`ರಾತ್ರಿ ಬೆಟ್ಟ ಮೂಲೆಂದ ಆನೆ ಮರ್ಡತ್ತಿತ್ತ್... ಚಿನ್ನು ಮನೆವರೆಗೂ ಜಾಗ್ರತೆಲಿ ಹೋಗು ಮಗಳೇ..' ಒಲೆ ಬುಡಲಿ ರೊಟ್ಟಿ ತಟ್ತಿದ್ದ ಅಮ್ಮ, ಸ್ಕೂಲ್ಗೆ ಹೊರಟಿದ್ದ ಗೀತಾಂಗೆ ಎಚ್ಚರಿಕೆ ಕೊಟ್ಟತ್. ಗೀತಾನ ಅಪ್ಪ ಅಷ್ಟೊತ್ತಿಗೆ ಗದ್ದೆ ಕಡೆ ಹೋಗಿಯಾಗಿತ್ತ್. ರಾತ್ರಿ ಆನೆಗ ಮೆಟ್ಟಿ ಎಷ್ಟು ಭತ್ತ ಹಾಳಗ್ಯುಟ್ಟುತೇಳೋ ಯೋಚನೆ ಅವಂಗೆ. ಹೌದು, ಈವರ್ಷ ನೆಟ್ಟಿದ್ದ ಕೊಂಕಣಿ ಭತ್ತ ಒಳ್ಳೆ ಇಳುವರಿ ಕೊಟ್ಟಿತ್ತ್. ಕಳ್ದವರ್ಷ ಶುಂಠಿ ಹಾಕಿದ್ದ ಜಾಗಲ್ಲಂತೂ ಬೆಳೆ ಕುಣ್ಕಂಡ್ ಬಂದಿತ್. ಗೀತಾಳ ಅಪ್ಪ ಬಸಪ್ಪಂಗೆ ಈಗ ಆ ಬೆಳೆನ ಉಳ್ಸಿಕೊಳ್ದೇ ದೊಡ್ಡ ಯೋಚನೆ ಆಗ್ಯುಟ್ಟು. ಜೇನುಕಾಡು ಬೆಟ್ಟ ಕಡೇಂದ ಬರ್ವ ಕಾಡಾನೆಗ, ವಾಪಸ್ ಹೋಕಾಕನ ಗದ್ದೆನ ಪೂತರ್ಿ ಸ್ಮಶಾನ ಮಾಡಿಬಿಡ್ತಿದ್ದೊ. ಆ ಗುಂಪುಲಿ ಮೂರು ಮರಿಯಾನೆಗ ಕೂಡ ಒಳೊ.
ಮೂರು ದಿನ ಹಿಂದೆ ಕಾಡಾನೆಗ ಮೂಲೆಮನೆ ಮೊಣ್ಣಪ್ಪನ ಜಾಗಕ್ಕೆ ಬಂದಿದ್ದೊ. ಅವ್ಕೆ ಎಷ್ಟು ಬುದ್ಧಿ ಉಟ್ಟುತೇಳಿರೆ, ಆನೆಗ ಹೋಕೆ ಎಷ್ಟು ಜಾಗ ಬೇಕೋ ಅಷ್ಟು ಮಾತ್ರ ದಾರಿನ ಒಣಗಿಲು ಮರ ತಕ್ಕಂಡ್ ಸೋಲಾರ್ಬೇಲಿ ಮಧ್ಯೆ ಮಾಡಿಕಂಡಿದ್ದೊ. ಒಂದು ಸೈಡ್ಂದ ರಾಜಮುಡಿ ಭತ್ತ, ಪಚ್ಚೆಬಾಳೆ, ತೆಂಗಿನ ಮರ ಎಲ್ಲಾ ಸ್ವಾಹ ಮಾಡಿ ಸೈಲೆಂಟಾಗಿ ಮತ್ತೆ ಬೆಟ್ಟ ಸೇರ್ಕೊಂಡಿದ್ದೊ. ಹೆಂಗಿದ್ರೂ ಸೋಲಾರ್ ಬೇಲಿ ಉಟ್ಟು. ಆನೆಗ ನನ್ನ ಜಾಗಕ್ಕೆ ಬಾಕಿಲ್ಲೆತಾ ಗೊರ್ಕೆ ಹೊಡ್ಕಂಡ್ ನಿದ್ದೆ ಮಾಡಿದ್ದ ಮೊಣ್ಣಪ್ಪ ಬೆಳಗ್ಗೆ ಎದ್ದು ನೋಡಿರೆ ಅಲ್ಲಿ ಎಂಥ ಉಟ್ಟು? ಲಕ್ಷ ಲಕ್ಷ ಸುರ್ದು ಹಾಕ್ಸಿದ ಸೋಲಾರ್ ಬೇಲಿನೂ ಇಲ್ಲೆ, ಕಷ್ಟಪಟ್ಟು ಬೆಳ್ಸಿದ ಬೆಳೆನೂ ಇಲ್ಲೆ.
ಗೀತಾಂಗೆ ಆನೆಗ ಅಂದ್ರೆ ಅಂಥ ಹೆದ್ರಿಕೆಯೇನೂ ಇಲ್ಲೆ. ಕಾಡಾನೆಗ ಮರ್ಡುದುನ ಕೇಳ್ಕಂಡ್ ಬೆಳ್ದವ್ಳು ಅವ್ಳು. ಮನೆ ಹತ್ರ ಕಾಡಾನೆ ಹಿಂಡು ಬಂದದ್ನ ತುಂಬಾ ಸಲ ನೋಡ್ಯುಟ್ಟು. ಒಂದ್ಸಲ ಸಾಯಂಕಾಲ ಹೊತ್ಲಿ ಅಪ್ಪನ ಜೊತೆ ನಡ್ಕಂಡ್ ಬಾಕಾಕನ ಇವ್ಳ ಕಣ್ಣೆದ್ರೇ ಆನೆಗಳ ಹಿಂಡ್ ಅಡ್ಡ ದಾಟಿತ್ತ್. ಆಗ ಅಪ್ಪನ ಕೈನ ಗಟ್ಟಿಯಾಗಿ ಹಿಡ್ಕಂಡ್ ಆನೆಗ ದಾಟಿ ಹೋಗುವ ತನಕ ನೋಡಿಕಂಡ್ ನಿಂತಿತ್ತ್. ಆನೆಗ ಸುಮ್ಮನೆ ಮನುಷ್ಯನ ಮೇಲೆ ದಾಳಿ ಮಾಡ್ದುಲೆತೇಳುವ ಸತ್ಯನೂ ಗೊತ್ತಾಗಿತ್ತ್.
ಮೊದ್ಲಾಗಿದ್ರೆ ಕೂಡಿಗೆ ಶಾಲೆ. ಮನೆಗೆ ಬೇಗ ಬಂದ್ ತಲುಪಕ್ಕಾಗಿತ್. ಈಗ ಹಂಗೆ ಅಲ್ಲ. ಗೀತಾ ಕುಶಾಲನಗರಲಿ ಕಾಲೇಜಿಗೆ ಹೋಗ್ತುಟ್ಟು. ಮನೆ ಸೇರಿಕಾಕನ ಸಾಯಂಕಾಲ ಏಳು ಗಂಟೆಯಾದ್ರೂ ಆದೆ. ಇವ್ಳ ಊರು ಸೀಗೆಹೊಸೂರ್ಂದ ಕಾಲೇಜಿಗೆ ಹೋಗೋ ಮಕ್ಕ ಇದ್ದೊ. ಎಲ್ಲವೂ ಒಟ್ಟಿಗೆ ಹೋಗಿ ಬಾದು ಮಾಡ್ತಿದ್ದೊ. ಆದ್ರೆ ಚಿನ್ನುನ ಮನೇಂದ ಗೀತಾ ಮನೆಗೆ ಹತ್ತು ನಿಮಿಷ ಕಾಡು ಮಧ್ಯ ದಾರಿ... ಇಲ್ಲಿ ಗೀತಾ ಒಬ್ಳೇ ಹೋಗಕ್ಕಾಗಿತ್ತ್. ಅಂದ್ ಹಂಗೆನೇ, ಚಿನ್ನುಗೆ ಬಾಯ್ ಹೇಳಿ, ಗೀತಾ ಅವ್ಳ ಮನೆಕಡೆ ಹೋಗ್ತಿತ್.. ಬೆಳಗ್ಗೆ ಮಡಿಕೇರಿ ಆಕಾಶವಾಣಿಲಿ ಕೇಳಿದ್ದ `ದೀಪವು ನಿನ್ನದೆ, ಗಾಳಿಯೂ ನಿನ್ನದೆ...' ಹಾಡ್ನ ಗುಣು ಗುಣುತಾ ಹೇಳ್ಕಂಡ್, ಅಮ್ಮ ಎಂಥ ತಿಂಡಿ ಮಾಡಿರ್ದುತಾ ಯೋಚನೆ ಮಾಡ್ಕಂಡ್ ಹೆಜ್ಜೆ ಹಾಕ್ತಿತ್. ಆದ್ರೆ...
ಎಂಥದೋ ಚರಪರ ಸದ್ದ್... ಗೀತಾಂಗೆ ಸ್ವಲ್ಪ ಹೆದ್ರಿಕೆ ಆತ್. ಹಿಂದೆ ತಿರುಗಿ ನೋಡ್ತ್ಲೆ... ನಡಿಗೆನ ಇನ್ನೂ ಜೋರು ಮಾಡ್ತ್. ಗೀತಾ ಜೋರಾಗಿ ನಡ್ದಂಗೆ, ಹಿಂದೆ ಬರ್ತಿದ್ದ ಶಬ್ದನೂ ಜೋರಾಗಿ ಕೇಳ್ತಿತ್. ಇದೆಲ್ಲಾ ಬರೀ 5 ನಿಮಿಷ ಅಷ್ಟೇ... ಕಾಲೇಜ್ಂದ ಬರ್ವ ಮಗ್ಳಿಗಾಗಿ ಚಕ್ಕುಲಿ ಕಾಯಿಸ್ತಿದ್ದ ಅಮ್ಮಂಗೆ, `ಅಮ್ಮಾ' ತೇಳ್ವ ಜೋರು ಶಬ್ದ ಕೇಳ್ದೊಂದೇ ಗೊತ್ತು. ಮತ್ತೆ ಗೀತಾ ಮನೆಗೆ ಬಂದದ್ ಹೆಣವಾಗಿ ! ಸೀಗೆಹೊಸೂರ್ಲಿ ಆನೆಗಳಿಗೆ ಬಲಿಯಾದವ್ರ ಪಟ್ಟಿಗೆ ಗೀತಾ ಹೆಸ್ರೂ ಸೇರ್ಕಂಡಿತ್ತ್.
- `ಸುಮಾ'
arebhase@gmail.com
sad :(
ReplyDelete