Monday, 30 January 2012

ಅಯ್ಯಯ್ಯೋ....ಕುಟ್ಟಿಚಾತ !


`ನಿಂಗೆ ತಾಕತ್ ಇದ್ದ್ರೆ, ಹೊಡೀರ ನಂಗೆ...' ಜಪ್ಪು ಅಷ್ಟ್ ಹೇಳಿ ಬಾಯಿ ಮುಚ್ಚಿತ್ಲೇ, ತಲೆ ಮೇಲೆ ಡಬ್ತಾ ಒಂದ್ ಜಲ್ಲಿಕಲ್ಲು ಬಂದ್ ಬಿದ್ದ್ಬಿಡ್ತ್. ಗಾಯ ಆಗಿ ರಕ್ತ ಬಾಕೆ ಶುರುವಾತ್... ಇದಾದ್ಮೇಲೆ ಸ್ವಲ್ಪ ಹೊತ್ತು ಸೂಜಿ ಬಿದ್ದರೆ ಕೇಳಿಸುವಷ್ಟು ನಿಶ್ಯಬ್ದ ! ಜಪ್ಪುಗೆ ಏಟು ಬಿದ್ದದ್ದೇ ತಡ, ಜೊತೆ ಇದ್ದ ಇನ್ನೂ ನಾಲ್ಕು ಜನ ಬಿಸಿರಕ್ತದ ಹುಡುಗರು ಥಂಡಾ ಆಗ್ಬಿಟ್ಟೊ. ಒಬ್ಬಂಗೆ ಹೆದ್ರಿಕೆಲಿ, ಕೆಮ್ಮುಬಂದುಬಿಟ್ಟತ್. ಶಬ್ದ ಆಗದಂಗೆ ಕೆಮ್ಮಿಕೆ ನೋಡಿರೂ ಆತ್ಲೆ, ಕೆಮ್ಮು ಗಂಟಲು ದಾಟಿ ಹೊರಗೆ ಬಾತ್. ಅಷ್ಟೊತ್ತಿಗೆ ಮತ್ತೆ ಶಬ್ದ... ಈಗ ಮನೆ ಮೇಲೆ ಡಬ..ಡಬ...ತಾ ಕಲ್ಲು ಬೀಳಿಕೆ ಶುರುವಾತ್ ! ಕಲ್ಲಂದ್ರೆ, ಅದ್ ಕಲ್ಲು ಅಲ್ಲ, ಕಲ್ಲು ತರನೇ ಇರ್ವ ಮಣ್ಣಿನ ಉಂಡೆ. ಹಂಚು ಮೇಲೆ ಬಿದ್ದ್ರೆ, ಶಬ್ದ ಬಾತಿತ್. ಆದ್ರೆ, ಹಂಚು ಒಡೀತಿತ್ಲೆ ! ಜಪ್ಪು ಮತ್ತೆ ಫ್ರೆಂಡ್ಸ್ಗ ಕಟ್ಲ್ ಅಡಿಲಿ ಅಡಗಿಕೊಂಡೊ.
ಇದ್ ಸುಮಾರು 20 ವರ್ಷ ಹಿಂದಿನ ಕಥೆ. ಭಾಗಮಂಡಲ ಹತ್ರದ ತಣ್ಣಿಮಾನಿಲಿ ಒಂದು ಮನೇಲಿ ಕುಟ್ಟಿಚಾತದ ಕಾಟ ಇತ್ತ್ ! ಆಗಿನ ಕಾಲಕ್ಕೆ ಇದು ದೊಡ್ಡ ಸುದ್ದಿ. ಈಗಿನಂಗೆ ಟಿವಿಗ ಇತ್ಲೆ... ಇದ್ದಿದ್ದ್ರೆ, `ಹೀಗೂ ಉಂಟೇ...'ತಾ ಒಂದು ದೊಡ್ಡ ನ್ಯೂಸ್ ಮಾಡಿಬಿಡ್ತಿದ್ದೊ. `ಶಕ್ತಿ' ಪೇಪರ್ಲಿ ಮಾತ್ರ ಇದ್ರ ಸುದ್ದಿ ಬಂದಿತ್ತ್. ಹಗಲೆಲ್ಲಾ ಆ ಮನೆವು ಎಲ್ಲವ್ರಂಗೆ ಇರ್ತಿದ್ದೊ... ಸೂರ್ಯ ಮುಳುಗುತ್ತಿದ್ದಂಗೆ, ಇಲ್ಲಿಯ ಪರಿಸ್ಥಿತಿಯೇ ಬೇರೆ ಆಗಿಬಿಡ್ತಿತ್. ಮನೆ ಮೇಲೆ ಎಲ್ಲಿಂದಲೋ ಕಲ್ಲುಗ ಬಂದ್ ಬೀಳ್ತಿದ್ದೊ. ಮನೆಯೊಳಗೆ ಯಾರಾರು ಸಣ್ಣ ಶಬ್ದ ಮಾಡಿರೆ, ಅವ್ರ ಮೇಲೆನೂ ಕಲ್ಲುಗಳ ಸುರಿಮಳೆ ಆಗ್ತಿತ್. ಇದ್ರ, ತನಿಖೆ ಮಾಡಿಕೆ ಹೋಗಿದ್ದ ಪೊಲೀಸ್ರೂ ಕಲ್ಲೇಟು ತಿಂದ್ ಬಂದ್ ಭಾಗಮಂಡಲ ಆಸ್ಪತ್ರೇಲಿ ಎಡ್ಮಿಟ್ ಆಗಿದ್ದೊ. ಎಲ್ಲವ್ಕೆ ಇದೊಂಥರ ರಹಸ್ಯದಂಗೆ ಕಾಣ್ತಿತ್ತಲ್ಲದೆ, ತುಂಬಾ ಹೆದ್ರಿಕೆ ಕೂಡ ಹುಟ್ಟಿಸಿತ್ತ್ !
ಸುಮಾರ್ ಮೂರು ತಿಂಗ ಎಲ್ಲೆಲ್ಲೂ ಇದೇ ಸುದ್ದಿ... ತುಂಬಾ ಜನ ತಲೆಗೆ ಹೆಲ್ಮೆಟ್ ಹಾಕ್ಕಂಡ್ ಹೋಗಿ ಕೂಡ, ಕಲ್ಲು ಎಲ್ಲಿಂದ ಬರ್ತಿರ್ದುತಾ ಪತ್ತೆ ಹಚ್ಚಿಕೆ ನೋಡ್ದೊ. ಹೆಲ್ಮೆಟ್ ಹಾಕ್ಕಂಡ್ ಇರೋವ್ಕೆ, ಬೆನ್ನು ಮೇಲೆ ಕಲ್ಲಿನ ಏಟ್ ಬೀಳ್ತಿತ್. ಅಟ್ಟಕ್ಕೆ ಇಟ್ಟ ಏಣಿ ಹತ್ರ ಯಾರಾರ್ ಹೋದ್ರೆ, ತಲೆ ಮೇಲೆ ದೊಡ್ಡದೊಡ್ಡ ಕಲ್ಲುಗ ಬಂದು ಬೀಳ್ತಿದ್ದೊ. ಜಪ್ಪುನಂಥವು, `ಕುಟ್ಟಿಚಾತ'ನನ್ನೇ ಆಟ ಆಡಿಸೋಕುತೇಳಿ `ತಾಕತ್ತಿದ್ದರೆ, ಬೆನ್ನುಮೇಲೆ ಹೊಡಿ... ತಾಕತ್ತಿದ್ದರೆ ಹೊಟ್ಟೆಗೆ ಹೊಡಿ'ತಾ ಹೇಳ್ತಿದ್ದೊ... ಆಶ್ಚರ್ಯತೇಳಿರೆ, ಅವು ಹೇಳ್ತಿದ್ದಲ್ಲಿಗೆ ಬಂದ್ ಕಲ್ಲು ಬೀಳ್ತಿತ್ ! ಜಪ್ಪು ಮತ್ತೆ ಅವ್ನ ಫ್ರೆಂಡ್ಸ್ಗೆ ಭೂತ, ಪ್ರೇತಗಳಲ್ಲಿ ನಂಬಿಕೆ ಇತ್ಲೆ... ಪೊಲೀಸ್ರು ಬೇಡತಾ ಹೇಳಿರೂ ಅವು `ಕುಟ್ಟಿಚಾತ' ರಹಸ್ಯನ ಬಯಲು ಮಾಡಿಕೆ ಹೊರಟೋ...
  ಈ `ಕುಟ್ಟಿಚಾತ' ಕಾಟ ಇದ್ದ ಮನೇಲಿ ಕರೆಂಟ್ ಇತ್ಲೆ. ಸೀಮೆ ಎಣ್ಣೆ ದೀಪ ಹೊತ್ತಿಸಿರೂ ಅದ್ ಗಾಳಿಗೆ ಕೆಟ್ಟು ಹೋಗ್ತಿತ್ತ್. ಒಂದ್ ದಿನ ಜಪ್ಪು ಮತ್ತೆ ಫ್ರೆಂಡ್ಸ್ಗ ಹಗಲು ಹೊತ್ಲಿ ಹೋಗಿ ಆ ಮನೆನ ತಪಾಸಣೆ ಮಾಡ್ದೊ. ಎಲ್ಲ ನೋಡಿಯಾಕನ, `ಕುಟ್ಟಿಚಾತ'ದ ಬಗ್ಗೆ ಇವ್ಕೆ ಅನುಮಾನ ಶುರುವಾತ್. ಆ ಮನೆಯ ಅಟ್ಟಕ್ಕೆ ಹೋಗುವ ಬಾಗಿಲಿಗೆ ಬೀಗ ಹಾಕಿದ್ದೊ. ಕೀ ಕೇಳಿರೆ, ಮನೆಯವು ಕೊಟ್ಟಿತ್ಲೆ. ರಾತ್ರಿ ಆಕಾಕನ ಆ ಮನೆಯ ಇಬ್ಬರು ಗಂಡು ಮಕ್ಕ ನಾಪತ್ತೆ ಆಗಿರ್ತಿದ್ದೊ ! `ಕೌಂಡಿನ್ಯ'ನ ಪತ್ತೆದಾರಿ ಕಾದಂಬರಿಗಳ್ನ ಓದ್ತಿದ್ದ ಜಪ್ಪು ಮತ್ತೆ ಟೀಂಗೆ ಈಗ ತಾವೇ ಪತ್ತೆದಾರರಾದಂಗೆ ರೋಮಾಂಚನ ಆತ್. ಏಕಂದ್ರೆ, ಅಲ್ಲಿ ನಿಜವಾಗಿಯೂ ನಡೀತಾ ಇರ್ದು ಏನುತೇಳುದು ಈ ಟೀಂಗೆ ಗೊತ್ತಾಗಿತ್ತ್ !
ಅಂದ್ ಸಾಯಂಕಾಲ ಪೊಲೀಸ್ರನ್ನ ಕರ್ಕಂಡ್ ಜಪ್ಪು ಮತ್ತೆ ಟೀಂ `ಕುಟ್ಟಿಚಾತ' ಮನೆಗೆ ಮತ್ತೆ ಹೋದೊ. ಅಂಗಳಕ್ಕೆ ಕಾಲಿಡ್ತಿದ್ದಂಗೆ ಶುರುವಾತ್ ಕಲ್ಲಿನ ಮಳೆ.... ಕಲ್  ಬಂದ ಕಡೆ  ಟಾರ್ಚ್  ಹಾಕಿರೆ, ಒಂದ್ ಕಲ್ಲು ಬಂದ್ ಟಾರ್ಚ್ ನೇ    ಫಳಾರ್  ತಾ  ಒಡ್ದ್ ಹಾಕಿತ್ ! ಒಬ್ಬ ಪೊಲೀಸನ ತಲೆ ತೂತ ಆಗಿ ರಕ್ತ ಬಾತ್. ಉಳ್ದವೆಲ್ಲಾ ಹೆಲ್ಮೆಟ್ ಹಾಕ್ಕೊಂಡಿದ್ದೊ. ಒಂದರ ಹಿಂದೆ ಒಂದ್ ಕಲ್ಲು ಬಂದ್ ಬೀಳ್ತನೇ ಇತ್ತ್. ಅಷ್ಟು ದಿನ ಯಾರೂ ಮಾಡದ ಕೆಲ್ಸನ ಇಂದ್ ಜಪ್ಪು ಮತ್ತೆ ಟಿಂ ಮಾಡ್ದೊ.... ಎಲ್ಲಿಂದ ಕಲ್ಲುಗ ಬಂದ್ ಬೀಳ್ತಿದ್ದನೋ, ಅದೇ ಕಡೆಗೆ ವಾಪಸ್ ಇವು ಕಲ್ಲು ಹೊಡೆಯುದು...ಯಾವಾಗ ಈ ಕಡೆಂದ ಕಲ್ಲು ಹೊಡಿಯಕ್ಕೆ ಶುರುಮಾಡ್ದನೋ, `ಕುಟ್ಟಿಚಾತ' ಕಡೇಂದ ಬರ್ವ ಕಲ್ಲ್ ನಿಂತತ್. ಕೂಡ್ಲೇ ಈ ಪತ್ತೆದಾರಿ ಟೀಂ ಮನೆ ಒಳಗೆ ನುಗ್ಗಿತ್. ಅಲ್ಲಿ ಮತ್ತೆ ಕಲ್ಲಿನ ಮಳೆ!
ಜಪ್ಪು ಸೀದ ಅಟ್ಟದ ಏಣಿ ಕಡೆ ನಡ್ತ್.... ಏಣಿ ಮೆಟ್ಟಿಲು ಹತ್ತುತ್ತಿದ್ದಂಗೆ, ಕಲ್ಲೇಟು ಜಾಸ್ತಿ ಆಗ್ತನೇ ಹೋತ್.. ಆದ್ರೂ ಜಪ್ಪು ಹೆದ್ರಿತ್ಲೆ... ಈಗ ಅಟ್ಟದ ಬಾಗ್ಲು ಬೀಗ ಓಪನ್ ಆಗಿತ್. ಅಟ್ಟದ ಮೇಲೆ ಹೋದ್ರೆ, ಕಲ್ಲು ಇವನ ಮುಖದ ಮೇಲೆನೇ ಬರ್ತಿತ್ತ್... ಏನಾರೂ ಆಗ್ಲಿತಾ ಜಪ್ಪು ಕಲ್ಲುಗ ಬರ್ತಿದ್ದ ಕಡೆಗೆನೇ ನುಗ್ಗಿತ್....ಅಷ್ಟೊತ್ತಿಗೆ ಕಲ್ಲುಗ ಇವ್ನ ಹತ್ರ ಬಾದು ನಿಂತತ್.. ಯಾರೋ ಕಾಲು ಹಿಡ್ಕಂಡಂಗೆ ಆತ್...ಕತ್ತಲಲ್ಲೇ ಒಂದು ದ್ವನಿನೂ ಕೇಳಿಬಾತ್...`ಅಣ್ಣಾ....ದಯವಿಟ್ಟೂ ಎಂಥ ಮಾಡ್ಬೇಡಿ, ನಮ್ಮ ತಪ್ಪನ್ನ ಕ್ಷಮಿಸಿ...' ಜಪ್ಪು ಕೆಳಗೆ ಬಗ್ಗಿ ನೋಡಿರೆ, ಕಾಲುಬುಡಲಿ ಆ ಮನೆಯ ಸಣ್ಣಮಂಞ ! `ಕುಟ್ಟಿಚಾತ' ಕಾಟದ ರಹಸ್ಯ ಹೊರಗೆ ಬಂದಿತ್.
ಪೊಲೀಸ್ ರೈಟರ್ ಸುಬ್ಬಯ್ಯ ಟೇಬಲ್ ಮೇಲೆ ಕುದ್ದಕಂಡ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ರೆ, ನೆಲದ ಮೇಲೆ ಕುದ್ದಿದ್ದ `ಕುಟ್ಟಿಚಾತ'ಗ ತಲೆ ತಗ್ಗಿಸಿಕಂಡ್ ಉತ್ತರ ಕೊಡ್ತಿದ್ದೊ... ಅಪ್ಪ ಊರ್ಲಿ ತುಂಬಾ ಸಾಲ ಮಾಡಿತ್ತ್... ಸಾಲ ಕೊಟ್ಟವು ಮನೆ ಕಡೆ ಬಾದು ಬೇಡಾತ, ಆ ಮನೆಯ ಇಬ್ಬರು ಮಕ್ಕ `ಕುಟ್ಟಿಚಾತ'ದ ಆಟ ಆಡಿದ್ದೊ... ದೊಡ್ಡ ಮಂಞ ಮರಗಳ ಮೇಲೆ ಕುದ್ದ್ಕಂಡ್ ರಾತ್ರಿ ಹೊತ್ತು ಕಲ್ಲು ಹೊಡೀತ್ತಿದ್ದ್ರೆ, ಸಣ್ಣಮಂಞ ಮನೆ ಅಟ್ಟದ ಮೇಲೆ ಕುದ್ದ್ಕಂಡ್ ತನ್ನ ಕೆಲ್ಸ ಮಾಡ್ತಿತ್. ಜಪ್ಪು ಮತ್ತೆ ಟೀಂ ಈ `ಕುಟ್ಟಿಚಾತ' ರಹಸ್ಯನ ಬಯಲು ಮಾಡ್ದ ಮೇಲೆ ಇಲ್ಲಿನ ಜನ ನೆಮ್ಮದಿಯ ಉಸಿರುಬಿಟ್ಟೋ...
- 'ಸುಮಾ'
arebhase@gmail.com

No comments:

Post a Comment