ಹಿಡಿಯಕ್ಕೆ ರಕ್ಕಿ ಎಕ್ಸ್ಪರ್ಟ್. ಅಂವ ಕೈ ಹಾಕಿತ್ತೇಳಿರೆ, ಆ ಹಕ್ಕಿದ್ ಆಯುಷ್ಯ ಮುಗ್ದುಟ್ಟುತನೇ ಅರ್ಥ. ಇಲ್ಲೂ ಹಂಗೆ ಆತ್. ಹೆಡ್ಲೈಟ್ ಬೆಳಕ್ನ ಪಿಳ ಪಿಳತಾ ನೋಡ್ತಿದ್ದ ಎರಡು ಜೊತೆ ಕಣ್ಣ್ಗಳ್ನ ಸೇರ್ಸಿ ಅಂವ ಹಿಡ್ದ್ಬಿಟ್ಟತ್. ಹೌದು, ಗೂಡ್ಲಿ ಕುದ್ದಿದ್ದ ಗಂಡ್ ಮತ್ತೆ ಹೆಣ್ಣ್  ಕೊಟ್ಟುಮುರ್ಚಾ  ರಕ್ಕಿ ಕೈ ಒಳಗೆ ಇದ್ದೊ. ಪಕ್ಷಿಗಳ್ನ ಹಂಗೆ ಹಿಡ್ಕಂಡೇ ಅಂವ ನಂಗೆ `ಈಗ ಮೊಟ್ಟೆ ತಕಾ...' ತಾ ಹೇಳ್ತ್. ನಾ ಆ ಮೂರೂ ಮೊಟ್ಟೆಗಳ್ನ ಗೂಡ್ ಸಮೇತ ತಕ್ಕಂಡ್ ಹಿಡ್ಕಂಡೆ. ಎರಡು ಪಕ್ಷಿ, ಮೂರು ಮೊಟ್ಟೆಗಳ ಜೊತೆ ವಾಪಸ್ ಮನೆಗೆ ಬಂದೊ.
ಗುಡ್ಡದ ಒಲೇಲಿ ಇನ್ನೂ ಬೆಂಕಿ ಇತ್ತ್. ನಾವಿಬ್ರೂ ಅಲ್ಲಿಗೆ ಹೋದೊ. ಪಕ್ಷಿ ಹಿಡಿಯಕ್ಕೆ ರಕ್ಕಿ ಎಷ್ಟು ಹುಷಾರೋ, ಅದ್ನ ಸುಟ್ಟು ತಿಂಬಕೂ ಅಷ್ಟೇ ಹುಷಾರ್. ಮೊದ್ಲು ಅಂವ ಒಂದ್ ಲೋಟಲಿ ನೀರ್ ತಾತ್. ಅದ್ರೊಳಗೆ ಮೊಟ್ಟೆನ ಹಾಕಿಕೆ ಹೇಳ್ತ್. ನೀರೊಳಗೆ ಆ ಮೊಟ್ಟೆಗಳ್ನ ಹಾಕಿದ ಕೂಡ್ಲೇ, ಮುಳುಗಿ ಹೋದೋ. `ಈ ಮೊಟ್ಟೆಗ ಏನೂ ಆತ್ಲೆ, ನೀರ್ಲಿ ತೇಲಿದ್ರೆ, ಹಾಳಾಗುಟ್ಟುತಾ ಅರ್ಥ. ನಾ ಹೋಗಿ ಚೆಟ್ಟಿ ತಂದನೆ, ಮೊದ್ಲು ಮೊಟ್ಟೆನ ಆಮ್ಲೆಟ್ ಮಾಡ್ನೊ' ತಾ ಹೇಳಿ ಹೋಗಿ ಚೆಟ್ಟಿ ತಂದತ್. ನಾ ಗುಡ್ಡದ ಒಲೆಲೇ ಒಂದ್ ಸೈಡ್ ಚೆಟ್ಟಿ ಇಟ್ಟ್, ಅದ್ರಲಿ ಕೊಟ್ಟುಮುರ್ಚಾ  ಮೊಟ್ಟೆದ್ ಆಮ್ಲೆಟ್ ಮಾಡ್ದೆ. ಅಷ್ಟೊತ್ತಿಗೆ ರಕ್ಕಿ ಎರಡೂ ಪಕ್ಷಿಗಳ ತುಪ್ಪಟ ತೆಗ್ದ್, ಕ್ಲೀನ್ ಮಾಡಿತ್ತ್. ಸೈಡ್ಲಿ ದಾಸ ನಾಯಿ ಅದ್ರ ಪಾಲ್ನ ಕರ್ಳ್, ಕಾಲ್ ಮೂಳೆ, ರೆಕ್ಕೆ ತುದೀನೆಲ್ಲಾ ಕಟುಂ, ಕುಟುಂತಾ ಅಗೀತಿತ್ತ್.
ಸ್ವಲ್ಪ ಉಪ್ಪು, ಒಳ್ಳೇ ಮೆಣ್ಸು ಹುಡಿ ಸೇರ್ಸಿ ಪೇಸ್ಟ್ ನಂಗೆ ಮಾಡ್ದ ರಕ್ಕಿ, ಅದ್ನ ಪಕ್ಷಿಗಳಿಗೆ ಲಾಯ್ಕ ಮೆತ್ತಿತ್. ಹೊಟ್ಟೆ ಒಳಗೆ ಅದೇ ಪೇಸ್ಟ್ನ ತುಂಬ್ಸಿ, ಬರೆಕೋಲ್ಗೆ ಸಿಕ್ಕಿಸಿ ಕೆಂಡದ ಮೇಲೆ ಇಟ್ಟತ್. ಬರೀ ಐದು ನಿಮಿಷ ಅಷ್ಟೇ... ಒಳ್ಳೇ ಪರಿಮಳ ಬಾಕೆ ಶುರುವಾತ್. ಪಕ್ಷಿಗಳ್ನ ಲಾಯ್ಕ ಸುಟ್ಟ್ ಆದ್ಮೆಲೆ, ಅದ್ಕೆ ನಿಂಬೆರಸ ಹಿಂಡಿ ಒಂದ್ನ ನಾನ್, ಮತ್ತೊಂದ್ನ ಅಂವ ತಿಂಬಕೆ ಶುರು ಮಾಡ್ದೊ. ಜೊತೆಲೆ ಆಮ್ಲೆಟ್ ಬೇರೆ. ಆಹಾ ಅದೆಂಥಾ ರುಚಿ !
ಹಿಂಗೆ ನಾವು ತಿಂದ ಪಕ್ಷಿಗ ಮತ್ತೆ ಮೊಟ್ಟೆಗಳಿಗೆ ಲೆಕ್ಕನೇ ಇಟ್ಟತ್ಲೆ... ಇದು ಸುಮಾರ್ 10-15 ವರ್ಷ ಹಿಂದಿನ ಕಥೆ. ಆಗ ಸಂಗಾತಿ ಮತ್ತೆ ಮೊಟ್ಟೆಗಳ್ನ ಕಳ್ಕಂಡ ನೋವುಲಿ ಅದೆಷ್ಟು ಪಕ್ಷಿಗ ನಮ್ಗೆ ಮೌನವಾಗಿ ಶಾಪ ಹಾಕ್ಯೊಳೊ ಏನೋ... ಈಗ ಪಕ್ಷಿಗಳ್ನ ಕಂಡ್ರೆ, ಕೊಂದು ತಿಂಬೋಕುತಾ ಅನ್ಸುದಿಲ್ಲೆ. ಬದ್ಲಿಗೆ ಕೆಮೆರಾ ತಕ್ಕಂಡ್ ಎಷ್ಟು ಸಾಧ್ಯನೋ ಅಷ್ಟು ಫೋಟೋ ತೆಗ್ದ್, ಅದ್ನ ನೋಡಿ ಖುಷಿಪಟ್ಟನೆ... 
arebhase@gmail.com

No comments:

Post a Comment